ಅಂಕಣ – ಮಕ್ಕಳಿಗೆ ವಿಜ್ಞಾನ
- ರೋಹಿತ್ ಚಕ್ರತೀರ್ಥ, ಚಿಂತಕರು, ಲೇಖಕರು
1983ನೇ ಇಸವಿ ಸೆಪ್ಟೆಂಬರ್ 26ರ ರಾತ್ರಿ. ಅಮೆರಿಕ ಮತ್ತು ಸೋವಿಯತ್ ಒಕ್ಕೂಟಗಳ ಮಧ್ಯದ ಶೀತಲ ಸಮರ ತಾರಕಕ್ಕೇರಿ ಕೊತಕೊತ ಕುದಿಯುತ್ತಿದ್ದ ಸಮಯ. ಸೋವಿಯತ್ ಒಕ್ಕೂಟದ ರಾಜಧಾನಿ ಮಾಸ್ಕೋದಲ್ಲಿ ಕಮ್ಯುನಿಸ್ಟ್ ಸರ್ಕಾರ, ಜಗತ್ತಿನ ಯಾವುದೇ ಭಾಗದಿಂದ ತನ್ನ ಗಡಿರೇಖೆಯತ್ತ ಚಿಮ್ಮಿಬರುವ ನ್ಯೂಕ್ಲಿಯರ್ ಕ್ಷಿಪಣಿ/ಬಾಂಬ್ಗಳನ್ನು ಪತ್ತೆಮಾಡಲೆಂದು ಒಂದು ಅತ್ಯಾಧುನಿಕ ಕೇಂದ್ರವನ್ನು ತೆರೆದಿತ್ತು. ಅಲ್ಲಿ ಅಂದಿನ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದವನು ಲೆಫ್ಟಿನೆಂಟ್ ಕರ್ನಲ್ ಸ್ಟಾನಿಸ್ಲಾವ್ ಪೆಟ್ರೋವ್. ಮಧ್ಯರಾತ್ರಿ ದಾಟಿ ತುಸು ಹೊತ್ತಾಗಿತ್ತಷ್ಟೆ: 12:14ರ ಸುಮಾರಿಗೆ ಅವನ ಮುಂದಿದ್ದ ಯಂತ್ರದಲ್ಲಿ ಎಚ್ಚರಿಕೆಯ ಗಂಟೆ ಹೊಡೆದುಕೊಳ್ಳಲಾರಂಭಿಸಿತು. “ಅಮೆರಿಕದ ಕಡೆಯಿಂದ ನ್ಯೂಕ್ಲಿಯರ್ ಅಸ್ತ್ರಗಳನ್ನು ಇಟ್ಟುಕೊಂಡ ಒಂದು ಕ್ಷಿಪಣಿ ಸೋವಿಯತ್ ಒಕ್ಕೂಟದ ಕಡೆ ನುಗ್ಗಿಬರುತ್ತಿದೆ” ಎಂಬ ಸಂದೇಶ ಪರದೆಯಲ್ಲಿ ಕಾಣಿಸಿಕೊಂಡಿತು. ನೋಡನೋಡುತ್ತಿದ್ದಂತೆ ಆ ಸಂಖ್ಯೆ 2, 3, 4, 5 ಎಂದು ಏರುತ್ತ ಹೋಯಿತು. ಅತ್ಯಂತ ತುರ್ತಿನ ಸನ್ನಿವೇಶ! ಅಂಥ ಸಂದೇಶಗಳು ಬಂದಾಗ ಏನು ಮಾಡಬೇಕೆಂಬುದರ ಬಗ್ಗೆ ಎಲ್ಲ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳಿದ್ದವು. ಆ ಕೂಡಲೇ – ಆ ಕ್ಷಣದಲ್ಲೇ ಸೂಚನೆ ಮೇಲಧಿಕಾರಿಗಳಿಗೆ ಹೋಗಿಬಿಡಬೇಕು. ತತ್ಕ್ಷಣವೇ ರಕ್ಷಣಾ ಇಲಾಖೆಯ ಮುಖ್ಯಸ್ಥರಿಗೆ ಸುದ್ದಿ ಕಳಿಸಿಬಿಡಬೇಕು. ಫೋನೆತ್ತಿಕೊಳ್ಳಬೇಕಿದ್ದ ಪೆಟ್ರೋವ್ ತಡೆದ. ಅವನು ಯೋಚಿಸತೊಡಗಿದ. ಒಂದರೆಕ್ಷಣದಲ್ಲಿ ಅವನ ಮನಸ್ಸಿನ ಪಟಲದಲ್ಲಿ ಅದುವರೆಗೆ ಆಗಿಹೋದ ರಾಜಕೀಯ ಬದಲಾವಣೆಗಳು, ಎರಡು ದೇಶಗಳ ನಡುವಿನ ಮಾತುಕತೆಗಳು, ಜಗತ್ತಿನ ರಾಜಕೀಯದ ಸದ್ಯದ ಪರಿಸ್ಥಿತಿ ಇತ್ಯಾದಿ ಎಲ್ಲವೂ ವಿಶ್ಲೇಷಣೆಗೊಳಪಟ್ಟವು. ಹಾಗೆಯೇ, ಅಮೆರಿಕದವರು ಒಂದು ಸರ್ವಸನ್ನದ್ಧ ನ್ಯೂಕ್ಲಿಯರ್ ಯುದ್ಧವನ್ನೇ ಆರಂಭಿಸಿಬಿಡುವುದಿದ್ದರೆ ಐದೇ ಐದು ಕ್ಷಿಪಣಿಗಳನ್ನು ಮಾತ್ರ ಯಾಕೆ ಕಳಿಸುತ್ತಾರೆ? ಒಂದೇ ಸಲಕ್ಕೆ ಹತ್ತಾರು ಕ್ಷಿಪಣಿಗಳನ್ನು ಉಡಾವಣೆ ಮಾಡಬೇಕಿತ್ತಲ್ಲ – ಎಂಬ ಯೋಚನೆಯೂ ಆತನಿಗೆ ಬಂತು. ಕ್ಷಿಪಣಿಗಳನ್ನು ಪತ್ತೆಹಚ್ಚುವ ಯಂತ್ರ ಹೊಸದು – ಅದು ತಪ್ಪು ಫಲಿತಾಂಶ ಕೊಡುತ್ತಿರಬಹುದು; ಅಥವಾ ನಮ್ಮ ಯಂತ್ರಗಳಲ್ಲೇ ಎಲ್ಲಾದರೂ ದೋಷ ಇರಬಹುದು. ಏನೇ ಇರಲಿ, ಅಮೆರಿಕ ಕ್ಷಿಪಣಿ ಹಾರಿಸಿದೆಯೆಂಬ ಸುದ್ದಿ ನಿಜವಿರಲಿಕ್ಕಿಲ್ಲ – ಎಂದು ಬಲವಾಗಿ ಅನ್ನಿಸಿ ಪೆಟ್ರೋವ್ ಅದನ್ನು “ಯಂತ್ರದ ತಪ್ಪು” ಎಂದು ಷರಾ ಬರೆದು ಬದಿಗಿಟ್ಟುಬಿಟ್ಟ!.
ಕೆಲ ಹೊತ್ತಿನ ನಂತರ, ಹಾಗೆ ಅಮೆರಿಕದ ಕಡೆಯಿಂದ ನ್ಯೂಕ್ಲಿಯರ್ ಅಸ್ತ್ರಗಳು ಬಂದದ್ದು ಸುಳ್ಳೆಂದೂ, ಯಂತ್ರವೇ ಸೂರ್ಯನ ಕಿರಣಗಳನ್ನು ತಪ್ಪಾಗಿ ಅರ್ಥೈಸಿಕೊಂಡು ತಪ್ಪು ಎಚ್ಚರಿಕೆ ಗಂಟೆಯನ್ನು ಬಾರಿಸಿತ್ತೆಂದೂ ಗೊತ್ತಾಯಿತು. ಒಂದು ವೇಳೆ ಪೆಟ್ರೋವ್ ಅಂದು ಯಂತ್ರದ ಫಲಿತಾಂಶವನ್ನೇ ನಂಬಿ ತನ್ನ ಮೇಲಧಿಕಾರಿಗಳಿಗೆ ಸೂಚನೆ ಕೊಟ್ಟುಬಿಟ್ಟಿದ್ದರೆ, ಸೂಚನೆ ಹೋದ ಹತ್ತು-ಹದಿನೈದು ನಿಮಿಷಗಳಲ್ಲೇ ಸೋವಿಯತ್ ರಷ್ಯಾ ಮರುದಾಳಿಯನ್ನು ಪ್ರಾರಂಭಿಸಿ, ಒಟ್ಟಾರೆ ಮರುದಿನದ ಮುಂಜಾನೆಯ ಹೊತ್ತಿಗೆ ಎರಡೂ ದೇಶಗಳ ನಾಲ್ಕೈದು ದೊಡ್ಡ ನಗರಗಳು ಭಸ್ಮವಾಗುತ್ತಿದ್ದವು! ಪೆಟ್ರೋವ್ನ ‘ಸಾಮಾನ್ಯಜ್ಞಾನ’ ಅಂಥ ಮಹಾದುರಂತವನ್ನು ತಡೆದಿತ್ತು (ಹಾಗಂತ ಅವನಿಗೆ ಪ್ರಶಸ್ತಿಯನ್ನೇನೂ ಕೊಡಲಿಲ್ಲ! ಯಂತ್ರ ಕೊಟ್ಟ ಎಚ್ಚರಿಕೆಯನ್ನು ಕಡೆಗಣಿಸಿ ತನ್ನ ಸಾಮಾನ್ಯಜ್ಞಾನವನ್ನೇ ನೆಚ್ಚಿಕೊಂಡ ಎಂದು ಅವನನ್ನು ನಂತರ ಹಿಂಬಡ್ತಿ ಕೊಟ್ಟು ಯಾವುದೋ ಕೆಲಸಕ್ಕೆ ಬಾರದ ಹುದ್ದೆಗೆ ವರ್ಗಾಯಿಸಲಾಯಿತು. ಅವನ ಹಲವು ಪ್ರಮೋಶನ್ಗಳನ್ನು ತಡೆಹಿಡಿಯಲಾಯಿತು. ಅವನಿಗೆ ಯಾವ ಸರ್ಕಾರಿ ಸೌಲಭ್ಯಗಳೂ ಸಿಗದಂತೆ ನೋಡಿಕೊಳ್ಳಲಾಯಿತು. ಘಟನೆ ನಡೆದು ಮೂರ್ನಾಲ್ಕು ದಶಕಗಳಾದ ಮೇಲಷ್ಟೇ ಅವನ ಅಂದಿನ ಕೆಲಸ ಸಾರ್ವಜನಿಕರ ಗಮನಕ್ಕೆ ಬಂದು, ಅವರ ಗೌರವಾದರಗಳು ಹರಿದುಬಂದವು. ಅಂಥ ಮನ್ನಣೆ ಸಿಗುವ ಹೊತ್ತಿಗೆ ಪೆಟ್ರೋವ್ ಪೂರ್ತಿ ಮುದುಕನಾಗಿದ್ದ).
ಕೆಲವೊಮ್ಮೆ ಹಾಗಾಗುತ್ತದೆ. ಆ ಕ್ಷಣದ ನಿರ್ಧಾರವನ್ನು ‘ಸಾಮಾನ್ಯಜ್ಞಾನ’ ಎಂದಲ್ಲದೆ ಮತ್ತಾವುದರಿಂದಲೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲದಂಥ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಒಬ್ಬ ವ್ಯಕ್ತಿ ಪ್ರತ್ಯಕ್ಷ, ಅನುಮಾನ, ಪರೀಕ್ಷಾ, ಸಂದೇಹಗಳಂಥ ಎಲ್ಲ ಉಪಕರಣಗಳನ್ನು ಬಳಸಿ ಫಲಿತಾಂಶ ತೆಗೆದ ಮೇಲೂ ಐದನೆಯದಾದ ಸಾಮಾನ್ಯಜ್ಞಾನವನ್ನು ಬಳಸಿ ಬೇರೆಯೇ ನಿರ್ಧಾರ ತೆಗೆದುಕೊಂಡುಬಿಡಬಹುದು. ಅಂಥ ಐದನೆಯ ಪ್ರಜ್ಞೆಗೆ ಭಾರತೀಯ ವೈಜ್ಞಾನಿಕ ಪರಿಭಾಷೆಯಲ್ಲಿ ‘ಯುಕ್ತಿ’ ಎನ್ನುತ್ತೇವೆ.
ಇದನ್ನು ಒಂದೆರಡು ಕತೆಗಳಿಂದ ಅರ್ಥಮಾಡಿಕೊಳ್ಳಬಹುದು. ಒಬ್ಬ ಬ್ರಾಹ್ಮಣ ಕಾಡಿನ ದಾರಿಯಲ್ಲಿ ನಡೆದುಹೋಗುತ್ತಿದ್ದ. ಆಗ, ಬೋನಿನಲ್ಲಿ ಸಿಕ್ಕಿಬಿದ್ದಿದ್ದ ಹುಲಿಯೊಂದು ಕಂಡಿತು. ಹುಲಿ, “ಅಣ್ಣಾ, ಈ ಬಂಧನದಿಂದ ನನ್ನನ್ನು ಪಾರುಮಾಡಣ್ಣಾ. ಅದಕ್ಕೆ ಪ್ರತಿಯಾಗಿ ನಾನು ಹೊರಬಂದಕೂಡಲೇ ಕಾಡಿನೊಳಗೆ ಹೋಗಿಬಿಡುತ್ತೇನೆ. ನಿನಗೆ ಯಾವ ಅಪಾಯವನ್ನೂ ಮಾಡುವುದಿಲ್ಲ” ಎಂದು ಗೋಗರೆಯಿತು. ಕರಗಿದ ಬ್ರಾಹ್ಮಣ (ಕೆಲವೊಮ್ಮೆ ಮನಸ್ಸು ಕರಗಿದಾಗ ಬುದ್ಧಿ ಕೈಕೊಡುತ್ತದೆ!) ಬೋನಿನ ಚಿಲಕ ತೆಗೆದುಬಿಟ್ಟ. ಥಟ್ಟನೆ ಹೊರಜಿಗಿದ ಹುಲಿ, “ನಿನ್ನನ್ನು ತಿಂದುಮುಗಿಸಿಯೇ ಬೇರೆ ಕೆಲಸ” ಎಂದು ಅವನನ್ನು ಹಿಡಿದುಕೊಂಡಿತು. ಕೃತಘ್ನತೆಯ ಪರಿಚಯ ಮಾಡಿಸಿಕೊಂಡ ಬ್ರಾಹ್ಮಣ ಬದುಕಿಸಿರೆಂದು ಬೊಬ್ಬೆಹೊಡೆಯತೊಡಗಿದ. ಅಷ್ಟರಲ್ಲಿ ಅಲ್ಲೊಂದು ತೋಳ ಬಂತು. ಅದಕ್ಕೆ ನಡೆದದ್ದೇನೆಂಬುದು ತಿಳಿದುಹೋಯಿತು. ಭೂತದಯೆ ತೋರಿಸಲು ಹೋಗಿ ಜೀವಕ್ಕೆ ಸಂಚಕಾರ ತಂದುಕೊಂಡ ಬ್ರಾಹ್ಮಣನನ್ನು ಉಳಿಸಬೇಕೆಂದು, ಅದು ಇವರಿಬ್ಬರ ನಡುವೆ ಮಧ್ಯಸ್ಥಿಕೆ ಮಾಡಲು ಬಂದಂತೆ ನಟಿಸಿ, “ನೀವು ಏನೇನಾಯಿತು ಎಂಬುದನ್ನು ಪ್ರಾರಂಭದಿಂದ ಹೇಳಿ. ನನಗೆ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು” ಎಂದಿತು. ಆಗ ಹುಲಿ “ನಾನು ಮೊದಲು ಬೋನಿನೊಳಗೆ ಹೀಗೆ ಇದ್ದೆ” ಎನ್ನುತ್ತ ಬೋನಿನೊಳಗೆ ಹೋಗಿ ನಿಂತುಕೊಂಡಿತು. “ಆಗ ಬೋನಿನ ಚಿಲಕ ಹೀಗೆ ಹಾಕಿತ್ತು” ಎಂದು ಬ್ರಾಹ್ಮಣ ಚಿಲಕ ಭದ್ರಪಡಿಸಿ ಅಪಾಯದಿಂದ ಪಾರಾದ. ಇಲ್ಲಿ ನಮಗೆ ಮುಖ್ಯವಾಗಿ ಕಾಣುವುದು ತೋಳದ ಬುದ್ಧಿವಂತಿಕೆ. ಇದನ್ನು ಹೀಗಲ್ಲದೆ ಪಂಚಾಯಿತಿ ನಡೆಸಿ ನ್ಯಾಯತೀರ್ಮಾನ ಮಾಡಲು ಬರುತ್ತಿರಲಿಲ್ಲ ಎಂಬುದು ತೋಳಕ್ಕೆ ಬಹಳ ಚೆನ್ನಾಗಿಯೇ ಗೊತ್ತಿತ್ತು!.
ಹೀಗೆ ಎಲ್ಲ ಬಗೆಯ ವಿದ್ಯೆಗಳಿಗಿಂತ ಭಿನ್ನವಾಗಿ ನಿಲ್ಲುವ, ಶಾಸ್ತ್ರದ ಪರಿಧಿಗೆ ಮೀರಿದ ಜ್ಞಾನವನ್ನೇ ನಾವು ಯುಕ್ತಿ ಎನ್ನುವುದು. ಶಾಲೆಯ ಪಠ್ಯಪುಸ್ತಕಗಳಲ್ಲಿ ಪ್ರತಿ ಅಧ್ಯಾಯದ ಕೊನೆಯಲ್ಲಿ ಒಂದಷ್ಟು ಪ್ರಶ್ನೆಗಳನ್ನು ಕೊಟ್ಟಿರುತ್ತಾರೆ. ಆ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕೆಂಬ ಸೂಚನೆ ಪಾಠದೊಳಗೆಯೇ ಇರುತ್ತದೆ. ಅಲ್ಲಿ ಬಂದ ಒಂದಷ್ಟು ಸೂತ್ರಗಳು, ಸಿದ್ಧಾಂತಗಳು, ಪ್ರಮೇಯಗಳನ್ನು ಬಳಸಿಕೊಂಡು ಉತ್ತರ ತೆಗೆಯುವುದಕ್ಕೆ ಶಾಸ್ತ್ರಜ್ಞಾನ ಸಾಕಾಗುತ್ತದೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬರುವ ಪ್ರಶ್ನೆಗಳಿಗೆ ಉತ್ತರ ತೆಗೆಯಲು ಸಿದ್ಧಸೂತ್ರಗಳಿರುವುದಿಲ್ಲ; ಇಂತಿಂಥ ಪ್ರಮೇಯವನ್ನು ನೆನಪಿಸಿಕೊಳ್ಳಿ ಎಂಬ ಸೂಚನೆಯೂ ಇರುವುದಿಲ್ಲ. ಬಹುತೇಕ ಅಲ್ಲಿನ ಪ್ರಶ್ನೆಗಳು ‘ಔಟ್ ಆಫ್ ಸಿಲೆಬಸ್’ನಂತೆಯೇ ಕಾಣುತ್ತವೆ. ಅಂಥ ಪ್ರಶ್ನೆಗಳನ್ನು ಉತ್ತರಿಸಲು ಶಾಸ್ತ್ರಜ್ಞಾನ ಸಾಕಾಗುವುದಿಲ್ಲ; ಸಾಮಾನ್ಯಜ್ಞಾನ – ಅಥವಾ ಯುಕ್ತಿ ಎಂಬುದು ಬೇಕಾಗುತ್ತದೆ. ಆದ್ದರಿಂದಲೇ ಇರಬೇಕು, ಪುಸ್ತಕಗಳನ್ನು ಉರುಹೊಡೆದು ಪರೀಕ್ಷೆ ಬರೆಯುವವರು ರ್ಯಾಂಕ್ ಬಂದಾರು, ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಲ್ಲಿ ಎಡವುತ್ತಾರೆ; ಕಡಿಮೆ ಅಂಕಗಳನ್ನಷ್ಟೇ ಪಡೆಯಲು ಸಮರ್ಥರಾಗುತ್ತಾರೆ.
ಯುಕ್ತಿ ಎಂದರೇನು? ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಬೇಕಾದ ಸಾಧನವೇ ಯುಕ್ತಿ. ಆಯುರ್ವೇದ ಹೇಳುವಂತೆ: ಯುಕ್ತಿಃ ನಾಮ ಅನೇಕಕಾರಣಸಮವಾಯಾತ್ ಏಕ ಕಾರ್ಯ ನಿಷ್ಪತ್ತಿಃ. ಅಂದರೆ, ಅನೇಕ ಕಾರಣಗಳನ್ನೆಲ್ಲ ಪರಿಶೀಲಿಸಿ, ಅವುಗಳಿಂದ ಹೊರಡಬಹುದಾದ ಒಂದು ಅಂತಿಮ ಫಲಿತಾಂಶವನ್ನು ಮೊದಲೇ ಯೋಚಿಸುವುದು – ಯುಕ್ತಿ. ಷೇರುಪೇಟೆಯಲ್ಲಿ ಪ್ರತಿನಿತ್ಯ ನೂರಾರು ಮಂದಿ ಹೂಡಿಕೆ ಮಾಡುತ್ತಾರೆ; ಆದರೆ ದಿನದ ಕೊನೆಯಲ್ಲಿ ಕೆಲವರಷ್ಟೇ ಗಳಿಕೆ ಮಾಡುತ್ತಾರೆ; ಉಳಿದವರು ಹೂಡಿದ ಹಣವಷ್ಟನ್ನೂ ಕಳೆದುಕೊಳ್ಳುತ್ತಾರೆ. ಇಲ್ಲಿ ಅದೃಷ್ಟದ ಪಾಲು ಒಂದೋ ಎರಡೋ ಶೇಕಡಾ ಇದ್ದರೆ, ಮಿಕ್ಕಿದ್ದೆಲ್ಲ ಯುಕ್ತಿಗೆ ಸಂಬಂಧಿಸಿದ್ದು. ಯಾವ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಏನಾಗಬಹುದು; ಎಷ್ಟೆಷ್ಟು ದುಡ್ಡನ್ನು ಹೂಡಿಕೆ ಮಾಡಬಹುದು; ಆ ಕಂಪನಿಗಳ ಆರೋಗ್ಯ ಹೇಗಿದೆ; ಸರ್ಕಾರದ ಯಾವ ನೀತಿ ಯಾವ್ಯಾವ ಕಂಪೆನಿಗಳ ಮೇಲೆ ಹೇಗೆಹೇಗೆ ಪರಿಣಾಮ ಬೀರಬಹುದು; ಅಂತಾರಾಷ್ಟ್ರೀಯ ಸುದ್ದಿ-ವಿದ್ಯಮಾನಗಳು ಕಂಪನಿಗಳ ಷೇರುಗಳನ್ನು ಹೇಗೆ ಮೇಲೆಕೆಳಗೆ ಮಾಡುತ್ತವೆ – ಇತ್ಯಾದಿ ಹತ್ತುಹಲವಾರು ದೃಷ್ಟಿಕೋನದಿಂದ ವಿವೇಚಿಸಬೇಕಾಗುತ್ತದೆ. ಇದನ್ನು ಹೇಳಿಕೊಡಲು ಕೋರ್ಸ್ ಗಳಿಲ್ಲ; ಪುಸ್ತಕಗಳಿಲ್ಲ; ಅಥವಾ ಶಾಸ್ತ್ರಗ್ರಂಥ-ಸೂತ್ರಗಳೂ ಇಲ್ಲ. ಹಾಗಾಗಿಯೇ ಇದು ಯುಕ್ತಿ.
ಯುಕ್ತಿಯು ಹಲವಾರು ಸಂಗತಿಗಳನ್ನು ವಿಶ್ಲೇಷಣಾತ್ಮಕವಾಗಿ ನೋಡುತ್ತದೆ. ಮೇಲುಮೇಲಕ್ಕೆ ಹೊಂದಿಕೊಂಡಿರುವ ಅಥವಾ ಜೋಡಿಸಿಕೊಂಡಂತಿರುವ ಸಂಗತಿಗಳನ್ನು ಒಟ್ಟಾಗಿ ಗಮನಿಸಲು ವಿಶೇಷವಾದ ಜ್ಞಾನವೇನೂ ಬೇಕಿಲ್ಲ; ಆದರೆ ಮೇಲ್ನೋಟಕ್ಕೆ ಬೇರೆಬೇರೆಯಾಗಿಯೇ ಕಾಣುವ, ಆದರೆ ಅಂತಿಮವಾಗಿ ಎಲ್ಲೋ ಪರಸ್ಪರ ಸಂಬಂಧವೇರ್ಪಡುವ ಸಂಗತಿಗಳ ಅಂತರ್-ಸಂಬಂಧಗಳನ್ನು ಗುರುತಿಸುವುದು ಯುಕ್ತಿ. ಉದಾಹರಣೆಗೆ, ಗಲ್ಫ್ ರಾಷ್ಟ್ರಗಳಲ್ಲಿರುವ ಯಾವುದೋ ಜಲಸಂಧಿಯ ಮುಚ್ಚುಗಡೆಯಿಂದಾಗಿ ನಮ್ಮ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಇತ್ಯಾದಿ ವಸ್ತುಗಳ ಬೆಲೆಯೇರಿಕೆ ಆಗುವುದೆಂದು ಸಾಮಾನ್ಯವಾದ ಜ್ಞಾನದಿಂದಲೇ ಹೇಳಿಬಿಡಬಹುದು. ಆದರೆ ಇವೆಲ್ಲ ಒಂದಕ್ಕೊಂದು ಬೆಸೆದುಕೊಂಡು ಕೊನೆಗೆ ಮಳೆಗಾಲದ ಪ್ರಾರಂಭದಲ್ಲಿ ರಸಗೊಬ್ಬರದ ಬೆಲೆಯೂ ಆಕಾಶಕ್ಕೆ ಜಿಗಿಯಬಹುದು ಎಂದು ಊಹಿಸುವುದು – ಯುಕ್ತಿ. ಅಂದರೆ ಯುಕ್ತಿಯು ಉಳಿದವರಿಗೆ ಕಾಣದ ಸಂಗತಿಗಳತ್ತ ಕಣ್ಣು ಚಾಚುತ್ತದೆ. ಹಲವು ಹೆಜ್ಜೆ ಮುಂದೆ ಆಗುವುದನ್ನು ಈಗಲೇ ಊಹಿಸುತ್ತದೆ. ಅಂತರ್-ಸಂಬಂಧಗಳನ್ನು ಗುರುತಿಸುತ್ತದೆ. ಯುಕ್ತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಹಲವು ಚರಗಳಲ್ಲಿ ಬಳಸಿಕೊಂಡ ವ್ಯವಸ್ಥೆಗಳು (ಮಲ್ಟಿ-ವೇರಿಯೇಬಲ್ ಸಿಸ್ಟಮ್ಸ್. ಉದಾಹರಣೆಗೆ ಯಾವುದಾದರೂ ಸಾಂಕ್ರಾಮಿಕ ರೋಗ ಒಂದು ನಗರದಲ್ಲಿ/ದೇಶದಲ್ಲಿ ಹೇಗೆ ಹರಡುತ್ತ ಹೋಗುತ್ತದೆ ಎಂಬುದನ್ನು ಊಹಿಸಿಕೊಂಡು, ಅದಕ್ಕೆ ಬೇಕಾದ ಪರಿಹಾರೋಪಾಯಗಳನ್ನು ಮಾಡಿಕೊಳ್ಳುವುದು, ಹವಾಮಾನ ವರದಿಯಲ್ಲಿ ನಾಳೆ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿ ಮಳೆ ಆಗುತ್ತದೆಯೆ? ಇತ್ಯಾದಿ…) ತುಂಬ ಸಂಕೀರ್ಣವಾಗಿರುವುದನ್ನು ಗಮನಿಸಬಹುದು. ಹೃದಯದ ಬೈಪಾಸ್ ಸರ್ಜರಿಯನ್ನು ಮಾಡುವ ವೈದ್ಯನಿಗೆ ಶಾಸ್ತ್ರಜ್ಞಾನ ಎಷ್ಟಿದೆಯೋ ಅದಕ್ಕಿಂತ ಹೆಚ್ಚಿನ ಪ್ರಮಾಣದ ಯುಕ್ತಿ ಬೇಕಾಗುತ್ತದೆ. “ಈ ಕ್ಷಣದಲ್ಲಿ ನಾನು ತೆಗೆದುಕೊಳ್ಳುವ ನಿರ್ಣಯ ಮುಂದೆ ಏನೇನು ಪರಿಣಾಮಗಳನ್ನು ಮಾಡುತ್ತದೆ” ಎಂಬುದನ್ನು ಕಾಲರೇಖೆಯಲ್ಲಿ ಅತಿದೂರದವರೆಗೆ ಯೋಚಿಸಬಲ್ಲವನೇ ಯುಕ್ತಿಯನ್ನು ಸರಿಯಾಗಿ ಬಳಸಬಲ್ಲವನು.
