ಅಂಕಣ – ದೃಶ್ಯ
● ಮಧ್ಯಪ್ರಾಚ್ಯದ ಕಲಾಚಟುವಟಿಕೆಗಳು ಸ್ತಬ್ಧ, ಕಲಾಕ್ಷೇತ್ರ ತಲ್ಲಣ
● ಸಾರಿಗೆ ವೆಚ್ಚ ಹೆಚ್ಚಾಗಿರುವುದು ಭಾರತದ ಮೇಲಾದ ಪರಿಣಾಮ
- ಗಣಪತಿ ಅಗ್ನಿಹೋತ್ರಿ, ದೃಶ್ಯ ಕಲಾವಿದ, ಕಲಾವಿಮರ್ಶಕ, ಪತ್ರಕರ್ತ
‘ಯುದ್ಧ’ ಉನ್ಮಾದಕ್ಕೆ ತಿರುಗಿಕೊಳ್ಳಬಾರದು. ಪರಿಣಾಮ ಏನೆಲ್ಲಾ ಅನುಭವಿಸಬೇಕಾಗಿ ಬರುತ್ತದೆ ಎನ್ನುವುದಕ್ಕೆ ಈಗಾಗಲೇ ಈ ಜಗತ್ತಿನೆದುರು ಅನೇಕ ಉದಾಹರಣೆಗಳು ಸಿಗುತ್ತವೆ. ಅನಿವಾರ್ಯವಾಗಿ ಇಡೀ ಸಮಾಜ ಇದರಿಂದಾಗುವ ಪರಿಣಾಮಗಳ ಸುಳಿಗೆ ಸಿಲುಕಿ ಒದ್ದಾಡಬೇಕಾಗುತ್ತದೆ.
ತಮಗೆಲ್ಲರಿಗೂ ಗೊತ್ತಿರುವಂತೆ ಹಚ್ಚ ಹಸಿರೆನ್ನಬಹುದಾದ ಉದಾಹರಣೆ ಈಗ ನಮ್ಮೆದುರಿಗಿದೆ. ಭಾರತ ಸೇರಿದಂತೆ ಇಡೀ ವಿಶ್ವವೇ ಇದರ ಪರಿಣಾಮ ಎದುರಿಸುತ್ತಿದೆ. ಅದೆಷ್ಟೋ ಜನರ ಬದುಕು ತಲ್ಲಣಿಸಿದೆ. ದಿನದಿಂದ ದಿನಕ್ಕೆ ಬದುಕು ದುಬಾರಿಯಾಗಲಾರಂಭಿಸಿದೆ. ಅನಿಶ್ಚತತೆಯ ಕಾರ್ಮೋಡ ಕವಿದುಕೊಂಡಿದೆ. ಮುಂದೇನಾದೀತೋ ಎನ್ನುವ ಆತಂಕದಲ್ಲಿ ದಿನದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತೀಯರ ನಿತ್ಯ ಬದುಕಿಗೆ ಸದ್ಯಕ್ಕೆ ಅಂತಹದ್ದೊಂದು ದೊಡ್ಡ ಪೆಟ್ಟು ಬೀಳದೇ ಇರಬಹುದಾದರೂ ಪರಿಸ್ಥಿತಿ ಯಾವ ಹಂತಕ್ಕೆ ಬರಬಹುದೆನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ ಎನ್ನುವಂತಿದೆ. ಭಾರತಕ್ಕೆ ಶೇ.80ರಷ್ಟು ಅನಿಲ ಮಧ್ಯಪ್ರಾಚ್ಯದಿಂದಲೇ ಆಮದು ಆಗಬೇಕಾಗಿದ್ದು, ಈಗಾಗಲೇ ಈ ಕ್ಷೇತ್ರದ ಮೇಲೆ ಭಾರೀ ಪರಿಣಾಮ ಬೀರಿರುವುದು ನಮಗೆಲ್ಲರಿಗೂ ಗೊತ್ತಿದೆ.
ಹೌದು, ಕಳೆದ ಕೆಲ ತಿಂಗಳಿಂದ ಮಧ್ಯಪ್ರಾಚ್ಯ (Middle East) ದೇಶಗಳು ಯುದ್ಧದ ರಕ್ತ-ಕಣ್ಣೀರಿನಲ್ಲಿ ಕೈತೊಳೆಯುವಂತಹ ವಿದ್ಯಮಾನಗಳು ಘಟಿಸಿವೆ. ಅದರಲ್ಲೂ ಕಳೆದ ಕೆಲ ತಿಂಗಳಿಂದ ನಡೆದ ಇರಾನ್-ಇಸ್ರೇಲ್ ದೇಶಗಳ ಉನ್ಮಾದಕ್ಕೆ ನೆರೆಹೊರೆಯ ರಾಷ್ಟ್ರಗಳು ಕಂಗಾಲಾದವು. ತೀವ್ರ ನಷ್ಟವನ್ನೂ ಅನುಭವಿಸಿದವು. ಮಧ್ಯಪ್ರವೇಶಿಸಿ ತುಪ್ಪ ಸುರಿದು ಮಜಾ ನೋಡುತ್ತಿರುವ ಅಮೆರಿಕದ ನಿರ್ಧಾರಗಳು ಬೆಚ್ಚಿಬೀಳಿಸುವಂತೆ ಮಾಡಿದವು. ಈ ದೇಶಗಳ ಜೊತೆ ನಿತ್ಯವೂ ವ್ಯವಹರಿಸಬೇಕಾದ ಭಾರತವೂ ಯುದ್ಧದ ಪರಿಣಾಮವನ್ನು ಎದುರಿಸಬೇಕಾಗಿಬಂತು. ಅತ್ಯಂತ ಕೆಟ್ಟ ಪರಿಸ್ಥಿತಿಗೆ ಕೊಂಡೊಯ್ದ ಯುದ್ಧದ ಪರಿಣಾಮಗಳಿಂದ ಕಲಾಕ್ಷೇತ್ರವೂ ಹೊರತಾಗಿಲ್ಲ. ಆರ್ಟ್ ಮಾರ್ಕೆಟ್ ಕಳೆದೊಂದು ತಿಂಗಳಿಂದ ಗಣನೀಯವಾದ ಪರಿಣಾಮ ಎದುರಿಸಿದೆ. ಸದ್ಯಕ್ಕೆ ಶಾಂತಿಯ ಜಪ ಪಠಿಸುತ್ತಿವೆಯಾದರೂ ಈ ತನಕ ಆಗಿರುವ ನಷ್ಟವನ್ನು ಭರಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮಧ್ಯಪ್ರಾಚ್ಯ ದೇಶಗಳ ಜೊತೆ ಉತ್ತಮ ಸಂಬಂಧ ಹೊಂದಿರುವ ಭಾರತದ ಆರ್ಟ್ ಮಾರ್ಕೆಟ್ ತೀವ್ರವಾದ ಆಘಾತ ಎದುರಿಸಿದೆ. ಅದೃಷ್ಟವಶಾತ್ ಈಗ ಶಾಂತಿ ಬಯಸಿ ಯುದ್ಧನಿಲ್ಲಿಸಿದ್ದರಿಂದ ತಕ್ಕಮಟ್ಟಿಗಾದರೂ ಬೇಗ ಚೇತರಿಸಿಕೊಳ್ಳುವ ಆಶಾಭಾವ ಹೊಂದಬಹುದು. ಅಪ್ಪಿತಪ್ಪಿ ಇನ್ನಷ್ಟುದಿನ ಮುಂದುವರಿಸಿದ್ದರೆ ಭಾರಿ ಹೊಡೆತ ಎದುರಿಸಬೇಕಾಗಿ ಬರಬಹುದು ಎಂದು ವಿಶ್ಲೇಷಿಸಲಾಗುತ್ತಿತ್ತು.
ಗಲ್ಫ್ ರಾಷ್ಟ್ರಗಳ ಆರ್ಟ್ ಮಾರ್ಕೆಟ್ ಜೊತೆ ಅತ್ಯಂತ ನಿಕಟವಾದ ವ್ಯವಹಾರ ಸಂಬಂಧ ಇರಿಸಿಕೊಂಡಿರುವ ಭಾರತೀಯ ಕಲಾವಿದರು, ಕಲಾ ಸಂಗ್ರಾಹಕರು, ಆರ್ಟ್ ಮಧ್ಯವರ್ತಿಗಳು ಇದೀಗ ಯುದ್ಧದ ಬಿಸಿಗೆ ನಲುಗಿದ್ದಾರೆ. ಆಯುಧವಿಲ್ಲದ ಸೈನಿಕರಂತಾಗಿದ್ದಾರೆ. ತಮಗೆಲ್ಲರಿಗೂ ಗೊತ್ತಿರುವಂತೆ ಗಲ್ಫ್ ರಾಷ್ಟ್ರಗಳು ಮತ್ತು ಭಾರತ ಅನೇಕ ವಿಚಾರಗಳಲ್ಲಿ ತನ್ನ ಸಂಬಂಧವನ್ನು ಕಾಯ್ದುಕೊಂಡಿದೆ. ಇದರಿಂದಾಗಿ ಎರಡು ರಾಷ್ಟ್ರಗಳ ನಡುವಿನ ವ್ಯವಹಾರದ ಮೇಲೆ ಪರಿಣಾಮ ಬೀಳದು. ಆದರೆ, ಇದೀಗ ಯುದ್ಧದ ಪರಿಣಾಮ ಎದುರಿಸುವಂತಾಗಿದ್ದು ಪರಸ್ಪರ ರಾಷ್ಟ್ರಗಳ ನಡುವಿನ ಸಾರಿಗೆ ವೆಚ್ಚ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇದು ಕಲಾಕೃತಿಗಳ ವಹಿವಾಟಿನ ಮೇಲೆ ನೇರವಾದ ಪರಿಣಾಮ ಬೀರುತ್ತಿದೆ. ಕಳೆದೊಂದು ತಿಂಗಳಿಂದೀಚೆಗೆ ಹೂಡಿಕೆ ಶೇಕಡಾ ಐವತ್ತರಷ್ಟು ಕುಸಿತ ಕಂಡಿದೆ. ಸಾರಿಗೆ ಮಾರ್ಗಗಳಲ್ಲಾದ ಬದಲಾದ ನಿಯಮಗಳು ದುಬಾರಿ ಅನಿಸಲಾರಂಭಿಸಿದೆ. ಹೀಗಾಗಿ ಭಾರತೀಯ ಕಲೆಯ ಮೇಲೆ ಒಲವು ತೋರಬೇಕಾದ ಹೂಡಿಕೆದಾರರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಹೂಡಿಕೆಗೆ ಮನಸ್ಸು ಮಾಡುತ್ತಿಲ್ಲ. ಇದೀಗ ಯುದ್ಧ ನಿಲ್ಲಿಸಿದ್ದರಿಂದ ಮುಂಬರುವ ಕೆಲ ತಿಂಗಳಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಕಾಣಿಸುತ್ತಿದೆ.
ಅಂತಾರಾಷ್ಟ್ರೀಯ ಹರಾಜು ಪ್ರಕ್ರಿಯೆಗಳು, ಗ್ಯಾಲರಿ ಮಾರಾಟಗಳು ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿವೆ. ಕಳೆದ ಎರಡ್ಮೂರು ತಿಂಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಆರ್ಟ್ ಮಾರ್ಕೆಟ್ ತಲ್ಲಣಿಸಿದೆ. ದುಬೈ ಮತ್ತು ಕತಾರ್ಗಳಲ್ಲಿ ನಡೆಯಬೇಕಿದ್ದ ಪ್ರಮುಖ ಕಲಾಪ್ರದರ್ಶನಗಳು ವಿಳಂಬವಾಗುತ್ತಿವೆ. ವಿಶ್ವಮಟ್ಟದಲ್ಲಿ ಜನಪ್ರಿಯತೆ ಗಳಿಸಿಕೊಂಡಿರುವ ಆರ್ಟ್ ದುಬೈ, ವರ್ಲ್ಡ್ ಆರ್ಟ್ ದುಬೈ, ಶಾರ್ಜಾ ಬೆನಾಲೆ, ಡಿಸೈನ್ ದೋಹಾ ಬೆನಾಲೆ ಈಗಾಗಲೇ ವಿಳಂಬವಾಗಿದ್ದು, ಇನ್ನಾವಾಗ ತೊಂದರೆಗೆ ಸಿಲುಕಿಕೊಂಡೀತೋ ಎನ್ನುವ ಆತಂಕ ಸಹಜವಾಗಿದೆ. ಇನ್ನು ಇಲ್ಲಿನ ಅನೇಕ ಗ್ಯಾಲರಿಗಳು ವಿಪರೀತ ತೊಂದರೆಗೆ ಸಿಲುಕಿಕೊಂಡಿವೆ. ಯುದ್ಧದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದು ಆರ್ಟ್ ಮಾರ್ಕೆಟ್ ಮೇಲೂ ಪರಿಣಾಮ ಬೀರಿದೆ. ದುಬೈ ಮತ್ತು ಕತಾರ್ನಲ್ಲಿನ ಉದ್ಯಮ ಕ್ಷೇತ್ರವೂ ಯುದ್ಧದ ಕಾರ್ಮೋಡದಿಂದ ಬಳಲಲಾರಂಭಿಸಿದೆ.
ಸದ್ಯದ ಮಟ್ಟಿಗೆ ಭಾರತದ ಆರ್ಟ್ ಮಾರ್ಕೆಟ್ ಮೇಲೆ ಹೇಳಿಕೊಳ್ಳುವಂತಹ ಪರಿಣಾಮ ಕಾಣಿಸುತ್ತಿಲ್ಲ. ಆದರೆ ಮಧ್ಯಪ್ರಾಚ್ಯ ಅವಲಂಬಿಸಿರುವ ಉದ್ಯಮಗಳಿಗೆ ಭಾರೀ ಹೊಡೆತ ಬಿದ್ದಿದ್ದು, ಇದರಲ್ಲಿ ಕಲಾಕ್ಷೇತ್ರವೂ ಒಳಗೊಂಡಿದೆ. ಬಹಳ ಮುಖ್ಯವಾಗಿ ಸಾರಿಗೆ ವೆಚ್ಚ ಎರಡರಿಂದ ಮೂರು ಪಟ್ಟು ಜಾಸ್ತಿಯಾಗಿದೆ. ಒಂದೊಮ್ಮೆ ತೈಲ, ಅನಿಲ ಆಮದು ಕ್ಷೇತ್ರ ಇನ್ನಷ್ಟು ದುಬಾರಿ ಆದರೆ, ಮುಂದಿನ ದಿನಗಳಲ್ಲಿ ಭಾರತದ ಆರ್ಟ್ ಮಾರ್ಕೆಟ್ ಬಿಗಡಾಯಿಸಿಕೊಳ್ಳಬಹುದು. ಭಾರತದ ಆರ್ಟ್ ಮಾರ್ಕೆಟ್ ಶೇ.50ರಷ್ಟು ಆಧರಿಸಿ ನಿಂತಿರುವುದೇ ಷೇರು ಮಾರುಕಟ್ಟೆಯನ್ನು ಎನ್ನುವ ಮಾತಿದೆ. ಯುದ್ಧದ ಪರಿಣಾಮ ಸದ್ಯ ಷೇರುಗಳ ಮೌಲ್ಯ ಕುಸಿತ ಕಂಡಿದೆ. ಮಧ್ಯಪ್ರಾಚ್ಯದ ಪರಿಸ್ಥಿತಿ ಗಮನಿಸಿದರೆ ಸದ್ಯಕ್ಕೆ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ. ಮುಂದೇನಾದೀತು ಎಂದು ಕಾದುನೋಡೋಣ. ಈ ಎಲ್ಲಾ ಆತಂಕದ ನಡುವೆ ಆರ್ಥಿಕವಾಗಿ ಭಾರತ ಯಥಾಸ್ಥಿತಿ ಕಾಪಾಡಿಕೊಳ್ಳುತ್ತಿರುವುದು ವಿಶ್ವದ ಗಮನ ಸೆಳೆದಿದೆ. ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಕಲಾ ಸಂಗ್ರಾಹಕರು ದುಬೈ ಬದಲಾಗಿ ಭಾರತವನ್ನು ತಮ್ಮ ಕೇಂದ್ರವನ್ನಾಗಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗುತ್ತಿದೆ. ಹಾಗೇನಾದರೂ ಆದಲ್ಲಿ ಭಾರತದ ಆರ್ಟ್ ಮಾರ್ಕೆಟ್ ನಿರೀಕ್ಷೆ ಮೀರಿದ ಪ್ರಗತಿ ಕಾಣುವುದರಲ್ಲಿ ಸಂದೇಹವಿಲ್ಲ. ಅಷ್ಟೇ ಅಲ್ಲ, ಭಾರತೀಯ ಕಲಾವಿದರ ಕಲಾಕೃತಿಗಳು ತನ್ನ ಬೇಡಿಕೆ ಹೆಚ್ಚಿಸಿಕೊಳ್ಳಬಹುದಾದ ಸಾಧ್ಯತೆ ನಿಚ್ಚಳವಾಗಿದೆ.
