ಸುರಪುರ: 2047ರ ವೇಳೆಗೆ ಭಾರತವನ್ನು ಸರ್ವಾಂಗೀಣ ಅಭಿವೃದ್ಧಿ ಹೊಂದಿದ ‘ವಿಕಸಿತ ರಾಷ್ಟ್ರ’ವನ್ನಾಗಿ ರೂಪಿಸುವ ಬೃಹತ್ ಗುರಿ ದೇಶದ ಮುಂದಿದೆ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ರಕ್ಷಣೆ, ಕೃಷಿ, ಉದ್ಯೋಗ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಸಮಗ್ರ ಪ್ರಗತಿ ಸಾಧಿಸುವುದು ಈ ಸಂಕಲ್ಪದ ಮುಖ್ಯ ಉದ್ದೇಶವಾಗಿದೆ ಎಂದು ಬೆಂಗಳೂರಿನ ಸೇವಾವಸತಿ ಪ್ರಕಲ್ಪದ ಪೂರ್ಣಾವಧಿ ಕಾರ್ಯಕರ್ತರಾದ ನಾಗರಾಜ ಮಕಾಶಿ ಹೇಳಿದರು.
ಸುರಪುರದ ಶ್ರೀ ಎನ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ‘ಪ್ರಶಿಕ್ಷಣ ಭಾರತಿ’ ಪ್ರಕಲ್ಪದ ವತಿಯಿಂದ ಆಯೋಜಿಸಿದ್ದ ‘2047ರ ವಿಕಸಿತ ಭಾರತ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸಾಧನೆ:
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು, ಭಾರತವು ಚಂದ್ರನ ಅಂಗಳದಿಂದ ಕೃತಕ ಬುದ್ಧಿಮತ್ತೆಯವರೆಗೆ (AI), ರಕ್ಷಣಾ ಕ್ಷೇತ್ರದಿಂದ ಡಿಜಿಟಲ್ ಕ್ರಾಂತಿಯವರೆಗೆ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ ಎಂದರು. 2047ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ ವೇಳೆಗೆ ದೇಶವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡುವುದು ಕೇವಲ ಆರ್ಥಿಕ ಬೆಳವಣಿಗೆಯ ಕನಸಲ್ಲ, ಬದಲಿಗೆ ಸಮಗ್ರ ಪ್ರಗತಿಯ ಸಂಕಲ್ಪವಾಗಿದೆ ಎಂದರು.
ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ ಪ್ರಮುಖ ಮೈಲಿಗಲ್ಲುಗಳಲ್ಲಿ ಚಂದ್ರಯಾನ-3 ಯಶಸ್ಸು ಒಂದಾಗಿದ್ದು, 2023ರಲ್ಲಿ ಚಂದ್ರನ ದಕ್ಷಿಣ ಧ್ರುವದ ಸಮೀಪ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಭಾರತ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಇತಿಹಾಸ ಬರೆಯಿತು ಎಂದರು. ಬಾಹ್ಯಾಕಾಶದ ಜೊತೆಗೆ ರಕ್ಷಣಾ ಕ್ಷೇತ್ರದಲ್ಲೂ ದೇಶವು ತಂತ್ರಜ್ಞಾನಾಧಾರಿತ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿದ್ದು, ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಡ್ರೋನ್ಗಳು, ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಎಲೆಕ್ಟ್ರಾನಿಕ್ ಯುದ್ಧ ಸಾಮರ್ಥ್ಯಗಳನ್ನು ಬಳಸಿ ಆಧುನಿಕ ತಂತ್ರಜ್ಞಾನದ ಮಹತ್ವವನ್ನು ಮೆರೆದಿವೆ ಎಂದು ವಿವರಿಸಿದರು.
ಕೃತಕ ಬುದ್ಧಿಮತ್ತೆ (AI) ಮತ್ತು ಯುವಶಕ್ತಿಯ ಪಾತ್ರ:
ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದ್ದು, 2024ರಲ್ಲಿ ಕೇಂದ್ರ ಸರ್ಕಾರ ‘ಇಂಡಿಯಾ AI ಮಿಷನ್’ಗೆ ಅನುಮೋದನೆ ನೀಡಿರುವುದನ್ನು ಅವರು ಸ್ಮರಿಸಿದರು. ವಿಕಸಿತ ಭಾರತ ಅಂದರೆ ಬಡಮಗುವಿಗೂ ಗುಣಮಟ್ಟದ ಶಿಕ್ಷಣ, ಯುವಕರಿಗೆ ಉದ್ಯೋಗ ಮತ್ತು ಕೌಶಲ್ಯ, ರೈತರಿಗೆ ಆಧುನಿಕ ತಂತ್ರಜ್ಞಾನ ಹಾಗೂ ಮಹಿಳೆಯರಿಗೆ ಆರ್ಥಿಕ ಸ್ವಾಲಂಬನೆ ಸಿಗುವಂತಾಗಬೇಕು ಎಂದರು.
ದೇಶದ ಅತಿದೊಡ್ಡ ಶಕ್ತಿಯಾಗಿರುವ ಯುವಜನತೆ ಕೇವಲ ಆರ್ಥಿಕ ಪ್ರಗತಿಯಲ್ಲಿ ಮಾತ್ರವಲ್ಲದೆ, ನಶೆಮುಕ್ತ ಸಮಾಜ ನಿರ್ಮಾಣಕ್ಕೂ ಮುಂದಾಗಬೇಕು. ಮಾದಕವಸ್ತುಗಳ ದುಷ್ಪರಿಣಾಮಗಳ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಅವರು ಎಚ್ಚರಿಸಿದರು.
ಪಂಚ ಪರಿವರ್ತನೆ ಮತ್ತು ಅತಿಥಿಗಳ ಉಪಸ್ಥಿತಿ:
ಜಿಲ್ಲಾ ಸಂಯೋಜಕರಾದ ಸುರೇಶ್ ಮಾತನಾಡಿ, ಸಮಾಜದಲ್ಲಿ ಪಂಚ ಪರಿವರ್ತನೆಯ ಅಗತ್ಯವಿದ್ದು, ಸ್ವದೇಶಿ ಭಾವನೆ ಬೆಳೆಸುವುದು, ಕುಟುಂಬದ ಮೌಲ್ಯಗಳ ಮರುಸ್ಥಾಪನೆ, ಪರಿಸರ ಸಂರಕ್ಷಣೆ, ನಾಗರಿಕ ಶಿಷ್ಟಾಚಾರ ಹಾಗೂ ಸಾಮರಸ್ಯದ ಬದುಕು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಕಾಲೇಜಿನ ಉಪನ್ಯಾಸಕರಾದ ರಾಜಶೇಖರ ದೇಸಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಷ್ಟ್ರೋತ್ಥಾನ ಪರಿಷತ್ತಿನ ತಾಲೂಕು ಸಂಚಾಲಕರಾದ ಸಿದ್ದಯ್ಯ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ನಿಂಗಯ್ಯ ಕಿಲ್ಲೆದಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
