ನವದೆಹಲಿ: ಶಿಕ್ಷಣವೆಂದರೆ ಕೇವಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದೋ ಅಥವಾ ಪದವಿ ಪಡೆಯುವುದೋ ಅಲ್ಲ; ಬದಲಾಗಿ ಮಗುವಿಗೆ ಕಲಿಯುವ ಆತ್ಮವಿಶ್ವಾಸವನ್ನು, ನೈಜ ಜಗತ್ತನ್ನು ಎದುರಿಸುವ ಕೌಶಲ್ಯಗಳನ್ನು ಮತ್ತು ದೊಡ್ಡ ಕನಸು ಕಾಣುವ ಅವಕಾಶವನ್ನು ನೀಡುವುದು. ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ಸಾರ್ವಜನಿಕ ಸೇವೆಯ ಪ್ರಯಾಣದಲ್ಲಿ ಈ ವಿಶಾಲ ಆಲೋಚನೆಗೆ ಅಗ್ರಸ್ಥಾನ ಸಿಕ್ಕಿದೆ. ಮೂಲಭೂತ ಕಲಿಕೆ, ಶಿಕ್ಷಕರ ತರಬೇತಿ, ಡಿಜಿಟಲ್ ಶಿಕ್ಷಣ, ಸಂಶೋಧನೆ ಮತ್ತು ಭಾರತೀಯ ಭಾಷೆಗಳಲ್ಲಿ ಕಲಿಕೆಯ ಮೂಲಕ ಮಗುವನ್ನು ಕೇವಲ ಪರೀಕ್ಷೆಗಲ್ಲ, ಜೀವನಕ್ಕೇ ಸಿದ್ಧಪಡಿಸುವ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವತ್ತ ಗಮನಹರಿಸಲಾಗಿದೆ.
2014ರಿಂದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದ್ದು, 2020ರ ರಾಷ್ಟ್ರೀಯ ಶಿಕ್ಷಣ ನೀತಿ (NEP) ಇದಕ್ಕೆ ಬಲವಾದ ಚೌಕಟ್ಟು ಒದಗಿಸಿದೆ. ಪ್ರತಿ ಮಗುವೂ ಕಲಿಯಲು, ಬೆಳೆಯಲು ಮತ್ತು ಬದಲಾಗುತ್ತಿರುವ ಭಾರತಕ್ಕೆ ಸಿದ್ಧರಾಗಲು ಅವಕಾಶ ಕಲ್ಪಿಸುವುದೇ ಇದರ ಮುಖ್ಯ ಉದ್ದೇಶ.
ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಆಗುತ್ತಿರುವ ಈ ಪ್ರಮುಖ ಬದಲಾವಣೆಗಳನ್ನು ಈ ಕೆಳಗಿನ ಪ್ರಮುಖ ಅಂಶಗಳ ಮೂಲಕ ತಿಳಿಯಬಹುದು:
ಅಡಿಪಾಯದ ಹಂತಕ್ಕೆ ಒತ್ತು:
NEP 2020 ಅಡಿಯಲ್ಲಿ ಮಗುವಿನ ಪ್ರಾಥಮಿಕ ಶಾಲಾ ಪ್ರವೇಶಕ್ಕೂ ಮುನ್ನವೇ ಕಲಿಕೆ ಆರಂಭವಾಗಬೇಕೆಂಬ ಮಹತ್ವದ ಬದಲಾವಣೆ ತರಲಾಗಿದೆ. 1ನೇ ತರಗತಿಗೆ ಬರುವ ಮಕ್ಕಳಿಗಾಗಿ ‘ವಿದ್ಯಾ ಪ್ರವೇಶ’ದಡಿ 3 ತಿಂಗಳ ಆಟ ಆಧಾರಿತ ಸಿದ್ಧತಾ ಮಾಡ್ಯೂಲ್ ಜಾರಿಯಲ್ಲಿದೆ. 3 ರಿಂದ 8 ವರ್ಷದ ಮಕ್ಕಳಿಗಾಗಿ ‘ಜಾದೂ ಪಿತಾರಾ’ ಮತ್ತು ಮೂಲಭೂತ ಸಾಕ್ಷರತೆಗಾಗಿ ‘ನಿಪುಣ ಭಾರತ ಮಿಷನ್’ ರೂಪಿಸಲಾಗಿದೆ. ಇಲ್ಲಿ “ಮಗು ಎಷ್ಟು ಅಂಕ ಗಳಿಸಿದೆ?” ಎನ್ನುವುದಕ್ಕಿಂತ “ಏನು ಕಲಿತಿದೆ?” ಎಂಬುದಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ.
ಹೊಂದಿಕೊಳ್ಳುವ ಕಲಿಕಾ ಪದ್ಧತಿ:
ಹಳೆಯ ಕಂಠಪಾಠ ಶಿಕ್ಷಣಕ್ಕೆ ತಿಲಾಂಜಲಿ ನೀಡಿ, ಸಮಗ್ರ ಹಾಗೂ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲಾಗಿದೆ. ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು (NCF) ಚಟುವಟಿಕೆ ಆಧಾರಿತ ಕಲಿಕೆ ಮತ್ತು ವಿಮರ್ಶಾತ್ಮಕ ಚಿಂತನೆಗೆ ಆದ್ಯತೆ ನೀಡುತ್ತದೆ. ಸಮಗ್ರ ಶಿಕ್ಷಣದಡಿ 6ರಿಂದ 12ನೇ ತರಗತಿಯವರೆಗೆ ವೃತ್ತಿಪರ ಹಾಗೂ ಕೌಶಲ್ಯ ಶಿಕ್ಷಣವನ್ನು (NSQF) ಪರಿಚಯಿಸಲಾಗಿದೆ.
ಶಿಕ್ಷಕರಿಗಾಗಿ ವಿಶೇಷ ತರಬೇತಿ:
ಬೋಧನಾ ಗುಣಮಟ್ಟವನ್ನು ಸುಧಾರಿಸಲು ‘ನಿಷ್ಠಾ’ (NISHTHA) ಮತ್ತು ದೀಕ್ಷಾ (DIKSHA) ವೇದಿಕೆಗಳ ಮೂಲಕ ಶಿಕ್ಷಕರಿಗೆ ಆನ್ಲೈನ್ ತರಬೇತಿ ನೀಡಲಾಗುತ್ತಿದೆ. ಜತೆಗೆ ಸಮಗ್ರ ಶಿಕ್ಷಕ ಶಿಕ್ಷಣ ಕಾರ್ಯಕ್ರಮ (ITEP) ಹಾಗೂ ಮಾಳವೀಯ ಮಿಷನ್ ತರಬೇತಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಡಿಜಿಟಲ್ ಶಿಕ್ಷಣ ಮತ್ತು ತಂತ್ರಜ್ಞಾನ:
ಕೋವಿಡ್ ಕಲಿಸಿದ ಪಾಠದಿಂದ ಎಚ್ಚೆತ್ತುಕೊಂಡು ದೀಕ್ಷಾ, ಪಿಎಂ ಇ-ವಿದ್ಯಾ ಮತ್ತು ಎನ್ಡಿಇಎಆರ್ (NDEAR) ಮುಂತಾದ ಡಿಜಿಟಲ್ ವೇದಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಎಲ್ಲಿಂದಲಾದರೂ ಕಲಿಯುವ ಅವಕಾಶ ಕಲ್ಪಿಸಲಾಗಿದೆ.
ಏಕೀಕೃತ ಶೈಕ್ಷಣಿಕ ದಾಖಲೆ (APAAR ID):
“ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ಐಡಿ” (APAAR ID) ಪರಿಕಲ್ಪನೆಯು ವಿದ್ಯಾರ್ಥಿಗಳ ಕ್ರೆಡಿಟ್ಗಳು, ಪ್ರಮಾಣಪತ್ರಗಳು ಮತ್ತು ಅಂಕಪಟ್ಟಿಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ.
ಉನ್ನತ ಶಿಕ್ಷಣದಲ್ಲಿ ಸುಲಭ ಪ್ರವೇಶ:
NEP 2020ರ ಅಡಿಯಲ್ಲಿ ಬಹು ಪ್ರವೇಶ-ನಿರ್ಗಮನ, ರಾಷ್ಟ್ರೀಯ ಕ್ರೆಡಿಟ್ ಚೌಕಟ್ಟು (NCrF) ಮತ್ತು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ (ABC) ಮೂಲಕ ವಿದ್ಯಾರ್ಥಿಗಳು ತಮ್ಮ ಇಷ್ಟದ ಕೋರ್ಸ್ಗಳನ್ನು ಹೊಂದಿಕೊಳ್ಳುವ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಆರ್ಥಿಕ ನೆರವಿಗಾಗಿ ‘ಪಿಎಂ-ವಿದ್ಯಾಲಕ್ಷ್ಮಿ’
ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ಅಡಚಣೆಯಾಗಬಾರದು ಎಂಬ ಉದ್ದೇಶದಿಂದ ನವೆಂಬರ್ 2024ರಲ್ಲಿ ‘ಪಿಎಂ-ವಿದ್ಯಾಲಕ್ಷ್ಮಿ’ ಯೋಜನೆಯನ್ನು ತರಲಾಗಿದೆ. ಇದರಡಿ ಮೇಲಾಧಾರ-ರಹಿತ ಸಾಲಗಳು ಹಾಗೂ ವಾರ್ಷಿಕ 8 ಲಕ್ಷ ರೂ.ವರೆಗೆ ಆದಾಯವಿರುವ ಕುಟುಂಬಗಳಿಗೆ ಬಡ್ಡಿ ವಿನಾಯಿತಿ ಸೌಲಭ್ಯವಿದೆ.
ಸಂಶೋಧನೆಗೆ ಉತ್ತೇಜನ:
ಭಾರತದಲ್ಲಿ ಸಂಶೋಧನೆಯ ಗುಣಮಟ್ಟ ಹೆಚ್ಚಿಸಲು ‘ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ’ (ANRF) ರಚಿಸಲಾಗಿದೆ. ಅಲ್ಲದೆ, ‘ಒನ್ ನೇಷನ್ ಒನ್ ಸಬ್ಸ್ಕ್ರಿಪ್ಷನ್’ (ONOS) ಮೂಲಕ ಸಾವಿರಾರು ಜಾಗತಿಕ ಸಂಶೋಧನಾ ಜರ್ನಲ್ಗಳು ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗಿದೆ.
ಭಾರತೀಯ ಭಾಷೆಗಳಿಗೆ ಆದ್ಯತೆ:
ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಕಲಿಯಲು ಒತ್ತು ನೀಡಲಾಗಿದ್ದು, ‘ಭಾರತೀಯ ಭಾಷಾ ಪುಸ್ತಕ ಯೋಜನೆ’ಯ ಮೂಲಕ ಸ್ಥಳೀಯ ಭಾಷೆಗಳಲ್ಲಿ ಅಧ್ಯಯನ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ಉನ್ನತ ಶಿಕ್ಷಣದಲ್ಲೂ ‘ಭಾರತೀಯ ಜ್ಞಾನ ವ್ಯವಸ್ಥೆ’ಗೆ (IKS) ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ.
ಪರಾಖ್ (PARAKH) ಮೂಲಕ ಮೌಲ್ಯಮಾಪನ:
ಕೇವಲ ಅಂಕಗಳಿಕೆಗಿಂತ ವಿದ್ಯಾರ್ಥಿಗಳ ನಿಜವಾದ ಜ್ಞಾನವನ್ನು ಅರಿಯಲು ‘ಪರಾಖ್’ ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಜತೆಗೆ ಮುಂದಿನ ಸವಾಲಾದ ಕೃತಕ ಬುದ್ಧಿಮತ್ತೆ (AI) ಯುಗಕ್ಕೂ ಶಿಕ್ಷಣ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗುತ್ತಿದೆ.
ವಿವಿಧ ರಾಜ್ಯಗಳ ನಡುವಿನ ವ್ಯತ್ಯಾಸಗಳು ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಂತಹ ಸವಾಲುಗಳಿದ್ದರೂ, ಭಾರತದ ಶಿಕ್ಷಣ ವ್ಯವಸ್ಥೆಯು ಈಗ ಬದಲಾವಣೆಯತ್ತ ದಾಪುಗಾಲಿಟ್ಟಿದೆ. ಇದು ಕೇವಲ ಪರೀಕ್ಷಾ ಕೇಂದ್ರಿತ ಶಿಕ್ಷಣವಲ್ಲದೆ, ವಿಕಸಿತ ಭಾರತದ ಕನಸಿಗೆ ತಕ್ಕಂತೆ ಯುವಕರನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ‘ಸೇವೆಯ 25 ವರ್ಷಗಳ’ ಶೈಕ್ಷಣಿಕ ಕ್ರಾಂತಿಯಾಗಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
