ಗುವಾಹಟಿ: ಬಾಂಗ್ಲಾದೇಶದಿಂದ ಭಾರತಕ್ಕೆ ನಡೆಯುತ್ತಿರುವ ಅಕ್ರಮ ಒಳನುಸುಳುವಿಕೆ ಇನ್ನೂ ನಿಂತಿಲ್ಲ. ಪ್ರತಿ ತಿಂಗಳು ನೂರಾರು ಬಾಂಗ್ಲಾದೇಶಿ ಒಳನುಸುಳುಕೋರರು ಈಶಾನ್ಯ ಗಡಿಗಳ ಮೂಲಕ ಅಕ್ರಮವಾಗಿ ಭಾರತದೊಳಗೆ ನುಸುಳಿ ದೇಶದ ವಿವಿಧ ಭಾಗಗಳಿಗೆ ಹರಡುತ್ತಿದ್ದಾರೆ. ಇದರ ಭಾಗವಾಗಿ, ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಲು ಯತ್ನಿಸುತ್ತಿದ್ದ 27 ಬಾಂಗ್ಲಾದೇಶಿ ಒಳನುಸುಳುಕೋರರನ್ನು ಅಸ್ಸಾಂ ಪೊಲೀಸರು ಸೆಪ್ಟೆಂಬರ್ 16 ರ ರಾತ್ರಿ ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ, ಗುವಾಹಟಿ ನಗರ ಪೊಲೀಸ್ ಆಯುಕ್ತರ ಗಡಿ ವಿಭಾಗದ ಅಧಿಕಾರಿಗಳು ಸೆಪ್ಟೆಂಬರ್ 16 ರಂದು ರೈಲು ನಿಲ್ದಾಣದ ಮೇಲೆ ದಾಳಿ ನಡೆಸಿದ್ದು, ಗುವಾಹಟಿ ರೈಲು ನಿಲ್ದಾಣದಿಂದ 12 ಶಂಕಿತ ಬಂಗ್ಲಾದೇಶಿ ಒಳನುಸುಳುಕೋರರನ್ನು ವಶಕ್ಕೆ ಪಡೆದಿದ್ದಾರೆ. ನಂತರ ಅವರನ್ನು ವಿಚಾರಣೆಗಾಗಿ ಪಲ್ತನ್ಬಜಾರ್ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಪ್ರಾಥಮಿಕ ತನಿಖೆಯ ವೇಳೆ ಇವರು ಬಾಂಗ್ಲಾದೇಶಿ ಪ್ರಜೆಗಳಾಗಿದ್ದು, ಮೇಘಾಲಯ ಗಡಿಯ ಮೂಲಕ ಭಾರತಕ್ಕೆ ಪ್ರವೇಶಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ತರುವಾಯ ಅವರನ್ನು ಅಧಿಕೃತವಾಗಿ ಬಂಧಿಸಲಾಗಿದೆ.
ನಗರ ಪೊಲೀಸ್ ಗಡಿ ವಿಭಾಗದ ಡಿಸಿಪಿ ಕುಲೇಂದ್ರ ದೇಕಾ ನೀಡಿರುವ ಮಾಹಿತಿಯ ಪ್ರಕಾರ, ಈ ಗುಂಪು ಬಾಂಗ್ಲಾದೇಶದ ಮೈಮನ್ಸಿಂಗ್ ಜಿಲ್ಲೆಗೆ ಸೇರಿದೆ. ಅವರು ಬಸ್ ಮೂಲಕ ಗಡಿಯ ಬಳಿಯ ‘ಜೀರೋ ಪಾಯಿಂಟ್’ ತಲುಪಿ, ಮೇಘಾಲಯದ ದೌಕಿ ಗಡಿಯ ಮೂಲಕ ಭಾರತಕ್ಕೆ ಪ್ರವೇಶಿಸಿದ್ದರು. ದೌಕಿಯ ಕಡಿದಾದ ಗುಡ್ಡಗಾಡು ಪ್ರದೇಶದಲ್ಲಿ ಹಲವು ಕಿಲೋಮೀಟರ್ಗಳವರೆಗೆ ಕಾಲ್ನಡಿಗೆಯಲ್ಲೇ ಸಾಗಿದ ಅವರು, ನಂತರ ಸಣ್ಣ ಪ್ರಯಾಣಿಕ ವಾಹನಗಳ ಮೂಲಕ ಗುವಾಹಟಿ ತಲುಪಿದ್ದರು. ಈ ಗುಂಪು ಎರಡಾಗಿ ಒಡೆದು ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಲು ಯೋಜನೆ ಹಾಕಿತ್ತು.
ಗುವಾಹಟಿಯಲ್ಲಿ ಬಂಧಿಸಲ್ಪಟ್ಟವರಿಂದ ದೊರೆತ ಮಾಹಿತಿಯ ಮೇರೆಗೆ, ರೈಲ್ವೆ ಪೊಲೀಸರು ಬೊಂಗೈಗಾಂವ್ ರೈಲು ನಿಲ್ದಾಣದಲ್ಲಿ ಮತ್ತೊಂದು ಗುಂಪಿಗೆ ಸೇರಿದ 15 ಬಾಂಗ್ಲಾದೇಶಿ ಒಳನುಸುಳುಕೋರರನ್ನು ಬಂಧಿಸಿದ್ದಾರೆ. ಈ ಗುಂಪು ಗುವಾಹಟಿ ರೈಲು ನಿಲ್ದಾಣದಿಂದ ಜಮ್ಮು ತಾವಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿತ್ತು. ಜಿಆರ್ಪಿ ಪೊಲೀಸರು ಅವರನ್ನು ಅಡ್ಡಗಟ್ಟಿ ಬೊಂಗೈಗಾಂವ್ನಲ್ಲಿ ಬಂಧಿಸಿದರು. ಈ ಗುಂಪಿನಲ್ಲಿ 11 ಜನ ಮಹಿಳೆಯರು, 4 ಮಕ್ಕಳು ಹಾಗೂ 11 ಪುರುಷರು ಸೇರಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸ್ಥಳೀಯ ದಲ್ಲಾಳಿಗಳ ಸಹಾಯದಿಂದ ಈ ಬಾಂಗ್ಲಾದೇಶಿ ಗುಂಪುಗಳು ಭಾರತಕ್ಕೆ ಪ್ರವೇಶಿಸಿವೆ ಮತ್ತು ದೇಶದಲ್ಲಿ ಓಡಾಡಲು ಹಾಗೂ ತಂಗಲು ನಕಲಿ ದಾಖಲೆಗಳನ್ನು ಪಡೆದಿವೆ. ಸಿಕ್ಕಿಬಿದ್ದಿರುವ ಎರಡೂ ಗುಂಪುಗಳಲ್ಲಿನ ಎಲ್ಲಾ ವಯಸ್ಕರ ಬಳಿಯೂ ನಕಲಿ ಆಧಾರ್ ಕಾರ್ಡ್ಗಳು ಪತ್ತೆಯಾಗಿದ್ದು, ಅವುಗಳನ್ನೇ ಬಳಸಿ ರೈಲು ಟಿಕೆಟ್ಗಳನ್ನು ಖರೀದಿಸಲಾಗಿದೆ. ಜಮ್ಮು ತಾವಿ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದ ಗುಂಪು ಜಮ್ಮುವಿಗೆ ತೆರಳುತ್ತಿದ್ದು, ಅಲ್ಲಿ ದಲ್ಲಾಳಿಗಳು ಕೂಲಿ ಕೆಲಸದ ಭರವಸೆ ನೀಡಿದ್ದರು. ಅದೇ ರೀತಿ, ಗುವಾಹಟಿ ರೈಲು ನಿಲ್ದಾಣದಲ್ಲಿ ಸಿಕ್ಕಿಬಿದ್ದ ಮತ್ತೊಂದು ಗುಂಪು ಬೆಂಗಳೂರಿಗೆ ಪ್ರಯಾಣಿಸಲು ಯೋಜನೆ ಹಾಕಿತ್ತು. ಆದರೆ ಅದಕ್ಕೂ ಮುನ್ನವೇ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಂಧಿತ ಒಳನುಸುಳುಕೋರರನ್ನು ಶೀಘ್ರದಲ್ಲೇ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಅಸ್ಸಾಂ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ವಿಶ್ವ ಶರ್ಮಾ ಅವರು ತಮ್ಮ ‘ಎಕ್ಸ್’ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ, ಗಡಿಯಿಂದ 12 ಬಾಂಗ್ಲಾದೇಶಿ ಒಳನುಸುಳುಕೋರರನ್ನು ಪೊಲೀಸರು ಹಿಂತಿರುಗಿಸಿದ್ದಾರೆ ಎಂದು ತಿಳಿಸಿದ್ದಾರೆ. “ಅವರ ಚಲನವಲನಗಳ ಮೇಲೆ ನಿರಂತರ ನಿಗಾ ಇಡುವ ಮೂಲಕ, ಅಸ್ಸಾಂ ಪೊಲೀಸರು ಅಂತರರಾಷ್ಟ್ರೀಯ ಗಡಿಯಿಂದ 12 ಒಳನುಸುಳುಕೋರರ ಅಕ್ರಮ ಪ್ರವೇಶವನ್ನು ತಡೆಗಟ್ಟಿದ್ದಾರೆ. ಈ ಮೂಲಕ ನಮ್ಮ ರಾಜ್ಯವನ್ನು ಜನಸಂಖ್ಯಾ ಆಕ್ರಮಣದ ಬೆದರಿಕೆಯಿಂದ ಸುರಕ್ಷಿತವಾಗಿರಿಸಲಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
