ಮುಂಬೈ: ಜಾಗತಿಕ ಮಟ್ಟದಲ್ಲಿ ಹಿಂದೂ ಸಮುದಾಯದ ಪ್ರಮುಖ ಚಿಂತಕರು, ಉದ್ಯಮಿಗಳು ಹಾಗೂ ಸಂಘಟಕರನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ‘ವಿಶ್ವ ಹಿಂದೂ ಸಮ್ಮೇಳನ 2026’ (World Hindu Congress) ಈ ಬಾರಿ ಮುಂಬೈನಲ್ಲಿ ನಡೆಯಲಿದೆ. ವಿಶ್ವ ಹಿಂದೂ ಫೌಂಡೇಶನ್ ವತಿಯಿಂದ ಆಯೋಜಿತವಾಗಿರುವ ಈ ಮೂರು ದಿನಗಳ ಬೃಹತ್ ಜಾಗತಿಕ ಸಮಾವೇಶವು 2026ರ ಡಿಸೆಂಬರ್ 18 ರಿಂದ 20 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಜರುಗಲಿದೆ.
ಸಾಮೂಹಿಕ ಸಂಕಲ್ಪದ ಧ್ಯೇಯವಾಕ್ಯ
ಈ ಬಾರಿಯ ಸಮ್ಮೇಳನಕ್ಕೆ “ಸಮಾನಂ ವ್ರತಂ ಸಹ ಚಿತ್ತಮ್” (Shared Commitment: Collective Resolve- “ಹಂಚಿಕೆಯ ಬದ್ಧತೆ: ಸಾಮೂಹಿಕ ಸಂಕಲ್ಪ”) ಎಂಬ ಧ್ಯೇಯವಾಕ್ಯವನ್ನು ನೀಡಲಾಗಿದೆ. ಜಾಗತಿಕ ಮಟ್ಟದಲ್ಲಿ ಹಿಂದೂ ಸಮಾಜ ಎದುರಿಸುತ್ತಿರುವ ಪ್ರಸ್ತುತ ಸವಾಲುಗಳು, ಭವಿಷ್ಯದ ಅವಕಾಶಗಳು ಹಾಗೂ ಜಾಗತಿಕ ಪ್ರಗತಿಯಲ್ಲಿ ಸಮಾಜದ ಪಾತ್ರದ ಕುರಿತು ವಿಸ್ತೃತ ಚರ್ಚೆಗಳು ಸಮ್ಮೇಳನದಲ್ಲಿ ನಡೆಯಲಿವೆ.
ಪ್ರಮುಖ ಉದ್ಯಮಿಗಳ ಸಾರಥ್ಯ:
ಸಮ್ಮೇಳನದ ಸಂಘಟನಾ ನಾಯಕತ್ವವನ್ನು ಭಾರತದ ಪ್ರಮುಖ ಉದ್ಯಮಿ, ಪಿರಮಲ್ ಗ್ರೂಪ್ ಅಧ್ಯಕ್ಷ ಅಜಯ್ ಪಿರಮಲ್ ವಹಿಸಲಿದ್ದಾರೆ. ವಿಶಾಲ್ ಮಫತ್ಲಾಲ್ ಮತ್ತು ಮಹೇಶ್ ಭಾಗಚಂದ್ಕಾ ಅವರು ಸಹ-ಅಧ್ಯಕ್ಷರಾಗಿ ಸಮ್ಮೇಳನದ ಆಯೋಜನೆಯ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಶತಾಬ್ದಿ ಸಂಭ್ರಮ ಹಾಗೂ ವಿಶ್ವ ಸಮ್ಮೇಳನದ ಹಿನ್ನೆಲೆ:
ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಾಬ್ದಿ ವರ್ಷದ (100ನೇ ವರ್ಷ) ಸಂಭ್ರಮದ ಅವಧಿಯಲ್ಲೇ ಈ ಆವೃತ್ತಿಯ ಸಮ್ಮೇಳನ ನಡೆಯುತ್ತಿರುವುದು ವಿಶೇಷ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜನೆಯಾಗುವ ಈ ಜಾಗತಿಕ ಸಮಾವೇಶವು ಈ ಹಿಂದೆ ನವದೆಹಲಿ (2004), ಶಿಕಾಗೋ (2018) ಮತ್ತು ಬ್ಯಾಂಕಾಕ್ (2023) ನಗರಗಳಲ್ಲಿ ಯಶಸ್ವಿಯಾಗಿ ನೆರವೇರಿತ್ತು.
ಏಳು ಪ್ರಮುಖ ಗೋಷ್ಠಿಗಳು ಹಾಗೂ ‘ವಿಶ್ವ ಹಿಂದೂ ಎಕ್ಸ್ಪೋ’
ಮೂರು ದಿನಗಳ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಏಳು ಸಮಾನಾಂತರ ಗೋಷ್ಠಿಗಳು ಜರುಗಲಿವೆ:
- ವಿಶ್ವ ಹಿಂದೂ ಆರ್ಥಿಕ ವೇದಿಕೆ (ಆರ್ಥಿಕ ಪ್ರಗತಿ ಮತ್ತು ಉದ್ಯಮ)
- ಶಿಕ್ಷಣ ಗೋಷ್ಠಿ (ಶಿಕ್ಷಣ ಕ್ಷೇತ್ರ ಮತ್ತು ಜ್ಞಾನ ಪರಂಪರೆ)
- ಮಾಧ್ಯಮ ಗೋಷ್ಠಿ (ಸಂವಹನ ಮತ್ತು ಮಾಹಿತಿ ವಲಯ)
- ರಾಜಕೀಯ ಗೋಷ್ಠಿ (ಜಾಗತಿಕ ನೀತಿ ಮತ್ತು ನಾಯಕತ್ವ)
- ಮಹಿಳಾ ಗೋಷ್ಠಿ (ಮಹಿಳಾ ಸಶಕ್ತೀಕರಣ)
- ಯುವ ಗೋಷ್ಠಿ (ಯುವಜನರ ಪಾತ್ರ ಮತ್ತು ಭವಿಷ್ಯ)
- ಸಂಸ್ಥಾಗತ ಗೋಷ್ಠಿ (ಸಂಘಟನಾತ್ಮಕ ಬಲವರ್ಧನೆ)
ಮೊದಲ ಬಾರಿಗೆ ಬೃಹತ್ ಎಕ್ಸ್ಪೋ:
ವ್ಯಾಪಾರ, ಉದ್ಯಮ ಮತ್ತು ಜಾಗತಿಕ ಆರ್ಥಿಕ ಸಹಭಾಗಿತ್ವವನ್ನು ಉತ್ತೇಜಿಸಲು ಈ ಬಾರಿ ‘ವಿಶ್ವ ಹಿಂದೂ ಎಕ್ಸ್ಪೋ’ ವಸ್ತುಪ್ರದರ್ಶನವನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಇದಲ್ಲದೆ ಭಾಷೆ, ವಿಶ್ವಕರ್ಮ (ಕಲಾ ಹಾಗೂ ತಾಂತ್ರಿಕ ಕೌಶಲ್ಯ), ಸಮಾಜ ಮತ್ತು ಧರ್ಮ ಕ್ಷೇತ್ರಗಳ ಸಶಕ್ತೀಕರಣಕ್ಕಾಗಿ ವಿಶೇಷ ಗೋಷ್ಠಿಗಳನ್ನು ರೂಪಿಸಲಾಗಿದೆ.
ವಿಶ್ವದ ವಿವಿಧ ದೇಶಗಳಿಂದ ಸುಮಾರು 3,0000ಕ್ಕೂ ಹೆಚ್ಚು ಆಯ್ಕೆಯಾದ ಪ್ರತಿನಿಧಿಗಳು, ಉದ್ಯಮಿಗಳು ಹಾಗೂ ರಾಯಭಾರಿಗಳು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
