ಅಂಕಣ – ಮಕ್ಕಳಿಗೆ ವಿಜ್ಞಾನ
- ರೋಹಿತ್ ಚಕ್ರತೀರ್ಥ, ಚಿಂತಕರು, ಲೇಖಕರು
ಒಂದು ಕಾರ್ಯ ಆಗಲು ಅದರ ಹಿಂದೊಂದು ಕಾರಣ ಇರಬೇಕು- ಮೇಲ್ನೋಟಕ್ಕೇನೋ ಇದು ಸರಳ ವಿಷಯ ಎಂದೇ ಅನ್ನಿಸಬಹುದು. ಆದರೆ ಯೋಚಿಸುತ್ತ ಹೋದಂತೆ ಕಾರ್ಯ- ಕಾರಣಗಳ ನಡುವಿನ ಸಂಬಂಧದ ಹಲವು ಎಳೆಗಳು ಬಿಚ್ಚಿಕೊಳ್ಳತೊಡಗುತ್ತವೆ. ಈ ಬಗ್ಗೆ ನಮ್ಮಲ್ಲಿ ತಾರ್ಕಿಕರು ಆಳವಾದ ಚಿಂತನೆಯನ್ನೇ ನಡೆಸಿದ್ದಾರೆ.
ನ್ಯಾಯಶಾಸ್ತ್ರವು ಕಾರ್ಯ- ಕಾರಣ ಸಂಬಂಧದ ವಿಷಯದಲ್ಲಿ ಮೂರು ಸಂಗತಿಗಳನ್ನು ಹೇಳುತ್ತದೆ: ಪೂರ್ವವೃತ್ತಿ, ನಿಯತ ಪೂರ್ವವೃತ್ತಿ ಮತ್ತು ಅನನ್ಯಥಾಸಿದ್ಧಿ. ವಿಶ್ವನಾಥನ ಭಾಷಾಪರಿಚ್ಛೇದ ಎಂಬ ಗ್ರಂಥದಲ್ಲಿ (ಮತ್ತು ಅದರ ‘ನ್ಯಾಯಸಿದ್ಧಾಂತಮುಕ್ತಾವಲೀ’ ಎಂಬ ಟೀಕಾಗ್ರಂಥದಲ್ಲಿ) ಅನ್ಯಥಾಸಿದ್ಧಿಶೂನ್ಯಸ್ಯ ನಿಯತಾ ಪೂರ್ವವರ್ತಿತಾ ಕಾರಣತ್ವಮ್ ಎಂಬ ಸೂತ್ರವು ಸಿಗುತ್ತದೆ. ಇಲ್ಲಿ ಬರುವ ಮೂರು ಸಂಗತಿಗಳೇ ಕಾರ್ಯ- ಕಾರಣದ ಬೇರು. ಮೊದಲನೆಯದು: ಪೂರ್ವವೃತ್ತಿ. ಅಂದರೆ ಯಾವುದೇ ಕೆಲಸಕ್ಕೆ ಪೂರ್ವದಲ್ಲಿ ಇರಬೇಕಾದ ಅಂಶ. ವಾಹನ ಚಲಿಸುತ್ತಿದೆ ಎಂದರೆ ಅದರಲ್ಲಿ ಇಂಧನ ಇದೆ ಎಂದು ಅರ್ಥ. ವಾಹನವು ಚಲಿಸಲು ಇಂಧನ ಪೂರ್ವವೃತ್ತಿ. ಮಡಕೆಗೆ ಮಣ್ಣು, ಬಟ್ಟೆಗೆ ನೂಲು, ನೂಲಿಗೆ ಹತ್ತಿ, ಹತ್ತಿಗೆ ಗಿಡ, ಗಿಡ ಬೆಳೆಯಲು ಸೂರ್ಯನ ಬೆಳಕು- ಹೀಗೆ ಪ್ರತಿಯೊಂದಕ್ಕೂ ಒಂದು ಪೂರ್ವವೃತ್ತಿ ಇದ್ದೇ ಇರುತ್ತದೆ. ಮೊದಲೇನೂ ಇರಲಿಲ್ಲ; ಇದ್ದಕ್ಕಿದ್ದಂತೆ ಸ್ವಯಂಭೂ ಆಗಿ ಏನೋ ಹುಟ್ಟಿತು- ಎಂಬುದನ್ನು ಲೌಕಿಕ ವಿಚಾರಗಳಲ್ಲಿ ನ್ಯಾಯಶಾಸ್ತ್ರ ಒಪ್ಪುವುದಿಲ್ಲ. ಹೀಗೆ ಪ್ರತಿಯೊಂದಕ್ಕೂ ಒಂದು ಪೂರ್ವವೃತ್ತಿ ಇದ್ದೇ ಇರುತ್ತದಾದ್ದರಿಂದ- ಎಲ್ಲದರ ಮೊದಲ ಪೂರ್ವವೃತ್ತಿ ಎಂಬುದಿಲ್ಲ. ಯಾಕೆಂದರೆ ಅದಕ್ಕೂ ಒಂದು ಪೂರ್ವವೃತ್ತಿ ಇರಬೇಕಲ್ಲ? ಆ “ಎಲ್ಲ ಕಾರ್ಯಗಳಿಗೂ ಕಾರಣವಾದ ಪರಮ ಮೂಲ ಪೂರ್ವವೃತ್ತಿ”ಯು ತನಗೆ ತಾನೇ ಸೃಷ್ಟಿಯಾಯಿತೆಂಬುದನ್ನು ಒಪ್ಪದೆ ಹೋದರೆ ಇಂದಿನ ಯಾವ ಕಾರ್ಯಗಳನ್ನೂ ವಿವರಿಸಲು ಸಾಧ್ಯವಿಲ್ಲವೆಂಬ ಪರಿಸ್ಥಿತಿ ಸೃಷ್ಟಿಯಾಗುತ್ತದೆ.
ಕೇವಲ ಪೂರ್ವವೃತ್ತಿಯನ್ನಷ್ಟೇ ಪರಿಗಣಿಸಿದರೆ ನಮಗೆ ಕಾರ್ಯಕ್ಕೆ ಸಂಬಂಧಿಸಿದ ನಿಜವಾದ ಕಾರಣ ಪತ್ತೆಯಾಗದು. ಉದಾಹರಣೆಗೆ ಒಬ್ಬ ಕುಂಬಾರ ಒಂದು ಮಡಕೆ ಮಾಡಬೇಕಿದೆ ಎನ್ನೋಣ. ಮಡಕೆ ಮಾಡಲು ಮಣ್ಣು ಬೇಕು. ಮಣ್ಣು ತೆಗೆಯಲು ಜಮೀನು ಬೇಕು. ಜೊತೆಗೆ ಮಣ್ಣು ತುಂಬಿಸಿಕೊಳ್ಳಲು ಹೆಡಿಗೆ ಬೇಕು. ಅದನ್ನು ಹದವಾಗಿ ಕಲಸಲು ನೀರು ಬೇಕು. ಮಣ್ಣನ್ನು ಕಲಸಿಕೊಳ್ಳಲು ಕುಂಬಾರನಿಗೆ ಕೈಕಾಲುಗಳಿರುವುದು ಮುಖ್ಯ. ಜೊತೆಗೆ ಮಣ್ಣು ಹದಕ್ಕೆ ಬಂತೇ ಎಂದು ನೋಡಲು ಕಣ್ಣುಗಳ ದೃಷ್ಟಿಯೂ ಚೆನ್ನಾಗಿರಬೇಕು. ಕುಂಭಚಕ್ರವನ್ನು ತಿರುಗಿಸಲು ಕುಂಬಾರನಿಗೆ ಸಾಕಷ್ಟು ರಟ್ಟೆಬಲ ಇರಬೇಕು. ಆ ಬಲ ಬರಲು ಆತ ಊಟ ಮಾಡಿರಬೇಕು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಈ ಎಲ್ಲ ಕೆಲಸ ಮಾಡಲು ಅವನು ನಿದ್ದೆಯಿಂದ ಎಚ್ಚೆತ್ತಿರಬೇಕು. ಹಾಗಾದರೆ ಮಡಕೆಯ ಸೃಷ್ಟಿಗೆ ನಿಜವಾದ ಕಾರಣ ಯಾವುದು? ಮಣ್ಣು, ಜಮೀನು, ಹಾರೆ, ಹೆಡಿಗೆ, ಕೈಕಾಲು, ಊಟ, ಎಚ್ಚರ – ಹೀಗೆ ಎಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಕಾರಣವೇ ಆದರೂ ಅವೆಲ್ಲ ನೇರವಾದ ಕಾರಣಗಳಲ್ಲ. ಅದಕ್ಕೆಂದೇ ನ್ಯಾಯ ಹೇಳುವ ಎರಡನೆ ಕಾರಣ: ನಿಯತ ಪೂರ್ವವೃತ್ತಿಯೂ ಮುಖ್ಯ.
ನಿಯತ ಪೂರ್ವವೃತ್ತಿ ಎಂದರೆ ಕಾರ್ಯವು ಪ್ರತಿ ಸಲ ನಡೆಯುವಾಗಲೂ ಇದ್ದೇ ತೀರುವ ಸಂಗತಿ. ಒಬ್ಬ ಮರವನ್ನು ನೋಡುತ್ತಿದ್ದ ಎನ್ನಿ. ಆ ಮರಕ್ಕೆ ಕಾಗೆಯೊಂದು ಬಂದು ಕೂತಿತು. ಕಾಗೆ ಆ ಮರದ ಗೆಲ್ಲೊಂದರಲ್ಲಿ ಕೂರುವುದಕ್ಕೂ ಆ ಮರದಿಂದ ಒಂದು ಹಣ್ಣು ಕೆಳಕ್ಕೆ ಬೀಳುವುದಕ್ಕೂ ಸರಿಹೋಯಿತು. ಇದನ್ನು ನೋಡಿದವನು “ಕಾಗೆ ಕೂತದ್ದರಿಂದ ಹಣ್ಣು ಬಿತ್ತು” ಎಂದು ಸಿದ್ಧಾಂತ ಮಾಡಬಹುದೇ? ಕಾಗೆ ಕೂತದ್ದೂ ಹಣ್ಣು ಬಿದ್ದದ್ದೂ ಒಂದಕ್ಕೊಂದು ಸಂಬಂಧವಿಲ್ಲದ, ಆದರೆ ಸಂಬಂಧವಿದೆಯೇನೋ ಎನ್ನಿಸುವಂತೆ ಜರುಗಿಹೋದ ಘಟನೆಗಳು. ಸ್ವಲ್ಪ ಹೊತ್ತಿನ ನಂತರ ಇನ್ನೊಂದು ಕಾಗೆ ಕೂತಾಗ ಹಣ್ಣು ಬೀಳದು; ಅಥವಾ ಹಣ್ಣು ಬಿದ್ದಾಗ ಆ ಮರದಲ್ಲಿ ಕಾಗೆಯೇ ಇದ್ದಿರಲಿಕ್ಕಿಲ್ಲ. ಹಾಗಾಗಿ ಕಾರ್ಯ- ಕಾರಣ ಎನ್ನಿಸುವ ಎರಡು ಸಂಗತಿಗಳು ಸದಾಕಾಲವೂ ಒಟ್ಟಿಗೆ ಕಾಣಿಸಿಕೊಂಡಾಗ ಮಾತ್ರ ಅಲ್ಲಿರುವ ಕಾರಣವನ್ನು ನಿಯತ ಪೂರ್ವವೃತ್ತಿ ಎನ್ನುತ್ತೇವೆ. ಇಲ್ಲವಾದರೆ ಅದು ಕಾಕತಾಲೀಯ ನ್ಯಾಯ ಅಷ್ಟೆ.
ಇದನ್ನು ಇನ್ನೊಂದು ಉದಾಹರಣೆ ಮೂಲಕ ಸ್ಪಷ್ಟಪಡಿಸಿಕೊಳ್ಳೋಣ. ಮಳೆ ಯಾವಾಗ ಬರುತ್ತದೆ ಎಂಬ ಪ್ರಶ್ನೆಗೆ ಒಬ್ಬ “ಜೂನ್ ತಿಂಗಳಲ್ಲಿ ಬರುತ್ತದೆ” ಎನ್ನಬಹುದು. ಜೂನ್ ತಿಂಗಳು ಮಳೆಗಾಲವಾದ್ದರಿಂದ ಮಳೆ ಬರುವುದೇನೋ ನಿಜ; ಆದರೆ ಅದೇ ಅಂತಿಮ ಸತ್ಯವಲ್ಲ. ಜೂನ್ ತಿಂಗಳು ಬಂದಿದೆ; ಹಾಗಾಗಿ ನಾನು ಸುರಿಯಬೇಕು ಎಂದೇನೂ ಮಳೆ ಭಾವಿಸಿಲ್ಲ! ಅರ್ಥಾತ್ ತಿಂಗಳು ಜೂನ್ ಎಂಬುದು ಮಳೆ ಬರಲು ನೇರವಾದ ಕಾರಣವಲ್ಲ. ನೇರ ಕಾರಣ ಮಳೆಮೋಡಗಳು ಆಕಾಶದಲ್ಲಿ ದಟ್ಟೈಸಿವೆ ಎಂಬುದೇ. ಪ್ರತಿ ಸಲ ಮಳೆ ಬಂದಾಗಲೂ ಆಕಾಶದಲ್ಲಿ ಮಳೆಮೋಡಗಳು ತುಂಬಿಕೊಂಡಿದ್ದವು- ಹಾಗಾಗಿ ಮಳೆಮೋಡವೇ ಮಳೆಗೆ ನಿಯತ ಪೂರ್ವವೃತ್ತಿ.
ಈ ಎಚ್ಚರವನ್ನಿಟ್ಟುಕೊಂಡೇ ನ್ಯಾಯವು ಮೂರನೆಯ ಅಗತ್ಯವನ್ನು ಪ್ರತಿಪಾದಿಸುತ್ತದೆ. ಅದುವೇ ಅನನ್ಯಥಾಸಿದ್ಧಿ. ಮನೆಯಲ್ಲಿ ನಾಲ್ಕೈದು ಸ್ವಿಚ್ಚುಗಳಿರುತ್ತವೆ. ಒಂದೊಂದು ಸ್ವಿಚ್ಚಿಗೂ ಒಂದೊಂದು ಉಪಕರಣದ ಸಂಪರ್ಕ ಇರುತ್ತದೆ. ಎರಡು ಸ್ವಿಚ್ಚಲ್ಲಿ ಯಾವುದನ್ನಾದರೂ ಒತ್ತಿ, ಬಲ್ಬ್ ಉರಿಯುತ್ತದೆ ಎಂದು ಇರಲು ಸಾಧ್ಯವೆ? ಬಲ್ಬ್ ಉರಿಯಲು ಒಂದೇ ಸ್ವಿಚ್ಚು. ನಿರ್ದಿಷ್ಟವಾಗಿ ಅದನ್ನೊತ್ತಿದರಷ್ಟೇ ಬಲ್ಬ್ ಉರಿಯುವುದು. ಹೀಗೆ “ಈ ಕಾರಣದಿಂದಲೇ ಆ ಕಾರ್ಯ ಆಯಿತು. ಈ ಕಾರಣವು ಇಲ್ಲದೇ ಹೋದರೆ ಆ ಕಾರ್ಯವೂ ನಡೆಯದು” ಎಂಬಂಥ ಸಮಸಂಬಂಧ ಇದ್ದರಷ್ಟೇ ಆ ಕಾರಣವನ್ನು ಅನನ್ಯಥಾಸಿದ್ಧಿಗೆ ಸೇರಿಸಬಹುದು. ಉದಾಹರಣೆಗೆ, ಮಡಕೆ ಮಾಡುವಾಗ ಕುಂಬಾರ ಮತ್ತು ಕುಂಭಚಕ್ರ- ಇವೆರಡೂ ಅನನ್ಯಥಾಸಿದ್ಧಿ.
ಅನನ್ಯಥಾಸಿದ್ಧಿಯಲ್ಲಿ ಐದು ಬಗೆಯನ್ನು ನಮ್ಮ ಪ್ರಾಚೀನರು ಗುರುತಿಸಿದ್ದಾರೆ. ಮೊದಲನೆಯದು: ಕಾಕತಾಲೀಯ ಕಾರಣ. ಉದಾಹರಣೆಗೆ ಕುಂಬಾರ ನಿನ್ನೆ ಮಡಕೆ ಮಾಡಿದಾಗ ಬಿಳಿ ಪಂಚೆ ಉಟ್ಟಿದ್ದ. ಇವತ್ತೂ ಅದನ್ನೇ ಉಟ್ಟಿದ್ದಾನೆ- ಎಂದಮಾತ್ರಕ್ಕೆ ಮಡಕೆ ಮಾಡಲು ಬಿಳಿಪಂಚೆ ಬೇಕು- ಎಂದರೆ ಹಾಸ್ಯಾಸ್ಪದ. ಅವನು ಹಾಗೆ ಉಟ್ಟದ್ದು ಕೇವಲ ಕಾಕತಾಲೀಯ ಅಷ್ಟೆ. ಎರಡನೆಯದು: ದೂರದ ಕಾರಣ. ಉದಾಹರಣೆಗೆ ಕುಂಬಾರನು ಮಡಕೆ ಮಾಡಲು ಅವನಪ್ಪ ಕಾರಣ ಎಂದ ಹಾಗೆ. ಕುಂಬಾರನು ಇಂದು ಭೂಮಿಯ ಮೇಲಿರಲು ಅವನ ತಂದೆ ಕಾರಣವೇನೋ ಹೌದು; ಅವನೇ ಇರದಿದ್ದರೆ ಇವನೂ ಇರುತ್ತಿರಲಿಲ್ಲ. ಹಾಗಂತ ಮಡಕೆ ಮಾಡಲು ಕುಂಬಾರನಿದ್ದುದರಿಂದ ಅವನ ತಂದೆಯೂ ಕಾರಣ ಎನ್ನಲಾಗದು. ಮೂರು: ಪರಸ್ಪರ ಸಂಬಂಧವಿಲ್ಲದ ಸಮಾಂತರ ಕಾರಣಗಳು. ಕುಂಬಾರನು ಮಡಕೆ ಮಾಡುವಾಗ ಚಕ್ರದ ಅರಗಳಿಗೆ ಕೋಲು ಸಿಕ್ಕಿಸಿ ತಿರುವುತ್ತಾನೆ. ಆಗ ಆ ಕೋಲು ಸದ್ದು ಮಾಡುತ್ತದೆ. ಆದರೆ ಆ ಸದ್ದಿನಿಂದಲೇ ಮಡಕೆ ಹುಟ್ಟಿತು ಎನ್ನಬಹುದೆ? ನಾಲ್ಕು: ಬಾಹ್ಯಕಾರಣ. ಕುಂಬಾರನಿಗೆ ಮಡಕೆ ಮಾಡಲು ಜಾಗ/ಸ್ಥಳಾವಕಾಶ ಬೇಕು. ಹಾಗೆಯೇ ಚಕ್ರವನ್ನು ತಿರುಗಿಸಲು ಸಮತಟ್ಟಾದ ನೆಲ ಬೇಕು. ತಯಾರಿಸಿದ ಕುಂಭಗಳನ್ನು ಇರಿಸಿಕೊಳ್ಳಲು ಜಾಗ ಬೇಕು. ಇವೆಲ್ಲ ಬೇಕಿದ್ದರೂ ಇವೇ ಮಡಕೆಯ ಸೃಷ್ಟಿಗೆ ಮುಖ್ಯ ಕಾರಣಗಳಲ್ಲ. ಐದು: ನಗಣ್ಯಕಾರಣ. ಉದಾಹರಣೆಗೆ, ಕುಂಬಾರನ ಕತ್ತೆ. ಅದು ಆ ಮಡಕೆ ಮಾಡುವ ಜಾಗದ ಪಕ್ಕದಲ್ಲೇ ಇತ್ತೆಂಬುದೇನೋ ನಿಜ; ಆದರೆ ಮಡಕೆಯ ತಯಾರಿಗೂ ಅದಕ್ಕೂ ಯಾವ ಸಂಬಂಧವೂ ಇಲ್ಲವಲ್ಲ!.
ಕಾರ್ಯಕಾರಣಕ್ಕೆ ಸಂಬಂಧಿಸಿದಂತೆ ಇಡೀ ಭಾರತೀಯ ತತ್ತ್ವಜ್ಞಾನ ಪರಂಪರೆಯೇ ಎರಡು ಹೋಳಾಗಿದೆ ಎಂದರೆ ಅಚ್ಚರಿಯಾಗಬಹುದು. ಸಾಂಖ್ಯ, ಯೋಗ ಮತ್ತು ವೇದಾಂತ – ಈ ಮೂರು ದರ್ಶನಗಳು ಸತ್ಕಾರ್ಯವಾದವನ್ನು ಒಪ್ಪುತ್ತವೆ; ನ್ಯಾಯ, ವೈಶೇಷಿಕ ಮತ್ತು ಆಂಶಿಕವಾಗಿ ಬೌದ್ಧ – ಈ ಮೂರು ದರ್ಶನಗಳು ಅಸತ್ಕಾರ್ಯವಾದವನ್ನು ಒಪ್ಪುತ್ತವೆ.
ಕಾರ್ಯವು ಕಾರಣದಲ್ಲೇ ಅಂತರ್ಗತವಾಗಿದೆ ಎಂಬುದು ಸತ್ಕಾರ್ಯವಾದ. ಇಲ್ಲ; ಕಾರ್ಯವು ಕಾರಣದಲ್ಲೇ ಇರುವುದಿಲ್ಲ; ಕಾರಣದಿಂದಾಗಿ ಹೊಸದಾಗಿ ಕಾರ್ಯವು ಉತ್ಪನ್ನವಾಗುತ್ತದೆ ಎಂಬುದು ಅಸತ್ಕಾರ್ಯವಾದ. ಉದಾಹರಣೆಗೆ ಮೊದಲ ಪಂಗಡದವರು, “ಹಾಲಿಗೆ ಹೆಪ್ಪು ಹಾಕಿದಾಗ ಇಡೀ ಹಾಲಿನ ಗಡಿಗೆಯೇ ಮೊಸರಾಯಿತು. ಹಾಲಿನಲ್ಲಿ ಮೊಸರಿನ ಅಂಶ ಇಲ್ಲದೇ ಹೋಗಿದ್ದರೆ ಅದು ಆಗುತ್ತಿತ್ತೆ? ಅಥವಾ ಮೊಸರನ್ನು ಕಡೆದಾಗ ಅದು ಮಜ್ಜಿಗೆಯಾಯಿತು. ಯಾಕೆಂದರೆ ಮಜ್ಜಿಗೆಯ ಅಂಶ ಮೊಸರಿನಲ್ಲೇ ಪ್ರಚ್ಛನ್ನವಾಗಿರುತ್ತದೆ- ಎನ್ನುತ್ತಾರೆ.
ಸತ್ಕಾರ್ಯವಾದಕ್ಕೆ ಸಾಂಖ್ಯರು ಐದು ಅಂಶಗಳನ್ನು ಮುಂದಿಡುತ್ತಾರೆ. ಕಪಿಲನ ಸಾಂಖ್ಯಸೂತ್ರಗಳಲ್ಲಿ ಇದ್ದಿತ್ತೆಂದು ನಂಬಲಾದ, ಈಗ ಈಶ್ವರಕೃಷ್ಣ (ಸಾಶ 350) ಎಂಬಾತನ ಭಾಷ್ಯಗ್ರಂಥದಲ್ಲಿ ಸಿಗುವ ಒಂದು ಸೂತ್ರವು ಹೀಗಿದೆ:
ಸದಕರಣಾದುಪಾದಾನಗ್ರಹಣಾತ್ ಸರ್ವಸಂಭವಾಭಾವಾತ್ ಶಕ್ತಸ್ಯ ಶಕ್ಯಕರಣಾತ್ ಕಾರಣಾಭಾವಾಚ್ಚ ಸತ್ಕಾರ್ಯಮ್.
ಅಸದ್-ಅಕರಣಾತ್- ಇಲ್ಲದ್ದನ್ನು ಸೃಷ್ಟಿಸಲು ಸಾಧ್ಯವಿಲ್ಲ. ಏನೇನೇ ಪ್ರಯತ್ನಿಸಿದರೂ ಮೊಲಕ್ಕೆ ಕೊಂಬು ಮೂಡಿಸಲು ಸಾಧ್ಯವೆ? ಬೇವಿಗೆ ಸಿಹಿ ತರಲು ಸಾಧ್ಯವೆ? ಹಾಗಾಗಿ ಕಾರ್ಯ ಎಂದು ಏನನ್ನು ನೋಡುವೆವೋ ಅದರ ಮೂಲ ಕಾರಣದಲ್ಲೇ ಇದ್ದಿರಬೇಕು. ಕಾರ್ಯ- ಕಾರಣಗಳಿಗೆ ಸಂಬಂಧವೇ ಇಲ್ಲವಾದರೆ ಯಾವುದರಿಂದಾದರೂ ಏನನ್ನಾದರೂ ಸೃಷ್ಟಿಸಬಹುದಲ್ಲವೆ?
ಉಪಾದಾನ- ಗ್ರಹಣಾತ್- ಒಂದು ನಿರ್ದಿಷ್ಟ ಕಾರ್ಯವಾಗಲು ನಿರ್ದಿಷ್ಟವಾದ ಕಾರಣವನ್ನೇ ಆರಿಸಿಕೊಳ್ಳಬೇಕು. ಹಾಲಿನಿಂದ ಮೊಸರು ಮಾಡಬಹುದೇ ಹೊರತು ಮರಳಿನಿಂದಲ್ಲ. ಇದು ಕಾರ್ಯ- ಕಾರಣಗಳ ಅಂತಃಸಂಬಂಧವನ್ನು ಸ್ಪಷ್ಟಪಡಿಸುತ್ತದೆ.
ಸರ್ವಸಂಭವಾಭಾವಾತ್- ಕಾರ್ಯದ ಗುಣವೈಶಿಷ್ಟ್ಯಕ್ಕೆ ಕಾರಣವಾದ ಕಾರಣವು ಇಲ್ಲದೇ ಹೋದರೆ ಯಾವುದರಿಂದ ಏನನ್ನಾದರೂ ಉತ್ಪಾದಿಸಬಹುದು.
ಶಕ್ತಸ್ಯ ಶಕ್ಯಕಾರಣಾತ್- ಸರಿಯಾದ ಶಕ್ತಿಯನ್ನು ಬಳಸಿಮಾಡಿದ ಕೆಲಸದಿಂದಷ್ಟೇ ಫಲಿತಾಂಶ ಬರುತ್ತದೆ. ಮೊಸರಿನಿಂದ ಮಜ್ಜಿಗೆ ಬರುತ್ತದೆ ನಿಜ, ಆದರೆ ಅದಕ್ಕೆ ತಕ್ಕ ಶಕ್ತಿ ಬಳಸಿ ಮೊಸರು ಕಡೆಯಬೇಕು. ಸೈಕಲ್ ಚಲಿಸಲು ಚಕ್ರ, ರಸ್ತೆ ಎಲ್ಲ ಇರಬೇಕು ನಿಜ, ಆದರೆ ಪೆಡಲು ತುಳಿಯುವ ಮೂಲಕ ಸವಾರ ಶಕ್ತಿವಿನಿಯೋಗಿಸದೆ ಸೈಕಲ್ ಚಲಿಸಲಾರದು.
ಕಾರಣಾಭಾವಾತ್- ಮೂಲದಲ್ಲಿ ಕಾರ್ಯ ಮತ್ತು ಕಾರಣಗಳು ಒಂದೇ. ಅದಿಲ್ಲದೆ ಇದಿಲ್ಲ. ಮೊಸರೆಂಬುದು ಹೆಪ್ಪಾದ ಹಾಲು ಹೇಗೋ ಹಾಗೆ.
ನೂಲೇ ಬಟ್ಟೆಗೆ ಕಾರಣ ಎನ್ನುವುದಾದರೆ ಆ ನೂಲನ್ನೇ ಬಟ್ಟೆ ಎಂದು ಹೊದ್ದುಕೊಳ್ಳಬಹುದಲ್ಲ? ಅದನ್ನು ನೇಕಾರ ಬಟ್ಟೆಯಾಗಿ ಮಾಡುವ ಶ್ರಮವನ್ನಾದರೂ ಯಾಕೆ ಪಡಬೇಕು? ಕಾರ್ಯದ ಬೀಜವು ಕಾರಣದಲ್ಲೇ ಇರುವುದಾದರೆ ಅದನ್ನು ಹೊಸದಾಗಿ ಕಾರಣ ಎಂದು ಪ್ರತ್ಯೇಕಿಸುವ ಅಗತ್ಯವಾದರೂ ಏನು? ಮರವಾಗುವ ಅಂಶವು ಬೀಜದೊಳಗೇ ಇದ್ದಿತ್ತಾದರೆ ಮಣ್ಣು, ನೀರು, ಬೆಳಕುಗಳ ಸಂಸರ್ಗ ಏಕೆ? ಇದು ಸಾಂಖ್ಯರ ವಾದ. ಇದೇ ಮುಂದೆ ಬೆಳೆದು ಅದ್ವೈತ ವೇದಾಂತದ ವಿವರ್ತವಾದಕ್ಕೆ ಬುನಾದಿಯಾಯಿತು.
