ಜು.೨೬: ಕಾರ್ಗಿಲ್ ವಿಜಯ ದಿವಸ್
- ಶಿವನಗೌಡ ಪೊಲೀಸ್ ಪಾಟೀಲ್, ಉಪನ್ಯಾಸಕ
ಪ್ರತಿವರ್ಷ ಜುಲೈ 26 ಬಂದಾಗ ಭಾರತದ 140 ಕೋಟಿ ಜನರ ಎದೆ ಉಬ್ಬುತ್ತದೆ. ಆ ದಿನ ಕೇವಲ ಕ್ಯಾಲೆಂಡರ್ನ ಒಂದು ದಿನವಲ್ಲ, ಅದು ‘ತ್ಯಾಗ, ಶೌರ್ಯ, ವಿಜಯದ ದಿನ’. 1999ರ ಜುಲೈ 26ರಂದು ಭಾರತೀಯ ಸೇನೆ ಕಾರ್ಗಿಲ್ನ ಎತ್ತರದ ಗುಡ್ಡಗಾಡುಗಳಿಂದ ಪಾಕಿಸ್ತಾನಿ ನುಸುಳುಕೋರರನ್ನು ಸಂಪೂರ್ಣವಾಗಿ ಹೊರಹಾಕಿ ‘ಕಾರ್ಗಿಲ್ ಯುದ್ಧ’ದಲ್ಲಿ ವಿಜಯ ಸಾಧಿಸಿತು. ಆ ವಿಜಯದ ನೆನಪಿಗಾಗಿಯೇ ‘ಕಾರ್ಗಿಲ್ ವಿಜಯ ದಿವಸ್’ ಆಚರಿಸುತ್ತೇವೆ. ‘ಯೇ ದಿಲ್ ಮಾಂಗೆ ಮೋರ್!’ – ಈ ಮಾತು ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರದ್ದು. 13 ಜಮ್ಮು – ಕಾಶ್ಮೀರ ರೈಫಲ್ಸ್ ನ ಈ ಯುವ ಅಧಿಕಾರಿ ಗುಡ್ಡದ ತುದಿ ತಲುಪಿದಾಗ ವಾಕಿಟಾಕಿಯಲ್ಲಿ ಹೇಳಿದ ಕೊನೆಯ ಮಾತು. ಆ ಮಾತಿನಲ್ಲಿ ಸಾವಿನ ಭಯವಿಲ್ಲ, ವಿಜಯದ ಹುಚ್ಚಿತ್ತು. ಹಾಗಾಗಿ ಜುಲೈ 26 ಕೇವಲ ದಿನವಲ್ಲ, ಅದು ‘ಭಾರತದ ಹೆಮ್ಮೆಯ ದಿನ’. ಯಾಕೆಂದರೆ ಆ ದಿನ ನಮ್ಮ ಯೋಧರು – 20 ವರ್ಷದ ಹುಡುಗರು – ಹಿಮಾಲಯದಷ್ಟು ಎತ್ತರಕ್ಕೆ ತಮ್ಮ ದೇಶಭಕ್ತಿಯನ್ನು ಬೆಳೆಸಿದರು.
ಕಾರ್ಗಿಲ್ ಯುದ್ಧ, ಚಳಿಗಾಲದ ಮೋಸ
ಕಾರ್ಗಿಲ್ ಲಡಾಖ್ನ ಒಂದು ಪುಟ್ಟ ಪಟ್ಟಣ. ಶ್ರೀನಗರ – ಲೇಹ್ ಹೆದ್ದಾರಿ NH – 1 ಇಲ್ಲಿಂದಲೇ ಹೋಗುತ್ತದೆ. ಈ ಹೆದ್ದಾರಿ ಸಿಯಾಚಿನ್ನಲ್ಲಿರುವ ಸೈನ್ಯಕ್ಕೆ ಸರಬರಾಜು ಮಾಡುವ ‘ಜೀವನಾಡಿ’. 1998-99ರ ಚಳಿಗಾಲ. ಭಾರತ – ಪಾಕ್ ನಡುವೆ ‘ಲಾಹೋರ್ ಬಸ್ ಯಾತ್ರೆ’, ‘ಅಟಲ್-ನವಾಜ್ ಶರೀಫ್ ಸ್ನೇಹ’ ನಡೆಯುತ್ತಿತ್ತು. ಜಗತ್ತಿಗೆ ಶಾಂತಿಯ ಸಂದೇಶ. ಆದರೆ ಚಳಿಗಾಲದಲ್ಲಿ ಹಿಮದಿಂದಾಗಿ ಕಾರ್ಗಿಲ್ನ ಎತ್ತರದ ಚೌಕಿಗಳು ಖಾಲಿಯಾಗುತ್ತಿದ್ದವು. ಭಾರತೀಯ ಸೇನೆ “ ಇಂತಹ ಸ್ನೇಹದ ವಾತಾವರಣದಲ್ಲಿ ಯಾರೂ ದಾಳಿ ಮಾಡುವುದಿಲ್ಲ” ಎಂದು ನಂಬಿತ್ತು. ಆ ನಂಬಿಕೆಯನ್ನೇ ಪಾಕಿಸ್ತಾನ ದುರುಪಯೋಗ ಮಾಡಿಕೊಂಡಿತು. ಪಾಕ್ ಸೇನೆಯ ‘ನಾರ್ಥರ್ನ್ ಲೈಟ್ ಇನ್ಫೆಂಟ್ರಿ’ ಮತ್ತು ‘ಮುಜಾಹಿದ್ದೀನ್’ ಹೆಸರಿನ ಭಯೋತ್ಪಾದಕರು 1999ರ ಮೇ ತಿಂಗಳಲ್ಲಿ ರಹಸ್ಯವಾಗಿ ಒಳನುಗ್ಗಿ ಕಾರ್ಗಿಲ್ನ ದ್ರಾಸ್, ಕಾಕ್ಸರ್, ಬಟಾಲಿಕ್, ತುರ್ತುಕ್ ವಲಯದ 130+ ಎತ್ತರದ ಚೌಕಿಗಳನ್ನು ಆಕ್ರಮಿಸಿದರು. 16,000 ಅಡಿ ಎತ್ತರದಲ್ಲಿ ಬಂಕರ್ ಕಟ್ಟಿ ಕುಳಿತರು. 1999ರ ಮೇ 3ರಂದು ದ್ರಾಸ್ನ ಕುರುಬ ಹುಡುಗ ತಾಶಿ ನಮ್ಗ್ಯಾಲ್ ಮೊದಲು ಈ ದೃಶ್ಯವನ್ನು ನೋಡಿ ಭಾರತೀಯ ಸೇನೆಗೆ ಮಾಹಿತಿ ಕೊಟ್ಟ. “ಶತ್ರು ಬಂದಿದ್ದಾನೆ” ಎಂಬ ಸುದ್ದಿ ದೆಹಲಿಯನ್ನು ತಲುಪಿತು. ಆಪರೇಷನ್ ವಿಜಯ್ ಶುರುವಾಯಿತು.
ಕಾರ್ಗಿಲ್ ಯುದ್ಧ ಸಾಮಾನ್ಯ ಯುದ್ಧವಾಗಿರಲಿಲ್ಲ. ಇದು ‘ಎತ್ತರದ ಯುದ್ಧ’( High Altitude Warfare). ಹಲವು ಮಹತ್ತರ ಸವಾಲುಗಳನ್ನು ಒಳಗೊಂಡಿದ್ದವು. ಭೌಗೋಳಿಕವಾಗಿ ನೋಡಿದರೆ, ಪಾಕ್ ಸೈನಿಕರು 18,000 ಅಡಿ ಎತ್ತರದ ಗುಡ್ಡದ ತುದಿಯಲ್ಲಿದ್ದರು. ಭಾರತೀಯ ಯೋಧರು ಕೆಳಗಿನಿಂದ 70 – 80 ಡಿಗ್ರಿ ಕಡಿದಾದ ಬೆಟ್ಟ ಹತ್ತಿ ಅವರನ್ನು ತಲುಪಬೇಕು. ಪ್ರತಿ ಹೆಜ್ಜೆಗೂ ‘ಸಾವು’ ಕಾಯುತ್ತಿತ್ತು. ಒಂದು ತಪ್ಪು ಹೆಜ್ಜೆ ಇಟ್ಟರೆ 1000 ಅಡಿ ಆಳಕ್ಕೆ ಬೀಳುವುದು ನಿಶ್ಚಿತ. ಹವಾಮಾನವನ್ನು ಎದುರಿಸುವುದು ಇನ್ನೊಂದು ರೀತಿಯ ಸವಾಲು. ಜೂನ್-ಜುಲೈ ತಿಂಗಳಲ್ಲೂ ರಾತ್ರಿ -10°C ತಾಪಮಾನ. ಆಮ್ಲಜನಕ ಶೇ.50ರಷ್ಟು ಕಡಿಮೆ. ಉಸಿರಾಡಲೂ ಕಷ್ಟ. ಅಂತಹದರಲ್ಲಿ ಬಂದೂಕು ಹಿಡಿಯಲು ಕೈ ಜಡ್ಡುಗಟ್ಟುತ್ತದೆ. ಇದನ್ನು ಮೀರಿ ಗುಡ್ಡವೇರುವುದು ಅನಿವಾರ್ಯ ಮತ್ತು ಆಗಿನ ತುರ್ತು ಅಗತ್ಯ.
ತಂತ್ರಗಾರಿಕೆಯ ಸವಾಲು ಇನ್ನೂ ಕಷ್ಟಕರ. ಮೇಲಿರುವವರಿಗೆ ಅನುಕೂಲ. ಅಲ್ಲಿಂದ ಕಲ್ಲುರುಳಿಸಿದರೂ ಕೆಳಗಿರುವವನು ಸಾಯುತ್ತಾನೆ. ಭಾರತೀಯ ಸೇನೆಗೆ “ಮೇಲೇರಿ ಹೋರಾಡು” ಎಂಬ ಆದೇಶವೇ ಇತ್ತು. ಫಿರಂಗಿ, ಬೋಫೋರ್ಸ್ ಗನ್ನಿಂದ ಗುಡ್ಡ ಸಿಡಿಸಿದರೂ ಶತ್ರು ಸಿಗುತ್ತಿರಲಿಲ್ಲ. ಹಾಗಿದ್ದರೂ ನಮ್ಮ ಯೋಧರು ಹಿಂದೆ ಸರಿಯಲಿಲ್ಲ. ಯಾಕೆಂದರೆ NH-1 ಹೆದ್ದಾರಿ ಕೈತಪ್ಪಿದರೆ ಲಡಾಖ್ ಸಂಪರ್ಕ ಕಡಿದುಹೋಗುತ್ತದೆ. “ಒಂದು ಇಂಚು ಜಾಗವನ್ನೂ ಬಿಡುವುದಿಲ್ಲ” ಎಂಬುದು ಸೇನೆಯ ಪ್ರತಿಜ್ಞೆಯಾಗಿತ್ತು.
ಪ್ರಮುಖ ಯುದ್ಧಗಳು ಮತ್ತು ವೀರಗಾಥೆ
ಕಾರ್ಗಿಲ್ನಲ್ಲಿ ನಡೆದ ಪ್ರತಿಯೊಂದು ಕದನವೂ ಒಂದು ಮಹಾಕಾವ್ಯ. ಅವುಗಳಲ್ಲಿ ಮೂರು ಪ್ರಮುಖ ಗೆಲುವುಗಳನ್ನು ನೋಡೋಣ:
- ತೋಲೋಲಿಂಗ್ ಶಿಖರ: ಮೇ 28ರಿಂದ ಜೂನ್ 13ರ ತನಕದ ಹೋರಾಟದಲ್ಲಿ ಎರಡು ರಜಪೂತಾನ ರೈಫಲ್ಸ್, ಒಂದು ನಾಗಾ ರೆಜಿಮೆಂಟ್ ದಾಳಿಯಲ್ಲಿ ಭಾಗಿಯಾಯಿತು. 16,000 ಅಡಿ ಎತ್ತರದ ಈ ಶಿಖರ ಪಾಕ್ ಫಿರಂಗಿಗೆ ‘ಕಣ್ಣು’ ಇದ್ದಂತಿತ್ತು. ಮೂರು ಸಲ ಪ್ರಯತ್ನ ವಿಫಲವಾಗಿ, ನಾಲ್ಕನೇ ಬಾರಿ ಮೇಜರ್ ವಿವೇಕ್ ಗುಪ್ತಾ ನೇತೃತ್ವದಲ್ಲಿ ಭಾರತೀಯ ಯೋಧರು ರಾತ್ರಿ ದಾಳಿ ಮಾಡಿ ತೋಲೋಲಿಂಗ್ ಅನ್ನು ವಶಪಡಿಸಿಕೊಂಡರು. ವಿವೇಕ್ ಗುಪ್ತಾ ವೀರಚಕ್ರ ಪಡೆದರು.
- ಟೈಗರ್ ಹಿಲ್: ಜುಲೈ 3ರಿಂದ 5ರ ತನಕ ಸೈನಿಕರು ಜೀವ ಪಣಕ್ಕಿಟ್ಟು ಗೆದ್ದ ಈ ಹಿಲ್ ದ್ರಾಸ್ನ ಅತಿ ಮುಖ್ಯ ಶಿಖರ. 16,500 ಅಡಿ ಎತ್ತರದಲ್ಲಿದೆ. ಇದನ್ನು ವಶಪಡಿಸಿಕೊಂಡರೆ ದ್ರಾಸ್ ಸುರಕ್ಷಿತ. ಎಂಟು ಸಿಖ್ ರೆಜಿಮೆಂಟ್ ಮತ್ತು ಹದಿನೆಂಟು ಗ್ರೆನೇಡಿಯರ್ಸ್ ರಾತ್ರಿ 11 ಗಂಟೆಗೆ ದಾಳಿ ಮಾಡಿದರು. ಈ ಗುಂಪಿನಲ್ಲಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಪ್ರತಿಯೊಬ್ಬ ಭಾರತೀಯನ ಹೃದಯಕ್ಕೂ ಚಿರಪರಿಚಿತ. “ಯೇ ದಿಲ್ ಮಾಂಗೆ ಮೋರ್!” ಎಂದು ಘೋಷಣೆ ಮಾಡಿ, ಕಾದಾಡಿ, ಪಾಯಿಂಟ್ 4875 ಅನ್ನು ವಶಪಡಿಸಿಕೊಳ್ಳುವಾಗ ಶತ್ರುವಿನ ಗುಂಡಿಗೆ ಬಲಿಯಾದರು. ಮರಣೋತ್ತರವಾಗಿ ಪರಮವೀರ ಚಕ್ರ ಪಡೆದರು. ವಿಕ್ರಮ್ ಬಾತ್ರಾ ಅವರ ಕೊನೆಯ ಪತ್ರದಲ್ಲಿ, “ಅಮ್ಮ, ನಾನು ಸತ್ತರೆ ಅಳಬೇಡ. ನಾನು ದೇಶಕ್ಕಾಗಿ ಸತ್ತಿದ್ದೇನೆ” ಎಂದು ಬರೆದಿದ್ದರು. 24 ವರ್ಷದ ಹುಡುಗನ ಮಾತು ಕೋಟಿ ಭಾರತೀಯರ ಕಣ್ಣಂಚನ್ನು ತೇವಗೊಳಿಸಿತ್ತು, ಇಂದಿಗೂ ಸ್ಫೂರ್ತಿಯಾಗಿದೆ.
- ಬಟಾಲಿಕ್ ಸೆಕ್ಟರ್: ಒಂದು ನಾಗಾ, ಎರಡು ರಜಪೂತಾನಾ ರೈಫಲ್ಸ್ ತಂಡ ಪಾಯಿಂಟ್ 5100, 4700 ಅನ್ನು ವಶಪಡಿಸಿಕೊಳ್ಳಲು ಹೋರಾಡಿದರು. ಮೇಜರ್ ಸೋನು ರಾಮ್ ಚೌಧರಿ, ಲೆಫ್ಟಿನೆಂಟ್ ಬಲವಾನ್ ಸಿಂಗ್ ವೀರಚಕ್ರ ಪಡೆದರು. ಇಲ್ಲಿ ಹೋರಾಡಿದವರಲ್ಲಿ ಅರ್ಧದಷ್ಟು ಯೋಧರು 20-22 ವರ್ಷದ ಹುಡುಗರು ಎನ್ನುವುದು ವಿಶೇಷ.
527 ಹೆಸರು, 527 ಕಥೆ
1999ರ ಜುಲೈ 26ರಂದು ಭಾರತ ವಿಜಯ ಘೋಷಿಸಿತು. 527 ಯೋಧರು ಹುತಾತ್ಮರಾದರು. 1300ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇಲ್ಲಿನ 527 ಎಂಬುದು ಬರಿಯ ಅಂಕಿಯಲ್ಲ. 527 ಹೆತ್ತವರ ಮಡಿಲು ಬರಿದಾಗಿತ್ತು. ಅದೆಷ್ಟೋ ಪತ್ನಿಯರ ಸಿಂದೂರ ಅಳಿದಿತ್ತು. ಆದರೆ ಭಾರತಾಂಬೆಗೆ ತನಗಾಗಿ ಮಡಿದ ವೀರಪುತ್ರರು ಪ್ರಾಪ್ತರಾದರು. ಹಿಮಾಚಲ ಪ್ರದೇಶದ ‘ಶೇರ್ ಶಾ’ ಖ್ಯಾತಿಯ ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಖಾಲುಬಾರ್ ಶಿಖರ ವಶಪಡಿಸಿಕೊಂಡು ವೀರಮರಣವನ್ನಪ್ಪಿದ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, 15 ಗುಂಡು ತಿಂದೂ ಬದುಕಿ, 18 ವರ್ಷಕ್ಕೆ ಪರಮವೀರ ಚಕ್ರ ಪಡೆದ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್, ರೈಫಲ್ಮ್ಯಾನ್ ಸಂಜಯ್ ಕುಮಾರ್, ಮೇಜರ್ ರಾಜೇಶ್ ಹೀಗೇ ಪ್ರತಿಯೊಬ್ಬ ಯೋಧನ ಹೆಸರೂ ಅಜರಾಮರ. ದೆಹಲಿಯ ‘ಅಮರ್ ಜವಾನ್ ಜ್ಯೋತಿ’ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ 527 ಯೋಧರ ಹೆಸರನ್ನು ಕಲ್ಲಿನಲ್ಲಿ ಕೆತ್ತಲಾಗಿದೆ.
ಭಾರತದ ಹೆಮ್ಮೆ
ಈ ಯುದ್ಧ ಪರಮಾಣು ಶಕ್ತಿಯಾದ ಎರಡು ದೇಶಗಳ ನಡುವೆ ನಡೆದ ಯುದ್ಧ. ಜಗತ್ತು “ಪರಮಾಣು ಯುದ್ಧ ಆಗಬಹುದು” ಎಂದು ಭಯಪಟ್ಟರೆ ಭಾರತ ‘ಸೀಮಿತ ಯುದ್ಧ’ ನಡೆಸಿ, LOC ದಾಟದೆ, ಅಂತಾರಾಷ್ಟ್ರೀಯ ಕಾನೂನನ್ನು ಪಾಲಿಸಿ ಗೆದ್ದಿತು. ‘ಭಾರತ ಜವಾಬ್ದಾರಿಯುತ ರಾಷ್ಟ್ರ’ ಎಂಬುದನ್ನು ಜಗತ್ತು ಒಪ್ಪಿಕೊಳ್ಳುವಂತೆ ಮಾಡಿತು. ಭೂಸೇನೆ, ವಾಯುಸೇನೆ, ನೌಕಾಸೇನೆ ಮೂರೂ ಒಂದಾಗಿ ಕೆಲಸ ಮಾಡಿ ಸೇನೆಯ ಐಕ್ಯತೆಯನ್ನು ಸಾರಿದ ಯುದ್ಧವಿದು. ಮಿರಾಜ್-2000 ವಿಮಾನ ‘ಲೇಸರ್ ಬಾಂಬ್’ ಉಪಯೋಗಿಸಿ ಗುಡ್ಡ ಸಿಡಿಸಿದರೆ, ‘ಆಪರೇಷನ್ ಸಫೇದ್ ಸಾಗರ್’ ಇತಿಹಾಸ ಸೃಷ್ಟಿಸಿತು. ಜಂಟಿ ಕಾರ್ಯಾಚರಣೆಗೆ ಮಾದರಿಯಾಗಿ ನಿಂತಿತು. ಯುದ್ಧದ ಸಮಯದಲ್ಲಿ ಇಡೀ ದೇಶ ಒಂದಾಯಿತು. ಸೆಲೆಬ್ರೆಟಿಗಳಿಂದ ಹಿಡಿದು ಉದ್ಯೋಗಿಗಳು, ವಿದ್ಯಾರ್ಥಿಗಳು ಎಲ್ಲಾ ಸ್ತರದವರು ‘ಕಾರ್ಗಿಲ್ ನಿಧಿ’ಗೆ ದೇಣಿಗೆ ಕೊಟ್ಟರು. ಲತಾ ಮಂಗೇಶ್ಕರ್ “ಏ ವತನ್ ಏ ವತನ್” ಹಾಡಿ ಹಣ ಸಂಗ್ರಹಿಸಿದ್ದು ವಿಶೇಷ. ನವ ತರುಣರಲ್ಲಿ NDA, CDSಗೆ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಯಿತು. ಭಾರತೀಯ ಸೇನೆಗೆ ಸೇರುವವರ ಉತ್ಸಾಹವನ್ನು ಹೆಚ್ಚುಗೊಳಿಸಿದ್ದು ಈ ಯುದ್ಧ ನೀಡಿದ ಮುಖ್ಯ ಪ್ರೇರಣೆಗಳಲ್ಲೊಂದು. ಪಾಕಿಸ್ತಾನಕ್ಕೆ “ನಾವು ಶಾಂತಿ ಬಯಸುತ್ತೇವೆ, ಆದರೆ ದುರ್ಬಲರಲ್ಲ” ಎಂಬುದನ್ನು ಸಾಬೀತು ಮಾಡಿದ ಯುದ್ಧವಿದು. ಕವಿ ಹೇಳಿದಂತೆ ‘ಭಾರತ ಮಲಗಿದ ಸಿಂಹ’ವಾಗಿತ್ತು. ಕಾರ್ಗಿಲ್ನಲ್ಲಿ ಯಾರೋ ಸಿಂಹದ ಬಾಲ ತುಳಿದರು. ಸಿಂಹ ಎಚ್ಚರಗೊಂಡಿತು, ಘರ್ಜಿಸಿತು, ಗೆದ್ದಿತು. ಇದರೊಂದಿಗೆ ಅದೆಷ್ಟೋ ತಾಯಂದಿರ ಮಕ್ಕಳ ರಕ್ತದ ಸಹಾಯದಿಂದ ನಾವು ಸ್ವತಂತ್ರರಾಗಿರುವುದನ್ನು ನೆನೆದು ರಾಷ್ಟ್ರಪ್ರೇಮವನ್ನು ಮತ್ತಷ್ಟು ಹೆಚ್ಚಿಸಲು ಸ್ಫೂರ್ತಿಯಿದು. ಹಾಗಾಗಿ ಕಾರ್ಗಿಲ್ ವಿಜಯ ಕೇವಲ ಭೂ ಗೆಲುವಲ್ಲ, ‘ಮನೋಬಲದ ಗೆಲುವು’.
