ಬೆಂಗಳೂರು: ವಿಶ್ವ ಹಿಂದೂ ಪರಿಷತ್ – ಕರ್ನಾಟಕದ ಕ್ಷೇತ್ರೀಯ ಕಾರ್ಯಾಲಯವಾದ ಶಂಕರಪುರಂನ ‘ಧರ್ಮಶ್ರೀ ಭವನ’ದ ದ್ವಿತೀಯ ವಾರ್ಷಿಕೋತ್ಸವ ಸಂಭ್ರಮಾಚರಣೆಯು 2026ರ ಆಗಸ್ಟ್ 19ರ ಬುಧವಾರದಂದು ನೆರವೇರಲಿದೆ. 40 ವರ್ಷಗಳ ಹಿಂದೆ ಆರಂಭಗೊಂಡು ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಧರ್ಮಶ್ರೀ ಕಟ್ಟಡವನ್ನು ಆಧುನಿಕವಾಗಿ ಪುನರ್ನಿರ್ಮಿಸಲಾಗಿದ್ದು, ನೂತನ ಭವನಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ದ್ವಿತೀಯ ವಾರ್ಷಿಕೋತ್ಸವವನ್ನು ಆಯೋಜಿಸಲಾಗಿದೆ.
ಆಗಸ್ಟ್ 19ರ ಬುಧವಾರ ಬೆಳಿಗ್ಗೆ 8:00 ಗಂಟೆಗೆ ಭಗವಾನ್ ಶ್ರೀಕೃಷ್ಣ ಮತ್ತು ಸದ್ಗುರು ದತ್ತಾತ್ರೇಯರಿಗೆ ಶೋಡಶೋಪಚಾರ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ತದನಂತರ ಬೆಳಿಗ್ಗೆ 9:00 ಗಂಟೆಗೆ ಶ್ರೀ ಜಗನ್ನಾಥ ಶಾಸ್ತ್ರೀ ಮತ್ತು ವೃಂದದವರಿಂದ ಶ್ರೀ ಮಹಾಗಣಪತಿ, ಮೃತ್ಯುಂಜಯ, ಶಿವ, ದುರ್ಗಾ, ಲಕ್ಷ್ಮಿ, ಸರಸ್ವತಿ, ಆದಿತ್ಯ, ನೃಸಿಂಹ, ಧನ್ವಂತರಿ, ಸುದರ್ಶನ ಹಾಗೂ ದತ್ತಾತ್ರೇಯ ಹೋಮಗಳು ನಡೆಯಲಿದ್ದು, ಬೆಳಿಗ್ಗೆ 10:30ಕ್ಕೆ ಪೂರ್ಣಾಹುತಿ ನೆರವೇರಲಿದೆ.
ಸಂಜೆ 5:00 ಗಂಟೆಗೆ ಸತ್ಸಂಗ, ಭಜನೆಗಳು ಮತ್ತು ದೇಶಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 6:00 ಗಂಟೆಗೆ ಶ್ರಾವಣಮಾಸದ ವಿಶೇಷವಾಗಿ ‘ಭಜಗೋವಿಂದಂ’ ಕುರಿತು ಶ್ರೀ ಜಗನ್ನಾಥ ಶಾಸ್ತ್ರೀ ಅವರು ಪ್ರವಚನ ನೀಡಲಿದ್ದಾರೆ. ತದನಂತರ ಸಂಜೆ 7:30ಕ್ಕೆ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8:00 ಗಂಟೆಗೆ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ.
ಬೆಂಗಳೂರಿನ ಶಂಕರಪುರಂನಲ್ಲಿರುವ ಶಂಕರಮಠದ ಸಮಾನಾಂತರ ರಸ್ತೆಯ ‘ಧರ್ಮಶ್ರೀ’ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಪೂಜೆ ಮತ್ತು ಹೋಮದ ಸಾಮಗ್ರಿಗಳು ಅಥವಾ ಬೆಳಿಗ್ಗೆ ಹಾಗೂ ಸಂಜೆಯ ಪ್ರಸಾದದ ವೆಚ್ಚವನ್ನು ವಹಿಸಿಕೊಳ್ಳಲು ಇಚ್ಛಿಸುವವರು ಸಂಘಟಕರಾದ ಶಂಕರ್ (8618956916) ಅವರನ್ನು ಸಂಪರ್ಕಿಸಬಹುದಾಗಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
