ಅಂಕಣ – ಕೃಷಿಯಿಂದ ಬದುಕು
- ಸುಧಾ ಸಂದೀಪ್, ಎಂ.ಎಸ್ಸಿ. ಕೃಷಿ, ಹುಣಸೂರು
ಬೇಸಿಗೆಯಲ್ಲಿ ನಾವು ಮಾಡುವ ಪ್ರಮುಖ ಕೆಲಸಗಳಾದ ಸೀಗೆಕಾಯಿ ಕಟಾವು, ಹರಳೆಣ್ಣೆ ಬೇಯಿಸುವುದು, ಮುತ್ತುಗದ ಎಲೆ ಕಟ್ಟುವುದು, ಹಂಚಿಕಡ್ಡಿ ಪೊರಕೆ ಮಾಡುವುದು ಹೀಗೆ ಹಲವು ವಿಷಯಗಳ ಕುರಿತು ಈಗಾಗಲೇ ತಿಳಿಸಿದ್ದೇವೆ. ಇವುಗಳ ಜೊತೆ ಮತ್ತೊಂದು ಮುಖ್ಯವಾದ, ಸ್ವಲ್ಪ ಕಷ್ಟವಾದರೂ ಇಷ್ಟವಾಗುವ ಕೆಲಸ ಎಂದರೆ ಸೀಗೆಸೊಪ್ಪು ಬಿಡಿಸಿ ಅಡುಗೆ ಮಾಡುವುದು. ನನ್ನ ತವರು ಮನೆಯಾದ ಕೊರಟಗೆರೆ ಸಮೀಪದ ಬ್ಯಾಟರಾಯನಪಾಳ್ಯದಲ್ಲಿ ಸೀಗೆಕಾಯಿ ಮತ್ತು ಸೀಗೆಸೊಪ್ಪು ಎರಡೂ ರೀತಿಯ ಸಸ್ಯಗಳಿವೆ. ಅದೇ ರೀತಿ ಬಯಲು ಸೀಮೆ, ಅರೆಮಲೆನಾಡಿನ ಅನೇಕ ಕುರುಚಲು ಕಾಡುಗಳಲ್ಲಿ ಈಗಲೂ ಈ ಎರಡೂ ಪ್ರಭೇದದ ಸಸ್ಯಗಳನ್ನು ನಾವು ಕಾಣಬಹುದು. ಹಿರಿಯರು ಅದರಲ್ಲೂ ಜಮೀನಿನ ಕೆಲಸ ಮಾಡುವ ಹೆಂಗಸರು ಈ ಸಮಯದಲ್ಲಿ ಕೆಲಸ ಮುಗಿಸಿ ಮಡಿಲ ತುಂಬಾ ಸೀಗೆಸೊಪ್ಪು ಬಿಡಿಸಿಕೊಂಡು ಮನೆಗೆ ಹಿಂತಿರುಗುವ ದೃಶ್ಯ ನಮ್ಮ ಕಡೆ ಸಾಮಾನ್ಯವಾಗಿದೆ. ವರ್ಷಕ್ಕೆ ಒಮ್ಮೆಯಾದರೂ ಸೀಗೆಸೊಪ್ಪು ತಿನ್ನಬೇಕು ಎಂದು ಹಿರಿಯರು ಹೇಳುತ್ತಾರೆ. ಅದರಲ್ಲೂ ಈ ಸಮಯದಲ್ಲಿ ಬಾಣಂತಿಯರು ಯಾರಾದರೂ ಮನೆಯಲ್ಲಿ ಇದ್ದರೆ ಅವರಿಗೆ ವಾರಕ್ಕೆ 2-3 ಸಲವಾದರೂ ಸೀಗೆಸೊಪ್ಪಿನ ಸಾರು ಮಾಡಿಕೊಡುತ್ತಾರೆ. ಇದರಿಂದ ಎದೆಹಾಲು ಹೆಚ್ಚಾಗುತ್ತದೆ ಎನ್ನುವುದು ಹಿರಿಯರ ಅನುಭವ. ಇದನ್ನು ಆಡು ಕುರಿಗಳೂ ಬಹಳ ಇಷ್ಟಪಟ್ಟು ತಿನ್ನುತ್ತವೆ. ಯಾವುದೇ ಆರೈಕೆ ಇಲ್ಲದೆ ಒಣಪ್ರದೇಶದಲ್ಲಿ ಅದರಲ್ಲೂ ಬೇಸಿಗೆಯಲ್ಲಿ ಮೊದಲ ಮಳೆಗೆ ಚೆನ್ನಾಗಿ ಚಿಗುರುವ ಸೀಗೆಸೊಪ್ಪು ಇಂದು ಕಣ್ಮರೆಯಾಗುತ್ತಿರುವುದು ವಿಷಾದದ ಸಂಗತಿ. ದಿನದಿಂದ ದಿನಕ್ಕೆ ನಗರೀಕರಣ ಮತ್ತು ಆಧುನಿಕತೆ ಹೆಸರಿನಲ್ಲಿ ಜೆಸಿಬಿಯಿಂದ ಬದುಗಳನ್ನು, ಕುರುಚಲು ಕಾಡನ್ನು ತೆರವುಗೊಳಿಸಿದ ಪರಿಣಾಮ ಈ ಸೀಗೆಕಾಯಿ ಮತ್ತು ಸೀಗೆಸೊಪ್ಪು ಎರಡೂ ಪ್ರಭೇದಗಳು ಕಣ್ಮರೆಯಾಗುತ್ತಿವೆ. ಎಲ್ಲೋ ಊರಿನ ಒಬ್ಬಿಬ್ಬರ ಬಳಿ ಮಾತ್ರ ಉಳಿದಿವೆ. ಇವುಗಳನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ. ನಾವು ಪ್ರತಿವರ್ಷ ಬೇಸಿಗೆಯಲ್ಲಿ ಇವುಗಳ ಬೀಜ ಸಂಗ್ರಹಿಸಿ ಆಸಕ್ತರಿಗೆ ಹಂಚುತ್ತೇವೆ. ಕಳೆದ ವರ್ಷ ಗಿಡಗಳನ್ನೇ ಮಾಡಿ ನಮ್ಮ ತೋಟಕ್ಕೆ ಆಗಮಿಸಿದವರಿಗೆ ಉಡುಗೊರೆಯಾಗಿ ನೀಡಿದ್ದೂ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಸೀಗೆಸೊಪ್ಪನ್ನು ಸಹ ಅಡುಗೆಗೆ ಬಳಸಬಹುದು ಇದು ಆರೋಗ್ಯಕ್ಕೆ ಪೂರಕವಾದ ಸೊಪ್ಪು ಎಂದು ಯುವ ಜನಾಂಗಕ್ಕೆ ತಿಳಿಸಬೇಕಿದೆ. ನಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ಕುರಿತು ಅನೇಕ ಸಲ ಮಾಹಿತಿ ಹಂಚಿಕೊಂಡಿದ್ದೇವೆ. ನೂರಾರು ಮಂದಿ ಈ ಸೊಪ್ಪನ್ನು ಇದೇ ಮೊದಲು ನೋಡಿದ್ದು, ನಮಗೆ ಇದರ ಕುರಿತು ತಿಳಿದೇ ಇರಲಿಲ್ಲ ಎಂದರೆ ಇನ್ನೂ ಕೆಲವರು ತಲೆ ಸ್ನಾನ ಮಾಡಲು ಬಳಸುವ ಸೀಗೆಕಾಯಿ ಗಿಡವೇ ಇದು ಎಂದು ಪ್ರಶ್ನಿಸಿದ್ದಿದೆ. ಹಾಗಾಗಿ ಎಲ್ಲ ರೀತಿಯ ಸಂದೇಹಗಳನ್ನು ಪರಿಹರಿಸಲು ಈ ಲೇಖನದಲ್ಲಿ ಪ್ರಯತ್ನಿಸಿದ್ದೇವೆ.
ಸೀಗೆಸೊಪ್ಪು ಮತ್ತು ಸೀಗೆಕಾಯಿ ಒಂದೇ ಗಿಡವೇ?
‘ಸೀಗೆ ಸೊಪ್ಪು’ ಎಂದರೆ ತಲೆಗೆ ಉಪಯೋಗಿಸುವ ಸೀಗೆಕಾಯಿ ಗಿಡವಲ್ಲ. ಬದಲಿಗೆ ಸೀಗೆಕಾಯಿ ಬಳ್ಳಿಯನ್ನೇ ಹೋಲುವ ಮತ್ತೊಂದು ಮರಬಳ್ಳಿ. ಸೀಗೆಕಾಯಿ ಮತ್ತು ಸೀಗೆಸೊಪ್ಪು ಎರಡೂ ಸೋದರ ಸಂಬಂಧಿಗಳು. ಸೀಗೆಕಾಯಿ ಬಿಡುವ ಪ್ರಭೇದದ ವೈಜ್ಞಾನಿಕ ಹೆಸರು Senegalia rugata ಮತ್ತು ಸೀಗೆಸೊಪ್ಪು ಅಂದರೆ ತಿನ್ನಲು ಬಳಸುವ ಪ್ರಭೇದದ ವೈಜ್ಞಾನಿಕ ಹೆಸರು Senegalia pennata. ಈ ಎರಡೂ ಬಳ್ಳಿಗಳ ಎಲೆಗಳು ನೋಡಲು ಒಂದೇ ರೀತಿ ಇದ್ದರೂ ಕಾಯಿಗಳು ಮತ್ತು ಎಲೆಯ ಪರಿಮಳದಲ್ಲಿ ವ್ಯತ್ಯಾಸವನ್ನು ನೋಡಬಹುದು. ತಿನ್ನುವ ಸೀಗೆ ಬಳ್ಳಿಯಲ್ಲಿ ಸೀಗೆಕಾಯಿ ಬಿಡುವುದಿಲ್ಲ. ಬದಲಿಗೆ ಬಾಗೆ ಮರದ ರೀತಿಯ ಬೀಜಗಳು ಕಾಣಿಸುತ್ತದೆ. ಈ ಮೇಲಿನ ಚಿತ್ರ ನೋಡಿ ಅದರ ಕಾಯಿ ಮತ್ತು ಬೀಜ ರಚನೆಯನ್ನು ತಿಳಿಯಬಹುದು.
ಸೀಗೆಸೊಪ್ಪಿನ ಎಲೆಗೆ ಇದೆ ವಿಶೇಷ ಪರಿಮಳ
ಸೀಗೆಸೊಪ್ಪು ಇಷ್ಟವಾಗುವುದೇ ಈ ಕಾರಣಕ್ಕೆ. ಇದರ ಎಲೆಗಳನ್ನು ಹಿಚುಕಿದರೆ ಘಮ ಘಮ ಪರಿಮಳ ಬೀರುತ್ತದೆ. ಸೀಗೆಕಾಯಿ ಬಿಡುವ ಪ್ರಭೇದದಲ್ಲಿ ಈ ಘಮ ಇರುವುದಿಲ್ಲ. ಹಾಗಾಗಿ ಗಿಡದಲ್ಲಿ ಕಾಯಿ ಇಲ್ಲದೇ ಇರುವ ಸಮಯದಲ್ಲೂ ಈ ತಂತ್ರದಿಂದ ಸುಲಭವಾಗಿ ಯಾವ ಪ್ರಭೇದ ಎಂದು ಗುರುತಿಸಬಹುದು.
ಮೊದಲ ಮಳೆಗೆ ಹೊಸ ಚಿಗುರು
ಚಳಿಗಾಲದಲ್ಲಿ ಎಲೆಗಳನ್ನೆಲ್ಲಾ ಉದುರಿಸಿ ಕೇವಲ ಕಾಯಿಗಳನ್ನು ಈ ಸಸ್ಯದಲ್ಲಿ ಕಾಣಬಹುದಾಗಿದೆ. ಬಿಸಿಲು ಹೆಚ್ಚಾದಂತೆ ಕಾಯಿ ಒಣಗಿ ಸಿಡಿದು ಬೀಜಗಳು ದೂರ ದೂರ ಬೀಳುವಂತೆ ಪ್ರಕೃತಿ ಸೀಗೆಸೊಪ್ಪಿನ ಬೀಜ ಪ್ರಸರಣಕ್ಕೆ ರೂಪುರೇಶೆ ನೀಡಿದೆ. ಸಾಮಾನ್ಯವಾಗಿ ಯುಗಾದಿ ಹಿಂದೆ ಮುಂದೆ ಒಂದು ಮಳೆಯಾಗುತ್ತದೆ. ಆಲ್ಲಿಯವರೆಗೆ ಬೋಳು ಬೋಳಾಗಿ ಕಾಣುವ ಈ ಬಳ್ಳಿಯು ಕ್ರಮೇಣಮಾಗಿ ಹೊಸ ಚಿಗುರಿಂದ ಕಂಗೊಳಿಸಲು ಪ್ರಾರಂಭವಾಗುತ್ತದೆ. ಎಳೆಯ ಎಲೆಗಳಲ್ಲಿ ಮುಳ್ಳು ಇರುವುದಿಲ್ಲ. ಅಂತಹ ಎಲೆಗಳನ್ನು ನಿಧಾನವಾಗಿ ಬಿಡಿಸಿಕೊಳ್ಳಬೇಕು. ಇದು ಸ್ವಲ್ಪ ಕಷ್ಟದ ಕೆಲಸ. ಸೀಗೆಸೊಪ್ಪು ಬಿಡಿಸಲು ಒಂದಿಷ್ಟು ಅನುಭವ ಬೇಕು. ಇಲ್ಲವಾದರೆ ಮೈ ಕೈ ಪೂರ ತರಚಿಕೊಳ್ಳುತ್ತದೆ. ಕೆಲವೊಮ್ಮೆ ರಕ್ತವೂ ಬರಬಹುದು. ಕೇವಲ ಕಾಂಡದ ಮೇಲೆ ಮಾತ್ರವಲ್ಲದೆ ಬಲಿತ ಎಲೆಗಳಲ್ಲೂ ಮುಳ್ಳುಗಳಿರುತ್ತವೆ. ಹಾಗಾಗಿ ಜೋಪಾನವಾಗಿ ಚಿಗುರು ಬಿಡಿಸಬೇಕು. ಅನುಭವ ಇರುವವರು ಸೀಗೆಸೊಪ್ಪನ್ನು ಮುಂಜಾನೆ ಸೂರ್ಯೋದಯದ ಸಮಯದಲ್ಲೇ ಬಿಡಿಸುತ್ತಾರೆ. ಆ ಸಮಯದಲ್ಲಿ ವಾತಾವರಣ ತಂಪಾಗಿದ್ದು ಎಲೆಗಳು ಅರಳಿರುತ್ತವೆ. ಸಂಜೆ ವೇಳೆ ಸೀಗೆಸೊಪ್ಪಿನ ಎಲೆಗಳು, ಚಿಗುರೆಲೆಗಳು ಮುಟ್ಟಿದರೆ ಮುನಿ ರೀತಿ ಮುಚ್ಚಿಕೊಳ್ಳುತ್ತವೆ.
ಸೀಗೆಸೊಪ್ಪಿನ ಅಡುಗೆ
ಸೀಗೆ ಎಲೆಗಳನ್ನು ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಮೈಸೂರು, ಚಾಮರಾಜನಗರ ಪ್ರದೇಶಗಳ ಜನರು ಹೆಚ್ಚಾಗಿ ಅಡುಗೆಯಲ್ಲಿ ಬಳಸುತ್ತಾರೆ. ಎಳೆಯ ಸೊಪ್ಪಿನಿಂದ ಸಾರು, ಪಲ್ಯ ಇತ್ಯಾದಿ ಅಡುಗೆ ಮಾಡುತ್ತಾರೆ. ಅದರಲ್ಲೂ ಹಾಲು ಬೆರೆಸಿ ಮಾಡುವ ಸಾರು ತುಮಕೂರು ಭಾಗದ ಜನರಿಗೆ ಅಚ್ಚುಮೆಚ್ಚು. ಬಾಣಂತಿಯರ ಮೈ ಬೆಚ್ಚಗಿಡಲು ಮತ್ತು ಎದೆಹಾಲು ವೃದ್ಧಿಸಲು ಈ ಸೊಪ್ಪನ್ನು ಅವರಿಗೆ ಹೆಚ್ಚು ಕೊಡುತ್ತಾರೆ. ಸಾಮಾನ್ಯ ಜನರೂ ವರ್ಷಕ್ಕೆ ಒಮ್ಮೆಯಾದರೂ ತಿನ್ನಲೇಬೇಕೆಂದು ಹಪಹಪಿಸುತ್ತಾರೆ. ನಮ್ಮಲ್ಲಿ ಸೀಗೆಸೊಪ್ಪು ಸಿಗುವ ಸಮಯ ಅಂದರೆ ಏಪ್ರಿಲ್ – ಮೇ ತಿಂಗಳಲ್ಲಿ ಎರಡು ರೀತಿಯ ಅಡುಗೆಯನ್ನು ಮಾಡುತ್ತೇವೆ. ಮೊದಲನೆಯದ್ದು ಬಸ್ಸಾರು ಮುದ್ದೆ. ಸಾಮಾನ್ಯ ಸೊಪ್ಪುಗಳಂತೆ ಇದನ್ನು ಸಹ ಸಣ್ಣಗೆ ಹೆಚ್ಚಿ ಬೇಳೆಯೊಂದಿಗೆ ಬೇಯಿಸಿಕೊಳ್ಳಬೇಕು. ಬೇಳೆ ಚೆನ್ನಾಗಿ ಬೆಂದ ನಂತರ ಸ್ವಲ್ಪ ಬೇಳೆಯನ್ನು ಪ್ರತ್ಯೇಕವಾಗಿ ಇಟ್ಟುಕೊಂಡು ನಂತರ ಸೊಪ್ಪನ್ನು ಬೇಳೆ ಜೊತೆ ಬೇಯಿಸಬೇಕು. ಇನ್ನೊಂದು ಕಡೆ ಸ್ವಲ್ಪ ಈರುಳ್ಳಿ, ಹಸಿಮೆಣಸು, ನಾಲ್ಕು ಕಾಳು ಮೆಣಸು, ಅರ್ಧ ಚಮಚೆ ಜೀರಿಗೆ, ಎಲ್ಲವನ್ನೂ ಬಾಣಲೆಯಲ್ಲಿ ಹುರಿದುಕೊಳ್ಳಬೇಕು. ನಂತರ ಪ್ರತ್ಯೇಕವಾಗಿರಿಸಿದ ಬೇಳೆ ಜೊತೆ ಈ ಹುರಿದ ಪದಾರ್ಥಗಳನ್ನು ಮತ್ತು ಸ್ವಲ್ಪ ಕಾಯಿ ತುರಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಹುಣಸೆ ಹಣ್ಣು ಎಲ್ಲವನ್ನೂ ಸೇರಿಸಿ ಗುಂಡುಕಲ್ಲು ಅಥವಾ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಗುಂಡುಕಲ್ಲಿನಲ್ಲಿ ರುಬ್ಬಿದರೆ ವಿಶೇಷ ರುಚಿಸಿಗುತ್ತದೆ. ಸೊಪ್ಪು ಮತ್ತು ಬೇಳೆ ಚೆನ್ನಾಗಿ ಬೆಂದ ನಂತರ ಆ ನೀರನ್ನು ಬಸಿಯಬೇಕು. ಬಸಿದ ನೀರಿಗೆ ರುಬ್ಬಿದ ಮಸಾಲೆಯನ್ನು ಬೆರೆಸಿದರೆ ಸಾರು ಸಿದ್ಧ. ಸೊಪ್ಪಿಗೆ ಒಗ್ಗರಣೆ ನೀಡಿದರೆ ಪಲ್ಯ ರೆಡಿ.
ಹಾಲು ಬಿಟ್ಟು ಮಾಡುವ ವಿಧಾನ
ಬೇಳೆ ಮತ್ತು ಸೊಪ್ಪನ್ನು ಚೆನ್ನಾಗಿ ಬೇಯಿಸಿಕೊಂಡು ಒಂದು ಲೋಟ ಹಾಲು ಬಿಟ್ಟು ಕುದಿಸಬೇಕು. ನಂತರ ಬಸಿದುಕೊಂಡು ಸಾರಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಮಸಾಲೆ ರುಬ್ಬಲು ಮೇಲಿನ ರೀತಿ ಎಲ್ಲವನ್ನೂ ಮಾಡಬೇಕು. ಆದರೆ ಹುಣಸೆ ಹಣ್ಣು ಬಳಸಬಾರದು. ಸೊಪ್ಪಿಗೆ ಒಗ್ಗರಣೆ ನೀಡುವಾಗಲೂ ಸ್ವಲ್ಪ ಹಾಲು ಬಿಟ್ಟರೆ ಚೆನ್ನಾಗಿರುತ್ತದೆ. ಹೀಗೆ ಎರಡು ರೀತಿ ಅಡುಗೆಯ ಕುರಿತು ಲೇಖನ ಬರೆಯುವಾಗಲೇ ಬಾಯಲ್ಲಿ ನೀರು ಬರುತ್ತಿದೆ.
ರಾಗಿ ಮುದ್ದೆ ಜೊತೆ ಸಾರು ಪಲ್ಯ ಸವಿಯುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಸೀಗೆಸೊಪ್ಪು ಬೇಯಿಸುವಾಗ ಮನೆಯೆಲ್ಲಾ ಘಮ ಘಮ ಪರಿಮಳದಿಂದ ತುಂಬಿಹೋಗಿರುತ್ತದೆ. ಇಂತಹ ಸೀಗೆಸೊಪ್ಪಿನ ಬಳ್ಳಿಗಳು ಅವಸಾನದ ಅಂಚಿನಲ್ಲಿವೆ. ಹಿಂದೆ ಪ್ರತಿ ಹಳ್ಳಿಯಲ್ಲಿ ಗೋಮಾಳ, ಕುರುಚಲು ಕಾಡುಗಳಲ್ಲಿ, ಜೀವಂತ ಬೇಲಿಗಳಲ್ಲಿ ಸೀಗೆಕಾಯಿ ಮತ್ತು ಸೀಗೆಸೊಪ್ಪು ಎರಡೂ ಬಳ್ಳಿಗಳು ಸಾಮಾನ್ಯ ಸಸ್ಯಗಳಾಗಿದ್ದವು. ಆದರೆ ಇಂದು ಕುರುಚಲೂ ಇಲ್ಲ, ಜೀವಂತ ಬೇಲಿಗಳೂ ಕಣ್ಮರೆಯಾಗುತ್ತಿವೆ. ಹೀಗೆ ಮುಂದುವರಿದರೆ ಸೀಗೆಸೊಪ್ಪು ಮಲೆ ಮಹದೇಶ್ವರನ ಜನಪದ ಹಾಡುಗಳಲ್ಲಿ, ಕಥೆಗಳಲ್ಲಿ ಮಾತ್ರ ಕೇಳಬಹುದಾದ ಸಸ್ಯವಾಗುತ್ತದೆ. ಇಂತಹ ಸಸ್ಯಗಳನ್ನು ಉಳಿಸಿ ಬೆಳೆಸಬೇಕಲ್ಲವೇ?.
