ಆ. ೧: ಬಾಲಗಂಗಾಧರ ತಿಲಕ್ ಪುಣ್ಯತಿಥಿ
- ಶ್ರೀ ಲಕ್ಷ್ಮೀ ಮಠದಮೂಲೆ, ವಕೀಲೆ
1857ರ ಮೇ 10. ಸ್ವಾತಂತ್ರ್ಯದ ಕೂಗು ಭಾರತದಲ್ಲಿ ತೀವ್ರವಾಗಿ ಕೇಳಿಸುತ್ತಿದ್ದ ಸಂದರ್ಭದಲ್ಲಿ ಬಾಲಗಂಗಾಧರ ತಿಲಕರಿಗೆ ಒಂದು ವರ್ಷ. 1856ರ ಜುಲೈ 23ರಂದು ಮಹಾರಾಷ್ಟ್ರದ ರತ್ನಗಿರಿಯ ಮಧ್ಯಮ ಕುಟುಂಬವೊಂದರಲ್ಲಿ ಸಂಸ್ಕೃತ ಪಂಡಿತ ಮತ್ತು ಶಾಲಾ ಶಿಕ್ಷಕರಾದ ಗಂಗಾಧರ ರಾಮಚಂದ್ರ ತಿಲಕ ಮತ್ತು ಸಂಸ್ಕಾರವತಿ ಶ್ರೀಮತಿ ಪಾರ್ವತಿ ಬಾಯಿ ಅವರ ಮಗನಾಗಿ ತಿಲಕರು ಜನಿಸಿದರು. 64 ವರ್ಷದ ತುಂಬು ಜೀವನವನ್ನು ನಡೆಸಿದ ತಿಲಕರು, ಸುಮಾರು 40 ವರ್ಷಗಳ ಕಾಲ ಸಾಮಾಜಿಕ ಜೀವನದಲ್ಲಿದ್ದು ತಮ್ಮ ನಾಯಕತ್ವ, ದೂರದೃಷ್ಟಿ, ಛಲ ಹೀಗೆ ಹತ್ತು ಹಲವಾರು ಗುಣಗಳಿಂದ ಸಮಾಜದ ಮೇಲೆ ಪ್ರಭಾವ ಬೀರಿರುವರು. 1920ರ ಆಗಸ್ಟ್ 1ರಂದು ಇಹಲೋಕ ತ್ಯಜಿಸಿದರೂ ಅವರು ಹಾಕಿಕೊಟ್ಟ ಸ್ವರಾಜ್ಯದ ಮೆಟ್ಟಿಲುಗಳನ್ನು ತುಳಿಯುತ್ತಲೇ ಭಾರತ ತನ್ನ ಸ್ವಾತಂತ್ರ್ಯದ ಹಕ್ಕನ್ನು ಪಡೆಯುವಲ್ಲಿ ಸಫಲವಾಯಿತು ಎಂದರೆ ಅತಿಶಯೋಕ್ತಿಯಲ್ಲ. ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು. ಅದನ್ನು ಪಡೆದೇ ಸಿದ್ಧ’ ಎನ್ನುವ ನೇರ, ಸ್ಪಷ್ಟ ಸಂದೇಶವನ್ನು ನೀಡುವ ಮೂಲಕ ಬ್ರಿಟಿಷರನ್ನು ಸದೆಬಡಿದವರು ಧೀರ ಭಾರತಪುತ್ರ ಲೋಕಮಾನ್ಯ ಬಾಲಗಂಗಾಧರ ತಿಲಕರು.
ಅದ್ವೈತ ಸಿದ್ಧಾಂತವನ್ನು ಅನುಸರಿಸುತ್ತಿದ್ದ ತಿಲಕರು, ವೇದಾಂತವು ಸ್ವಾತಂತ್ರ್ಯದ ಮೂಲ ಎಂದು ನಂಬಿದ್ದರು. ಮೌಲಿಕ ಹಾಗೂ ಆಧ್ಯಾತ್ಮಿಕ ಜೀವನವು ಸ್ವಾತಂತ್ರ್ಯದ ವಿನಃ ದಕ್ಕದು. ಪರಕೀಯರ ಒತ್ತೆಯಾಳಾಗಿ ಜೀವನ ಮುಂದುವರಿಸುವುದು ದೇಶದ ಆತ್ಮವನ್ನು ಕೊಂದ ಹಾಗೆ ಎಂದರಿತು ಸ್ವಾತಂತ್ರ್ಯವನ್ನು ಪಡೆದೇ ಸಿದ್ಧ ಎಂದು ಪಣತೊಟ್ಟರು. ಭಗವದ್ಗೀತೆ ಮತ್ತು ವೇದವು ರಾಷ್ಟ್ರಕ್ಕೆ ಮೌಲಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ನೀಡುತ್ತದೆ ಎಂದು ಪ್ರತಿಪಾದಿಸುತ್ತಿದ್ದ ಅವರು, ಭಾರತದ ಪುರಾತನ ಮತ್ತು ಸನಾತನ ಸಂಸ್ಕೃತಿಯ ಆಚರಣೆ ಮಾತ್ರದಿಂದ ಭಾರತವನ್ನು ಆರೋಗ್ಯಕರವಾಗಿ ರಕ್ಷಿಸಬಹುದೆಂದರು. ನಿಜವಾದ ರಾಷ್ಟ್ರೀಯತೆಯು ಕೇವಲ ‘ಹಳೆಯ ಆದರೆ ನಿತ್ಯ ನೂತನ’ ಸಿದ್ಧಾಂತದ ಅಡಿಪಾಯದಿಂದ ಮಾತ್ರವೇ ಬರಲು ಸಾಧ್ಯ ಎಂದರು. ಬಂಕಿಮ ಚಂದ್ರರು, ಸ್ವಾಮಿ ವಿವೇಕಾನಂದರು, ಮಹರ್ಷಿ ಅರವಿಂದರ ಚಿಂತನೆಯಂತೆ ತಿಲಕರು ಆಧ್ಯಾತ್ಮಿಕ ರಾಷ್ಟ್ರೀಯತೆಯ ಅಗತ್ಯತೆಯನ್ನು ನಂಬಿದ್ದರು. ಭಾರತದ ರಾಷ್ಟ್ರೀಯತೆಯ ಬೇರುಗಳು ಭಾರತವಾಸಿಗರ ಭಾವನೆ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿ ಇರಬೇಕೇ ವಿನಃ ಪಾಶ್ಚಾತ್ಯ ಸಿದ್ಧಾಂತಗಳ ಬೌದ್ಧಿಕ ಆಕರ್ಷಣೆಯಲ್ಲಿ ಅಲ್ಲ ಎಂದು ಉಚ್ಚರಿಸಿದರು.
ಸ್ವರಾಜ್ಯ ಮತ್ತು ಸ್ವದೇಶಿ ಚಳುವಳಿ
ರಾಜಕೀಯ ಹಾಗೂ ಸಾಮಾಜಿಕ ಸುಧಾರಣೆಯ ಹೆಸರಿನಲ್ಲಿ ದೇಶ ಆಂಗ್ಲೀಕರಣವಾಗುತ್ತಿದ್ದುದನ್ನು ಕಟುವಾಗಿ ಖಂಡಿಸುತ್ತಿದ್ದ ತಿಲಕರನ್ನು ಭಾರತದ ‘ಭೀಷ್ಮ ಪಿತಾಮಹ’ ಎಂದು ಇತಿಹಾಸಕಾರರು ಬಣ್ಣಿಸುತ್ತಾರೆ. ಸ್ವರಾಜ್ಯ ಚಳವಳಿಯಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಅರಿವು ಬಹುಮುಖ್ಯವೆಂದು ಅರಿತು, ರಾಷ್ಟ್ರೀಯತೆಯ ಕಂಪನ್ನು ಸಮಾಜದಲ್ಲಿ ಸೂಸಲು ಸಾರ್ವಜನಿಕ ಗಣೇಶೋತ್ಸವ (ಪುಣೆ, 1892) ಮತ್ತು ಶಿವಾಜಿ ಉತ್ಸವಗಳನ್ನು(ರಾಯಗಡ, 1894) ಪ್ರಾರಂಭಿಸಿದರು. ಇದರಿಂದಾಗಿ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟದಲ್ಲಿ ಹಿಂದೆಂದೂ ಕಾಣದ ಯಶಸ್ಸು ಅವರಿಗೆ ಲಭಿಸಿತು. ಇಂದಿಗೂ ಆ ಉತ್ಸವಗಳು ಮುಂದುವರಿಯುತ್ತಿರುವುದು ಅವರ ದೂರದೃಷ್ಟಿಗೆ ಹಿಡಿದ ಕನ್ನಡಿಯೇ.
ಇತಿಹಾಸಕಾರರು ಶಿವಾಜಿಯನ್ನು ಸ್ವರಾಜ್ಯ ತತ್ತ್ವದ ಮೊದಲ ಪ್ರತಿಪಾದಕರೆಂದು ಪರಿಗಣಿಸಿದ್ದು, ತಿಲಕರನ್ನು ಅದು ಬಲವಾಗಿ ಪ್ರೇರೇಪಿಸಿತು. ಶಿವಾಜಿ ಮಹಾರಾಜರಿಂದ ಪ್ರೇರಿತರಾದ ತಿಲಕರು 1895ರಲ್ಲಿ ಸ್ವರಾಜ್ಯ ಅಭಿಯಾನವನ್ನು ಪ್ರಾರಂಭಿಸಿದರು. ಸಮಾಜದ ಸುಧಾರಣೆಯಾಗಬೇಕೆಂದರೆ ಮೊದಲಿಗೆ ಸ್ವರಾಜ್ಯದ ಜಾಗೃತಿ ಆಗಬೇಕು, ಸಮಾಜ ಮತ್ತು ರಾಜಕಾರಣ ಪರಕೀಯರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಬೇಕೆಂದರೆ ಸ್ವರಾಜ್ಯವೆನ್ನುವ ಒಲವು ಮೂಡಬೇಕು ಎಂದರು. ಇದಕ್ಕೆ ರೂಪರೇಷೆ ನೀಡಲು 1916ರಲ್ಲಿ ಆನಿಬೆಸೆಂಟ್ ಅವರೊಂದಿಗೆ ಹೋಂ ರೂಲ್ ಲೀಗ್ ಪ್ರಾರಂಭಿಸಿದರು.

ಲೋಕಮಾನ್ಯ ತಿಲಕರ ಎರಡು ವಿಶೇಷ ಯೋಚನೆಗಳು ಉದಾರವಾದಿ ಚಿಂತಕರಿಂದ ವಿಭಿನ್ನವಾಗಿತ್ತು. ಮೊದಲನೆಯದ್ದು, ಉದಾರವಾದಿ ಚಿಂತಕರು ಮೊದಲು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ತರಲು ಬಯಸಿದಾಗ ತಿಲಕರು ತಕ್ಷಣದ ಸ್ವರಾಜ್ಯಕ್ಕಾಗಿ ಹೋರಾಡಿದರು. ಎರಡನೆಯದಾಗಿ, ನ್ಯಾಯ ಸಮ್ಮತತೆಯನ್ನು ಕಳೆದುಕೊಂಡ ಅಧಿಕಾರ ಕೇಂದ್ರವನ್ನು ವಿರೋಧಿಸಲು ಸಾರ್ವಜನಿಕರಿಗೆ ಸಂಪೂರ್ಣ ಹಕ್ಕುಗಳನ್ನು ನೀಡುವುದರ ಪರವಾಗಿದ್ದರು. ಇದರಿಂದಾಗಿ ಸ್ವಾತಂತ್ರ್ಯ ಹೋರಾಟದ ತ್ರಿಮೂರ್ತಿಗಳಂತೆ ಬಿಂಬಿಸಲ್ಪಟ್ಟ ಲಾಲ್ – ಬಾಲ್ – ಪಾಲರಲ್ಲಿ ಬಾಲಗಂಗಾಧರರೇ ಪ್ರಮುಖರೆನಿಸಿದರು. ಅವರು ಸ್ವರಾಜ್ಯಕ್ಕಾಗಿ ತ್ರಿಸೂತ್ರ ವಿಧಾನವನ್ನು ಪರಿಚಯಿಸಿ, ರಾಜಕೀಯ ಸ್ವಾತಂತ್ರ್ಯವನ್ನು ಸ್ವದೇಶಿ ಮನ್ನಣೆ, ವಿದೇಶಿ ಬಹಿಷ್ಕಾರ ಮತ್ತು ರಾಷ್ಟ್ರೀಯ ಶಿಕ್ಷಣದಿಂದ ಪರಿಣಾಮಕಾರಿಯಾಗಿ ಪಡೆಯಬಹುದೆಂದರು. ಈ ತ್ರಿಸೂತ್ರ ವಿಧಾನ ಮಾತ್ರದಿಂದಾಗಿ ರಾಷ್ಟ್ರೀಯತೆಯ ಪರಿಭಾಷೆಯೇ ಬದಲಾಯಿತು ಮತ್ತು ಸ್ವಾತಂತ್ರ್ಯ ಹೋರಾಟದ ಹಾದಿಗೆ ಒಂದು ಗುರಿಯನ್ನು ಸ್ಪಷ್ಟಪಡಿಸುವಲ್ಲಿ ಸಹಕಾರಿಯಾಯಿತು.
ವಿದೇಶಿ ವಸ್ತುಗಳು, ವಿದೇಶೀ ವ್ಯಾಪಾರ ವ್ಯವಹಾರದ ಮೂಲೋದ್ದೇಶವನ್ನು ಸಾಮಾನ್ಯನೂ ಅರಿಯುವಂತೆ ಮಾಡಿ, ಸಂಪೂರ್ಣ ಬಹಿಷ್ಕಾರದ ಪಣವನ್ನು ದೇಶದ ಮೂಲೆ ಮೂಲೆಯಲ್ಲಿರುವ ಜನರು ತೊಡುವಂತೆ ಮಾಡಿ, ಸ್ವದೇಶಿ ಜಾಗೃತಿಯ ಮೂಲಕ ಮತ್ತು ರಾಷ್ಟ್ರೀಯ ಶಿಕ್ಷಣದಿಂದ ನಮ್ಮ ಮೂಲಗಳನ್ನು ಅರಿಯುವಂತೆ ಮಾಡಿದರು.
ಶಿಕ್ಷಣ ಕ್ಷೇತ್ರ
ತಿಲಕರೆಂದರೆ ಬಹು ಆಯಾಮದ ವ್ಯಕ್ತಿತ್ವ. ರಾಷ್ಟ್ರ ರಾಜಕಾರಣದಲ್ಲಿ ಮತ್ತು ಸಾಮಾಜಿಕ ಪರಿವರ್ತನೆಯಲ್ಲಿ ವಿವಿಧ ಸ್ತರದ ಜನರಿಗೆ ಪ್ರೇರಣಾ ಕರ್ತೃವಾದ ಬಾಲಗಂಗಾಧರರು, ಶಿಕ್ಷಣದಲ್ಲಿ ಸುಧಾರಣೆಯನ್ನು ತಂದರೆ ಮಾತ್ರ ಭಾರತೀಯ ಸಮಾಜ ಅಪಾಯವಿಲ್ಲದೆ ಉಳಿಯಬಹುದೆಂದು ಮನಗಂಡು, ಮೂರು ಶಿಕ್ಷಣ ಸಂಸ್ಥೆಯ ಹುಟ್ಟುವಿಕೆಗೆ ಕಾರಣರಾದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಸಕ್ರಿಯರಾಗುವ ಮೊದಲೇ ತಮ್ಮ ರಾಷ್ಟ್ರವಾದವನ್ನು ಕೇಸರಿ ಎಂಬ ಮರಾಠಿ ಭಾಷೆಯ ಮತ್ತು ಮರಾಠ ಎಂಬ ಆಂಗ್ಲ ಭಾಷೆಯ ವಾರ್ತಾ ಪತ್ರಿಕೆಯಲ್ಲಿ ತಮ್ಮ ಸ್ವದೇಶಿ ನಿಲುವನ್ನು ಪ್ರತಿಪಾದಿಸುತ್ತಿದ್ದರು. 1885ರಲ್ಲಿ ಈ ಎರಡು ಪತ್ರಿಕೆಗಳನ್ನು ಪ್ರಾರಂಭಿಸಿದ ಬಳಿಕ 1890ರಲ್ಲಿ ಕಾಂಗ್ರೆಸ್ಗೆ ಔಪಚಾರಿಕವಾಗಿ ಸೇರಿದರು. 1905ರಿಂದ 1907 ಮತ್ತು 1917ರಿಂದ 1920ರಲ್ಲಿ ಸಕ್ರಿಯವಾಗಿ ಭಾರತೀಯ ಕಾಂಗ್ರೆಸ್ನೊಂದಿಗೆ ಕೆಲಸ ಮಾಡಿದರು. ‘ಸ್ವಾತಂತ್ರ್ಯ ಧುರೀಣರು’ ಎಂದು ಕರೆಸಿಕೊಂಡ ಕೆಲವರು ಬ್ರಿಟಿಷರನ್ನು ಸಹಾನುಭೂತಿಯಿಂದ ನೋಡಿ, ಅವರಿಗೆ ಸಹಕಾರವನ್ನು ನೀಡುತ್ತಿದ್ದುದನ್ನು ಬಲವಾಗಿ ವಿರೋಧಿಸುತ್ತಿದ್ದ ಬಾಲಗಂಗಾಧರರು, ರಾಷ್ಟ್ರಾಭಿಮಾನವನ್ನೂ, ಸ್ವಾಭಿಮಾನವನ್ನೂ ಪ್ರತಿಪಾದಿಸಿದರು. ಆ ಕಾಲದಲ್ಲಿ ಮೇಲುವರ್ಗದ ಸಂಘಟನೆಯಾಗಿದ್ದ ಕಾಂಗ್ರೆಸ್ಗೆ, ಕೆಳ ಮತ್ತು ಮಧ್ಯಮ ವರ್ಗದ ಜನರನ್ನು ಸೇರಿಸುವ ದೊಡ್ಡ ಕೆಲಸವನ್ನು ಮಾಡಿದರು.
ಸನಾತನ ಎಂಬುದಕ್ಕೆ ತಿಲಕರು ವಿಶಾಲವಾದ ವ್ಯಾಖ್ಯಾನವನ್ನು ನೀಡಿದರು. ಹಿಂದೂ ಎಂದರೆ ವೇದಗಳನ್ನು ನಂಬಿ, ಸ್ಮೃತಿ ಮತ್ತು ಪುರಾಣಗಳಿಗೆ ಅನುಗುಣವಾಗಿ ನಡೆದುಕೊಳ್ಳುವವನೆಂದು ಹೇಳಿ, ಭಾರತ ಇವುಗಳ ವಿನಃ ಶೂನ್ಯ ಎನ್ನುವುದನ್ನು ಒತ್ತಿ ಹೇಳಿದರು. ಸಂಸ್ಕೃತ ಭಾಷೆ ಮತ್ತು ಅದರೊಳಗೆ ಅಡಕವಾಗಿರುವ ತತ್ತ್ವವನ್ನು ಬಹಳ ಆಳವಾಗಿ ಅಧ್ಯಯನ ಮಾಡಿದ್ದ ತಿಲಕರು, ರಾಷ್ಟ್ರೀಯ ಚಿಂತನೆ ಮತ್ತು ಪ್ರಜಾಪ್ರಭುತ್ವದ ಯೋಚನೆಗಳಿಗೆ ಸಂಸ್ಕೃತವೇ ಅಡಿಪಾಯವೆನ್ನುತ್ತಿದ್ದರು.
1897ರಲ್ಲಿ ಪ್ಲೇಗ್ ಮಹಾರೋಗದಿಂದಾಗಿ ಬಾಂಬೆ ಮತ್ತು ಪುಣೆಯಲ್ಲಿ ಸಾವಿರ ಸಾವಿರ ಜನರು ಸತ್ತು ಹೋದಾಗ, ರೋಗ ಹರಡುವಿಕೆಯನ್ನು ನಿಯಂತ್ರಣ ಮಾಡುವ ಉದ್ದೇಶ ಎಂದು ಸಹಾಯಕ ಕಲೆಕ್ಟರ್ ಪುಣೆಯಲ್ಲಿ ಮನೆಗಳನ್ನು ಸುಟ್ಟು, ಜನರನ್ನು ಬಂದೂಕಿನಿಂದ ಕೊಲ್ಲುವ ಸಂದರ್ಭದಲ್ಲಿ ಪ್ರತಿಭಟನೆಯ ಹಾದಿಗಿಳಿದ ತಿಲಕರು, ತಮ್ಮ ಕೇಸರಿ ಪತ್ರಿಕೆಯಲ್ಲಿ ಭಗವದ್ಗೀತೆಯ ಸಾಲನ್ನು ಬಳಸಿ ಲೇಖನ ಒಂದನ್ನು ಬರೆದರು. ಆ ಲೇಖನದಿಂದ ಪ್ರೇರಿತರಾದ ಜನರು, ಅಮಾಯಕರನ್ನು ಕೊಂದ ಸಹಾಯಕ ಕಲೆಕ್ಟರ್ ಅವರನ್ನೇ ಕೊಂದರು. ನಂತರ ಈ ಕೊಲೆಗೆ ತಿಲಕರೇ ಕಾರಣರೆಂದು ಬ್ರಿಟಿಷ್ ನ್ಯಾಯಾಲಯವು 18 ತಿಂಗಳ ಕಾರಾಗೃಹ ಶಿಕ್ಷೆಯನ್ನು ತಿಲಕರಿಗೆ ವಿಧಿಸಿತು. ಜೈಲಿನಿಂದ ಹೊರಬಂದ ಬಳಿಕ, ರಾಷ್ಟ್ರವ್ಯಾಪಿಯಾಗಿ ಸ್ವಾತಂತ್ರ್ಯದ ನಾಯಕನಾಗಿ, ‘ಲೋಕಮಾನ್ಯ’ ಎಂಬ ಗೌರವಕ್ಕೆ ಅವರು ಪಾತ್ರರಾದರು.
‘ಬಾಲಗಂಗಾಧರ ತಿಲಕ’ ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರು. ಭಾರತೀಯ ಗುರುತನ್ನು ಎತ್ತಿ ಹಿಡಿಯುವಲ್ಲಿ, ಜನರಲ್ಲಿ ಆ ಕುರಿತು ಜಾಗೃತಿ ಮೂಡಿಸುವಲ್ಲಿ, ಅವರ ಕೊಡುಗೆ ಅಪಾರ. ಆರಂಭಿಕ ಸಮಾಜ ವಿಜ್ಞಾನಿಗಳು ಭಾರತೀಯ ಗುರುತನ್ನು ಒಂದು ಹಳೆಯ ವಿಷಯವೆಂದು ಪರಿಗಣಿಸಿದ್ದರೆ, ತಿಲಕರ ನಿರಂತರ ಶ್ರಮ, ಛಲದ ಫಲವಾಗಿ ಇಡೀ ಭಾರತೀಯ ಸಮಾಜವೇ ಕ್ರಮೇಣ ಭಾರತೀಯತೆಯನ್ನು ಹೆಗ್ಗುರುತಾಗಿ, ಹೆಮ್ಮೆಯ ಗುರುತಾಗಿ ಪರಿಗಣಿಸಿತು. ನಿಸ್ತೇಜ ಸಮಾಜಕ್ಕೆ ರಾಷ್ಟ್ರೀಯತೆಯ ಗುರುತೇ ಶಕ್ತಿ ತುಂಬುವುದು ಎಂದು ಪ್ರತಿಪಾದಿಸಿ, ಈ ಗುರುತಿನ ಮೂಲಕವೇ ಸ್ವಾತಂತ್ರ್ಯದ ಚಳವಳಿಯಲ್ಲಿ ಸಾವಿರಾರು ಜನರನ್ನು ಸೇರಿಸಿದರು. ನವ ಭಾರತದ ಕರ್ತೃ ಎಂದು ಸ್ವತಃ ಗಾಂಧಿಯೇ ತಿಲಕರನ್ನು ಕರೆದು, ಅವರ ಅವಿರತ ಚಳವಳಿಯ ಮನೋಭಾವ, ರಾಷ್ಟ್ರವನ್ನು ಒಂದುಗೂಡಿಸುವ ಶಕ್ತಿಯನ್ನು ಕೊಂಡಾಡಿದರು.
ಸ್ವರಾಜ್ಯ ಮತ್ತು ಸ್ವದೇಶದಲ್ಲಿ ಮೊದಲು ‘ಸ್ವ’ ಎನ್ನುವಂಥದ್ದು ಜಾಗೃತವಾಗಬೇಕೆಂದು ಕರೆನೀಡಿ, ಅದಕ್ಕಾಗಿ ಭಾರತೀಯ ಮಹಾಪುರುಷರ, ಸಂಸ್ಕೃತಿ, ಸಂಸ್ಕಾರ, ಪರಂಪರೆ, ಸಿದ್ಧಾಂತ ಮುಂತಾದ ಹತ್ತು ಹಲವು ವಿಷಯಗಳನ್ನು ಜನಮಾನಸದಲ್ಲಿ ಬಿತ್ತಿ, ಒಂದೇ ಸೂತ್ರದಡಿಯಲ್ಲಿ ಜನರನ್ನು ಪೋಣಿಸುವಲ್ಲಿ ಯಶಕಂಡರು. ಶಿಕ್ಷಣ ಮತ್ತು ಮಾಧ್ಯಮದ ಮೂಲಕ ರಾಜಕೀಯ ಜಾಗೃತಿಯನ್ನು ಮಾಡುವಲ್ಲಿ ಯಾವ ನಡೆಗಳನ್ನು ತಿಲಕರು ಕೈಗೊಂಡರೋ ಅವನ್ನೇ ಬಳಿಕ ಅಂಬೇಡ್ಕರ್, ಗಾಂಧಿಯವರೂ ಅನುಸರಿಸಿದರು.
ಲೋಕಮಾನ್ಯ ಬಾಲಗಂಗಾಧರ ತಿಲಕರ ಬೇಡಿಕೆಯ ಧ್ವನಿ ಮತ್ತು ತತ್ತ್ವಗಳು ಕಾರ್ಯತಂತ್ರದಿಂದ ಸ್ಪಷ್ಟವಾಗಿದ್ದವು ಮತ್ತು ಸ್ವ ಪ್ರತಿಷ್ಠೆ ಎಂಬ ವಿಷದಿಂದ ಸಂಪೂರ್ಣವಾಗಿ ದೂರವಾಗಿದ್ದವು. ಸ್ವಹಿತವನ್ನು ಬಯಸದೆ, ಲೋಕ ಹಿತವನ್ನೇ ಬಯಸಿ, ಅದಕ್ಕಾಗಿ ನಿಸ್ಸಂದೇಹವಾಗಿ ಕೆಲಸ ಕಾರ್ಯಗಳನ್ನು ಮಾಡಿದ ಫಲವಾಗಿ ಅವರು ಲೋಕಮಾನ್ಯರೆಂದು ಕರೆಸಿಕೊಂಡರು. ಇಂದು ನಾವು ಸ್ವಾಭಿಮಾನ, ಆತ್ಮ ನಿರ್ಭರತೆ, ಸ್ವದೇಶಿ, ಮೇಕ್ ಇನ್ ಇಂಡಿಯಾ ಇತ್ಯಾದಿಗಳ ಬಗ್ಗೆ ಮಾತನಾಡುತ್ತಿದ್ದೇವೆ ಅಥವಾ ಅದನ್ನು ಆಚರಿಸುತ್ತಿದ್ದೇವೆ ಎಂದಾದರೆ ಅದಕ್ಕೆ ಕಾರಣ ತಿಲಕರೆಂದರೆ ತಪ್ಪಾಗಲಾರದು. ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಿ, ರಾಷ್ಟ್ರದ ಆರ್ಥಿಕತೆಯನ್ನು ಹೆಚ್ಚಿಸುವ ಮನೋಭಾವವನ್ನು ಪುನರುಜ್ಜೀವನಗೊಳಿಸಿ, ಸಂಸ್ಕೃತಿಯ ಮೂಲಕ ಸಾಮಾಜಿಕ ಏಕೀಕರಣ ಸಾಧ್ಯ ಎನ್ನುವಂಥದ್ದನ್ನು ಬಿತ್ತಿದ ತಿಲಕರು ಪ್ರಾತಃಸ್ಮರಣೀಯರೇ ಸರಿ. ಅಂತಹ ಮಹಾನ್ ಚೇತನ ಹಾಕಿಕೊಟ್ಟ ಹಾದಿಯಲ್ಲೇ ಭಾರತ ಇಂದು ಮುನ್ನಡೆಯುತ್ತಿದೆ ಎಂಬುದೇ ಹೆಮ್ಮೆಯ ವಿಚಾರ.
