ಊರು ಬಿಟ್ಟು ತೆರಳುವಂತೆ 35 ಕುಟುಂಬಗಳ ಮೇಲೆ ಒತ್ತಡ
ಇಸ್ಲಾಮಾಬಾದ್ / ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಧರ್ಮ ನಿಂದನೆ (Blasphemy) ಆರೋಪದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಮೇಲೆ ಮತ್ತೊಮ್ಮೆ ದೌರ್ಜನ್ಯ ಎಸಗಲಾಗಿದೆ. 2023ರ ಜರನ್ವಾಲಾ (Jaranwala) ಘಟನೆಯನ್ನು ನೆನಪಿಸುವಂತೆ, ಶೇಖುಪುರಾ ಜಿಲ್ಲೆಯ ನರಂಗ್ ಮಂಡಿಯ ಘರಿಯಾಲ್ ಕಲನ್ ಗ್ರಾಮದಲ್ಲಿ ಮುಸ್ಲಿಂ ಗುಂಪೊಂದು ಕ್ರಿಶ್ಚಿಯನ್ ವ್ಯಕ್ತಿಯೊಬ್ಬರ ಮನೆ ಮತ್ತು ಪಕ್ಕದಲ್ಲಿದ್ದ ವೈದ್ಯಕೀಯ ಕ್ಲಿನಿಕ್ ಅನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದೆ. ಈ ಹಿಂಸಾಚಾರ ಮತ್ತು ಮತ್ತಷ್ಟು ದಾಳಿಯ ಭೀತಿಯಿಂದಾಗಿ ಆ ಪ್ರದೇಶದ ಸುಮಾರು 35ಕ್ಕೂ ಹೆಚ್ಚು ಕ್ರಿಶ್ಚಿಯನ್ ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಪಲಾಯನ ಮಾಡುವಂತೆ ಒತ್ತಾಯಿಸಲ್ಪಟ್ಟಿವೆ.
ಘಟನೆಯ ಹಿನ್ನೆಲೆ:
ಮುನೀರ್ ಮಸೀಹ್ ಅವರ ಮಗ ಹಾಗೂ ಮೂರು ಮಕ್ಕಳ ತಂದೆಯಾದ 40 ವರ್ಷ ವಯಸ್ಸಿನ ಕಾಮ್ರನ್ ಮಸೀಹ್ ಎಂಬವರು ಘರಿಯಾಲ್ ಕಲನ್ ಗ್ರಾಮದಲ್ಲಿ ಸಣ್ಣದೊಂದು ಔಷಧ ಅಂಗಡಿ (ಫಾರ್ಮಸಿ) ನಡೆಸುತ್ತಿದ್ದರು. ವಾಟ್ಸಾಪ್ ಗುಂಪುಗಳಲ್ಲಿ ಧರ್ಮ ನಿಂದನೆಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪ ಇವರ ಮೇಲಿದೆ. ಅಕ್ಟೋಬರ್ 8ರ ಗುರುವಾರ ರಾತ್ರಿ 9.30ರ ಸುಮಾರಿಗೆ ಪೊಲೀಸರು ಕಾಮ್ರನ್ ಮಸೀಹ್ ಅವರನ್ನು ವಶಕ್ಕೆ ಪಡೆದು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದ್ದರು. ಆದರೆ, ಅವರ ಬಂಧನದ ಸುದ್ದಿ ಹರಡುತ್ತಿದ್ದಂತೆ ಆ ಪ್ರದೇಶದ ಕ್ರಿಶ್ಚಿಯನ್ ಕುಟುಂಬಗಳಲ್ಲಿ ಭೀತಿ ಆವರಿಸಿತು.
ಅಕ್ಟೋಬರ್ 9ರಂದು ಗುಂಪುಗೂಡಿದ ಇಸ್ಲಾಮಿಸ್ಟ್ ಮತೀಯವಾದಿಗಳ ಗುಂಪು ಕಾಮ್ರನ್ ಅವರ ಮನೆಗೆ ನುಗ್ಗಿ ದ್ವಂಸಗೊಳಿಸಿತು ಮತ್ತು ಅವರು ವೈದ್ಯರಾಗಿ ಪ್ರಾಕ್ಟೀಸ್ ಮಾಡುತ್ತಿದ್ದ ಪಕ್ಕದ ಕ್ಲಿನಿಕ್ ಹಾಗೂ ಮನೆಯನ್ನು ಬೆಂಕಿಗೆ ಆಹುತಿ ಮಾಡಿತು.
ಪೊಲೀಸರ ಕ್ರಮ ಮತ್ತು ಸೆಕ್ಷನ್ 295-ಸಿ ಪ್ರಕರಣ ದಾಖಲು:
ಶೇಖುಪುರಾ ಜಿಲ್ಲಾ ಪೊಲೀಸ್ ವಕ್ತಾರರ ಪ್ರಕಾರ, ಕಾಮ್ರನ್ ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಮುಹಮ್ಮದ್ ಅವರ ಕುರಿತಾದ ನಿಂದನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪದ ಮೇರೆಗೆ ಪಾಕಿಸ್ತಾನ ದಂಡ ಸಂಹಿತೆಯ (PPC) ಕಠಿಣ ಸೆಕ್ಷನ್ 295-C ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ವಿಭಾಗದಡಿಯಲ್ಲಿ ತಪ್ಪಿತಸ್ಥರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ.
ಪೊಲೀಸರು ಮನೆ ಮತ್ತು ಕ್ಲಿನಿಕ್ ಧ್ವಂಸಗೊಳಿಸುವಲ್ಲಿ ಭಾಗಿಯಾಗಿದ್ದ ಐವರನ್ನು ಗುರುತಿಸಿ ಪ್ರತ್ಯೇಕ ಎಫ್ಐಆರ್ ದಾಖಲಿಸಿ ಬಂಧಿಸಿದ್ದಾರೆ. ಪಂಜಾಬ್ ಅಸೆಂಬ್ಲಿಯ ಅಲ್ಪಸಂಖ್ಯಾತ ಸದಸ್ಯ ಹಾಗೂ ಮಾನವ ಹಕ್ಕುಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಫಲ್ಬೌಸ್ ಕ್ರಿಸ್ಟೋಫರ್ (Falbous Christopher) ಅವರು ಈ ಘಟನೆಯ ಬಗ್ಗೆ ತಕ್ಷಣವೇ ಗಮನಹರಿಸಿ, ಜಿಲ್ಲಾ ಪೊಲೀಸ್ ಮುಖ್ಯಸ್ಥ ಬಿಲಾಲ್ ಜಫರ್ ಶೇಖ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ಸ್ಥಳೀಯ ಮುಖಂಡರೊಂದಿಗೆ ಮಾತನಾಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
ಪ್ರಮುಖ ಆರೋಪಿಗಳ ಪಟ್ಟಿ ಮತ್ತು ಎಫ್ಐಆರ್ ವಿವರ:
ನರಂಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಪ್ರಕಾರ, 30 ರಿಂದ 35 ಜನರ ಗುಂಪು ಕೋಮು ಉದ್ವಿಗ್ನತೆ ಸೃಷ್ಟಿಸಿ ಬೆಂಕಿ ಹಚ್ಚಿದೆ. ಕ್ಯೂರಿ ಇನಾಮ್-ಉಲ್-ಹಕ್, ಶಹಜಾದ್ (ಪೆಟ್ರೋಲ್ ಬಾಟಲ್ ಹೊಂದಿದ್ದ ವ್ಯಕ್ತಿ), ಮುಝಮ್ಮಿಲ್, ಹಮ್ಮದ್, ಹುಸೇನ್, ಬೂಟಾ ಸೇರಿದಂತೆ ಹಲವು ಸ್ಥಳೀಯರ ಹೆಸರುಗಳನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಕುಟುಂಬಗಳ ಪಲಾಯನ ಮತ್ತು ಭಯದ ವಾತಾವರಣ:
ಸ್ಥಳೀಯ ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಶುಕ್ರವಾರ ಬೆಳಿಗ್ಗೆ ಈ ಸುದ್ದಿ ಗ್ರಾಮದಾದ್ಯಂತ ಹರಡುತ್ತಿದ್ದಂತೆ ಉದ್ವಿಗ್ನತೆ ಹೆಚ್ಚಾಯಿತು. ಶುಕ್ರವಾರದ ಪ್ರಾರ್ಥನೆಯ ನಂತರ ಕ್ರಿಶ್ಚಿಯನ್ ಕುಟುಂಬಗಳ ಮೇಲೆ ಮತ್ತಷ್ಟು ದಾಳಿ ನಡೆಸುವುದಾಗಿ ಗುಂಪು ಬೆದರಿಕೆ ಹಾಕಿತ್ತು. ಇದರಿಂದಾಗಿ ಅನೇಕ ಕುಟುಂಬಗಳು ತಮ್ಮ ಸಾಕುಪ್ರಾಣಿಗಳನ್ನು ಬಿಟ್ಟು ಕಾಲ್ಕಿತ್ತರೆ, ಕೆಲವರು ಮಾತ್ರ ಮುಸ್ಲಿಂ ನೆರೆಹೊರೆಯವರ ಸಹಾಯದಿಂದ ತಲೆಮರೆಸಿಕೊಂಡಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
