ಏರುತಿಹುದು ಹಾರುತಿಹುದು
ನೋಡು ನಮ್ಮ ಬಾವುಟ
ತೋರುತಿಹುದು ಹೊಡೆದು ಹೊಡೆದು
ಬಾನಿನಗಲ ಪಟಪಟ
- ಕಯ್ಯಾರ ಕಿಞ್ಞಣ್ಣರೈ
ಅಂದಿನ ಬಾಲ್ಯದಲ್ಲಿ ಕವಿ ಕಯ್ಯಾರ ಕಿಞ್ಞಣ್ಣರೈ ರವರ ನಮ್ಮ ಬಾವುಟ ಪದ್ಯವನ್ನು ಓದದವರೇ ಇಲ್ಲ. ಹಾರುತಿಹುದು ಬಾವುಟವಷ್ಟೇ ಅಲ್ಲ, ದೇಶ ಪ್ರೇಮದ, ರಾಷ್ಟ್ರ ಗೌರವದ, ರಾಷ್ಟ್ರವನ್ನು ಪ್ರತಿನಿಧಿಸುವ ಸಾಂಕೇತಿಕ ರಾಷ್ಟ್ರಧ್ವಜ. ಕನ್ನಡ ಭಾಷೆಯಲ್ಲಿ ತ್ರಿವರ್ಣ ಧ್ವಜವೆಂದು, ಹಿಂದಿ ಭಾಷೆಯಲ್ಲಿ ತಿರಂಗಾ ಎಂದೂ ಹೆಮ್ಮೆಯಿಂದ ಹೇಳಲಾಗುವುದು. ಧ್ವಜದ ಕಲ್ಪನೆ ಸನಾತನ ಭಾರತದಲ್ಲಿ ಹೊಸದೇನಲ್ಲ. ಆದಿಕಾಲದ ಪುರಾಣ, ರಾಮಾಯಣ, ಮಹಾಭಾರತದ ನಂತರ ಆಳಿದ ವಿವಿಧ ಪ್ರಾಂತ್ಯಗಳ, ಧರ್ಮದ ರಾಜರುಗಳೂ ಸಹ ತಮ್ಮದೇ ಆದ ವೈಶಿಷ್ಟ್ಯ, ವೈವಿಧ್ಯಮಯ ಧ್ವಜಗಳನ್ನು ಬಳಕೆ ಮಾಡಿರುವುದು ಕಂಡುಬರುತ್ತದೆ. ವಿಶೇಷವಾಗಿ ಅವರ ರಥಗಳಲ್ಲಿ ಧ್ವಜಗಳು ಕಡ್ಡಾಯವಾಗಿ ಹಾರಿಸುತ್ತಿದ್ದುದನ್ನು ಕಾಣಬಹುದಾಗಿದೆ. ಪುರಾಣದಲ್ಲಿ ಬ್ರಹ್ಮ ದೇವರದು ಹಂಸ ಧ್ವಜವಾದರೆ, ಮಹಾವಿಷ್ಣುವಿನದು ಗರುಡ ಧ್ವಜ, ಈಶ್ವರನದು ವೃಷಕೇತನ ಧ್ವಜ ಎಂದು ತಿಳಿದು ಬರುತ್ತದೆ.
ತ್ರೇತಾಯುಗದಲ್ಲಿ ದಶರಥ ಮಹಾರಾಜರು ಅಗ್ನಿ ಪ್ರತೀಕವಾದ ಖಾವಿ ಬಣ್ಣದ ಧ್ವಜದಲ್ಲಿ ಸೂರ್ಯೋದಯದ ಲಾಂಛನವನ್ನು ಬಳಸುತ್ತಿದ್ದರು. ದ್ವಾಪರ ಯುಗದ ಆಳ್ವಿಕೆ ಕಾಲದಲ್ಲಿ ಪಿತಾಮಹ ಭೀಷ್ಮರು ಐದು ನಕ್ಷತ್ರಗಳ ತಾಳಧ್ವಜವನ್ನು, ದ್ರೋಣರು ಕಮಂಡಲು ಚಿತ್ರವನ್ನು ಹೊಂದಿದ ಖಾವಿಧ್ವಜವನ್ನು, ಕೃಪಾಚಾರ್ಯರು ನೀಲಧ್ವಜವನ್ನು, ಅಶ್ವತ್ಥಾಮನು ಸಿಂಹಧ್ವಜವನ್ನು, ಶ್ರೀ ಕೃಷ್ಣನು ಗರುಡಧ್ವಜವನ್ನು, ದುರ್ಯೋಧನನು ಉರಗಪತಾಕವನ್ನು, ಅರ್ಜುನನು ಹನುಮಂತನ ಚಿತ್ರವುಳ್ಳ ಧ್ವಜವನ್ನು ತಮ್ಮಗಳ ಧ್ವಜವನ್ನಾಗಿ ಬಳಸುತ್ತಿದ್ದರು ಎಂಬುದು ಉಲ್ಲೇಖವಾಗಿದೆ.
ಭಾರತ ದೇಶದ ಇತ್ತೀಚೆಗಿನ ಇತಿಹಾಸವನ್ನು ಗಮನಿಸಿದಾಗ ಈಸ್ಟ್ ಇಂಡಿಯಾ ಕಂಪನಿಯಿಂದ ಹಿಡಿದು ಬ್ರಿಟಿಷರವರೆಗೂ ಯಾವುದಾದರೊಂದು ರೀತಿಯ ಧ್ವಜ ಬಳಕೆಯ ಪ್ರಾಮುಖ್ಯತೆಯನ್ನು ಕಾಣಬಹುದು. ದೇಶದಲ್ಲಿನ ಸಂಪೂರ್ಣ ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಹ ಹೋರಾಟಗಾರರಲ್ಲಿ ಹುಮ್ಮಸ್ಸು ನೀಡುವ ವಿವಿಧ ರೀತಿಯ ಧ್ವಜಗಳು ಕಾಲಕಾಲಕ್ಕೆ ರೂಪುಗೊಂಡವು. ಮಹಾತ್ಮ ಗಾಂಧೀಜಿರವರು 1921 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಂಡರು. ಅಂದಿನಿಂದ ಸ್ವಾತಂತ್ರ್ಯ ಹೋರಾಟಕ್ಕೆ ಪೂರಕವಾಗಿ ಧ್ವಜದ ಸ್ವರೂಪವು ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಚರ್ಚೆಯಾಗುತ್ತಿದ್ದುದು ಗಮನಾರ್ಹ. ಹಲವಾರು ಬಾರಿ ಧ್ವಜದ ವಿನ್ಯಾಸವು ಬದಲಾಗುತ್ತಾ ನಿರ್ದಿಷ್ಟ ರಾಷ್ಟ್ರಧ್ವಜದ ಬಗ್ಗೆ ಚರ್ಚೆಯಾಗಿ 1947 ರ ಹೊತ್ತಿಗೆ ಅಂತಿಮವಾಗಿ ರೂಪುಗೊಂಡಿತು. ಆಂಧ್ರ ಪ್ರದೇಶದ ಸ್ವಾತಂತ್ರ್ಯ ಹೋರಾಟಗಾರರಾದ ಪಿಂಗಳಿ ವೆಂಕಯ್ಯ ಎಂಬುವವರು ಹಲವಾರು ಬಾರಿ ವಿವಿಧ ವಿನ್ಯಾಸದ ಧ್ವಜದ ಮಾದರಿಗಳನ್ನು ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮಂಡಿಸುತ್ತಿದ್ದರು. ಕೇಸರಿ, ಬಿಳಿ, ಹಸಿರು ಬಣ್ಣಗಳ ಮಧ್ಯದಲ್ಲಿ ಚರಕ ಚಿಹ್ನೆ ಇರುವ ತ್ರಿವರ್ಣ ಧ್ವಜವನ್ನು 1931ರ ಅಧಿವೇಶನದಲ್ಲಿ ಅಂಗೀಕರಿಸಿ ಇದು ಸ್ವರಾಜ್ ಧ್ವಜ ಎಂದು ಘೋಷಿಸಿ ಆರೋಹಣ ಮಾಡಲಾಯಿತು. ನಂತರದಲ್ಲಿ ಧ್ವಜವು ಸ್ವಾತಂತ್ರ್ಯ ಚಳವಳಿಯ ಪ್ರಮುಖ ಸಂಕೇತವಾಯಿತು. ಇದೇ ಸಮಯದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನೇತೃತ್ವದಲ್ಲಿನ ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಹ ಕೇಸರಿ, ಬಿಳಿ ಬಣ್ಣದ ಅಜಾದ್ ಹಿಂದ್ ಘೋಷಣೆಯೊಂದಿಗೆ ಹುಲಿಯ ಚಿತ್ರವಿರುವ ಧ್ವಜವೂ ಬಳಕೆಯಾಗುತ್ತಿತ್ತು.
1947ರ ಹೊತ್ತಿಗೆ ದೇಶವು ಸ್ವಾತಂತ್ರ್ಯ ಪಡೆಯುವುದು ನಿಶ್ಚಿತವಾಗುತ್ತಿದ್ದಂತೆಯೇ ಬಹುಪಾಲು ಜನರು ಗೌರವಿಸುತ್ತಿದ್ದ ಧ್ವಜವು ಕಾಂಗ್ರೆಸ್ ಧ್ವಜವೆಂದು ಸ್ವತಂತ್ರ ರಾಷ್ಟ್ರಕ್ಕೆ ಧ್ವಜದಲ್ಲಿ ಸೂಕ್ತ ಬದಲಾವಣೆಯ ಅವಶ್ಯಕತೆ ಇದ್ದು ಎಲ್ಲಾ ಪಕ್ಷಗಳೂ ಹಾಗೂ ಸಮುದಾಯವೂ ಒಪ್ಪಿಕೊಳ್ಳುವಂತೆ ಇರಬೇಕೆಂದು ಎಲ್ಲೆಡೆ ಒತ್ತಾಯ ಕೇಳಿಬಂತು. ಹಾಗಾಗಿ ನೂತನ ಧ್ವಜವನ್ನು ರೂಪಿಸಲು ಡಾ.ಬಾಬು ರಾಜೇಂದ್ರ ಪ್ರಸಾದ್ರವರ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್, ಅಬ್ದುಲ್ ಕಲಾಂ ಅಜಾದ್, ಸರೋಜಿನಿ ನಾಯ್ಡು, ಚಕ್ರವರ್ತಿ ಸಿ. ರಾಜಗೋಪಾಲಾಚಾರಿ, ಮತ್ತು ಕೆ.ಎಂ. ಮುನ್ಷಿ ಅವರುಗಳನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಲಾಯಿತು. ಆ ವೇಳೆಗೆ ಪಿಂಗಳಿ ವೆಂಕಯ್ಯರವರು ಪರಿಷ್ಕರಿಸಿದ ಸತ್ಯ, ಶಾಂತಿ ಹಾಗೂ ತ್ಯಾಗದ ಸಂಕೇತವಾದ ಕೇಸರಿ, ಬಿಳಿ, ಹಸಿರು ಬಣ್ಣದ, ಹಾಗೂ ಬಿಳಿ ಬಣ್ಣದ ಮಧ್ಯಭಾಗದಲ್ಲಿ ನೀಲಿ ಬಣ್ಣದಲ್ಲಿನ 24 ಸಮಾನಾಂತರ ಅರಗಳಿರುವ ಅಶೋಕ ಚಕ್ರವನ್ನು ಹೊಂದಿರುವ ಭಾರತ ದೇಶದ ರಾಷ್ಟ್ರಧ್ವಜವನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು. ಈ ನೂತನ ರಾಷ್ಟ್ರಧ್ವಜವನ್ನು ಭಾರತ ದೇಶವು ಬ್ರಿಟಿಷರ ಆಡಳಿತದಿಂದ ಮುಕ್ತಿಯನ್ನು ಪಡೆದ ಆಗಸ್ಟ್ 15, 1947ರ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪುಕೋಟೆಯ ಮೇಲೆ ಪ್ರಥಮವಾಗಿ ಅಂದಿನ ಪ್ರಧಾನಿಗಳಾಗಿದ್ದ ಪಂಡಿತ್ ಜವಾಹರಲಾಲ್ ನೆಹರುರವರು ಧ್ವಜಾರೋಹಣ ಮಾಡಿದರು. ಹಾಗೆಯೇ ನಮ್ಮ ರಾಷ್ಟ್ರಧ್ವಜವನ್ನು ವಿಶ್ವಸಂಸ್ಥೆಯ ಕಛೇರಿಯಲ್ಲೂ ಆರೋಹಣ ಮಾಡುವ ಮೂಲಕ ಸ್ವತಂತ್ರ ಭಾರತ ದೇಶಕ್ಕೆ ಗೌರವ ಸಲ್ಲಿಸಲಾಯಿತು.
ರಾಷ್ಟ್ರಧ್ವಜದ ವಿನ್ಯಾಸಕರಾದ ಪಿಂಗಳಿ ವೆಂಕಯ್ಯರವರು ದಿನಾಂಕ 02-08-1876ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲ್ಲೂಕಿನ ಭಟ್ಲಪೆನ್ನುಮಾರು ಗ್ರಾಮದಲ್ಲಿನ ಹನುಮಂತರಾಯಡು ಮತ್ತು ವೆಂಕಟರತ್ನಮ್ಮ ದಂಪತಿಗಳಿಗೆ ಜನಿಸಿದರು. ಮುಂದೆ ತಮ್ಮ ಕುಟುಂಬದ ಮೂಲ ಕೃಷಿಯನ್ನು ಪಿಂಗಳಿಯವರು ಮುಂದುವರೆಸಿ ಉತ್ತಮ ಹತ್ತಿ ಬೆಳೆಗಾರರಾಗಿ ಹತ್ತಿ ಬೆಳೆಯುವಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಮಾಡಿ ಆ ಭಾಗದ ಜನಪ್ರಿಯ ರೈತರಾಗಿದ್ದರು. ಸ್ವಲ್ಪ ಕಾಲ ರೈಲ್ವೆ ಸಿಬ್ಬಂದಿಯಾಗಿಯೂ ಸೇವೆ ಸಲ್ಲಿಸಿದ ಇವರು ಮಹಾತ್ಮ ಗಾಂಧೀಜಿಯವರ ಆದರ್ಶಗಳಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹಾಗೆಯೇ ಮಚಲೀಪಟ್ಟಣದಲ್ಲಿ ಸಾರ್ವಜನಿಕ ಶಿಕ್ಷಣ ಸಂಸ್ಥೆಯನ್ನು ತೆರೆದು ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರು. ನಂತರ ವಯೋಧರ್ಮದ ನಿಮಿತ್ತ ಜುಲೈ 4, 1963ರಲ್ಲಿ ವಿಜಯವಾಡದಲ್ಲಿ ನಿಧನರಾದರು. ಶ್ರೀಯುತರ ಸ್ಮರಣಾರ್ಥವಾಗಿ 2009ರಲ್ಲಿ ಕೇಂದ್ರ ಸರ್ಕಾರವು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಗೌರವವನ್ನು ಇವರಿಗೆ ಸಮರ್ಪಿಸಿರುವುದು ಸಂತಸದ ವಿಷಯ. ಆದರೂ, ಕೇಂದ್ರ ಸರ್ಕಾರವು ಇವರ ಕೊಡುಗೆಯನ್ನು ಗಮನಿಸಿ ರಾಷ್ಟ್ರದ ಉನ್ನತ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಬೇಕಾಗಿದೆ.
ಕೇಂದ್ರ ಸರ್ಕಾರವು ರಾಷ್ಟ್ರಗೌರವ ಸಂರಕ್ಷಣಾ ಕಾಯ್ದೆ-1971, ರಾಷ್ಟ್ರಧ್ವಜ ಸಂಹಿತೆ-2002 ಕಾಯಿದೆಯನ್ನು ರೂಪಿಸಿದ್ದು ಅದರಲ್ಲಿ ಮೂರು ಪ್ರತ್ಯೇಕ ಭಾಗಗಳಲ್ಲಿ ರಾಷ್ಟ್ರಧ್ವಜ ಬಳಸುವ ಸಂಬಂಧ ಸೂಕ್ತ ನಿರ್ದೇಶನ ನೀಡಿದೆ. ರಾಷ್ಟ್ರಧ್ವಜವನ್ನು ಚರಕದಿಂದಾಗಲೀ, ನೂಲಿನಿಂದಾಗಲೀ, ಉಣ್ಣೆ, ರೇಷ್ಮೆ ಆಥವಾ ಖಾದಿ ಬಟ್ಟೆಯಿಂದಾಗಲೀ ತಯಾರಿಸಿದ ಧ್ವಜವನ್ನು ಬಳಸಬೇಕು. ರಾಷ್ಟ್ರೀಯ ದಿನಗಳಾದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿನ ಕೆಂಪುಕೋಟೆಯ ಮೇಲೆ ವಿಶೇಷವಾಗಿ ಧ್ವಜಾರೋಹಣ ಮಾಡಲಾಗುವುದು. ಅದೇ ರೀತಿ ಶಿಕ್ಷಣ ಸಂಸ್ಥೆಗಳಲ್ಲೂ ಧ್ವಜಾರೋಹಣ ಮಾಡಿ ಮಕ್ಕಳಲ್ಲಿ ರಾಷ್ಟçಭಕ್ತಿಯನ್ನು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಅಂತಹ ಸಂದರ್ಭದಲ್ಲಿ ಮಾತ್ರ ಹೂವಿನಿಂದ ಮಡಿಸಿದ ಧ್ವಜವನ್ನು ಆರೋಹಣ ಮಾಡಲಾಗುವುದು. ಅಲ್ಲದೇ ಪ್ರತಿನಿತ್ಯ ರಾಷ್ಟ್ರಪತಿ ಭವನ, ಸಂಸತ್ ಭವನ, ಸರ್ವೋಚ್ಚ ನ್ಯಾಯಾಲಯ, ರಾಜಭವನ, ವಿಧಾನಸೌಧ, ಉಚ್ಛನ್ಯಾಯಾಲಯ, ಕೇಂದ್ರ ಮತ್ತು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಯಾವುದೇ ಹವಾಮಾನವಿದ್ದರೂ ಸರಿ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಧ್ವಜಕ್ಕೆ ಯಾವುದೇ ಅಗೌರವವಾಗದಂತೆ ಹಾರಿಸಬೇಕೆಂಬುದು ನಿಯಮ. ಹಾಗೆಯೇ ರಾಷ್ಟ್ರಧ್ವವನ್ನು ಹಾರಿಸುವಾಗ ರಾಷ್ಟ್ರಕವಿ ರವೀಂದ್ರನಾಥ ಠಾಕೂರ್ ವಿರಚಿತ 52 ಸೆಕೆಂಡುಗಳಲ್ಲಿ ಹಾಡಬಹುದಾದ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡುವುದು ಪದ್ಧತಿಯಾಗಿದೆ. ರಾಷ್ಟ್ರೀಯ ಹಬ್ಬಗಳು, ರಾಷ್ಟ್ರೀಯ ಕ್ರೀಡೋತ್ಸವ ಮತ್ತು ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಾಗದದಿಂದ ತಯಾರಿಸಿದ ಕೈಯಲ್ಲಿ ಹಿಡಿಯಬಹುದಾದ ರಾಷ್ಟ್ರಧ್ವಜವನ್ನು ಅಗೌರವವಾಗದಂತೆ ಬಳಸಬಹುದಾಗಿದ್ದು, ಪ್ಲಾಸ್ಟಿಕ್ನಿಂದ ತಯಾರಿಸಿದ ರಾಷ್ಟ್ರಧ್ವಜವನ್ನು ಬಳಸುವುದು ನಿಷೇಧಿಸಲಾಗಿದೆ.
ರಾಷ್ಟ್ರಧ್ವಜದ ಬಳಕೆಗಾಗಿ ವಿವಿಧ ಒಂಭತ್ತು ಅಳತೆಯ ನಮೂನೆಯನ್ನು ಸಂಹಿತೆಯಲ್ಲಿ ತಿಳಿಸಲಾಗಿದೆ. ರಾಷ್ಟ್ರದ ಗಣ್ಯಾತಿಗಣ್ಯರು ಬಳಸುವ ವಾಹನಗಳ ಬ್ಯಾನೆಟ್ ಮುಂಭಾಗದಲ್ಲಿ ಸ್ಥಿರವಾಗಿರುವಂತೆ ಧ್ವಜವನ್ನು ಬಳಸಬಹುದಾಗಿದೆ. ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್ಗಳ ಅಧಿಕೃತ ನಿವಾಸಗಳ ಮೇಲೆಯೂ ರಾಷ್ಟ್ರಧ್ವಜವನ್ನು ಪ್ರತಿನಿತ್ಯ ಹಾರಿಸಲಾಗುವುದು. ಹಾಗೂ ಗಣ್ಯಾತಿಗಣ್ಯರುಗಳು ಪ್ರವಾಸ ಕೈಗೊಂಡ ಪರಸ್ಥಳಗಳಲ್ಲಿ ತಂಗುವ ಕಟ್ಟಡದ ಮೇಲೆಯೂ ಸಹ ಅವರುಗಳು ತಂಗುವ ಅವಧಿಯ ದಿನಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗುವುದು. ರಾಷ್ಟ್ರಧ್ವಜವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದನ್ನು ನಿಷೇಧಿಸಲಾಗಿದ್ದು, ರಾಷ್ಟ್ರಧ್ವಜವನ್ನು ದುರ್ಬಳಕೆ ಮಾಡುವುದು, ಸುಡುವುದು, ವಿರೂಪಗೊಳಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ರಾಷ್ಟ್ರಧ್ವಜವು ಬಳಕೆಯ ನಂತರ ಕಾಲಕ್ರಮೇಣ ಸಹಜವಾಗಿ ಹರಿದಿದ್ದು ಅಥವಾ ವಿರೂಪಗೊಂಡಿದ್ದರೆ ಅಂತಹ ಧ್ವಜವನ್ನು ಗೌರವಯುತವಾಗಿ ನಾಶಪಡಿಸಲು ನಿಯಮದಲ್ಲಿ ಸೂಚಿಸಲಾಗಿದೆ. ರಾಷ್ಟçದ ಗಣ್ಯಾತಿಗಣ್ಯರು, ವೀರ ಮರಣವನ್ನು ಹೊಂದಿದ ಯೋಧರ ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜವನ್ನು ಹೊದಿಸುವ ಮೂಲಕ ಸರಕಾರವು ಅಂತಹ ಮೃತಪಟ್ಟ ಗಣ್ಯರು ಮತ್ತು ಯೋಧರಿಗೆ ಅಂತಿಮವಾಗಿ ರಾಷ್ಟ್ರಗೌರವವನ್ನು ನೀಡಲಾಗುವುದು. ಹಾಗೂ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಿ ಸಂತಾಪ ಸೂಚಿಸುವ ಸಂಪ್ರದಾಯವೂ ಇದೆ. ರಾಷ್ಟ್ರದ ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ರಾಷ್ಟ್ರಧ್ವಜ ಹಾಗೂ ರಕ್ಷಣಾ ಇಲಾಖೆಯ ಧ್ವಜ ಬಳಕೆಗೆ ಪ್ರತ್ಯೇಕ ಧ್ವಜ ನಿಯಮಾವಳಿಗಳನ್ನು ರೂಪಿಸಲಾಗಿದೆ. ದೇಶದ ರಕ್ಷಣಾ ಮತ್ತು ಪೊಲೀಸ್ ಇಲಾಖೆಯಲ್ಲಿಯೂ ಸಹ ವಿಶೇಷ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ನ್ಯಾಷನಲ್ ಸೆಲ್ಯೂಟ್ ಮುಖಾಂತರ ಗೌರವವನ್ನು ಸಲ್ಲಿಸಲಾಗುತ್ತದೆ.
ಇಂದಿನ ವಿದ್ಯಾಭ್ಯಾಸದ ಶಾಲಾ ಪಠ್ಯಪುಸ್ತಕಗಳಲ್ಲಿ ದೇಶ ಪ್ರೇಮವನ್ನು ಹೆಚ್ಚಿಸುವಂತಹ ಅಗತ್ಯ ಮಾಹಿತಿಗಳನ್ನು ಪಾಠಪ್ರವಚನಗಳ ಮೂಲಕ ಯುವಪೀಳಿಗೆಗೆ ತಿಳಿಸಬೇಕಾಗಿದೆ. ರಾಷ್ಟ್ರಧ್ವಜದ ಬಗ್ಗೆ ಕನ್ನಡದಲ್ಲಿ ಬಂದ ಪುಸ್ತಕಗಳು ತೀರಾ ವಿರಳ. ಲೇಖಕರಾದ ಡಾ. ವಿ. ರಂಗನಾಥ್ ರವರು ರಾಷ್ಟ್ರಧ್ವಜದ ಮಾಹಿತಿಗಳನ್ನು ಒಳಗೊಂಡ ಪುಸ್ತಕವನ್ನು ಹೊರತಂದಿರುವುದು ಹೆಮ್ಮೆಯ ವಿಷಯ.
ನಂ. ಶ್ರೀಕಂಠ ಕುಮಾರ್
ಮೈಸೂರು
ಮೊ: 9481067333
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
