ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-47
ಕೇರಳದಲ್ಲಿ ಹೋರಾಟದ ರೋಮಾಂಚಕಾರಿ ಅನುಭವ – 2
ತುರ್ತು ಪರಿಸ್ಥಿತಿಯ ನಂತರ ಮಾರ್ಚ್ 3, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ
ಇಪ್ಪತ್ತೆರಡು ಮಂದಿ ಮಲಗಲು ಅನುಕೂಲವಿದ್ದ ತಮ್ಮ ಬ್ಲಾಕಿನಲ್ಲಿ ನಾವು ನಲವತ್ತೆರಡು ಮಂದಿ ಪೂರ್ಣ ಒಂಬತ್ತು ತಿಂಗಳು ಬಿದ್ದುಕೊಳ್ಳಬೇಕಾಯಿತು. ಮೇ ತಿಂಗಳ ಕೊನೆಯಲ್ಲಿ ಆರಂಭವಾದ ಧಾರಾಕಾರವಾದ ಮಳೆಯ ನೀರು ಮಲಗಿದವರ ಹಾಗೂ ಪುಸ್ತಕ, ಬಟ್ಟೆಬರೆಗಳ ಮೇಲೆಲ್ಲ ಸುರಿಯುತ್ತಿತ್ತು. ಇದರೊಳಗೆ ಇಕ್ಕಟ್ಟಾದ ಆಸನಗಳಿರುವ ಎರಡೇ ಕಕ್ಕಸಗಳು. ಅವುಗಳ ಸಮೀಪ ಮಲಗಿದವರಿಗೆ ಸದಾ ಕಾಲ ಅದೇ ಗಾಳಿ! ಅದೇ ಪರಿಸರ! ಮೇ 25ರಂದು ಕಕ್ಕಸದಲ್ಲಿ ಕುಳಿತ ನನಗೆ ಏಳುವುದು ಕಷ್ಟವಾಯಿತು. ಹೇಗೋ ಎದ್ದು ಬಂದೆ. ತಲೆತಿರುಗು, ಉಸಿರುಗಟ್ಟುವಿಕೆ, ಮೈ ಕೈಗಳಲ್ಲಿ ಅಸಹ್ಯ ನೋವು ಕಾಣಿಸಿ ಚಡಪಡಿಸಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ತಜ್ಞ ಡಾಕ್ಟರರ ವೈದ್ಯಕೀಯ ನೆರವಿನಿಂದ ಒಂಬತ್ತು ದಿನಗಳಲ್ಲಿ ಒಂದಿಷ್ಟು ಗುಣ ಹೊಂದಿದೆ. ಅನಂತರ ಜೈಲು ಆಸ್ಪತ್ರೆಯಲ್ಲಿ ಎರಡೂವರೆ ತಿಂಗಳ ಕಾಲ ಮದ್ದು, ವಿಶ್ರಾಂತಿಗಳಿಂದ ಸುಧಾರಿಸಿಕೊಂಡೆ.
ನರಕದರ್ಶನ ಯೋಗ
ಜೂನ್ 6ರಿಂದ ಆಗಸ್ಟ್ 23ರವರೆಗೆ ಜೈಲಿನ ಆಸ್ಪತ್ರೆಯಲ್ಲಿ ರೋಗಿಯಾಗಿ ಮಲಗಿದ್ದ ದಿನಗಳು ಗರುಡ ಪುರಾಣದಲ್ಲಿ ವರ್ಣಿತ ನರಕದ ದೃಶ್ಯವನ್ನು ನೆನಪಿಗೆ ತಂದಿವೆ. 1906ರಲ್ಲಿ ಬ್ರಿಟಿಷರು ಈ ಕಟ್ಟಡವನ್ನು ಕಟ್ಟಿಸಿದ್ದರು. ಆಸ್ಪತ್ರೆಯ ಪರಿಸರ ಶುಚಿಯಾಗಿರಬೇಕೆಂಬುದು ನಿಯಮವಾದರೂ ಆಧುನಿಕ ಕಕ್ಕಸಗಳು, ನಳ್ಳಿಯ ನೀರು ಎಲ್ಲವೂ ಅಶುದ್ಧ. ಶೌಚಕ್ಕೆ ಉಪಯೋಗಿಸುವ ನೀರು ತೀರಾ ಹೊಲಸು. ಸುತ್ತಲಿನ ಪರಿಸರ ಕಳೆಗಿಡ, ಹುಲ್ಲು ಬೆಳೆದು ನುಸಿ, ಕಂಬಳಿ ಹುಳಗಳ ಆವಾಸ. ಸಮೀಪದಲ್ಲಿ ಸ್ನಾನದ ಕಟ್ಟೆಗಳು. ಕ್ಷಯರೋಗಿಗಳಿಗೆಂದು ಪ್ರತ್ಯೇಕವಾಗಿರುವ ಕೋಣೆಯಿರುವುದು ಸ್ನಾನದ ಕಟ್ಟೆಯ ನೀರಿನ ಟ್ಯಾಂಕಿಗೆ ಸಮೀಪದಲ್ಲಿ. ರೋಗಿಗಳು ಆಗಾಗ ಉಗುಳುವುದು ಸ್ನಾನದ ತೊಟ್ಟಿಯ ಒಳಗೇ ಬೀಳುವಂತಿದೆ. ಮಂಚ, ಹರಕು ಹಾಸಿಗೆಗಳಲ್ಲಿ ಮುದುಡಿಬಿದ್ದಿರುವ ರೋಗಿಗಳು, ಸ್ನಾನದ ತೊಟ್ಟಿಯಲ್ಲಿ ಕಾಗೆಯ ಹಿಕ್ಕೆ, ಗರಿಗಳು! ಕೋಣೆಗಳ ಕಿಟಕಿಗಳ ಗಾಜು ಒಡೆದಿರುವುದರಿಂದ ಮಳೆಯ ನೀರು ಧಾರಾಳ ಒಳಪ್ರವೇಶಿಸಿ ಹರಕು ಹಾಸಿಗೆಗಳು ಪ್ರತಿದಿನವೆಂಬಂತೆ ಒದ್ದೆಯಾಗುತ್ತವೆ. ಸಂಜೆಯಾಗುತ್ತ ಬಂದಂತೆ ನುಸಿಗಳ ದಂಡು ಲೀಲಾಜಾಲವಾಗಿ ಪ್ರವೇಶಿಸಿ ನಮ್ಮ ರಕ್ತಹೀರಿದುದರ ಪರಿಣಾಮವಾಗಿ ಮುಖ, ಕೈ, ಕಾಲುಗಳಲ್ಲಿ ಸಿಡುಬಿನ ಕಲೆಗಳಂತೆ ಕಾಣಿಸುತ್ತಿತ್ತು. ನಮ್ಮ ಕಷ್ಟವನ್ನು ಡಾಕ್ಟರರಲ್ಲಿ ನಿವೇದಿಸಿದಾಗ “ಮುಸುಕುಹಾಕಿ ಮಲಗಿಕೊಳ್ಳಿ” ಎಂಬುದು ಅವರ ಉತ್ತರ! ಆ ಸಮಯದಲ್ಲಿದ್ದ ಸಾಮಾನ್ಯ ಕಾಯಿಲೆ ಇನ್ನೂ ಭೀಕರ. ಇದಕ್ಕೆ ‘ಲೆಟ್ರನ್ ಡಿಸೀಸ್’ ಎಂದು ಹೆಸರು ಕೊಟ್ಟಿದ್ದರು. ಕಕ್ಕಸಗಳಲ್ಲಿ ಸಾಕಷ್ಟು ನೀರು ಹಾಕದೆ ಒಂದು ತರಹ ಗ್ಯಾಸ್ ಉಂಟಾಗಿ ಶೌಚದ ವೇಳೆ ತೊಡೆಯ ಬುಡಗಳಿಗೆ ಅದರ ವಿಷ ತಗುಲಿ ಸ್ವಲ್ಪ ದಿನಗಳಲ್ಲಿ ಅಲ್ಲೆಲ್ಲ ತುರಿಕೆ ಪ್ರಾರಂಭ, ಈ ತುರಿಕೆ ರಾತ್ರಿ ಇನ್ನೂ ಹೆಚ್ಚು, ಒಂದೆರಡು ದಿನಗಳಲ್ಲಿ ಅಲ್ಲೆಲ್ಲ ಕಜ್ಜಿಗಳು ಮತ್ತು ತುರಿಸಿದಾಗ ಒಂದು ತರಹ ನೀರು ಬರಲು ಪ್ರಾರಂಭ, ಅನಂತರ ಅಲ್ಲೆಲ್ಲ ಕುರಗಳು ಮೂಡಿಕೊಳ್ಳುತ್ತವೆ. ತೊಡೆಯ ಬುಡಗಳಲ್ಲಿ, ಗುದ ಪ್ರದೇಶದಲ್ಲಿ ಮೂಡಿದ ಹತ್ತಾರು ಕುರುಗಳ ಸಿಡಿತ ಏಕಕಾಲದಲ್ಲಿ ಅನುಭವಿಸಬೇಕಾಗಿ ರೋಗಿಯ ಸ್ಥಿತಿ ಕಲ್ಪನಾತೀತ.
ಏಕಾಕಿ ಜೀವನ
‘ಸಿಂಗಲ್ ಸೆಲ್’ಗಳಲ್ಲಿ ಅನೇಕ ಮೀಸಾ ಬಂದಿಗಳನ್ನು ನಮ್ಮ ಸರ್ಕಾರ ಪ್ರೀತಿಯಿಂದ ಸಲಹುತ್ತಿತ್ತು! ಪೊಲೀಸರ ಕೈಯಲ್ಲಿ ನಜ್ಜುಗುಜ್ಜಾದ ಮೀಸಾ ತರುಣರನೇಕರು ನಡೆಯಲು ಸಾಧ್ಯವಾಗದೆ ನಾಲ್ಕು ಕಾಲಿನಲ್ಲಿ ಹರಿದಾಡಿಕೊಂಡು ಇಲ್ಲಿ ಬಂದ ದೃಶ್ಯ ಅದೇ ಬ್ಲಾಕಿನಲ್ಲಿ ನಾವಿದ್ದಾಗ ಕಂಡಿದ್ದೆವು. ಅಂತಹವರಲ್ಲಿ ಒಬ್ಬನ ಪಾದದ ಅಡಿಭಾಗ ಹುಣ್ಣಾಗಿ, ಕೀವು ತುಂಬಿ, ಹುಳವಾದ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಬ್ಯಾಂಡೇಜ್ ಮಾಡುವಾಗ ಆತ ಅಳುತ್ತಿದ್ದ ಸ್ವರ ದೇವರು ಎಂಬವನಿದ್ದರೆ ಅವನ ಕರುಳನ್ನೂ ಕರಗಿಸುವಂತಿತ್ತು!.
ಕತ್ತಲೆಯಿಂದ ಬೆಳಕಿಗೆ
ಅಸೌಖ್ಯದ ಕಾರಣಕ್ಕಾಗಿ ಪೆರೋಲಿನಲ್ಲಿ ಬಂದು ಎಪ್ಪತ್ತೈದು ದಿನಗಳ ಚಿಕಿತ್ಸೆಯಿಂದ ಪುನಶ್ಚೇತನಗೊಂಡು ನಮ್ಮ ಜೈಲಿನ ಓರಗೆಯ ಬಂಧುಗಳೊಡನೆ ಮರಳಿ ಸೇರಿಕೊಂಡ ನಾನು ಹೊರಪ್ರಪಂಚದ ಸಂಪರ್ಕವನ್ನು ಪಡೆದುಹೋದ ಕಾರಣ ಗೆಳೆಯರು ನನ್ನನ್ನು ಸುತ್ತುಗಟ್ಟಿ ಪ್ರಶ್ನೆಗಳ ಮಳೆಗರೆದರು. ಬದಲಾಗುತ್ತಿರುವ ರಾಜಕೀಯ ಸ್ಥಿತಿಗಳು ನಮ್ಮನ್ನು ಜಯದ ಕಡೆಗೆ ಸಾಗಿಸುತ್ತಿವೆಯೆಂಬ ವಿಶ್ವಾಸ ಮೂಡಿತು. ಅಟಲ್ ಬಿಹಾರಿ ವಾಜಪೇಯಿಯವರ ಬಿಡುಗಡೆಯ ಸುದ್ದಿಯನ್ನೋದಿದಾಗ ಸಾವಿರಾರು ಸ್ವಯಂಸೇವಕರ ಬಿಡುಗಡೆಯಾದಷ್ಟು ಸಂತೋಷಪಟ್ಟೆವು. ನಮ್ಮ ಜತೆಯಲ್ಲೇ ಇದ್ದ ಕೇರಳ ಪ್ರಾಂತದ ಜನಸಂಘದ ಕಾರ್ಯದರ್ಶಿ ಕೆ.ಜಿ. ಮಾರಾರ್ ಜನವರಿ 14ರಂದು ನಮ್ಮಲ್ಲಿಂದ ಬಿಡುಗಡೆ ಹೊಂದಿದಾಗ ಈ ವಿಶ್ವಾಸ ಮತ್ತಷ್ಟು ದೃಢವಾಯಿತು. ವಾರ್ಡಿನ ಮುಂದೆ ನಾವೇ ನೆಟ್ಟು ಬೆಳೆಸಿದ್ದ ಸೂರ್ಯಕಾಂತಿ ಗಿಡಗಳಲ್ಲಿ ಅಂದೇ ಪ್ರಥಮ ಪುಷ್ಪಗಳು ಅರಳಿಕೊಳ್ಳುತ್ತಿದ್ದವು. ಪ್ರತಿಪಕ್ಷಗಳ ವಿಲೀನ, ಜನತೆಯು ಅದಕ್ಕೆ ತೋರುತ್ತಿದ್ದ ಬೆಂಬಲಗಳು ಜನಶಕ್ತಿ ಎದ್ದುನಿಲ್ಲುತ್ತಿರುವ ಶುಭಸೂಚನೆಯಂತೆ ಕಂಡವು. ಸತ್ಯವನ್ನು ಅಳಿಸಲು ಯತ್ನಿಸಿದ ಸುಳ್ಳಿನ ಅಬ್ಬರ ಇಳಿಯಿತು. ಧರ್ಮವನ್ನು ಮೆಟ್ಟಿ ನಿಲ್ಲಲು ಯತ್ನಿಸಿದ ಅಧರ್ಮ ಕಾಲು ಮುರಿದು ನೆಲಸೇರಿತು. ಅನ್ಯಾಯ ಅನೀತಿಗಳ ಅಸುರೀಶಕ್ತಿ, ಜನತಾಶಕ್ತಿಯ ರಣಚಂಡಿಯೆದುರು ಸೋಲೊಪ್ಪಿತು. ದುರಾಡಳಿತದ ದರ್ಬಾರಿನ ಪಾಪಕರ್ಮಗಳೇ ಅದರ ಪತನಕ್ಕೆ ಕಾರಣವಾದುವು. 1977ನೇ ಇಸವಿ ಫೆಬ್ರವರಿ 22ರಂದು ಸಂಜೆ ನನಗೂ ಜೊತೆಗೆ ಅನೇಕರಿಗೂ ಬಿಡುಗಡೆಯ ಆಜ್ಞೆ ಬಂತು. ಹೀಗಿದ್ದೂ ನಮ್ಮವರೇ ಆದ ಐದು ಮಂದಿಯ ಬಿಡುಗಡೆ ಬಾಕಿಯಾಗಿದ್ದುದರಿಂದ ಅವರನ್ನು ಬಿಟ್ಟು ಭಾರವಾದ ಹೆಜ್ಜೆ ಹಾಕಿ ನಾವು ಹೊರಬರಬೇಕಾಯಿತು. ನಮ್ಮನ್ನು ಬೀಳ್ಕೊಡುವಾಗ ಅವರು ತೋರಿದ ಸ್ಟೈರ್ಯ, ಆಗಲೂ ಅವರ ಮನಸ್ಸಿನಲ್ಲಿ ಹುದುಗಿದ್ದ ಆತ್ಮವಿಶ್ವಾಸ, ಚುನಾವಣೆಯಲ್ಲಿ ಇಂದಿರಾ ಪತನವಾಗಿ ಎಲ್ಲರ ಬಿಡುಗಡೆಯಾಗುವ ತನಕವೂ ಅವರ ಮುಖದಲ್ಲಿ ಮಿಂಚುತ್ತಿದ್ದ ಹುಮ್ಮಸ್ಸು ನಮ್ಮ ಮಾತೃಭೂಮಿಯ ಭಕ್ತರಿಗಲ್ಲದೆ ಇನ್ನಾರಿಗೆ ಬರಲು ಸಾಧ್ಯ?
ಆದುದರಿಂದಲೇ ನಾವು ಅಮೃತ ಪುತ್ರರು.
- ಎಸ್.ವಿ. ಲಕ್ಷ್ಮೀನಾರಾಯಣ ಶರ್ಮ
ಸೆರೆಮನೆಯೊಳಗೆ- ‘ಕಮಾನು ಎತ್ತುತ್ತಾರೆ!’ ಲಂಚದ ಪುರಾವೆ !!
1975ರ ಅಕ್ಟೋಬರ್ 2. ಗಾಂಧಿ ಜಯಂತಿ. ಕಾಮರಾಜರು ನಿಧನ ಹೊಂದಿದ ಸುದ್ದಿ ಅಡ್ವಾಣಿಯವರಿಂದ ತಿಳಿಯಿತು. ಅಡ್ವಾಣಿ ಮತ್ತು ದಂಡವತೆಯವರು ಸಂತಾಪಸೂಚಕ ತಂತಿಕೊಡಲು ಮಾಡಿದ ಪ್ರಯತ್ನ ವ್ಯರ್ಥವಾಯಿತು. “ತಂತಿಯನ್ನು ಕೊಂಡುಹೋಗಿ ಕೊಡಲು ಯಾರೂ ಇಲ್ಲ” ಎಂದು ಸಂಜೆ ತಡವಾಗಿ ತಿಳಿಸಿದರಂತೆ- ಜೈಲಿನ ಅಧಿಕಾರಿಗಳು. ‘ಎ’ ವರ್ಗದಲ್ಲಿರುವ ಸ್ನೇಹಿತರೊಡನೆ ಮಾತುಕತೆಗೆ ಪ್ರತಿದಿನ ನಿಶ್ಚಿತ ಅವಧಿಯ ಅವಕಾಶ ಕೊಡಬೇಕೆಂದು ಜೈಲಿನ ಅಧಿಕಾರಿಗಳಿಗೆ ಮಾಡಿದ ಮನವಿಯೂ ತಿರಸ್ಕರಿಸಲ್ಪಟ್ಟಿತು. ಅ. 3ರಂದು ಪತ್ರಿಕೆಗಳಲ್ಲಿ ಕಾಮರಾಜರ ನಿಧನದ ಸುದ್ದಿ ಇತ್ತಾದರೂ ಯಾವುದೇ ಬಂಧಿತ ನಾಯಕರಿಂದ ಸಂತಾಪ ಸೂಚನೆಯ ಸುದ್ದಿಗಳು ಇರಲಿಲ್ಲ.
ದಿ. 7ರಂದು ರಮ್ಜಾನ್. ಮುಸ್ಲಿಂ ಬಂಧುಗಳು ಬೆಳಿಗ್ಗೆ ಸಡಗರದಿಂದ ಬಿಸಿನೀರು ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ಅತ್ತರು ಹಚ್ಚಿಕೊಂಡು ಓಡಾಡುತ್ತಿದ್ದಾಗ ನಾವೆಲ್ಲರೂ ಅವರಿಗೆ ‘ಈದ್ ಮುಬಾರಕ್’ ಹೇಳಿದೆವು. ಅನಂತರ ಅವರಿಂದ ಸಿಹಿ ತಿಂಡಿ ಮತ್ತು ಬೀಡಾ ಸ್ವೀಕರಿಸಿದೆವು. ನಮ್ಮ ಅಡಿಗೆ ಮಾಡುವ ಕೈದಿ ರಾಜಣ್ಣ ಬಂದು, “ನಾಳೆ ಬಳ್ಳಾರಿ ಮತ್ತು ಧಾರವಾಡ ಜೈಲುಗಳಿಗೆ ಒಟ್ಟು 40 ಕೈದಿಗಳನ್ನು ಕಮಾನು ಎತ್ತುತ್ತಾರೆ. ನಾನು 5 ರೂ. ಲಂಚ ಕೊಟ್ಟು ತಪ್ಪಿಸಿಕೊಂಡೆ” ಎಂದ. ಕಮಾನು ಶಬ್ದದ ಅರ್ಥ ಆಗಲಿಲ್ಲ. ವಿವರಣೆ ಕೇಳಿದಾಗ ವರ್ಗ ಎಂದು ಗೊತ್ತಾಯಿತು. ಈ ಶಬ್ದ ಹಾಗೂ ಅಡಿಗೆ ಮನೆಗೆ ‘ಬಿಸಿ’ ಎನ್ನುವ ಶಬ್ದ ಜೈಲು ವ್ಯವಹಾರದಲ್ಲಿ ಹೇಗೆ ಬಂದಿತೆಂದು ಮುಖ್ಯ ಜೈಲರ್, ಸಹಾಯಕ ಸೂಪರಿಂಟೆಂಡೆಂಟ್ ಮೊದಲಾದವರನ್ನು ಕೇಳಿದೆ. ಅವರೂ ಉಪಯೋಗಿಸುವ ಈ ಶಬ್ದಗಳ ಮೂಲ ಅವರಿಂದಲೂ ತಿಳಿಯಲು ಸಾಧ್ಯವಾಗಲಿಲ್ಲ. ಅವರಿಗೆ ಗೊತ್ತಿಲ್ಲ!.
ದಿ. 8ರ ಪತ್ರಿಕೆಗಳಲ್ಲಿ ಹಿರಿಯ ಜೀವ ಡಿವಿಜಿಯವರ ನಿಧನದ ಸುದ್ದಿ. ಇದ್ದಲ್ಲಿಂದಲೇ ಅವರ ಆತ್ಮಕ್ಕೆ ಉತ್ತಮ ಸದ್ಗತಿಗಾಗಿ ಪರಮಾತ್ಮನಲ್ಲಿ ಪ್ರಾರ್ಥನೆ. ಅಂದು ಬೆಳಿಗ್ಗೆಯೇ ಯಾವುದೋ ಚಲನಚಿತ್ರದ ಚಿತ್ರಣ (ಶೂಟಿಂಗ್) ಜೈಲೊಳಗೆ ನಡೆಯುವುದೆಂದು ಐಜಿಯವರಿಂದ ಹಿಡಿದು ಎಲ್ಲರೂ ಅದರಲ್ಲೇ ತಲ್ಲೀನರು. ಬೆಳಿಗ್ಗೆ ಸ್ಥಾನಬದ್ಧರ ಸಂದರ್ಶನಕ್ಕಾಗಿ ಬಂದವರಿಗೆ ಸಂಜೆ 5ರವರೆಗೆ ಹೊರಗೆ ನಿಲ್ಲಿಸಿ ನಂತರ ಹಿಂತಿರುಗಿಸಲಾಯಿತು. ತಿಂಡಿಗಳನ್ನು ತೆಗೆದುಕೊಂಡು 5-30ಕ್ಕೆ ಬ್ಯಾರಕಿಗೆ ಕಳುಹಿಸಿದರು. ಅದನ್ನೇ ನಂಬಿಕೊಂಡು ಅಡುಗೆ ಮಾಡದೆ ಕಾದಿದ್ದ ಮಾರವಾಡಿಗಳು ಪಾಪ ಉಪವಾಸ ಮಾಡಬೇಕಾಯಿತು! (ಪ್ರತಿ ಬುಧವಾರ ಶನಿವಾರ ಅವರು ಮನೆಗಳಿಂದ ಊಟ-ತಿಂಡಿ ತರಿಸುವುದು ಪದ್ಧತಿ.)
