ವಿಷ್ಣುವಿನ ನಾಲ್ಕು ತಿಂಗಳ ಸುದೀರ್ಘ ನಿದ್ರಾವಸ್ಥೆಯ ಚಾತುರ್ಮಾಸ ಪ್ರಾರಂಭವಾಗುವ ಆಷಾಢ ಏಕಾದಶಿಯನ್ನು ಭಾರತದ ಕೆಲರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸಲಾಗುತ್ತದೆ. ಮಹಾರಾಷ್ಟ್ರದ ಪಂಡರಾಪುರದ ವಿಠಲ ದರ್ಶನ ಮಾಡಲು ಜನರು ಈ ಸಮಯಕ್ಕೆ ಕಾಲ್ನಡಿಗೆಯಲ್ಲಿ ತೆರಳಿದರೆ, ಗೋವಾದ ದೇವಕಿ ಕೃಷ್ಣ ದೇವಸ್ಥಾನದ ಬಳಿ ಕೃಷ್ಣನ ಬಾಲ್ಯವನ್ನು ನೆನಪಿಸುವ ಕೆಸರಿನ ಆಟದ ಮೂಲಕ ಆಷಾಡ ಏಕಾದಶಿ ಸಂಭ್ರಮಿಸಲಾಗುತ್ತದೆ. ಗೋವಾದ ರಾಜಧಾನಿ ಪಣಜಿಯಿಂದ 20 ಕಿಲೋ ಮೀಟರ್ ದೂರದಲ್ಲಿರುವ ಗ್ರಾಮವೇ ಮಾರ್ಸೆಲ್. ಬಹುತೇಕ ಜಾಗಗಳಲ್ಲಿ ರಾಧೆಯೊಡನೆ ಕಾಣುವ ಕೃಷ್ಣ ಕೇವಲ ಈ ಗ್ರಾಮದಲ್ಲಿ ತಾಯಿ ದೇವಕಿಯೊಡನೆ ಬಾಲಕೃಷ್ಣನಾಗಿ ನೆಲೆಸಿದ್ದಾನೆ. ಈ ತುಂಟ ಕೃಷ್ಣನ ಬಾಲ್ಯದ ದಿನಗಳನ್ನು ನೆನಪಿಸುವ ಹಬ್ಬವೇ ‘ಚಿಕಲ್ ಕಾಲೋ’ ಎಂಬ ಕೆಸರಿನ ಹಬ್ಬ.
ಆಷಾಢ ಏಕಾದಶಿಯಂದು ಮಧ್ಯಾಹ್ನ 12ರಿಂದ ಸತತ 24 ತಾಸುಗಳ ಭಜನೆ ಇರುತ್ತದೆ. ಮಾರನೆಯ ದಿನ ಅಂದರೆ ದ್ವಾದಶಿಯಂದು ದೇವಾಲಯದ ಮುಂಭಾಗದಲ್ಲಿ ವಿಶಾಲವಾದ ಮೈದಾನದಲ್ಲಿ ನೀರು ಹಾಯಿಸಿ, ಮಣ್ಣು ಮೃದುಗೊಳಿಸಿ ಸಿದ್ಧಪಡಿಸಿರುತ್ತಾರೆ. ಚಿಕ್ಕ ಮಕ್ಕಳು, ಯುವಕರು, ಹಿರಿಯರು ದೇಹಕ್ಕೆ ಎಣ್ಣೆ ಹಚ್ಚಿಕೊಂಡು ದೇವಕಿ ಕೃಷ್ಣನ ದರ್ಶನ ಪಡೆದು ಜಯ ವಿಠ್ಠಲ ಹರಿ ವಿಠ್ಠಲ ಎಂದು ದೇವನಾಮ ಸ್ಮರಣೆ ಮಾಡುತ್ತ ಕೆಸರಿನ ಮೈದಾನಕ್ಕೆ ಇಳಿಯುತ್ತಾರೆ. ಒಬ್ಬರಿಗೊಬ್ಬರು ಕೆಸರೆರಚುತ್ತಾ, ನೂಕುತ್ತಾ, ಬೀಳಿಸುತ್ತಾ ಆಟದಲ್ಲಿ ಮೈಮರೆಯುತ್ತಾರೆ. ಸಾಮಾನ್ಯವಾಗಿ ಸಂಘದ ಶಾಖೆಗಳಲ್ಲಿ ಆಡುವ ದೇಸಿ ಆಟಗಳನ್ನು ಇಲ್ಲಿ ಆಡಲಾಗುತ್ತದೆ. ಕೊನೆಗೆ ಅರಳಿ ಮರಕ್ಕೆ ಕಟ್ಟಿರುವ ಮೊಸರಿನ ಕುಡಿಕೆ ಒಡೆಯುವಲ್ಲಿಗೆ ಆಟ ಮುಕ್ತಾಯವಾಗುತ್ತದೆ. ಇಲ್ಲಿನ ಅಪೂರ್ವ ದೃಶ್ಯಗಳನ್ನು ಸೆರೆ ಹಿಡಿಯಲು ಸಾಮಾಜಿಕ ಜಾಲತಾಣದ ಪ್ರಸಿದ್ಧ ಛಾಯಾಗ್ರಹಕರ ದಂಡೇ ನೆರೆದಿರುತ್ತದೆ. ಒಟ್ಟಾರೆ ಇಡಿ ಗ್ರಾಮವೇ ಕೆಸರಿನ ಆಟದ ಮೂಲಕ ಕೃಷ್ಣನ ಭಕ್ತಿಯಲ್ಲಿ ತಲ್ಲೀನವಾಗುತ್ತದೆ.
ಸುಮಾರು 400 ವರ್ಷಗಳ ಇತಿಹಾಸವಿರುವ ಸಂಪ್ರದಾಯವಾದರೂ ಪೋರ್ಚುಗೀಸರ ಹಿಂದೂ ದೇಗುಲಗಳ ಆಕ್ರಮಣ, ನಾಶದ ಕಾರಣದಿಂದ ಚೋರ್ಡ ದ್ವೀಪದಿಂದ ಮಾರ್ಸೆಲ್ ಗ್ರಾಮಕ್ಕೆ ಸ್ಥಳಾಂತರಗೊಂಡು, ಸದ್ಯ 150 ವರ್ಷಗಳಿಂದ ಇಲ್ಲಿ ಈ ಉತ್ಸವ ಜರುಗುತ್ತಿದೆ. ಕೇವಲ ಗ್ರಾಮಕ್ಕೆ ಸೀಮಿತವಾಗಿದ್ದ ಈ ಹಬ್ಬ ಇಂದು ಜಾಗತಿಕ ರೂಪವನ್ನು ಪಡೆದುಕೊಂಡಿದೆ. ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈ ಅಪರೂಪದ ಉತ್ಸವವನ್ನು ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಪರಿಚಯಿಸುವ ಉದ್ದೇಶದಿಂದ ವಿಶೇಷ ಮುಂದಾಳತ್ವ ವಹಿಸಿದೆ. ಸರ್ಕಾರದ ಅಬ್ಬರದ ಪ್ರಚಾರ, ಅತಿಯಾದ ವಿಸ್ತರಣೆ, ಜನಸಂದಣಿಯಿಂದ ಹಬ್ಬದ ಮೂಲ ಆಶಯ, ಸಾಂಸ್ಕೃತಿಕ ಮೌಲ್ಯಗಳು ಕಳೆದು ಹೋಗದಿರಲಿ ಎಂಬುದೇ ಗ್ರಾಮಸ್ಥರ ಆಶಯ.
-ಚಿನ್ಮಯ ಚನ್ನಗಿರಿ (ಗೋವಾ)
ಹವ್ಯಾಸಿ ಬರೆಹಗಾರ
8197414257
