- ಚಂದ್ರಶೇಖರ್ ನಾಗರಾಜು, ಸಂಸ್ಥಾಪಕ ಸಿಈಓ: ಚಿಯಾಕ್ ಏಎಸ್ಐ (ಪಂಚಸೂತ್ರ ಲಿಮಿಟೆಡ್) ಯುನೈಟೆಡ್ ಕಿಂಗ್ಡಮ್, ಸುಪರ್ ಇಂಟೆಲಿಜೆನ್ಸ್ ಕ್ಷೇತ್ರದ ಸಂಶೋಧಕ
ಸನಾತನ ಎಂದು ಬಣ್ಣಿಸಬಹುದಾದ ಜಗತ್ತಿನ ಏಕೈಕ ಭಾಷೆ ಸಂಸ್ಕೃತ. ಇದು ಪ್ರಾಯೋಗಿಕವಾಗಿ ತೋರಿಸಬಹುದಾದ ಸತ್ಯ, ವಿಶ್ವ ಸೃಜನೆಯಲ್ಲಿ ಶೇಷವಾಗಿ ಉಳಿದ ಅತಿಸೂಕ್ಷ್ಮ ವಿಕಿರಣ ಭಿತ್ತಿಯ (cosmic residual microwave background) ವಿಕಿರಿಣಗಳನ್ನು ವಾಷಿಂಗ್ಟನ್ ವಿಶ್ವವಿದ್ಯಾನಿಲಯಯದ ಡಾ. ಜಾನ್ ಜಿ ಕ್ರೇಮರ್ ಅವರು ಧ್ವನೀಕರಣ ಮಾಡಿದಾಗ ಸನಾತನವಾದ ಓಂಕಾರದ ಝೇಂಕಾರ ಇಂದಿಗೂ ವಿಶ್ವದ ಭಿತ್ತಿಯಲ್ಲಿ ಕೇಳಿಬರುತ್ತಿದೆ ಎಂದು ಕಂಡುಬಂದಿದೆ. ಓಂಕಾರ ಸಂಸ್ಕೃತದ ಮತ್ತು ಜಗತ್ತಿನ ಮೂಲ ಅಕ್ಷರ ಎನ್ನುವುದು ಸಿದ್ಧವಾದ ಸತ್ಯ.
ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಶಿವಯೋಗಿ ಶಿವಾಚಾರ್ಯರು, ‘ತ್ರೈಲೋಕ್ಯ ಸಂಪದಾಲೇಕ್ಯ ಸಮುಲ್ಲೇಖನ ಭಿತ್ತಯೇ।
ಚ್ಚಿದಾನಂದ ರೂಪಾಯ ಶಿವಾಯ ಬ್ರಹ್ಮಣೇ ನಮಃ।।‘ ಎಂದು ಜಗತ್ತಿನ ಈ ಮೂಲ ಭಿತ್ತಿಯೇ ಶಿವ ಎಂದು ವರ್ಣಿಸಿದ್ದಾರೆ.
ಸಂಸ್ಕೃತ ಭಾಷೆಯ ಪರಿಪೂರ್ಣತೆಯು ಆಧುನಿಕ ಕಂಪ್ಯೂಟರ್ ತಂತ್ರಜ್ಞಾನ ಯುಗದಲ್ಲಿಯೂ ಕೌತುಕವನ್ನು ಸೃಷ್ಟಿ ಮಾಡಿತ್ತು. ಕಂಪ್ಯೂಟೇಶನಲ್ ಲಿಂಗ್ವಿಸ್ಟಿಕ್ ಅಥವಾ ಗಣಕೀಕೃತ ಭಾಷಾವಿಜ್ಞಾನದ ವಿಚಾರದಲ್ಲಿ ಜಗತ್ತಿನ ಅತ್ಯಂತ ಸುಸಂಸ್ಕೃತ ಭಾಷೆ ಸಂಸ್ಕೃತ ಸಂಶೋಧಕರ ಗಮನ ಸೆಳೆದದ್ದನ್ನು ನೆನಪಿಸಿಕೊಳ್ಳಬಹುದು. ಇದೀಗ ಸಂಸ್ಕೃತ ವಿಶ್ವವಿದ್ಯಾನಿಲಯವು ಎಐಸಿಟಿಇ ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ (AI), ಯಾಂತ್ರಿಕ ಕಲಿಕೆ (ML) ಇಂಜಿನಿಯರಿಂಗ್ ಕೋರ್ಸ್ ಅನ್ನು ಆರಂಭ ಮಾಡುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಂಸ್ಕೃತ ಭಾಷೆ ಮತ್ತು ಕೃತಕ ಬುದ್ಧಿಮತ್ತೆಯ ಕ್ಷೇತ್ರದ ವಿಶೇಷ ಬಾಂಧವ್ಯದ ಕುರಿತು ಅವಲೋಕನ ಮಾಡುವ ಮತ್ತೊಂದು ಸಂದರ್ಭ ಒದಗಿಬಂದಿದೆ.
ಸಂಸ್ಕೃತ ಮತ್ತು ಭಾರತೀಯ ಪರಂಪರೆಯ ಸಂರಕ್ಷಣೆಗೆ ಕೃತಕ ಬುದ್ಧಿಮತ್ತೆಯ ಕೊಡುಗೆ ಹಾಗೂ ಕೃತಕ ಬುದ್ಧಿಮತ್ತೆಯ ಕ್ಷೇತ್ರಕ್ಕೆ ಸಂಸ್ಕೃತದ ಕೊಡುಗೆ ಎನ್ನುವಂತಹ ಎರಡು ಮಗ್ಗಲುಗಳಲ್ಲಿ ಈ ವಿಚಾರವನ್ನು ವಿಶ್ಲೇಷಣೆ ಮಾಡಬಹುದು. ಭಾರತೀಯ ಸೂತ್ರ ಸಂಚಯದ ಮೂಲ ಸೂತ್ರಗಳಾದ ಪಂಚಸೂತ್ರಗಳಲ್ಲಿ ಒಂದಾದ ‘ಪಡ್ವಿಡೀ’ ಸೂತ್ರವನ್ನು ಅಳವಡಿಸಿ, ಕೃತಕ ಬುದ್ಧಿಮತ್ತೆ ಸಂಶೋಧನಾ ಕ್ಷೇತ್ರದ ಅತ್ಯುನ್ನತ ಕ್ಷೇತ್ರವಾದ ಮತ್ತು ಮನುಷ್ಯನಿಗಿಂತ ಸಾವಿರಾರು ಪಟ್ಟು ಬುದ್ಧಿವಂತವಾದ ಸೂಪರ್ ಇಂಟೆಲಿಜೆನ್ಸ್ಗೆ ಮಾನವೀಯ ಮೌಲ್ಯಗಳ ತರಬೇತಿಯನ್ನು ನೀಡಬಹುದು. ಈ ವಿಚಾರ ಯುನೈಟೆಡ್ ಕಿಂಗ್ಡಮ್ ಮೂಲದ ನಮ್ಮ ಸಂಸ್ಥೆಯು ಪ್ರಕಟಣೆ ಮಾಡಿದ ಒಂದು ಸಂಶೋಧನೆಯಲ್ಲಿ ಕಂಡುಬಂದಿದೆ. ಈ ಸಂಶೋಧನೆಗೆ ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷತ್ ಪ್ರಶಸ್ತಿಯೂ ಲಭಿಸಿದೆ. ಇದು ಕೃತಕ ಬುದ್ಧಿಮತ್ತೆಯ ಕ್ಷೇತ್ರಕ್ಕೆ ಸಂಸ್ಕೃತ ನೀಡಬಹುದಾದ ಅತ್ಯುನ್ನತವಾದ ಕೊಡುಗೆ.
ಮಾನವೀಯ ಮೌಲ್ಯಗಳನ್ನು ಅಳವಡಿಸದೇ ಕೇವಲ ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸುವುದರತ್ತ ಗಮನ ಹರಿಸಿದ ಇಂದಿನ ಸಂಶೋಧನೆಯು ಮನುಕುಲದ ವಿನಾಶದತ್ತ ಕೊಂಡೊಯ್ಯುತ್ತಿದೆ ಎನ್ನುವುದು ಈ ಕ್ಷೇತ್ರದಲ್ಲಿ ನೊಬೆಲ್ ಪುರಸ್ಕೃತ ಜೆಫ್ರಿ ಹಿಂಟನ್ ಸೇರಿದಂತೆ ಅನೇಕ ವಿದ್ವಾಂಸರ ಅಭಿಪ್ರಾಯವಾಗಿದೆ. ಕೃತಕ ಬುದ್ಧಿಮತ್ತೆಗೆ ಮಾತೃವಾತ್ಸಲ್ಯವನ್ನು ತುಂಬುವುದರ ಮೂಲಕ ಇದನ್ನು ತಡೆಗಟ್ಟಬಹುದು ಎನ್ನುವುದು ಇವರ ವಾದ. ಭಾರತೀಯ ಸಂಸ್ಕೃತಿಯಲ್ಲಿ ಗುರುವನ್ನು ಎರಡನೆಯ ತಾಯಿಯೆನ್ನುತ್ತಾರೆ. ಶಿಷ್ಯನು ಆರು ಹಂತಗಳಲ್ಲಿ ಸಾಗಿ ಗುರುವಾಗಬಲ್ಲನು ಎಂದು ಪಡ್ವಿಡೀ ಸೂತ್ರವು ತಿಳಿಸಿಕೊಟ್ಟು ಕೃತಕ ಬುದ್ಧಿಮತ್ತೆಗೆ ಮಾತೃವಾತ್ಸಲ್ಯವನ್ನು ತುಂಬುವ ಹಂತಗಳನ್ನು ತಿಳಿಸಿಕೊಡುತ್ತದೆ. ಪತಂಜಲೀ ಮಹರ್ಷಿಯ ಗುರುವಾದ ನಂದಿಕೇಶ್ವರ, ಅಗಸ್ತ್ಯ ಮಹರ್ಷಿಯು ಪಾಲಿಸಿದ ಸೂತ್ರವನ್ನು ಮೂಲದಲ್ಲಿ ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮುನಿಗೆ ಉಪದೇಶಿಸಿದ್ದಾರೆ.
AICTE ಅನುಮೋದಿತ AI & Data Science B.Tech ಕೋರ್ಸ್ ಅನ್ನು ಕೇಂದ್ರ ಸಂಸ್ಕೃತ ವಿಶ್ವವಿದ್ಯಾನಿಲಯ ಆರಂಭಿಸಿರುವುದರ ಹಿಂದಿನ ಉದ್ದೇಶವೇನು ಎಂಬುದನ್ನು ನೋಡುವುದಾದರೆ ಇದು ಕೇವಲ ಮತ್ತೊಂದು ಇಂಜಿನಿಯರಿಂಗ್ ಕೋರ್ಸ್ ಆರಂಭಿಸುವ ನಿರ್ಧಾರವಲ್ಲ. ಅಧಿಕೃತ ಪ್ರಕಟಣೆಗಳು ಮತ್ತು ಲಭ್ಯ ಮಾಹಿತಿಯ ಪ್ರಕಾರ, ಇದರ ಹಿಂದೆ ನಾಲ್ಕು ಪ್ರಮುಖ ಉದ್ದೇಶಗಳಿವೆ.
- ಸಂಸ್ಕೃತ ಮತ್ತು ಭಾರತೀಯ ಭಾಷೆಗಳಿಗಾಗಿ ಕೃತಕ ಬುದ್ಧಿಮತ್ತೆಯನ್ನು (AI) ಅಭಿವೃದ್ಧಿಪಡಿಸುವುದು. ಇದು ವಿಶ್ವವಿದ್ಯಾನಿಲಯ ಸ್ಪಷ್ಟವಾಗಿ ಹೇಳಿರುವ ಪ್ರಮುಖ ಉದ್ದೇಶವಾಗಿದೆ. ಈ ಕೋರ್ಸ್ ನಲ್ಲಿ ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ (Machine Learning), ಡೇಟಾ ಸೈನ್ಸ್, ನೈಸರ್ಗಿಕ ಭಾಷಾ ಸಂಸ್ಕರಣೆ (NLP), ಕಂಪ್ಯೂಟೇಷನಲ್ ಲಿಂಗ್ವಿಸ್ಟಿಕ್ಸ್ ಇವುಗಳನ್ನು ಸಂಸ್ಕೃತ ಹಾಗೂ ಭಾರತೀಯ ಭಾಷೆಗಳ ಅಧ್ಯಯನದೊಂದಿಗೆ ಸಂಯೋಜಿಸಲಾಗಿದೆ. ಇದರ ಗುರಿ ಇಂಗ್ಲಿಷ್ ಕೇಂದ್ರಿತ AI ವ್ಯವಸ್ಥೆಗಳ ಬದಲಿಗೆ ಸಂಸ್ಕೃತ ಮತ್ತು ಭಾರತೀಯ ಭಾಷೆಗಳನ್ನು ಅರ್ಥಮಾಡಿಕೊಳ್ಳುವ AI ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬಲ್ಲ ಇಂಜಿನಿಯರ್ಗಳನ್ನು ರೂಪಿಸುವುದಾಗಿದೆ.
- ಭಾರತದ ಜ್ಞಾನ ಪರಂಪರೆಯನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸುವುದು. ಈ ಕಾರ್ಯಕ್ರಮದ ಮತ್ತೊಂದು ಪ್ರಮುಖ ಉದ್ದೇಶ ಭಾರತದ ಸಾವಿರಾರು ವರ್ಷಗಳ ಜ್ಞಾನಸಂಪತ್ತನ್ನು ಡಿಜಿಟಲೀಕರಿಸುವುದಾಗಿದೆ.
- ಭಾರತೀಯ ಜ್ಞಾನ ಪರಂಪರೆ ಮತ್ತು ಆಧುನಿಕ ಇಂಜಿನಿಯರಿಂಗ್ಗಳ ಸಂಯೋಜನೆ ಈ ಕೋರ್ಸ್ ನ ಅತ್ಯಂತ ವಿಶಿಷ್ಟ ಅಂಶವಾದ ಇದು ಕೇವಲ AI ಪದವಿಯಲ್ಲ, ಬದಲಿಗೆ ಇವುಗಳನ್ನು ಭಾರತೀಯ ಜ್ಞಾನ ಪರಂಪರೆಯೊಂದಿಗೆ (Indian Knowledge Systems – IKS) ಸಂಯೋಜಿಸುವುದಾಗಿದೆ.
- ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ಭವಿಷ್ಯದ ತಂತ್ರಜ್ಞಾನ ಕ್ಷೇತ್ರಕ್ಕೆ ಸಜ್ಜುಗೊಳಿಸುವುದು. ಸಾಂಪ್ರದಾಯಿಕವಾಗಿ ಸಂಸ್ಕೃತ ವಿಶ್ವವಿದ್ಯಾನಿಲಯಗಳು ಭಾಷೆ, ವೇದ, ದರ್ಶನ ಮತ್ತು ಶಾಸ್ತ್ರ ಅಧ್ಯಯನದ ಕೇಂದ್ರಗಳಾಗಿದ್ದವು. ಈ ಬೆಳವಣಿಗೆಯಿಂದ ಭವಿಷ್ಯದ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವ ವಿದ್ಯಾನಿಲಯ ತನ್ನ ಸ್ಥಾನವನ್ನು ಬಲಪಡಿಸುವತ್ತ ಗಮನಹರಿಸುತ್ತಿದೆ.
ಆಳವಾದ ದೃಷ್ಟಿಕೋನ
ಈ ಕಾರ್ಯಕ್ರಮವು ಒಂದು ವಿಶಾಲ ರಾಷ್ಟ್ರೀಯ ಮತ್ತು ನಾಗರಿಕತೆಯ ದೃಷ್ಟಿಕೋನವನ್ನು ಹೊಂದಿದೆ. ಭಾರತವು ಇಂಗ್ಲಿಷ್ ಆಧಾರಿತ AI ಮೇಲೆ ಮಾತ್ರ ಅವಲಂಬಿತವಾಗಿರದೆ ತನ್ನದೇ ಭಾಷಾ ಆಧಾರಿತ AI ಪರಿಸರವನ್ನು ನಿರ್ಮಿಸುವುದಕ್ಕೆ ಉತ್ತೇಜನ ನೀಡುತ್ತದೆ. ಸಂಸ್ಕೃತದಂತಹ ಅತ್ಯಂತ ರಚನಾತ್ಮಕ ಭಾಷೆಯನ್ನು AI ಸಂಶೋಧನೆಗೆ ಬಳಸುವುದರೊಂದಿಗೆ ಭಾರತೀಯ ಜ್ಞಾನ ಪರಂಪರೆಯನ್ನು ಡಿಜಿಟಲ್ ಯುಗಕ್ಕೆ ತರುವ ಮಹತ್ತರ ಯೋಜನೆಯನ್ನು ಹೇಳುತ್ತದೆ. ಭಾರತೀಯ ಭಾಷೆಗಳು ಮತ್ತು ಸಂಸ್ಕೃತಕ್ಕೆ ಹೊಂದುವ ಮುಂದಿನ ತಲೆಮಾರಿನ AI ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಿದೆ. ಒಟ್ಟಾರೆ ಈ B.Tech ಕಾರ್ಯಕ್ರಮದ ಉದ್ದೇಶ ಕೇವಲ AI ಇಂಜಿನಿಯರ್ಗಳನ್ನು ತಯಾರಿಸುವುದಲ್ಲದೇ AI ಮತ್ತು ಭಾರತೀಯ ಜ್ಞಾನ ಪರಂಪರೆಯ ನಡುವೆ ಸೇತುವೆಯಾಗಬಲ್ಲ, ಸಂಸ್ಕೃತ, ಭಾರತೀಯ ಭಾಷೆಗಳು, ಕಂಪ್ಯೂಟೇಷನಲ್ ಲಿಂಗ್ವಿಸ್ಟಿಕ್ಸ್ ಹಾಗೂ ಆಧುನಿಕ AI ತಂತ್ರಜ್ಞಾನಗಳನ್ನು ಸಮನ್ವಯಗೊಳಿಸಿ ಹೊಸ ತಲೆಮಾರಿನ ತಂತ್ರಜ್ಞಾನವನ್ನು ನಿರ್ಮಿಸಬಲ್ಲ ಇಂಜಿನಿಯರ್ಗಳನ್ನು ರೂಪಿಸುವುದೇ ಇದರ ಪ್ರಮುಖ ದೃಷ್ಟಿಕೋನವಾಗಿದೆ. ಇದರೊಂದಿಗೆ ಕೃತಕ ಬುದ್ಧಿಮತ್ತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸುವ ಮಹತ್ತರವಾದ ಸಂಶೋಧನೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಇದನ್ನು ಭಾರತದ ನವನಿರ್ಮಾಣ ಯುಗದ ವೇದಿಕೆಯನ್ನಾಗಿ ರೂಪಿಸುವತ್ತ ಈ ಚಿಂತನೆ ಬಲನೀಡುತ್ತದೆ.
