ಬೆಂಗಳೂರು, ಜೂನ್ 30: ಸಮಾಜಸೇವೆಯನ್ನು ಬದುಕಿನ ಧ್ಯೇಯವನ್ನಾಗಿಸಿಕೊಂಡು ಕೀರ್ತಿ, ಪ್ರಸಿದ್ಧಿ ಹಾಗೂ ಪದವಿಗಳಿಂದ ದೂರವಿದ್ದು, ಸಂಘಟನೆ ಮತ್ತು ಸಮಾಜಕ್ಕಾಗಿ ಬದುಕನ್ನೇ ಧಾರೆ ಎರೆದ ಹಿರಿಯ ಕಾರ್ಯಕರ್ತ ದಿವಂಗತ ಬಿ.ಎನ್. ಮೂರ್ತಿ ಅವರ ಜೀವನ ಸಾಧನೆಯನ್ನು ದಾಖಲಿಸಿರುವ ‘ಧ್ಯೇಯಮೂರ್ತಿ’ ಸ್ಮರಣ ಸಂಚಯವು ಮಂಗಳವಾರ ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನ ವಾಡಿಯಾ ಸಭಾಂಗಣದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು.
ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಚರಮೂರ್ತಿ ಶ್ರೀ ಶ್ರೀ ಶಿವರುದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಶ್ರೀ ಸುಧೀರ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪುಸ್ತಕದ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಬಿ.ಎನ್. ಮೂರ್ತಿ ಅವರ ಸಹೋದರಿ ವಸಂತಾ ಸ್ವಾಮಿ ಭಾವುಕ ನೆನಪುಗಳನ್ನು ಹಂಚಿಕೊಂಡರು. ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷ ದೀಪಕ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
‘ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ’ ಎಂಬ ಬದುಕು

ಪ್ರಾಸ್ತಾವಿಕವಾಗಿ ಮಾತನಾಡಿದ ದು.ಗು. ಲಕ್ಷ್ಮಣ, “ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ತತ್ವವನ್ನು ಅಕ್ಷರಶಃ ಬದುಕಿನಲ್ಲಿ ಅಳವಡಿಸಿಕೊಂಡ ಪುಣ್ಯಾತ್ಮ ಬಿ.ಎನ್. ಮೂರ್ತಿ, ಕೀರ್ತಿ ಹಾಗೂ ಪ್ರಸಿದ್ಧಿಗಳಿಗೆ ಸದಾಕಾಲ ಬೆನ್ನು ತಿರುಗಿಸಿದ ನೈಜ ಸ್ವಯಂಸೇವಕರಾಗಿದ್ದರು” ಎಂದು ಬಣ್ಣಿಸಿದರು.
ಕಳೆದ ಡಿಸೆಂಬರ್ನಲ್ಲಿ ವಿಹಿಂಪ ಹಿರಿಯ ಕಾರ್ಯಕರ್ತ ಟಿ.ಎ.ಪಿ. ಶಣೈ ಅವರು ಪುಸ್ತಕ ಪ್ರಕಟಿಸುವ ಪ್ರಸ್ತಾವನೆಯೊಂದಿಗೆ ಸಂಪಾದಕತ್ವದ ಜವಾಬ್ದಾರಿಯನ್ನು ವಹಿಸಿದ್ದನ್ನು ಸ್ಮರಿಸಿದ ಅವರು, ತುರ್ತು ಪರಿಸ್ಥಿತಿಯ ದಿನಗಳಲ್ಲಿ ಮೂರ್ತಿಯವರ ಮನೆಯಲ್ಲಿ ಆಶ್ರಯ ಪಡೆದಿದ್ದ ಅನುಭವದಿಂದ ಅವರ ವ್ಯಕ್ತಿತ್ವವನ್ನು ಹತ್ತಿರದಿಂದ ಕಂಡಿದ್ದಾಗಿ ಹೇಳಿದರು.
ಪುಸ್ತಕಕ್ಕಾಗಿ 75 ಮಂದಿಗೆ ಪತ್ರ ಬರೆದಾಗ 55 ಆಪ್ತರು ತಮ್ಮ ನೆನಪುಗಳು ಮತ್ತು ಲೇಖನಗಳನ್ನು ಕಳುಹಿಸಿದ್ದು, ಹಿರಿಯ ಕಾರ್ಯಕರ್ತ ಮೈ.ನ ನಾಗರಾಜ್ ಅವರ ಸಮಗ್ರ ಜೀವನಚರಿತ್ರೆ ಹಾಗೂ ಪರಮಪೂಜ್ಯ ಶ್ರೀಗಳ ಸಂದರ್ಶನ ಕೃತಿಗೆ ವಿಶೇಷ ಮೌಲ್ಯ ನೀಡಿವೆ ಎಂದು ತಿಳಿಸಿದರು.
ಆಡಂಬರವಿಲ್ಲದ ಅವಧೂತ
ಪುಸ್ತಕದಲ್ಲಿ ದಾಖಲಾಗದ ಕೆಲವು ಘಟನೆಗಳನ್ನು ಹಂಚಿಕೊಂಡ ದು.ಗು. ಲಕ್ಷ್ಮಣ, ಮೂರ್ತಿಯವರ ಸರಳತೆ ಮತ್ತು ಮಾನವೀಯತೆಯ ಹಲವು ಮುಖಗಳನ್ನು ಅನಾವರಣಗೊಳಿಸಿದರು.
ಒಮ್ಮೆ ಕಾರ್ಯಕರ್ತನೊಬ್ಬ ಎದೆನೋವಿನ ಬಗ್ಗೆ ಹೇಳುತ್ತಿದ್ದಂತೆಯೇ, ತಮ್ಮ ಸಹೋದರ ಹಾಗೂ ಶಾಸಕ ಬಿ.ಎನ್. ವಿಜಯಕುಮಾರ್ ಅವರ ಮೂಲಕ ಜಯದೇವ ಆಸ್ಪತ್ರೆಗೆ ಕೆಲವೇ ನಿಮಿಷಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಿಸಿದ್ದನ್ನು ಅವರು ಸ್ಮರಿಸಿದರು.
ಪುಟ್ಟಪರ್ತಿಯಲ್ಲಿ ಶ್ರೀ ಸತ್ಯಸಾಯಿ ಬಾಬಾ ನೀಡಿದ ಚಿನ್ನದ ಸರವನ್ನು ಸ್ವೀಕರಿಸಲು ನಿರಾಕರಿಸಿದ್ದ ಮೂರ್ತಿಯವರು, ಒತ್ತಾಯಕ್ಕೆ ಮಣಿದು ಪಡೆದ ನಂತರ ಅದನ್ನು ಮನೆಯವರಿಗೆ ನೀಡಿ ನಿರಾಳರಾಗಿದ್ದರು. ಬಿಳಿ ಶರ್ಟ್, ಬಿಳಿ ಪಂಚೆ ಧರಿಸಿ, ಕೈಗೆ ಗಡಿಯಾರ ಕಟ್ಟದೆ, ಅನೇಕ ಬಾರಿ ಚಪ್ಪಲಿಯಿಲ್ಲದೆ ಸಂಚರಿಸುತ್ತಿದ್ದ ಅವರು ಜಯನಗರದಿಂದ ಧರ್ಮಶ್ರೀಯವರೆಗೆ ನಡೆದುಕೊಂಡೇ ಹೋಗುತ್ತಿದ್ದ ಸರಳ ಜೀವನ ನಡೆಸುತ್ತಿದ್ದರು ಎಂದು ಹೇಳಿದರು.
ಕುಟುಂಬದ ಸಹಕಾರದಿಂದ ರೂಪುಗೊಂಡ ಕೃತಿ
ಕೃತಿ ರೂಪುಗೊಳ್ಳಲು ಮೂರ್ತಿಯವರ ಕುಟುಂಬದ ಸಹಕಾರ ಅಪಾರವಾಗಿದೆ ಎಂದು ತಿಳಿಸಿದ ದು.ಗು. ಲಕ್ಷ್ಮಣ, ನರಸಿಂಹಸ್ವಾಮಿ ಮತ್ತು ಸಂಕರ್ಷಣ್ ಅವರು ಸ್ಲೈಡ್ ಶೋ ಸಿದ್ಧಪಡಿಸಿದ್ದು, ಅನ್ನಪೂರ್ಣ ಅವರು ಕಣ್ಣೀರಿನ ನಡುವೆಯೇ ಡಿಟಿಪಿ ಕಾರ್ಯ ನಿರ್ವಹಿಸಿದ್ದಾರೆ. ರಾಷ್ಟ್ರೋತ್ಥಾನದ ಸುಮನ ಹೆಗಡೆ ಲೇಔಟ್ ವಿನ್ಯಾಸ ಮಾಡಿದ್ದು, ಮೂರ್ತಿಯವರ ಬದುಕಿನಿಂದ ಸಮಾಜಕ್ಕೆ ಒಂದು ಹಿಡಿಯಷ್ಟಾದರೂ ಪ್ರೇರಣೆ ದೊರೆತರೆ ತಮ್ಮ ಪರಿಶ್ರಮ ಸಾರ್ಥಕ ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುಸ್ತಕದ ಮೊದಲ ಪ್ರತಿಯನ್ನು ಕರ್ನಾಟಕದ ಹಿರಿಯ ಪ್ರಚಾರಕರಾದ ಸು. ರಾಮಣ್ಣ ಅವರಿಗೆ ಗೌರವಪೂರ್ವಕವಾಗಿ ಅರ್ಪಿಸಲಾಯಿತು.
ಗೃಹಸ್ಥ ಕಾರ್ಯಕರ್ತರ ಜೀವನ ದಾಖಲಿಸಿದ ಅಪರೂಪದ ಕೃತಿ

ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀ ಸುಧೀರ್, ಸಾಮಾನ್ಯವಾಗಿ ಸಂಘಟನೆಯಲ್ಲಿ ಪೂರ್ಣಾವಧಿ ಪ್ರಚಾರಕರ ಜೀವನಚರಿತ್ರೆಗಳು ಪ್ರಕಟವಾಗುತ್ತವೆ. ಆದರೆ ಗೃಹಸ್ಥರಾಗಿಯೇ ಬದುಕಿನುದ್ದಕ್ಕೂ ಸಂಘಕಾರ್ಯಕ್ಕೆ ಸಮರ್ಪಿತರಾದ ಬಿ.ಎನ್. ಮೂರ್ತಿ ಅವರ ಕುರಿತು ಪ್ರಕಟವಾದ ‘ಧ್ಯೇಯಮೂರ್ತಿ’ ಕೃತಿ ಆ ಕೊರತೆಯನ್ನು ನೀಗಿಸಿದೆ ಎಂದು ಹೇಳಿದರು.
1985ರಿಂದ ನಾಲ್ಕು ದಶಕಗಳ ಕಾಲ ಮೂರ್ತಿಯವರನ್ನು ಹತ್ತಿರದಿಂದ ಕಂಡ ಅನುಭವವನ್ನು ಹಂಚಿಕೊಂಡ ಅವರು, ಆದರ್ಶ ಕಾರ್ಯಕರ್ತನಿಗೆ ಅಗತ್ಯವಾದ ಸಂಪರ್ಕ (Connection), ಬದ್ಧತೆ (Commitment) ಮತ್ತು ಸಾತತ್ಯ (Continuity) ಎಂಬ ಮೂರು ಗುಣಗಳು ಅವರ ವ್ಯಕ್ತಿತ್ವದಲ್ಲಿ ಸಮಗ್ರವಾಗಿ ವ್ಯಕ್ತವಾಗಿದ್ದವು ಎಂದರು.
‘ಒನ್ ಲೈಫ್ – ಒನ್ ಮಿಷನ್’
ಮೂರ್ತಿಯವರ ಇಡೀ ಕುಟುಂಬವೇ ಸಂಘದ ಆಸ್ತಿಯಾಗಿತ್ತು ಎಂದು ಹೇಳಿದ ಅವರು, ಸಹೋದರರು ಹಾಗೂ ಕುಟುಂಬದ ಎಲ್ಲ ಸದಸ್ಯರು ವಿವಿಧ ಸಾಮಾಜಿಕ-ಸಂಘಟನಾ ಜವಾಬ್ದಾರಿಗಳಲ್ಲಿ ತೊಡಗಿಸಿಕೊಂಡಿದ್ದನ್ನು ಉಲ್ಲೇಖಿಸಿದರು.
ಹೆಚ್.ಎ.ಎಲ್. ಸಂಸ್ಥೆಯ ಉತ್ತಮ ಉದ್ಯೋಗಕ್ಕೆ ಐವತ್ತನೇ ವಯಸ್ಸಿನಲ್ಲಿ ರಾಜೀನಾಮೆ ನೀಡಿ ಸಮಾಜ ಸೇವೆಗಾಗಿ ‘ವಾನಪ್ರಸ್ಥ’ ಜೀವನವನ್ನು ಸ್ವೀಕರಿಸಿದ್ದ ಮೂರ್ತಿಯವರು, ನಿವೃತ್ತಿಯ ಹಣವನ್ನೂ ವೈಯಕ್ತಿಕ ಬಳಕೆಗೆ ಬಳಸದೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಅರ್ಪಿಸಿದ್ದರು ಎಂದು ವಿವರಿಸಿದರು.
ಹೊಸ ಕಲ್ಪನೆಗಳ ರೂವಾರಿ
ಗೀತಾ ಪಠಣ, ರಾಮಾಯಣ-ಮಹಾಭಾರತ ಅಧ್ಯಯನ ಶಿಬಿರಗಳು, ಪ್ರವಚನಕಾರರ ತರಬೇತಿ, ದೇವರಾಯನದುರ್ಗ ಗಿರಿ ಪ್ರದಕ್ಷಿಣೆ ಸೇರಿದಂತೆ ಅನೇಕ ವಿನೂತನ ಕಾರ್ಯಕ್ರಮಗಳಿಗೆ ಮೂರ್ತಿಯವರು ರೂಪುರೇಷೆ ನೀಡಿದ್ದರು ಎಂದು ಸುಧೀರ್ ಹೇಳಿದರು.
ಇಂದು ಪ್ರತಿಷ್ಠಿತ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬೆಳೆದಿರುವ ಕಾಗಿನೆಲೆಯ ಕನಕ ಸಂಗೀತೋತ್ಸವದ ಪರಿಕಲ್ಪನೆಯೂ ಅವರದ್ದೇ ಆಗಿತ್ತು. ಮೊದಲ ಉತ್ಸವದಲ್ಲಿಯೇ ನೂರಾರು ಸಂಗೀತಗಾರರನ್ನು ಒಗ್ಗೂಡಿಸಿ ಅದನ್ನು ರಾಜ್ಯಮಟ್ಟದ ಕಾರ್ಯಕ್ರಮವನ್ನಾಗಿ ರೂಪಿಸಿದ್ದರು ಎಂದು ತಿಳಿಸಿದರು.
ಅನಾಮಿಕತೆಯ ಆರಾಧಕ
ಅನೇಕ ಕಾರ್ಯಕ್ರಮಗಳ ಪ್ರಧಾನ ಸಂಘಟಕರಾಗಿದ್ದರೂ ತಾವೆಂದೂ ವೇದಿಕೆಯ ಮುಂಚೂಣಿಗೆ ಬರದೆ ಇತರರನ್ನು ಮುಂದೆ ತರುತ್ತಿದ್ದ ವಿನಯ ಅವರ ವ್ಯಕ್ತಿತ್ವದ ದೊಡ್ಡ ವೈಶಿಷ್ಟ್ಯವಾಗಿತ್ತು ಎಂದು ಸುಧೀರ್ ಅಭಿಪ್ರಾಯಪಟ್ಟರು.
ಸರ್ವಜ್ಞನ ವಚನವನ್ನು ಉಲ್ಲೇಖಿಸಿದ ಅವರು, “ಉಚ್ಚ ಆದರ್ಶವಿರಲು, ಸ್ವಚ್ಛ ಜೀವನವಿರಲು, ಪದವಿ-ಕೀರ್ತಿಗಳು ತುಚ್ಛ ಎನಿಸಿರಲು, ಮೂರ್ತಿಗೆ ಹೆಚ್ಚೇನು ಬೇಕು” ಎಂದು ನುಡಿದು ತಮ್ಮ ಭಾಷಣ ಮುಕ್ತಾಯಗೊಳಿಸಿದರು.
“ಸಮಾಜದ ಹಿರಿಯಣ್ಣ”

ಬಿ.ಎನ್. ಮೂರ್ತಿ ಅವರ ಸಹೋದರಿ ವಸಂತಾ ಸ್ವಾಮಿ ಮಾತನಾಡಿ, “ಅವರು ನಮ್ಮ ಕುಟುಂಬಕ್ಕಷ್ಟೇ ಅಲ್ಲ, ಇಡೀ ಸಮಾಜಕ್ಕೇ ಹಿರಿಯಣ್ಣರಾಗಿದ್ದರು. ಮಾತಿನಿಂದಲ್ಲ, ತಮ್ಮ ಬದುಕಿನ ಮೂಲಕವೇ ಆದರ್ಶವನ್ನು ತೋರಿಸಿದ ವ್ಯಕ್ತಿಯಾಗಿದ್ದರು” ಎಂದು ಭಾವುಕರಾದರು.
ಹೆಚ್.ಎ.ಎಲ್. ಕಾಲೋನಿಯಲ್ಲಿ ಗಾಂಧಿ ಶತಮಾನೋತ್ಸವದ ಸಂದರ್ಭದಲ್ಲಿ ಶ್ರಮದಾನದ ಮೂಲಕ ರಸ್ತೆ ನಿರ್ಮಾಣಕ್ಕೆ ಜನರನ್ನು ಒಗ್ಗೂಡಿಸಿದ್ದನ್ನು ಅವರು ರಾಮಸೇತು ನಿರ್ಮಾಣಕ್ಕೆ ಹೋಲಿಸಿದರು.
ಕುಷ್ಠರೋಗಿಗಳ ಆಶ್ರಮದೊಂದಿಗೆ ಬಾಂಧವ್ಯ ಬೆಳೆಸಿ, ಕಾಲೋನಿಯ ಜನರನ್ನು ಅವರೊಂದಿಗೆ ಸಂಪರ್ಕಿಸುವ ಮೂಲಕ ಸಾಮಾಜಿಕ ಸಮರಸತೆಯ ಮಾದರಿಯನ್ನು ನಿರ್ಮಿಸಿದ್ದರು ಎಂದು ನೆನಪಿಸಿಕೊಂಡರು.
ರಾಮನವಮಿ ಉತ್ಸವಗಳಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ತೋರಿದ ಕಾಳಜಿ, ಗಣೇಶೋತ್ಸವದ ಮಲ್ಲಿಗೆ ರಥ ನಿರ್ಮಾಣದಲ್ಲಿ ಮಕ್ಕಳನ್ನು ತೊಡಗಿಸಿ ಅವರಲ್ಲಿ ಸಂಸ್ಕಾರದ ಬೀಜ ಬಿತ್ತಿದ ಘಟನೆಗಳನ್ನು ಸ್ಮರಿಸಿದ ಅವರು, “ಮೂರ್ತಿ ಅಣ್ಣನ ಜೊತೆ ಇದ್ದರೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಿಗುತ್ತದೆ ಎಂಬ ನಂಬಿಕೆ ಕಾಲೋನಿಯ ಎಲ್ಲ ತಾಯಂದಿರಲ್ಲಿತ್ತು” ಎಂದರು.
ಸಮಾಜದ ಸವಾಲುಗಳಿಗೆ ಧೈರ್ಯದಿಂದ ಸ್ಪಂದಿಸಿದ ಕಾರ್ಯಕರ್ತ

ಆಶೀರ್ವಚನ ನೀಡಿದ ಚರಮೂರ್ತಿ ಶಿವರುದ್ರ ಸ್ವಾಮೀಜಿ, ಪಂಜಾಬ್ನಲ್ಲಿ ಶಾಂತಿ-ಸೌಹಾರ್ದ ಪುನಃಸ್ಥಾಪನೆಗಾಗಿ ನಡೆದ ಸದ್ಭಾವನಾ ಯಾತ್ರೆ, ಧರ್ಮಸಂಸತ್, ರಾಮಜನ್ಮಭೂಮಿ ಚಳವಳಿ, ಶಿಲಾಪೂಜೆ, ಕನಕದಾಸರ ಕಾರ್ಯಕ್ರಮಗಳು ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಸಾಮಾಜಿಕ ಉಪಕ್ರಮಗಳಲ್ಲಿ ಮೂರ್ತಿಯವರು ಸಕ್ರಿಯ ಪಾತ್ರವಹಿಸಿದ್ದನ್ನು ಸ್ಮರಿಸಿದರು.
1984ರ ಬಳಿಕದ ಪಂಜಾಬ್ನ ಉದ್ವಿಗ್ನ ಪರಿಸ್ಥಿತಿಯಲ್ಲಿ ನಡೆದ ಹರಿದ್ವಾರ–ಅಮೃತಸರ ಸದ್ಭಾವನಾ ಯಾತ್ರೆ, ಧರ್ಮಸಂಸತ್ಗಳ ಸಂಘಟನೆ, ರಾಮಜನ್ಮಭೂಮಿ ಮುಕ್ತಿ ಯಜ್ಞ ಸಮಿತಿಯ ಕಾರ್ಯಚಟುವಟಿಕೆಗಳು ಹಾಗೂ ಕರ್ನಾಟಕದಾದ್ಯಂತ ನಡೆದ ಜನಜಾಗರಣೆಯಲ್ಲಿ ಮೂರ್ತಿಯವರ ಸಂಘಟನಾ ಸಾಮರ್ಥ್ಯ ಮಹತ್ತರವಾಗಿತ್ತು ಎಂದು ಹೇಳಿದರು.
ಹೆಚ್.ಎ.ಎಲ್. ಉದ್ಯೋಗ ತೊರೆದು ಸಮಾಜಕಾರ್ಯಕ್ಕೆ ಸಂಪೂರ್ಣ ಸಮರ್ಪಿತರಾದ ಮೂರ್ತಿಯವರ ಜೀವನವನ್ನು ಅವರು ಬುದ್ಧನ ತ್ಯಾಗಕ್ಕೆ ಹೋಲಿಸಿದರು. “ಮಾಡುವ ಮಾತಿನಲ್ಲಿ ತಾನಿಲ್ಲದಿರಬೇಕು” ಎಂಬ ಬಸವಣ್ಣನ ತತ್ವವನ್ನು ಬದುಕಿನುದ್ದಕ್ಕೂ ಅನುಸರಿಸಿದ್ದ ಮೂರ್ತಿಯವರು ಯಾವುದೇ ಅಹಂಕಾರವಿಲ್ಲದೆ ಕಾರ್ಯನಿರ್ವಹಿಸಿದರು ಎಂದು ಶ್ಲಾಘಿಸಿದರು.
ಇಂದು ಅವರ ಹೆಸರಿನಲ್ಲಿ ಕೇವಲ ಮುಖಾರಾಧನೆ ಮಾಡುವುದಕ್ಕಿಂತ, ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಸಮಾಜದ ಜವಾಬ್ದಾರಿ ಎಂದು ಸ್ವಾಮೀಜಿ ಕರೆ ನೀಡಿದರು.
ಪ್ರೇರಣೆಯ ಗ್ರಂಥ
ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಎಲ್ಲ ಗಣ್ಯರೂ ‘ಧ್ಯೇಯಮೂರ್ತಿ’ ಕೃತಿಯು ಕೇವಲ ಜೀವನಚರಿತ್ರೆಯಲ್ಲ; ನಿಸ್ವಾರ್ಥ ಸೇವೆ, ಧ್ಯೇಯನಿಷ್ಠೆ, ಸಂಘಟನಾ ಕೌಶಲ್ಯ, ಸರಳತೆ ಮತ್ತು ಸಮಾಜಸಮರ್ಪಿತ ಬದುಕಿನ ಜೀವಂತ ದಾಖಲೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮೂರ್ತಿಯವರ ಬದುಕಿನ ಮೌಲ್ಯಗಳು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿ, ಸಮಾಜಸೇವೆಯ ಹೊಸ ಸಂಕಲ್ಪಗಳಿಗೆ ದಾರಿದೀಪವಾಗಲಿ ಎಂಬ ಆಶಯದೊಂದಿಗೆ ಸಮಾರಂಭ ಸಂಪನ್ನವಾಯಿತು.
