ನವರಾತ್ರಿಯು ಆಧ್ಯಾತ್ಮಿಕವಾಗಿ ಬಹಳ ಮಹತ್ವವನ್ನು ಪಡೆದಿದೆ. ನವರಾತ್ರಿ ದೇವಿ ಉಪಾಸಕರ ಉತ್ಸವ, ಪರಮಾತ್ಮನ ಉತ್ಸವ, ವೈಷ್ಣವರು ಶ್ರೀ ವೇಂಕಟೇಶನ ನವರಾತ್ರಿಯನ್ನು ಆಚರಿಸಿದರೆ, ಶಾಕ್ತ್ಯರು ಮತ್ತು ಶೈವರು ದೇವಿಯ ಆರಾಧನೆಯನ್ನು ವಿಶೇಷವಾಗಿ ಮಾಡುತ್ತಾರೆ. ನವರಾತ್ರಿಯಲ್ಲಿ ದೀಪೋತ್ಸವ ಬಹಳ ಮಹತ್ವ ಪಡೆಯುತ್ತದೆ. ದಕ್ಷಿಣ ಭಾರತದಲ್ಲಿ ದೇವಿ ಮತ್ತು ವೆಂಕಟೇಶ ದೇವರ ಪೂಜೆಯು ನಡೆದರೆ ಉತ್ತರ ಭಾರತದಲ್ಲಿ ರಾಮಲೀಲಾ ಉತ್ಸವವು ಮಹತ್ವ ಪಡೆದಿರುತ್ತದೆ.
ತ್ರೇತಾಯುಗದಲ್ಲಿ ನವರಾತ್ರಿಯಲ್ಲಿಯೇ ಯುದ್ಧವು ನಡೆದು ದಶಮಿಯ ದಿನ ರಾವಣನ ವಧೆ ಆದ ಕಾರಣ ಇಂದಿಗೂ ದಶಮಿಯದಿನ ರಾವಣಾಸುರನ ಪುತ್ಥಳಿಯನ್ನು ಮಾಡಿ ಅವನ ವಧೆಯನ್ನು ಮಾಡಿ ಸಂಭ್ರಮಿಸುತ್ತಾರೆ. ದ್ವಾಪರದಲ್ಲಿ ಅಜ್ಞಾತವಾಸ ಮುಗಿಯುವ ಸಮಯದಲ್ಲಿ ವಿರಾಟನಗರದ ಮೇಲೆ ದಂಡೆತ್ತಿ ಬಂದ ದುರ್ಯೋಧನಾದಿಗಳನ್ನು ಬೃಹನ್ನಳೆಯ ರೂಪದಲ್ಲಿದ್ದ ಅರ್ಜುನನು ಉತ್ತರ ಕುಮಾರನೊಂದಿಗೆ ಹೋಗಿ ವಿಜಯವನ್ನು ಸಾಧಿಸಿದ ನಂತರ ಬನ್ನಿ ಪೂಜೆಯನ್ನು ಮಾಡುತ್ತಾನೆ. ಆಯುಧ ಪೂಜೆ ಬನ್ನಿ ಪೂಜೆಯು ದ್ವಾಪರ ಯುಗದ ಕಥೆಗಳಾದರೆ. ದ್ವಾಪರದ ಕೊನೆಯಲ್ಲಿ ಶ್ರೀ ವೆಂಕಟೇಶನ ಕಲ್ಯಾಣದ ಮೂಲಕ ಲೋಕ ಶಿಕ್ಷಣವನ್ನು ಮಾಡುತ್ತಾನೆ. ಇವೆಲ್ಲವೂ ಪೌರಾಣಿಕ ಮಹತ್ವವನ್ನು ಸಾರುತ್ತವೆ.
ಧಾರ್ಮಿಕವಾಗಿ ದೇವಿಯು ಶಕ್ತಿ ಸ್ವರೂಪಳು, ಅವಳ ಆರಾಧನೆಯಿಂದ ನಮಗೆ ಶಕ್ತಿ, ಭಕ್ತಿ ಎರಡೂ ದೊರೆಯುತ್ತದೆ. ಮಳೆಗಾಲದ ಈ ಸಮಯದಲ್ಲಿ ಹೊರಗೆ ತಿರುಗುವ ಪರಿಸ್ಥಿತಿ ಇಲ್ಲವಾದ್ದರಿಂದ ಮನೆಯಲ್ಲಿಯೇ ಇದ್ದು ಪೂಜೆಯನ್ನು ಮಾಡುವುದು ನಮ್ಮ ದೈಜಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಎಂದು ನಮ್ಮ ಪೂರ್ವಜರು ಆಶ್ವಯುಜ ಮಾಸದಲ್ಲಿ ನವರಾತ್ರಿಯ ಉತ್ಸವವನ್ನು ಆರಂಭಿಸುತ್ತಾರೆ. ಸಂಘರ್ಷ ಮತ್ತು ಹೋರಾಟಗಳು ಯುಗ ಯುಗಾಂತರಗಳಿಂದಲೂ ನಡೆದೇ ಇವೆ. ನವರಾತ್ರಿ ಉತ್ಸವ ದುಷ್ಟ ಶಕ್ತಿಗಳ ಮೇಲೆ ಸಾತ್ವಿಕತೆಯ ಜಯದ ಪ್ರತೀಕ ಅತ್ಯಾಚಾರ ಮಾಡಿದವರನ್ನು ಸಂಹಾರ ಮಾಡಿ ದೇವಿಯು ತನ್ನ ಪ್ರತಿ ರೂಪಗಳಿಂದಲೂ ತನ್ನ ಭಕ್ತರ ರಕ್ಷಣೆಯನ್ನು ಮಾಡಿರುತ್ತಾಳೆ. ರಾಮಾಐಣದಲ್ಲಿ ರಾಮನು ಪರಸ್ತೀ ವ್ಯಾಮೋಹಕ್ಕೆ ಒಳಗಾದ ರಾವಣನ ರಕ್ಕಸಿ ಪ್ರವೃತ್ತಿಯನ್ನು ಖಂಡಿಸಿ ತಿಳಿ ಹೇಳಿ ತಿದ್ದಿ ಕೊಳ್ಳದೇ ಹೋದಾಗ ಅವನ್ನು ದಂಡಿಸಿ ವಧಿಸಿದನು. ಕೌರವರು ಪರಧನಕ್ಕಾಗಿ ಆಸೆ ಪಟ್ಟು ಅನ್ಯಾಯ ಮಾಡುತತಲೇ ಬಂದಾಗ ಅವರಿಗೆ ಶ್ರೀ ಕೃಷ್ಣನು ಪಾಂಡವರ ಮೂಲಕ ಶಿಕ್ಷಿಸಿದನು. ಈ ಎಲ್ಲ ಕಥೆಗಳಲ್ಲಿ ಕೂಡ ನಮ್ಮ ಜೀವನಕ್ಕೆ ಬಹಳಷ್ಟು ಸಂದೇಶಗಳನ್ನು ನೀಡಲಾಗಿದೆ.
ರಾಮಾಯಣದಲ್ಲಿ ಸೀತಾದೇವಿಯ ಪಾತ್ರದ ಮೂಲಕ ಪತಿಯನ್ನೇ ನಂಬಿ ಎಲ್ಲಿಗಾದರೂ ಹೋಗಬೇಕು ಅವನ ಕಷ್ಟ ಸುಖಗಳಲ್ಲಿ ಪಾಲುದಾರಳಾಗಬೇಕೆಂಬ ನೀತಿಯನ್ನು ಕಲಿತರೆ, ಕೆಲವೊಮ್ಮೆ ಹಠ ಮಾಡಬಾರದು ಹಿರಿಯರ ಮಾತನ್ನು ಮೀರಬಾರದು ಎಂಬ ನೀತಿಯನ್ನು ಕೂಡ ಕಲಿಯುತ್ತೇವೆ. ಶ್ರೀರಾಮ ನಿಂದ ಕಲಿಯುವುದು ಬಹಳವೇ ಇದೆ. ರಾಮನು ಆದರ್ಶ ಪುರುಷನು ಅವನ ಜೀವನದ ಪ್ರತಿಯೊಂದು ಘಟನೆಯು ನಮ್ಮ ಮುಂದೆ ಬಂದೇ ಬರುತ್ತದೆ. ತಂದೆ ತಾಯಿಯರ ಸೇವೆ ಮಾಡುವುದು, ಅವರ ಆಜ್ಞೆ ಪಾಲಿಸಿ ಅವರ ಪ್ರೀತಿ ಪಾತ್ರನಾಗುವುದು ಅಣ್ಣ ತಮ್ಮಂದಿರ ಮೇಲೆ ವಾತ್ಸಲ್ಯ ತೋರುವುದು, ಗುರು ಹಿರಿಯರಿಗೆ ಗೌರವ ಕೊಡುವುದು ಅವರ ಸೇವೆ ಮಾಡುತ್ತಾ ಅವರಿಂದ ಜ್ಞಾನ ಪಡೆಯುವುದು, ದುಷ್ಟ ಶಿಕ್ಷಣ ಮಾಡಿ ಪ್ರಜೆಗಳು ಋಷಿ ಮುನಿಗಳನ್ನು ಕಾಪಾಡುವುದನ್ನು ಕಲಿಯಬೇಕು. ಧರ್ಮದ ಸಲುವಾಗಿ ಒಂಟಿಯಾಗಿ ಆಗಲಿ ಜೊತೆಯವರ ಜೊತೆಗೂಡಿಯಾಲಿ ಹೋರಾಟ ಮಾಡುವುದನ್ನು ನಾವು ಕಲಿಯ ಬೇಕು.
ಇನ್ನು ಮಹಾಭಾರತದಿಂದ ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಲೇ ಬೇಕು. ಎಷ್ಟು ಸಾಧ್ಯವೋ ಅಷ್ಟು ಸಹಿಸಿ ಹೊಂದಿಕೊಂಡು ನಡೆಯ ಬೇಕು ಕೊನೆಗೆ ಮಿಕ್ಕಿದಾಗ ಧರ್ಮಕ್ಕಾಗಿ ಯುದ್ಧವನ್ನಾದರೂ ಮಾಡಿ ನಮ್ಮದಾಗಿರುವುದನ್ನು ಪಡೆಯಬೇಕು ಎಂದು ಕಲಿಯುತ್ತೇವೆ.
ವೆಂಕಟೇಶನ ಮಹಾತ್ಮೆ ಮತ್ತು ಕಲ್ಯಾಣದಲ್ಲಿ ಕಲಿಯುದಲ್ಲಿ ನಡೆಯುವ ಎಲ್ಲ ಘಟನೆಗಳನ್ನು ಮೊದಲಿಗೇ ತಾನು ಆಡಿ ತೋರಿಸಿದ್ದಾನೆ ಭಗವಂತ, ವೈಕುಂಠದಿಂದ ಭೂಮಿಗೆ ಬಂಧ ಭಗವಂಥನಿಗೆ ಇರಲು ಸ್ಥಳವನ್ನು ವರಾಹ ದೆಔರು ಕೊಡುತ್ತಾರೆ. ಬಾಡಿಗೆಗಾಗಿ ಮನೆಯನ್ನು ಭಗವಂತನೇ ಹಿಡಿದ ಇನ್ನು ಆ ಸ್ಥಳಕ್ಕೆ ಮೌಲ್ಯ ಎಂಬಂತೆ ಭೂ ವೈಕುಂಠದಲ್ಲಿ ಮೊದಲಿಗೆ ವರಾಹದೇವರ ದರ್ಶನ ಪೂಜೆ ನಂತರ ತನ್ನ ದರ್ಶನ ಎಂದು ಶ್ರೀನಿವಾಸನು ಹೇಳಿದ್ದಾನೆ. ಕಲಿಯುಗದಲ್ಲಿ ಹೀಗೆ ತಿರುಗುತ್ತಾ ಹೋದಾಗ ಕನೆಯನ್ನು ನೋಡುವುದು ಪ್ರೀಥಿಯಾಗುವುದು ಸಹಜ ಎಂದು ಭಗವಂಥ ಬೇಟೆಗೆ ಪದ್ಮಾವತಿಯನ್ನು ನೋಡಿ ಮರುಳಾಗುವುದು. ಬಕುಲಾವತಿಯನ್ನು ಕಳುಹಿಸಿ ಮದುವೆಯ ನಿಶ್ಚಯ ಮಾಡಿಸುವುದು, ಕುಬೇರ ಬಳಿ ಮದುವೆಗೆ ಸಾಲವನ್ನು ಮಾಡುವುದು ಮತ್ತು ಭಕ್ತಾದಿಗಳು ಹಾಕುವ ಹಣದಲ್ಲಿ ಬಡ್ಡಿ ಕೊಡುವೆ ಎನ್ನುವುದು ಕೂಡ ಲೋಕ ಶಿಕ್ಷಣವೇ ಇಂದು ನಾವು ಕಲಿಯುಗದಲ್ಲಿ ಮದುವೆ ಮನೆ ಕಟ್ಟಲು ಸಾಲವನ್ನು ಮಾಡಿ ಬಡ್ಡಿಯನ್ನು ಕಟ್ಟುತ್ತೇವೆ. ಮದುವೆಗೆ ಬಂಧು ಬಾಂಧವರನ್ನು ಕರೆಯುತ್ತೇವೆ ಇವೆಲ್ಲವೂ ನಮಗೆ ನಮ್ಮ ಪೂರ್ವಜರಿಂದ ದೊರೆತ ಪಾಠವಾಗಿದೆ. ದೇವಾಧಿ ದೇವತೆಗಳು ಮನುಷ್ಯರ ಜೀವನವನ್ನು ಹೇಗೆ ಮಾಡಬೇಕುಂದು ತೋರಿಸಿ ಹೋಗಿದ್ದಾರೆ. ಅವರಿಂದ ಸರಿಯಾಗಿ ಕಲಿತವರು ಇಂದು ಉತ್ತಮ ಜೀವನವನ್ನು ನಡೆಸುತ್ತಾರೆ. ಬೇಡದ ವಿಷಯವನ್ನು ಅನುಸರಿಸುವವರು ಕಷ್ಟ ಪಡುತ್ತಲೇ ಇರುತ್ತಾರೆ.
ಜೀವನದಲ್ಲಿ ಆಧ್ಯಾತ್ಮಿಕತೆ ಮತ್ತು ಧರ್ಮ ಮಾರ್ಗದಲ್ಲಿ ನಡೆಯುವುದು ಬಹಳ ಮುಖ್ಯವಾಗಿದೆ. ನಮ್ಮ ಜೀವನದಲ್ಲಿ ಶಿಸ್ತು ಸಂಯಮ ನಿಯಮಗಳನ್ನು ನಾವು ಪರಂಪರೆಯಿಂದಲೇ ಕಲಿಯುತ್ತೇವೆ ಅದಕ್ಕಾಗಿ ಋತುಮಾನಕ್ಕೆ ಅನುಗುಣವಾಗಿ ಜೀವನ ಶೈಲಿಗೆ ಅನುಗುಣವಾಗಿ ಹತ್ತು ಹಲವು ಹಬ್ಬಗಳನ್ನೂ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಬಂದಿರುತ್ತೇವೆ. ಆಧುನಿಕ ಪ್ರಪಂಚದಲ್ಲಿ ಮೊದಲಿನಂತೆ ಜೀವನ ಇಲ್ಲದೇ ಇರುವ ಕಾರಣ ಇಂದಿನ ಪರಿಸ್ಥಿತಿಯಲ್ಲಿ ಹಳೆಯ ಕಾಲದಂತೆ ಅಲ್ಲದೇ ಹೋದರೂ ಮಕ್ಕಳಲ್ಲಿ ನಮ್ಮ ಮುಂದಿನ ಪೀಳಿಗೆಗೆ ಭಕ್ತಿ ಮತ್ತು ಶ್ರದ್ಧೆಯನ್ನು ಉಳಿಸುವ ಹಬ್ಬವಾಗಿ ನವರಾತ್ರಿಯನ್ನು ಆಯಾ ಪ್ರಾಂತದ ಪದ್ಧತಿಯಂತೆ ಆಚರಿಸಬೇಕು.
ನವರಾತ್ರಿಯ ಸಾಮಾಜಿಕ ಮಹತ್ವ:
ನವರಾತ್ರಿಯಲ್ಲಿ ಸಮಾಜದಲ್ಲಿ ಉತ್ಸವ, ಪೂಜೆ, ದಾನ ಅನ್ನ ಸಂತರ್ಪಣೆಗಳು ಹೆಚ್ಚಾಗಿ ನಡೆಯುತ್ತವೆ. ಈ ಎಲ್ಲ ಆಚರಣೆಗಳ ಹಿಂದೆ ಉತ್ತಮ ಸಮಾಜ ನಿರ್ಮಾಣ ಮತ್ತು ಅಭ್ಯಾಸಗಳನ್ನು ಮಾಡಿಸುವ ವಿಚಾರದಿಂದ ನಮ್ಮ ಪೂರ್ವಜರು ನಮಗಿಂತ ಹೆಚ್ಚು ಶಕ್ತಿಶಾಲಿಯಾದ ಒಂದು ಅಂಶವನ್ನು ದೇವರು ಎಂಬ ಬೋಧನೆಯಿಂದ ಅವನ ಪ್ರೀತಿಗಾಗಿ ಮಾಡುವ ಕಾರ್ಯ ಎಂದು ಹೇಳುವ ಮೂಲಕ ಉತ್ತಮ, ಆರೋಗ್ಯಕರ, ನೀತಿಯನ್ನು ಒಳಗೊಂಡ ವೈಜ್ಞಾನಿಕವಾಗಿರುವ ಅಭ್ಯಾಸಗಳನ್ನು ಮಾಡಿಸಿದ್ದಾರೆ.
ಒಂದು ಉತ್ತಮ ಸಮಾಜ ಹಾಗೂ ಸಮುದಾಯದ ನಿರ್ಮಾಣಕ್ಕೆ ಆ ಸಮಾಜದಲ್ಲಿ ಸ್ತ್ರೀಗೆ ಗೌರವವನ್ನು ಕೊಡುವುದು ಬಹು ಮುಖ್ಯವಾಗುತ್ತದೆ. ಪಾಶ್ಚಾತ್ಯರು ಮತ್ತು ಅನ್ಯ ಧರ್ಮೀಯರಲ್ಲಿ ಸ್ತ್ರೀ ಕೇವಲ ಸೌಂದರ್ಯ ಮತ್ತು ಭೋಗದ ವಸ್ತುವಾಗಿ ಉಳಿಇದ್ದಾಳೇ ಆದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅವಳು ಶಕ್ತಿ ಸ್ವರೂಪಿಣಿ, ಮಾತೆ ಇಂತಹ ಪೂಜನೀಯ ಭಾವನೆಯನ್ನು ಶಕ್ತಿಯ ಪ್ರತೀಕವೆಂದೇ ಪೂಜಿಸಲಾಗುತ್ತದೆ. ಇದು ಕೇಲವ ಪೂಜೆಗೆ ಮಾತ್ರವಲ್ಲದೇ ದೈನಂದಿನ ಜೀವನದಲ್ಲಿ ಸ್ತ್ರೀಗೆ ಉತ್ತಮ ಸ್ಥಾನ ಕೊಡುವುದು ಮಹತ್ವ ಎಂದು ತಿಳಿಸಿಕೊಡುವ ಹಬ್ಬ ನವರಾತ್ರಿಯಾಗಿದೆ.
ನವರಾತ್ರಿಯಲ್ಲಿ ಕುಮಾರೀ ಪೂಜನ ಬಹಳ ಮಹತ್ವವನ್ನು ಪಡೆದಿದೆ. ಮಹಿಳೆಯ ಶೀಲ ಮತ್ತು ಗೌರವಕ್ಕೆ ಧಕ್ಕೆ ಮಾಡುವ ಸಮಾಜ ನಿರ್ಮಾಣವಾಗುತ್ತ ಹೋದಂತೆ ಸ್ತ್ರೀ ಭ್ರೂಣ ಹತ್ಯೆ ಮತ್ತು ಹೆಣ್ಣು ಮಕ್ಕಳನ್ನು ಕೆಳದರ್ಜೆಯ ಪ್ರಜೆಗಳನ್ನಾಗಿ ನಡೆದುಕೊಳ್ಳುವ ಸಮಯದಲ್ಲಿ ಈ ಕುಮಾರಿ ಪೂಜನ ಬಹಳ ಮಹತ್ವದ ನೀತಿಯನ್ನು ಸಮಾಜಕ್ಕೆ ಕಲಿಸುತ್ತದೆ. ಹೆಣ್ಣು ಮಗುವೊಂದು ಉತ್ತಮ ಸಂಸ್ಕಾರ ವಿದ್ಯೆಯನ್ನು ಕಲಿತಾಗ ಅದು ಆ ಸಮಾಜದ ಉನ್ನತಿಯ ಮಾರ್ಗವಾಗಿದೆ. ಇಂತಹ ಸಾವಿರಾರು ಉದಾಹರಣೆಯನ್ನು ಇತಿಹಾಸದಲ್ಲಿ ಕೇಳಿದ್ದೇವೆ ನೋಡಿದ್ದೇವೆ. ಅಂತಹ ಹೆಣ್ಣುಮಕ್ಕಳನ್ನು ಪ್ರೀತಿಯಿಂದ ಬೆಳಸಿ ಅವಳಲ್ಲಿ ಉತ್ತಮ ಸಾಮರ್ಥ್ಯ ತುಂಬಿ ಸಶಕ್ತಳನ್ನಾಗಿ ಮಾಡಲು ಮೊದಲ ಹೆಜ್ಜೆ ಅವಳು ಸಣ್ಣ ಮಗುವಾಗಿದ್ದಾಗಿನಿಂದ ಅವಳಲ್ಲಿರುವ ವಿಶೇಷತೆ ಮತ್ತು ಶ್ರೇಷ್ಠತೆಯ ಪರಿಚಯ ಮಾಡಿಸುವುದು ಆಗಿದೆ. ಈ ಕೆಲಸವನ್ನು ಕುಮಾರಿ ಪೂಜನದ ಮೂಲಕ ನಮ್ಮ ಪೂರ್ವಜರು ಮಾಡಿದ್ದಾರೆ
ಪುರುಷರಲ್ಲಿ ವೀರತ್ವ, ಧರ್ಮದಿಂದ ಬದುಕುವ ಮಾರ್ಗದರ್ಶನ, ಸುವ್ಯವಸ್ಥಿತ ಹಾಗೂ ಸುರಕ್ಷಿತ ಸಮಾಜ ನಿರ್ಮಾಣದಲ್ಲಿ ನವರಾತ್ರಿ ಹಬ್ಬದ ಆಚರಣೆ ಹಾಗೂ ಸಂದೇಶ ಮಹತ್ವದ ಪಾತ್ರ ವಹಿಸುತ್ತದೆ.
ನವರಾತ್ರಿಯ ವೈಜ್ಞಾನಿಕ ಮಹತ್ವ:
ನವರಾತ್ರಿಯಲ್ಲಿ ಒಂಭತ್ತು ಚಕ್ರಗಳನ್ನು ಜಾಗೃತಗೊಳಿಸುವುದು, ಪೂಜೆ ಆರಾಧನೆ, ಸಂಪ್ರದಾಯ, ಉಪವಾಸ ಮೊದಲಾದವುಗಳ ಮೂಲಕ ಹಬ್ಬವನ್ನು ಆಚರಿಸುತ್ತೇವೆ. ಪ್ರಕೃತಿ ಪೂಜೆಯು, ಸಾಧನೆಯನ್ನು ಕೂಡ ಮಾಡುತ್ತಾರೆ. ಇವೆಲ್ಲವೂ ವೈಜ್ಞಾನಿಕ ಮಹತ್ವ ಪಡೆದಿದೆ.
ನವರಾತ್ರಿಯ ಕಾಲದಲ್ಲಿ ಮಳೆಗಾಲದಿಂದ ಚಳಿಗಾಲಕ್ಕೆ ಬದಲಾಗುವ ಸಮಯವಾಗಿದೆ. ಇಂತಹ ಬದಲಾವಣೆಯ ಸಮಯದಲ್ಲಿ ಹೆಚ್ಚಾಗಿ ರೋಗ ರುಜಿನಗಳು ಆರೋಗ್ಯ ಸಮಸ್ಯೆಗಳು ಬರುತ್ತವೆ. ಮಳೆಗಾಲದಲ್ಲಿ ಇರುವ ವಾತಾವರಣ ಮತ್ತು ಆಹಾರ ಪದ್ಧತಿಯ ಬದಲಾಗಿ ಮುಂದಿನ ನಾಲ್ಕು ತಿಂಗಳುಗಳಲ್ಲಿ ಬೇರೆ ರೀತಿ ಊಟೋಪಚಾರ ಆಹಾರ ವಿಹಾರಗಳನ್ನು ಅಭ್ಯಾಸ ಮಾಡಿಕೊಳ್ಳಲು ಆಶ್ವಯುಜ ಮಾಸ ಮೊದಲಾಗುತ್ತದೆ. ಈ ಮಳೆಗಾಲದ ಆರಂಭದಲ್ಲಿ ಕಫ ಉತ್ಪನ್ನ ಮಾಡುವ ಮೊಸರನ್ನು ಬಳಸುತ್ತಿರುವುದಿಲ್ಲ. ಈ ಬದಲಾವಣೆಯ ಸಮಯದಲ್ಲಿ ದವನ ಧಾನ್ಯಗಳಲ್ಲಿ ಹುಳಗಳಾಗುವ ಸಂಭವ ಹೆಚ್ಚಾಗುವುದರಿಂದ ಬೇಳೆಕಾಳುಗಳನ್ನು ಮತ್ತು ತರಕಾರಿಗಳನ್ನು ಬಳಸುವುದಿಲ್ಲ.
ಉಪವಾಸದಲ್ಲಿ ಸಾತ್ವಿಕ ಆಹಾರವನ್ನು ತಿನ್ನಲಾಗುತ್ತದೆ. ಇದರಿಂದ ಹೆಚ್ಚಿನ ಮಸಾಲೆ ಜೀರ್ಣಕ್ರಿಯೆಗೆ ಬಾಧಕವಾದ ಅಂಶಗಳು ನಮ್ಮ ದೇಹದಲ್ಲಿ ಹೆಚ್ಚು ಪ್ರಮಾಣದ ಹಾನಿಕಾರಕ ಟಾಕ್ಸಿನ್ಗಳು ಶೇಖರವಾಗುವುದನ್ನು ಕಡಿಮೆ ಮಾಡಿ ಆರೋಗ್ಯ ಕಾಪ್ಡಿಕೊಳ್ಳಲು ಸಹಾಯಕವಾಗಿರುತ್ತದೆ. ಮನುಷ್ಯನ ಆರೋಗ್ಯ ಅವನ ಮನಸ್ಥಿತಿಗೆ ಕಾರಣವಾಗುವುದರಿಂಧ ಈ ಸಮಯದ ಆಹಾರ ವಿಹಾರದ ಪದ್ಧತಿಯಿಂದ ಮನಷ್ಯನ ಚಿಂತೆಗಳು ಪರಿಹಾರವಾಗಿ ಆನಂದದಿಂದ ಇರುತ್ತಾನೆ.
ಈ ಸಮಯದಲ್ಲಿ ಹಗಲು 12 ತಾಸು ರಾತ್ರಿಯೂ 12 ತಾಸುಗಳು ಇರುತ್ತವೆ ಇದನ್ನು ಇಕ್ಷಿನಾಕ್ಸ್ ಎಂದು ಕರೆಯಲಾಗುತ್ತದೆ ಇಂತಹ ಸಮಯದಲ್ಲಿ ಕತ್ತಲು ಬೆಳಕು ಸಮ ಪ್ರಮಾಣದಲ್ಲಿರುತ್ತದೆ. ಬೇಸಿಗೆಕಾಲದಲ್ಲಿ ಹಗಲು ಹೆಚ್ಚು ರಾತ್ರಿ ಕಡಿಮೆ, ಚಳಿಗಾಲದಲ್ಲಿ ರಾತ್ರಿ ಹೆಚ್ಚು ಹಗಲು ಕಡಿಮೆ ಇರುತ್ತದೆ. ಈ ಕಾಲದಲ್ಲಿ ಅರ್ಧ ರಾತ್ರಿ ಅರ್ಧ ಹಗಲು ಇರುವುದರಿಂದ ಈ ಕಾಲದ ವಾತಾವರಣದಲ್ಲಿ ಉಪವಾಸ ಧ್ಯಾನ ಮೊದಲಾದ ಸಾಧನೆಗಳು ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸರಿಯಾಗಿ ಗಮನ ಹರಿಸಬೇಕಾದ ಸಮಯವೇ ಆಗಿರುತ್ತದೆ.
ನವರಾತ್ರಿಯಲ್ಲಿ ಪರಿಸರ ಮತ್ತು ವಾತಾವರಣ ಬಣ್ಣಗಳಿಂದ ಶೃಂಗಾರಗೊಂಡು ಆನಂದಮಯವಾಗಿರುತ್ತದೆ ಹೂವುಗಳು ಚೆನ್ನಾಗಿ ಅರಳಿನಿಂತಿರುತ್ತವೆ ಅವುಗಳಿಂದ ದೇವಿಯ ಆರಾಧನೆಯನ್ನು ಒಂದೊಂದು ಬಣ್ಣಗಳ ಪ್ರತೀಕಗಳನ್ನು ಅರಿತು ನವದೇವಿಯರ ಪೂಜೆಯನ್ನು ಮಾಡಲಾಗುತ್ತದೆ.
ನವರಾತ್ರಿಯ ಸಮಯದ ಉಪವಾಸದಲ್ಲಿ ವಿವಿಧ ರೀತಿಯಲ್ಲಿ ಉಪವಾಸವನ್ನು ಮಾಡುತ್ತಾರೆ. ಕೇವಲ ನೀರನ್ನು ಸೇವಿಸಿ ಉಪವಾಸ ಕೇವಲ ಫಲಾಹಾರದ ಉಪವಾಸ, ಬೇಯಿಸದೇ ಮಾಡಿದ ಪದಾರ್ಥಗಳನ್ನು ತಿಂದು ಉಪವಾಸ, ನಿಷಿದ್ಧ ಅಂದರೆ ತಾಪಸಿ ಪದಾರ್ಥಗಳನ್ನು ಸೇವಿಸದೇ ಉಪವಾಸಗಳನ್ನು ಮಾಡುತ್ತಾರೆ. ಈ ಬಗೆಯಲ್ಲಿ ಉಪವಾಸಗಳನ್ನು ಅವರ ದೈಹಿಕ ಮತ್ತು ಆತ್ಮ ಶಕ್ತಿಯ ಅನುಸಾರ ಮಾಡುತ್ತಾರೆ. ಅತೀ ಸಾತ್ವಿಕ ಆಹಾರವನ್ನು ಸೇವಿಸುವವರು ದೇಹದಲ್ಲಿ ಊತ್ತಮ ಶಕ್ತಿಯನ್ನು ಉಳ್ಳವರು ಕೇವಲ ನೀರಿನ ಸೇವನೆಯಿಂದ ಉಪವಾಸ ಮಾಡುತ್ತಾರೆ. ಹೀಗೆ ನಮ್ಮ ಆಹಾರ ಮತ್ತು ಉಪವಾಸಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆ.
ನವರಾತ್ರಿಯ ಸಮಯದಲ್ಲಿ ಪೂಜೆ ಮತ್ತು ಮಂತ್ರ ಜಪ ಅನುಷ್ಠಾನಗಳನ್ನು ಮಾಡುತ್ತಾರೆ. ಇದರಿಂದ ನಮ್ಮ ದೇಹದ ಚಕ್ರಗಳು ಜಾಗೃತಗೊಳ್ಳುತ್ತವೆ. ನಮ್ಮಲ್ಲಿ ಎಲ್ಲ ರೀತಿಯಲ್ಲಿ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಜಾಗೃತಗೊಳಿಸಿ ದುಷ್ಟ ಶಕ್ತಿಗಳ ಜೊತೆಗೆ ಹೋರಾಡಲು ಪ್ರೇರಣೆಯನ್ನು ನೀಡಿ ನಮ್ಮನ್ನು ಜೀವನದಲ್ಲಿ ಜಯಶಾಲಿಗಳನ್ನಾಗಿ ಮಾಡುವ ಶಕ್ತಿಯನ್ನು ನಮ್ಮಲ್ಲಿ ನಾವು ಈ ಸಮಯದಲ್ಲಿ ಜಾಗೃತಗೊಳಿಸಬಹುದಾಗಿದೆ. ಇಲ್ಲಿ ನವ ಎಂದರೆ ಕೇವಲ ಒಂಭತ್ತು ಅಲ್ಲದೇ ನವ ಎಂದರೆ ಹೊಸದಾದ ಎಂದೂ ಕೂಡ ಅರ್ಥ ಮಾಡಿಕೊಳ್ಳಬಹದು. ನಮ್ಮ ಜೀವನದಲ್ಲಿ ನವಚೈತನ್ಯವನ್ನು ಹೊಸ ಶಕ್ತಿಯನ್ನು ಪಡೆದುಕೊಳ್ಳುವ ಕಾಲ ನವರಾತ್ರಿ.
ನವರಾತ್ರಿಯಲ್ಲಿ ದೇವಿಯ ಪ್ರಸನ್ನತೆಯ ಸಲುವಾಗಿ ಅನೇಕ ಹೋಮ ಹವನಾದಿಗಳನ್ನು ಮಾಡುತ್ತಾರೆ. ಇದರಿಂದ ವಾತಾವರಣದಲ್ಲಿ ಹಾನಿಕಾರಕ ಬ್ಯಾಕ್ಟಿರಿಯಾಗಳು, ಹಾನಿಕಾರಕ ವಸ್ತುಗಳು ನಾಶವಾಗಿ ವಾತಾವರಣವು ಪರಿಶುದ್ಧವಾಗಿ ಆರೋಗ್ಯಯುತ ವಾತಾವರಣವನ್ನು ಸೃಷ್ಟಿಸುತ್ತದೆ.
ಹೀಗೆ ಅನೇಕ ರೀತಿಯಲ್ಲಿ ವೈಜ್ಞಾನಿಕ ಕಾರಣಗಳನ್ನು ಇಟ್ಟುಕೊಂಡೇ ನಮ್ಮ ಪೂರ್ವಜರು ಹಬ್ಬಗಳನ್ನು ಸಂಪ್ರದಾಯಗಳನ್ನು ಬೆಳೆಸಿಕೊಂಡು ಬಂದಿದ್ದಾರೆ, ಶಿಸ್ತುಬದ್ಧ ಜೀವನ ಮತ್ತು ಸರಿಯಾದ ಅಭ್ಯಾಸಗಳನ್ನು ಮಾಡಿಸುವ ಕಾರಣ ದೇವರು ಪೂಜೆ ಸಂಪ್ರದಾಯಗಳ ಮೂಲಕ ಉತ್ತಮ ಜೀವನದ ಮಾರ್ಗವನ್ನು ತೋರಿಸಿದ್ದಾರೆ.
- ಮಾಧುರಿ ದೇಶಪಾಂಡೆ, ಬೆಂಗಳೂರು
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
