- ಚಿನ್ಮಯ ಪಾಂಡೆ
ಭಾರತದಾದ್ಯಂತ ಅನಾದಿ ಕಾಲದಿಂದಲೂ ನಡೆದುಬಂದಿರುವ ಆಚಾರ-ವಿಚಾರಗಳು, ಮಾನವ ಜೀವನವು ನಿಸರ್ಗ ಮತ್ತು ಇತರ ಜೀವಿಗಳಿಂದ ಬೇರ್ಪಡಿಸಲಾಗದಂತಹುದು ಎಂಬ ಶ್ರೇಷ್ಠ ನಂಬಿಕೆಯನ್ನು ಸಾರುತ್ತವೆ. ಪಕ್ಷಿ, ಪ್ರಾಣಿ ಮತ್ತು ಜಲಚರಗಳಿಗೆ ಆಹಾರ ನೀಡುವುದು ಹಾಗೂ ದನಕರು-ಆನೆಗಳನ್ನು ದೇವರಂತೆ ಪೂಜಿಸುವ ಹಬ್ಬಗಳು ನಮ್ಮ ದೈನಂದಿನ ಜೀವನದಲ್ಲಿ ಕರುಣೆ, ಕೃತಜ್ಞತೆ ಮತ್ತು ಪ್ರಕೃತಿಯ ಮೇಲಿನ ಗೌರವವನ್ನು ಮೂಡಿಸುತ್ತವೆ.
ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ದೈನಂದಿನ ಬದುಕು, ಧಾರ್ಮಿಕ ಆಚರಣೆಗಳು ಮತ್ತು ಹಬ್ಬಗಳು ಪ್ರಾಣಿ, ಕೃಷಿ, ಜಲಮೂಲಗಳು ಹಾಗೂ ಪ್ರಕೃತಿಯೊಂದಿಗೆ ನಿಕಟವಾಗಿ ಬೆಸೆದುಕೊಂಡಿವೆ. ಅಂಗಳದ ಇರುವೆ-ಹಕ್ಕಿಗಳಿಗೆ ಅಕ್ಕಿಹಿಟ್ಟಿನ ರಂಗೋಲಿ ಇಡುವುದರಿಂದ ಹಿಡಿದು ದನಕರು, ನಾಯಿ, ಮೀನು ಮತ್ತು ಆನೆಗಳಿಗೆ ಅನ್ನದಾನ ಮಾಡುವವರೆಗೆ, ಪ್ರತಿಯೊಂದು ಆಚರಣೆಯೂ ಮೂಕಜೀವಿಗಳ ಮೇಲಿನ ಕಾಳಜಿಯನ್ನು ಎತ್ತಿಹಿಡಿಯುತ್ತದೆ.
ಅನೇಕ ಸಂಪ್ರದಾಯಗಳು ಭಕ್ತಿಯನ್ನು ಜೀವರಾಶಿಯ ಪೋಷಣೆಯೊಂದಿಗೆ ಸಂಯೋಜಿಸುತ್ತವೆ. ಮನೆಮುಂದೆ ಇಡುವ ಅಕ್ಕಿಹಿಟ್ಟಿನ ರಂಗೋಲಿಯು ಹಕ್ಕಿ ಮತ್ತು ಇರುವೆಗಳಿಗೆ ಆಹಾರವಾಗುತ್ತದೆ. ‘ಸರ್ವ ಪಿತೃ ಅಮಾವಾಸ್ಯೆ’ ಹಾಗೂ ‘ಘುಘುತಿಯಾ’ ದಿನಗಳಂದು ಕಾಗೆಗಳಿಗೆ ಆಹಾರ ನೀಡಿ ಹಿರಿಯರನ್ನು ಸ್ಮರಿಸಲಾಗುತ್ತದೆ. ಅಂತೆಯೇ ‘ಮತ್ಸ್ಯ ಜಯಂತಿ’ಯಂದು ನದಿ-ಕೊಳಗಳಲ್ಲಿರುವ ಮೀನುಗಳಿಗೆ ಆಹಾರ ಉಣಿಸಿ ಭಗವಾನ್ ವಿಷ್ಣುವಿನ ಮತ್ಸ್ಯ ಅವತಾರವನ್ನು ಸ್ಮರಿಸಲಾಗುತ್ತದೆ.
ನಮ್ಮ ಕೃಷಿ ಸಂಸ್ಕೃತಿಯ ಹಬ್ಬಗಳಂತೂ ಮಾನವ, ಪ್ರಾಣಿ ಮತ್ತು ನಿಸರ್ಗದ ಅನುಬಂಧಕ್ಕೆ ಸಾಕ್ಷಿಯಾಗಿವೆ. ಪೊಂಗಲ್, ಗೋಪಾಷ್ಟಮಿ, ಸೊಹ್ರಾಯ್ ಮತ್ತು ರಂಗಾಲಿ ಬಿಹು ಹಬ್ಬಗಳು ಕೃಷಿಗೆ ಆಸರೆಯಾಗುವ ದನಕರುಗಳನ್ನು ನಮಿಸಿ ಗೌರವಿಸುತ್ತವೆ. ‘ಕುಕುರ್ ತಿಹಾರ್’ ನಾಯಿಗಳಿಗಾಗಿ ಮೀಸಲಾದ ಹಬ್ಬವಾದರೆ, ಕೇರಳದ ‘ಆನೆಯೂಟ್ಟು’ ಆನೆಗಳಿಗೆ ಉಣಿಸುವ ಪವಿತ್ರ ಹಬ್ಬವಾಗಿದೆ.
ಈ ಸಂಪ್ರದಾಯಗಳು ಮೂಕಜೀವಿಗಳನ್ನು ಸಲಹುವುದು ಮತ್ತು ನಿಸರ್ಗಕ್ಕೆ ಕೃತಜ್ಞತೆ ಸಲ್ಲಿಸುವುದು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಬದುಕಿನ ಒಂದು ಭಾಗ ಎಂಬುದನ್ನು ಸ್ಪಷ್ಟಪಡಿಸುತ್ತವೆ.
- ಅಕ್ಕಿ ಹಿಟ್ಟಿನ ರಂಗೋಲಿ: ಮೂಕಜೀವಿಗಳಿಗೆ ದೈನಂದಿನ ಅನ್ನದಾನ
ಕನ್ನಡ ನಾಡು ಸೇರಿದಂತೆ ದಕ್ಷಿಣ ಭಾರತದ ಮನೆಗಳಲ್ಲಿ ಪ್ರತಿದಿನ ಮುಂಜಾನೆ ಅಂಗಳದಲ್ಲಿ ರಂಗೋಲಿ ಬಿಡಿಸುವುದು ಪವಿತ್ರ ಆಚರಣೆ. ಮಹಿಳೆಯರು ಅಕ್ಕಿ ಹಿಟ್ಟಿನಿಂದ ದಿನವೂ ಹೊಸ ಹೊಸ ಚಿತ್ತಾರಗಳನ್ನು ಮೂಡಿಸುತ್ತಾರೆ. ರಂಗೋಲಿಯು ಮನೆಗೆ ಮಂಗಲ ಹಾಗೂ ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆಯಿದೆ.
ಇಲ್ಲಿ ಬಣ್ಣಗಳ ಬದಲು ಅಕ್ಕಿ ಹಿಟ್ಟು ಬಳಸುವುದರ ಹಿಂದೆ ದೊಡ್ಡ ಪ್ರಕೃತಿ ಪ್ರೇಮವಿದೆ. ಅಕ್ಕಿ ಹಿಟ್ಟು ತಿನ್ನಲು ಯೋಗ್ಯವಾಗಿರುವುದರಿಂದ, ಮುಂಜಾನೆ ಬರುವ ಇರುವೆಗಳು, ಕೀಟಗಳು ಮತ್ತು ಸಣ್ಣ ಪಕ್ಷಿಗಳಿಗೆ ಇದು ಸಿದ್ಧ ಆಹಾರವಾಗುತ್ತದೆ. ಈ ಮೂಲಕ ದೈನಂದಿನ ಕಲಾತ್ಮಕ ಆಚರಣೆಯು ಸಣ್ಣ ಜೀವಿಗಳಿಗೆ ಅನ್ನದಾನ ಮಾಡುವ ಶ್ರೇಷ್ಠ ಪರಂಪರೆಯಾಗಿ ಬದಲಾಗುತ್ತದೆ.
- ಪೊಂಗಲ್: ಸೂರ್ಯ ಮತ್ತು ದನಕರುಗಳಿಗೆ ಸಲ್ಲಿಸುವ ಕೊಯ್ಲಿನ ಕೃತಜ್ಞತೆ
ಪೊಂಗಲ್ ಜನವರಿಯಲ್ಲಿ ಆಚರಿಸಲಾಗುವ ನಾಲ್ಕು ದಿನಗಳ ಕೊಯ್ಲಿನ ಹಬ್ಬ. ಭೋಗಿಯಂದು ಮನೆ ಶುಚಿಗೊಳಿಸುವುದು, ತೈ ಪೊಂಗಲ್ ದಿನದಂದು ಹೊಸ ಕೊಯ್ಲಿನ ಅಡುಗೆಯನ್ನು ಸೂರ್ಯದೇವನಿಗೆ ಅರ್ಪಿಸುವುದು, ಮಾಟ್ಟು ಪೊಂಗಲ್ ದಿನದಂದು ದನಕರುಗಳನ್ನು ಪೂಜಿಸುವುದು ಈ ಹಬ್ಬದ ವಿಶೇಷ.
ಕೃಷಿಯಲ್ಲಿ ತಮಗೆ ನೆರವಾದ ಸೂರ್ಯ, ಭೂಮಿ ಮತ್ತು ದನಕರುಗಳಿಗೆ ರೈತರು ಕೃತಜ್ಞತೆ ಸಲ್ಲಿಸುವ ಹಬ್ಬವಿದು. ಮಾಟ್ಟು ಪೊಂಗಲ್ ದಿನದಂದು ಹಸು-ಎತ್ತುಗಳಿಗೆ ಸ್ನಾನ ಮಾಡಿಸಿ, ಅಲಂಕರಿಸಿ ವಿಶೇಷ ಅಡುಗೆಯನ್ನು ಉಣಿಸಲಾಗುತ್ತದೆ. ದನಕರುಗಳನ್ನು ಕುಟುಂಬದ ಸದಸ್ಯರಂತೆ ಕಂಡು ಕೃತಜ್ಞತೆ ಸಲ್ಲಿಸುವುದು ಈ ಹಬ್ಬದ ಸೊಗಡು.
- ಕುಕುರ್ ತಿಹಾರ್: ನಾಯಿಗಳನ್ನು ಪೂಜಿಸಿ ಗೌರವಿಸುವ ಹಬ್ಬ
ಕುಕುರ್ ತಿಹಾರ್ ನಾಯಿಗಳಿಗಾಗಿಯೇ ಮೀಸಲಾದ ವಿಶಿಷ್ಟ ಆಚರಣೆ. ಈ ದಿನದಂದು ಸಾಕುನಾಯಿ ಹಾಗೂ ಬೀದಿನಾಯಿಗಳ ಹಣೆಗೆ ತಿಲಕವಿಟ್ಟು, ಚಂಡುಹೂವಿನ ಮಾಲೆ ಹಾಕಿ, ಅವುಗಳಿಗೆ ಇಷ್ಟವಾದ ಸಿಹಿತಿಂಡಿ, ಹಾಲು ಹಾಗೂ ಆಹಾರವನ್ನು ನೀಡಲಾಗುತ್ತದೆ.
ನಾಯಿಗಳನ್ನು ಯಮನ ದೂತರೆಂದು ಮತ್ತು ಮನೆಯ ಕಾವಲುಗಾರರೆಂದು ಗೌರವಿಸಲಾಗುತ್ತದೆ. ಮಾನವ ಮತ್ತು ನಾಯಿಯ ನಡುವಿನ ನಿಷ್ಠೆ ಹಾಗೂ ಪ್ರೀತಿಯ ಬಾಂಧವ್ಯವನ್ನು ಈ ಹಬ್ಬ ಕೊಂಡಾಡುತ್ತದೆ.
- ಮಹಾಲಯ ಅಮಾವಾಸ್ಯೆ: ಕಾಗೆ ಹಾಗೂ ಪ್ರಾಣಿಗಳಿಗೆ ಆಹಾರ ನೀಡಿ ಹಿರಿಯರ ಸ್ಮರಣೆ
ಮಹಾಲಯ ಅಮಾವಾಸ್ಯೆಯಂದು ಕುಟುಂಬದ ಹಿರಿಯರನ್ನು ಸ್ಮರಿಸಿ ತರ್ಪಣ ಹಾಗೂ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಈ ದಿನ ತಯಾರಿಸಿದ ಸಸ್ಯಹಾರಿ ಅಡುಗೆಯನ್ನು ಮೊದಲು ಕಾಗೆಗಳು, ಹಸುಗಳು ಮತ್ತು ನಾಯಿಗಳಿಗೆ ಅರ್ಪಿಸಲಾಗುತ್ತದೆ.
ಕಾಗೆಗಳನ್ನು ಹಿರಿಯರ ಸಂಕೇತವೆಂದು ಭಾವಿಸಿ ಅವುಗಳಿಗೆ ಆಹಾರ ನೀಡುವುದು ನಮ್ಮ ಪರಂಪರೆ. ಇದರೊಂದಿಗೆ ಇರುವೆ ಮತ್ತು ಪಕ್ಷಿಗಳಿಗೂ ಅನ್ನದಾನ ಮಾಡುವ ಮೂಲಕ, ಪ್ರಕೃತಿಯ ಪ್ರತಿಯೊಂದು ಜೀವಿಯೂ ಈ ಸೃಷ್ಟಿಯ ಭಾಗ ಎಂಬುದನ್ನು ಈ ಆಚರಣೆ ನೆನಪಿಸುತ್ತದೆ.
- ಘುಘುತಿಯಾ: ಪಕ್ಷಿಗಳಿಗೆ ಆಹಾರ ನೀಡುವ ಮಲೆನಾಡ ಸಂಪ್ರದಾಯ
ಉತ್ತರಾಖಂಡದ ಕುಮಾವೂನ್ ಪ್ರದೇಶದಲ್ಲಿ ಮಕರ ಸಂಕ್ರಾಂತಿಯಂದು ‘ಘುಘುತಿಯಾ’ ಹಬ್ಬವನ್ನು ಆಚರಿಸಲಾಗುತ್ತದೆ. ಗೋಧಿ ಹಿಟ್ಟು ಮತ್ತು ಬೆಲ್ಲದಿಂದ ‘ಘುಘುತೆ’ ಎಂಬ ಸಿಹಿತಿಂಡಿ ಮಾಡಿ, ಅವುಗಳನ್ನು ಮಾಲೆಯಂತೆ ಪೋಣಿಸಿ ಮಕ್ಕಳು ಕೊರಳಲ್ಲಿ ಧರಿಸುತ್ತಾರೆ. ನಂತರ ಹಕ್ಕಿಗಳನ್ನು ಕೂಗಿ ಕರೆಯುತ್ತಾ ಆ ಸಿಹಿಯನ್ನು ಕಾಗೆ ಹಾಗೂ ಇತರ ಪಕ್ಷಿಗಳಿಗೆ ತಿನ್ನಿಸುತ್ತಾರೆ.
ಚಳಿಗಾಲದ ಕೊನೆಯಲ್ಲಿ ಕಾಗೆಗಳಿಗೆ ಮತ್ತು ವಲಸೆ ಹಕ್ಕಿಗಳಿಗೆ ಆಹಾರ ಒದಗಿಸುವ ಈ ಹಬ್ಬವು, ಮಕ್ಕಳಲ್ಲಿ ಪ್ರಕೃತಿ ಮತ್ತು ಪಕ್ಷಿಗಳ ಮೇಲಿನ ಪ್ರೀತಿಯನ್ನು ಬಾಲ್ಯದಲ್ಲೇ ಬಿತ್ತುತ್ತದೆ.
- ಮತ್ಸ್ಯ ಜಯಂತಿ: ಜಲಚರಗಳ ಪೋಷಣೆ ಮತ್ತು ಭಕ್ತಿ
ಮತ್ಸ್ಯ ಜಯಂತಿಯಂದು ಶ್ರೀವಿಷ್ಣುವಿನ ಮತ್ಸ್ಯ (ಮೀನು) ಅವತಾರವನ್ನು ಪೂಜಿಸಲಾಗುತ್ತದೆ. ಈ ದಿನ ಭಕ್ತರು ನದಿ, ಕೆರೆ ಹಾಗೂ ಕಲ್ಯಾಣಿಗಳಲ್ಲಿರುವ ಮೀನುಗಳಿಗೆ ಹಿಟ್ಟಿನ ಉಂಡೆಗಳು ಮತ್ತು ಧಾನ್ಯಗಳನ್ನು ಆಹಾರವಾಗಿ ಹಾಕುತ್ತಾರೆ.
ಜಲಮೂಲಗಳಲ್ಲಿರುವ ಮೀನುಗಳಿಗೆ ಆಹಾರ ನೀಡುವುದರಿಂದ ಜಲ ಪರಿಸರ ವ್ಯವಸ್ಥೆಯನ್ನು ರಕ್ಷಿಸಿದಂತಾಗುತ್ತದೆ. ಸೃಷ್ಟಿಯ ಪ್ರತಿಯೊಂದು ಜೀವಿಯಲ್ಲೂ ದೇವರನ್ನು ಕಾಣುವ ಭಾರತೀಯ ಭಾವನೆಗೆ ಈ ಮತ್ಸ್ಯ ಸೇವೆ ಸಾಕ್ಷಿಯಾಗಿದೆ.
- ಗೋಪಾಷ್ಟಮಿ: ಗೋಮಾತೆಯ ಪೂಜೆ ಮತ್ತು ಆರೈಕೆ
ಗೋಪಾಷ್ಟಮಿ ಕೃಷ್ಣನು ಗೋಪಾಲಕನಾಗಿ ದನಕರುಗಳ ಮೇಯಿಸುವ ಕಾರ್ಯವನ್ನು ಪೂರ್ಣಪ್ರಮಾಣದಲ್ಲಿ ವಹಿಸಿಕೊಂಡ ಪವಿತ್ರ ದಿನ. ಈ ದಿನದಂದು ಹಸುಗಳಿಗೆ ಸ್ನಾನ ಮಾಡಿಸಿ, ಹೂವಿನಿಂದ ಅಲಂಕರಿಸಿ, ಆರತಿ ಬೆಳಗಿ ಪೂಜಿಸಲಾಗುತ್ತದೆ ಹಾಗೂ ಅವುಗಳಿಗೆ ಇಷ್ಟವಾದ ವಿಶೇಷ ಆಹಾರವನ್ನು ನೀಡಲಾಗುತ್ತದೆ.
ಹಾಲು, ಗೊಬ್ಬರ ನೀಡಿ ಕೃಷಿಗೆ ಆಸರೆಯಾಗುವ ಹಸುಗಳನ್ನು ಕೇವಲ ಪ್ರಾಣಿಯನ್ನಾಗಿ ನೋಡದೆ ‘ಗೋಮಾತೆ’ ಎಂದು ಪೂಜಿಸಿ, ಅವುಗಳ ರಕ್ಷಣೆಯ ಹೊಣೆ ಹೊರಲು ಈ ಹಬ್ಬ ಪ್ರೇರೇಪಿಸುತ್ತದೆ.
- ಆನೆಯೂಟ್ಟು: ಆನೆಗಳಿಗೆ ಪವಿತ್ರ ಅನ್ನದಾನ
ಕೇರಳದ ತ್ರಿಶ್ಶೂರ್ನಲ್ಲಿರುವ ವಡಕ್ಕುಮ್ನಾಥನ್ ದೇವಾಲಯದಲ್ಲಿ ಪ್ರತಿವರ್ಷ ‘ಆನೆಯೂಟ್ಟು’ ಹಬ್ಬ ನಡೆಯುತ್ತದೆ. ಈ ದಿನದಂದು ಹತ್ತಾರು ಆನೆಗಳನ್ನು ದೇವಾಲಯದ ಆವರಣದಲ್ಲಿ ಸಾಲಾಗಿ ನಿಲ್ಲಿಸಿ, ಅವುಗಳಿಗೆ ಅರ್ಚಕರು ಮತ್ತು ಭಕ್ತರು ಪ್ರೀತಿಯಿಂದ ಅನ್ನ, ಹಣ್ಣು-ಹಂಪಲು, ಕಬ್ಬು ಮತ್ತು ಗಿಡಮೂಲಿಕೆಗಳ ಆಹಾರವನ್ನು ಉಣಿಸುತ್ತಾರೆ.
ಗಣಪತಿಯ ಸ್ವರೂಪವೆಂದು ಭಾವಿಸಿ ಆನೆಗಳನ್ನು ಪೂಜಿಸುವ ಈ ಹಬ್ಬವು, ನಾಡಿನ ಸಂಸ್ಕೃತಿಯಲ್ಲಿ ಆನೆಗಳಿಗಿರುವ ಗೌರವ ಮತ್ತು ಅವುಗಳ ಆರೋಗ್ಯದ ಕಾಳಜಿಯನ್ನು ಎತ್ತಿಹಿಡಿಯುತ್ತದೆ.
- ಸೊಹ್ರಾಯ್: ಜಾರ್ಖಂಡ್ನ ಕೊಯ್ಲು ಮತ್ತು ಜಾನುವಾರುಗಳ ಹಬ್ಬ
ಕೊಯ್ಲಿನ ನಂತರ ಆಚರಿಸಲಾಗುವ ಸೊಹ್ರಾಯ್ ಜಾರ್ಖಂಡ್ನ ಬುಡಕಟ್ಟು ಜನರ ಮುಖ್ಯ ಹಬ್ಬ. ಈ ದಿನದಂದು ಮನೆಗಳ ಗೋಡೆಗಳ ಮೇಲೆ ಸುಂದರ ನೈಸರ್ಗಿಕ ಚಿತ್ರಗಳನ್ನು (ಸೋಹ್ರಾಯ್ ಕಲೆ) ಬಿಡಿಸಲಾಗುತ್ತದೆ. ಹೊಲದಲ್ಲಿ ಕಷ್ಟಪಟ್ಟು ದುಡಿದ ದನಕರುಗಳಿಗೆ ಸ್ನಾನ ಮಾಡಿಸಿ, ಅಲಂಕರಿಸಿ, ವಿಶೇಷ ಖಿಚಡಿ ಪ್ರಸಾದವನ್ನು ನೀಡಲಾಗುತ್ತದೆ.
ಕೃಷಿ ಋತುವಿನ ಕೊನೆಯಲ್ಲಿ ತಮ್ಮ ಜಾನುವಾರುಗಳಿಗೆ ವಿಶ್ರಾಂತಿ ನೀಡಿ, ಅವುಗಳಿಗೆ ಗೌರವ ಸಲ್ಲಿಸುವುದು ಈ ಹಬ್ಬದ ಮುಖ್ಯ ಉದ್ದೇಶ.
- ರಂಗಾಲಿ ಬಿಹು: ದನಕರುಗಳ ಪೂಜೆಯೊಂದಿಗೆ ಅಸ್ಸಾಂ ಹೊಸ ವರ್ಷ
ಅಸ್ಸಾಂನ ಹೊಸ ವರ್ಷ ಮತ್ತು ವಸಂತ ಋತುವಿನ ಆಗಮನವನ್ನು ಸಾರುವ ರಂಗಾಲಿ ಬಿಹು ಹಬ್ಬವು ‘ಗೋರು ಬಿಹು’ (ದನಕರುಗಳ ಹಬ್ಬ) ದಿನದೊಂದಿಗೆ ಆರಂಭವಾಗುತ್ತದೆ. ಈ ದಿನ ದನಕರುಗಳನ್ನು ನದಿಯಲ್ಲಿ ಅರಿಶಿನ-ಉದ್ದಿನ ಹಿಟ್ಟು ಹಚ್ಚಿ ಸ್ನಾನ ಮಾಡಿಸಿ, ಬದನೆಕಾಯಿ, ಸೋರೆಕಾಯಿ ಹಾಗೂ ಅಕ್ಕಿ ಪಿಠಾಗಳನ್ನು (ಸಿಹಿತಿಂಡಿ) ಉಣಿಸಲಾಗುತ್ತದೆ.
ವರ್ಷದ ಮೊದಲ ದಿನವೇ ತಮ್ಮ ಕೃಷಿ ಸಂಗಾತಿಗಳಾದ ದನಕರುಗಳನ್ನು ಪೂಜಿಸಿ, ನಿಸರ್ಗದ ಕೊಡುಗೆಗೆ ಕೃತಜ್ಞತೆ ಸಲ್ಲಿಸುವುದು ಅಸ್ಸಾಮಿ ಸಂಸ್ಕೃತಿಯ ಹಿರಿಮೆಯಾಗಿದೆ.
ನಮ್ಮ ನಾಡಿನ ದೈನಂದಿನ ರಂಗೋಲಿಯಿಂದ ಹಿಡಿದು ದೊಡ್ಡ ದೊಡ್ಡ ಹಬ್ಬಗಳವರೆಗೆ, ಪ್ರತಿಯೊಂದು ಆಚರಣೆಯೂ ಮೂಕಜೀವಿಗಳನ್ನು ಪ್ರೀತಿಸುವುದನ್ನು ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬಾಳುವುದನ್ನು ನಮಗೆ ಕಲಿಸಿಕೊಡುತ್ತದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
