ಬೆಂಗಳೂರು: ಹಳೆ ಬೈಯಪ್ಪನಹಳ್ಳಿಯ ಗಜೇಂದ್ರನಗರ ಸೇವಾವಸತಿ (ಸ್ಲಂ)ಯಲ್ಲಿ ರಾಷ್ಟ್ರೋತ್ಥಾನ ಟ್ರಸ್ಟ್ ವತಿಯಿಂದ ಮಹಿಳೆಯರ ಸ್ವಾವಲಂಬನೆ ಹಾಗೂ ಕೌಶಲ್ಯಾಭಿವೃದ್ಧಿ ಉದ್ದೇಶದಿಂದ ಉಚಿತವಾಗಿ ಆಯೋಜಿಸಲಾಗಿದ್ದ ಬ್ಯೂಟಿಷಿಯನ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಶಿಕ್ಷಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೋತ್ಥಾನ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾದ ಜೋಗೇಶ್ ರವರು ಮಹಿಳೆಯರು ತಮ್ಮಲ್ಲಿರುವ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಂಡು ಸ್ವಂತ ಉದ್ಯೋಗ ಆರಂಭಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ತರಬೇತಿ ಕೇಂದ್ರಗಳನ್ನು ಶುರುಮಾಡಲಾಗಿದೆ. ತರಬೇತಿಯ ಮೂಲಕ ಬ್ಯೂಟಿಷಿಯನ್ ಕ್ಷೇತ್ರದ ವಿವಿಧ ಕೌಶಲ್ಯಗಳನ್ನು ಕಲಿತ ಮಹಿಳೆಯರು ಮುಂದಿನ ದಿನಗಳಲ್ಲಿ ಸ್ವಂತವಾಗಿ ಉದ್ಯೋಗ ಆರಂಭಿಸಲು ಹಾಗೂ ಕುಟುಂಬದ ಆರ್ಥಿಕ ಸ್ಥಿತಿಗೆ ನೆರವಾಗಲು ಸಾಧ್ಯವಾಗಲಿದೆ.
“ರಾಷ್ಟ್ರೋತ್ಥಾನ ಪರಿಷತ್ತು ಕಳೆದ 60 ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಶಿಕ್ಷಣ, ಆರೋಗ್ಯ, ಸ್ವಾವಲಂಬನೆ, ಸಂಸ್ಕಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜದ ಅಗತ್ಯವಿರುವ ಜನರಿಗೆ ನೆರವಾಗುವ ಕಾರ್ಯಗಳನ್ನು ನಡೆಸುತ್ತಿದೆ. ಬೆಂಗಳೂರಿನ 200ಕ್ಕೂ ಹೆಚ್ಚು ಸೇವಾವಸತಿ (ಸ್ಲಂ)ಗಳಲ್ಲಿ ವಿವಿಧ ರೀತಿಯ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದರು.
ಮಹಿಳೆಯರು ಕೇವಲ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕೆ ಸೀಮಿತವಾಗದೆ, ತಮ್ಮಲ್ಲಿರುವ ಪ್ರತಿಭೆ ಮತ್ತು ಕೌಶಲ್ಯವನ್ನು ಗುರುತಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಕೌಶಲ್ಯ ತರಬೇತಿಗಳು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಸ್ವಂತ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುತ್ತವೆ. ತರಬೇತಿ ಪಡೆದ ಮಹಿಳೆಯರು ಮುಂದಿನ ದಿನಗಳಲ್ಲಿ ತಮ್ಮದೇ ಆದ ಉದ್ಯಮವನ್ನು ಆರಂಭಿಸಿ, ತಮ್ಮ ಸುತ್ತಮುತ್ತಲಿನ ಮತ್ತಷ್ಟು ಮಹಿಳೆಯರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಅವರು ತಿಳಿಸಿದರು.
ಸರ್ಕಾರವು ಮಹಿಳೆಯರಿಗಾಗಿ ಹಲವಾರು ಸ್ವಯಂ ಉದ್ಯೋಗ ಹಾಗೂ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಮಹಿಳೆಯರು ಇಂತಹ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು. ತರಬೇತಿ ಪಡೆದು ಕೇವಲ ಪ್ರಮಾಣ ಪತ್ರ ಪಡೆಯುವುದಕ್ಕೆ ಸೀಮಿತವಾಗದೆ, ಕಲಿತ ಕೌಶಲ್ಯವನ್ನು ಜೀವನದಲ್ಲಿ ಬಳಸಿಕೊಂಡು ಸ್ವಾವಲಂಬಿಗಳಾಗುವ ಗುರಿಯನ್ನು ಹೊಂದಬೇಕು” ಎಂದು ಜೋಗೇಶ್ ರವರು ತಿಳಿಸಿದರು.
ರಾಷ್ಟ್ರೋತ್ಥಾನ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾದ ನಾಗರಾಜ ಅವರು ಮಾತನಾಡಿ, “ಬೈಯಪ್ಪನಹಳ್ಳಿ ಸುತ್ತಮುತ್ತಲಿನ ಮಹಿಳೆಯರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಉಚಿತ ಹೊಲಿಗೆ ತರಬೇತಿ ಕೇಂದ್ರ, ಬ್ಯೂಟಿಷಿಯನ್ ತರಬೇತಿ ಕೇಂದ್ರ ಹಾಗೂ ಮೆಹಂದಿ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಮಹಿಳೆಯರು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ತರಬೇತಿ ಪಡೆದುಕೊಂಡು ಸ್ವಂತ ಉದ್ಯೋಗದ ಮೂಲಕ ಜೀವನದಲ್ಲಿ ಮುಂದೆ ಬರಬೇಕು” ಎಂದರು.
“ಸೇವಾವಸತಿಯಲ್ಲಿ ವಾಸಿಸುವ ಮಹಿಳೆಯರಿಗೆ ತಮ್ಮ ಮನೆಯ ಜವಾಬ್ದಾರಿಗಳ ಜೊತೆಗೆ ಆದಾಯದ ಮೂಲವನ್ನು ಸೃಷ್ಟಿಸಿಕೊಳ್ಳಲು ಇಂತಹ ತರಬೇತಿ ಕೇಂದ್ರಗಳು ಸಹಕಾರಿಯಾಗುತ್ತವೆ. ಇಲ್ಲಿ ಕಲಿಯುವ ಕೌಶಲ್ಯವನ್ನು ಬಳಸಿಕೊಂಡು ಮನೆಯಲ್ಲಿಯೇ ಸಣ್ಣ ಪ್ರಮಾಣದಲ್ಲಿ ಉದ್ಯೋಗ ಆರಂಭಿಸಬಹುದು. ಮುಂದೆ ಅದನ್ನು ದೊಡ್ಡ ಉದ್ಯಮವನ್ನಾಗಿ ಬೆಳೆಸಿಕೊಳ್ಳುವ ಅವಕಾಶವೂ ಇದೆ. ಆದ್ದರಿಂದ ಜಾತಿ, ಮತ ಹಾಗೂ ಯಾವುದೇ ರೀತಿಯ ಭೇದಭಾವವಿಲ್ಲದೆ ಈ ಭಾಗದ ಎಲ್ಲ ಮಹಿಳೆಯರು ತರಬೇತಿ ಕೇಂದ್ರಗಳ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಹೇಳಿದರು.
ಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಕುಟುಂಬದ ಆರ್ಥಿಕ ಸ್ಥಿತಿಯಲ್ಲಿಯೂ ಉತ್ತಮ ಬದಲಾವಣೆ ಕಂಡುಬರುತ್ತದೆ. ಜೊತೆಗೆ ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಕುಟುಂಬದ ಭವಿಷ್ಯದ ಬಗ್ಗೆ ಹೆಚ್ಚಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆಯ ಮನೋಭಾವ ಬೆಳೆಸುವ ಕಾರ್ಯಗಳು ಮಹತ್ವ ಪಡೆದುಕೊಳ್ಳುತ್ತವೆ ಎಂದರು ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯಕರ್ತರಾದ ಲಕ್ಷ್ಯಾ, ನಂದಿನಿ, ಲಾವಣ್ಯ ಮುಂತಾದವರು ಉಪಸ್ಥಿತಿರಿದ್ದರು, ಬ್ಯೂಟಿಷಿಯನ್ ಶಿಕ್ಷಕಿಯಾದ ಶರ್ಮಿಲ್ ನಿರೂಪಿಸಿದರು, ಗಜೇಂದ್ರನಗರದ ಮೇಲ್ವಿಚಾರಕಿಯಾದ ಶ್ರೀಮತಿ ಸೌಭಾಗ್ಯರವರು ಸ್ವಾಗತಿಸಿದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
