ಜಗತ್ತಿನ 75ಕ್ಕೂ ಅಧಿಕ ಪ್ರಾಚೀನ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಸಮುದಾಯಗಳ ಹಿರಿಯರು, ವಿದ್ವಾಂಸರು ಹಾಗೂ ಪ್ರತಿನಿಧಿಗಳು 2027ರ ಜನವರಿಯಲ್ಲಿ ಗುಜರಾತ್ನ ಸೂರತ್ನಲ್ಲಿ ನಡೆಯಲಿರುವ 9ನೇ ICCS ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದಿನ ಜಾಗತಿಕ ಸವಾಲುಗಳಿಗೆ ಪೂರ್ವಜರ ಜ್ಞಾನ ಮತ್ತು ಪರಂಪರೆಯ ಅರಿವು ಹೇಗೆ ಪರಿಹಾರ ಒದಗಿಸಬಲ್ಲದು ಎಂಬ ಕುರಿತು ಇಲ್ಲಿ ಚರ್ಚೆ ನಡೆಯಲಿದೆ.
ಸೂರತ್: ಇಂಟರ್ನ್ಯಾಷನಲ್ ಸೆಂಟರ್ ಫಾರ್ ಕಲ್ಚರಲ್ ಸ್ಟಡೀಸ್ (ICCS) ಆಯೋಜಿಸುತ್ತಿರುವ 9ನೇ ತ್ರೈವಾರ್ಷಿಕ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಹಿರಿಯರ ಸಮಾಗಮವು 2027ರ ಜನವರಿ 29ರಿಂದ ಫೆಬ್ರವರಿ 2ರವರೆಗೆ ಗುಜರಾತ್ನ ಸೂರತ್ನಲ್ಲಿರುವ ಸರ್ದಾರ್ ವಲ್ಲಭಭಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SVNIT)ಯಲ್ಲಿ ನಡೆಯಲಿದೆ.
‘ಸಮಕಾಲೀನ ಸವಾಲುಗಳಲ್ಲಿ ಪೂರ್ವಜರ ಜ್ಞಾನ’ ಎಂಬ ವಿಷಯದಡಿ ನಡೆಯಲಿರುವ ಈ ಸಮ್ಮೇಳನದಲ್ಲಿ ಜಗತ್ತಿನ 75ಕ್ಕೂ ಅಧಿಕ ಪ್ರಾಚೀನ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಸಮುದಾಯಗಳನ್ನು ಪ್ರತಿನಿಧಿಸುವ ಸುಮಾರು 400 ಮಂದಿ ಭಾಗವಹಿಸಲಿದ್ದಾರೆ. ಸಾಂಪ್ರದಾಯಿಕ ಜ್ಞಾನ ಹೊಂದಿರುವ ಹಿರಿಯರು, ವಿದ್ವಾಂಸರು, ಸಮುದಾಯಗಳ ಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಪರಿಣತರು ಸೇರಿದಂತೆ ಹಲವು ಗಣ್ಯರು ಈಗಾಗಲೇ ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದಾರೆ.
ಪ್ರಾಚೀನ ನಾಗರಿಕತೆಗಳು ಮತ್ತು ಸಾಂಪ್ರದಾಯಿಕ ಸಮುದಾಯಗಳ ಜ್ಞಾನ, ಮೌಲ್ಯಗಳು ಹಾಗೂ ಆಚರಣೆಗಳು ಇಂದಿನ ಜಗತ್ತು ಎದುರಿಸುತ್ತಿರುವ ಸವಾಲುಗಳಿಗೆ ಅರ್ಥಪೂರ್ಣ ಪರಿಹಾರಗಳನ್ನು ಒದಗಿಸಲು ಹೇಗೆ ಸಹಕಾರಿಯಾಗಬಲ್ಲವು ಎಂಬುದನ್ನು ಈ ಸಮ್ಮೇಳನದಲ್ಲಿ ಚರ್ಚಿಸಲಾಗುತ್ತದೆ.
ಸ್ಥಳೀಯ ಮೂಲನಿವಾಸಿಗಳು, ಸಾಂಪ್ರದಾಯಿಕ ಸಮುದಾಯಗಳು, ಶಿಕ್ಷಣ ತಜ್ಞರು, ನಾಗರಿಕ ಸಮಾಜದ ಸಂಘಟನೆಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಸೇರಿ ತಮ್ಮ ಜ್ಞಾನ ಮತ್ತು ಅನುಭವಗಳನ್ನು ಹಂಚಿಕೊಳ್ಳಲು, ಪರಸ್ಪರ ಕಲಿಯಲು ಹಾಗೂ ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳಲು ಈ ಸಮ್ಮೇಳನ ಅವಕಾಶ ಕಲ್ಪಿಸಲಿದೆ.
ಈ ಸಮ್ಮೇಳನದಲ್ಲಿ ಪರಸ್ಪರ ಸಂಬಂಧ ಹೊಂದಿರುವ ಐದು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಅವುಗಳೆಂದರೆ:
- ಜ್ಞಾನ ವ್ಯವಸ್ಥೆಗಳು ಮತ್ತು ಪರಿಸರ ಆಡಳಿತ.
- ತಲೆಮಾರುಗಳ ನಡುವಿನ ಕಲಿಕೆ.
- ಸಮುದಾಯಗಳ ನಾಯಕತ್ವ.
- ತಂತ್ರಜ್ಞಾನ ಮತ್ತು ಡಿಜಿಟಲ್ ಭವಿಷ್ಯ.
- ಆಧ್ಯಾತ್ಮಿಕ ಹಾಗೂ ನೈತಿಕ ತತ್ವಗಳು.
ಸಾಂಪ್ರದಾಯಿಕ ಜ್ಞಾನವು ಭೂಮಿಯ ಸುಸ್ಥಿರತೆ ಮತ್ತು ಪರಿಸರ ಸಂರಕ್ಷಣೆಗೆ ನೀಡಬಲ್ಲ ಕೊಡುಗೆ, ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಜ್ಞಾನ ಮತ್ತು ಮೌಲ್ಯಗಳನ್ನು ವರ್ಗಾಯಿಸುವ ವಿಧಾನ, ಸಮುದಾಯ ಆಧಾರಿತ ಆಡಳಿತ ವ್ಯವಸ್ಥೆ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಲು ಡಿಜಿಟಲ್ ತಂತ್ರಜ್ಞಾನಗಳ ಜವಾಬ್ದಾರಿಯುತ ಬಳಕೆ ಹಾಗೂ ಸಂವಾದ, ಸಾಮರಸ್ಯ, ಶಾಂತಿ ಮತ್ತು ಸಮಕಾಲೀನ ಸಂಘರ್ಷಗಳ ಪರಿಹಾರದಲ್ಲಿ ಆಧ್ಯಾತ್ಮಿಕ ಮತ್ತು ನೈತಿಕ ತತ್ವಗಳ ಪಾತ್ರದ ಕುರಿತು ಈ ವಿಷಯಗಳಲ್ಲಿ ಚರ್ಚಿಸಲಾಗುತ್ತದೆ.
ಸಮ್ಮೇಳನದ ಪ್ರಮುಖ ಉದ್ದೇಶವೆಂದರೆ ಹಿರಿಯರು ಮತ್ತು ಸಾಂಪ್ರದಾಯಿಕ ಜ್ಞಾನ ಹೊಂದಿರುವವರು ತಮ್ಮ ಅನುಭವ ಹಾಗೂ ಜ್ಞಾನವನ್ನು ಯುವ ಪೀಳಿಗೆ, ವಿದ್ವಾಂಸರು ಮತ್ತು ವಿಶಾಲ ಸಮುದಾಯದೊಂದಿಗೆ ಹಂಚಿಕೊಳ್ಳಲು ಅವಕಾಶ ಕಲ್ಪಿಸುವುದು. ಪ್ರಾಚೀನ ಜ್ಞಾನ ಮತ್ತು ಇಂದಿನ ಜೀವನದ ನಡುವೆ ಸೇತುವೆ ನಿರ್ಮಿಸುವುದು ಈ ಸಮ್ಮೇಳನದ ಆಶಯವಾಗಿದೆ. ನಮ್ಮ ಕಾಲದ ಪ್ರಮುಖ ಸವಾಲುಗಳಿಗೆ ಸಾಂಪ್ರದಾಯಿಕ ಜ್ಞಾನವು ಅಮೂಲ್ಯವಾದ ಮಾರ್ಗದರ್ಶನ ನೀಡಬಲ್ಲದು ಎಂಬುದನ್ನು ಇದು ಗುರುತಿಸುತ್ತದೆ.
ವಿವಿಧ ಸಂಸ್ಕೃತಿಗಳು ಮತ್ತು ತಲೆಮಾರುಗಳ ನಡುವೆ ಸಂವಾದ, ಕಲಿಕೆ ಹಾಗೂ ಸಹಕಾರವನ್ನು ಉತ್ತೇಜಿಸುವ ಮೂಲಕ ಸಾಂಸ್ಕೃತಿಕ ವೈವಿಧ್ಯತೆಗೆ ಗೌರವ, ಸಾಂಪ್ರದಾಯಿಕ ಜ್ಞಾನದ ಸಂರಕ್ಷಣೆ, ತಲೆಮಾರುಗಳ ನಡುವಿನ ಪರಸ್ಪರ ಅರಿವು, ಸಮುದಾಯಗಳ ಸಾಮರ್ಥ್ಯವರ್ಧನೆ, ಶಾಂತಿ ಹಾಗೂ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಕಲ್ಯಾಣವನ್ನು ಉತ್ತೇಜಿಸುವ ಗುರಿಯನ್ನು 9ನೇ ICCS ಸಮ್ಮೇಳನ ಹೊಂದಿದೆ.
ICCSನ ಜಾಗತಿಕ ಪಯಣ
ವಿಶ್ವದ ವಿವಿಧ ಪ್ರಾಚೀನ ಸಂಸ್ಕೃತಿಗಳ ನಡುವಿನ ಸಾಮ್ಯತೆಗಳನ್ನು ಅಧ್ಯಯನ ಮಾಡುವ ಆಸಕ್ತಿ ಹೊಂದಿದ್ದ ವಿದ್ವಾಂಸರು ಮತ್ತು ಸ್ವಯಂಸೇವಕರ ತಂಡವೊಂದು 1997ರಲ್ಲಿ ಭಾರತದಲ್ಲಿ ನಾಗಪುರದಲ್ಲಿ ICCS ಸಂಸ್ಥೆಯನ್ನು ಸ್ಥಾಪಿಸಿತು. ಅಂದಿನಿಂದ ಈ ಸಂಸ್ಥೆಯು ಮೂಲನಿವಾಸಿಗಳ ಸಂಪ್ರದಾಯಗಳು, ಸಾಂಪ್ರದಾಯಿಕ ಸಮುದಾಯಗಳು, ಸಾಂಸ್ಕೃತಿಕ ಸಂಸ್ಥೆಗಳು, ವಿದ್ವಾಂಸರು ಮತ್ತು ನಾಗರಿಕ ಸಮಾಜದ ಸಂಘಟನೆಗಳೊಂದಿಗೆ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುತ್ತಾ ಬಂದಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯ ಪ್ರಭಾವ ಹೆಚ್ಚಾದ ಹಿನ್ನೆಲೆಯಲ್ಲಿ ಅಮೆರಿಕ, ಯುರೋಪ್, ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದಲ್ಲಿ ICCS ಘಟಕಗಳನ್ನು ಸ್ಥಾಪಿಸಲಾಯಿತು. ಇವುಗಳ ಮೂಲಕ ವಿವಿಧ ಸಂಸ್ಕೃತಿಗಳ ನಡುವಿನ ವಿನಿಮಯ, ಜ್ಞಾನ ಹಂಚಿಕೆ ಮತ್ತು ಅಂತಾರಾಷ್ಟ್ರೀಯ ಸಹಕಾರಕ್ಕೆ ಉತ್ತೇಜನ ನೀಡಲಾಗುತ್ತಿದೆ.
ICCSನ ಅಮೆರಿಕ ಘಟಕವನ್ನು 2002ರಲ್ಲಿ ಸ್ಥಾಪಿಸಲಾಗಿದ್ದು, ಅದು 501(c)(3) ಅಡಿಯಲ್ಲಿ ನೋಂದಾಯಿತ ಸಂಸ್ಥೆಯಾಗಿದೆ. 2022ರಲ್ಲಿ ICCS USAಗೆ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಿಂದ (ECOSOC) ವಿಶೇಷ ಸಮಾಲೋಚನಾ ಸ್ಥಾನಮಾನ ದೊರೆತಿದೆ.
ಇದುವರೆಗೆ ICCS ಎಂಟು ಅಂತಾರಾಷ್ಟ್ರೀಯ ಸಮ್ಮೇಳನಗಳು ಮತ್ತು ಹಿರಿಯರ ಸಮಾಗಮಗಳನ್ನು ಆಯೋಜಿಸಿದೆ. ಮೊದಲ ಹಿರಿಯರ ಸಮಾಗಮವು 2003ರಲ್ಲಿ ಮುಂಬೈನಲ್ಲಿ ನಡೆದಿತ್ತು. ನಂತರ 2006ರಲ್ಲಿ ಜೈಪುರ, 2009ರಲ್ಲಿ ನಾಗಪುರ, 2012ರಲ್ಲಿ ಹರಿದ್ವಾರ, 2015ರಲ್ಲಿ ಮೈಸೂರು ಮತ್ತು 2018ರಲ್ಲಿ ಮುಂಬೈನಲ್ಲಿ ಸಮ್ಮೇಳನಗಳು ನಡೆದವು.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ 2021ರಲ್ಲಿ ‘ಮಾನವೀಯತೆಯನ್ನು ಮುನ್ನಡೆಸುವ ಪ್ರಾಚೀನ ಸಂಸ್ಕೃತಿಗಳು’ ಎಂಬ ವಿಷಯದಡಿ 7ನೇ ಸಮ್ಮೇಳನವನ್ನು ಆನ್ಲೈನ್ ಮೂಲಕ ಆಯೋಜಿಸಲಾಗಿತ್ತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
