ಮನುಷ್ಯ ಮನುಷ್ಯರ ನಡುವೆ ಭಾವನೆಗಳನ್ನು ಹಂಚಿಕೊಳ್ಳಲು ಇರುವ ಏಕೈಕ ಮಾರ್ಗ ಭಾಷೆ. ಪ್ರತಿಯೊಂದು ದೇಶವು ತನ್ನ ಸಾಂಸ್ಕೃತಿಕ ಪರಂಪರೆ ಮತ್ತು ಭಾಷೆಗೆ ಹೆಸರುವಾಸಿಯಾಗಿದೆ. ಭಾರತದ ಅತ್ಯಂತ ಹಳೆಯ ಭಾಷೆಗಳಲ್ಲಿ ಕನ್ನಡವು ಒಂದು. ಭಾಷೆಗಳು ಸಮಯದೊಂದಿಗೆ ಬದಲಾಗುತ್ತವೆ, ಅದು ಮಾತನಾಡುವವರ ಪೀಳಿಗೆಯೊಂದಿಗೆ ವಿಕಸನಗೊಳ್ಳುತ್ತದೆ. ಆದರೆ ಕನ್ನಡ ಮಾತ್ರ ಎಂದಿಗೂ ಅಳಿಯದೆ, 2500 ವರ್ಷಗಳಿಂದ ಜೀವಂತವಾಗಿ ಉಳಿದಿದೆ. ಕನ್ನಡ ಕೇವಲ ನುಡಿಯಲ್ಲ, ಅದು ನಮ್ಮ ಅಂತರಂಗದ ಮಾತು.
ಹಲ್ಮಿಡಿಯಲ್ಲಿ ಹುಟ್ಟಿ, ಜ್ಞಾನಪೀಠದವರೆಗೆ ಬೆಳೆದ ಪಯಣ. ಕನ್ನಡ ನುಡಿಯು 2500 ವರ್ಷಗಳ ಇತಿಹಾಸವನ್ನು ಹೊಂದಿದೆ. ಕದಂಬರ ಕಾಲದ ಹಲ್ಮಿಡಿ ಶಾಸನದಲ್ಲಿ (ಕ್ರಿ.ಶ. 450) ಹುಟ್ಟಿ, ರಾಷ್ಟ್ರಕೂಟರ ಕಾಲದ ಕವಿರಾಜಮಾರ್ಗದಲ್ಲಿ ಬೆಳೆದು, ರನ್ನ-ಪಂಪರಿಂದ ಪೋಷಿಸಲ್ಪಟ್ಟು, ಪೂರ್ವದ ಹಳಗನ್ನಡ – ನಡುಗನ್ನಡ – ಹೊಸಗನ್ನಡವಾಗಿ ರೂಪಾಂತರಗೊಂಡು ಇಂದು ನಮ್ಮ ಮುಂದೆ ನಿಂತಿದೆ. ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿ ವಿಶ್ವದ ಅತ್ಯಂತ ವೈಜ್ಞಾನಿಕ ಲಿಪಿಗಳಲ್ಲಿ ಒಂದು. ಕನ್ನಡ ಭಾಷೆಯು ಭಾರತದ ಅತ್ಯಂತ ಪ್ರಸಿದ್ಧ ದ್ರಾವಿಡ ಭಾಷೆಗಳಲ್ಲಿ ಒಂದು. ಇದನ್ನು ಕರ್ನಾಟಕ ರಾಜ್ಯದಲ್ಲಿ ಪ್ರಧಾನವಾಗಿ ಮಾತನಾಡುತ್ತಾರೆ. ಸಂವಿಧಾನದಲ್ಲಿ ಲಿಖಿತಗೊಂಡ 22 ಭಾಷೆಗಳಲ್ಲಿ ಕನ್ನಡ ಭಾಷೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪಡೆದ ಎರಡನೇ ಭಾಷೆಯಾಗಿ ವಿಶಾಲ ಸಮೃದ್ಧ ಸಾಹಿತ್ಯವಾಗಿ ಬೆಳೆದು ನಿಂತಿದೆ. ಇದು ಜಗತ್ತಿನಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ 27ನೇ ಸ್ಥಾನದಲ್ಲಿದೆ ಮತ್ತು ಜಗತ್ತಿನಲ್ಲಿ ಸುಮಾರು 6 ಕೋಟಿ ಕನ್ನಡಿಗರು ಇದ್ದಾರೆ. ಕನ್ನಡದಂತಹ ಅದ್ಭುತ ಭಾಷೆ ಇನ್ನೊಂದಿಲ್ಲ. ಒಬ್ಬ ದೊಡ್ಡ ಕವಿ, ಒಬ್ಬ ದೊಡ್ಡ ಕಲಾವಿದ, ಒಬ್ಬ ದೊಡ್ಡ ಚಿತ್ರಗಾರ, ಒಬ್ಬ ದೊಡ್ಡ ಶಿಲ್ಪಿ ಎಲ್ಲರೂ ನಮ್ಮ ಕನ್ನಡದಲ್ಲಿ ಇದ್ದಾರೆ. ಇದು ನನ್ನ ಭಾಷೆ, ಇದು ಸಾವಿರಾರು ವರ್ಷಗಳಿಂದ ಮಹಾಕವಿಗಳು, ಶಿಲ್ಪಿಗಳನ್ನು, ರಾಜಾಧಿರಾಜರನ್ನು, ವೀರಾಧಿವೀರರನ್ನು, ರಸಋಷಿ ದಾರ್ಶನಿಕರನ್ನು ಹಡೆದಿರುವ ಭಾಷೆ ನನ್ನ ಕನ್ನಡ ಭಾಷೆ.
ಕನ್ನಡವನ್ನು ಬೆಳಗಿದ ಮಹಾನ್ ಚೇತನಗಳು
ಕನ್ನಡ ನುಡಿ ಕೇವಲ ರಾಜರಿಂದ ಬೆಳೆಯಲಿಲ್ಲ, ಕವಿಗಳಿಂದ, ಸಾಹಿತಿಗಳಿಂದ ಪ್ರಜ್ವಲಿಸಿತು. ರನ್ನ-ಪಂಪ ಜನಿಸಿದ ಪುಣ್ಯಬೀಡು ಈ ಕರ್ನಾಟಕ. ಈ ಮಣ್ಣಿನಲ್ಲಿ ಪ್ರೀತಿ ಇದೆ, ತ್ಯಾಗವಿದೆ, ಪರೋಪಕಾರ ಗುಣವಿದೆ, ಧೈರ್ಯವಿದೆ, ಶೌರ್ಯವಿದೆ, ಕರುಣೆಯಿದೆ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ವಿಶ್ವಮಾನವ ಸಂದೇಶ ಸಾರಿದ ಕುವೆಂಪು, ನಡೆದಾಡುವ ವಿಶ್ವಕೋಶ ಜಿ.ಎಸ್. ಶಿವರುದ್ರಪ್ಪ, ವರಕವಿ ಬೇಂದ್ರೆ , ಕಡಲತೀರದ ಭಾರ್ಗವ ಶಿವರಾಮ ಕಾರಂತ, ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಭಾರತ ಸಿಂಧೂ ರಶ್ಮಿಯ ವಿ.ಕೃ. ಗೋಕಾಕ್, ಸಮಗ್ರ ಸಾಹಿತ್ಯದ ಯು.ಆರ್. ಅನಂತಮೂರ್ತಿ, ನಾಟಕಕಾರ ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಹಾಗೂ ಇನ್ನೂ ಅನೇಕ ಮಹಾನ್ ವಿದ್ವಾಂಸರು, ಸಾಹಿತಿಗಳು, ಕವಿಗಳು, ಲೇಖಕರಿಂದ ಕನ್ನಡ ನುಡಿ ಪ್ರಜ್ವಲಿಸಿದೆ. ಕನ್ನಡ ಭಾಷಾ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳಿವೆ – ಜನಪದ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ, ನವೋದಯ, ನವ್ಯ ಸಾಹಿತ್ಯ. ಕನ್ನಡವೂ ಸಹ ಭಾಷೆ ಎಂಬ ಏಕತೆಯಲ್ಲಿ ವಿವಿಧತೆಯನ್ನು ತೋರಿಸುತ್ತದೆ. ಬಸವಣ್ಣನವರ ವಚನದಲ್ಲಿ ಕನ್ನಡ ಇದೆ, ಪುರಂದರದಾಸರ ಕೀರ್ತನೆಯಲ್ಲಿ ಕನ್ನಡ ಇದೆ, ಕುವೆಂಪುರವರ ಮಹಾಕಾವ್ಯದಲ್ಲಿ ಕನ್ನಡ ಇದೆ, ರೈತನ ಗಾದೆಯಲ್ಲಿ ಕನ್ನಡ ಇದೆ.
ಕರುನಾಡಿನ ವೈಭವ – ರಾಜವಂಶಗಳ ಕೊಡುಗೆ. ಕರ್ನಾಟಕದ ಇತಿಹಾಸವೇ ಕನ್ನಡದ ಇತಿಹಾಸ.
ಕನ್ನಡದ ಮೊದಲ ರಾಜವಂಶ ಬಹುಶಃ ಬನವಾಸಿಯ ಕದಂಬರು – ಕನ್ನಡದ ಮೊದಲ ದೊರೆ ಮಯೂರವರ್ಮನ ಆಳ್ವಿಕೆಯ ಕಾಲದಲ್ಲಿ ಕನ್ನಡ ತನ್ನ ತಲೆ ಎತ್ತಿತು. ತಲಕಾಡಿನ ಗಂಗರು, ಶಿಲ್ಪಕಲೆಯನ್ನು ಹುಟ್ಟುಹಾಕಿದ ಹೊಯ್ಸಳರು, ಚರಿತ್ರೆಯ ಪುಟಗಳಲ್ಲಿ ಸುವರ್ಣ ಯುಗವನ್ನು ಬರೆದು ಹೋಗಿರುವ ವಿಜಯನಗರ ಸಾಮ್ರಾಜ್ಯದ ಅರಸರು, ಬಾದಾಮಿ ಚಾಲುಕ್ಯರು, ಕಲ್ಯಾಣಿ ಚಾಲುಕ್ಯರು, ರಾಷ್ಟ್ರಕೂಟರು, ಮೈಸೂರು ಸಂಸ್ಥಾನದವರು ಇನ್ನೂ ಅನೇಕ ರಾಜಮನೆತನದವರು ಕನ್ನಡದ ವೈಭವೋಪೇತ ಇತಿಹಾಸಕ್ಕೆ ಮತ್ತು ಶ್ರೀಮಂತ ಶಿಲ್ಪಕಲೆ, ಸಾಹಿತ್ಯ, ಸಂಸ್ಕೃತಿಯ ಹುಟ್ಟು ಹಾಗೂ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪಶ್ಚಿಮ ಘಟ್ಟಗಳಿಂದ ಸಮೃದ್ಧವಾಗಿರುವ ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಭಾರತದ 6ನೇ ಅತಿ ದೊಡ್ಡ ಹಾಗೂ ಜನಸಂಖ್ಯೆಯ ಆಧಾರದಲ್ಲಿ 8ನೇ ಅತಿ ದೊಡ್ಡ ರಾಜ್ಯ. ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಆಗುಂಬೆ, ಹಂಪಿ, ಬಾದಾಮಿ, ಬೇಲೂರು-ಹಳೇಬೀಡು ಹೀಗೆ ಹಲವಾರು ಪ್ರವಾಸಿ ತಾಣಗಳ ತವರೂರು ನಮ್ಮ ಕನ್ನಡ ನಾಡು. ಮೈಸೂರು ನಗರ ನೂರಾರು ವರ್ಷಗಳಷ್ಟು ಇತಿಹಾಸ ಹೊಂದಿರುವ ಸಾಂಸ್ಕೃತಿಕ ವೈಭವಕ್ಕೆ ಜೀವಂತ ಸಾಕ್ಷಿಯಾಗಿದೆ. ದೇಶದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ, ತಮಿಳು ಶ್ರೇಷ್ಠ ಕೃತಿ ಶಿಲಪ್ಪದಿಗಾರಂನಲ್ಲಿ ಅಲ್ಲಲ್ಲಿ ಉಲ್ಲೇಖವುಳ್ಳ ಕರ್ನಾಟ, ಕುಂತಲದೇಶ, ಗ್ರೀಕ್ ಪ್ರಹಸನವೊಂದರಲ್ಲಿ ಶಬ್ದಗಳ ಉಲ್ಲೇಖವುಳ್ಳ ಕನ್ನಡ ಭಾಷೆ, ನಾಲ್ಕನೇ ಶತಮಾನದ ಹೊತ್ತಿಗೆ ಸ್ವತಂತ್ರ ರಾಜಕೀಯವನ್ನು ಹೊಂದಿದ ಕನ್ನಡ ಆಡಳಿತ, ಕ್ರಿ.ಶ. 5ನೇ ಶತಮಾನದ ಹೊತ್ತಿಗಾಗಲೇ ನಿರ್ದಿಷ್ಟ ಲಿಪಿಯುಳ್ಳ ಕನ್ನಡ ನುಡಿ, ಬಾದಾಮಿ ಚಾಲುಕ್ಯರ ಕಾಲಕ್ಕೆ ಮೊದಲ ಬಾರಿಗೆ ಸಂಪೂರ್ಣ ರಾಜಕೀಯ ಏಕತೆಯನ್ನು ಸಾಧಿಸಿದ ಕರ್ನಾಟಕ ಮತ್ತು ರಾಷ್ಟ್ರಕೂಟರ ನೃಪತುಂಗನ ಕಾಲಕ್ಕೆ ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ ಗೋದಾವರಿ ನದಿಯವರೆಗೆ ಕನ್ನಡ ನಾಡು ವ್ಯಾಪಿಸಿತ್ತು ಎಂಬುದಕ್ಕೆ ಆಧಾರಗಳಿವೆ.
20 ತುಂಡುಗಳಿಂದ 1 ಕರ್ನಾಟಕವಾದ ಕಥೆ
ಭಾರತದ ಸ್ವಾತಂತ್ರ್ಯ ಚಳವಳಿಯಷ್ಟೇ ರೋಚಕವಾದದ್ದು ಕರ್ನಾಟಕ ಏಕೀಕರಣ ಚಳವಳಿ. ಮುಸ್ಲಿಂ ದಕ್ಷಿಣ ದಂಡಯಾತ್ರೆ, ಕನ್ನಡ ಅರಸರ ಅವನತಿ, ನಂತರ ಬಂದ ಬ್ರಿಟಿಷರ ಒಡೆದು ಆಳುವ ನೀತಿ, ಕೆಲವರ ರಾಜಕೀಯ ಸ್ವಾರ್ಥಪರತೆ ಹಾಗೂ ಕನ್ನಡಿಗರಲ್ಲಿ ಏಕತೆ ಕೊರತೆಯಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಹೊತ್ತಿಗೆ ಕರ್ನಾಟಕ ರಾಜ್ಯ 20 ವಿವಿಧ ಆಡಳಿತ ಘಟಕಗಳಲ್ಲಿ ಹಂಚಿಹೋಗಿತ್ತು. 19ನೇ ಶತಮಾನದ ಅಂತ್ಯದಲ್ಲಿ ಮೂಡಿದ ರಾಷ್ಟ್ರೀಯತೆಯ ಪ್ರಭಾವದಿಂದ ನಡೆದ ಹೋರಾಟದ ಫಲವಾಗಿ ಇಂದಿನ ಅಖಂಡ ಕರ್ನಾಟಕ ರೂಪಗೊಂಡಿದೆ. ನವೆಂಬರ್ 1ರಂದು 1956ರಲ್ಲಿ ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಕರ್ನಾಟಕ ರಾಜ್ಯವನ್ನು ರೂಪಿಸಿದ ದಿನ. ಕರ್ನಾಟಕ ರಾಜ್ಯೋತ್ಸವ ಅಥವಾ ಕನ್ನಡ ದಿನ ಎಂದೂ ಕರೆಯುತ್ತಾರೆ. ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಅವರು 1905ರಲ್ಲಿಯೇ ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸು ಕಂಡಿದ್ದರು. ನಂತರ ಭಾರತವು ಗಣರಾಜ್ಯವಾಯಿತು ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ಪ್ರಾಂತ್ಯಗಳನ್ನು ರಚಿಸಲಾಯಿತು. ಕರ್ನಾಟಕವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿತ್ತು – ಮೈಸೂರು ರಾಜ್ಯ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮತ್ತು ಮದ್ರಾಸ್ ಕರ್ನಾಟಕ. ಈ ಎಲ್ಲಾ ಭಾಗಗಳಲ್ಲಿ ಕನ್ನಡ ಮಾತನಾಡುವವರಿದ್ದರು. ಕರ್ನಾಟಕ ಬಹುಸಂಖ್ಯಾತ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸುವ ಪ್ರಕ್ರಿಯೆ ಭರದಿಂದ ಸಾಗಿತು. ಅಂತಿಮವಾಗಿ 1956ರಲ್ಲಿ ಕರ್ನಾಟಕ ಏಕೀಕರಣವಾಯಿತು. ಕರ್ನಾಟಕ ರಾಜ್ಯದ ಮೊದಲ ಹೆಸರು ಮೈಸೂರು. ಏಕೆಂದರೆ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ರಾಜ್ಯವನ್ನು ಆಧರಿಸಿತ್ತು. ಮೈಸೂರು ರಾಜ್ಯವನ್ನು 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
ನಮ್ಮ ಬಾವುಟ, ನಮ್ಮ ನಾಡಗೀತೆ – ಕನ್ನಡದ ಅಸ್ಮಿತೆ. ಕರ್ನಾಟಕ ತನ್ನದೇ ಆದ ವಿಶಿಷ್ಟ ಭಾವನೆಯನ್ನು ಹೊಂದಿದೆ. ಕನ್ನಡ ಹೋರಾಟಗಾರ ಎಂ. ರಾಮಮೂರ್ತಿ ಅವರು ಹಳದಿ, ಕೆಂಪು ಬಳಸಿ ಧ್ವಜವನ್ನು ಸಿದ್ಧಪಡಿಸಿದರು. ಮೂಲತಃ ಹಳದಿ ಬಣ್ಣವು ಕನ್ನಡಾಂಬೆಯ ಸೆಳವು ಮತ್ತು ಕುಂಕುಮವನ್ನು, ಶಾಂತಿ ಮತ್ತು ಸಾಮರಸ್ಯವನ್ನು ಸೂಚಿಸಿದರೆ, ಕೆಂಪು ಬಣ್ಣವು ಕ್ರಾಂತಿ, ಧೈರ್ಯ ಮತ್ತು ತ್ಯಾಗವನ್ನು ಸೂಚಿಸುತ್ತದೆ. ಆರಂಭದಲ್ಲಿ ಕನ್ನಡ ಧ್ವಜದ ಮಧ್ಯದಲ್ಲಿ ಕರ್ನಾಟಕದ ಭೂಪಟ ಇತ್ತು. ಇಂದು ಕನ್ನಡ ನಾಡು ನುಡಿಯ ವೈಭವವು ವೈಶಿಷ್ಟ್ಯಪೂರ್ಣವಾದುದು. ನಾವು ಶ್ರೀಗಂಧದ ಬೀಡು, ಶಿಲ್ಪಕಲೆಯ ತವರೂರು, ಸಂಸ್ಕೃತಿಯ ನೆಲೆವೀಡು, ಹಚ್ಚ ಹಸುರಿನ ಸುಂದರ ಬೆಟ್ಟಗಳ, ಪವಿತ್ರ ನದಿಗಳ ನಾಡು. ಕರುನಾಡು ಎಂದು ಕರೆಯಲ್ಪಡುವ ಕರ್ನಾಟಕದ ಕನ್ನಡ ರಾಜ್ಯೋತ್ಸವವನ್ನು ನಾವು ಬಹಳ ಸಡಗರ-ಸಂಭ್ರಮ ಹಾಗೂ ಹೆಮ್ಮೆಯಿಂದ, ಅಸಾಧಾರಣ ವೈಭವದಿಂದ ಆಚರಿಸುತ್ತೇವೆ. ರಾಜ್ಯದಾದ್ಯಂತ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳನ್ನು ಹಾರಿಸಲಾಗುತ್ತದೆ ಮತ್ತು ಕುವೆಂಪು ರಚಿಸಿದ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ” ಮೊಳಗುವುದರಿಂದ ಇಡೀ ರಾಜ್ಯವು ಈ ದಿನದಂದು ಹಬ್ಬದ ನೋಟವನ್ನು ಧರಿಸುತ್ತದೆ. ನೋಡುವುದೇ ಒಂದು ಸಂಭ್ರಮ.
ಕನ್ನಡ ಉಳಿದರೆ ನಾವು ಉಳಿಯುತ್ತೇವೆ. ಇಂದು ಕನ್ನಡಕ್ಕೆ 2008ರಲ್ಲಿ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಆದರೆ ಕನ್ನಡ ಕೇವಲ ನವೆಂಬರ್ ತಿಂಗಳಲ್ಲಿ ನೆನಪಿಸಿಕೊಳ್ಳುವ ಭಾಷೆಯಾಗಬಾರದು. ಅದು ನಮ್ಮ ಮನೆಯಲ್ಲಿ, ನಮ್ಮ ಮನಸ್ಸಿನಲ್ಲಿ, ನಮ್ಮ ಮೊಬೈಲ್ನಲ್ಲಿ, ನಮ್ಮ ವ್ಯವಹಾರದಲ್ಲಿ ಇರಬೇಕು.
ಕನ್ನಡವನ್ನು ಕನ್ನಡಿಗರು ಮಾತನಾಡದಿದ್ದರೆ ಇನ್ನಾರು ಮಾತನಾಡುತ್ತಾರೆ. ಕನ್ನಡವನ್ನು ನಾವು ಉಳಿಸದಿದ್ದರೆ ಇನ್ನಾರು ಉಳಿಸುತ್ತಾರೆ. ಆದ್ದರಿಂದ ಬನ್ನಿ, ಕನ್ನಡ ಕೇವಲ ನುಡಿಯಲ್ಲ, ಅದು ನಮ್ಮಂತರಂಗದ ಮಾತು ಎಂದು ನಂಬಿ, ಕನ್ನಡದಲ್ಲಿ ಮಾತನಾಡೋಣ, ಕನ್ನಡದಲ್ಲಿ ಬರೆಯೋಣ, ಕನ್ನಡವನ್ನು ಬೆಳೆಸೋಣ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಜೈ ಕರ್ನಾಟಕ.
ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ
ಉಪನ್ಯಾಸಕರು ಲೇಖಕರು
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
