- ಡಾ. ಜಯಸಿಂಹ. ಪಿ
ಇದು ಸಾವಿರಾರು ಹಿಂದೂಗಳ ಜೀವನ ಮತ್ತು ಆಕ್ರಂದನಗಳು ಇತಿಹಾಸದ ಪಠ್ಯಪುಸ್ತಕಗಳ ಪುಟಗಳಲ್ಲೇ ಅಡಗಿಹೋದ ಒಂದು ಅತ್ಯಂತ ಭೀಕರ ಹಾಗೂ ಹೃದಯವಿದ್ರಾವಕ ನರಮೇಧ.
1921ರಲ್ಲಿ, ತುರ್ಕಿಯ ಇಸ್ಲಾಮಿಕ್ ಖಿಲಾಫತ್ ಬೆಂಬಲಿಸಿ ಭಾರತದಲ್ಲಿ ನಡೆಸಲಾಗುತ್ತಿದ್ದ ‘ಖಿಲಾಫತ್ ಚಳವಳಿ’ ತನ್ನ ಚರಮಸೀಮೆ ತಲುಪಿತ್ತು. ಭಾರತದಲ್ಲಿ ಮುಸ್ಲಿಂ ಆಡಳಿತವನ್ನು ಅಂದರೆ ಜಾಗತಿಕ ಖಿಲಾಫತ್ ಅನ್ನು ಸ್ಥಾಪಿಸಲು ಮುಸ್ಲಿಮರು ಸನ್ನದ್ಧರಾಗುತ್ತಿದ್ದರು. ಒಂದೆಡೆ ಖಿಲಾಫತ್ ಸಭೆಗಳಲ್ಲಿ ‘ಕಾಫಿರ್’ಗಳನ್ನು ಸರ್ವನಾಶ ಮಾಡುವ ಹಿಂಸಾತ್ಮಕ ಘೋಷಣೆಗಳು ಮೊಳಗುತ್ತಿದ್ದರೆ, ಇನ್ನೊಂದೆಡೆ ಮೋಹನ್ದಾಸ್ ಕರಮಚಂದ್ ಗಾಂಧಿಯವರ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ‘ಹಿಂದೂ-ಮುಸ್ಲಿಂ ಐಕ್ಯತೆ’ಯ ಘೋಷಣೆಗಳನ್ನು ಕೂಗುತ್ತಾ ಹಿಂದೂಗಳನ್ನು ದಿಕ್ಕು ತಪ್ಪಿಸುತ್ತಿತ್ತು. ಅಷ್ಟೇ ಅಲ್ಲದೆ, ಗಾಂಧಿ ಮತ್ತು ಕಾಂಗ್ರೆಸ್ ಈ ಇಸ್ಲಾಮಿಕ್ ಖಿಲಾಫತ್ ಚಳವಳಿಗೆ ನಿಧಿ ನೀಡುವಂತೆ ಹಿಂದೂಗಳನ್ನು ಕೇಳಿಕೊಳ್ಳುತ್ತಿದ್ದರು.
ಇತ್ತ ಮುಸ್ಲಿಂ ನಾಯಕರ ಧಾರ್ಮಿಕೋನ್ಮಾದ ಉತ್ತುಂಗಕ್ಕೇರಿತ್ತು. ಭಾರತವನ್ನು ಆಕ್ರಮಿಸಿ, ಅದನ್ನು ಖಿಲಾಫತ್ ಧ್ವಜದಡಿಯಲ್ಲಿ ತರಲು ಅವರು ಇಸ್ಲಾಮಿಕ್ ದೇಶಗಳಲ್ಲಿ ನಿರಂತರ ಪ್ರವಾಸ ಮಾಡುತ್ತಾ ಬೆಂಬಲ ಕೋರುತ್ತಿದ್ದರು. ಖಿಲಾಫತ್ ಚಳವಳಿಯಲ್ಲಿ ಕಾಫಿರ್ಗಳ ವಿರುದ್ಧ ಕೂಗಲಾಗುತ್ತಿದ್ದ ಜಿಹಾದಿ ಘೋಷಣೆಗಳ ಬಗ್ಗೆ ಸ್ವಾಮಿ ಶ್ರದ್ಧಾನಂದರಂತಹ ವಿವೇಕಿ ಹಿಂದೂ ಸಂತ ನಾಯಕರು ಎಚ್ಚರಿಸಿದಾಗ, ಗಾಂಧಿ ಕೇವಲ “ಮುಸ್ಲಿಮರು ಬ್ರಿಟಿಷ್ ಅಧಿಕಾರಶಾಹಿಯನ್ನು ಮಾತ್ರ ಉದ್ದೇಶಿಸಿ ಹೇಳುತ್ತಿದ್ದಾರೆ” ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ ಶ್ರದ್ಧಾನಂದರು, “ತಮ್ಮ ಮನಸ್ಸಿನಲ್ಲಿ ಹಿಂಸೆ ಮತ್ತು ಧಾರ್ಮಿಕ ಪ್ರಾಬಲ್ಯದ ಆಲೋಚನೆಗಳಿಗೆ ಜಾಗ ಕೊಟ್ಟಿರುವ ಮುಸ್ಲಿಂ ಮೌಲ್ವಿಗಳು, ಮುಂದೊಂದು ದಿನ ಖಂಡಿತವಾಗಿಯೂ ಹಿಂದೂಗಳ ವಿರುದ್ಧ ತಿರುಗಿ ಬೀಳಲಿದ್ದಾರೆ” ಎಂದು ಎಚ್ಚರಿಸಿದರು. ಶೀಘ್ರದಲ್ಲೇ ಸ್ವಾಮಿ ಶ್ರದ್ಧಾನಂದರ ಮಾತು ಅಕ್ಷರಶಃ ನಿಜವಾಯಿತು.
ಪಂಜಾಬ್ನ ಖಿಲಾಫತ್ ಚಳವಳಿಯ ಪ್ರಮುಖ ಸೂತ್ರಧಾರಿಯಾಗಿದ್ದ ಅಲ್ಲಾ ಬಕ್ಷ್ ಕೇರಳದ ಮಲಬಾರಿಗೆ ಬಂದಾಗ, ಧಾರ್ಮಿಕ ಸಾಮರಸ್ಯದ ಹೆಸರಿನಲ್ಲಿ ಅಭೂತಪೂರ್ವ ಘಟನೆಯೊಂದು ನಡೆಯಿತು. ಕುದುರೆ ಅಥವಾ ಕತ್ತೆಗಳ ಬದಲಾಗಿ ಹಿಂದೂಗಳನ್ನು ಆತನ ಸಾರೋಟಿಗೆ ಕಟ್ಟಿ ಎಳೆಯುವಂತೆ ಮಾಡಲಾಯಿತು ಮತ್ತು ಅವರಿಂದ ಬಲವಂತವಾಗಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿಸಲಾಯಿತು.
ಆಗಸ್ಟ್ 1920ರಲ್ಲಿ ಗಾಂಧಿ ಕೇರಳದಲ್ಲಿ ಖಿಲಾಫತ್ ಸಮಿತಿಗಳನ್ನು ಸ್ಥಾಪಿಸಲು ಮತ್ತು ಹಿಂದೂಗಳಿಂದ ನಿಧಿ ಸಂಗ್ರಹಿಸಲು ಭೇಟಿ ನೀಡಿದರು. ಆದರೆ, ಅತ್ತ ಮಕ್ಕಾ ಅಲಿ ಮುಸ್ಲಿಯಾರ್, ಆತನ ಧರ್ಮಾಂಧ ಸಹಚರ ವರಿಯಂಕುನ್ನತ್ ಕುಂಜಹಮ್ಮದ್ ಹಾಜಿ, ಚೆಂಬ್ರಶ್ಶೇರಿ ಇಂಬಿಚಿ ಕೋಯ ತಂಗಲ್ ಮತ್ತಿತರರು ಭಾರತದಲ್ಲಿ ಇಸ್ಲಾಮಿಕ್ ರಾಜ್ಯ ಸ್ಥಾಪಿಸಲು ಈಗಾಗಲೇ ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಅವರು ತರಬೇತಿ ಪಡೆದ ಮುಸ್ಲಿಂ ಯುವಕರನ್ನು ಮತ್ತು ಮೊದಲ ಮಹಾಯುದ್ಧದಲ್ಲಿ ಹೋರಾಡಿದ ಮುಸ್ಲಿಂ ಸೈನಿಕರನ್ನು ಒಗ್ಗೂಡಿಸಿ ‘ಖಿಲಾಫತ್ ಸೈನ್ಯ’ವನ್ನು ರಚಿಸಿದರು. ಯೂನಿಫಾರ್ಮ್ ಮತ್ತು ಶಸ್ತ್ರಾಸ್ತ್ರಗಳಿಂದ ಸಜ್ಜಾಗಿದ್ದ ಈ ಸೈನ್ಯದ ಸದಸ್ಯರು, ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪನೆಗಾಗಿ ಪ್ರಾಣ ನೀಡಲೂ ಸಿದ್ಧವೆಂದು ಕುರಾನ್ ಮೇಲೆ ಪ್ರಮಾಣ ಮಾಡಿದ್ದರು. ವರದಿಗಳ ಪ್ರಕಾರ, ಈ ಸೈನ್ಯದಲ್ಲಿ 65,000ಕ್ಕೂ ಹೆಚ್ಚು ಮುಸ್ಲಿಂ ಪುರುಷರನ್ನು ಭರ್ತಿ ಮಾಡಿಕೊಳ್ಳಲಾಗಿತ್ತು. ಅವರು ಮಲಬಾರಿನ ಹಲವು ಪ್ರದೇಶಗಳಲ್ಲಿ ಮಿಲಿಟರಿ ಪಥಸಂಚಲನ ನಡೆಸಲು ಪ್ರಾರಂಭಿಸಿದರು.
ಆಗಸ್ಟ್ 22, 1921ರಂದು ಜಮಾತ್ ಮಸೀದಿಯ ಮೈಕಿನಿಂದ ಮಲಬಾರ್ ಭಾಗವು ಖಿಲಾಫತ್ನ ಭಾಗವೆಂದು ಮತ್ತು ಅಲಿ ಮುಸ್ಲಿಯಾರ್ ಅದರ ಇಸ್ಲಾಮಿಕ್ ಆಡಳಿತಗಾರನೆಂದು ಘೋಷಿಸಲಾಯಿತು. ಇಡೀ ಪ್ರದೇಶವನ್ನು ಶರಿಯಾ ಕಾನೂನಿಗೆ ಒಳಪಟ್ಟ ವಲಯವೆಂದು ಸಾರಲಾಯಿತು. ಕಟ್ಟಡಗಳ ಮೇಲೆ ಟರ್ಕಿಶ್ ಖಿಲಾಫತ್ನ ಧ್ವಜಗಳನ್ನು ಹಾರಿಸಲಾಯಿತು. ಮುಸ್ಲಿಮರಿಗೆ ‘ಖಿಲಾಫತ್ ಚುರಾ’ ಎಂಬ ಪ್ರತ್ಯೇಕ ಖಡ್ಗ-ಛೂರಿಗಳನ್ನು ತಯಾರಿಸಿ ಹಂಚಲಾಯಿತು.
ನಿರೀಕ್ಷೆಯಂತೆಯೇ ಈ ಚಳವಳಿ ಹಿಂದೂಗಳ ವಿರುದ್ಧ ಅತ್ಯಂತ ಹಿಂಸಾತ್ಮಕವಾಗಿ ತಿರುಗಿತು. ಹಿಂದೂಗಳಿಗೆ ಎರಡು ಆಯ್ಕೆಗಳನ್ನು ನೀಡಲಾಯಿತು: ‘ಇಸ್ಲಾಂ ಅಥವಾ ಸಾವು’. ಮುಸ್ಲಿಮರು ಹಿಂದೂಗಳ ಮೇಲೆ ಭೀಕರ ಅತ್ಯಾಚಾರಗಳನ್ನು ಎಸಗತೊಡಗಿದರು. ಸಾವಿರಾರು ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಯಿತು. ಮತಾಂತರವನ್ನು ಒಪ್ಪದ ಹಿಂದೂಗಳನ್ನು ಕೊಲ್ಲಲಾಯಿತು; ಅವರ ಮನೆಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚಲಾಯಿತು. ಮಲಬಾರಿನ ರಸ್ತೆಗಳು ಕತ್ತರಿಸಲ್ಪಟ್ಟ ಹಿಂದೂಗಳ ಶವಗಳಿಂದ ತುಂಬಿಹೋಗಿದ್ದವು. ಗರ್ಭಿಣಿಯರನ್ನು ತುಂಡು ತುಂಡಾಗಿ ಕತ್ತರಿಸಿ ಕಾಡಿಗೆ ಎಸೆಯಲಾಯಿತು; ಅವರ ಹೊಟ್ಟೆಯಲ್ಲಿದ್ದ ಗರ್ಭಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನಿರಪರಾಧಿ ಹಿಂದೂ ಮಕ್ಕಳನ್ನು ಅವರ ಪೋಷಕರ ಕಣ್ಣೆದುರೇ ಚಿತ್ರಹಿಂಸೆ ನೀಡಿ ಕಲ್ಲೆಯಲಾಯಿತು. ಯುವಕರನ್ನು ಜೀವಂತವಾಗಿ ಸುಡಲಾಯಿತು. ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ, ಅವರನ್ನು ದಾಸಿಯರನ್ನಾಗಿ ಮಾಡಿಕೊಳ್ಳಲಾಯಿತು. ಕೇಸರಿ ಧ್ವಜಗಳನ್ನು ಕಿತ್ತೆಸೆದು ಇಸ್ಲಾಮಿಕ್ ಧ್ವಜಗಳನ್ನು ನೆಡಲಾಯಿತು. ದೇವಸ್ಥಾನಗಳ ವಿಗ್ರಹಗಳನ್ನು ಭಂಗಗೊಳಿಸಿ ಧ್ವಂಸಗೊಳಿಸಲಾಯಿತು; ದೇವಾಲಯಗಳ ಆವರಣದಲ್ಲೇ ಗೋವುಗಳನ್ನು ಹತ್ಯೆ ಮಾಡಲಾಯಿತು. ಪ್ರಾಣ ಉಳಿಸಿಕೊಳ್ಳಲು ಸಾವಿರಾರು ಹಿಂದೂಗಳು ಬೆತ್ತಲೆಯಾಗಿ ಕಾಡುಗಳಲ್ಲಿ ಓಡುತ್ತಿದ್ದರು.
ಅಂದಿನ ವೈಸ್ರಾಯ್ ಹೆಂಡತಿಗೆ ಆನಿ ಬೆಸೆಂಟ್ ಮತ್ತು ಮಲಬಾರಿನ ಹಿಂದೂ ಮಹಿಳೆಯರು ಬರೆದ ಪತ್ರಗಳಲ್ಲಿ ಈ ಎಲ್ಲಾ ದೌರ್ಜನ್ಯಗಳ ವಿವರಗಳಿದ್ದು, ಅವುಗಳನ್ನು ಓದಿದವರ ಬೆನ್ನಹುರಿಯಲ್ಲಿ ನಡುಕ ಹುಟ್ಟಿಸುವಂತಿದ್ದವು. ‘ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ’ಯ ತನಿಖಾ ಸಮಿತಿ ವರದಿಯ ಪ್ರಕಾರ, ಈ ಭೀಕರ ಹಿಂಸಾಚಾರದಲ್ಲಿ 1,500 ಹಿಂದೂಗಳನ್ನು ಹತ್ಯೆ ಮಾಡಲಾಯಿತು, 20,000 ಜನರನ್ನು ಬಲವಂತವಾಗಿ ಮತಾಂತರಿಸಲಾಯಿತು ಮತ್ತು ಸುಮಾರು ೩ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಲೂಟಿ ಮಾಡಲಾಯಿತು. ಬ್ರಿಟಿಷರ ಅಧಿಕೃತ ದಾಖಲೆಗಳ ಪ್ರಕಾರ, ಬಲಿಪಶುಗಳಾದ ಹಿಂದೂಗಳ ಸಂಖ್ಯೆ 10,000ಕ್ಕೂ ಹೆಚ್ಚು. ದಾಳಿಕೋರರ ಮುಂದೆ ಹಿಂದೂಗಳು ಖಿಲಾಫತ್ ಚಳವಳಿಯ ಅಧ್ಯಕ್ಷರಾಗಿದ್ದ ಗಾಂಧೀಜಿ ಹೆಸರನ್ನು ಉಲ್ಲೇಖಿಸಿ ಹಿಂಸೆಯನ್ನು ನಿಲ್ಲಿಸುವಂತೆ ಬೇಡಿಕೊಂಡಾಗ, “ಅವನೊಬ್ಬ ಕಾಫಿರ್, ಆತ ನಮ್ಮ ನಾಯಕನಾಗಲು ಹೇಗೆ ಸಾಧ್ಯ?” ಎಂದು ಮುಸ್ಲಿಮರು ಉತ್ತರಿಸಿದರು.
ಈ ಹಿಂದೂ ನರಮೇಧದ ಸುದ್ದಿ ಹೊರಬಿದ್ದಾಗ, ಗಾಂಧೀಜಿ ಮತ್ತು ಕಾಂಗ್ರೆಸ್ ಅದನ್ನು ಒಪ್ಪಿಕೊಳ್ಳಲೇ ಇಲ್ಲ. ಕಾಲಕ್ರಮೇಣ ಘಟನೆಯನ್ನು ಅಲ್ಲಗಳೆಯಲು ಸಾಧ್ಯವಾಗದಿದ್ದಾಗ, ಕಾಂಗ್ರೆಸ್ ಅಧಿವೇಶನದಲ್ಲಿ ಕೇವಲ ಒಂದು ಸಾಂಕೇತಿಕ ಖಂಡನಾ ನಿರ್ಣಯವನ್ನು ಮಂಡಿಸಲಾಯಿತು. ಆದರೆ, ಆ ಸಣ್ಣ ಖಂಡನೆಯೂ ಅಲ್ಲಿನ ಕರೆಯಲ್ಪಟ್ಟ ‘ರಾಷ್ಟ್ರವಾದಿ’ ಮುಸ್ಲಿಂ ನಾಯಕರಿಗೆ ಅರಗಿಸಿಕೊಳ್ಳಲಾಗಲಿಲ್ಲ. ಮೌಲಾನಾ ಫಕೀರ್, ಮೌಲಾನಾ ಹಸರತ್ ಮೊಹಮ್ಮದ್ ಮತ್ತಿತರ ಮೌಲ್ವಿಗಳು ಈ ಖಂಡನಾ ನಿರ್ಣಯವನ್ನು ಉಗ್ರವಾಗಿ ವಿರೋಧಿಸಿದರು. ಗಾಂಧಿ ಮತ್ತು ಕಾಂಗ್ರೆಸ್ ಅವರ ಮುಂದೆ ಸಂಪೂರ್ಣವಾಗಿ ಶರಣಾದರು. ಇದೇ ಸಮಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ವೀರ್ ಸಾವರ್ಕರ್ ಅವರಂತಹ ನಾಯಕರನ್ನು ‘ಹಿಂದೂ-ಮುಸ್ಲಿಂ ಐಕ್ಯತೆಗೆ ಅಡ್ಡಿಪಡಿಸುವ ದೇಶದ ಶತ್ರುಗಳು’ ಎಂದು ಬಿಂಬಿಸಲಾಯಿತು.
ಅಷ್ಟಕ್ಕೇ ನಿಲ್ಲದ ಮೋಹನ್ದಾಸ್ ಗಾಂಧಿ, ಜನವರಿ 26,1922ರ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಹಿಂದೂಗಳ ಹತ್ಯಾಕಾಂಡಕ್ಕೆ ಹಿಂದೂಗಳನ್ನೇ ಹೊಣೆ ಮಾಡಿದರು. ಗಾಂಧಿ ಹೀಗೆ ಬರೆದರು: “ಅವರೂ (ಹಿಂದೂಗಳು) ನಿರಪರಾಧಿಗಳೇನಲ್ಲ. ಅವರು ಇದುವರೆಗೆ ಮೋಪ್ಲಾಗಳನ್ನು ಕಾಳಜಿಯಿಂದ ನೋಡಿಕೊಳ್ಳಲಿಲ್ಲ, ಅವರನ್ನು ಸ್ನೇಹಿತರಂತೆ ನಡೆಸಿಕೊಳ್ಳಲಿಲ್ಲ. ಈಗ ಮೋಪ್ಲಾಗಳ ಮೇಲೆ ಅಥವಾ ಸಾಮಾನ್ಯವಾಗಿ ಮುಸ್ಲಿಮರ ಮೇಲೆ ಕೋಪಗೊಂಡು ಯಾವುದೇ ಪ್ರಯೋಜನವಿಲ್ಲ”.
ಅಷ್ಟೇ ಅಲ್ಲ, ಗಾಂಧೀಜಿ ಆ ಮುಸ್ಲಿಂ ಹಿಂಸಾಚಾರವನ್ನು ಸಮರ್ಥಿಸಿಕೊಳ್ಳುತ್ತಾ, “ಅವರು ಧೈರ್ಯಶಾಲಿ ಮತ್ತು ದೇವರಿಗೆ ಹೆದರುವ ಜನರು. ಅವರು ತಮ್ಮ ಧರ್ಮವೆಂದು ಭಾವಿಸಿರುವುದಕ್ಕಾಗಿ ಮತ್ತು ಧಾರ್ಮಿಕವೆಂದು ಪರಿಗಣಿಸಿದ ಮಾರ್ಗದಲ್ಲೇ ಹೋರಾಡುತ್ತಿದ್ದಾರೆ” ಎಂದರು.
ಇಸ್ಲಾಮಿಕ್ ಮತಾಂಧರಿಗೆ ‘ಸ್ವರಾಜ್ಯ’ ಎಂದರೆ ಖಿಲಾಫತ್ ಸ್ಥಾಪನೆಯಾಗಿತ್ತು. ಅವರ ಪಾಲಿಗೆ ಸ್ವರಾಜ್ಯ ಎಂದರೆ ಎಲ್ಲಾ ಕಾಫಿರ್ಗಳನ್ನು ಇಸ್ಲಾಂಗೆ ಮತಾಂತರಿಸುವುದಾಗಿತ್ತು. ಮಲಬಾರಿನ ಮಲಪ್ಪುರಂ, ಮಂಜೇರಿ, ಪನ್ನಿಕೋಡ್ ಮತ್ತು ತಿರೂರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಐದು ತಿಂಗಳ ಕಾಲ ಈ ಇಸ್ಲಾಮಿಕ್ ಆಡಳಿತ ನಡೆಯಿತು. ಕಾಫಿರ್ ಹಿಂದೂಗಳು ಮತ್ತು ಅವರ ಮಹಿಳೆಯರು ವರ್ಣನಾತೀತ ದೌರ್ಜನ್ಯಗಳಿಗೆ ಒಳಗಾದರು. ಮಲಬಾರಿನ ಮುಸ್ಲಿಮರನ್ನು ‘ಮೋಪ್ಲಾ ಮುಸ್ಲಿಮರು’ ಎಂದೂ ಕರೆಯಲಾಗುತ್ತಿದ್ದುದರಿಂದ, ಈ ನರಮೇಧವನ್ನು ‘ಮೋಪ್ಲಾ ನರಮೇಧ’ ಅಥವಾ ‘ಮೋಪ್ಲಾ ದಂಗೆ’ ಎಂದು ಕರೆಯಲಾಗುತ್ತದೆ.
ಆದರೆ, ಎಡಪಂಥೀಯ ಮತ್ತು ಕಾಂಗ್ರೆಸ್ ಬೆಂಬಲಿತ ಇತಿಹಾಸಕಾರರು ಮುಸ್ಲಿಮರಿಂದ ನಡೆದ ಈ ಹಿಂದೂ ನರಮೇಧವನ್ನು ಬ್ರಿಟಿಷ್ ಆಡಳಿತ ಮತ್ತು ಜಮೀನ್ದಾರರ ವಿರುದ್ಧ ಬಡ ಗೇಣಿದಾರರು ನಡೆಸಿದ ದಂಗೆ ಎಂದು ಬಿಂಬಿಸಿ ಇತಿಹಾಸವನ್ನು ತಿಚುಚಿದ್ದಾರೆ. ಈ ಎಡಪಂಥೀಯ ಇತಿಹಾಸಕಾರರು ಕಾಫಿರ್ಗಳ ವಿರುದ್ಧ ನಡೆದ ಇಸ್ಲಾಮಿಕ್ ಕ್ರೌರ್ಯವನ್ನು ಮುಚ್ಚಿಹಾಕಿ, ಅದನ್ನು ‘ಸ್ವರಾಜ್ಯಕ್ಕಾಗಿ ನಡೆದ ಸ್ವಾತಂತ್ರ್ಯ ಸಂಗ್ರಾಮ’ ಎಂದು ತೋರಿಸಲು ಯತ್ನಿಸಿದ್ದಾರೆ. ಆದರೆ, ನಿಜವಾದ ಇತಿಹಾಸವು ಮೋಪ್ಲಾಗಳ ಬರ್ಬರ ಕ್ರೌರ್ಯಕ್ಕೆ ಮತ್ತು ತುಷ್ಟೀಕರಣ ರಾಜಕಾರಣಕ್ಕೆ ಬಲಿಯಾದ ಸಾವಿರಾರು ಹಿಂದೂ ಪುರುಷರು ಮತ್ತು ಮಹಿಳೆಯರ ರಕ್ತದಲ್ಲಿ ಬರೆಯಲ್ಪಟ್ಟಿದೆ.
(ಲೇಖಕರು: ಹಿರಿಯ ಸಂಶೋಧಕರು, ದಿ ಮಿಥಿಕ್ ಸೊಸೈಟಿ, ಬೆಂಗಳೂರು)
