ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-48
ತುರ್ತು ಪರಿಸ್ಥಿತಿಯ ನಂತರ ಮಾರ್ಚ್ 10, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ
1976ರ ನಡುಗಾಲ. ರಾತ್ರಿ ಹನ್ನೊಂದು ಮೀರಿತ್ತು. ಮಫ್ಲರ್ ಪದರದಲ್ಲಿ ಉಳಿದಿದ್ದುದು ಇನ್ನೊಂದೇ ಲಕೋಟೆ. ಅದರಲ್ಲಿ ಭೂಗತ ಸಾಹಿತ್ಯ. ತಲಪಿಸಬೇಕಾಗಿದ್ದುದು ‘ಕನ್ನಡಪ್ರಭ’ದ ರಾಮಪ್ರಸಾದ್ಗೆ.
ಅದೃಷ್ಟಕ್ಕೆ ಮನೆಯ ದೀಪ ಆರಿರಲಿಲ್ಲ. ಒಂದು ವೇಳೆ ದೀಪವಿಲ್ಲದೆ, ಅವರ ಸಿಗರೇಟಿನ ಕಿಡಿ ಕಂಡಿದ್ದರೂ, ನಾನು ಬಾಗಿಲು ಬಡಿಯುವವನೇ ಇದ್ದೆ. ಓದುತ್ತಲೋ, ಬರೆಯುತ್ತಲೋ ಇದ್ದ ಅವರು ಬಾಗಿಲು ತೆರೆದರು.
“ಬನ್ನಿ, ಬನ್ನಿ”.
ಒಳಗೆ ಕಾಲಿಟ್ಟೆ, ಕುಳಿತೆ. ಲಕೋಟೆ ಕೊಟ್ಟೆ.
“ಊಟ ಆಗಿದೆಯೇ ? ನೀವೇನೂ ಸಂಕೋಚ ಮಾಡಿಕೋಬೇಕಾದ್ದಿಲ್ಲ”.
“ಊಟವೇ ಬೇಕೂಂತ ಏನಿಲ್ಲ. ಬೇರೆ ಏನಿದ್ದರೂ ಆಗುತ್ತೆ.”
ಅವರು ಕುಳಿತಲ್ಲಿಂದಲೇ, “ನಾಗೂ, ಶಿವರಾಂ ಬಂದಿದ್ದಾರೆ’ ಅಂದರು.
“ಬೇಗ ಅಡಿಗೆ ಮಾಡಿಬಿಡ್ತೀನಿ. ಊಟ ಮಾಡಿಕೊಂಡು ಹೋಗಲಿ”-ಪಾತ್ರೆಗಳನ್ನು ತಪಾಸಿಸಿದ ಅವರ ಪತ್ನಿಯ ನುಡಿ.
“ಈಗ ಅಡಿಗೆ ಮಾಡೋದು ಬೇಡ, ನಾನೆಂದೆ.
ಹಾಲು, ಹಣ್ಣು ತಂದಿಟ್ಟರು. ಮುಗಿಸಿ ಮೇಲೆದ್ದೆ.
“ಹೋಗಿ ಬರ್ತಿನಿ.”
“ಊಟಮಾಡದೆ ಹೋಗೋಹಾಗಿಲ್ಲ. ಅವಳು ಮಾಡ್ತಾ ಇರೋದನ್ನು ಯಾರ ತಲೆಗೆ ಕಟ್ಟೋದು?” ಅಂದರು ಮನೆ ಯಜಮಾನರು.
“ಛೇ ಛೇ, ಈಗ ಆಯ್ತಲ್ಲ ಫಲಾಹಾರ, – ಇನ್ನೆಂಥ ಊಟ? “
ಅಷ್ಟರಲ್ಲಿ ಒಳಗಿನಿಂದ ಬಿಸಿಬಿಸಿ ಚಪಾತಿ ಬಂತು.
“ನೋಡಿದ್ರಾ, ನಂ ನಾಗು ಬಹಳ -ಚುರುಕು. ಏನಂತೀರಿ? ” – ಪತಿಯ ಪ್ರಶಂಸೆ.
ನಾನು ಏನೂ ಅನ್ನುವ ಸ್ಥಿತಿಯಲ್ಲಿ ಇರಲಿಲ್ಲ. ಚಪಾತಿ ಬಾಯಿ ಸೇರಿತ್ತು!.
ಇಂಥ ಘಟನೆಗಳು ನೂರಲ್ಲ ಸಾವಿರ. ತುರ್ತು ಪರಿಸ್ಥಿತಿಯ ಕೊನೆಯ ಹಲವು ತಿಂಗಳಲ್ಲಿ ನಾನು ವಾರಕ್ಕೊಮ್ಮೆಯಾದರೂ (ಬೆಂಗಳೂರಿನ ಮುಖ್ಯ ಪತ್ರಿಕೆಗಳಿಗೆ ಸೇರಿದ) ಪ್ರಮುಖ ಪತ್ರಕರ್ತರನ್ನೂ, ಹಲವು ಲೇಖಕರು, ಚಿತ್ರಕಾರರನ್ನೂ ತಪ್ಪದೆ ಭೇಟಿಯಾಗುತ್ತಿದ್ದೆ. ವಿಚಾರ ವಿನಿಮಯ, ಭೂಗತ ಸಾಹಿತ್ಯ ವಿನಿಮಯ ನಡೆಯುತ್ತಿತ್ತು. ಅವರೆಲ್ಲರ ಮನೆಗಳಲ್ಲೂ ದೊರೆಯುತ್ತಿದ್ದ ಸಹಕಾರ, ಆತ್ಮೀಯತೆ ಅಪಾರ. ಗೋಪಾಲಕೃಷ್ಣ ಅಡಿಗರ ಮನೆಗೂ ನಾನು 2-3 ಬಾರಿ ಹೋದುದುಂಟು. ಅವರು ಕಂಬದಲ್ಲಿ ಬಿದ್ದ ‘ಅಣು ನರಸಿಂಹ’ನಂತೆ ಚಡಪಡಿಸುತ್ತಿದ್ದಾರೆ ಅನಿಸುತ್ತಿತ್ತು. ಒಮ್ಮೆ ಅವರ ಬೀದಿಯ ಮೂಲೆಯಲ್ಲಿ ಸಂಶಯಾಸ್ಪದ ಮುಖ ಕಂಡ ಬಳಿಕ ಆ ಕಡೆ ಹೋಗುವುದನ್ನು ನಿಲ್ಲಿಸಬೇಕಾಯಿತು. ಅವರ ಬಂಧುವೊಬ್ಬರ ಮೂಲಕ ಸಾಹಿತ್ಯ ಕಳಿಸತೊಡಗಿದೆ.
ಒಮ್ಮೆ ರಾಮಪ್ರಸಾದರಲ್ಲಿಗೆ ಹೋದಾಗ, “ನಿಮ್ಮ ಮನೆ ಸುರಕ್ಷಿತವಷ್ಟೆ?’ ಅಂತ ಕೇಳಿದ್ದೆ.
ಏನೂ ಭಯವಿಲ್ಲ. ದೇವೇಗೌಡ್ರು ಹೊರಗಿರೋವರೆಗೆ ಒಂದು ದ್ರಾಬೆ ದೂರದಲ್ಲಿ ನಿಂತಿರ್ತಿತ್ತು. ಈಗ ಪರವಾಗಿಲ್ಲ, ಯಾವಾಗ ಬೇಕಾದರೂ ಬನ್ನಿ”.
ಇನ್ನೊಮ್ಮೆ ರಾಮಪ್ರಸಾದ್ ಅಂದರು: “ಶಿವರಾಂ, ಜಗ್ಗು ನಿಮ್ಮನ್ನ ಬಹಳ ಕೇಳ್ತಾ ಇದ್ದ. ಅವರ ಮನೆಗೆ ಹೋಗಿಬನ್ನಿ, ಅಡ್ರಸ್ಸೂ ಕೊಟ್ಟಿದ್ದಾನೆ.”
ಒಂದು ಮುಂಜಾನೆ ಶ್ರೀರಾಮಪುರದಲ್ಲಿದ್ದ ಜಗ್ಗು ನಾರಾಯಣರ ಮನೆ ಹುಡುಕಿಕೊಂಡು ಹೊರಟೆ, ಒಳಗೆ ತಲೆ ಹಾಯಿಸಿದಾಗ, ಕೆದರಿದ ಕ್ರಾಪು, ಹುಲಸುಗಡ್ಡ ಕಂಡು ಕೊಂಚ ಬೆಚ್ಚಿದರೂ, ಅವರ ಬಿಚ್ಚು ಮನಸ್ಸು ಮೆಚ್ಚಲೇಬೇಕಾಯಿತು.
“ನೋಡಿ, ನಾನು ವೇಷದಲ್ಲಿ, ಮಾತಿನಲ್ಲಿ ಒರಟ ಇರಬೋದು. ಆದರೆ, ನಿಮ್ಮ ಕೆಲಸ ಅರ್ಥಮಾಡಿಕೊಂಡಿದ್ದೇನೆ. ಯಾವ ಹೊತ್ನಲ್ಲಿ ಬೇಕಾದರೂ ಬನ್ನಿ, ಸಂಕೋಚ, ದಾಕ್ಷಿಣ್ಯ ಬಿಟ್ಟು ಬನ್ನಿ, ಏನು ಬೇಕಾದರೂ ಬಾಯಿ ಬಿಟ್ಟು ಕೇಳಿ, ಈ ಜಗ್ಗೂನ ನಂಬಿ.”
ತಮ್ಮ ಹೆಂಡತಿಯನ್ನ ಕರೆದು ಪರಿಚಯ ಮಾಡಿಕೊಟ್ಟು, “ನೋಡೆ, ಇವತ್ತಿಂದ ಇವರೂ ನಮ್ಮ ಮನೆಗೇ ಸೇರಿದೋರು. ಯಾವಾಗಲೇ ಬರಲಿ, ಊಟತಿಂಡಿ, ಕಷ್ಟ – ಸುಖ ವಿಚಾರಿಸ್ಕೋ” ಅಂದರು. ಕೊನೆಗೆ ನಾನು ಹೊರಟು ನಿಂತಾಗ, “ಸ್ವಾಮಿ, ನಾನು ಬಡವ ಆದರೂ ನಿಮ್ಮ ಕೆಲಸಕ್ಕೆ ಹಿಂದುಮುಂದು ನೋಡೋನಲ್ಲ, ಇವತ್ತು ಜೇಬಿನಲ್ಲಿ ಹಣ ಇದೆ, ಕೊಡಬಲ್ಲೆ. ತಗೊಂಡು ಹೋಗಿ” ಅಂದರು.
“ಸದ್ಯಕ್ಕೆ ಬೇಡ, ಅಗತ್ಯವಾದಾಗ ಖಂಡಿತ ಬರ್ತೇನೆ” ಅಂತ ಹೇಳಿ ರಸ್ತೆಗೆ ಕಾಲಿಟ್ಟೆ.
ಖಾದ್ರಿ ಶಾಮಣ್ಣನವರ ಮನೆಗೆ ಹೋದಾಗೊಮ್ಮೆ ಅವರು ಆಗ ತಾನೇ ಬಿಹಾರದಿಂದ ವಾಪಸಾಗಿದ್ದರು. ಅವರು ಹೋಗಿದ್ದುದು, ಪಟನಾದಲ್ಲಿ ನಡೆದ ಪತ್ರಿಕಾ ಸಂಪಾದಕರ ಸಂಘದ ಸಭೆಗೆ.
“ಆ ಕಡೆಯೂ ಹೋರಾಟ ಚೆನ್ನಾಗಿ ನಡೀತಿದೆ. ನಿಮ್ಮೋರಂತೂ (ಸಂಘದವರು) ಬಹಳ ಸಕ್ರಿಯರು. ನಾನು ಹೋದ ದಿನ ರಾತ್ರಿಯೇ ಹೊಟೇಲಿನ ಕೋಣೆ ಬಾಗಿಲು ಶಬ್ದವಾಯಿತು. ತೆರೆದು ನೋಡಿದರೆ ನಿಮ್ಮವನೊಬ್ಬ ಹಾಜರ್. ಹೇಗೋ ವಾಸನೆ ಹಿಡಿದು ಬಂದಿದ್ದ. ಭೂಗತ ಸಾಹಿತ್ಯದ ಲಕೋಟೆ ಕೊಟ್ಟು ಹೊರಟು ಹೋದ” ಎಂದು ವರ್ಣಿಸಿದರು.
ಬೆಂಗಳೂರಿನ ಪ್ರಸಿದ್ಧ ಪತ್ರಿಕೆಗಳೆಲ್ಲದರ ಕಛೇರಿಗಳಲ್ಲಿ ಭೂಗತ ಕಾರ್ಯಕ್ಕೆ ಒತ್ತಾಸೆಯಾಗಿದ್ದ ಪತ್ರಕರ್ತರ ತಂಡಗಳಿದ್ದವು. ಅವರು ಪ್ರತಿ ತಿಂಗಳೂ ಸಂಬಳ ಕೈಸೇರುತ್ತಲೇ ಹತ್ತು-ಇಪ್ಪತ್ತು ತೆಗೆದುಕೊಟ್ಟು, ಯಥಾಶಕ್ತಿ ಹಣ ಕೂಡಿಸುತ್ತಿದ್ದರು. ನಾನು ಆಯಾ ತಂಡದ ಪ್ರಮುಖರ ಮನೆಗೆ ಹೋದಾಗ, ಊಟದ ಜೊತೆಗೆ ಈ ದಕ್ಷಿಣೆಯೂ ಸಲ್ಲುತ್ತಿತ್ತು.
ನಾನಿಲ್ಲಿ ಹೆಸರಿಸಿರುವವರು ಒಬ್ಬಿಬ್ಬರಾದರೂ, ಅಂಥವರೇ ಹತ್ತಾರು ವ್ಯಕ್ತಿಗಳ ಸ್ನೇಹ-ಸಹಕಾರ, ಆದರ- ಆತಿಥ್ಯ ಮರೆಯಲಾಗದ ನೆನಪಿನ ನಿಧಿ. ಆ ಪೈಕಿ ಯಾರ ಹೆಸರು ಉಲ್ಲೇಖಿಸಬಹುದೋ, ಇನ್ನು ಯಾರದು ಉಲ್ಲೇಖಿಸಬಾರದೋ ತೋಚುತ್ತಿಲ್ಲ. ನಾನಿಲ್ಲಿ ಹೆಸರು ಬರೆದು ಬಿಟ್ಟೆ ಅಂತ ಯಾರಾದರೂ ಸಿಟ್ಟುಗೊಂಡರೆ, ನನಗೆ ಕಷ್ಟ (ಉಪಾಹಾರ ಫಲಾಹಾರದ ವಿಷಯ). ಬರೆಯಲಿಲ್ಲ ಅಂತ ಸಿಟ್ಟಾದರೆ, ಅವರಿಗೇ ಕಷ್ಟ. ಏಕೆಂದರೆ, ನಾನು ಅವರೆಲ್ಲರ ಬಗೆಬಗೆಯ ಆತಿಥ್ಯಗಳನ್ನು ವರ್ಣಿಸಿದರೆ, ಊರಿನವರೆಲ್ಲ ಅವರ ಮನೆಗೆ ಕ್ಯೂ ಹಚ್ಚಿಯಾರು!.
-ಶಿವರಾಮು
ಸೆರೆಮನೆಯೊಳಗೆ- ವಿಜಯದಶಮಿಗೆ ಖಾರ ಬೂಂದಿ!
1979ರ ಅಕ್ಟೋಬರ್ 9. ‘ನಿನ್ನೆ ಸಂಜೆ ಸರ್ವೋದಯ ಕಾರ್ಯಕರ್ತ ಹೆಚ್.ಎಸ್. ದೊರೆಸ್ವಾಮಿ, ಗರುಡ ಶರ್ಮರನ್ನು ಬಂಧಿಸಿ ತಂದಿದ್ದಾರೆ’ ಎಂಬ ಸಂದೇಶ ಕೈದಿಗಳ ಮೂಲಕ ಬಂದಿತು. ಗೋಡೆಯ ತೂತಿನಿಂದ ದೊರೆಸ್ವಾಮಿಯವರನ್ನು ಟವರ್ ಎದುರು ಬಂದಾಗ ನೋಡಿದ್ದಾಯಿತು. ಇಂದು ಗುಂಡಯ್ಯ ಶೆಟ್ಟರು ತಮ್ಮ ಮೊಕದ್ದಮೆಗಾಗಿ ಕೋರ್ಟಿಗೆ ಹೋಗಿದ್ದರು. ಹಿಂತಿರುಗಿದೊಡನೆ ಸುದ್ದಿಯ ಹಸಿವಿನಿಂದ ಸುತ್ತುಗಟ್ಟಿದಾಗ, ಇಂದಿರಾ ಗಾಂಧಿ ಇವತ್ತು ಶ್ರೀನಗರಕ್ಕೆ ಹೋಗುತ್ತಿದ್ದಾರೆ. ಜೆಪಿಯವರನ್ನೂ ಅಲ್ಲಿಗೆ ಕರೆದೊಯ್ದಿದ್ದಾರೆ. ಶೇಖರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯಲಿದೆಯಂತೆ. ಇಂದು ಸಂಜೆ ಮೀಸಾ ಸ್ಥಾನಬದ್ಧರ ಬಿಡುಗಡೆ ಬಗ್ಗೆ ತೀರ್ಮಾನಿಸಲು ರಾಜ್ಯದ ಸಂಪುಟ ಸೇರಲಿದೆ’ ಎಂದರು. ಕೆಲವರು ಸಂಜೆಯೇ ಬಿಡುಗಡೆಯಾಗಲಿದೆ ಎಂದು ಕಾದರು. ಅವರೆಲ್ಲ ಮಟ್ಕಾ ಖಾಸಾದವರು, ಈ ಬಗ್ಗೆ ಅವಂಗೆ ಸೂಚನೆ ಹೊರಗಿನಿಂದ ಬಂದಿತ್ತು. ಆದರೆ ನಿರಾಸೆಯೇ ಅವರ ಪಾಲಿಗೆ ಬಂದಿತ್ತು!.
ಅ.13ರಂದು ದಸರಾ. ವಿಜಯದಶಮಿ ನಿಮಿತ್ತ ಜೈಲಿನ ಕೈದಿಗಳಿಗೆಲ್ಲ ಸಿಹಿ ಮತ್ತು ಖಾರ ಬೂಂದಿ ವಿತರಣೆ. ಮುಖ್ಯ ಜೈಲರ್ ವೇಣುಗೋಪಾಲ್ ಬಂದು ನಮ್ಮ ವಾರ್ಡಿನಲ್ಲೂ ವಿತರಣೆ ಮಾಡಿದರು. ಜೈಲಿನ ಸೆನ್ಸಾರ್ನಿಂದಾಗಿ ಇಂದಿನ ಇಂಡಿಯನ್ ಎಕ್ಸ್ ಪ್ರೆಸ್ಸಿನ ಮೊದಲ ಪುಟದ ಮೂರನೇ ಕಾಲಂನ ಮೊದಲ ಸುದ್ದಿಯನ್ನು ಕತ್ತರಿಸಿ ಪತ್ರಿಕೆಯನ್ನು ಕೊಡಲಾಗಿತ್ತು. ಅದೇನೆಂದು ತಿಳಿಯಲು ಕುತೂಹಲ, ಎಲ್ಲರಿಗೆ. ಹಬ್ಬದ ನಿಮಿತ್ತ ಮೊದಲ ಬಾರಿ ಜೈಲಿನಲ್ಲಿ ಇದ್ದ ಸಾಮಗ್ರಿಯಿಂದ ಪಾಟ್ಕರರು ನಮ್ಮ ಬ್ಯಾರಕ್ನಲ್ಲಿ ಶ್ರೀಖಂಡ ಮತ್ತು ಪೂರಿ ಮಾಡಿದ್ದರು. ದಿ.14ರಂದು ಯಾರದೋ ಮನೆಯಿಂದ ಬಂದ ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ಡಿಐಆರ್ ಸತ್ಯಾಗ್ರಹಿ ಬಂಧುಗಳು ಕೈದಿಗಳ ಮೂಲಕ ನಮಗೆ ಕಳುಹಿಸಿದ್ದರು. “ನಿಮ್ಮ ಪೈಕಿ ಯಾರೋ ಬೋಳುತಲೆ ಮತ್ತು ಕನ್ನಡಕದವರನ್ನು ಐಜಿ ಸೆಲ್ಲಿಗೆ ಹಾಕಿಸಿದ್ದಾರೆ. ಎ ಕ್ಲಾಸಿನವರೊಡನೆ ಮಾತನಾಡಿದ ಅಪರಾಧಕ್ಕಾಗಿ. ಆಗ ಅವರೆಲ್ಲ ಇಂಗ್ಲೀಷಿನಲ್ಲಿ ಐಜಿಗೇ ಜೋರು ಮಾಡಿ ತಕ್ಷಣ ಬಿಡಿಸಿದರು” ಎಂದು ಕೈದಿ ವಾರ್ಡರ್ ದುರ್ಗಪ್ಪ ಸುದ್ದಿ ತಂದ. ಎಂ.ಆರ್. ಶೇಷಗಿರಿರಾಯರು ಅಡ್ವಾನಿಯವರೊಡನೆ ಮಾತನಾಡಿದುದನ್ನು ನೋಡಿದ ಐಜಿಯವರು ಈ ಕ್ರಮ ಕೈಕೊಂಡರು. ಆಗ ಶೇಷಗಿರಿರಾಯರು ಅವರೊಡನೆ “ಜೈಲಿನಲ್ಲಿ ಏನೆಲ್ಲ ರೂಲ್ಸ್ ಪ್ರಕಾರ ನಡೆಯುತ್ತದೆಂದು ನನಗೆ ಗೊತ್ತು” ಎಂದು ಒಂದೊಂದನ್ನೇ ಹೇಳಲಾರಂಭಿಸಿದರು. ಐಜಿಗೆ ಕೋಪ ಬಂದು ಅವರನ್ನು ಸೆಲ್ಲಿಗೆ ಹಾಕಿಸಿದರು. ಇದನ್ನು ತಿಳಿದ ಅಡ್ವಾನಿಯವರು ಕೋಪದಿಂದ ಐಜಿಯವರಲ್ಲಿಗೆ ಬಂದು ತಪ್ಪಿದ್ದರೆ ನನ್ನದು, ಅವರನ್ನು ಕರೆದು ಮಾತನಾಡಿದವನು ನಾನು, ನನ್ನನ್ನು ಬೇಕಾದರೆ ಸೆಲ್ಲಿಗೆ ಹಾಕಿ. ಅವರನ್ನು ಬಿಡಿ” ಎಂದು ಗುಡುಗಿದರು. ಆಗ ಶ್ರೀ ಶೇಷಗಿರಿರಾಯರನ್ನು ಬಿಟ್ಟರು ಎಂದು ನಂತರ ತಿಳಿಯಿತು.
