- ಗಣೇಶ್ ಭಟ್, ವಾರಣಾಸಿ, ಲೇಖಕ
ಭಾರತದಲ್ಲಿ ದೇಶದ ಸುರಕ್ಷತೆಗೆ, ಅಭಿವೃದ್ಧಿಗಳಿಗೆ ಪೂರಕವಾದ ಯೋಜನೆಗಳು ಬಂದಾಗ ಪರಿಸರವಾದಿಗಳೆಂಬ ಹಣೆಪಟ್ಟಿ ಹಚ್ಚಿಕೊಂಡ ಕೆಲವು ಮಂದಿ ಧುತ್ತನೆ ಎದ್ದೇಳುತ್ತಾರೆ. ಇವರು ನಿಜವಾಗಿಯೂ ಪರಿಸರದ ಬಗ್ಗೆ ಕಾಳಜಿಯನ್ನು ಹೊಂದಿದವರಲ್ಲ. ಇವರು ಪರಿಸರವಾದದ ಮುಖವಾಡವನ್ನು ಧರಿಸಿದ ಸ್ಥಾಪಿತ ಹಿತಾಸಕ್ತಿಗಳು. ದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯೋಜನೆಗಳು, ನೀರಾವರಿ ಯೋಜನೆಗಳು, ವಿದ್ಯುತ್ ಉತ್ಪಾದನಾ ಯೋಜನೆಗಳು ಮೊದಲಾದ ಅಭಿವೃದ್ಧಿ ಕೆಲಸಗಳನ್ನು ಹಳ್ಳಹಿಡಿಸಲು ಈ ಸ್ಥಾಪಿತ ಹಿತಾಸಕ್ತಿಗಳು ಕೆಲಸ ಮಾಡುತ್ತವೆ. ಯೋಜನೆಗಳ ಕುರಿತು ಜನಗಳಿಗೆ ಸುಳ್ಳು ಮಾಹಿತಿಗಳನ್ನು ನೀಡಿ, ಅವರಲ್ಲಿ ಯೋಜನೆಗಳ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಮೂಡಿಸಲಾಗುತ್ತದೆ, ಅವರು ಯೋಜನೆಗಳ ವಿರುದ್ಧ ಪ್ರತಿಭಟಿಸುವಂತೆ ಮಾಡಲಾಗುತ್ತದೆ, ಯೋಜನೆಗಳ ವಿರುದ್ಧ ಕೋರ್ಟ್ ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿ ಕಾನೂನು ಹೋರಾಟ ನಡೆಸಲಾಗುತ್ತದೆ. ಇವುಗಳೆಲ್ಲದರ ಪರಿಣಾಮವಾಗಿ ಕೆಲವು ಯೋಜನೆಗಳು ಅರ್ಧದಲ್ಲೇ ರದ್ದಾಗುತ್ತವೆ, ಪ್ರತಿಭಟನೆ, ಕಾನೂನು ತೊಡಕುಗಳನ್ನು ನಿಭಾಯಿಸುವ ಹೊತ್ತಿಗೆ ತುಂಬಾ ವರ್ಷಗಳೇ ಕಳೆದುಹೋಗಿರುತ್ತವೆ.
ಇಂದು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಮ್ಯಾಂಗಲೋರ್ ರಿಫೈನರೀಸ್ ಆಂಡ್ ಪೆಟ್ರೋಕೆಮಿಕಲ್ಸ್ ನ (ಎಂಆರ್ಪಿಎಲ್) ಆರಂಭದ ದಿನಗಳಲ್ಲಿ (90ರ ದಶಕದಲ್ಲಿ) ಭಾರೀ ಮಟ್ಟದ ಪ್ರತಿಭಟನೆಗಳು ನಡೆದಿದ್ದವು. ಎಂಆರ್ಪಿಎಲ್ ಯೋಜನೆಯ ವಿರುದ್ಧ ಹೋರಾಟ ನಡೆಸಲು ವಿವಿಧ ಸಮಿತಿಗಳು ರೂಪುಗೊಂಡಿದ್ದವು. ಎಂಆರ್ಪಿಎಲ್ ತ್ಯಾಜ್ಯದಿಂದ ಮೀನುಗಾರರಿಗೆ ಭಾರೀ ತೊಂದರೆ ಆಗುತ್ತದೆ ಎಂದೆಲ್ಲಾ ಅಪಪ್ರಚಾರಗಳನ್ನು ಮಾಡಲಾಗುತ್ತಿತ್ತು. ಕೆಲವು ವ್ಯಕ್ತಿಗಳು ಭೂಗತರಾಗಿದ್ದುಕೊಂಡು ಈ ಹೋರಾಟಗಳನ್ನು ಸಂಘಟಿಸುತ್ತಿದ್ದರು. ಕೈಗಾದಲ್ಲಿ ಅಣುವಿದ್ಯುತ್ ಸ್ಥಾವರವು ಆರಂಭದ ತಯಾರಿಗಳು ನಡೆಸುತ್ತಿದ್ದಾಗ ರಷ್ಯಾದ ಚೆರ್ನೋಬಿಲ್ನ ಅಣುವಿದ್ಯುತ್ ಸ್ಥಾವರದ ದುರಂತದ ಘಟನೆಯನ್ನು ಪ್ರಚಾರಪಡಿಸಿ, ಆ ಭಾಗದ ಜನರಲ್ಲಿ ಅಣುವಿದ್ಯುತ್ ಸ್ಥಾವರ ಯೋಜನೆಯ ಬಗ್ಗೆ ಹೆದರಿಕೆಯನ್ನು ಮೂಡಿಸಿ, ಜನರು ಯೋಜನೆಯ ವಿರುದ್ಧ ಹೋರಾಡುವಂತೆ ಪ್ರಚೋದಿಸಲಾಗುತ್ತಿತ್ತು. ಟನ್ಗಟ್ಟಲೆ ವಿಕಿರಣ ಸೂಸುವ ಅಣುತ್ಯಾಜ್ಯವು ರೂಪುಗೊಳ್ಳಲಿದ್ದು ಇದನ್ನು ಅಲ್ಲೇ ಪಕ್ಕದಲ್ಲೇ ಎಸೆಯಲಾಗುವುದು, ಸ್ಥಾವರವು ವಿಕಿರಣ ಸೂಸುವ ನೀರನ್ನು ಹೊರಚೆಲ್ಲಲಿದೆ ಎಂದೆಲ್ಲಾ ಅಪಪ್ರಚಾರ ಮಾಡಿ ಯೋಜನೆಯನ್ನು ನಿಲ್ಲಿಸುವಂತೆ ಜನರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡಲಾಗುತ್ತಿತ್ತು. ಇಂದು ಎಂಆರ್ಪಿಎಲ್ ದೇಶದ ಅವಶ್ಯಕತೆಯ ಶೇ.10 ತೈಲವನ್ನು ಪೂರೈಸುತ್ತಿದೆ. ಕೈಗಾ ಅಣುವಿದ್ಯುತ್ ಸ್ಥಾವರವು 880 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸುತ್ತಿದ್ದು ಕರ್ನಾಟಕ ಮಾತ್ರವಲ್ಲದೆ, ಕೇರಳ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡುಗಳಿಗೂ ವಿದ್ಯುತ್ ಪೂರೈಸುತ್ತಿದೆ. ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ತಮಿಳುನಾಡಿನ ಕೂಡಂಕುಳಂನಲ್ಲಿ ನಿರ್ಮಾಣವಾಗುತ್ತಿದ್ದ ಅಣುವಿದ್ಯುತ್ ಸ್ಥಾವರದ ವಿರುದ್ಧವಾಗಿಯೂ ಭಾರೀ ಪ್ರತಿಭಟನೆಗಳು ನಡೆದಿದ್ದವು.
ಕಳೆದ ಕೆಲವು ತಿಂಗಳುಗಳಿಂದ ಜಿಯಲಾಜಿಕಲ್ ಸರ್ವೇ ಆಫ್ ಇಂಡಿಯಾದ ವತಿಯಿಂದ ಕರ್ನಾಟಕದ ಕರಾವಳಿಯ ಭಾಗಗಳಲ್ಲಿ ಇರಬಹುದಾದ ಅಪರೂಪದ ಖನಿಜಗಳನ್ನು ಕಂಡುಹಿಡಿಯುವ ಉದ್ದೇಶದೊಂದಿಗೆ ವೈಮಾನಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಇಂದು ಇಲೆಕ್ಟ್ರಿಕ್ ವಾಹನಗಳ ಬಿಡಿಭಾಗಗಳು, ಸೆಮಿಕಂಡಕ್ಟರ್ಗಳು, ಬ್ಯಾಟರಿಗಳು ಮೊದಲಾದವುಗಳ ಉತ್ಪಾದನೆಗೆ ರೇರ್ ಅರ್ಥ್ ಮ್ಯಾಗ್ನೆಟ್ಸ್, ಖನಿಜಗಳು, ಅಪರೂಪದ ಧಾತುಗಳು, ಲೋಹಗಳು ಅಗತ್ಯವಾಗಿವೆ. ಇವುಗಳನ್ನು ಹೇರಳ ಪ್ರಮಾಣದಲ್ಲಿ ಹೊಂದಿರುವ ಚೀನಾದೇಶವು ಇವುಗಳ ಪೂರೈಕೆಯ ಮೇಲೆ ನಿಯಂತ್ರಣವನ್ನು ಹೊಂದಿದ್ದು ಭಾರತಕ್ಕೆ ಅಗತ್ಯವಾದ ಖನಿಜಗಳನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಸುತ್ತಿಲ್ಲ. ಚೀನಾದ ಮೇಲಿನ ಅವಲಂಬನೆಯಿಂದ ಹೊರಬರಲು ಭಾರತವು ತನ್ನಲ್ಲೇ ಇರಬಹುದಾದ ಅಪರೂಪದ ಖನಿಜಗಳ ಪತ್ತೆಗೆ ಈ ಸರ್ವೇಕ್ಷಣೆಯನ್ನು ನಡೆಸುತ್ತಿದೆ. ಆದರೆ ಈ ಪ್ರಕ್ರಿಯೆಯ ಕುರಿತಾಗಿ ಜನರಲ್ಲಿ ಭಯವನ್ನು ಮೂಡಿಸುವ ಪ್ರಯತ್ನಗಳು ಆರಂಭವಾಗಿದೆ. ಗಣಿಗಾರಿಕೆಗೆ ಒಳಗಾಗಲಿರುವ ಕರಾವಳಿಯು ಮುಂದೊಂದು ದಿನ ಗಣಿಗಾರಿಕೆಯ ಗುಂಡಿಗಳಿಂದ ತುಂಬಿಹೋಗಲಿದೆ ಎನ್ನುವ ರೀತಿಯ ಅಪಪ್ರಚಾರ ಈಗಾಗಲೇ ಆರಂಭವಾಗಿದೆ.
ಮೇಧಾಪಾಟ್ಕರ್ ಅವರು ನಡೆಸಿದ ನರ್ಮದಾ ಬಚಾವೋ ಆಂದೋಳನವನ್ನು ಒಂದು ಮಾದರಿ ಆಂದೋಳನ ಎಂಬುದಾಗಿ ಬಿಂಬಿಸಿ ಪಠ್ಯಪುಸ್ತಕಗಳಲ್ಲಿ ಪಾಠವನ್ನಾಗಿ ಬೋಧಿಸಲಾಗುತ್ತಿತ್ತು. ಮೇಧಾ ಪಾಟ್ಕರ್ ನೇತೃತ್ವದಲ್ಲಿ ನಡೆದ ನರ್ಮದಾ ಬಚಾವೋ ಆಂದೋಳನವು ಪ್ರತಿಭಟನೆಗಳು ಹಾಗೂ ಕಾನೂನು ಹೋರಾಟಗಳ ಮೂಲಕ ನಡೆದು ನರ್ಮದಾ ನದಿಗೆ ಕಟ್ಟಲಾಗಿದ್ದ ಸರ್ದಾರ್ ಸರೋವರ್ ಅಣೆಕಟ್ಟಿನ ಎತ್ತರವನ್ನು ಏರಿಸುವ ಪ್ರಕ್ರಿಯೆಯನ್ನು ಸುಮಾರು 30 ವರ್ಷಗಳ ಕಾಲ ತಡೆಹಿಡಿಯಲಾಯಿತು. ಗುಜರಾತ್ನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರು ಈ ಎಲ್ಲಾ ಕಾನೂನು ಅಡೆತಡೆಗಳನ್ನು ನಿವಾರಿಸಿಕೊಂಡು ಸರ್ದಾರ್ ಸರೋವರ ಅಣೆಕಟ್ಟಿನ ಎತ್ತರವನ್ನು ಏರಿಸಿದರು. ಮೇಧಾ ಪಾಟ್ಕರ್ ನಡೆಸಿದ ಹೋರಾಟದ ಫಲವಾಗಿ ಆರಂಭದಲ್ಲಿ ಕೇವಲ 6450 ಕೋಟಿ ರೂ.ಗಳಷ್ಟು ವೆಚ್ಚವನ್ನು ಹೊಂದಿದ್ದ ಯೋಜನೆಯು ಆಂದೋಳನದ ಫಲವಾಗಿ 30 ವರ್ಷಗಳ ಕಾಲ ವಿಳಂಬಗೊಂಡು ಯೋಜನಾ ವೆಚ್ಚವು 56000 ಕೋಟಿ ರೂ.ಗಳಿಗೆ ಏರಿತು. ಈ ಆಂದೋಳನಕ್ಕೆ ಕಮ್ಯುನಿಸ್ಟ್ ಪಾರ್ಟಿಯು ನೇರ ಬೆಂಬಲವನ್ನು ಸೂಚಿಸಿತ್ತು. ಆದರೆ ಇದೇ ಅವಧಿಯಲ್ಲಿ ಕಮ್ಯುನಿಸ್ಟ್ ಚೀನಾವು ತನ್ನ ದೇಶದ ನದಿಗಳಿಗೆ 22000ಕ್ಕೂ ಹೆಚ್ಚು ದೊಡ್ಡ ಹಾಗೂ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಿತ್ತು. ಇದು ಚೀನಾದ ಕೋಟ್ಯಂತರ ಜನರು ಬಡತನದ ರೇಖೆಯಿಂದ ಮೇಲೆ ಬರಲು ಕಾರಣವಾಗಿತ್ತು. ಇಂದು 138 ಮೀಟರ್ಗಳಿಗೆ ತನ್ನ ಎತ್ತರವನ್ನು ಏರಿಸಿಕೊಂಡ ಸರ್ದಾರ್ ಸರೋವರ್ ಅಣಿಕಟ್ಟು ತೀವ್ರ ಮಳೆ ಕೊರತೆಯನ್ನು ಎದುರಿಸುತ್ತಿರುವ ಕಚ್ಛ್ ಹಾಗೂ ಸೌರಾಷ್ಟ್ರಗಳ 19 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುತ್ತಿದೆ, ಲಕ್ಷಾಂತರ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸುತ್ತಿದೆ. ಗುಜರಾತ್ ಮಾತ್ರವಲ್ಲದೆ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶಗಳಿಗೂ ನೀರನ್ನು ಪೂರೈಸುತ್ತಿದೆ. ಇಂತಹ ಯೋಜನೆಯನ್ನು 30 ವರ್ಷಗಳ ಕಾಲ ತಡೆಹಿಡಿದ ನರ್ಮದಾ ಬಚಾವೋ ಆಂದೋಳನ ಸಾಧಿಸಿದ್ದಾದರೂ ಏನು? ಈ ಆಂದೋಳನಕ್ಕೆ ಆರ್ಥಿಕ ಸಂಪನ್ಮೂಲವನ್ನು ಒದಗಿಸಿದವರು ಯಾರು?.
ಮುಂಬಯಿ ಮೆಟ್ರೋ ರೈಲು ಲೈನ್ 3 (ಅಕ್ವಾ ಲೈನ್) ಯೋಜನೆಯ ಮೆಟ್ರೋ ಕಾರ್ ಶೆಡ್ನ ನಿರ್ಮಾಣಕ್ಕಾಗಿ ಆರೆ ಪ್ರದೇಶದಲ್ಲಿ ಮರಗಳನ್ನು ಕಡಿಯುವುದರ ವಿರುದ್ಧ ಕೆಲವು ಪರಿಸರವಾದಿಗಳು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿ ಕಾನೂನು ಸಮರವನ್ನು ಹೂಡಿದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಉದ್ಧವ್ ಠಾಕ್ರೆ ಸರ್ಕಾರವೂ ಈ ಯೋಜನೆಯನ್ನು ವಿರೋಧಿಸಿತ್ತು. ಆದರೆ ಉದ್ಧವ್ ಅವರ ವಿರೋಧವು ಕೇವಲ ರಾಜಕೀಯ ಕಾರಣದ್ದಾಗಿತ್ತು. ಇವೆಲ್ಲವುಗಳ ಫಲವಾಗಿ ಮೆಟ್ರೋ ಅಕ್ವಾ ಲೈನ್ ಯೋಜನೆಯು 3 ವರ್ಷಗಳಷ್ಟು ವಿಳಂಬವಾಯಿತು. ಇಂದು ಅಕ್ವಾ ಲೈನ್ನಲ್ಲಿ ಪ್ರತಿದಿನ ಸರಾಸರಿ 1.5 ಲಕ್ಷ ಮಂದಿ ಪ್ರಯಾಣ ಮಾಡುತ್ತಿದ್ದಾರೆ ಎಂದರೆ ಈ ಲೈನ್ನ ಮಹತ್ವವನ್ನು ಅರ್ಥ ಮಾಡಿಕೊಳ್ಳಬಹುದು.
ಭಾರತ – ಚೀನಾ ಗಡಿಭಾಗದಲ್ಲಿ ಚೀನಾವು ತನ್ನ ಭಾಗದಲ್ಲಿ ಉತ್ತಮ ರಸ್ತೆಗಳನ್ನು ಮಾಡಿಕೊಂಡಿದೆ. ಆದರೆ ಭಾರತದ ಭಾಗದಲ್ಲಿ ರಸ್ತೆಗಳು ಇರಲಿಲ್ಲ. ಗಡಿಭಾಗದಲ್ಲಿ ಸೇನಾ ವಾಹನಗಳ ಸಾಗಾಟಕ್ಕೆ ಅಗತ್ಯವಿದ್ದ ರಸ್ತೆಗಳಿಲ್ಲದೇ ಇದ್ದುದು 1962ರ ಯುದ್ಧದಲ್ಲಿ ಭಾರತವು ಚೀನಾದ ಎದುರು ಸೋಲಲು ಪ್ರಮುಖ ಕಾರಣವಾಗಿತ್ತು. ಆದರೂ 2014ರ ವರೆಗೂ ಕೇಂದ್ರವನ್ನು ಆಳುತ್ತಿದ್ದ ಸರ್ಕಾರಗಳು ಚೀನಾ ಗಡಿಯಲ್ಲಿ ರಸ್ತೆಗಳನ್ನು ಮಾಡುವ ಧೈರ್ಯವನ್ನು ತೋರಿರಲಿಲ್ಲ. 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರವು ನಂತರ ಚಾರ್ಧಾಮ್ ರಸ್ತೆ ಅಭಿವೃದ್ಧಿ ಯೋಜನೆಯ ಮೂಲಕ ಚೀನಾದ ಗಡಿಯವರೆಗೂ ತಲುಪುವ ರಸ್ತೆ ನಿರ್ಮಾಣದ ಕಾರ್ಯವನ್ನು ಆರಂಭಿಸಿದಾಗ, ಈ ಯೋಜನೆಯು ಹಿಮಾಲಯದ ಪ್ರಾಕೃತಿಕ ಸಮತೋಲನಕ್ಕೆ ತೊಂದರೆಯನ್ನುಂಟುಮಾಡುತ್ತದೆ ಎಂದು ಆರೋಪಿಸಿ ಯೋಜನೆಯನ್ನು ನಿಲ್ಲಿಸಬೇಕೆಂದು ಕೋರಿ, ಸಿಟಿಜನ್ಸ್ ಫಾರ್ ಗ್ರೀನ್ ಡೂಮ್ ಹೆಸರಿನ ಸರ್ಕಾರೇತರ ಸಂಘಟನೆಯೊಂದು ಸುಪ್ರೀಂ ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿತು. ದೇಶದ ರಕ್ಷಣಾ ವಿಚಾರವೇ ಪ್ರಮುಖವೆಂದು ಭಾವಿಸಿದ ಸುಪ್ರೀಂ ಕೋರ್ಟ್ ಚಾರ್ಧಾಮ್ ರಸ್ತೆ ಯೋಜನೆಯ ಪರವಾಗಿ ತೀರ್ಪನ್ನು ನೀಡಿತು. ಆದರೆ ಚೀನಾದ ಹಿತದೃಷ್ಟಿಯನ್ನಿಟ್ಟುಕೊಂಡು ಸುಪ್ರೀಂಕೋರ್ಟ್ ಗೆ ಹೋಗಿದ್ದ ಎನ್ಜಿಒಗೆ ನೆರವು ನೀಡಿದ್ದು ಪ್ರಶಾಂತ್ ಭೂಷಣ್ ಅವರಂತಹ ಲಾಯರ್ಗಳು ಎಂಬುದು ರಹಸ್ಯವಾಗೇನೂ ಉಳಿದಿಲ್ಲ.
ತಮಿಳುನಾಡಿನ ತೂತುಕ್ಕುಡಿಯಲ್ಲಿ ಕಾರ್ಯಾಚರಿಸುತ್ತಿದ್ದ ದೇಶದ ಅತಿದೊಡ್ಡ ತಾಮ್ರದ ಅದಿರು ಸಂಸ್ಕರಣಾ ಘಟಕವಾಗಿದ್ದ ವೇದಾಂತ ಸ್ಟೆರ್ಲೈಟ್ ವಿರುದ್ಧ ಪರಿಸರವನ್ನು ಕಲುಷಿತಗೊಳಿಸುತ್ತಿದೆ ಎಂಬ ಆರೋಪದೊಂದಿಗೆ ತಮಿಳುನಾಡಿನ ಚರ್ಚ್ ಗಳ ನೇತೃತ್ವದಲ್ಲಿ ಭಾರೀ ಪ್ರತಿಭಟನೆಗಳು ನಡೆದವು. ಸ್ಟೆರ್ಲೈಟ್ ವಿರುದ್ಧದ ಪ್ರತಿಭಟನೆಯಲ್ಲಿ ಸ್ವತ: ಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷಗಳು ಸಕ್ರಿಯವಾಗಿ ಪಾಲ್ಗೊಂಡಿದ್ದವು. 2018ರಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಹಲವು ಮಂದಿ ಪ್ರತಿಭಟನಾಕಾರರು ಸಾವನ್ನಪ್ಪಿದರು. ಪ್ರತಿಭಟನೆಯ ಹಿಂದಿನ ವ್ಯಕ್ತಿಗಳ ಪ್ರಭಾವ ಎಷ್ಟು ಇತ್ತು ಎಂದರೆ ಸುಪ್ರೀಂ ಕೋರ್ಟ್ ಕೂಡ ಸ್ಟೆರ್ಲೈಟ್ ಸಂಸ್ಥೆಯನ್ನು ಶಾಶ್ವತವಾಗಿ ಮುಚ್ಚಿಲು ಆದೇಶವನ್ನು ನೀಡಿತು. ಸ್ಟೆರ್ಲೈಟ್ ಕಂಪೆನಿಯು ಇಡೀ ದೇಶಕ್ಕೆ ಬೇಕಾಗುವ ತಾಮ್ರದ ಶೇ.40ರಷ್ಟನ್ನು ಪೂರೈಸುತ್ತಿದ್ದುದು ಮಾತ್ರವಲ್ಲದೆ, ವಿದೇಶಗಳಿಗೂ ತಾಮ್ರವನ್ನು ರಫ್ತು ಮಾಡುತ್ತಿತ್ತು. ಸ್ಟೆರ್ಲೈಟ್ ಮುಚ್ಚಿಹೋದ ನಂತರ ಇದೀಗ ತಾಮ್ರಕ್ಕಾಗಿ ಭಾರತವು ಚೀನಾವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದಿದೆ. 2017ರಲ್ಲಿ ಭಾರತದಲ್ಲಿ 375 ರೂ.ಗೆ ಒಂದು ಕಿಲೋಗ್ರಾಂ ತಾಮ್ರ ಸಿಗುತ್ತಿದ್ದರೆ ಇಂದು ಆ ಬೆಲೆ 1275 ರೂ.ಗಳಿಗೆ ಏರಿದೆ. ಸ್ಟೆರ್ಲೈಟ್ ಮುಚ್ಚಿದ ಪರಿಣಾಮವಾಗಿ ಭಾರತದಲ್ಲಿ ತಾಮ್ರದ ಬೆಲೆ ಶೇ.350 ಹೆಚ್ಚಾಗಿದೆ. ಇದರ ಲಾಭವನ್ನು ಚೀನಾ ಸಂಪೂರ್ಣವಾಗಿ ಪಡೆದುಕೊಂಡಿದೆ. ಇತ್ತೀಚೆಗೆ ಉಡುಪಿ – ಮಂಗಳೂರು – ಕಾಸರಗೋಡುಗಳ ನಡುವೆ 400 ಕೆವಿ ವಿದ್ಯುತ್ ತಂತಿಗಳನ್ನು ಅಳವಡಿಸುವ ಯೋಜನೆ ಆರಂಭಗೊಂಡಿದ್ದು ಈ ಯೋಜನೆಯನ್ನು ವೇದಾಂತ ಸ್ಟೆರ್ಲೈಟ್ ಕಂಪೆನಿಯು ಕಾರ್ಯಗತಗೊಳಿಸುತ್ತಿದೆ.
ಆಶ್ಚರ್ಯವೇನೆಂದರೆ ವೇದಾಂತ ಸ್ಟೆರ್ಲೈಟ್ ಕಂಪೆನಿಯ ಈ ಯೋಜನೆಯ ವಿರುದ್ಧ ಕೂಡ ದಕ್ಷಿಣ ಕನ್ನಡ ಹಾಗೂ ಉಡುಪಿಯ ಚರ್ಚ್ ಗಳು ಪ್ರತಿಭಟನೆಯನ್ನು ಆರಂಭಿಸಿವೆ!. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇಡೀ ಕಾಂಗ್ರೆಸ್ ಪಕ್ಷದ ಬಳಗ ಹಾಗೂ ಅವರ ಬಗ್ಗೆ ಒಲವು ಇರುವ ಪರಿಸರವಾದಿಗಳು ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದಲ್ಲಿ ಕೇಂದ್ರ ಸರ್ಕಾರವು ನಡೆಸಲು ಉದ್ದೇಶಿಸಿರುವ ಗ್ರೇಟ್ ನಿಕೋಬಾರ್ ಯೋಜನೆಯನ್ನು ವಿರೋಧಿಸುತ್ತಿವೆ. ಈ ಯೋಜನೆಯ ಅಡಿಯಲ್ಲಿ ನಿಕೋಬಾರ್ ದ್ವೀಪದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೂಡಿಕೆಯನ್ನು ಮಾಡಿ, ಅಲ್ಲಿ ಭಾರತದ ರಕ್ಷಣಾ ಕೇಂದ್ರ, ಬಂದರು, ವಿಮಾನ ನಿಲ್ದಾಣ ಹಾಗೂ ಆರ್ಥಿಕ ವಲಯವನ್ನು ನಿರ್ಮಿಸಲಾಗುವುದು. ಆದರೆ ಈ ಯೋಜನೆಯು ಚೀನಾಗೆ ಸುತರಾಂ ಇಷ್ಟವಿಲ್ಲ. ಈ ಯೋಜನೆಯ ಫಲವಾಗಿ ರಕ್ಷಣಾತ್ಮಕವಾಗಿ ಭಾರತಕ್ಕೆ ಇಂಡೋ- ಫೆಸಿಫಿಕ್ ಪ್ರದೇಶದ ಮೇಲೆ ಮಿಲಿಟರಿ ಪ್ರಾಬಲ್ಯವು ಲಭಿಸುತ್ತದೆ. ಚೀನಾದ ಹಡಗುಗಳು ಸಂಚರಿಸುತ್ತಿರುವ ಮಲಕ್ಕಾ ಜನಸಂಧಿಯು ಭಾರತದ ಕಣ್ಗಾವಲಿನ ಅಡಿಗೆ ಬರುತ್ತದೆ. ಅಲ್ಲಿ ಸುಸಜ್ಜಿತ ಬಂದರು ನಿರ್ಮಾಣವಾದರೆ ಭಾರತವು ಕೊಲಂಬೋ, ಸಿಂಗಾಪುರ ಬಂದರುಗಳ ಅವಲಂಬನೆಯಿಂದ ಹೊರಬರುತ್ತದೆ. ಇದರ ಪರಿಣಾಮವಾಗಿ ಈ ಭಾಗದಲ್ಲಿ ಭಾರತವು ಆರ್ಥಿಕವಾಗಿ ಹಾಗೂ ರಕ್ಷಣಾತ್ಮಕವಾಗಿ ಚೀನಾದ ಎದುರು ಮೇಲುಗೈಯನ್ನು ಸಾಧಿಸಲಿದೆ. ಹೀಗಾಗಿ ಚೀನಾಕ್ಕೆ ಈ ಯೋಜನೆಯು ಸಹ್ಯವಾಗಿಲ್ಲ. ಕರ್ನಾಟಕದ ಎತ್ತಿನಹೊಳೆ ಯೋಜನೆಯಡಿಯಲ್ಲಿ ಪಶ್ಚಿಮ ಘಟ್ಟದ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ 9000 ಮರಗಳನ್ನು ಕಡಿಯುವಾಗ ಸುಮ್ಮನಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ಗ್ರೇಟ್ ನಿಕೋಬಾರ್ ಯೋಜನೆ ಅಲ್ಲಿನ ಪರಿಸರವನ್ನು ಹಾಳುಮಾಡುತ್ತದೆ ಎಂಬ ನೆಪವನ್ನು ಹೇಳಿ ಈ ಯೋಜನೆಯನ್ನು ವಿರೋಧಿಸುತ್ತಿರುವುದು ಕಾಂಗ್ರೆಸ್ ಪಕ್ಷ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾಗಳ ನಡುವೆ ಈ ಹಿಂದೆ ನಡೆದ ಒಪ್ಪಂದಗಳ ಭಾಗವಾಗಿದೆಯೇ ಎನ್ನುವುದು ಇನ್ನಷ್ಟೇ ತಿಳಿಯಬೇಕು.
