ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರ ಬದ್ಧ
ಶೀಘ್ರದಲ್ಲೇ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯರಿಗಾಗಿ ‘ಆರೋಗ್ಯ ವಾಹಿನಿ’ ಆರಂಭ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಘೋಷಣೆ
ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ನಾರಿ ಶಕ್ತಿ ರಾಷ್ಟ್ರದ ಶಕ್ತಿ’ ಎಂಬ ಪರಿಕಲ್ಪನೆಯಂತೆ, ಮಹಿಳೆಯರನ್ನು ಕೇವಲ ಸಬಲರನ್ನಾಗಿಸುವುದಷ್ಟೇ ಅಲ್ಲದೆ, ಅವರನ್ನು ಉದ್ಯೋಗ ಸೃಷ್ಟಿಸುವ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಶಕ್ತಿಯನ್ನಾಗಿ ರೂಪಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ನವೀಕರಿಸಬಹುದಾದ ಇಂಧನ ಹಾಗೂ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಸಂದರ್ಭದಲ್ಲಿ, ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿರುವ ಕೇಂದ್ರ ಸಚಿವರ ಕಾರ್ಯಾಲಯದಲ್ಲಿ ‘ಗ್ರಾಮ ವಿಕಾಸ ಸೊಸೈಟಿ’ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಹಾಗೂ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ಸ್ವಾವಲಂಬನೆಗೆ ಆಸರೆಯಾದ ಹೊಲಿಗೆ ತರಬೇತಿ:
ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದುವರೆಗೆ ಒಟ್ಟು 14,838 ಮಹಿಳೆಯರಿಗೆ ಯಶಸ್ವಿಯಾಗಿ ಉಚಿತ ಹೊಲಿಗೆ ತರಬೇತಿ ನೀಡಲಾಗಿದೆ. ಈ ಪೈಕಿ ಅರ್ಹ 959 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸುವ ಮೂಲಕ ಮೋದಿಯವರ ಜನ್ಮದಿನದ ಸಂದರ್ಭದಲ್ಲಿ ಅವರ ಸ್ವಯಂ ಉದ್ಯೋಗಕ್ಕೆ ಗಟ್ಟಿ ಉಡುಗೊರೆ ನೀಡಲಾಗಿದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.
ಮಹಿಳಾ ಕಲ್ಯಾಣ ಯೋಜನೆಗಳ ಸಾಧನೆ ಬಿಚ್ಚಿಟ್ಟ ಸಚಿವರು:
ಇದೇ ಸಂದರ್ಭದಲ್ಲಿ ಮೋದಿ ಸರ್ಕಾರದ ವಿವಿಧ ಕ್ರಾಂತಿಕಾರಿ ಯೋಜನೆಗಳು ದೇಶ ಹಾಗೂ ಧಾರವಾಡ ಕ್ಷೇತ್ರದಲ್ಲಿ ತಂದಿರುವ ಬದಲಾವಣೆಯನ್ನು ಸಚಿವರು ಅಂಕಿ-ಅಂಶಗಳೊಂದಿಗೆ ಪ್ರಸ್ತಾಪಿಸಿದರು.
ಜನಧನ್ ಯೋಜನೆ: ದೇಶದಲ್ಲಿ ಒಟ್ಟು 55.17 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಇದರಲ್ಲಿ ಶೇ. 50 ಕ್ಕೂ ಹೆಚ್ಚು ಮಹಿಳೆಯರದ್ದೇ ಆಗಿದೆ. ಧಾರವಾಡ ಕ್ಷೇತ್ರದಲ್ಲಿ ಒಟ್ಟು 10.35 ಲಕ್ಷ ಖಾತೆಗಳಿದ್ದು, ಅದರಲ್ಲಿ 5.74 ಲಕ್ಷ (ಶೇ. 55) ಖಾತೆಗಳು ಮಹಿಳೆಯರದಾಗಿದ್ದು, ಆರ್ಥಿಕ ಒಳಗೊಳ್ಳುವಿಕೆಗೆ ಸಾಕ್ಷಿಯಾಗಿದೆ ಎಂದರು.
ಪ್ರಧಾನಮಂತ್ರಿ ಉಜ್ವಲಾ ಯೋಜನೆ: ದೇಶದ ಕೋಟ್ಯಂತರ ಮಹಿಳೆಯರಿಗೆ ಶುದ್ಧ ಅಡುಗೆ ಇಂಧನ ಒದಗಿಸಿರುವ ಈ ಯೋಜನೆಯಡಿ, ಧಾರವಾಡ ಕ್ಷೇತ್ರದಲ್ಲಿ 1,06,057 ಎಲ್ಪಿಜಿ (LPG) ಸಂಪರ್ಕಗಳನ್ನು ನೀಡಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ 2,000 ಫಲಾನುಭವಿಗಳಿಗೆ ಅಡುಗೆ ಒಲೆಗಳನ್ನು ವಿತರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಲಖಪತಿ ದೀದಿ ಯೋಜನೆ: ಸ್ವಸಹಾಯ ಸಂಘಗಳ (SHG) ಮಹಿಳೆಯರನ್ನು ವರ್ಷಕ್ಕೆ ಕನಿಷ್ಠ ₹1 ಲಕ್ಷ ಸುಸ್ಥಿರ ಆದಾಯ ಗಳಿಸುವ ಸ್ವಾವಲಂಬಿ ಉದ್ಯಮಿಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಅತ್ಯಂತ ಯಶಸ್ವಿಯಾಗಿ ಶ್ರಮಿಸುತ್ತಿದೆ.
ನಮೋ ಡ್ರೋನ್ ದೀದಿ ಯೋಜನೆ: ಕೃಷಿ ವಲಯದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಗೆ ಮಹಿಳೆಯರನ್ನು ಉತ್ತೇಜಿಸಲು ದೇಶದ 15,000 ಮಹಿಳಾ ಸ್ವಸಹಾಯ ಸಂಘಗಳಿಗೆ ಡ್ರೋನ್ಗಳನ್ನು ನೀಡಲಾಗುತ್ತಿದ್ದು, ಇದು ಗ್ರಾಮೀಣ ಭಾಗದಲ್ಲಿ ದೊಡ್ಡ ಕ್ರಾಂತಿ ಸೃಷ್ಟಿಸುತ್ತಿದೆ. ಇದರಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಕೃಷಿ ಕಾರ್ಯಗಳಿಗೆ (ದ್ರವ ರಸಗೊಬ್ಬರ ಮತ್ತು ಕೀಟನಾಶಕ ಸಿಂಪಡಣೆ) ಡ್ರೋನ್ಗಳನ್ನು ನೀಡಲಾಗುವುದು. ಡ್ರೋನ್ ವೆಚ್ಚದ ಶೇ. 80ರಷ್ಟು ಅಥವಾ ಗರಿಷ್ಠ ರೂ. 8,00,000 ವರೆಗೆ ಸಹಾಯಧನ ಸಿಗುತ್ತದೆ. ತರಬೇತಿ ಪಡೆದ ಸ್ವಸಹಾಯ ಸಂಘದ ಮಹಿಳೆಯರಿಗೆ ಡ್ರೋನ್ ಹಾರಾಟದ ಉಚಿತ ತರಬೇತಿ ನೀಡಲಾಗುತ್ತದೆ. ಇದರಿಂದ ಪ್ರತಿ ಸಂಘಕ್ಕೆ ವಾರ್ಷಿಕ ಕನಿಷ್ಠ ರೂ. 1 ಲಕ್ಷದವರೆಗೆ ಹೆಚ್ಚುವರಿ ಆದಾಯ ಗಳಿಸುವ ಅವಕಾಶವಿದೆ ಎಂದು ಹೇಳಿದರು.
“ನಮ್ಮ ಸಹೋದರಿಯರು ಕೇವಲ ಉದ್ಯೋಗ ಆಕಾಂಕ್ಷಿಗಳಾಗದೆ, ಉದ್ಯೋಗ ನೀಡುವ ಶಕ್ತಿಯಾಗಿ ಬೆಳೆಯಬೇಕು ಎನ್ನುವುದು ಪ್ರಧಾನಿ ಮೋದಿಯವರ ಆಶಯವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳು ತಳಮಟ್ಟದ ಮಹಿಳೆಯರ ಜೀವನಮಟ್ಟವನ್ನು ಸುಧಾರಿಸುತ್ತಿವೆ,” ಎಂದು ಜೋಶಿ ಅವರು ತಿಳಿಸಿದರು.
ಕ್ಷೇತ್ರಕ್ಕೆ ಶೀಘ್ರದಲ್ಲೇ ‘ಆರೋಗ್ಯ ವಾಹಿನಿ’ ಲೋಕಾರ್ಪಣೆ:
ಇದೇ ಸಂದರ್ಭದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿನ ಮಹಿಳೆಯರಿಗಾಗಿ ‘ಆರೋಗ್ಯ ವಾಹಿನಿ’ ಪ್ರಾರಂಭಿಸುವುದಾಗಿ ಸಚಿವರು ಪ್ರಕಟಿಸಿದರು. ಪ್ರತಿ ತಾಲೂಕಿಗೆ ಒಂದು ಸುಸಜ್ಜಿತ ವಾಹನ ನೀಡಿ, ಸಾಮಾನ್ಯವಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ ಅಥವಾ ಇನ್ನಿತರ ಗರ್ಭಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆ ನೀಡುವ ಕಾರ್ಯಕ್ರಮವನ್ನೂ ಇಷ್ಟರಲ್ಲೇ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಜೊತೆಗೆ ಧಾರವಾಡ ಲೋಕಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಡೆಸ್ಕ್ ವಿತರಣೆ ಹಾಗೂ ಬಣ್ಣದರ್ಪಣೆ ಕಾರ್ಯಕ್ರಮದಡಿ ಶಾಲೆಗಳಿಗೆ ಬಣ್ಣ ಹಚ್ಚುವುದು ಸೇರಿದಂತೆ ತಾವು ಕೈಗೊಂಡಿರುವ ಹಲವು ಜನಪರ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀಗಳ ಆಶೀರ್ವಚನ:
ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಮೂರು ಸಾವಿರ ಮಠದ ಶ್ರೀಮನ್ ನಿರಂಜನ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ಅಲ್ಲದೆ, ವಿತರಿಸಲಾದ ಹೊಲಿಗೆ ಯಂತ್ರಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ:
ಗ್ರಾಮ ವಿಕಾಸ ಸೊಸೈಟಿಯ ಅಧ್ಯಕ್ಷ ಶ್ರೀ ಜಗದೀಶ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, “ಗ್ರಾಮಗಳ ಆರ್ಥಿಕ, ಸಾಮಾಜಿಕ ಮತ್ತು ಮೂಲಸೌಕರ್ಯಗಳ ಸಮಗ್ರ ಅಭಿವೃದ್ಧಿಯಾದಾಗ ಮಾತ್ರ ದೇಶದ ನೈಜ ಪ್ರಗತಿ ಸಾಧ್ಯ,” ಎಂದು ಪ್ರತಿಪಾದಿಸಿದರು. ಸೊಸೈಟಿಯ ಉದ್ದೇಶ ಹಾಗೂ ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡಿರುವ ವಿವಿಧ ಜನಪರ ಯೋಜನೆಗಳ ಕುರಿತು ಸಭೆಗೆ ಸಮಗ್ರ ಮಾಹಿತಿ ನೀಡಿದ ಅವರು, ಗ್ರಾಮೀಣ ಭಾಗದ ಯುವಕರಿಗೆ ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದೇ ಸೊಸೈಟಿಯ ಮುಖ್ಯ ಧೇಯವಾಗಿದೆ ಎಂದರು. ಗ್ರಾಮಗಳಲ್ಲಿ ಶಿಕ್ಷಣ, ಆರೋಗ್ಯ, ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಸುಧಾರಿಸಲು ಸೊಸೈಟಿ ನಿರಂತರವಾಗಿ ಶ್ರಮಿಸುತ್ತಿದೆ. ಸರ್ಕಾರದ ಯೋಜನೆಗಳ ಜೊತೆಗೆ ಸಾರ್ವಜನಿಕರು ಒಟ್ಟಾಗಿ ಕೈಜೋಡಿಸಿದರೆ ಮಾತ್ರ ಯಾವುದೇ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಪರಿವರ್ತಿಸಲು ಸಾಧ್ಯ ಎಂದೂ ಹೇಳಿದರು.
ಶ್ರೀಮತಿ ಅಶ್ವಿನಿ ಜಗದೀಶ ನಾಯಕ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ವಿಕಾಸ ಸೊಸೈಟಿಯ ಸಚಿನ್ ಅಲಾಟಗಿ, ಸೊಸೈಟಿಯ ಪದಾಧಿಕಾರಿಗಳು, ಪ್ರಮುಖ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನೂರಾರು ಮಹಿಳಾ ಫಲಾನುಭವಿಗಳು ಉಪಸ್ಥಿತರಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
