ಸಾಮಾನ್ಯವಾಗಿ ಹೇಳಲಾಗುವ ಕಥೆಯು ಬಹಳ ಸರಳ ಮತ್ತು ಅನುಕೂಲಕರವಾಗಿದೆ: ನಿಜಾಮ್ ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿದನು, ರಜಾಕಾರರು ಹಿಂಸಾಚಾರವನ್ನು ಸೃಷ್ಟಿಸಿದರು, ಭಾರತೀಯ ಸೇನೆಯು ನುಗ್ಗಿತು ಮತ್ತು ಹೈದರಾಬಾದ್ ಭಾರತದೊಂದಿಗೆ ಸೇರಿಕೊಂಡಿತು. ಆದರೆ ಇತಿಹಾಸವು ಎಂದಿಗೂ ಅಷ್ಟು ಸರಳವಾಗಿರುವುದಿಲ್ಲ. ರಾಜಮನೆತನದ ಸರ್ವಾಧಿಕಾರದಡಿಯಲ್ಲಿ ಹಿಂದೂಗಳ ಧಾರ್ಮಿಕ ಹಾಗೂ ನಾಗರಿಕ ಹಕ್ಕುಗಳ ಪರಿಧಿಯನ್ನು ಕುಗ್ಗಿಸುವ ವ್ಯವಸ್ಥಿತ ಯತ್ನ ಅದಾಗಿತ್ತು.
ಆರ್ಯಸಮಾಜವು ಕೇವಲ ಕರಪತ್ರಗಳ ಮೂಲಕ ಪ್ರತಿಕ್ರಿಯಿಸಲಿಲ್ಲ, ಬದಲಿಗೆ ಒಂದು ಬೃಹತ್ ಚಳುವಳಿಯನ್ನೇ ರೂಪಿಸಿತು.
ಸತ್ಯಾಗ್ರಹದಿಂದ ಆತ್ಮರಕ್ಷಣೆಯವರೆಗೆ
ಅಕ್ಟೋಬರ್ 1938 ರಲ್ಲಿ, ಆರ್ಯಸಮಾಜವು ಹೈದರಾಬಾದ್ ಸತ್ಯಾಗ್ರಹವನ್ನು ಆರಂಭಿಸಿತು. ಇದು 1939 ರ ವರೆಗೂ ಮುಂದುವರಿಯಿತು. ಈ ಪ್ರತಿರೋಧವು ಶಾಂತಿಯುತವಾಗಿದ್ದರೂ, ಇದರ ಪ್ರಭಾವ ಮಾತ್ರ ಅತ್ಯಂತ ಪ್ರಬಲವಾಗಿತ್ತು. ಸ್ವಯಂಸೇವಕರು ಗುಂಪುಗುಂಪಾಗಿ ಸಂಸ್ಥಾನದೊಳಗೆ ಪ್ರವೇಶಿಸಿದರು. ಸಾವಿರಾರು ಜನರು ಬಂಧನಕ್ಕೊಳಗಾದರು. ಹೈದರಾಬಾದ್ನ ಸ್ಥಳೀಯರು ಹಾಗೂ ಭಾರತದ ವಿವಿಧ ಭಾಗಗಳ ಕಾರ್ಯಕರ್ತರು ಕಾರಾಗೃಹಗಳನ್ನು ತುಂಬಿದರು. ಅವರ ಬೇಡಿಕೆ ಸರಳವಾಗಿತ್ತು, ಆದರೆ ಆ ಕಾಲಕ್ಕೆ ಅದು ದೊಡ್ಡ ಸ್ಫೋಟಕವಾಗಿತ್ತು: ಯಾವುದೇ ಅಧಿಕೃತ ಅವಮಾನವಿಲ್ಲದೆ ಹಿಂದೂಗಳಾಗಿ ಪೂಜಿಸಲು, ಒಂದೆಗೂಡಲು, ಶಿಕ್ಷಣ ಪಡೆಯಲು ಮತ್ತು ಬದುಕಲು ಇರಬೇಕಾದ ಮೂಲಭೂತ ಹಕ್ಕೇ ಆ ಬೇಡಿಕೆಯಾಗಿತ್ತು.
ಇಲ್ಲಿ ನಡೆದ ಆಳವಾದ ಕೆಲಸವೆಂದರೆ ಅದು ಮಾನಸಿಕ ಸ್ವಾಸ್ಥ್ಯದ ಮರುಸ್ಥಾಪನೆ. ನಿಜಾಮನ ಆಜ್ಞೆಯೇ ತಮ್ಮ ತಲೆಬರಹ ಎಂದು ತಲೆಮಾರುಗಳಿಂದ ಜನರಿಗೆ ನಂಬಿಸಲಾಗಿತ್ತು. ಆರ್ಯಸಮಾಜ ಆ ಮೂಢನಂಬಿಕೆಯ ಪರದೆಯನ್ನು ಕಳಚಿಹಾಕಿತು.
ಬಹದೂರ್ ಯಾರ್ ಜಂಗ್ ಅವರ ರಜಾಕಾರರು ಮತ್ತು ಅಧಿಕೃತ ತಬ್ಲಿಘ್ ಯತ್ನಗಳು ಮತಾಂತರವನ್ನು ತೀವ್ರಗೊಳಿಸಿದಾಗ, ಆರ್ಯಸಮಾಜವು ‘ಶುದ್ಧಿ’ ಚಳುವಳಿಯ ಮೂಲಕ ತಿರುಗೇಟು ನೀಡಿತು. ಮತಾಂತರಗೊಂಡ ಕುಟುಂಬಗಳ ರಕ್ಷಣೆ, ಆಶ್ರಯ, ಮದುವೆಗಳು ಮತ್ತು ಬಲವಂತವಾಗಿ ನುಜ್ಜುಗುಜ್ಜಾದ ಹಿಂದೂಗಳಿಗೆ ಹಿಂದಿರುಗಲು ಭದ್ರವಾದ ಮನೆ ಇದೆ ಎಂಬ ಧೈರ್ಯವನ್ನು ಅದು ತುಂಬಿತು. ಇದು ಯಾವುದೋ ಅಂಚಿನ ಚಟುವಟಿಕೆಯಾಗಿರಲಿಲ್ಲ.
ಖಾಸಿಮ್ ರಜ್ವಿ ನೇತೃತ್ವದಲ್ಲಿ ರಜಾಕಾರರು ಭಯೋತ್ಪಾದನೆಯ ಅರ್ಧ-ಸೇನಾಪಡೆಯಾಗಿ (paramilitary force) ರೂಪುಗೊಂಡರು. ಗ್ರಾಮಗಳು ಲೂಟಿಯಾದವು. ಮಹಿಳೆಯರ ಮೇಲೆ ದೌರ್ಜನ್ಯವೆಸಗಲಾಯಿತು. ಜಾನುವಾರುಗಳನ್ನು ಹತ್ಯೆ ಮಾಡಲಾಯಿತು. ಸರ್ಕಾರದ ಧೋರಣೆಯನ್ನು ವಿರೋಧಿಸಿದವರು — ಹಿಂದೂಗಳು, ಕಮ್ಯುನಿಷ್ಟರು ಮತ್ತು ಮುಸ್ಲಿಂ ಉದಾರವಾದಿಗಳೂ ಸಹ ಬೇಟೆಯಾಡಲ್ಪಟ್ಟರು. ನಿಜಾಮನ ಯಂತ್ರವಿನ್ಯಾಸವು ಒಂದೋ ಕಣ್ಣಮುಚ್ಚಿ ಕುಳಿತುಕೊಂಡಿತು ಇಲ್ಲವೇ ಸಕ್ರಿಯವಾಗಿ ಸಹಕರಿಸಿತು. ಇದು ಸಾಮಾನ್ಯವಾದ “ಕೋಮು ಸೌಹಾರ್ದತೆಯ ಬಿಕ್ಕಟ್ಟು” ಆಗಿರಲಿಲ್ಲ, ಬದಲಿಗೆ ವ್ಯವಸ್ಥಿತವಾದ ಬೇಟೆಯಾಗಿತ್ತು.
ಆರ್ಯಸಮಾಜವು ಈ ಮೊದಲೇ ಅದಕ್ಕೆ ತಕ್ಕ ನೆಲೆಯನ್ನು ಸಿದ್ಧಪಡಿಸಿತ್ತು. ಪ್ರತಿ ಮಂದಿರ, ಗ್ರಂಥಾಲಯ ಮತ್ತು ಕುಸ್ತಿ ಅಖಾಡಗಳು ಮೌಲ್ಯ ಹಾಗೂ ಸ್ಥೈರ್ಯ ತುಂಬುವ ಶಾಂತಿಯುತ ಶಸ್ತ್ರಾಗಾರಗಳಾಗಿದ್ದವು. ಅನ್ಯಾಯವನ್ನು ವಿರೋಧಿಸಬಹುದು ಮತ್ತು ಅಗತ್ಯವಿದ್ದಾಗ ಸೂಕ್ತ ತಿರುಗೇಟು ನೀಡಬಹುದು ಎಂದು ಜನರಿಗೆ ಕಲಿಸಲಾಯಿತು. ಆತ್ಮರಕ್ಷಣಾ ಗುಂಪುಗಳು ಹುಟ್ಟಿಕೊಂಡವು.
ಅವಲಾಸ ಬಾಲ್ ರೆಡ್ಡಿ: ಪ್ರತಿರೋಧದ ಕಾರ್ಯಾಗಾರವಾದ ಗ್ರಾಮ
ನಿಜಾಮನ ಪೊಲೀಸ್ ದಾಖಲೆಯಲ್ಲಿರುವ ಪ್ರತಿಯೊಂದು ಆರೋಪವು ನಿಖವಾಗಿದೆಯೇ ಎಂಬುದು ಮುಖ್ಯವಲ್ಲ; ಆದರೆ ಗುಂಡ್ಲಪೋಚಂಪಲ್ಲಿಯ ರೈತನೊಬ್ಬ ತನ್ನ ಮಣ್ಣನ್ನೇ ಪ್ರತಿರೋಧದ ಗಣಿಯನ್ನಾಗಿ ಮಾಡಲು ಸಿದ್ಧನಿದ್ದನಂಬ ಸತ್ಯವೇ ದೊಡ್ಡದು. ಆತನನ್ನು ಸೆರೆವಾಸಕ್ಕೆ ತಳ್ಳಲಾಗಿತ್ತು ಮತ್ತು ಹೈದರಾಬಾದ್ ವಿಮೋಚನೆಗೊಂಡ ದಿನವಾದ 1948 ರ ಸೆಪ್ಟೆಂಬರ್ 17 ರಂದು ಕೂಡ ಆತ ಜೈಲಿನಲ್ಲೇ ಇದ್ದನು.
ಕಮ್ಯುನಿಷ್ಟರ ಹೋರಾಟ ಮತ್ತು ನಂತರದ ರಾಜಕೀಯ ಹಕ್ಕುಸಾಧನೆ:
ತೆಲಂಗಾಣದಲ್ಲಿ ಕಮ್ಯುನಿಷ್ಟರ ನೇತೃತ್ವದಲ್ಲಿ ನಡೆದ ರೈತ ಬಂಡಾಯವು ಮಹತ್ವದ್ದಾಗಿದ್ದು ನೈಜವಾಗಿತ್ತು. ನಲ್ಗೊಂಡ, ವಾರಂಗಲ್ ಮತ್ತು ಖಮ್ಮಂನ ಕೆಲವು ಭಾಗಗಳಲ್ಲಿ ಅದು ‘ವೆಟ್ಟಿ’ (ಬಲವಂತದ ಚಾಕರಿ), ಒಕ್ಕಲುತನದ ಹೊರಹಾಕುವಿಕೆ, ಲೇವಾದೇವಿಗಾರರ ಸುಲಿಗೆ ಹಾಗೂ ದೇಶ್ಮುಖ್ಗಳ ಅಧಿಕಾರವನ್ನು ಪ್ರಶ್ನಿಸಿ ಹೋರಾಡಿತು. ಬಡ ರೈತರು ಪ್ರಾಣ ಬಿಟ್ಟರು. ಗ್ರಾಮದ ದಳಗಳು ರಜಾಕಾರರ ಹಾಗೂ ಜಮೀನ್ದಾರರ ವಿರುದ್ಧ ಹೋರಾಡಿದವು. ಆ ಶೌರ್ಯವನ್ನು ಮರೆಯಲಾಗದು.
ಆದರೆ ಆ ಹೋರಾಟದ ಮುಖ್ಯ ಉದ್ದೇಶ ಜಮೀನು, ಬೆಳೆ ಹಾಗೂ ಪ್ರಭುತ್ವದ ವಿರುದ್ಧದ ವರ್ಗ ಹೋರಾಟವಾಗಿತ್ತೇ ವಿನಃ, ನಿಜಾಮನಿಂದ ಹೈದರಾಬಾದ್ ಅನ್ನು ಮುಕ್ತಗೊಳಿಸಿ ಭಾರತದೊಂದಿಗೆ ವಿಲೀನಗೊಳಿಸುವ ರಾಜ್ಯವ್ಯಾಪಿ ಅಭಿಯಾನವಾಗಿರಲಿಲ್ಲ. ಅದರ ಭೌಗೋಳಿಕ ವ್ಯಾಪ್ತಿ ಸೀಮಿತವಾಗಿತ್ತು ಮತ್ತು ಅದರ ಸಿದ್ಧಾಂತವು ರಾಷ್ಟ್ರೀಯ ಸಮಗ್ರತೆಯಾಗಿರಲಿಲ್ಲ.
ಹಾಗಿದ್ದರೂ ರಾಜಕೀಯ ಲಾಭವು ಬೇರೆ ದಿಕ್ಕಿನತ್ತ ಚಲಿಸಿತು. ಕಾಲಕ್ರಮದಲ್ಲಿ ಒಂದು ಏಕಪಕ್ಷೀಯ ಕಥೆಯನ್ನು ಬಲಪಡಿಸಲಾಯಿತು: ಕಮ್ಯುನಿಷ್ಟರು ಮಾತ್ರ ನಿಜಾಮನನ್ನು ವಿರೋಧಿಸಿದರು, ಹೈದರಾಬಾದ್ ಸ್ವಾತಂತ್ರ್ಯವು ಕೇವಲ ಕೆಂಪು ಅಧ್ಯಾಯವಾಗಿದೆ ಮತ್ತು ಆರ್ಯಸಮಾಜವು ಕೇವಲ ಕೋಮು ಅಡಿಟಿಪ್ಪಣಿ ಮಾತ್ರ ಎಂಬ ಬಿಂಬವನ್ನು ಹುಟ್ಟುಹಾಕಲಾಯಿತು. 1938 ರ ಸತ್ಯಾಗ್ರಹ, ತಬ್ಲಿಘ್ಗೆ ಪ್ರತಿಯಾಗಿ ನಡೆದ ‘ಶುದ್ಧಿ’ ಆಂದೋಲನ, ಮೂರು ಭಾಷಾ ವಲಯಗಳಲ್ಲಿ ಹಬ್ಬಿದ್ದ ಮಂದಿರ-ವ್ಯಾಯಾಮಶಾಲೆ-ಗ್ರಂಥಾಲಯ ಜಾಲಗಳು, ನಿರಾಶ್ರಿತರ ಶಿಬಿರಗಳು, ಆತ್ಮರಕ್ಷಣಾ ಗುಂಪುಗಳು ಹಾಗೂ ಭಾರತೀಯ ಸೇನೆ ಹೈದರಾಬಾದ್ ಪ್ರವೇಶಿಸುವ ಮುಂಡೆಯೇ ನಿಜಾಮನ ಸೆರೆಮನೆಗಳಲ್ಲಿದ್ದ ಬಾಲ್ ರೆಡ್ಡಿಯಂತಹ ವ್ಯಕ್ತಿಗಳನ್ನು ಕಡೆಗಣಿಸಿದರೆ ಮಾತ್ರ ಇಂತಹ ವಾದಗಳು ನಿಲ್ಲಬಲ್ಲವು.
ಹೈದರಾಬಾದ್ನ ವಿಮೋಚನೆಯು ಹಲವು ಶಕ್ತಿಗಳ ಒಟ್ಟು ಪ್ರಯತ್ನದ ಫಲವಾಗಿತ್ತು: ರಾಜ್ಯ ಕಾಂಗ್ರೆಸ್, ಸಮಾಜವಾದಿಗಳು, ಬಂಡಾಯಗಾರ ರೈತರು, ಗಡಿ ಶಿಬಿರಗಳು ಮತ್ತು ಅಂತಿಮವಾಗಿ ಭಾರತೀಯ ಸೇನೆ. ಆದರೆ ಸೇನೆಯು ತನ್ನ ಕೆಲಸವನ್ನು ಪೂರ್ಣಗೊಳಿಸುವ ಮುನ್ನ, ತಾವೇ ಬಗ್ಗಲೆಂದೇ ಹುಟ್ಟಿದ್ದೇವೆ ಎಂಬ ನಂಬಿಕೆಯನ್ನು ಕೈಬಿಟ್ಟ ಜನಸಾಮಾನ್ಯರು ಅಲ್ಲಿರಬೇಕಾಗಿತ್ತು. ಅಂತಹ ಜನರನ್ನು ಸೃಷ್ಟಿಸಲು ಆರ್ಯಸಮಾಜವು ನೆರವಾಯಿತು. ಅದು ಸಾರ್ವಜನಿಕವಾಗಿ ಹಿಂದೂಗಳ ಅಸ್ತಿತ್ವದ ಹಕ್ಕಿಗಾಗಿ ಮತ್ತು ಭಾರತೀಯರು ಭಾರತಕ್ಕೆ ಸೇರಬೇಕಾದ ಹಕ್ಕಿಗಾಗಿ ಹೋರಾಡಿತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
