ಪ್ರವೇಶ ತಡೆಯುವ ಕರೆ ತಿರಸ್ಕರಿಸಲು ಕೆನಡಾ ಸರಕಾರಕ್ಕೆ ಮನವಿ
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರ ಕೆನಡಾ ಭೇಟಿಯನ್ನು ಬೆಂಬಲಿಸಿ 100ಕ್ಕೂ ಹೆಚ್ಚು ಕೆನಡಾದ ಹಿಂದೂ ಹಾಗೂ ನಾಗರಿಕ ಹಕ್ಕುಗಳ ಸಂಘಟನೆಗಳು ಕೆನಡಾ ಸರ್ಕಾರಕ್ಕೆ ಜಂಟಿ ಪತ್ರ ಬರೆದಿವೆ. ರಾಜಕೀಯ ಒತ್ತಡಗಳಿಗೆ ಮಣಿಯದೆ, ಸೂಕ್ತ ಸಾಕ್ಷ್ಯಾಧಾರಗಳು ಮತ್ತು ಕಾನೂನು ಪ್ರಕ್ರಿಯೆಗಳ ಆಧಾರದ ಮೇಲೆ ಮಾತ್ರ ಅವರ ಪ್ರವೇಶದ ಕುರಿತು ನಿರ್ಧಾರ ತೆಗೆದುಕೊಳ್ಳಬೇಕೆಂದು ಈ ಸಂಘಟನೆಗಳು ಒಟ್ಟಾಗಿ ಆಗ್ರಹಿಸಿವೆ.
ಕೆನಡಾದ ಪ್ರಧಾನಮಂತ್ರಿ ಮಾರ್ಕ್ ಕಾರ್ನಿ, ಸಾರ್ವಜನಿಕ ಭದ್ರತಾ ಸಚಿವ ಗ್ಯಾರಿ ಆನಂದಸಂಗರಿ, ವಲಸೆ ಸಚಿವೆ ಲೇನಾ ಮೆಟ್ಲೆಜ್ ಡಿಯಾಬ್ ಮತ್ತು ವಿದೇಶಾಂಗ ಸಚಿವೆ ಅನಿತಾ ಆನಂದ್ ಅವರಿಗೆ ಈ ಪತ್ರವನ್ನು ಸಲ್ಲಿಸಲಾಗಿದೆ. ಎನ್ಡಿಪಿ (NDP) ಸಂಸದರಾದ ಜೆನ್ನಿ ಕ್ವಾನ್ ಮತ್ತು ಹೀಥರ್ ಮೆಕ್ಫರ್ಸನ್ ಸೇರಿದಂತೆ ಕೆಲವು ಸಂಘಟನೆಗಳು ಮೋಹನ್ ಭಾಗವತ್ ಅವರ ಕೆನಡಾ ಪ್ರವೇಶವನ್ನು ತಡೆಯಬೇಕು ಮತ್ತು ಅವರನ್ನು ಅನರ್ಹರೆಂದು ಘೋಷಿಸಬೇಕೆಂದು ಕೆನಡಾ ಸರ್ಕಾರವನ್ನು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಂಬಲ ವ್ಯಕ್ತವಾಗಿದೆ.
ಮೋಹನ್ ಭಾಗವತ್ ಅವರ ಪ್ರಸ್ತಾವಿತ ಕೆನಡಾ ಭೇಟಿಯು ಕೆನಡಾದಲ್ಲಿರುವ 10 ಲಕ್ಷಕ್ಕೂ ಹೆಚ್ಚು ಹಿಂದೂ ಸಮುದಾಯದ ಜನರಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಸಂಘಟನೆಗಳು ತಿಳಿಸಿವೆ. ಆರ್ಎಸ್ಎಸ್ ಸಂಘಟನೆಯು ಸಮುದಾಯ ಸೇವೆ, ಸಾಮಾಜಿಕ ಉಪಕ್ರಮಗಳು, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸಾರ್ವಜನಿಕ ಚರ್ಚೆಗಳಲ್ಲಿ ತೊಡಗಿಸಿಕೊಂಡಿರುವ ಭಾರತದ ಪ್ರಮುಖ ಸಂಸ್ಥೆಯಾಗಿದೆ ಎಂದು ಪತ್ರದಲ್ಲಿ ಬಣ್ಣಿಸಲಾಗಿದೆ. ಭಾಗವತ್ ಅವರ ವಿರುದ್ಧ ದ್ವೇಷ ಭಾಷಣ, ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ಅಥವಾ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಆರೋಪಗಳಿಗೆ ಯಾವುದೇ ಸ್ಪಷ್ಟ, ನಿಖರ ಮತ್ತು ಸ್ವತಂತ್ರವಾಗಿ ಪರಿಶೀಲಿಸಬಹುದಾದ ಸಾಕ್ಷ್ಯಾಧಾರಗಳಿಲ್ಲದೆ ಅವುಗಳನ್ನು ನಿಜವೆಂದು ಪರಿಗಣಿಸಬಾರದು ಎಂದು ಒತ್ತಾಯಿಸಲಾಗಿದೆ.
ಸಾರ್ವಜನಿಕ ಭದ್ರತೆ ಹಾಗೂ ಕಾನೂನು ಪ್ರಕ್ರಿಯೆ:
ಭಾಗವತ್ ಅವರ ಉಪಸ್ಥಿತಿಯಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತದೆ ಅಥವಾ ಭದ್ರತೆಗೆ ಬೆದರಿಕೆ ಎದುರಾಗುತ್ತದೆ ಎಂಬ ಆರೋಪವನ್ನು ಸಂಘಟನೆಗಳು ಸಂಪೂರ್ಣವಾಗಿ ತಳ್ಳಿಹಾಕಿವೆ. ಕೆನಡಾದ ವಲಸೆ ಮತ್ತು ಭದ್ರತಾ ನಿರ್ಧಾರಗಳು ಊಹಾಪೋಹಗಳು ಮತ್ತು ರಾಜಕೀಯ ಭಾಷಣಗಳ ಮೇಲಲ್ಲದೆ, ಕಾನೂನು ಮತ್ತು ಸಾಕ್ಷ್ಯಾಧಾರಗಳ ಮೇಲೆಯೇ ಆಧಾರಿತವಾಗಿರಬೇಕು ಎಂದು ಹೇಳಲಾಗಿದೆ.
ಸಮಾನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯ:
ಯಾವುದೇ ಆಧಾರವಿಲ್ಲದೆ ಭಾಗವತ್ ಅವರನ್ನು ತಡೆಯುವುದು ಕೆನಡಾದಲ್ಲಿರುವ ಹಿಂದೂ ಸಮುದಾಯ ಮತ್ತು ಅವರ ಸಂಸ್ಥೆಗಳನ್ನು ಭಿನ್ನವಾಗಿ ನೋಡಲಾಗುತ್ತಿದೆ ಎಂಬ ಭಾವನೆಯನ್ನು ಮೂಡಿಸಬಹುದು. ಕೆನಡಾದ ಬಹುಸಂಸ್ಕೃತಿ, ಧಾರ್ಮಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಾನೂನಿನ ಮುಂದೆ ಸಮಾನತೆಯ ತತ್ವಗಳಿಗೆ ಸರ್ಕಾರ ಬದ್ಧವಾಗಿರಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಿರೋಧ ಮತ್ತು ಪ್ರತಿಭಟನೆಗೆ ಬೆಂಬಲ:
ರಾಜಕೀಯ ಭಿನ್ನಾಭಿಪ್ರಾಯಗಳು ಮತ್ತು ಶಾಂತಿಯುತ ಪ್ರತಿಭಟನೆಗಳು ಕಾನೂನುಬದ್ಧವಾಗಿವೆ ಎಂಬುದನ್ನು ಸಂಘಟನೆಗಳು ಒಪ್ಪಿಕೊಂಡಿವೆ. ಆದರೆ, ಸಾಬೀತಾಗದ ಆರೋಪಗಳ ಆಧಾರದ ಮೇಲೆ ಪ್ರಮುಖ ನಾಯಕರೊಬ್ಬರ ಪ್ರವೇಶವನ್ನು ನಿರ್ಬಂಧಿಸುವುದು ನ್ಯಾಯಸಮ್ಮತವಲ್ಲ. ಇಂತಹ ಪ್ರಚಾರಗಳು ಕೆನಡಾದ ಹಿಂದೂಗಳ ಮನಸ್ಸಿನಲ್ಲಿ ‘ಹಿಂದೂಫೋಬಿಯಾ’ ಅಥವಾ ಹಿಂದೂ ವಿರೋಧಿ ಭಾವನೆಯ ಅನುಮಾನ ಮೂಡಿಸಬಹುದು ಎಂದು ಎಚ್ಚರಿಸಲಾಗಿದೆ.
ಬೆಂಬಲ ನೀಡಿದ ಪ್ರಮುಖ ಸಂಸ್ಥೆಗಳು:
ಕೆನಡಾ ಇಂಡಿಯಾ ಫೌಂಡೇಶನ್, ಕೆನಡಾ ಇಂಡಿಯಾ ಗ್ಲೋಬಲ್ ಫೋರಮ್, ಕೆನಡಿಯನ್ ಆರ್ಯ ಸಮಾಜ, ಬ್ರಾಂಪ್ಟನ್ ಹಿಂದೂ ಸೊಸೈಟಿ, ಹಿಂದೂ ಸೊಸೈಟಿ ಆಫ್ ಕೆನಡಾ, ಹಿಂದೂ ಮಿಷನ್ ಆಫ್ ಕೆನಡಾ, ಹಿಂದೂ ಸಭಾ ದೇವಸ್ಥಾನ, ಹಿಂದೂ ಸ್ವಯಂಸೇವಕ ಸಂಘ (HSS), ವಿಎಚ್ಪಿ ಕೆನಡಾ ಸೇರಿದಂತೆ 100ಕ್ಕೂ ಹೆಚ್ಚು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮುದಾಯ ಸಂಸ್ಥೆಗಳು ಈ ಪತ್ರಕ್ಕೆ ಸಹಿ ಹಾಕಿವೆ.
ಕೆನಡಾ ಸರ್ಕಾರವು ಭಾಗವತ್ ಅವರ ಭೇಟಿಯ ಕುರಿತು ನಿರ್ಧಾರ ಕೈಗೊಳ್ಳುವಾಗ “ವಿಭಜನೆಯ ಬದಲು ಸಂವಾದ, ಆರೋಪಗಳ ಬದಲು ಸಾಕ್ಷ್ಯಾಧಾರ ಹಾಗೂ ರಾಜಕೀಯ ಒತ್ತಡದ ಬದಲು ಕಾನೂನು ಪ್ರಕ್ರಿಯೆಗೆ” ಆದ್ಯತೆ ನೀಡಬೇಕೆಂದು ಸಂಘಟನೆಗಳು ಮನವಿ ಮಾಡಿಕೊಂಡಿವೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
