ಹರಿಯಾಣದ ಶೂಟರ್ ನೀರು ಧಾನಾ ಅವರು 2026ರ ಏಷ್ಯನ್ ಗೇಮ್ಸ್ನ ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ವಿಭಾಗದಲ್ಲಿ 28 ಅಂಕಗಳ ಹೊಸ ದಾಖಲೆಯೊಂದಿಗೆ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ನವದೆಹಲಿ: ಏಷ್ಯನ್ ಗೇಮ್ಸ್ನಲ್ಲಿ ಭಾರತವು ಇಂದು (ಸೆ.29) ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಹರಿಯಾಣದ ಶೂಟರ್ ನೀರು ಧಾನಾ ಅವರು ಖಂಡ ಮಟ್ಟದ ಕ್ರೀಡಾಕೂಟದಲ್ಲಿ ಟ್ರ್ಯಾಪ್ ಅಥವಾ ಸ್ಕೀಟ್ ಶೂಟಿಂಗ್ನಲ್ಲಿ ವೈಯಕ್ತಿಕ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗೆರೆಗೆ ಪಾತ್ರರಾಗಿದ್ದಾರೆ ಮತ್ತು ಇದನ್ನು ದಾಖಲೆಯ ರೀತಿಯಲ್ಲಿ ಸಾಧಿಸಿದ್ದಾರೆ.
26 ವರ್ಷ ವಯಸ್ಸಿನ ಶೂಟರ್, 8 ಮಂದಿ ಶೂಟರ್ಗಳಿದ್ದ ಫೈನಲ್ನಲ್ಲಿ ಅದ್ಭುತವಾಗಿ 28 ಅಂಕಗಳನ್ನು ಗಳಿಸುವ ಮೂಲಕ ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ವಿಭಾಗದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಅವರ ಈ ಪ್ರದರ್ಶನವು ಹಿಂದಿನ ಏಷ್ಯನ್ ಗೇಮ್ಸ್ ದಾಖಲೆಯಾದ 24 ಅಂಕಗಳನ್ನು ಮೀರಿಸಿ, ಅತ್ಯಂತ ದೊಡ್ಡ ವೇದಿಕೆಯಲ್ಲಿ ಅವರ ಪ್ರಾಬಲ್ಯವನ್ನು ಮೆರೆಯಿತು.
ಈ ವಿಜಯದೊಂದಿಗೆ ನೀರು ಧಾನಾ ಅವರು ಏಷ್ಯನ್ ಗೇಮ್ಸ್ನ ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಶೂಟರ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.
ತಂಡದ ಬೆಳ್ಳಿಯಿಂದ ವೈಯಕ್ತಿಕ ಚಿನ್ನದವರೆಗೆ:
ಧಾನಾ ಅವರು ಈ ಕ್ರೀಡಾಕೂಟದ ಆರಂಭದಲ್ಲೇ ಭಾರತದ ಪದಕ ಪಟ್ಟಿಗೆ ಕೊಡುಗೆ ನೀಡಿದ್ದರು. ಅವರು ಆಶಿಮಾ ಅಹ್ಲಾವತ್ ಮತ್ತು ಮನೀಶಾ ಕೀರ್ ಅವರೊಂದಿಗೆ ಸೇರಿ ಮಹಿಳೆಯರ ಟ್ರ್ಯಾಪ್ ತಂಡದ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದರು. ಈ ಭಾರತೀಯ ತ್ರಿವಳಿಗಳು ಒಟ್ಟಾಗಿ 328 ಅಂಕಗಳನ್ನು ಗಳಿಸಿದ್ದರು. ಚೀನಾ 346 ಅಂಕಗಳೊಂದಿಗೆ ಚಿನ್ನ ಪಡೆದರೆ, ಕುವೈತ್ 325 ಅಂಕಗಳೊಂದಿಗೆ ಕಂಚಿನ ಪದಕ ಪಡೆದುಕೊಂಡಿತು.
ಆದರೆ ವೈಯಕ್ತಿಕ ವಿಭಾಗದಲ್ಲಿ ಧಾನಾ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಬಲವಾದ ತಂಡದ ಪ್ರದರ್ಶನವನ್ನು ಐತಿಹಾಸಿಕ ವೈಯಕ್ತಿಕ ಚಿನ್ನದ ಪದಕವನ್ನಾಗಿ ಪರಿವರ್ತಿಸಿದರು. ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 106 ಮತ್ತು 104 ಅಂಕಗಳನ್ನು ಗಳಿಸಿ 16 ಮತ್ತು 23ನೇ ಸ್ಥಾನ ಪಡೆದ ಆಶಿಮಾ ಮತ್ತು ಮನೀಶಾ ವೈಯಕ್ತಿಕ ಫೈನಲ್ಗೆ ಪ್ರವೇಶಿಸಲು ವಿಫಲರಾದರು.
ಅರ್ಹತಾ ಸುತ್ತಿನಿಂದ ಫೈನಲ್ವರೆಗೆ ದಾಖಲೆಯ ಓಟ:
ಅರ್ಹತಾ ಸುತ್ತಿನಲ್ಲಿ ಕತಾರ್ನ ರೇ ಬಸ್ಸಿಲ್ ಅವರೊಂದಿಗೆ ಜಂಟಿಯಾಗಿ 118 ಅಂಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದ್ದ ಧಾನಾ, ಫೈನಲ್ ಪ್ರವೇಶಿಸಿದ್ದರು. ಆ ಅರ್ಹತಾ ಅಂಕವೇ ಒಂದು ಕ್ರೀಡಾಕೂಟದ ದಾಖಲೆಯಾಗಿತ್ತು ಮತ್ತು ಇದು ಫೈನಲ್ನಲ್ಲಿ ಐತಿಹಾಸಿಕ ಸಾಧನೆಗೆ ಬುನಾದಿ ಹಾಕಿತ್ತು. ಫೈನಲ್ನಲ್ಲಿ 28 ಅಂಕಗಳನ್ನು ಗಳಿಸುವ ಮೂಲಕ ಧಾನಾ ಅವರು ಹಿಂದಿನ 24 ಅಂಕಗಳ ಏಷ್ಯನ್ ದಾಖಲೆಯನ್ನು ಸುಲಭವಾಗಿ ಮುರಿದರು ಮತ್ತು ಮೊದಲ ಸ್ಥಾನವನ್ನು ಪಡೆದರು.
ಭಾರತೀಯ ಮಹಿಳಾ ಶೂಟಿಂಗ್ನಲ್ಲಿ ಮಹತ್ವದ ಮೈಲಿಗಲ್ಲು:
ಧಾನಾ ಅವರ ಈ ಚಿನ್ನದ ಪದಕವು ಭಾರತೀಯ ಶೂಟಿಂಗ್ಗೆ ವಿಶೇಷ ಪ್ರಾಮುಖ್ಯತೆಯನ್ನು ತಂದುಕೊಟ್ಟಿದೆ. ಅವರ ಈ ವಿಜಯಕ್ಕೂ ಮುನ್ನ, ಏಷ್ಯನ್ ಗೇಮ್ಸ್ನಲ್ಲಿ ಟ್ರ್ಯಾಪ್ ಅಥವಾ ಸ್ಕೀಟ್ ವಿಭಾಗದಲ್ಲಿ ಯಾವುದೇ ಭಾರತೀಯ ಮಹಿಳೆ ವೈಯಕ್ತಿಕ ಪದಕ ಗೆದ್ದಿರಲಿಲ್ಲ. ಆದ್ದರಿಂದ ಅವರ ಈ ಸಾಧನೆಯು ಭಾರತೀಯ ಮಹಿಳಾ ಶಾಟ್ಗನ್ ಶೂಟಿಂಗ್ನಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ.
ಇದಕ್ಕೂ ಮುಂಚೆ ಟ್ರ್ಯಾಪ್ಗೆ ಸಂಬಂಧಿಸಿದ ವಿಭಾಗಗಳಲ್ಲಿ ಭಾರತಕ್ಕೆ ವೈಯಕ್ತಿಕ ಏಷ್ಯನ್ ಗೇಮ್ಸ್ ಚಿನ್ನದ ಪದಕ ತಂದುಕೊಟ್ಟವರು ಪುರುಷರಾಗಿದ್ದರು. 1978ರ ಏಷ್ಯನ್ ಗೇಮ್ಸ್ನಲ್ಲಿ ರಣ್ಧೀರ್ ಸಿಂಗ್ ಪುರುಷರ ವೈಯಕ್ತಿಕ ಟ್ರ್ಯಾಪ್ ಚಿನ್ನ ಗೆದ್ದಿದ್ದರೆ, 2010ರ ಆವೃತ್ತಿಯಲ್ಲಿ ರೊಂಜನ್ ಸೋಧಿ ಪುರುಷರ ಡಬಲ್ ಟ್ರ್ಯಾಪ್ನಲ್ಲಿ ಚಿನ್ನ ಗೆದ್ದಿದ್ದರು. ಈಗ ನೀರು ಧಾನಾ ಕೂಡ ಈ ಪ್ರತಿಷ್ಠಿತ ಪಟ್ಟಿಗೆ ಸೇರ್ಪಡೆಗೊಂಡಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ.
ಅದ್ಭುತ ವರ್ಷದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು:
ಏಷ್ಯನ್ ಗೇಮ್ಸ್ನ ಚಿನ್ನದ ಪದಕವು ಧಾನಾ ಅವರ ವೃತ್ತಿಜೀವನದಲ್ಲಿ ಅತ್ಯಂತ ಯಶಸ್ವಿ ವರ್ಷಕ್ಕೆ ಕಳಸವಿಟ್ಟಂತಿದೆ. ಜುಲೈ ತಿಂಗಳಲ್ಲಿ ಇಟಲಿಯಲ್ಲಿ ನಡೆದ ಶಾಟ್ಗನ್ ವಿಶ್ವಕಪ್ನಲ್ಲಿ ಟ್ರ್ಯಾಪ್ ವಿಭಾಗದಲ್ಲಿ ವಿಶ್ವಕಪ್ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದರು.
ಈಗ ಏಷ್ಯನ್ ಗೇಮ್ಸ್ ಅಭಿಯಾನದಲ್ಲಿ ತಂಡದ ಬೆಳ್ಳಿಯ ಪದಕದ ಬೆನ್ನಲ್ಲೇ ವೈಯಕ್ತಿಕ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಹಾಗೂ ಹಾದಿಯುದ್ದಕ್ಕೂ ಹೊಸ ದಾಖಲೆಗಳನ್ನು ನಿರ್ಮಿಸುವ ಮೂಲಕ ಧಾನಾ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ತಲುಪಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
