1971 ರಲ್ಲಿ ಇರಾನಿಯನ್ ಪತ್ರಕರ್ತ ಹಾಗೂ ಅರೇಬಿಕ್ ವಿದ್ವಾಂಸ ಡಾ. ಸೈಫುದ್ದೀನ್ ಜೀಲಾನಿ ಅವರೊಂದಿಗೆ ನಡೆದ ಸಂದರ್ಶನದಲ್ಲಿ, ಅಂದಿನ ಆರ್ಎಸ್ಎಸ್ (RSS) ಸರಸಂಘಚಾಲಕರಾಗಿದ್ದ ಎಂ. ಎಸ್. ಗೋಲ್ವಲ್ಕರ್ (ಗುರೂಜಿ) ಅವರು ಹಿಂದೂ-ಮುಸ್ಲಿಂ ಸಂಬಂಧಗಳು, ಧಾರ್ಮಿಕ ಸ್ವಾತಂತ್ರ್ಯ, ರಾಷ್ಟ್ರೀಯ ಗುರುತು, ಕೋಮು ಸೌಹಾರ್ದತೆ ಮತ್ತು ಸಮುದಾಯಗಳ ನಡುವಿನ ಪರಸ್ಪರ ಗೌರವದ ಅಗತ್ಯದ ಕುರಿತು ವಿಸ್ತೃತವಾಗಿ ಮಾತನಾಡಿದ್ದರು.
ಮುಸ್ಲಿಮರು ಮತ್ತು ಹಿಂದೂ-ಮುಸ್ಲಿಂ ಸಂಬಂಧಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ಗುರೂಜಿ, ದೇಶಕ್ಕಾಗಿ ಸಮಾನವಾಗಿ ಭಾಗವಹಿಸುವುದು, ತಮ್ಮ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯ, ಎಲ್ಲಾ ಧರ್ಮಗಳಿಗೆ ಗೌರವ, ಇತಿಹಾಸದ ಸತ್ಯವಾದ ಬೋಧನೆ ಮತ್ತು ಸಾಮಾನ್ಯ ರಾಷ್ಟ್ರೀಯ ದೃಷ್ಟಿಕೋನದ ಅಗತ್ಯವನ್ನು ಪ್ರತಿಪಾದಿಸಿದ್ದರು.
ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಮಾನತೆ:
ಹಿಂದೂ-ಮುಸ್ಲಿಂ ಸಂಬಂಧಗಳು ಮತ್ತು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಮಾತನಾಡಿದ ಗುರೂಜಿ, ದೇಶಕ್ಕಾಗಿ ಕೆಲಸ ಮಾಡುವ ವಿಷಯ ಬಂದಾಗ ತಾವು ಹಿಂದೂ ಮತ್ತು ಮುಸ್ಲಿಮರ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲ ಎಂದರು. ರಾಜಕೀಯ ಪರಿಸ್ಥಿತಿಗಳನ್ನು ಬಳಸಿಕೊಂಡು ಜನರು ತಮ್ಮ ಸಮುದಾಯಗಳಿಗೆ ವಿಶೇಷ ಹಕ್ಕುಗಳು ಅಥವಾ ಸವಲತ್ತುಗಳನ್ನು ಪಡೆಯಲು ಯತ್ನಿಸಿದಾಗ ತೊಂದರೆಗಳು ಪ್ರಾರಂಭವಾಗುತ್ತವೆ. ಜನರು ದೇಶಪ್ರೇಮದ ದೃಷ್ಟಿಕೋನದಿಂದ ರಾಜಕೀಯವನ್ನು ನೋಡಿದರೆ, ಈ ತೊಂದರೆಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ ಎಂದು ಅವರು ಹೇಳಿದರು.
ಎಲ್ಲರಂತೆ ಮುಸ್ಲಿಮರಿಗೂ ಅವರ ಅರ್ಹ ಪಾಲನ್ನು ನೀಡಬೇಕು, ಆದರೆ ಇದರರ್ಥ ಪ್ರತ್ಯೇಕ ಹಕ್ಕುಗಳು ಮತ್ತು ವಿಶೇಷ ಸವಲತ್ತುಗಳನ್ನು ಕಾಯ್ದಿರಿಸುವುದಲ್ಲ. ಪ್ರತಿ ರಾಜ್ಯದಲ್ಲೂ ಪಾಕಿಸ್ತಾನದ ಮಾದರಿಯ ಬೇಡಿಕೆಗಳನ್ನು ಇಡುವುದು ಇಡೀ ದೇಶದ ಹಿತದೃಷ್ಟಿಯಿಂದ ಆಲೋಚಿಸುವವರನ್ನು ಕೆರಳಿಸುತ್ತದೆ ಎಂದು ಅವರು ಉಲ್ಲೇಖಿಸಿದರು.
ಉರ್ದು ಮತ್ತು ಭಾಷಾಪ್ರಶ್ನೆ:
ಉರ್ದು ಭಾಷೆಯ ಕುರಿತು ಮಾತನಾಡಿದ ಗುರೂಜಿ, ಉರ್ದು ಮುಸ್ಲಿಮರ “ಧಾರ್ಮಿಕ ಭಾಷೆ” ಅಲ್ಲ ಎಂದರು. ವಿವಿಧ ರಾಜ್ಯಗಳ ಮುಸ್ಲಿಮರು ಹಿಂದೆ ಸ್ಥಳೀಯ ಭಾಷೆಗಳನ್ನು ಮಾತನಾಡಿದ್ದಾರೆ ಮತ್ತು ಕಲೆತಿದ್ದಾರೆ. ಉರ್ದು ಮೊಘಲರ ಆಡಳಿತದ ಅವಧಿಯಲ್ಲಿ ವಿಕಸನಗೊಂಡ ಒಂದು ಸಂಕರ (ಮಿಶ್ರ) ಉತ್ಪನ್ನವಾಗಿದೆ. ಇಸ್ಲಾಂ ಅರೇಬಿಯಾದಲ್ಲಿ ಹುಟ್ಟಿಕೊಂಡಿತು ಮತ್ತು ಪವಿತ್ರ ಕುರಾನ್ ಅರೇಬಿಕ್ನಲ್ಲಿದೆ. ಉರ್ದುವಿಗೆ ನೀಡಲಾಗುವ ಅತಿಯಾದ ಒತ್ತು ಮುಸ್ಲಿಮರನ್ನು ರಾಜಕೀಯ ಶಕ್ತಿಯಾಗಿ ಸಂಘಟಿಸುವ ಉದ್ದೇಶವನ್ನು ಹೊಂದಿದೆ ಮತ್ತು ಇಂತಹ ರಾಜಕೀಯ ಶಕ್ತಿಯು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ನಾಯಕರು ಮತ್ತು ಇತಿಹಾಸ:
ಕೆಲವು ಮುಸ್ಲಿಮರು ತಮ್ಮ ರಾಷ್ಟ್ರೀಯ ನಾಯಕ ಎಂದು ಪರಿಗಣಿಸುವ ‘ರುಸ್ತುಂ’ ಎಂಬ ಪಾತ್ರವನ್ನು ಉಲ್ಲೇಖಿಸಿದ ಗುರೂಜಿ, ಆತ ಇಸ್ಲಾಂ ಹುಟ್ಟುವ ಮುಂಚಿನ ಪರ್ಷಿಯನ್ ನಾಯಕನಾಗಿದ್ದನು. ಹಾಗಿದ್ದಲ್ಲಿ ಶ್ರೀರಾಮನನ್ನು ರಾಷ್ಟ್ರೀಯ ನಾಯಕ ಎಂದು ಏಕೆ ಸ್ವೀಕರಿಸಬಾರದು ಎಂದು ಪ್ರಶ್ನಿಸಿದರು.
ಅಂತೆಯೇ, ಪಾಣಿನಿಯ ಉದಾಹರಣೆಯನ್ನು ನೀಡಿದ ಅವರು, ಪ್ರಸ್ತುತ ಪಾಕಿಸ್ತಾನದಲ್ಲಿರುವ ಪ್ರದೇಶದಲ್ಲಿ ಜನಿಸಿದ ಪಾಣಿನಿಯ ೫,೦೦೦ ನೇ ಜಯಂತಿಯನ್ನು ಪಾಕಿಸ್ತಾನ ಆಚರಿಸಿತ್ತು. ಪಾಕಿಸ್ತಾನಿಗಳು ಪಾಣಿನಿಯನ್ನು ತಮ್ಮ ಹಿರಿಯ ಪೂರ್ವಜನೆಂದು ಹೇಳಿಕೊಳ್ಳಬಹುದಾದರೆ, ಇಲ್ಲಿನ ಮುಸ್ಲಿಮರು ಪಾಣಿನಿ, ವ್ಯಾಸ, ವಾಲ್ಮೀಕಿ, ರಾಮ ಮತ್ತು ಕೃಷ್ಣರನ್ನು ತಮ್ಮ ಶ್ರೇಷ್ಠ ಪೂರ್ವಜರೆಂದು ಪರಿಗಣಿಸಬಹುದು ಎಂದರು. ರಾಮ ಮತ್ತು ಕೃಷ್ಣರನ್ನು ಶ್ರೇಷ್ಠ ವ್ಯಕ್ತಿಗಳೆಂದು ಗುರುತಿಸಲು ಅವರನ್ನು ದೈವಿಕ ಅವತಾರಗಳೆಂದು ಸ್ವೀಕರಿಸುವುದು ಕಡ್ಡಾಯವೇನಲ್ಲ. ಹಿಂದೂ ಧರ್ಮದಲ್ಲೇ ಅನೇಕರು ರಾಮ-ಕೃಷ್ಣರನ್ನು ದೈವಾವತಾರಗಳೆಂದು ನಂಬದಿದ್ದರೂ, ಅವರನ್ನು ಅನುಕರಿಸಬೇಕಾದ ಶ್ರೇಷ್ಠ ವ್ಯಕ್ತಿಗಳೆಂದು ಗೌರವಿಸುತ್ತಾರೆ ಎಂದು ವಿವರಿಸಿದರು.
ಧಾರ್ಮಿಕ ಸ್ವಾತಂತ್ರ್ಯ ಮತ್ತು ಪರಿವರ್ತನೆ
“ನಮ್ಮ ಧಾರ್ಮಿಕ ನಂಬಿಕೆ ಮತ್ತು ತತ್ವಶಾಸ್ತ್ರದ ಪ್ರಕಾರ, ಮುಸ್ಲಿಮನೂ ಕೂಡ ಹಿಂದೂವಿನಷ್ಟೇ ಶ್ರೇಷ್ಠ. ಹಿಂದೂ ಮಾತ್ರವೇ ಅಂತಿಮ ದೇವರನ್ನು ತಲುಪುತ್ತಾನೆ ಎಂದೇನೂ ಇಲ್ಲ. ಪ್ರತಿಯೊಬ್ಬರಿಗೂ ತಮ್ಮ ನಂಬಿಕೆಗೆ ಅನುಗುಣವಾಗಿ ತಮ್ಮದೇ ಆದ ಮಾರ್ಗವನ್ನು ಅನುಸರಿಸುವ ಹಕ್ಕಿದೆ” ಎಂದು ಗುರೂಜಿ ಹೇಳಿದರು.
ಧಾರ್ಮಿಕ ಸ್ವಾತಂತ್ರ್ಯದ ಧೋರಣೆಯನ್ನು ವಿವರಿಸುತ್ತಾ, ಶೃಂಗೇರಿ ಮಠದ ಹಿಂದಿನ ಜಗದ್ಗುರು ಶ್ರೀ ಚಂದ್ರಶೇಖರ ಭಾರತಿ ಸ್ವಾಮೀಜಿಗಳ ನೆನಪನ್ನು ಹಂಚಿಕೊಂಡರು. ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಬಯಸಿ ಬಂದ ಅಮೇರಿಕನ್ ಮೂಲದ ವ್ಯಕ್ತಿಗೆ, “ನೀವು ಕ್ರಿಶ್ಚಿಯನ್ ಧರ್ಮವನ್ನು ಪ್ರಾಮಾಣಿಕವಾಗಿ ಅನುಸರಿಸಿದ್ದೀರಾ? ಮೊದಲು ಅದನ್ನು ಸರಿಯಾಗಿ ಅನುಸರಿಸಿ, ಅದರಲ್ಲಿ ತೃಪ್ತಿಯಾಗದಿದ್ದರೆ ಇಲ್ಲಿಗೆ ಬನ್ನಿ” ಎಂದು ಸ್ವಾಮೀಜಿ ಸಲಹೆ ನೀಡಿದ್ದರು. “ಅದೇ ನಮ್ಮ ಮನೋಭಾವ. ನಮ್ಮದು ಮತಾಂತರ ಮಾಡದ ಧರ್ಮ. ಬಹುತೇಕ ಸಂದರ್ಭಗಳಲ್ಲಿ ಮತಾಂತರವು ರಾಜಕೀಯ ಅಥವಾ ಲಾಭದ ಉದ್ದೇಶದಿಂದ ಪ್ರೇರಿತವಾಗಿರುತ್ತದೆ. ನಾವು ಅದನ್ನು ತಿರಸ್ಕರಿಸುತ್ತೇವೆ. ಇದು ಸ್ಪಷ್ಟ ಸತ್ಯ; ನಿಮಗೆ ಇಷ್ಟವಾದರೆ ಅನುಸರಿಸಿ ಎಂದು ನಾವು ಹೇಳುತ್ತೇವೆ” ಎಂದರು.
ಆಧ್ಯಾತ್ಮಿಕ ಏಕತೆ
ಹಿಂದೂಗಳು ಮತ್ತು ಮುಸ್ಲಿಮರು ದೇವರನ್ನು ನಂಬುವವರಾಗಿ ಭೌತವಾದ ಮತ್ತು ಕಮ್ಯುನಿಸಂ ವಿರುದ್ಧ ಒಂದಾಗಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜನರ ದೇವ ಪರಿಕಲ್ಪನೆಗಳು ವಿಭಿನ್ನವಾಗಿರುವುದು ಮೂಲ ತೊಂದರೆ ಎಂದರು.
ಅವರು ತಾವು ನೀಡಿದ ಸಲಹೆಯನ್ನು ವಿವರಿಸುತ್ತಾ, “ನಿಮ್ಮ ಧರ್ಮವನ್ನು ನೀವು ಅನುಸರಿಸಿ” ಎಂದರು. ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸೀಮಿತವಲ್ಲದ ವಿಶಾಲ ತತ್ವಶಾಸ್ತ್ರವಿದ್ದು, ಅದು “ಒಂದೇ ಶಕ್ತಿ, ಒಂದೇ ಅಸ್ತಿತ್ವ – ಅದುವೇ ಸತ್ಯ, ಅದುವೇ ಆನಂದ” ಎಂಬುದನ್ನು ಪ್ರತಿಪಾದಿಸುತ್ತದೆ. ದೇವರ ಎಲ್ಲಾ ಕಲ್ಪನೆಗಳು ಆ ಅಂತಿಮ ಸತ್ಯದ ವಿಭಿನ್ನ ರೂಪಗಳು. ಈ ಸಾಮಾನ್ಯ ಆಧಾರವು ಜನರನ್ನು ಒಂದೆಡೆ ತರಬಹುದು. “ಇಸ್ಲಾಂ, ಕ್ರಿಶ್ಚಿಯನ್ ಮತ್ತು ಹಿಂದೂ ಧರ್ಮದ ದೇವರು ಒಬ್ಬನೇ ಮತ್ತು ನಾವೆಲ್ಲರೂ ಅವನ ಭಕ್ತರು” ಎಂದರು.
ಸೌಹಾರ್ದತೆಗೆ ಅಡೆತಡೆಗಳು ಮತ್ತು ಪರಿಹಾರ:
ಗೋಹತ್ಯೆಯು ಸಮುದಾಯಗಳ ನಡುವಿನ ಘರ್ಷಣೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಗುರುತಿಸಿದ ಅವರು, ಗೋಹತ್ಯೆಯ ಹಕ್ಕಿಗಾಗಿ ಪಟ್ಟುಹಿಡಿಯುವುದನ್ನು ಪ್ರಶ್ನಿಸಿದರು. ಇದು ಧಾರ್ಮಿಕ ಆಜ್ಞೆಯಲ್ಲ, ಬದಲಿಗೆ ಇತಿಹಾಸದಲ್ಲಿ ಹಿಂದೂಗಳನ್ನು ಕೆರಳಿಸಲು ಬಳಸಲಾದ ಆಚರಣೆಯಾಗಿದೆ ಎಂದು ಹೇಳಿದರು.
ಸಮುದಾಯಗಳು ಪರಸ್ಪರರ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿ ಭಾಗವಹಿಸಬೇಕು. ಹೋಳಿ ಹಬ್ಬದ ಸಮಯದಲ್ಲಿ ಬಣ್ಣದ ನೀರನ್ನು ಎರಚಿದರೆ ಅದು ಕುರಾನ್ನ ಆಜ್ಞೆಗಳನ್ನು ಉಲ್ಲಂಘಿಸುತ್ತದೆಯೇ? ಅದನ್ನು ಸಾಮಾಜಿಕ ಸಂಭ್ರಮವಾಗಿ ಸ್ವೀಕರಿಸಬಹುದು ಎಂದರು. ಅಂತೆಯೇ ಅಜ್ಮೇರ್ ಉರ್ಸ್ನಂತಹ ಮುಸ್ಲಿಂ ಹಬ್ಬಗಳಲ್ಲಿ ಹಿಂದೂಗಳು ಭಾಗವಹಿಸುವುದನ್ನು ನೆನಪಿಸಿಕೊಂಡರು. ಸಮಾಜದಲ್ಲಿ ಧ್ರುವೀಕರಣ ಉಂಟುಮಾಡುವ ರಾಜಕಾರಣಿಗಳನ್ನು ಟೀಕಿಸಿದ ಅವರು, ರಾಜಕಾರಣಿಗಳೇ ಈ ರೀತಿಯ ಕೋಮು ಸಮಸ್ಯೆಗಳ ಪ್ರಮುಖ ಸೂತ್ರಧಾರರು ಎಂದರು.
ಇತಿಹಾಸವನ್ನು ಇದ್ದಂತೆಯೇ ಬೋಧಿಸಬೇಕು ಮತ್ತು ಇತಿಹಾಸದ ತಿರುಚುವಿಕೆಯನ್ನು ಸರಿಪಡಿಸಬೇಕು. ಗತಕಾಲದಲ್ಲಿ ಮುಸ್ಲಿಂ ಆಕ್ರಮಣಕಾರರಿಂದ ಆಕ್ರಮಣ ನಡೆದಿದ್ದರೆ ಅದನ್ನು ಒಪ್ಪಿಕೊಳ್ಳಬೇಕು. ಆದರೆ ಆ ಆಕ್ರಮಣಕಾರರು ವಿದೇಶಿಯರಾಗಿದ್ದರು ಮತ್ತು ಭಾರತದಲ್ಲಿ ವಾಸಿಸುವ ಮುಸ್ಲಿಮರಿಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಕರೆ ನೀಡಿದರು.
‘ಭಾರತೀಯಕರಣ’ ಎಂದರೆ ಏನು?
‘ಭಾರತೀಯಕರಣ’ ಕುರಿತ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಗುರೂಜಿ, ಭಾರತೀಯಕರಣ ಎಂದರೆ ಎಲ್ಲರನ್ನೂ ಹಿಂದೂಗಳನ್ನಾಗಿ ಮಾಡುವುದಲ್ಲ ಎಂದರು. “ಎಲ್ಲಾ ಜನರೂ ಒಂದೇ ಮಣ್ಣಿನ ಮಕ್ಕಳು, ಒಂದೇ ಮೂಲದಿಂದ ಬಂದವರು, ಸಮಾನ ಶ್ರೇಷ್ಠ ಪೂರ್ವಜರನ್ನು ಹೊಂದಿದ್ದಾರೆ ಮತ್ತು ಸಮಾನ ಆಕಾಂಕ್ಷೆಗಳನ್ನು ಹಂಚಿಕೊಳ್ಳುತ್ತಾರೆ ಎಂಬ ಕಲ್ಪನೆಯೇ ಭಾರತೀಯಕರಣ” ಎಂದು ವಿವರಿಸಿದರು. ಕೋಮು ಸೌಹಾರ್ದತೆಯನ್ನು ಹೆಚ್ಚಿಸಲು ಬಯಸುವ ಮುಸ್ಲಿಂ ನಾಯಕರನ್ನು ಭೇಟಿಯಾಗಲು ನೀವು ಸಿದ್ಧರಿದ್ದೀರಾ ಎಂದು ಕೇಳಿದಾಗ, “ನಾನು ಭೇಟಿಯಾಗಲು ಬಯಸುವುದು ಮಾತ್ರವಲ್ಲ, ಅದನ್ನು ಸಾಧರದಿಂದ ಸ್ವಾಗತಿಸುತ್ತೇನೆ” ಎಂದು ಗುರೂಜಿ ಹೇಳಿದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
