ಅಂಕಣ – ಸ್ವಾಸ್ಥ್ಯ ಸಂಪದ
- ಡಾ. ಶ್ರೀವತ್ಸ ಭಾರದ್ವಾಜ, ದತ್ತಂ ಆಯುರ್ಧಾಮ, ಮಂಗಳೂರು
ಶಂಖಾಕಾರವಾಗಿ ಹೂವು ಬಿಡುವ ಈ ಬಳ್ಳಿಯನ್ನು ನಾವೆಲ್ಲಾ ಶಂಖಪುಷ್ಪ ಎಂದು ಕರೆಯುತ್ತೇವೆ. ಆದರೆ ಇದರ ನಿಜವಾದ ಹೆಸರು ಅಪರಾಜಿತಾ. ಬಿಳಿ ಹಾಗೂ ನೀಲಿ ಬಣ್ಣದಲ್ಲಿ ಹೆಚ್ಚಾಗಿ ಕಾಣುವ ಈ ಬಳ್ಳಿಯ ಹಿಂದೆ ಇರುವ ಹಲವಾರು ವಿಸ್ಮಯಕಾರಿ ಸಂಗತಿಯನ್ನು ತಿಳಿಯೋಣ ಬನ್ನಿ. “ನನಗೆ ನಿದ್ದೆ ಬರುತ್ತಿಲ್ಲ, ರಾತ್ರಿಯಾದ ಕೂಡಲೇ ಏನೋ ಆತಂಕ. ಯಾವುದೇ ರೀತಿಯ ಒತ್ತಡ ಇಲ್ಲದಿದ್ದರೂ ಆತಂಕ ನನ್ನನ್ನು ಕಾಡುತ್ತಿದೆ. ಮನಸ್ಸು ಸಮಾಧಾನದಲ್ಲಿ ಇರುವುದಿಲ್ಲ. ಇನ್ನೇನು ನಿದ್ದೆ ಬರುತ್ತದೆ ಎನ್ನುತ್ತಿದ್ದಂತೆ ಎಚ್ಚರವಾಗುತ್ತದೆ” ಎಂದು ಅಳುತ್ತಾ ಏನಾದರೂ ಪರಿಹಾರ ಸೂಚಿಸಿ ಎಂದು ಕೇಳಿದ ಮಹಿಳೆಗೆ ಶಂಖಪುಷ್ಪ ಗಿಡದ ಹೂವುಗಳಿಂದ ತಯಾರಿಸಿದ ಕಷಾಯವನ್ನು ದಿನನಿತ್ಯ ಸಾಯಂಕಾಲ ಕುಡಿಯಲು ಸೂಚಿಸಿದೆ. ದಿನ ಕಳೆದಂತೆ ಸಮಸ್ಯೆ ಪರಿಹಾರವಾಯಿತು. ಈ ಉದಾಹರಣೆಯನ್ನು ಕೊಟ್ಟಾಗ “ಅಯ್ಯೋ! ಹಿತ್ತಲಲ್ಲಿ ಬೆಳೆಯುವ ಈ ಬಳ್ಳಿಗೆ ಇಷ್ಟೆಲ್ಲಾ ಗುಣಗಳಿವೆಯೇ? ಅಥವಾ ನನ್ನ ಸಮಾಧಾನಕ್ಕೆ ನೀವೇ ಈ ರೀತಿ ಕಥೆ ಕಟ್ಟುತ್ತಿದ್ದಿರಾ?” ಎಂದು ವೃದ್ಧರೊಬ್ಬರು ನನಗೆ ಕೇಳಿದರು. ಪಕ್ಕದಲ್ಲಿಯೇ ಕುಳಿತಿದ್ದ ಅವರ ಮಗಳು ಜೋರಾಗಿ ನಕ್ಕು, “ಅಪ್ಪಾ ಹಿಂದೆ ನನಗೆ ಏನೋ ಸಮಸ್ಯೆಯಿದೆ ಎಂದು ದಿನನಿತ್ಯ ಕಷಾಯ ಕುಡಿಯುತ್ತಿದ್ದುದು ನಿನಗೆ ತಿಳಿದಿಲ್ಲವೇ? ವೈದ್ಯರು ಹೇಳಿದ್ದು ಕಟ್ಟು ಕಥೆ ಅಲ್ಲ. ನಾನು ಅನುಭವಿಸಿ ಗುಣಮುಖವಾದ ಸತ್ಯ ಕಥೆಯನ್ನೇ!” ಎಂದಳು. ನಾನು ನಿಮಗೆ ಈ ಉದಾಹರಣೆ ಹೇಳಲು ಕಾರಣವೇನೆಂದರೆ ಅದೆಷ್ಟೋ ಮಂದಿ ನಿದ್ರಾಹೀನತೆ, ಖಿನ್ನತೆ, ಆತಂಕದಿಂದ ಬಳಲುತ್ತಿರುವವರನ್ನು ನಮ್ಮ ಸುತ್ತಲೂ ನೋಡುತ್ತಿರುತ್ತೇವೆ. ಹಲವಾರು ಔಷಧಗಳಿಗೆ ಮೊರೆಹೋಗಿ ಅದರ ಅಡ್ಡ ಪರಿಣಾಮಗಳನ್ನು ಅನುಭವಿಸುವುದನ್ನೂ ಕಾಣುತ್ತೇವೆ. ಇವೆಲ್ಲದರ ಬದಲು ಸುಲಭವಾಗಿ ಸಿಗುವಂತಹ ಈ ಸಂಜೀವಿನಿಯನ್ನು ಉಪಯೋಗಿಸಿದಲ್ಲಿ ಯಾವ ಖರ್ಚು, ಅಡ್ಡಪರಿಣಾಮಗಳಿಲ್ಲದೇ ಖಚಿತವಾದ ಪರಿಣಾಮ ಸಿಗುತ್ತದೆ.
ಶಂಖಪುಷ್ಪವನ್ನು ಪ್ರಾಚೀನ ಕಾಲದಿಂದಲೂ ಹಲವಾರು ಕಾಯಿಲೆಗಳ ಪರಿಹಾರಕ್ಕಾಗಿ ಬಳಸುತ್ತಾ ಬಂದಿದ್ದಾರೆ. ಈ ಗಿಡ ಯಾವ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ ಎಂದು ಸಂಕ್ಷಿಪ್ತವಾಗಿ ನೋಡೋಣ ಬನ್ನಿ.
● ಆತಂಕದಿಂದ ಒದ್ದಾಡುವವರು ಈ ಗಿಡದ ಹೂವುಗಳ ಅಥವಾ ಎಳೆಗಳ ಕಷಾಯವನ್ನು ಮಾಡಿ ಕುಡಿದರೆ ತುಂಬಾ ಉಪಯುಕ್ತ.
● ಮೂರ್ಛೆ ರೋಗದಿಂದ ಪೀಡಿತರು ಈ ಗಿಡದ ಎಳೆಗಳ ರಸವನ್ನು ಸ್ವಲ್ಪ ಜೇನುತುಪ್ಪದಲ್ಲಿ ಸೇರಿಸಿ ಕುಡಿದರೆ ಪರಿಹಾರವಾಗುತ್ತದೆ.
● ಈ ಗಿಡಗಳ ಎಲೆಗಳನ್ನು ಅಮೃತಬಳ್ಳಿಯೊಂದಿಗೆ ಜಜ್ಜಿ, ಕಷಾಯ ಮಾಡಿ ಕುಡಿದಲ್ಲಿ ಹೆಚ್ಚಾದ ರಕ್ತದ ಒತ್ತಡ ಕಡಿಮೆಯಾಗುತ್ತದೆ.
● ಕಂಪವಾತ ಎನ್ನುವ ಘೋರವಾದ ಕಾಯಿಲೆಯನ್ನು ನಿಯಂತ್ರಣಕ್ಕೆ ತರಲು ಈ ಗಿಡ ಅತ್ಯಂತ ಸಹಾಯಕಾರಿಯಾಗಿದೆ.
● ಮಕ್ಕಳಲ್ಲಿ ಬುದ್ಧಿಶಕ್ತಿಯನ್ನು ಹೆಚ್ಚಿಸಲು ಈ ಗಿಡದ ಹೂವು ಅಥವಾ ಎಲೆಗಳ ಕಷಾಯವನ್ನು ಕುಡಿಯುವುದು ಅತ್ಯಂತ ಉಪಯುಕ್ತ.
● ಶಂಖಪುಷ್ಪದ ಎಲೆಗಳ ಕಷಾಯವನ್ನು ದಿನನಿತ್ಯ ಕುಡಿಯುವುದರಿಂದ ನಮ್ಮ ಜೀರ್ಣಶಕ್ತಿಯು ವೃದ್ಧಿಸುತ್ತದೆ.
● ಏಕಾಗ್ರತೆಯ ಕೊರತೆ ಇರುವವರು ಈ ಗಿಡದ ಎಲೆಯನ್ನು ದಿನನಿತ್ಯ ಸೇವಿಸುವುದು ಉತ್ತಮ.
● ಈ ಗಿಡದ ಎಲೆಗಳನ್ನು ಶುಂಠಿಯೊಂದಿಗೆ ಅರೆದು ಸ್ವಲ್ಪ ಜೇನು ಸೇರಿಸಿ ಕುಡಿದರೆ ಗಂಟಲು ಕೆರೆತ, ನೋವು ಪರಿಹಾರವಾಗುತ್ತದೆ.
● ಜ್ವರ, ಮೈಕೈ ನೋವು ಇದ್ದಲ್ಲಿ ಈ ಬಳ್ಳಿಯನ್ನು ಉಪಯೋಗಿಸಿದರೆ ಸಮಸ್ಯೆ ಶಮನವಾಗುತ್ತದೆ.
● ದಿನನಿತ್ಯ ಹೂವುಗಳ ಕಷಾಯವನ್ನು ಕುಡಿದಲ್ಲಿ ರೋಗನಿರೋಧಕ ಶಕ್ತಿಯು ವೃದ್ಧಿಸುತ್ತದೆ.
● ಈ ಹೂವುಗಳನ್ನು ದಾಸವಾಳದ ಹೂವಿನೊಂದಿಗೆ ಕಷಾಯ ಮಾಡಿ ಕುಡಿದಲ್ಲಿ ಹೊಟ್ಟೆ ಉರಿ ಕಡಿಮೆಯಾಗುತ್ತದೆ.
● ಶೀತ, ಕಫ, ಕೆಮ್ಮು, ದಮ್ಮು ಇದ್ದಾಗ ಶಂಖಪುಷ್ಪದ ಎಲೆಗಳನ್ನು ಅರೆದು ಕುಡಿದರೆ ಪರಿಹಾರವಾಗುತ್ತದೆ.
● ಪುರುಷರಲ್ಲಿ ವೀರ್ಯಾಣುಗಳ ಕೊರತೆ ಕಂಡುಬಂದಲ್ಲಿ ಈ ಗಿಡದ ಕಷಾಯವನ್ನು ಉಪಯೋಗಿಸುವುದರಿಂದ ವಿರ್ಯಾಣುಗಳು ವೃದ್ಧಿಸುತ್ತವೆ.
● ಈ ಗಿಡದ ಬೇರನ್ನು ಹಾಲಿನಲ್ಲಿ ಅರೆದು ಮುಖಕ್ಕೆ ಲೇಪಿಸಿದರೆ ಕಲೆಗಳು, ಮೊಡವೆಗಳ ನಿವಾರಣೆಯಾಗುತ್ತದೆ.
● ಈ ಗಿಡದ ಬೇರನ್ನು ಅರೆದು ಕುಡಿದಲ್ಲಿ ಮಹಿಳೆಯರನ್ನು ಕಾಡುವ ಮುಟ್ಟಿನ ಸಮಸ್ಯೆ ಪರಿಹಾರವಾಗುತ್ತದೆ.
