- ಕೆ. ಎ. ಬದರೀನಾಥ್
ನ್ಯೂಯಾರ್ಕ್, ಟೊರೊಂಟೊ ಹಾಗೂ ಲಂಡನ್ ನಗರಗಳಲ್ಲಿ ಆರ್ಎಸ್ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ನೀಡಲಿರುವ ‘ವಿಶ್ವ ಬಂಧುತ್ವ ಹಾಗೂ ಸರ್ವವ್ಯಾಪಿ ಏಕತೆ’ಯ ಸಂದೇಶವು, ತೀವ್ರ ಅಸಹಿಷ್ಣುತೆಯಿಂದ ಕೂಡಿದ ಬೌದ್ಧಿಕ ಭಯೋತ್ಪಾದನೆಗೆ ತಕ್ಕ ಉತ್ತರ ನೀಡಲಿದೆ.
ವೈಚಾರಿಕವಾಗಿ ಎದುರಾಳಿಯನ್ನು ಮೌನಗೊಳಿಸಲು ಮತ್ತು ಮೂಲೆಗುಂಪು ಮಾಡಲು ಹಲವು ಹಾದಿಗಳಿವೆ. ನಿಂದಿಸುವುದು, ಸುಳ್ಳು ಆರೋಪ ಹೊರಿಸುವುದು, ಸಮಾಜದಲ್ಲಿ ತೇಜೋವಧೆ ಮಾಡುವುದು ಅಥವಾ ಅವರ ಸಾಮಾಜಿಕ ಸ್ಥಾನಮಾನವನ್ನು ಹಾಳುಗೆಡಹುವುದು ಇದರಲ್ಲಿ ಪ್ರಮುಖವಾದವು. ತೀವ್ರ ವಿರೋಧ ಹಾಗೂ ದ್ವೇಷವನ್ನು ವ್ಯಕ್ತಪಡಿಸಲು ವ್ಯಕ್ತಿತ್ವ ಹರಣದ ತಂತ್ರವನ್ನೂ ಬಳಸಲಾಗುತ್ತದೆ.
ಆದರೆ, ನಿಮ್ಮ ಎದುರಾಳಿಯು ಸಮಾಜದಲ್ಲಿ ಸುದೀರ್ಘ ಇತಿಹಾಸ ಹಾಗೂ ಅಲುಗಾಡಿಸಲಾಗದ ದೃಢ ತಳಹದಿ ಹೊಂದಿರುವ ಸಂಘಟನೆಯಾಗಿದ್ದರೆ, ಅದರ ಮುಖ್ಯಸ್ಥರನ್ನೇ ಗುರಿಯಾಗಿಸಿ ದಾಳಿ ನಡೆಸುವುದು ಸಾಮಾನ್ಯ ತಂತ್ರ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರ ವಿಷಯದಲ್ಲೂ ಪ್ರಸ್ತುತ ಇದೇ ತಂತ್ರವನ್ನು ಬಳಸಲಾಗುತ್ತಿದೆ.
ತುಷಾರ್ ಅಮರೀಶ್ ಗೋಯಲ್ ನಿರ್ದೇಶನದ ‘ದಿ ತಾಜ್ ಸ್ಟೋರಿ’ ಚಲನಚಿತ್ರದಲ್ಲಿ, ಪ್ರಮುಖ ಪಾತ್ರಧಾರಿ ಪರೇಶ್ ರಾವಲ್ (ವಿಷ್ಣುದಾಸ್ ಪಾತ್ರ) ಭಾರತದ ಉಜ್ವಲ ಇತಿಹಾಸ, ಸಂಸ್ಕೃತಿ ಮತ್ತು ಸನಾತನ ಮೂಲಬೋಧನೆಗಳನ್ನು ಕಲುಷಿತಗೊಳಿಸುವ ಕೆಟ್ಟ ಸ್ವರೂಪದ ‘ಬೌದ್ಧಿಕ ಭಯೋತ್ಪಾದನೆ’ಯ ಕುರಿತು ಪ್ರಸ್ತಾಪಿಸುತ್ತಾರೆ.
ಆರ್ಎಸ್ಎಸ್ ಹಾಗೂ ಮೋಹನ್ ಭಾಗವತ್ ಅವರನ್ನು ಬೋನಿಗೆ ತಳ್ಳಲು ಹೆಣೆದಿರುವ ಕುತಂತ್ರವೂ ಇಂತಹುದೇ ಬೌದ್ಧಿಕ ಭಯೋತ್ಪಾದನೆಯ ಭಾಗ. ಅಮೆರಿಕ, ಕೆನಡಾ ಮತ್ತು ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಸಕ್ರಿಯವಾಗಿರುವ ಕೆಲ ‘ಬೌದ್ಧಿಕ ಭಯೋತ್ಪಾದಕರು’ ಈ ಹುನ್ನಾರವನ್ನು ದೊಡ್ಡ ಮಟ್ಟದಲ್ಲೇ ನಡೆಸುತ್ತಿದ್ದಾರೆ.
ತಮ್ಮನ್ನು ತಾವು ಬುದ್ಧಿಜೀವಿಗಳೆಂದು ಕರೆದುಕೊಳ್ಳುವ ಇಂತಹ ವ್ಯಕ್ತಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ 80ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ‘ದಿಮಾಗಿ ನಕ್ಸಲರು’ (ಬುದ್ಧಿಜೀವಿ ನಕ್ಸಲರು) ಎಂದು ವ್ಯಾಖ್ಯಾನಿಸಿದ್ದರು. ಭಾರತದ ಸನ್ನಿವೇಶದಲ್ಲಿ ಎದುರಾಳಿಗಳನ್ನು ಸಿದ್ಧಾಂತದ ಹೆಸರಿನಲ್ಲಿ ನಿರ್ನಾಮ ಮಾಡಲು ಯತ್ನಿಸುವ ನಕ್ಸಲ್ ಅಥವಾ ತೀವ್ರ ಎಡಪಂಥೀಯ ಮನಸ್ಥಿತಿಯ ಬಗ್ಗೆ ಮೋದಿ ಪ್ರಸ್ತಾಪಿಸಿದ್ದರಾದರೂ, ಇಂತಹ ಶಕ್ತಿಗಳು ವಿದೇಶಿ ನೆಲದಲ್ಲೂ ತೀವ್ರ ಸ್ವರೂಪದಲ್ಲಿ ಸಕ್ರಿಯವಾಗಿವೆ.
ಆರ್ಎಸ್ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ನ್ಯೂಯಾರ್ಕ್ನಲ್ಲಿ ಹೆಜ್ಜೆ ಇಡುತ್ತಿದ್ದಂತೆಯೇ, ಸಂಘದ ವಿರುದ್ಧ ನಿಷೇಧ ಹೇರಬೇಕೆಂಬ ಕಪಟ ಕೂಗು ಮುಗಿಲು ಮುಟ್ಟುವುದು ಸಹಜ.
ಕೆಲವೇ ಕೆಲವು ತೀವ್ರ ಎಡಪಂಥೀಯ ಹಾಗೂ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಹಿಷ್ಣುತೆಯನ್ನು ಪ್ರದರ್ಶಿಸುತ್ತಿವೆ. ಈ ಶನಿವಾರ ಪ್ರಸಿದ್ಧ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ನಡೆಯಲಿರುವ 6,000ಕ್ಕೂ ಹೆಚ್ಚು ಅಮೆರಿಕನ್ನರ ಸರ್ವಧರ್ಮ ಸಮ್ಮೇಳನದಲ್ಲಿ ಮೋಹನ್ ಭಾಗವತ್ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸುವುದನ್ನು ತಡೆಯಲು ಅಪಪ್ರಚಾರ ನಡೆಸುತ್ತಿವೆ.
‘ಅಹೆಡ್’ (American Hindus for Engagement and Dialogue – AHEAD) ವೇದಿಕೆಯ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಸಂಸ್ಥೆಗಳು ಒಂದಾಗಿ ಈ ‘ವಿಶ್ವ ಬಂಧುತ್ವ’ (Universal Oneness) ಸಮ್ಮೇಳನವನ್ನು ಸಂಘಟಿಸಿವೆ.
ಪಶ್ಚಿಮ ಏಷ್ಯಾ ಹಾಗೂ ಪೂರ್ವ ಯುರೋಪ್ ಭಾಗದಲ್ಲಿ ಸಶಸ್ತ್ರ ಸಂಘರ್ಷ ಮತ್ತು ಯುದ್ಧಗಳು ಭುಗಿಲೆದ್ದಿರುವ ಈ ವಾತಾವರಣದಲ್ಲಿ, ಅಮೆರಿಕದಲ್ಲಿ ನಡೆಯುತ್ತಿರುವ ಈ ಸಾಂಸ್ಕೃತಿಕ ಸಂವಾದವು ವಿಶ್ವಶಾಂತಿ, ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ವಿವಿಧ ಧರ್ಮಗಳ ನಾಯಕರನ್ನು ಒಂದೇ ವೇದಿಕೆಗೆ ತರುತ್ತಿದೆ.
ಅಮೆರಿಕದಲ್ಲಿರುವ ಬೃಹತ್ ಹಿಂದೂ ಸಮುದಾಯದ ಜೊತೆಗೆ ನಾಗರಿಕ ನಾಯಕರು, ಸಾರ್ವಜನಿಕ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸರ್ವಧರ್ಮೀಯ ನಾಯಕರು ಈ ಮಹಾಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಂದಿನ ಹದಿನೈದು ದಿನಗಳಲ್ಲಿ ಸರಸಂಘಚಾಲಕರು ಕೆನಡಾ ಮತ್ತು ಯುನೈಟೆಡ್ ಕಿಂಗ್ಡಮ್ನಾದ್ಯಂತ ಪ್ರವಾಸ ಕೈಗೊಳ್ಳಲಿದ್ದು, ಟೊರೊಂಟೊ ಮತ್ತು ಲಂಡನ್ ನಗರಗಳಲ್ಲೂ ಇಂತಹುದೇ ಸಮಾವೇಶಗಳು ಆಯೋಜನೆಗೊಂಡಿವೆ. ತಮ್ಮ ಪ್ರವಾಸದುದ್ದಕ್ಕೂ ಅವರು ಸಮಾಜ ಸೇವೆ, ಪರಿಸರ ಸ್ನೇಹಿ ಜೀವನಶೈಲಿ, ಸಕ್ರಿಯ ನಾಗರಿಕ ಭಾಗವಹಿಸುವಿಕೆ, ಕುಟುಂಬ ಮೌಲ್ಯಗಳು, ಸುಸ್ಥಿರ ಅಭಿವೃದ್ಧಿ ಮಾದರಿಗಳು ಮತ್ತು ಮುಖ್ಯವಾಗಿ ಇಡೀ ಜಗತ್ತನ್ನೇ ಒಂದೇ ಕುಟುಂಬ ಎಂದು ಸಾರುವ ‘ವಸುಧೈವ ಕುಟುಂಬಕಂ’ ಸಿದ್ಧಾಂತವನ್ನು ಜಾಗತಿಕ ವೇದಿಕೆಯಲ್ಲಿ ಮಂಡಿಸಲಿದ್ದಾರೆ.
ಈ ಸನ್ನಿವೇಶವು 1893 ರ ಸೆಪ್ಟೆಂಬರ್ 11 ರಂದು ಚಿಕಾಗೋದಲ್ಲಿ ನಡೆದ ಐತಿಹಾಸಿಕ ‘ವಿಶ್ವ ಧರ್ಮ ಸಂಸತ್ತು’ ಸಭೆಯನ್ನು ನೆನಪಿಸುತ್ತದೆ. ಅಂದು ಸ್ವಾಮಿ ವಿವೇಕಾನಂದರು ಸರ್ವವ್ಯಾಪಿ ಏಕತೆಯ ಸಂದೇಶದೊಂದಿಗೆ ಜಗತ್ತನ್ನು ಉದ್ದೇಶಿಸಿ ಮಾತನಾಡಿ, ಹಿಂದುತ್ವವನ್ನು ಸಹಿಷ್ಣುತೆ, ಒಳಗೊಳ್ಳುವಿಕೆ ಮತ್ತು ಜಾಗತಿಕ ಸ್ವೀಕಾರಾರ್ಹತೆಯ ಜೀವನ ಮಾರ್ಗವಾಗಿ ಪರಿಚಯಿಸಿದ್ದರು.
ವಿವಿಧ ಧರ್ಮ ಹಾಗೂ ಪಂಥಗಳನ್ನು ಅನುಸರಿಸುವ ಜನರ ನಡುವೆ ಪರಸ್ಪರ ಸೌಹಾರ್ದತೆ ಸ್ಥಾಪಿಸುವುದೇ ಅಂದು ಸ್ವಾಮಿ ವಿವೇಕಾನಂದರ ಭಾಷಣದ ಆಶಯವಾಗಿತ್ತು. ಇಂದಿನ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವಾಗಿಲ್ಲ. ಆರ್ಎಸ್ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಜಾಗತಿಕ ಶಾಂತಿ ಮತ್ತು ಸಮೃದ್ಧಿಗಾಗಿ ಅದೇ ‘ವಿಶ್ವ ಬಂಧುತ್ವ’ದ ಆಶಯ ಹೊತ್ತು ಪಶ್ಚಿಮಕ್ಕೆ ಪ್ರಯಾಣಿಸುತ್ತಿದ್ದಾರೆ. ಗೌರವ ಮತ್ತು ಸೌಹಾರ್ದತೆಯಲ್ಲಿ ಬೇರೂರಿರುವ ಈ ಧರ್ಮಗುರುಗಳ ಸಂವಾದವು ಜಾಗತಿಕ ಮಟ್ಟದಲ್ಲಿ ಹೊಸ ಚಿಂತನೆಗೆ ನಾಂದಿ ಹಾಡಲಿದೆ.
ಸಂಘರ್ಷಗಳು, ಮನುಕುಲವನ್ನು ಕಾಡುವ ರೋಗರುಜಿನಗಳು, ಆರ್ಥಿಕ ಹಿನ್ನಡೆ, ನಿರಕ್ಷರತೆ, ಸಂಪನ್ಮೂಲಗಳ ಅಭಾವ ಹಾಗೂ ಅತಿಯಾದ ಅನುಭೋಗಿ ಸಂಸ್ಕೃತಿಯಿಂದ ಜಗತ್ತು ತತ್ತರಿಸುತ್ತಿರುವಾಗ, ಮಾನವಕುಲದ ಕಲ್ಯಾಣಕ್ಕೆ ‘ಜಾಗತಿಕ ಒಗ್ಗಟ್ಟು’ ಅನಿವಾರ್ಯವೆಂದು ದಲೈ ಲಾಮಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹಾಗೂ ಪೋಪ್ ಫ್ರಾನ್ಸಿಸ್ರಂತಹ ಮಹಾನಾಯಕರು ಒತ್ತಿ ಹೇಳಿದ್ದಾರೆ.
ಜಾಗತಿಕವಾಗಿ ನಡೆಯುತ್ತಿರುವ ಧನಾತ್ಮಕ ಹಾಗೂ ನಕಾರಾತ್ಮಕ ಪ್ರಚಾರಗಳ ನಡುವೆಯೇ, ಆರ್ಎಸ್ಎಸ್ ಮುಖ್ಯಸ್ಥರು ಭಾರತದ ಶಾಂತಿ ಸಂದೇಶವನ್ನು ಜಗತ್ತಿಗೆ ತಲುಪಿಸಲಿದ್ದಾರೆ. ಸಂಘದ 100 ವರ್ಷಗಳ ನಿಸ್ವಾರ್ಥ ಸೇವೆ, ನೈಜ ಸಂಗತಿಗಳು ಹಾಗೂ ಹಿಂದುತ್ವ ಮತ್ತು ಭಾರತದ ಕುರಿತು ಹರಡಲಾಗಿರುವ ಭ್ರಮೆ-ತಪ್ಪು ಕಲ್ಪನೆಗಳನ್ನು ನಿವಾರಿಸಲಿದ್ದಾರೆ.
ನ್ಯೂಯಾರ್ಕ್ನಲ್ಲಿ ಅನಿವಾಸಿ ಭಾರತೀಯರು, ಪ್ರಮುಖ ಉದ್ಯಮಿಗಳು ಹಾಗೂ ಗಣ್ಯರನ್ನು ಭೇಟಿಯಾಗಲಿರುವ ಭಾಗವತ್, ಟೊರೊಂಟೊ ಮತ್ತು ಲಂಡನ್ನಲ್ಲಿ ಪ್ರಮುಖ ಸಿಖ್ ಸಮುದಾಯದ ನಾಯಕರ ಜೊತೆಗೂ ಸಮಾಲೋಚನೆ ನಡೆಸಲಿದ್ದಾರೆ.
ವಿಶೇಷವಾಗಿ ಕೆನಡಾದಲ್ಲಿ ಖಾಲಿಸ್ತಾನಿ ತೀವ್ರಗಾಮಿಗಳು ಭಾರತ ಮತ್ತು ಹಿಂದೂ ವಿರೋಧಿ ಪ್ರಚಾರವನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ, ಡಾ. ಭಾಗವತ್ ಅವರ ಕೆನಡಾ ಭೇಟಿ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಹೆಚ್ಚಿನ ಸಿಖ್ ನಾಯಕರು, ಉದ್ಯಮಿಗಳು ಹಾಗೂ ಸಮುದಾಯದ ಗಣ್ಯರು ಖಾಲಿಸ್ತಾನಿ ಪ್ರಚಾರದಿಂದ ದೂರವಿದ್ದಾರಾದರೂ, ಪಾಕಿಸ್ತಾನದ ಕುತಂತ್ರಗಳಿಗೆ ಬಲಿಯಾಗಿರುವ ಇಸ್ಲಾಮಿಕ್ ಮೂಲಭೂತವಾದಿ ಗುಂಪುಗಳು ಈ ದುಷ್ಟ ಅಭಿಯಾನಕ್ಕೆ ಕುಮ್ಮಕ್ಕು ನೀಡುತ್ತಿರುವುದು ಕಂಡುಬರುತ್ತಿದೆ.
ನ್ಯೂಯಾರ್ಕ್, ಲಂಡನ್ ಹಾಗೂ ಟೊರೊಂಟೊ ನಗರಗಳಲ್ಲಿ ನಡೆಯಲಿರುವ ಹಿಂದೂ ಸಂವಾದ ಮತ್ತು ವಿವಿಧ ಕ್ಷೇತ್ರಗಳ ಗಣ್ಯರ ಭೇಟಿಯು ಈ ಪ್ರವಾಸದ ಪ್ರಮುಖ ಭಾಗವಾಗಿದೆ. ಆರ್ಎಸ್ಎಸ್ ಸರ್ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಂಘದ ಶತಮಾನೋತ್ಸವ ವರ್ಷದ ಅಂಗವಾಗಿ ಆರಂಭಿಸಿದ್ದ ಸಾಂಸ್ಕೃತಿಕ ಸಂವಾದದ ಮುಂದುವರಿದ ಭಾಗವಾಗಿ ಸರಸಂಘಚಾಲಕರ ಈ ಪ್ರವಾಸ ಆಯೋಜನೆಗೊಂಡಿದೆ.
ಕೇವಲ ಉತ್ಪಾದನೆ, ಬಳಕೆ ಮತ್ತು ಮಾರುಕಟ್ಟೆ, ಕೇಂದ್ರೀಕೃತ ವ್ಯಾಪಾರೀಕರಣವೇ ಪಾಶ್ಚಿಮಾತ್ಯ ಜಾಗತೀಕರಣದ ಮೂಲ ಪರಿಕಲ್ಪನೆಯಾಗಿದೆ.
ಆದರೆ, ಡಾ. ಭಾಗವತ್ ಅವರು ಜಾಗತಿಕ ಏಕತೆ, ಆಧ್ಯಾತ್ಮಿಕ ಸೌಹಾರ್ದತೆ ಮತ್ತು ಸನಾತನ ಧರ್ಮದ ಉನ್ನತ ಮೌಲ್ಯಗಳನ್ನು ಆಧರಿಸಿದ ಜಾಗತೀಕರಣದ ಭಾರತೀಯ ದೃಷ್ಟಿಕೋನವನ್ನು ಮಂಡಿಸಲಿದ್ದಾರೆ. ಇದು ಒಮ್ಮೆ ಸ್ವಾಮಿ ವಿವೇಕಾನಂದರು ಜಗತ್ತಿಗೆ ನೀಡಿದ್ದ ಸಂದೇಶದ ಮುಂದುವರಿದ ಭಾಗವಾಗಿದೆ. ತಂತ್ರಜ್ಞಾನ ಮತ್ತು ಆರ್ಥಿಕತೆಯನ್ನು ಮೀರಿದ ಆತ್ಮೀಯ ಜಾಗತಿಕ ಬಾಂಧವ್ಯವನ್ನು ಸ್ಥಾಪಿಸುವುದು ಈ ಭೇಟಿಯ ಮುಖ್ಯ ಉದ್ದೇಶ.
ಆದ್ದರಿಂದ, ವಿರೋಧಿಸುವ ಮುನ್ನ ಅವರ ಮಾತುಗಳನ್ನು ಒಮ್ಮೆ ಆಲಿಸೋಣ!
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
