- ನ. ನಾಗರಾಜ, ಗೌರವ ಸಂಪಾದಕ, ವಿಕ್ರಮ
ಸುಂದರ ಪರ್ವತಮಾಲೆ, ನಿತ್ಯಹರಿದ್ವರ್ಣದ ಗಿಡಮರಗಳ ರಾಶಿ, ಸಮೀಪದಲ್ಲೇ ಕಂಡುಬರುವ ಆಚೆ-ಈಚೆಯಿಂದ ಹರಿಯುವ ಅಶ್ವಿನಿ ಖಡ್ಡ್ – ಶಿಲ್ಲಿ ನದಿಗಳ ಸಂಗಮಸ್ಥಳ, ಸದಾ ಸಮಶೀತೋಷ್ಣ ವಲಯ ಹೊಂದಿರುವ ಹಿಮಾಚಲಪ್ರದೇಶ ರಾಜ್ಯದ ಸೋಲನ್ ಸಮೀಪದಲ್ಲಿ ರೂಪುಗೊಂಡಿರುವ ‘ಮಾಧವಸೃಷ್ಟಿ’ ಎಂಬ ಪ್ರಕಲ್ಪ ಸಂಘಸೃಷ್ಟಿಯಲ್ಲಿನ ಒಂದು ಸಾರ್ಥಕ ಕೊಡುಗೆ.
30ರಿಂದ 31 ಮನೆಗಳಿರುವ ಪುಟ್ಟ ಗ್ರಾಮದಲ್ಲಿ ಭಾರತೀಯ ಜೀವನಶೈಲಿಯ ಬದುಕು ಕಟ್ಟಿಕೊಡುವ ಮಹಾನ್ ಉದ್ದೇಶದಿಂದ ದಶಕಗಳ ಹಿಂದೆ 11 ಎಕರೆ ಪ್ರದೇಶದಲ್ಲಿ ಸರಸ್ವತಿ ಶಿಶುಮಂದಿರ ರೂಪದಲ್ಲಿ ಆರಂಭಗೊಂಡ ಬಹುಮುಖಿ ಶಿಕ್ಷಣ ಸಂಸ್ಥಾನವಾದ ‘ಮಾಧವಸೃಷ್ಟಿ’ ಪ್ರಕಲ್ಪ ಎಲ್ಲರನ್ನೂ ಕೈಬೀಸಿ ತನ್ನತ್ತ ಕರೆಯುತ್ತಿದೆ. ಈಗಾಗಲೇ ಸಾವಿರಾರು ಬಂಧು-ಭಗಿನಿಯರು ಹತ್ತಾರು ರಾಜ್ಯಗಳಿಂದ ಬಂದು ಸ್ವಾಸ್ಥ್ಯ ಲಾಭ ಪಡೆದಿದ್ದಾರೆ. ಕೆಲವು ಗಂಟೆಗಳಿಗಾಗಿ ಕುತೂಹಲದಿಂದ ಬಂದವರು, ಕ್ರಮೇಣ 2 ದಿನ ಉಳಿದು ಬಗೆಬಗೆಯ ಚಿಕಿತ್ಸೆಯೂ ಸೇರಿದಂತೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಶಾರೀರಿಕ – ಮಾನಸಿಕ ಪಾಠಗಳನ್ನು ಕಲಿತು ಮತ್ತಷ್ಟು ಆಸಕ್ತಿ ಹೊಂದಿದ್ದಾರೆ. ಕ್ರಮೇಣ ಬಾಯಿಂದ ಬಾಯಿಗೆ – ಹೃದಯದಿಂದ ಹೃದಯಕ್ಕೆ ಪ್ರಚಾರಗೊಂಡು 7 ದಿನಗಳ ನಿವಾಸಿ ಶಿಬಿರಕ್ಕೆ ಬರತೊಡಗಿದ್ದಾರೆ, ಸಮಾಧಾನ ಹೊಂದುತ್ತಿದ್ದಾರೆ.
‘ಯೋಗಭಾರತಿ’ ಹೆಸರಿನಲ್ಲಿ ಹಲವೆಡೆ ಭಾರತೀಯ ಜೀವನಪದ್ಧತಿಯ, ಎಂದರೆ ಯೋಗ ಮಾರ್ಗದಲ್ಲಿ ಮನ-ಮನೆಗಳನ್ನು ರೂಪಿಸುತ್ತಿರುವ ಶ್ರೇಯಸ್ಸು ಕರ್ನಾಟಕದಿಂದ 80ರ ದಶಕದಲ್ಲಿ ಪಂಜಾಬಿಗೆ ಸಂಘಪ್ರಚಾರಕರಾಗಿ ಹೋಗಿ ಹತ್ತಾರು ವರ್ಷ ಸಮಾಜಸೇವೆಯಲ್ಲಿ ತೊಡಗಿದ ಶ್ರೀನಿವಾಸಮೂರ್ತಿಯವರಿಗೆ ಸಲ್ಲುತ್ತದೆಂದರೆ ತಪ್ಪೇನಿಲ್ಲ. ನಂತರದ ವರ್ಷಗಳಲ್ಲಿ ಹಿಮಾಚಲ ಪ್ರದೇಶದ ಪ್ರಾಂತಪ್ರಚಾರಕರಾಗಿಯೂ, ಕರ್ನಾಟಕ ಕೇಂದ್ರವಾಗಿಸಿ ಆರೋಗ್ಯ ಭಾರತಿ, ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರ, ಜಿಗಣಿಯ ಪ್ರಶಾಂತಿ ಕುಟೀರದ ಮಧುಮೇಹ ನಿವಾರಣಾ ಆಂದೋಳನದ (Stop Diabetes Movement) ಕಾರ್ಯದಲ್ಲಿ ತೊಡಗಿ ಪ್ರಸ್ತುತ ಹಿಮಾಚಲದ ಸೋಲನ್ ಜಿಲ್ಲೆಯ ಸಲೋಗಡ ಪ್ರದೇಶದ ಗಣ್ ಕೀ ಸೇರ್ ಎಂಬ ಸುಂದರ ಗ್ರಾಮ ಪರಿಸರದಲ್ಲಿ ರೂಪುಗೊಂಡಿರುವ ‘ಮಾಧವಸೃಷ್ಟಿ’ ಬಹುಆಯಾಮೀ ಶಿಕ್ಷಣ ಸಂಸ್ಥಾನ ಪ್ರಕಲ್ಪದಲ್ಲಿ ಪುಟ್ಟ ತಂಡದೊಡನೆ ‘ಮಾನವ ಸೇವೆ – ಮಾಧವ ಸೇವೆ’ ಎಂಬ ನಾಣ್ಣುಡಿಯ ಸಾಕಾರಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಿಮಾಚಲ ಶಿಕ್ಷಾ ಸಮಿತಿಯ ಸಂಚಾಲನೆಯಲ್ಲಿರುವ ಈ ಪ್ರಕಲ್ಪದಡಿಯಲ್ಲಿ ಹಲವು ಬಗೆಯ ಪ್ರಯತ್ನಗಳು ಕ್ರಮೇಣ ಬಲಗೊಳ್ಳುತ್ತಿವೆ.
● ‘ಸರಸ್ವತಿ ವಿದ್ಯಾಮಂದಿರ’ವೆಂಬ ಶಾಲೆಯ ಮೂಲಕ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ನೈತಿಕ – ವ್ಯಾವಹಾರಿಕ – ಉತ್ತಮ ಗುಣಮಟ್ಟದ ಭಾರತೀಯ ಶಿಕ್ಷಣ ನೀಡುತ್ತಾ ಬಂದಿದೆ. ಮಕ್ಕಳ ಮೂಲಕ ಮನೆಗಳು, ಮನೆಮಂದಿ, ಗ್ರಾಮದ ಉಳಿದ ಜನರೂ ಕ್ರಮೇಣ ಭಾರತೀಯ ಜೀವನ ಪದ್ಧತಿಯ ಮೌಲ್ಯಗಳನ್ನು ರೂಢಿಸಿಕೊಳ್ಳುತ್ತಿರುವುದು ಅಭಿನಂದನೀಯ ಸಂಗತಿಯಾಗಿದೆ.
● ಗೋಸೇವಾ ಉದ್ದೇಶದಿಂದ ‘ಮಾಧವ ಗೋಶಾಲೆ’ಯು ಇದೇ ವಿಶಾಲ ಪರಿಸರದ ಭಾಗವಾಗಿ ಭಾರತೀಯ ಗೋವಂಶದ ತಳಿಗಳ ಸಂರಕ್ಷಣೆ-ಸಂವರ್ಧನೆಯ ಕಾರ್ಯ ನಡೆಸಿದೆ. ‘ಒಂದು ಪರಿವಾರ – ಒಂದು ಗೋವು’ ಉದ್ದೇಶವಿಟ್ಟುಕೊಂಡು ದೇಸೀ ಗೋ ಉತ್ಪನ್ನಗಳಾದ ಹಾಲು – ಮೊಸರು – ತುಪ್ಪ ಬಳಸುವುದಷ್ಟೇ ಅಲ್ಲದೆ, ಸಗಣಿ – ಗೋಮೂತ್ರದ ಸದ್ಬಳಕೆ, ಗುಣವತ್ತತೆಯಲ್ಲಿ ಉತ್ತಮವಾದ ಔಷಧಿ, ಕೃಷಿಯೋಗ್ಯ ಗೊಬ್ಬರ ತಯಾರಿಕೆಯ ಪ್ರಶಿಕ್ಷಣ ಕೇಂದ್ರವಾಗಿಯೂ ಮಾಧವ ಗೋಶಾಲೆ ವಿಕಾಸಗೊಳ್ಳುತ್ತಿದೆ.
● ‘ಮಾಧವ ಯೋಗ ಆಶ್ರಮ’ವು ಇಲ್ಲಿನ ಆಕರ್ಷಣೆಯೆಂದರೆ ಅತಿಶಯೋಕ್ತಿಯಲ್ಲ. ಯೋಗ – ಪ್ರಾಣಾಯಾಮ – ಧ್ಯಾನ ಇತ್ಯಾದಿ ಕ್ರಿಯೆಗಳೊಂದಿಗೆ ಆಂತರಿಕ – ಶಾರೀರಿಕ ಶಕ್ತಿಯನ್ನು ವಿಕಾಸಗೊಳಿಸಿ ರೋಗಮುಕ್ತ – ಒತ್ತಡಮುಕ್ತ – ಆತ್ಮವಿಶ್ವಾಸಪೂರ್ಣ ವ್ಯಕ್ತಿತ್ವ ಬೆಳೆಸಿಕೊಳ್ಳಲು ಇದು ಕಾರ್ಯರಂಗವಾಗಿದೆ. ವ್ಯಾಯಾಮ – ಆಸನ – ಉಪಕರಣ ಬಳಕೆಯ ಮೂಲಕ ಶರೀರ ಬಗ್ಗಿಸುವುದು ಹಾಗೂ ನೇತಿ – ಧೌತಿ – ಶಂಖ ಪ್ರಕ್ಷಾಲನ, ಯೋಗಮುದ್ರೆ, ಪಂಚಕೋಶಗಳ ನಿಯಂತ್ರಣ, ಅಷ್ಟಾಂಗ ಯೋಗದ ಆಚರಣೆ ಒಂದೆಡೆಯಾದರೆ ಆಕ್ಯುಪ್ರೆಷರ್, ನ್ಯೂರೋಥೆರಪಿ, ಋತುಚರ್ಯೆ – ದಿನಚರ್ಯೆ – ಆಹಾರ ಸೇವನೆಯಲ್ಲಿ ಸುವ್ಯವಸ್ಥೆ…. ಇತ್ಯಾದಿಗಳು ರೋಗಿಗಳನ್ನೂ ಯೋಗಿಗಳಾಗಿಸುವಲ್ಲಿ ಸಹಕಾರಿಯಾಗಿದೆ.
● ‘ಮಾತೃಶ್ರೀ ಭವನ’ ಇದೊಂದು ತನ್ನದೇ ಆದ ವಿಶಿಷ್ಟ ಸಂರಚನೆಯಾಗಿ ನಿರ್ಮಾಣಗೊಂಡಿದೆಯೆನ್ನಬಹುದು!. ಹಿಂದಿನ – ಇಂದಿನ ಕಾಲದ ವಾಸ್ತುಕಲೆಗಳನ್ನು ಬಳಸಿ ಕಟ್ಟಡ ಕಟ್ಟಲಾಗಿದೆ. ಅಂದರೆ, ಇಲ್ಲಿ ಮಣ್ಣಿನ – ಇಟ್ಟಿಗೆಯ – ಕಲ್ಲಿನ – ಸಂಗಮರ್ಮರ್ ಗೋಡೆಗಳು, PPGI ಪ್ಯಾನೆಲ್ – ಕಬ್ಬಿಣ – ಸ್ಟೀಲ್ – ಮರ – ಸಿಮೆಂಟ್ – ಮರಳು – ಸೋಲಾರ್ ಪ್ಯಾನೆಲ್ ಇತ್ಯಾದಿ ಬಳಸಲಾಗಿದೆಯೆಂಬುದು ಗಮನಾರ್ಹ. ಒಟ್ಟಿನಲ್ಲಿ ಶಾರೀರಿಕ – ಮಾನಸಿಕ ಒತ್ತಡಗಳಿಂದ ಬಳಲುವವರಿಗೆ ಪ್ರೀತಿ – ಮಮತೆಯ ಯೋಗ ಚಿಕಿತ್ಸೆಯ ಸ್ಥಾನವಿದು.
● ಮಾಧವ ವನಸ್ಪತಿ ವಿಹಾರ’ ಎಂಬುದು ಮತ್ತೊಂದು ಮುಖದ ಚಿಂತನೆ. ವೇದಕಾಲದಿಂದಲೂ ಭಾರತದಲ್ಲಿ ಪರಂಪರಾಗತ ಔಷಧೀಯ ಗಿಡ – ಮೂಲಕೆಗಳ ಜ್ಞಾನ ನಮ್ಮಲ್ಲಿ ಬೆಳೆದುಬಂದಿದೆ. ಅಥರ್ವವೇದವನ್ನು ಆಯುರ್ವೇದದ ಮೂಲವೆನ್ನಲಾಗುತ್ತದೆ. ಭಾರತೀಯ ವೈದ್ಯಕೀಯ ಪದ್ಧತಿಯ ಚಿಕಿತ್ಸಾಜ್ಞಾನ ಪರಿಸರ ಆಧಾರಿತವಾಗಿದ್ದುದನ್ನು ಗಮನಿಸಿ ಗಿಡ – ಮೂಲಿಕಾ ವನ ನಿರ್ಮಿಸುವ ಪ್ರಯತ್ನ ಸಾಗಿದೆ.
● ‘ಕ್ರೀಡಾಂಗಣ’ ಕಲ್ಪನೆಯಡಿ ಸಮಾಜ ನಿರ್ಮಾಣದ ಉದ್ದೇಶದಿಂದ ಆಟ – ಓಟ – ಕುಸ್ತಿ – ಸ್ಪರ್ಧೆಗಳು – ಆರೋಗ್ಯ ಸಮ್ಮೇಳನ – ಆರೋಗ್ಯ ಶಿಬಿರ…. ಇತ್ಯಾದಿ ಏರ್ಪಡಿಸುವ ಸಲುವಾಗಿ 2 ಮೈದಾನಗಳನ್ನೂ ರೂಪಿಸಲಾಗಿದೆ. ಇದು ಶಾಲೆಯ ಮಕ್ಕಳಿಗಷ್ಟೇ ಅಲ್ಲದೆ ಸುತ್ತಲಿನ ಜನತೆಗೂ ಲಾಭಕಾರಿಯಾಗಲಿದೆ.
● ‘ಭಾರತ ಮಾತಾ ಮಂದಿರ’ ನಿರ್ಮಿಸಿ ಯುಗಯುಗಗಳಿಂದ ಹರಿದು ಬಂದಿರುವ ಸಂಸ್ಕೃತಿಯ ಚಿತ್ರಣದ ಜೊತೆಗೆ ದೇಶಧರ್ಮಕ್ಕಾಗಿ ಜೀವಿಸಿದ ಸಂತ – ಮಹಂತ – ಯೋಗಿ – ಯೋಧರ ಕಾರ್ಯವನ್ನು ಕಣ್ಮುಂದೆ ತರುವ ಉದ್ದೇಶ ಮಾಧವ ಸೃಷ್ಟಿ ಪ್ರಕಲ್ಪಕ್ಕಿದೆ.
ಒಟ್ಟಾರೆಯಾಗಿ ಆರೋಗ್ಯ ರಕ್ಷಣೆ – ಸಂಸ್ಕೃತಿ ಸಂರಕ್ಷಣೆ – ದೇಶ, ಸಮಾಜಕಾರ್ಯಕ್ಕೆ ತೊಡಗುವ ಪ್ರೇರಣೆಯ ತ್ರಿವೇಣಿ ಸಂಗಮವಾಗಿ ‘ಮಾಧವ ಸೃಷ್ಟಿ’ ಕಾರ್ಯನಿರತವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ವ್ಯಕ್ತಿಯಾಗಿ – ಕುಟುಂಬವಾಗಿ – ಸಮೂಹವಾಗಿ ಇಲ್ಲಿಗೆ ಬಂದು ಇಲ್ಲಿನ ವ್ಯವಸ್ಥೆಯ ಸದ್ಬಳಕೆ ಮಾಡಿಕೊಳ್ಳಬೇಕೆಂಬುದು ವ್ಯವಸ್ಥಾಪಕರ ಸದಾಶೆ. ಜತೆ ಜತೆಗೆ ಶಾರೀರಿಕ – ಬೌದ್ಧಿಕ – ವ್ಯವಸ್ಥಾತ್ಮಕ – ಆರ್ಥಿಕ ಸಹಕಾರದೊಂದಿಗೆ ಸಬಲ ಸಮಾಜ ನಿರ್ಮಿಸಲು ಕೈಚಾಚಿ ಕರೆಯುತ್ತಿದೆ ‘ಮಾಧವ ಸೃಷ್ಟಿ’ಯೆಂಬ ಹಿಮಾಚಲ ಪ್ರದೇಶದ ಆರೋಗ್ಯ ಕೇಂದ್ರ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ- ಶ್ರೀನಿವಾಸ ಮೂರ್ತಿ- 7019858641, ,9480180428
(ಮಾಧವ ಸೃಷ್ಟಿ, ಗಣ್-ಕಿ-ಸೇರ್, ಅಶ್ವಿನೀ ಖಡ್, ಸೋಲನ್, ಹಿಮಾಚಲ ಪ್ರದೇಶ – 173212)
