- ಋತ್ವಿಕ್ ಎಂ., ಡೇಟಾ ವಿಶ್ಲೇಷಕ, ಹಾಂಗ್ ಕಾಂಗ್ ಬ್ಯಾಂಕಿಂಗ್ ಕಾರ್ಪೊರೇಷನ್
ಮಧ್ಯಪ್ರದೇಶದ ಧಾರ್ ನಗರವು ಮಾಳವ-ನಿಮಾಡ್ ಪ್ರದೇಶದ ಐತಿಹಾಸಿಕ ಕೇಂದ್ರಗಳಲ್ಲೊಂದು. ಇಂದೋರ್ನಿಂದ ಸುಲಭವಾಗಿ ತಲುಪಬಹುದಾದ ಈ ನಗರ ಹಲವು ಶತಮಾನಗಳ ಇತಿಹಾಸವನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿದೆ. ಇದೇ ಪ್ರದೇಶದಲ್ಲಿ ಖ್ಯಾತ ಗಾಯಕ ಕಿಶೋರ್ ಕುಮಾರ್ ಜನಿಸಿ ಬೆಳೆದ ಕಾಂಡ್ವಾ ಜಿಲ್ಲೆಯೂ ಸ್ಥಿತವಾಗಿದೆ.
ಧಾರ್ನ ವೈಭವವನ್ನು ಅರಳಿಸಿದಾತ ಮಹಾಪುರುಷ ಪರಮಾರ ವಂಶದ ರಾಜ ಭೋಜ. ಕ್ರಿ.ಶ.1010ರಿಂದ 1055ರವರೆಗೆ ಆಳಿದ ಭೋಜನು ಕೇವಲ ಯೋಧನಾಗಿರಲಿಲ್ಲ- ಅವನು ವಿದ್ವಾಂಸ, ಶಿಲ್ಪಿ ಮತ್ತು ನಿರ್ಮಾಣಕಾರನಾಗಿದ್ದ. ಧಾರ್ ಕೆಲವೊಮ್ಮೆ ಅವನ ರಾಜಧಾನಿಯಾಗಿ ಕಾರ್ಯನಿರ್ವಹಿಸಿದ ಕಾರಣ, ಆ ಪ್ರದೇಶದಲ್ಲಿ ದೇವಾಲಯಗಳು, ಅರಮನೆಗಳು ಮತ್ತು ಸಾರ್ವಜನಿಕ ಕಟ್ಟಡಗಳನ್ನು ನಿರ್ಮಿಸಿದ. ಇದೇ ಕಾಲಘಟ್ಟದಲ್ಲಿ ಗಜ್ನಿಯ ಮಹಮ್ಮದನು ಉತ್ತರ ಭಾರತದ ಮೇಲೆ ದಾಳಿಗಳನ್ನು ನಡೆಸುತ್ತಿದ್ದನು. ಸೋಮನಾಥ ದೇವಾಲಯದ ಮೇಲೆ ದಾಳಿ ನಡೆಸಿ ಮರಳುವ ವೇಳೆ ರಾಜ ಭೋಜನ ಸೈನ್ಯದ ಭಯದಿಂದ ಅವನು ಸಿಂಧ್ ಮರುಭೂಮಿಯ ಮಾರ್ಗ ಹಿಡಿದನೆಂಬ ಕಥೆಯೊಂದು ಪ್ರಚಲಿತವಿದೆ. ಈ ಕಥೆಯ ಐತಿಹಾಸಿಕ ಸತ್ಯಾಸತ್ಯತೆ ಮತ್ತು ವಿದ್ವಾಂಸರ ಚರ್ಚೆಯ ವಿಷಯವಾಗಿದ್ದರೂ, ಆ ಕಾಲ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ರಾಜಕೀಯ ಅಸ್ಥಿರತೆಯ ಕಾಲವಾಗಿತ್ತೆಂಬುದಂತೂ ನಿಸ್ಸಂಶಯ.
ಭೋಜ ರಾಜನ ನಿರ್ಮಾಣಗಳಲ್ಲಿ ಒಂದು ಸಂಕೀರ್ಣ ಇಂದು ‘ಭೋಜಶಾಲಾ’ ಎಂಬ ಹೆಸರಿನಿಂದ ಹಿಂದೂ ಸಮಾಜದಲ್ಲಿ ಹಾಗೂ ‘ಕಮಾಲ್ ಮೌಲಾ ಮಸೀದಿ’ ಎಂಬ ಹೆಸರಿನಿಂದ ಮುಸ್ಲಿಂ ಸಮಾಜದಲ್ಲಿ ಪ್ರಸಿದ್ಧವಾಗಿದೆ. ‘ಕಮಾಲ್ ಮೌಲಾ’ ಎಂಬ ಹೆಸರು ಕ್ರಿ.ಶ. 1331ರಲ್ಲಿ ಮೃತಪಟ್ಟ ಚಿಶ್ತೀ ಸೂಫಿ ಸಂತ ಕಮಾಲ್ ಅಲ್-ದೀನ್ನಿಗೆ ಸಂಬಂಧಿಸಿದ್ದು. ಒಂದು ಶಾಸನದ ಪ್ರಕಾರ ಅವನ ಸಮಾಧಿಯನ್ನು ಈ ಸಂಕೀರ್ಣದ ಮಸೀದಿಯ ಪಕ್ಕದಲ್ಲಿ ನಿರ್ಮಿಸಲಾಯಿತು. ಅಂದರೆ 1331ರ ಮೊದಲೇ ಅಲ್ಲಿ ಮಸೀದಿಯೊಂದು ಅಸ್ತಿತ್ವದಲ್ಲಿತ್ತು. ಆದರೆ ಅದು ನಿಖರವಾಗಿ ಯಾವಾಗ ನಿರ್ಮಾಣವಾಯಿತು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ದಾಖಲೆಗಳಲ್ಲಿ ಸಿಗುವುದಿಲ್ಲ.
ಭೋಜ ರಾಜನ ನಂತರ ಪರಮಾರ ರಾಜ್ಯ ದುರ್ಬಲವಾಯಿತು. ಪರಮಾರರು, ಚಾಲುಕ್ಯರು, ಸೋಳಂಕಿಗಳು, ಯಾದವರು ಮತ್ತು ನಂತರ ದೆಹಲಿ ಸುಲ್ತಾನರ ನಡುವೆ ಆ ಪ್ರದೇಶ ಹಲವು ಶತಮಾನಗಳ ಕಾಲ ಯುದ್ಧಗಳನ್ನು ಕಂಡಿತು. ಕ್ರಿ.ಶ. 1305ರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯು ಪರಮಾರರನ್ನು ಸೋಲಿಸಿ ಮಾಳವ ಪ್ರದೇಶವನ್ನು ದಿಲ್ಲಿ ಸುಲ್ತಾನಾತೆಗೆ ಸೇರಿಸಿದನು. ಈ ಆಕ್ರಮಣದ ಅವಧಿಯಲ್ಲಿ ಅನೇಕ ದೇವಾಲಯಗಳು ಹಾನಿಗೊಳಗಾದವು ಅಥವಾ ಪರಿವರ್ತಿತಗೊಂಡವು ಎನ್ನಬಹುದು. 14ನೇ ಶತಮಾನದ ಅಯ್ನ್ ಅಲ್-ಮುಲ್ಕ್ ಮುಲ್ತಾನಿಯ ನೇತೃತ್ವದಲ್ಲಿ ಮಾಳವ ಪ್ರದೇಶ ಸಂಪೂರ್ಣವಾಗಿ ದಿಲ್ಲಿ ಸುಲ್ತಾನಾತೆಯ ಭಾಗವಾಯಿತು. ಈ ಹಿನ್ನೆಲೆಯಲ್ಲಿ ಕಮಾಲ್ ಮೌಲಾ ಮಸೀದಿ 1305 ಮತ್ತು 1331ರ ನಡುವೆ ನಿರ್ಮಿತವಾಗಿರಬಹುದು ಎಂದು ಕೆಲ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. 1392-93ರ ಒಂದು ಶಾಸನದಲ್ಲಿ ದಿಲಾವರ್ ಖಾನನ ದುರಸ್ತಿ ಕಾರ್ಯಗಳ ಉಲ್ಲೇಖವೂ ಕಾಣಸಿಗುತ್ತದೆ.
ಹಿಂದೂ ಪರಂಪರೆಯ ಪ್ರಕಾರ ಭೋಜಶಾಲಾ ಸಂಕೀರ್ಣದಲ್ಲಿ ಒಮ್ಮೆ ಭವ್ಯವಾದ ಸರಸ್ವತಿ ಅಥವಾ ವಾಗ್ದೇವಿ ಮಂದಿರವಿತ್ತು. ಆ ದೇವಿಯ ಮೂರ್ತಿಯೊಂದು 1875ರಲ್ಲಿ ಬ್ರಿಟಿಷ್ ಅಧಿಕಾರಿ ವಿಲಿಯಂ ಕಿಂಕೈಡ್ ಅವರು ಕೈಗೊಂಡ ಉತ್ಖನನದ ವೇಳೆ ಪತ್ತೆಯಾಯಿತು. ಕೆಲ ವಿದ್ವಾಂಸರ ಪ್ರಕಾರ ಅದು ಜೈನ ಅಂಬಿಕೆಯ ಮೂರ್ತಿಯಾಗಿದ್ದು, ಕ್ರಿ.ಶ. 1034-35ರ ಶಾಸನದ ಪ್ರಕಾರ ‘ಸೋಸಾ’ ಎಂಬ ಮಹಿಳೆ ವಾಗ್ದೇವಿ, ಮೂರು ಜಿನ ಮೂರ್ತಿಗಳು ಮತ್ತು ಅಂಬಿಕೆಯನ್ನು ಪ್ರತಿಷ್ಠಾಪಿಸಿದ್ದಳೆಂದು ಉಲ್ಲೇಖವಿದೆ. ಕಿಂಕೈಡ್ ಆ ಮೂರ್ತಿಯನ್ನು ಇಂಗ್ಲೆಂಡಿಗೆ ತೆಗೆದೊಯ್ದರು; ಅದು ಇಂದು ಬ್ರಿಟಿಷ್ ಮ್ಯೂಸಿಯಂನಲ್ಲಿದೆ. ಅದೇ ಕಿಂಕೈಡ್ 1888ರ ತನ್ನ ಬರೆಹ ‘Rambles among Ruins in Central India’ದಲ್ಲಿ ಆ ಸ್ಥಳದಲ್ಲಿ ಮಸೀದಿ, ಸಮಾಧಿ ಮತ್ತು ‘ಜ್ಞಾನದ ಬಾವಿ’ ಇದ್ದ ಉಲ್ಲೇಖ ಮಾಡಿದ್ದಾನೆ. ನಂತರದ ಹಿಂದೂ ವ್ಯಾಖ್ಯಾನಗಳಲ್ಲಿ ಈ ‘ಜ್ಞಾನದ ಬಾವಿ’ಯನ್ನು ಸರಸ್ವತಿ ಆರಾಧನೆಯ ಸಂಕೇತವಾಗಿ ನೋಡಲಾಗುತ್ತದೆ.
‘ಭೋಜಶಾಲಾ’ ಎಂಬ ಹೆಸರು ಇತಿಹಾಸದಲ್ಲಿ ತಡವಾಗಿ ಕಾಣಿಸಿಕೊಳ್ಳುತ್ತದೆ. 1904ರಲ್ಲಿ ಕ್ಯಾಪ್ಟನ್ ಇ. ಬಾರ್ನ್ಸ್ ಎಂಬವರು ಸ್ಥಳೀಯ ಹಿಂದೂಗಳು ಈ ಸ್ಥಳವನ್ನು ‘ರಾಜಾ ಭೋಜ ಕಾ ಮದ್ರಸಾ’ ಎಂದು ಕರೆಯುತ್ತಾರೆ ಎಂದು ದಾಖಲಿಸಿದರು. ಅದೇ ಸಮಯದಲ್ಲಿ ಧಾರ್ ಸಂಸ್ಥಾನದ ನಾಗರಿಕ ಸೇವಕ ಮತ್ತು ಸಂಸ್ಕೃತ ವಿದ್ವಾಂಸ ಕಾಶಿನಾಥ ಕೃಷ್ಣ ಲೇಲೆ ಅವರಿಗೆ ಆ ಸ್ಥಳವನ್ನು ಪರಿಶೀಲಿಸುವ ಜವಾಬ್ದಾರಿ ವಹಿಸಲಾಯಿತು. ಲೇಲೆ ಅತ್ಯಂತ ಶ್ರದ್ಧೆಯಿಂದ ಶಿಲಾಶಾಸನಗಳ ತುಣುಕುಗಳನ್ನು ಮತ್ತು ಸಾಹಿತ್ಯಿಕ ದಾಖಲೆಗಳನ್ನು ಗುರುತಿಸಿದರು. ಅವರ ಅಧ್ಯಯನದಲ್ಲಿ ಭೋಜನ ನಂತರ ಸುಮಾರು ಒಂದೂವರೆ ಶತಮಾನ ಆಳಿದ ಅರ್ಜುನವರ್ಮನ ಕಾಲದ ಸಂಸ್ಕೃತ-ಪ್ರಾಕೃತ ಶಾಸನಗಳು, ವಿಷ್ಣುವಿನ ಅವತಾರಗಳನ್ನು ಸ್ತುತಿಸುವ ಫಲಕಗಳು ಮತ್ತು ಸಂಸ್ಕೃತ ವ್ಯಾಕರಣದ ನಿಯಮಗಳನ್ನು ಒಳಗೊಂಡ ದಾಖಲೆಗಳು ಪತ್ತೆಯಾದವು. ಅಲ್ಲದೆ, ಕಮಾನುಗಳ ಹಿಂದಿನ ಕಪ್ಪು ಶಿಲಾ ಫಲಕಗಳ ಮೇಲೆ ರಾಜಗುರು ಮದನ ಬರೆದ ‘ಕರ್ಪೂರಮಂಜರಿ’ ಎಂಬ ಸಂಸ್ಕೃತ ನಾಟಕವೂ ದೊರೆಯಿತು. ಈ ಎಲ್ಲ ಸಾಕ್ಷ್ಯಗಳ ಆಧಾರದ ಮೇಲೆ ಲೇಲೆ ಈ ಸ್ಥಳಕ್ಕೆ ‘ಭೋಜಶಾಲಾ’ ಎಂದು ಹೆಸರಿಟ್ಟರು. ಆ ಹೆಸರು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಿತು.
ಲೇಲೆ ಅವರ ಅಧ್ಯಯನಗಳ ನಂತರ ಎರಡು ಸಮಾಜಗಳ ನಡುವಿನ ವಿವಾದ ಹೆಚ್ಚಾಯಿತು. 1935ರಲ್ಲಿ ಧಾರ್ ಸಂಸ್ಥಾನದ ದಿವಾನರು ಇದನ್ನು ಮಸೀದಿ ಎಂದು ಘೋಷಿಸಿದರು. 1936ರಲ್ಲಿ ಮುಸ್ಲಿಮರು ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿದಾಗ ಹಿಂದೂ ಸಮುದಾಯ ಅದನ್ನು ತಡೆಯಿತು. 1942ರ ತನಕ ಇದು ಸಂಘರ್ಷಕ್ಕೆ ಕಾರಣವಾಯಿತು. ಅಂತಿಮವಾಗಿ ಮಸೀದಿಗಾಗಿ ಪ್ರತ್ಯೇಕ ಭೂಮಿ ಮಂಜೂರಾಯಿತು; ಅದೇ ಇಂದಿನ ‘ರೆಹಮತ್ ಮಸೀದಿ’. 1952ರಿಂದ ಪ್ರತಿ ವಸಂತ ಪಂಚಮಿಯಂದು ಭೋಜಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತೆ ಆರಂಭಗೊಂಡವು. 1961ರಲ್ಲಿ ಇತಿಹಾಸಕಾರ ಡಾ. ವಿಷ್ಣು ಶ್ರೀಧರ್ ವಾಕಣ್ಕರ್ ಲಂಡನ್ಗೆ ಹೋಗಿ ಸರಸ್ವತಿ ಮೂರ್ತಿಯ ಮೂಲದ ಕುರಿತಾದ ಸಾಕ್ಷ್ಯ ಮಂಡಿಸಿದರೂ ಅದು ಭಾರತಕ್ಕೆ ಹಿಂದಿರುಗಲಿಲ್ಲ.
1995ರಲ್ಲಿ ಈ ವಿವಾದ ಮತ್ತೆ ಬಿರುಗಾಳಿಯಂತೆ ಎದ್ದಿತು. ನಿಯಮಗಳನ್ನು ರೂಪಿಸಿ, ಪರಿಷ್ಕರಿಸಿ, ಹಿಂತೆಗೆದುಕೊಳ್ಳುವ ಆಟ ನಡೆಯಿತು. 1997ರಲ್ಲಿ ಸಾರ್ವಜನಿಕ ಪ್ರವೇಶ ಸಂಪೂರ್ಣ ನಿಷೇಧಿಸಲಾಯಿತು. 2003ರಲ್ಲಿ ಉಮಾ ಭಾರತಿ ನೇತೃತ್ವದ ಭಾಜಪ ಈ ವಿಷಯವನ್ನು ದೊಡ್ಡಮಟ್ಟದಲ್ಲಿ ಮುಂದಿಟ್ಟಿತು. ಅಂದು ಮಧ್ಯಪ್ರದೇಶದಲ್ಲಿ ದಿಗ್ವಿಜಯ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ, ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಇದ್ದವು. 2003ರ ಏಪ್ರಿಲ್ 7ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಪ್ಪಂದ ಮಾದರಿಯಲ್ಲಿ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆ (ASI) ಒಂದು ಆದೇಶ ಹೊರಡಿಸಿತು: ಮುಸ್ಲಿಮರಿಗೆ ಪ್ರತಿ ಶುಕ್ರವಾರ ಮಧ್ಯಾಹ್ನ 1ರಿಂದ 3ರವರೆಗೆ ಮತ್ತು ಹಿಂದೂಗಳಿಗೆ ಪ್ರತಿ ಮಂಗಳವಾರ ಹಾಗೂ ವಸಂತ ಪಂಚಮಿಯಂದು ಪ್ರವೇಶಾವಕಾಶ ನೀಡಲಾಯಿತು. ಉಳಿದ ದಿನಗಳಲ್ಲಿ ಸಾಮಾನ್ಯ ಪ್ರವಾಸಿಗರಿಗೆ ಸ್ಥಳ ತೆರೆಯಲಾಯಿತು.
2006ರಲ್ಲಿ ವಸಂತ ಪಂಚಮಿ ಶುಕ್ರವಾರ ಬಿದ್ದಾಗ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಯಿತು. ಅಂದು ಯಾರಿಗೆ ಅವಕಾಶ ಕೊಡಬೇಕೆಂಬ ಗೊಂದಲ ಆಡಳಿತಕ್ಕೆ ಎದ್ದಿತು. ರಾಜ್ಯ ಸರ್ಕಾರ ಬೆಳಿಗ್ಗೆ 12:30ರವರೆಗೆ ಹಿಂದೂ ಪೂಜೆ, ನಂತರ ಜುಮ್ಮಾ ನಮಾಜ್ಗೆ ಅವಕಾಶ ನೀಡುವ ಆದೇಶ ಹೊರಡಿಸಿತು. ಆದರೆ ಸಾವಿರಾರು ಭಕ್ತರನ್ನು ನಿಗದಿತ ಸಮಯಕ್ಕೆ ಹೊರಗೆ ಕಳುಹಿಸುವುದು ಕಷ್ಟವಾಯಿತು. 2 ಗಂಟೆ ವೇಳೆಗೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಆಗ ಸ್ಥಳೀಯ ಭಾಜಪಾ ನಾಯಕ ಕೈಲಾಶ್ ವಿಜಯವರ್ಗೀಯ ಮಸೀದಿಯ ನೈಬ್ ಇಮಾಮ್ ಮತ್ತು ಕೆಲ ಮುಸ್ಲಿಂ ಭಕ್ತರನ್ನು ಸಂಕೀರ್ಣದ ಮೇಲ್ಛಾವಣಿಗೆ ಕರೆದೊಯ್ದು ಅಲ್ಲೇ ನಮಾಜ್ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು.
ಅಯೋಧ್ಯಾ ರಾಮಮಂದಿರ ನಿರ್ಮಾಣದ ನಂತರ ಭೋಜಶಾಲಾ ವಿವಾದ ಮತ್ತೆ ರಾಷ್ಟ್ರೀಯ ಗಮನ ಸೆಳೆಯಿತು. 2022ರಲ್ಲಿ ರಂಜನಾ ಅಗ್ನಿಹೋತ್ರಿ ಅವರ ಅರ್ಜಿಯ ಮೇರೆಗೆ ಮಧ್ಯಪ್ರದೇಶ ಹೈಕೋರ್ಟ್ ನ ಇಂದೋರ್ ಪೀಠವು ASIಗೆ ವೈಜ್ಞಾನಿಕ ಸಮೀಕ್ಷೆ ನಡೆಸಲು ಆದೇಶಿಸಿತು. ಮೌಲಾನಾ ಕಮಾಲುದ್ದೀನ್ ವೆಲ್ಫೇರ್ ಸೊಸೈಟಿ ಸುಪ್ರೀಂ ಕೋರ್ಟ್ ಗೆ ಹೋದರೂ, ಸರ್ವೋಚ್ಚ ನ್ಯಾಯಾಲಯ ಸಮೀಕ್ಷೆಯನ್ನು ತಡೆಯಲಿಲ್ಲ; ಉತ್ಖನನ ನಡೆಯಬಾರದು ಎಂದಷ್ಟೇ ಸೂಚಿಸಿತು.
2024ರಲ್ಲಿ ASI ತನ್ನ ಹತ್ತು ಸಂಪುಟಗಳ ವರದಿ ಸಲ್ಲಿಸಿತು. ಈಗಿನ ಸ್ಮಾರಕ 10ನೇ-11ನೇ ಶತಮಾನದ ಪರಮಾರ ಕಾಲದ ಕಟ್ಟಡದ ಮೇಲೆ ನಿರ್ಮಿತವಾಗಿದೆ ಎಂಬ ಸಾಕ್ಷ್ಯಗಳು ಸಿಕ್ಕಿವೆ ಎಂದು ವರದಿ ಹೇಳಿತು. ವಿಷ್ಣು, ಗಣೇಶ, ಬ್ರಹ್ಮ, ನರಸಿಂಹ ಮೊದಲಾದ ಹಿಂದೂ ಶಿಲ್ಪಗಳು ಪತ್ತೆಯಾದವು. 150ಕ್ಕೂ ಹೆಚ್ಚು ಸಂಸ್ಕೃತ-ಪ್ರಾಕೃತ ಶಾಸನಗಳಲ್ಲಿ ‘ಶಾರದಾ ಸದನ’ ಅಥವಾ ‘ಸರಸ್ವತಿಯ ನಿವಾಸ’ ಎಂಬ ಉಲ್ಲೇಖಗಳು ಕಂಡುಬಂದವು. ಅಲ್ಲದೆ ಮಸೀದಿಯ ಮಿಹ್ರಾಬ್ ಮತ್ತಿತರ ಲಕ್ಷಣಗಳನ್ನು ಮೂಲ ಕಟ್ಟಡದೊಳಗೆ ನಂತರ ಸೇರಿಸಲಾಗಿದೆ ಎಂಬ ತೀರ್ಮಾನಕ್ಕೂ ವರದಿ ಬಂದಿತು.
ಅಂತಿಮವಾಗಿ, ಈ ವರ್ಷದ ಮೇ 15ರಂದು ಮಧ್ಯಪ್ರದೇಶ ಹೈಕೋರ್ಟ್ ನ ಇಂದೋರ್ ಪೀಠವು ಐತಿಹಾಸಿಕ ತೀರ್ಪನ್ನು ನೀಡಿತು. ಕಮಾಲ್ ಮೌಲಾ ಮಸೀದಿಯನ್ನು ಹಿಂದೆ ಅಲ್ಲಿದ್ದ ದೇವಾಲಯ ಮತ್ತು ಗ್ರಂಥಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಮತ್ತು ಆ ನಿರ್ಮಾಣಕ್ಕಾಗಿ ದೇವಾಲಯದ ಸಾಮಗ್ರಿಗಳನ್ನು ಬಳಸಲಾಗಿದೆ ಎಂಬ ASI ವರದಿಯ ತೀರ್ಮಾನಗಳನ್ನು ನ್ಯಾಯಾಲಯ ಒಪ್ಪಿಕೊಂಡಿತು. ಹಿಂದೂಗಳಿಗೆ ಯಾವುದೇ ನಿರ್ಬಂಧವಿಲ್ಲದೆ ಪ್ರವೇಶಿಸಿ ಪೂಜಿಸುವ ಹಕ್ಕಿದೆ ಎಂದು ತಿಳಿಸಿ, ಮುಸ್ಲಿಮರಿಗೆ ಶುಕ್ರವಾರ ನಮಾಜ್ಗೆ ಅವಕಾಶ ನೀಡಿದ್ದ 2003ರ ASI ಆದೇಶವನ್ನು ರದ್ದುಗೊಳಿಸಿತು. 2019ರ ಅಯೋಧ್ಯಾ ತೀರ್ಪಿನ ಹತ್ತು ತತ್ತ್ವಗಳ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ತೀರ್ಪು ಬಂದ ಕೆಲ ದಿನಗಳ ನಂತರ, ಮೇ 18ರಂದು ಭಕ್ತರು ಭೋಜಶಾಲೆಗೆ ಪ್ರವೇಶಿಸಿ ಅಲ್ಲಿ ಹೊಸದಾಗಿ ಪ್ರತಿಷ್ಠಾಪಿಸಲಾದ ಸರಸ್ವತಿ ದೇವಿಯ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ಭೋಜಶಾಲಾ ಸಂಕೀರ್ಣ ಕೇವಲ ಒಂದು ಪುರಾತತ್ತ್ವ ಸ್ಮಾರಕವಲ್ಲ. ಅದು ಭಾರತದ ಮಧ್ಯಯುಗೀನ ಇತಿಹಾಸ, ಸ್ಮೃತಿ, ಧಾರ್ಮಿಕ ಗುರುತು ಮತ್ತು ಆಧುನಿಕ ರಾಜಕೀಯಗಳ ಸಂಕೀರ್ಣ ಸಂಗಮ. ಭೋಜನ ಕಾಲದ ವಿದ್ಯಾಕೇಂದ್ರ, ಇಸ್ಲಾಮಿಕ್ ಆಳ್ವಿಕೆಯ ಅವಧಿಯಲ್ಲಿ ಆದ ಬದಲಾವಣೆಗಳು, ಬ್ರಿಟಿಷ್ ಯುಗದ ಪುರಾತತ್ತ್ವ ಸಂಶೋಧನೆ, ಸ್ವತಂತ್ರ ಭಾರತದಲ್ಲಿ ನಡೆದ ಸಮುದಾಯ ಸಂಘರ್ಷಗಳು ಮತ್ತು ಅಂತಿಮವಾಗಿ ನ್ಯಾಯಾಂಗದ ತೀರ್ಪು — ಇವೆಲ್ಲ ಒಟ್ಟಾಗಿ ಭಾರತದ ನಾಗರಿಕತೆಯ ಒಂದು ಸಂಕೀರ್ಣ ಅಧ್ಯಾಯವನ್ನು ರಚಿಸುತ್ತವೆ.
