ನವದೆಹಲಿ: ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡುವುದಿಲ್ಲ ಮತ್ತು ಶಾಂತಿ ಕಾಪಾಡುತ್ತೇವೆ ಎಂದು ಲಿಖಿತ ಭರವಸೆ ನೀಡಿದ ಬಳಿಕ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅಕ್ಟೋಬರ್ 21ರಂದು ನ್ಯಾಯಾಂಗ ಬಂಧನದಿಂದ ಬಿಡುಗಡೆಯಾಗಿದ್ದಾರೆ. ಈ ನಡುವೆ, ಅವರ ಪರ ವಕೀಲರು ನ್ಯಾಯಾಲಯಕ್ಕೆ ಬೇಷರತ್ತಾಗಿ ಕ್ಷಮೆಯಾಚಿಸಿದ್ದಾರೆ.
ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ಹಿಂಪಡೆದ ಕೆಲವೇ ಗಂಟೆಗಳಲ್ಲಿ ಇಬ್ಬರೂ ಬಿಡುಗಡೆಯಾಗಿದ್ದಾರೆ. ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ರಿತು ರಾಜ್ ಅವರ ಮುಂದೆ ಇಬ್ಬರೂ ಲಿಖಿತ ಭರವಸೆಗಳನ್ನು ಸಲ್ಲಿಸಿದರು. ಬಳಿಕ, ತಲಾ ₹50,000 ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಜಾಮೀನು ಬಾಂಡ್ ಸಲ್ಲಿಸುವ ಷರತ್ತಿನ ಮೇಲೆ ಅವರನ್ನು ಬಿಡುಗಡೆ ಮಾಡಲು ಮ್ಯಾಜಿಸ್ಟ್ರೇಟ್ ಆದೇಶಿಸಿದರು.
ಪ್ರತಿಭಟನೆಗೆ ಕರೆ ನೀಡುವುದಿಲ್ಲವೆಂದು ಭರವಸೆ
ಪ್ರತ್ಯೇಕವಾಗಿ ಸಲ್ಲಿಸಿದ ಲಿಖಿತ ಭರವಸೆಗಳಲ್ಲಿ, ಶಾಂತಿಗೆ ಭಂಗ ತರುವ ಯಾವುದೇ ಕೃತ್ಯದಲ್ಲಿ ತೊಡಗುವುದಿಲ್ಲ ಮತ್ತು ನ್ಯಾಯಾಂಗ ಹಾಗೂ ಅದರ ಎಲ್ಲ ಅಂಗಗಳ ಮೇಲೆ, ವಿಶೇಷವಾಗಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಇಬ್ಬರೂ ತಿಳಿಸಿದ್ದಾರೆ.
ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಇಲ್ಲದಿರುವವರೆಗೆ ಅಲ್ಲಿ ಪ್ರತಿಭಟನೆಗೆ ಕರೆ ನೀಡುವುದಿಲ್ಲ ಎಂದೂ ಭರವಸೆ ನೀಡಿದ್ದಾರೆ. ಭವಿಷ್ಯದಲ್ಲಿ ಯಾವುದೇ ಪ್ರತಿಭಟನೆ ನಡೆಸಿದರೂ ಸಂವಿಧಾನದ ಚೌಕಟ್ಟಿನೊಳಗೆ ಮತ್ತು ಕಾನೂನುಬದ್ಧವಾಗಿ ನಡೆಸುವುದಾಗಿ ತಿಳಿಸಿದ್ದಾರೆ.
ಅಕ್ಟೋಬರ್ 13ರಂದು ಅನುಮತಿಯಿಲ್ಲದೆ ಜಂತರ್ ಮಂತರ್ ಪ್ರವೇಶಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಅದಕ್ಕೂ ಮೊದಲು ಬಂಧನಕ್ಕೊಳಗಾಗಿದ್ದ ಸಂದರ್ಭದಲ್ಲಿ ಅವರು ಶಾಂತಿ ಕಾಪಾಡುವ ಬಾಂಡ್ಗಳನ್ನು ಸಲ್ಲಿಸಿದ್ದರು. ಆದರೂ ಮತ್ತೆ ಜಂತರ್ ಮಂತರ್ ಪ್ರವೇಶಿಸಿದ ಆರೋಪದ ಮೇಲೆ ಅವರನ್ನು ಏಳು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.
ವಕೀಲರಿಂದ ಬೇಷರತ್ತಾದ ಕ್ಷಮೆಯಾಚನೆ
ಅಕ್ಟೋಬರ್ 19ರಂದು ಮಾಧ್ಯಮಗಳಿಗೆ ನೀಡಿದ ಕೆಲವು ಹೇಳಿಕೆಗಳು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಗೌರವಕ್ಕೆ ಧಕ್ಕೆ ತಂದಿವೆ ಎಂದು ದೆಹಲಿ ಪೊಲೀಸರು ವಿಚಾರಣೆ ವೇಳೆ ನ್ಯಾಯಾಲಯದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ದಾಸ್ ಮತ್ತು ರಂಕಾ ಪರ ವಕೀಲರು ಮೌಖಿಕವಾಗಿ ಬೇಷರತ್ತಾದ ಕ್ಷಮೆಯಾಚಿಸಿದರು. ಇಂತಹ ಘಟನೆ ಮತ್ತೆ ನಡೆಯದಂತೆ ನೋಡಿಕೊಳ್ಳುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಅಕ್ಟೋಬರ್ 19ರಂದು ನೀಡಿದ್ದ ಆದೇಶದಲ್ಲಿ ಮ್ಯಾಜಿಸ್ಟ್ರೇಟ್, ಇಬ್ಬರು ನಾಯಕರ ವರ್ತನೆಯ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ಕ್ರಮಗಳು ಕಾನೂನಿಗೆ ಗೌರವ ತೋರಿಸದಿರುವುದನ್ನು ಸೂಚಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದರು. ಪ್ರತಿಭಟನೆಗೆ ಅನುಮತಿ ಇಲ್ಲದ ಸ್ಥಳಗಳಲ್ಲಿ ಪದೇಪದೇ ಪ್ರತಿಭಟನೆಗೆ ಕರೆ ನೀಡುತ್ತಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದರು.
ಮತ್ತೆ ಬಂಧನದಲ್ಲಿಡುವ ಅಗತ್ಯವಿಲ್ಲ ಎಂದ ನ್ಯಾಯಾಲಯ
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 135(3)ರ ಅಡಿಯಲ್ಲಿ ಶಾಂತಿಭಂಗ ತಡೆಯಲು ಕೈಗೊಳ್ಳಬಹುದಾದ ಕ್ರಮಗಳಿಗೆ, ಹೊಸ ಲಿಖಿತ ಭರವಸೆಗಳೊಂದಿಗೆ ಶಾಂತಿ ಕಾಪಾಡುವ ಬಾಂಡ್ಗಳನ್ನು ಪಡೆಯುವುದು ಸಾಕಾಗುತ್ತದೆ ಎಂದು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಭಿಪ್ರಾಯಪಟ್ಟರು.
ಹೀಗಾಗಿ, ಇಬ್ಬರನ್ನು ಮತ್ತೆ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಡಬೇಕೆಂಬ ದೆಹಲಿ ಪೊಲೀಸರ ಮನವಿಯನ್ನು ತಿರಸ್ಕರಿಸಿದರು. ಈ ಹಂತದಲ್ಲಿ ಅವರನ್ನು ಮುಂದುವರಿದು ಬಂಧನದಲ್ಲಿಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಇದಕ್ಕೂ ಮೊದಲು, ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರು ಹಿಂದಿನ ಶಾಂತಿ ಬಾಂಡ್ಗಳ ಉಲ್ಲಂಘನೆಯ ಆರೋಪ ಮತ್ತು ಲಭ್ಯವಿದ್ದ ಕಾನೂನುಬದ್ಧ ಪರಿಹಾರವನ್ನು ಮೊದಲು ಪಡೆಯದೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರ ಬಗ್ಗೆ ಇಬ್ಬರು ನಾಯಕರನ್ನು ಪ್ರಶ್ನಿಸಿದ್ದರು. ಬಳಿಕ ಇಬ್ಬರೂ ತಮ್ಮ ಅರ್ಜಿಗಳನ್ನು ಹಿಂಪಡೆದಿದ್ದರು.
ಈ ಪ್ರಕರಣದ ವಿಚಾರಣೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮುಂದುವರಿಯಲಿದೆ. ಜಾಮೀನುದಾರರ ವಿವರಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಮುಂದಿನ ವಿಚಾರಣೆ ಅಕ್ಟೋಬರ್ 23ರಂದು ನಡೆಯಲಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
