- ಟಿ. ನಟರಾಜ ಪಂಡಿತ್, ಸಾಮಾಜಿಕ ಕಾರ್ಯಕರ್ತ
ನನಗೆ ಬಾಲ್ಯದಿಂದಲೂ ಐತಿಹಾಸಿಕ ದೇವಾಲಯಗಳ ಬಗ್ಗೆ ಒಂದು ರೀತಿಯ ಅವ್ಯಕ್ತವಾದ ಸೆಳೆತವಿದೆ. ಗೋಪಾಲಕೃಷ್ಣ ಅಡಿಗರ ಕವನ ‘ಯಾವ ಮೋಹನ ಮುರಳಿ ಕರೆಯಿತು, ದೂರ ತೀರಕೆ ನಿನ್ನನು…’ ಎಂಬಂತೆ ಇದಕ್ಕೆ ನಿರ್ದಿಷ್ಟವಾದ ಕಾರಣವನ್ನು ಗುರುತಿಸಲು ಅಶಕ್ತನಾದರೂ ನನ್ನ ತಾಯಿಯ ಅಪಾರವಾದ ದೈವ ಭಕ್ತಿ ಹಾಗೂ ಊರಿನ ದೇವಾಲಯಗಳಲ್ಲಿ ನಡೆಯುತ್ತಿದ್ದ ವೈಭವಯುತವಾದ ಸಾಂಗವಾದ ಪೂಜೆಗಳು ಬಾಲ್ಯದಿಂದಲೇ ದೇವಾಲಯಗಳ ಬಗೆಗಿನ ಹೆಚ್ಚಿನ ಸೆಳೆತಕ್ಕೆ ಕಾರಣವಿರಬಹುದು.
ಬೆಳೆಯುತ್ತಾ ಹೋದಂತೆ ದೇವಾಲಯದ ಬಗೆಗಿನ ನನ್ನ ಓದು ಮತ್ತು ಅವಿನಾಭಾವ ಸಂಬಂಧ ಗಟ್ಟಿಯಾಗಿದ್ದರೂ ಹಳೆಯ ಗೋಪುರಗಳು, ಬಿರುಕು ಬಿಟ್ಟ ದೇವಾಲಯದ ಗೋಡೆಗಳು ನನ್ನ ಮನಸ್ಸನ್ನು ಆವರಿಸಿಕೊಂಡವು. ಈ ಚಿಂತನೆಯೇ ದೇಗುಲದ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು, ಅದು ತನ್ನ ಗತ ವೈಭವವನ್ನು ಮೈಗೂಡಿಸಿಕೊಂಡು ಸದೃಢವಾಗಿ ಎದ್ದು ನಿಲ್ಲುವಂತೆ ಮಾಡಬೇಕು ಎಂದು ಮನಸ್ಸಿನಲ್ಲಿ ದೃಢ ನಿಶ್ಚಯವನ್ನು ಹುಟ್ಟಿಸಿತು. ಭಗವಂತನ ಕೃಪೆ ನನ್ನನ್ನು ಐತಿಹಾಸಿಕ ದೇವಾಲಯಗಳ ಸಂರಕ್ಷಣೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡಿತು. ಇದಕ್ಕೆ ಪೂರಕವಾಗಿ ಸ್ನೇಹಿತರ ಬೆಂಬಲ, ಗ್ರಾಮಸ್ಥರ ಸಹಕಾರ, ಅರ್ಚಕರ ಪ್ರೀತಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆ ಐತಿಹಾಸಿಕ ದೇವಾಲಯಗಳ ಸಂರಕ್ಷಣೆಯ ದಾರಿಯಲ್ಲಿ ನಡೆಯಲು ಇನ್ನಷ್ಟು ಉತ್ತೇಜಿಸಿತು.
ಅಗ್ರಹಾರ ಬೆಳಗಲಿಯ ದೇವಾಲಯ
ಅಗ್ರಹಾರ ಬೆಳಗುಲಿ ಗ್ರಾಮವು ಹೆಸರೇ ಸೂಚಿಸುವಂತೆ ಹೊಯ್ಸಳರ ದೊರೆ ಎರಡನೇ ವೀರ ಬಲ್ಲಾಳನ ಕಾಲದಲ್ಲಿ ಅಂದರೆ ಶಾಲಿವಾಹನ ಶಕೆ 1210ರಲ್ಲಿ (ಕ್ರಿ.ಶ.1288) ಚತುರ್ವೇದ ಪಾರಂಗತರಿಂದ ಕೂಡಿದ ಒಂದು ‘ಅಗ್ರಹಾರ’ವಾಗಿತ್ತು. ಹೊಯ್ಸಳರ ದೊರೆ ಎರಡನೇ ವೀರ ಬಲ್ಲಾಳನಿಗೆ ದಂಡನಾಯಕನಾಗಿದ್ದ ಕೇಶವ ದಂಡನಾಯಕ ಎಂಬವನು ಕೇಶವೇಶ್ವರ ದೇವಾಲಯವನ್ನು ಕಟ್ಟಿಸಿದನು ಎಂದು ಹಾಸನ ಜಿಲ್ಲೆಯ ಶಾಸನ ಸಂಪುಟ 8ರ ಶಾಸನಗಳಿಂದ ತಿಳಿದು ಬರುತ್ತದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಿಂದ ತಿಪಟೂರು ಹೆದ್ದಾರಿಯಲ್ಲಿ ಬರುವ ನುಗ್ಗೆಹಳ್ಳಿಯಿಂದ ಕೇವಲ ಏಳು ಕಿಲೋಮೀಟರ್ ದೂರದಲ್ಲಿ ಈ ದೇವಾಲಯವಿದೆ. ಜನರು ಈ ದೇವಾಲಯವನ್ನು ‘ಬೆಟ್ಟೇಶ್ವರ ದೇವಾಲಯ’ ಎಂದೂ ಕರೆಯುತ್ತಾರೆ.
ಇನ್ನೊಂದು ವಿಶೇಷವೆಂದರೆ ಇದೊಂದು ದ್ವಿಕೂಟ ದೇವಾಲಯ ಅಂದರೆ, ಒಂದೇ ದೇವಾಲಯದಲ್ಲಿ 2 ಗರ್ಭ ಗುಡಿಗಳನ್ನು ಹೊಂದಿರುವಂತದ್ದು. ಶಿವ ಹೆಚ್ಚು – ವಿಷ್ಣು ಹೆಚ್ಚು ಎಂದು ತಾರತಮ್ಯ ಎಣಿಸುವವರ ಮನಸ್ಸಿನಲ್ಲಿ ಇಬ್ಬರೂ ಒಂದೇ- “ಶಿವಸ್ಯ ಹೃದಯಂ ವಿಷ್ಣುಃ – ವಿಷ್ಣೋಶ್ಚ ಹೃದಯಂ ಶಿವಃ” ಎಂಬ ಅಭೇದ ಭಾವ ಸಮನ್ವಯತೆಯನ್ನು ಸಾರುವ ಹೆಗ್ಗಳಿಕೆ ಈ ದೇವಾಲಯಕ್ಕಿದೆ. ಕೇಶವನ ಗರ್ಭಗುಡಿಯು ದಕ್ಷಿಣಾಭಿಮುಖವಾಗಿದೆ ಮತ್ತು ಶಿವನ ಗರ್ಭಗುಡಿಯು ಪೂರ್ವಾಭಿಮುಖವಾಗಿದೆ. ಇವೆರಡನ್ನು ಸೇರಿಸಿದಂತಿರುವ ಮಂಟಪವು ವಿಶಾಲವಾಗಿದ್ದು ಅನೇಕ ತಿರುಗಣಿ ಕಂಬಗಳನ್ನು ಹೊಂದಿದೆ. ಈ ದೇವಾಲಯಕ್ಕೆ ಹೊಂದಿಕೊಂಡಂತೆ ಎರಡು ಕೆರೆಗಳಿದ್ದು ಅವುಗಳನ್ನು ಶಾಸನಗಳಲ್ಲಿ ‘ಕೇಶವ ಸಮುದ್ರ’ ಮತ್ತು ‘ಲಕ್ಷ್ಮಿ ಸಮುದ್ರ’ ಎಂದು ಕರೆಯಲಾಗಿದೆ. ಪ್ರಸ್ತುತ ಈ ಕೆರೆಗಳನ್ನು ‘ಗಂಗಮ್ಮನ ಕೆರೆ’ ಎಂದು ಜನರು ಪೂಜಿಸುತ್ತಾರೆ.
ದೇವಾಲಯದಲ್ಲಿ ಸುಂದರವಾಗಿ ಕೆತ್ತಲ್ಪಟ್ಟಿರುವ 4 ಶಾಸನಗಳಿದ್ದು, ಅವು ದೇವಾಲಯದ ಗೋಡೆಗೆ ಹೊಂದಿಕೊಂಡಂತೆ ಇದ್ದು ಶಾಶ್ವತವಾಗಿ ಉಳಿದಿವೆ. ಇವುಗಳು ದೇವಾಲಯ ನಿರ್ಮಾಣ ಕಾಲ ಮತ್ತು ದೇವಾಲಯದ ನಿತ್ಯೋತ್ಸವ, ಮಾಸೋತ್ಸವ, ಸಂವತ್ಸರೋತ್ಸವಗಳಿಗೆ ಕೊಡಲಾಗಿರುವ ದಾನಗಳ ವಿವರಗಳನ್ನು ಸೂಚಿಸುತ್ತವೆ. ದೇವಾಲಯದ ನವರಂಗ ಮಂಟಪದಲ್ಲಿ ಸುಂದರವಾದ ಸರಸ್ವತಿ, ಷಣ್ಮುಖ, ಗಣೇಶ ಮತ್ತು ಸಪ್ತಮಾತೃಕೆಯರ ವಿಗ್ರಹಗಳಿವೆ. ಶಿವನ ಗರ್ಭಗುಡಿಯ ದ್ವಾರದಲ್ಲಿನ ‘ಶಿವನ ಪರಿವಾರ’ದ ಪೂರ್ಣ ಚಿತ್ರಣವನ್ನು ನೀಡುವ ಕೆತ್ತನೆ ಮತ್ತು ಇದೇ ರೀತಿಯಲ್ಲಿ ನಟರಾಜನ ತಾಂಡವ ನೃತ್ಯದ ಸೊಗಸನ್ನು ವೀಕ್ಷಿಸುತ್ತಿರುವ ಶಿವನ ಗಣಗಳ ಅಪೂರ್ವ ಕೆತ್ತನೆ ಗಮನ ಸೆಳೆಯುತ್ತದೆ.
ಅಭಿವೃದ್ಧಿಯ ಕಡೆಗೆ
ಈ ದೇವಾಲಯವು ಅನ್ಯಾನ್ಯ ಕಾರಣಗಳಿಂದ ಶಿಥಿಲತೆಯನ್ನು ತಲುಪಿತ್ತು ಮತ್ತು ಪ್ರಚಾರದ ಕೊರತೆಯಿಂದ ಅಜ್ಞಾತವಾಗಿತ್ತು. ಪ್ರಸ್ತುತ ದೇವಾಲಯದ ಅಭಿವೃದ್ಧಿಗೆ ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆಯಿಂದ ನಿರಂತರವಾದ ಅಭಿವೃದ್ಧಿ ಪರ ಚಟುವಟಿಕೆಗಳು ನಡೆದಿವೆ. ಅದರೊಂದಿಗೆ ದೊಡ್ದ ಪ್ರಮಾಣದ ರುದ್ರಾಭಿಷೇಕ, ಗ್ರಾಮಸ್ಥರಿಗೆ, ಇತಿಹಾಸಾಸಕ್ತರಿಗೆ, ಪ್ರವಾಸಿಗರಿಗೆ ದೇವಾಲಯದ ಭವ್ಯ ಇತಿಹಾಸವನ್ನು ವಿವರಿಸುವ ಫಲಕ ಅನಾವರಣ, ದೇವಾಲಯಕ್ಕೆ ನಾಗಾ ಸಾಧುಗಳ ಭೇಟಿಯ ಕಾರಣದಿಂದ ಹೆಚ್ಚಿನ ಜನರ ಗಮನ ಸೆಳೆದಿದೆ.
ದೇವಾಲಯದ ಐತಿಹಾಸಿಕ ಕೊಳದ ಪೂರ್ಣ ಸ್ವಚ್ಛತೆಯಿಂದ ದೇವಾಲಯಕ್ಕೆ ಹೆಚ್ಚಿನ ಕಳೆ ಬಂದಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಯ ವತಿಯಿಂದ ದೇವಾಲಯದ ಸುತ್ತ 50 ಬಗೆಯ ವಿವಿಧ ಹೂವಿನ ಗಿಡಗಳ ಸಸಿ ನೆಡುವಿಕೆ ಕಾರ್ಯವೂ ಇತ್ತೀಚೆಗೆ ನಡೆದಿದೆ. ಒಟ್ಟಿನಲ್ಲಿ ಈ ದೇವಾಲಯವು ತನ್ನ ಎಲ್ಲಾ ಗತವೈಭವಗಳನ್ನು ಮೈಗೂಡಿಸಿಕೊಳ್ಳುವತ್ತ ಹೆಜ್ಜೆಯಿಡುತ್ತಿದೆ. ಐತಿಹಾಸಿಕ ದೇವಾಲಯಗಳು ದುಸ್ಥಿತಿಯಲ್ಲಿ ಇರುವುದನ್ನು ಕಂಡು ಅವುಗಳ ಸಂರಕ್ಷಣೆ ಬಗ್ಗೆ ಕೇವಲ ಕಾಟಾಚಾರದ ಮಾತುಗಳನ್ನು ಆಡದೆ, ಪ್ರಾಮಾಣಿಕವಾಗಿ ಸದ್ದಿಲ್ಲದೇ ನಡೆಯುತ್ತಿರುವ ಈ ದೇವಾಲಯದ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಗಳು ‘ಕೃತಿ ರೂಪ – ದೇವಾಲಯ ದರ್ಶನ’ವೇ ಆಗಿದೆ.
