ಕುಂದಾಪುರ / ಬೆಂಗಳೂರು: ಖ್ಯಾತ ವೈದ್ಯರು ಹಾಗೂ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ನಾಡಿನಾದ್ಯಂತ ಗುರುತಿಸಿಕೊಂಡಿದ್ದ ಡಾ. ಎಸ್.ಎನ್. ಪಡಿಯಾರ್ (1942–2026) ಅವರ ಅಗಲಿಕೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಮುಂಬೈನ ಪ್ರಸಿದ್ಧ ಟಾಟಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ. ಪಡಿಯಾರ್ ಅವರು, ಬಳಿಕ ತಮ್ಮ ಜನ್ಮಭೂಮಿ ಕುಂದಾಪುರಕ್ಕೆ ಮರಳಿ ಸುಮಾರು ಐದು ದಶಕಗಳ ಹಿಂದೆಯೇ ‘ಪಡಿಯಾರ್ ನರ್ಸಿಂಗ್ ಹೋಂ’ ಪ್ರಾರಂಭಿಸಿದ್ದರು. ಆ ಮೂಲಕ ಗ್ರಾಮೀಣ ಭಾಗದ ಜನರಿಗೆ ಅತ್ಯುನ್ನತ ವೈದ್ಯಕೀಯ ಸೇವೆಯನ್ನು ತಲುಪಿಸಿದ ಹೆಗ್ಗಳಿಕೆ ಅವರದ್ದು. ವೈದ್ಯಕೀಯ ವೃತ್ತಿಯ ಜೊತೆಗೆ ಕುಂದಾಪುರದಲ್ಲಿ ‘ಭಾರತೀಯ ವೈದ್ಯರ ಸಂಘ’ದ (ಐಎಂಎ) ಘಟಕವನ್ನು ಸ್ಥಾಪಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲೂ ಅಪಾರ ಕೊಡುಗೆ ನೀಡಿದ್ದ ಅವರು, ‘ಸೇವಾ ಸಂಗಮ ಟ್ರಸ್ಟ್’ನ ಸ್ಥಾಪಕಾಧ್ಯಕ್ಷರಾಗಿ ಕುಂದಾಪುರ ಮತ್ತು ಬೈಂದೂರು ತಾಲೂಕುಗಳ 20ಕ್ಕೂ ಹೆಚ್ಚು ಕಡೆಗಳಲ್ಲಿ ಶಿಶುಮಂದಿರಗಳನ್ನು ಆರಂಭಿಸಿದ್ದರು. ಪರಿಸರ ಕಾಳಜಿ, ಕಡಲ್ಗೊರೆತ ತಡೆಗಟ್ಟುವ ಅಭಿಯಾನಗಳು, ಗ್ರಾಮೀಣಾಭಿವೃದ್ಧಿ, ಸ್ವದೇಶಿ ವಿಚಾರ, ಸಂಸ್ಕೃತಿ, ವೇದಗಣಿತ ಹಾಗೂ ಸಂಸ್ಕೃತ ಸಂಭಾಷಣಾ ಶಿಬಿರಗಳ ಮೂಲಕ ಕುಂದಾಪುರ ಭಾಗದಲ್ಲಿ ಅನೇಕ ಪ್ರಥಮ ಪ್ರಯೋಗಗಳಿಗೆ ದಾರಿದೀಪವಾಗಿದ್ದರು.
ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಕ್ಷೇತ್ರೀಯ ಸಂಘಚಾಲಕ ಡಾ. ಪಿ. ವಾಮನ್ ಶೆಣೈ ಅವರು, “ಡಾ. ಪಡಿಯಾರ್ ಅವರ ರಾಷ್ಟ್ರಚಿಂತನೆ, ಸೇವಾಕಾರ್ಯ, ಸಮಾಜಮುಖಿ ಚಟುವಟಿಕೆಗಳು ಹಾಗೂ ಜನಪರ ಕಾಳಜಿ ಮುಂದಿನ ಪೀಳಿಗೆಗೆ ಆದರ್ಶಪ್ರಾಯವಾಗಿವೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರು, ಅಭಿಮಾನಿಗಳು ಹಾಗೂ ಬಂಧುಮಿತ್ರರಿಗೆ ಪರಮಾತ್ಮ ನೀಡಲಿ ಮತ್ತು ಅಗಲಿದ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ” ಎಂದು ಜಂಟಿ ಪ್ರಕಟಣೆಯಲ್ಲಿ ಪ್ರಾರ್ಥಿಸಿದ್ದಾರೆ.
