- ಶಶಾಂಕ್ ಕುಮಾರ್ ದ್ವಿವೇದಿ
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ನಿಯಂತ್ರಕ ಮೇಲ್ವಿಚಾರಣೆಯಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಅಭಿವೃದ್ಧಿಪಡಿಸಿದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ), ಆಗಸ್ಟ್ 25, 2016 ರಂದು ಅಧಿಕೃತವಾಗಿ ಚಾಲನೆ ಪಡೆಯುವ ಮೂಲಕ ಭಾರತದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಹೊಸ ಯುಗವೊಂದಕ್ಕೆ ಮುನ್ನುಡಿ ಬರೆಯಿತು.
ಹತ್ತು ವರ್ಷಗಳ ನಂತರ, ಯುಪಿಐ ತನ್ನ ಮೂಲ ಪಾವತಿ ವಿಧಾನದ ಪಾತ್ರವನ್ನೂ ಮೀರಿ ಬಹುದೂರ ಸಾಗಿದೆ. ಇದು ಇಂದು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ (DPI) ಕೇಂದ್ರ ಸ್ತಂಭಗಳಲ್ಲಿ ಒಂದಾಗಿದ್ದು, ದೇಶದ ದೈನಂದಿನ ಆರ್ಥಿಕ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ.
ಈ ಪರಿವರ್ತನೆಯ ಪ್ರಮಾಣವು ಸರ್ಕಾರಿ ಅಂಕಿಅಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಸರ್ಕಾರಿ ದತ್ತಾಂಶದ ಪ್ರಕಾರ, ವಾರ್ಷಿಕ ಯುಪಿಐ ವಹಿವಾಟಿನ ಪ್ರಮಾಣವು 2016-17ರ ಹಣಕಾಸು ವರ್ಷದಲ್ಲಿದ್ದ 1.78 ಕೋಟಿಯಿಂದ 2025-26ರ ಹಣಕಾಸು ವರ್ಷದಲ್ಲಿ 24,162 ಕೋಟಿಗೂ ಹೆಚ್ಚು ವಹಿವಾಟುಗಳಿಗೆ ಏರಿಕೆಯಾಗಿದೆ. ಅಂದರೆ, ಕೇವಲ ಒಂದು ದಶಕದಲ್ಲಿ ಸುಮಾರು 13,000 ಪಟ್ಟು ಹೆಚ್ಚಳವಾಗಿದೆ.
ವಹಿವಾಟಿನ ಒಟ್ಟು ಮೌಲ್ಯವೂ ಅತ್ಯಂತ ಗಮನಾರ್ಹವಾಗಿ ವೃದ್ಧಿಸಿದೆ. ಮೊದಲ ಹಣಕಾಸು ವರ್ಷದಲ್ಲಿ ಕೇವಲ 0.07 ಲಕ್ಷ ಕೋಟಿ ರೂಪಾಯಿಯಷ್ಟಿದ್ದ ವಾರ್ಷಿಕ ವಹಿವಾಟು ಮೌಲ್ಯವು, 2025-26ರ ಆರ್ಥಿಕ ವರ್ಷದಲ್ಲಿ ಸುಮಾರು 314 ಲಕ್ಷ ಕೋಟಿ ರೂಪಾಯಿಗೆ ತಲುಪಿದ್ದು, 4,000 ಕ್ಕೂ ಹೆಚ್ಚು ಪಟ್ಟು ಜಿಗಿತ ಕಂಡಿದೆ.
ಈ ಜಾಲವು ಪ್ರಸ್ತುತ ಪ್ರತಿದಿನ ಸರಿಸುಮಾರು 66 ಕೋಟಿ ವಹಿವಾಟುಗಳನ್ನು ನಿರ್ವಹಿಸುತ್ತಿದೆ. ಒಮ್ಮೆ ಸಾಮಾನ್ಯ ಗ್ರಾಹಕರಿಗೆ ಅಪರಿಚಿತವಾಗಿದ್ದ ತಂತ್ರಜ್ಞಾನವೊಂದು, ಇಂದು ತರಕಾರಿ ಖರೀದಿಯಿಂದ ಹಿಡಿದು ಆಟೋ ಚಾಲಕರಿಗೆ ನೀಡುವ ಬಾಡಿಗೆ, ಹೋಟೆಲ್ ಬಿಲ್ ಪಾವತಿ, ಕುಟುಂಬದ ಸದಸ್ಯರಿಗೆ ಹಣ ರವಾನೆ ಹಾಗೂ ಉದ್ಯಮ ವ್ಯವಹಾರಗಳವರೆಗೆ ದೈನಂದಿನ ಪ್ರತಿಯೊಂದು ಆರ್ಥಿಕ ಚಟುವಟಿಕೆಯಲ್ಲೂ ಹೇಗೆ ಹಾಸುಹೊಕ್ಕಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
1.78 ಕೋಟಿಯಿಂದ 24,162 ಕೋಟಿ ವಹಿವಾಟಿನವರೆಗೆ
ಯುಪಿಐ ಬೆಳೆದು ಬಂದ ಹಾದಿಯನ್ನು ಅದರ ಅದ್ಭುತ ವೃದ್ಧಿಯ ನಕ್ಷೆಯ ಮೂಲಕ ಉತ್ತಮವಾಗಿ ಅರ್ಥೈಸಿಕೊಳ್ಳಬಹುದು. ತನ್ನ ಮೊದಲ ಆರ್ಥಿಕ ವರ್ಷವಾದ 2016-17 ರಲ್ಲಿ ಯುಪಿಐ ದಾಖಲಿಸಿದ್ದು ಕೇವಲ 1.78 ಕೋಟಿ ವಹಿವಾಟುಗಳನ್ನು ಮಾತ್ರ. ಅತ್ಯಲ್ಪ ಬ್ಯಾಂಕುಗಳು ಮತ್ತು ಬಳಕೆದಾರರೊಂದಿಗೆ ವ್ಯವಸ್ಥೆಯು ಇನ್ನೂ ಪ್ರಾರಂಬಿಕ ಹಂತದಲ್ಲಿತ್ತು.
ಆದರೆ, ಸರ್ಕಾರಿ ದತ್ತಾಂಶಗಳು ತೋರಿಸುವಂತೆ ಈ ಚಿತ್ರಣ ಅತ್ಯಂತ ವೇಗವಾಗಿ ಬದಲಾಯಿತು. 2025-26ರ ವೇಳೆಗೆ ವಾರ್ಷಿಕ ವಹಿವಾಟು ಪ್ರಮಾಣವು 24,162 ಕೋಟಿಯ ಗಡಿಯನ್ನು ದಾಟಿತು. ವಹಿವಾಟಿನ ಮೌಲ್ಯವೂ ಇದೇ ಹಾದಿಯನ್ನು ಅನುಸರಿಸಿ, ಮೊದಲ ವರ್ಷದ 0.07 ಲಕ್ಷ ಕೋಟಿ ರೂಪಾಯಿಯಿಂದ ಬರೋಬ್ಬರಿ 314 ಲಕ್ಷ ಕೋಟಿ ರೂಪಾಯಿಗೆ ತಲುಪಿತು.
ವಹಿವಾಟಿನ ಪ್ರಮಾಣ ಮತ್ತು ಮೌಲ್ಯವೆರಡೂ ಒಂದೇ ಬಾರಿಗೆ ಹೆಚ್ಚಿರುವುದು, ಯುಪಿಐ ಕೇವಲ ಅಪರೂಪಕ್ಕೊಮ್ಮೆ ಬಳಸುವ ಡಿಜಿಟಲ್ ವ್ಯವಸ್ಥೆಯಾಗಿ ಉಳಿದಿಲ್ಲ ಎಂಬುದನ್ನು ನಿರೂಪಿಸುತ್ತದೆ. ಬದಲಿಗೆ, ಇದು ಲಕ್ಷಾಂತರ ಸಣ್ಣ ಚಿಲ್ಲರೆ ಪಾವತಿಗಳು ಹಾಗೂ ದೊಡ್ಡ ಪ್ರಮಾಣದ ವ್ಯಕ್ತಿಗತ ವರ್ಗಾವಣೆಗಳಿಗೆ ಬಳಕೆಯಾಗುವ ಅತ್ಯಂತ ಹೆಚ್ಚಿನ ಸಾಂದ್ರತೆಯ ಮೂಲಸೌಕರ್ಯವಾಗಿ ಬೆಳೆದಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿಯು (IMF) ಯುಪಿಐ ಅನ್ನು ವಹಿವಾಟಿನ ಪ್ರಮಾಣದಲ್ಲಿ ವಿಶ್ವದ ಅತ್ಯಂತ ದೊಡ್ಡ ರಿಯಲ್-ಟೈಮ್ ಪಾವತಿ ವ್ಯವಸ್ಥೆ ಎಂದು ಗುರುತಿಸಿದೆ. ವಿಭಿನ್ನ ಬ್ಯಾಂಕುಗಳು ಮತ್ತು ಪಾವತಿ ಆ್ಯಪ್ಗಳ ಬಳಕೆದಾರರು ಯಾವುದೇ ತಡೆಗಳಿಲ್ಲದೆ ಸುಲಭವಾಗಿ ವಹಿವಾಟು ನಡೆಸುವ ಸಾಮರ್ಥ್ಯವೇ (Interoperability) ಯುಪಿಐನ ಈ ಅಭೂತಪೂರ್ವ ಯಶಸ್ಸಿಗೆ ಮುಖ್ಯ ಕಾರಣ ಎಂದು ಐಎಂಎಫ್ ವಿಶ್ಲೇಷಣೆ ಉಲ್ಲೇಖಿಸಿದೆ.
ಜುಲೈ 2026 ರಲ್ಲಿ ಹೊಸ ದಾಖಲೆ
ಎರಡನೇ ದಶಕಕ್ಕೆ ಕಾಲಿಡುತ್ತಿರುವ ಯುಪಿಐನ ಬೆಳವಣಿಗೆಯ ವೇಗವೆನ್ನಿಷ್ಟೂ ಕಡಿಮೆಯಾಗಿಲ್ಲ. ಮೇ 2026 ರಲ್ಲಿ ಮಾಸಿಕ ವಹಿವಾಟುಗಳು ಮೊದಲ ಬಾರಿಗೆ 2,300 ಕೋಟಿಯ ಗಡಿ ದಾಟಿ, ಒಟ್ಟು 2,320 ಕೋಟಿ ವಹಿವಾಟುಗಳು ದಾಖಲಾಗಿದ್ದವು.
ತದನಂತರ, ಜುಲೈ 2026 ರಲ್ಲಿ ಒಟ್ಟು 29.88 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,366 ಕೋಟಿ ವಹಿವಾಟುಗಳನ್ನು ನಡೆಸುವ ಮೂಲಕ ಯುಪಿಐ ಮತ್ತೊಂದು ಮಾಸಿಕ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿತು. ಅಂದರೆ ಆ ತಿಂಗಳಲ್ಲಿ ಸರಾಸರಿ ದಿನಕ್ಕೆ ಸುಮಾರು 76 ಕೋಟಿ ವಹಿವಾಟುಗಳು ನಡೆದಿದ್ದವು. ಸರ್ಕಾರವು ಈ ಪಾವತಿ ಜಾಲವನ್ನು ವಿಶ್ವದ ಅತಿದೊಡ್ಡ ರಿಯಲ್-ಟೈಮ್ ಪಾವತಿ ವ್ಯವಸ್ಥೆ ಎಂದು ಬಣ್ಣಿಸಿದೆ.
ವ್ಯವಸ್ಥೆಯು ಬೃಹತ್ ಪ್ರಮಾಣವನ್ನು ತಲುಪಿದ ನಂತರವೂ ಯುಪಿಐನ ವಿಸ್ತರಣೆ ಮುಂದುವರಿಯುತ್ತಿರುವುದನ್ನು ಜುಲೈ ತಿಂಗಳ ಈ ದಾಖಲೆಯು ಸ್ಪಷ್ಟಪಡಿಸುತ್ತದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ, 2025-26ರ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಡಿಜಿಟಲ್ ಪಾವತಿ ವಹಿವಾಟುಗಳಲ್ಲಿ ಯುಪಿಐ ಪಾಲು ಸರಿಸುಮಾರು ಶೇಕಡಾ 84 ರಷ್ಟಿತ್ತು. ಈ ಪ್ರಾಬಲ್ಯವು ಯುಪಿಐ ಅನ್ನು ಕೇವಲ ಹಲವು ಡಿಜಿಟಲ್ ಆಯ್ಕೆಗಳಲ್ಲೊಂದಾಗಿ ಉಳಿಸದೆ, ಕೋಟ್ಯಂತರ ಭಾರತೀಯರು ಸಾಂಸ್ಥಿಕ ಹಣಕಾಸು ವ್ಯವಸ್ಥೆಯೊಂದಿಗೆ ವ್ಯವಹರಿಸುವ ಪ್ರಮುಖ ಮಾಧ್ಯಮವನ್ನಾಗಿ ಮಾಡಿದೆ.
ಸಣ್ಣ ವ್ಯಾಪಾರಿಗಳ ಪರೀಕ್ಷೆ: ಸಂಶಯದಿಂದ ಕ್ಯೂಆರ್ ಕೋಡ್ಗಳ ಸಾರ್ವತ್ರಿಕತೆಯವರೆಗೆ
ಯುಪಿಐನ ಈ ಯಶಸ್ಸಿನ ಕಥೆಯು ಅಪನಗದೀಕರಣದ ನಂತರ ಭಾರತವು ಡಿಜಿಟಲ್ ಪಾವತಿಯತ್ತ ಹೆಜ್ಜೆ ಇಟ್ಟಾಗ ಎದ್ದಿದ್ದ ದೊಡ್ಡ ಮಟ್ಟದ ಚರ್ಚೆಗಳನ್ನು ನೆನಪಿಸುತ್ತದೆ. 2017 ರಲ್ಲಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಸಾಮಾನ್ಯ ಭಾರತೀಯರಿಗೆ, ವಿಶೇಷವಾಗಿ ಹಳ್ಳಿಗಳ ಜನರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಪಾವತಿಯ ಪ್ರಾಯೋಗಿಕತೆಯ ಬಗ್ಗೆ ಪ್ರಶ್ನೆ ಎತ್ತಿದ್ದರು. ಹಳ್ಳಿಯ ಸಂತೆಯಲ್ಲಿ ತರಕಾರಿ ಮಾರುವ ಬಡ ವ್ಯಾಪಾರಿಯೊಬ್ಬ ಪಿಒಎಸ್ ಯಂತ್ರಗಳು, ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದೆ ಕ್ರೆಡಿಟ್ ಕಾರ್ಡ್ ಮೂಲಕ ಸಣ್ಣ ಮೊತ್ತದ ಪಾವತಿಯನ್ನು ಸ್ವೀಕರಿಸಲು ಹೇಗೆ ಸಾಧ್ಯ ಎಂದು ಅವರು ಕೇಳಿದ್ದನ್ನು ಸರ್ಕಾರಿ ಪ್ರಕಟಣೆಯೊಂದು ನಂತರ ನೆನಪಿಸಿಕೊಂಡಿತ್ತು.
ನಗದನ್ನೇ ನೆಚ್ಚಿಕೊಂಡಿದ್ದ ಭಾರತದ ಅರ್ಥವ್ಯವಸ್ಥೆಯಲ್ಲಿದ್ದ ಪ್ರಾಯೋಗಿಕ ಸವಾಲುಗಳೇ ಚಿದಂಬರಂ ಅವರ ಟೀಕೆಗೆ ಮೂಲ ಕಾರಣವಾಗಿತ್ತು. ಸಣ್ಣ ಮೌಲ್ಯದ ವಹಿವಾಟು ನಡೆಸುವ ತರಕಾರಿ ಮಾರಾಟಗಾರ ಡಿಜಿಟಲ್ ಪಾವತಿ ಮತ್ತು ಅದಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ನಿರ್ವಹಿಸುವುದು ಹೇಗೆ ಎಂದು ಅವರು 2017 ರಲ್ಲಿ ಸಂಸತ್ತಿನಲ್ಲಿ ಪ್ರಶ್ನಿಸಿದ್ದರು.
ಆರಂಭಿಕ ದಿನಗಳ ಆ ಆತಂಕಗಳಿಗೆ ಯುಪಿಐ ಬೆಳೆದು ಬಂದ ಹಾದಿಯು ಅತ್ಯಂತ ಸ್ಪಷ್ಟವಾದ ಉತ್ತರ ನೀಡಿದೆ. ಪ್ರತಿಯೊಬ್ಬ ಸಣ್ಣ ವ್ಯಾಪಾರಿಯೂ ದುಬಾರಿ ಕಾರ್ಡ್-ಸ್ವೈಪಿಂಗ್ ಯಂತ್ರಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿಲ್ಲದೆ, ಯುಪಿಐ ಕ್ಯೂಆರ್ (QR) ಕೋಡ್ಗಳು, ಮೊಬೈಲ್ ಫೋನ್ಗಳು ಮತ್ತು ಬ್ಯಾಂಕ್ ಖಾತೆಗಳ ಮೂಲಕವೇ ಪಾವತಿಯನ್ನು ಸಾಧ್ಯವಾಗಿಸಿತು. ಸಿಸ್ಟಮ್ನ ಅಂತರ-ಚಾಲನೀಯತೆಯಿಂದಾಗಿ (Interoperability) ಒಂದು ಆ್ಯಪ್ ಬಳಸುವ ಗ್ರಾಹಕನು ಮತ್ತೊಂದು ಬ್ಯಾಂಕ್ ಅಥವಾ ಆ್ಯಪ್ಗೆ ಸಂಪರ್ಕಗೊಂಡಿರುವ ವ್ಯಾಪಾರಿಗೆ ಸುಲಭವಾಗಿ ಹಣ ಪಾವತಿಸಲು ಸಾಧ್ಯವಾಯಿತು.
ಇದರ ಫಲಿತಾಂಶ ಇಂದು ಭಾರತದ ರಸ್ತೆಗಳು ಮತ್ತು ಮಾರುಕಟ್ಟೆಗಳಲ್ಲಿ ಕಣ್ಣಿಗೆ ಕಾಣಿಸುತ್ತಿದೆ: ತರಕಾರಿ ಅಂಗಡಿಗಳು, ಟೀ ಅಂಗಡಿಗಳು, ರಸ್ತೆಬದಿಯ ಉಪಹಾರದ ಗಾಡಿಗಳು, ಟ್ಯಾಕ್ಸಿಗಳು, ಔಷಧಾಲಯಗಳು ಮತ್ತು ಸಣ್ಣ ದಿನಸಿ ಅಂಗಡಿಗಳಲ್ಲಿ ಕ್ಯೂಆರ್ ಕೋಡ್ಗಳು ರಾರಾಜಿಸುತ್ತಿವೆ.
ಇದರರ್ಥ ನಗದು ಪೂರ್ಣವಾಗಿ ಕಣ್ಮರೆಯಾಗಿದೆ ಎಂದಲ್ಲ. ಬದಲಾಗಿ, ಡಿಜಿಟಲ್ ಪಾವತಿಗಳು ನಗದಿನಷ್ಟೇ ಸರಳ ಮತ್ತು ಸುಲಭಲಭ್ಯವಾಗಿ, ದೈನಂದಿನ ವ್ಯವಹಾರಗಳಲ್ಲಿ ನಗದಿಗೆ ಅತ್ಯುತ್ತಮ ಪರ್ಯಾಯವಾಗಿ ರೂಪುಗೊಂಡಿವೆ. ಚಿದಂಬರಂ ಅವರೂ ಸಹ ನಂತರದ ದಿನಗಳಲ್ಲಿ ನಗದೇತರ ಪಾವತಿಗಳ ಬೆಳವಣಿಗೆಯನ್ನು ಒಪ್ಪಿಕೊಂಡಿದ್ದರು.
ಆದ್ದರಿಂದ, ದಶಕದ ಈ ಯುಪಿಐ ಪಯಣವು ಕೇವಲ ಸಂಶಯಗಳ ಮೇಲೆ ತಂತ್ರಜ್ಞಾನ ಸಾಧಿಸಿದ ವಿಜಯವಲ್ಲ. ಇದು ಅಡೆತಡೆಗಳಿಲ್ಲದ, ಸುಲಭವಾದ ವ್ಯವಸ್ಥೆಯು ಡಿಜಿಟಲ್ ಪಾವತಿಯ ವಿಸ್ತರಣೆಗೆ ಎದುರಾಗಿದ್ದ ಪ್ರಾಯೋಗಿಕ ತಡೆಗೋಡೆಗಳನ್ನು ಹೇಗೆ ನಿವಾರಿಸಿತು ಎಂಬುದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ.
703 ರಿಂದ 741 ಬ್ಯಾಂಕುಗಳಿಗೆ ಏರಿಕೆ
ಯುಪಿಐ ವ್ಯವಸ್ಥೆಯ ವಿಸ್ತರಣೆಯೊಂದಿಗೆ ಅದರಲ್ಲಿ ಭಾಗವಹಿಸುವ ಬ್ಯಾಂಕುಗಳ ಸಂಖ್ಯೆಯಲ್ಲೂ ಭಾರಿ ಏರಿಕೆಯಾಗಿದೆ. ಯುಪಿಐ ಜಾಲದಲ್ಲಿದ್ದ ಬ್ಯಾಂಕುಗಳ ಸಂಖ್ಯೆ 2016-17ರಲ್ಲಿದ್ದ 44 ರಿಂದ 2025-26ರಲ್ಲಿ 703ಕ್ಕೆ ಏರಿತು. ಪ್ರಸ್ತುತ ಈ ಜಾಲದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು, ಪೇಮೆಂಟ್ಸ್ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು ಸೇರಿವೆ. ಜುಲೈ 2026 ರ ವೇಳೆಗೆ ಒಟ್ಟು 741 ಬ್ಯಾಂಕುಗಳು ಯುಪಿಐ ಪ್ಲಾಟ್ಫಾರ್ಮ್ನಲ್ಲಿ ಸಕ್ರಿಯವಾಗಿದ್ದವು.
ಯುಪಿಐನ ಅತ್ಯುತ್ತಮ ಕಾರ್ಯಕ್ಷಮತೆಗೆ ಈ ವಿಸ್ತರಣೆಯೇ ನಿರ್ಣಾಯಕವಾಗಿತ್ತು. ಪ್ರತಿಯೊಂದು ಬ್ಯಾಂಕ್ಗೂ ಪ್ರತ್ಯೇಕ ಪಾವತಿ ಜಾಲವನ್ನು ರಚಿಸುವ ಬದಲು, ಯುಪಿಐ ಎಲ್ಲಾ ಸಂಸ್ಥೆಗಳನ್ನು ಒಂದೇ ಸೌಕರ್ಯದಡಿ ಸಂಪರ್ಕಿಸಿತು. ಈ ವಿನ್ಯಾಸವು ಬಳಕೆದಾರರಿಗೆ ತಮ್ಮಿಷ್ಟದ ಆ್ಯಪ್ಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಿತು. IMF ಕೂಡ ಯುಪಿಐನ ಈ ಅಂತರ-ಚಾಲನೀಯತೆಯನ್ನು (Interoperability) ಅದರ ಪ್ರಮುಖ ಶಕ್ತಿ ಎಂದು ಗುರುತಿಸಿದೆ.
ವ್ಯಕ್ತಿಗತ ವರ್ಗಾವಣೆಯಿಂದ ದೈನಂದಿನ ವ್ಯಾಪಾರ ಪಾವತಿಗಳವರೆಗೆ
ಯುಪಿಐ ಬಳಕೆಯ ಮಾದರಿಯು ಅದು ದೈನಂದಿನ ವ್ಯಾಪಾರದಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ತೋರಿಸುತ್ತದೆ. ವ್ಯಕ್ತಿಯಿಂದ ವ್ಯಾಪಾರಿಗೆ (P2M) ನಡೆಯುವ ವಹಿವಾಟುಗಳು ಒಟ್ಟು ಯುಪಿಐ ವಹಿವಾಟಿನ ಪ್ರಮಾಣದಲ್ಲಿ ಶೇಕಡಾ 63 ರಷ್ಟಿದ್ದು, ಚಿಲ್ಲರೆ ಪಾವತಿಗಳಲ್ಲಿ ಪ್ಲಾಟ್ಫಾರ್ಮ್ನ ಪಾತ್ರವನ್ನು ಎತ್ತಿಹಿಡಿಯುತ್ತವೆ. ಅದೇ ಸಮಯದಲ್ಲಿ, ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ವಹಿವಾಟುಗಳು ಒಟ್ಟು ವಹಿವಾಟಿನ ಮೌಲ್ಯದಲ್ಲಿ ಶೇಕಡಾ 71 ರಷ್ಟಿದ್ದು, ದೊಡ್ಡ ಮೊತ್ತದ ಹಣದ ವರ್ಗಾವಣೆಯನ್ನೂ ಇದು ಸಫಲವಾಗಿ ನಿರ್ವಹಿಸುತ್ತಿದೆ ಎಂಬುದನ್ನು ತೋರಿಸುತ್ತದೆ.
ಪ್ರಮಾಣ (Volume) ಮತ್ತು ಮೌಲ್ಯದ (Value) ನಡುವಿನ ಈ ವ್ಯತ್ಯಾಸವು ಪ್ರಮುಖವಾದದ್ದು. ವ್ಯಾಪಾರಿ ಪಾವತಿಗಳು ಹೆಚ್ಚಾಗಿ ಸಣ್ಣ ಮೊತ್ತದ್ದಾಗಿರುತ್ತವೆ. 2025-26ರಲ್ಲಿದ್ದ P2M ವಹಿವಾಟುಗಳಲ್ಲಿ ಶೇಕಡಾ 86 ರಷ್ಟು ವಹಿವಾಟುಗಳು 500 ರೂಪಾಯಿಗಿಂತ ಕಡಿಮೆಯಿದ್ದವು. ವ್ಯಕ್ತಿಗತ (P2P) ಪಾವತಿಗಳಲ್ಲಿ ಶೇಕಡಾ 59 ರಷ್ಟು 500 ರೂಪಾಯಿಗಿಂತ ಕಡಿಮೆಯಿದ್ದರೆ, ಶೇಕಡಾ 41 ರಷ್ಟು 500 ರೂಪಾಯಿಗಿಂತ ಹೆಚ್ಚಾಗಿದ್ದವು. ಈ ಅಂಕಿಅಂಶಗಳು ಯುಪಿಐ ಕೇವಲ ದೊಡ್ಡ ಡಿಜಿಟಲ್ ವರ್ಗಾವಣೆಗಳಿಗೆ ಸೀಮಿತವಾಗಿಲ್ಲ, ಬದಲಿಗೆ ಅತ್ಯಂತ ಸಣ್ಣ ದೈನಂದಿನ ಪಾವತಿಗಳನ್ನೂ ಅತ್ಯಂತ ಮಿತವ್ಯಯಕಾರಿಯಾಗಿ ನಿರ್ವಹಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಯುಪಿಐ ಮತ್ತು ಹಣಕಾಸು ಸೇರ್ಪಡೆ
ಯುಪಿಐನ ಪ್ರಾಮುಖ್ಯತೆಯು ಕೇವಲ ಸುಲಭ ಸೌಕರ್ಯವಷ್ಟೇ ಅಲ್ಲದೆ ಅದನ್ನೂ ಮೀರಿದ್ದಾಗಿದೆ. ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್ಗಳು ಮತ್ತು ಡಿಜಿಟಲ್ ಪಾವತಿಗಳನ್ನು ಜೋಡಿಸುವ ಮೂಲಕ ಇದು ಭಾರತದ ಜಾಗತಿಕ ಹಣಕಾಸು ಸೇರ್ಪಡೆಯ (Financial Inclusion) ಮೂಲಸೌಕರ್ಯವನ್ನು ಬಲಪಡಿಸಿದೆ. ಬಳಕೆದಾರರಿಗೆ ನಗದಿನ ಹಸ್ತಕ್ಷೇಪವಿಲ್ಲದೆ ತಕ್ಷಣದ ಪಾವತಿ ಸಾಧಿಸಲು ಇದು ಸಹಕಾರಿಯಾಗಿದೆ. ಸಣ್ಣ ಉದ್ಯಮಿಗಳಿಗೆ ನಗದು ನಿರ್ವಹಣೆಗೆ ಸುಲಭ ಪರ್ಯಾಯ ದೊರೆತಿದೆ.
ಸರ್ಕಾರವು ಆಧಾರ್ ಮತ್ತು ಜನ್ ಧನ್ ಯೋಜನೆಯಂತೆಯೇ ಯುಪಿಐ ಅನ್ನು ಸಹ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಪ್ರಮುಖ ಭಾಗವನ್ನಾಗಿ ಮಾಡಿದೆ. ಡಿಜಿಟಲ್ ಹಣಕಾಸು ಸೇವೆಗಳನ್ನು ಕೇವಲ ನಗರದ ಜನರಿಗೆ ಅಥವಾ ದೊಡ್ಡ ಉದ್ಯಮಗಳಿಗೆ ಸೀಮಿತಗೊಳಿಸದೆ ಪ್ರತಿಯೊಬ್ಬರಿಗೂ ತಲುಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಜಾಗತಿಕ ಮಟ್ಟದಲ್ಲಿ ಯುಪಿಐ
ದೇಶೀಯ ಪಾವತಿ ಮೂಲಸೌಕರ್ಯವಾಗಿ ಪ್ರಾರಂಭವಾದ ಈ ಪ್ಲಾಟ್ಫಾರ್ಮ್, ಈಗ ಭಾರತದ ಡಿಜಿಟಲ್ ರಾಜತಾಂತ್ರಿಕತೆ ಮತ್ತು ಗಡಿ ಸೀಮೋಲ್ಲಂಘಿತ (Cross-border) ಪಾವತಿ ತಂತ್ರದ ಭಾಗವಾಗಿದೆ. ಸರ್ಕಾರಿ ದತ್ತಾಂಶದ ಪ್ರಕಾರ, 2025 ರ ಹೊತ್ತಿಗೆ ಜಾಗತಿಕ ರಿಯಲ್-ಟೈಮ್ ಪಾವತಿ ವಹಿವಾಟಿನ ಪ್ರಮಾಣದಲ್ಲಿ ಯುಪಿಐ ಸರಿಸುಮಾರು ಶೇಕಡಾ 49 ರಷ್ಟು ಪಾಲನ್ನು ಹೊಂದಿತ್ತು.
ಪ್ರಸ್ತುತ ಯುಪಿಐ ಜಗತ್ತಿನ 11 ದೇಶಗಳಲ್ಲಿ ಕಾರ್ಯಾಚರಿಸುತ್ತಿದೆ: ಯುಎಇ, ಫ್ರಾನ್ಸ್, ಭೂತಾನ್, ಶ್ರೀಲಂಕಾ, ನೇಪಾಳ, ಸಿಂಗಾಪುರ, ಮಾರಿಷಸ್, ಕತಾರ್, ಕಾಂಬೋಡಿಯಾ, ಗ್ರೀಸ್ ಮತ್ತು ಮಾಲ್ಡೀವ್ಸ್. ಈ ಅಂತಾರಾಷ್ಟ್ರೀಯ ವಿಸ್ತರಣೆಯು ವಿದೇಶಕ್ಕೆ ಪ್ರಯಾಣಿಸುವ ಭಾರತೀಯರಿಗೆ ಮತ್ತು ಉದ್ಯಮಗಳಿಗೆ ಡಿಜಿಟಲ್ ಪಾವತಿಯ ಹೆಚ್ಚುವರಿ ಆಯ್ಕೆಗಳನ್ನು ನೀಡಿದೆ.
ಯುಪಿಐ ಕೇವಲ ಒಂದು ಆ್ಯಪ್ ಅಲ್ಲ
ಯುಪಿಐ ಕಥೆಯ ಮತ್ತೊಂದು ಪ್ರಮುಖ ಅಂಶವೆಂದರೆ, ಯುಪಿಐ ಸ್ವತಃ ಗ್ರಾಹಕರು ಬಳಸುವ ಯಾವುದೋ ಒಂದೇ ಒಂದು ಆ್ಯಪ್ ಅಲ್ಲ. ಇದು ಬ್ಯಾಂಕುಗಳು, ಪಾವತಿ ಆ್ಯಪ್ಗಳು ಮತ್ತು ಬಳಕೆದಾರರನ್ನು ಸಂಪರ್ಕಿಸುವ ಪಾವತಿ ಮೂಲಸೌಕರ್ಯವಾಗಿದೆ. ಬ್ಯಾಂಕ್ ಆ್ಯಪ್ಗಳು ಮತ್ತು ಥರ್ಡ್ ಪಾರ್ಟಿ ಪಾವತಿ ಪ್ಲಾಟ್ಫಾರ್ಮ್ಗಳು ಯುಪಿಐ ನೆಟ್ವರ್ಕ್ನಲ್ಲಿ ಕಾರ್ಯನಿರ್ವಹಿಸುತ್ತವೆ, ಆದರೆ ಎನ್ಪಿಸಿಐ (NPCI) ಸಂಪೂರ್ಣ ಮೂಲ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಈ ಮಾದರಿಯು ಯುಪಿಐ ಇಷ್ಟೊಂದು ವೇಗವಾಗಿ ಬೆಳೆಯಲು ಕಾರಣವಾಗಿದೆ.
ತಾತ್ಕಾಲಿಕ ವ್ಯವಸ್ಥೆಯಿಂದ ಜಾಗತಿಕ ಮಾದರಿಯವರೆಗೆ
2016ರ ಅಪನಗದೀಕರಣದ ಸಮಯದಲ್ಲಿ ದೊಡ್ಡ ಮುಖಬೆಲೆಯ ನೋಟುಗಳ ಹಿಂಪಡೆಯುವಿಕೆಯಿಂದ ಉಂಟಾದ ನಗದು ಅಭಾವವು ಜನರನ್ನು ಡಿಜಿಟಲ್ ಪರ್ಯಾಯಗಳನ್ನು ಹುಡುಕುವಂತೆ ಮಾಡಿತು. ಆ ವೇಳೆಗೆ ಯುಪಿಐ ಈಗಾಗಲೇ ಜಾರಿಯಲ್ಲಿದ್ದರೂ, ಸರ್ಕಾರದ ಪ್ರೋತ್ಸಾಹವು ಇದನ್ನು ಸಾರ್ವಜನಿಕ ಗಮನಕ್ಕೆ ತರಲು ನೆರವಾಯಿತು. ಆದರೆ, ನಂತರದ ವರ್ಷಗಳಲ್ಲಿ ಯುಪಿಐ ಬೆಳೆದ ವೇಗವನ್ನು ಕೇವಲ ಅಪನಗದೀಕರಣಕ್ಕೆ ಮಾತ್ರ ಆರೋಪಿಸಲು ಸಾಧ್ಯವಿಲ್ಲ. ಯುಪಿಐನ ಸರಳ ಬಳಕೆ, ಅಂತರ-ಚಾಲನೀಯತೆ, ಸ್ಮಾರ್ಟ್ಫೋನ್ ಮತ್ತು ಇಂಟರ್ನೆಟ್ ಸೌಲಭ್ಯದ ವಿಸ್ತರಣೆ ಹಾಗೂ ಬ್ಯಾಂಕುಗಳ ಭಾಗವಹಿಸುವಿಕೆಯೇ ಇದರ ನಿರಂತರ ಬೆಳವಣಿಗೆಗೆ ಕಾರಣವಾಗಿದೆ.
ಮುಂದಿನ ದಶಕದ ಹಾದಿ
ಎರಡನೇ ದಶಕಕ್ಕೆ ಕಾಲಿಡುತ್ತಿರುವ ಯುಪಿಐಗೆ, ರಿಯಲ್-ಟೈಮ್ ಡಿಜಿಟಲ್ ಪಾವತಿಯು ಬೃಹತ್ ಪ್ರಮಾಣದಲ್ಲಿ ಕೆಲಸ ಮಾಡುತ್ತದೆ ಎಂದು ಸಾಬೀತುಪಡಿಸುವ ಸವಾಲು ಈಗಿಲ್ಲ. ಬದಲಿಗೆ, ಈ ವ್ಯವಸ್ಥೆಯನ್ನು ಇನ್ನಷ್ಟು ಸುರಕ್ಷಿತ, ಸರ್ವವ್ಯಾಪಿ ಮತ್ತು ಉಪಯುಕ್ತವಾಗಿಸುವುದು ಮುಂದಿರುವ ಮುಖ್ಯ ಸವಾಲಾಗಿದೆ.
ಮುಂದಿನ ಹಂತದಲ್ಲಿ ಹೆಚ್ಚಿನ ಬಳಕೆದಾರರು ಮತ್ತು ವ್ಯಾಪಾರಿಗಳನ್ನು ಈ ಜಾಲಕ್ಕೆ ತರುವುದು, ಸೈಬರ್ ಭದ್ರತೆ, ವಂಚನೆ ತಡೆಗಟ್ಟುವಿಕೆ ಹಾಗೂ ಡಿಜಿಟಲ್ ಆರ್ಥಿಕತೆಯಿಂದ ಹೊರಗಿರುವವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವುದಕ್ಕೆ ಗಮನ ಹರಿಸಲಾಗುವುದು ಎಂದು ಸರ್ಕಾರ ಸೂಚಿಸಿದೆ.
ಬೃಹತ್ ಬದಲಾವಣೆಯ ದಶಕ
ಆರಂಭಗೊಂಡು ಹತ್ತು ವರ್ಷಗಳ ನಂತರ, ಅಂಕಿಅಂಶಗಳು ಒಂದು ಅದ್ಭುತ ಕಥೆಯನ್ನು ಹೇಳುತ್ತವೆ. ವಾರ್ಷಿಕ 1.78 ಕೋಟಿಯಿಂದ 24,162 ಕೋಟಿಗೂ ಹೆಚ್ಚು ವಹಿವಾಟುಗಳು; 0.07 ಲಕ್ಷ ಕೋಟಿಯಿಂದ ಸುಮಾರು 314 ಲಕ್ಷ ಕೋಟಿ ರೂಪಾಯಿ ವಹಿವಾಟು ಮೌಲ್ಯ; ಮತ್ತು 44 ರಿಂದ 740 ಕ್ಕೂ ಹೆಚ್ಚು ಭಾಗವಹಿಸುವ ಬ್ಯಾಂಕುಗಳು—ಹೀಗೆ ಯುಪಿಐ ಬೆಳೆದ ವೇಗವನ್ನು ಜಗತ್ತಿನ ಅತ್ಯಲ್ಪ ಹಣಕಾಸು ಪ್ಲಾಟ್ಫಾರ್ಮ್ಗಳು ಮಾತ್ರ ಸಾಧಿಸಿವೆ.
ಜುಲೈ 2026 ರಲ್ಲಿ ಒಂದೇ ತಿಂಗಳಲ್ಲಿ 29.9 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,366 ಕೋಟಿ ವಹಿವಾಟುಗಳನ್ನು ನಡೆಸಿರುವುದು ಈ ವ್ಯವಸ್ಥೆಯ ಬೃಹತ್ ಸಾಮರ್ಥ್ಯಕ್ಕೆ ಮತ್ತೊಂದು ಸಾಕ್ಷಿಯಾಗಿದೆ.
ಆದರೆ, ಇದಕ್ಕಿಂತಲೂ ದೊಡ್ಡ ಬದಲಾವಣೆಯು ಸಣ್ಣ ಅಂಗಡಿಯ ಮುಂದಿರುವ ಕ್ಯೂಆರ್ ಕೋಡ್ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಹತ್ತು ವರ್ಷಗಳ ಹಿಂದೆ ಡಿಜಿಟಲ್ ಪಾವತಿಯು ಭಾರತದ ಸಣ್ಣ ವ್ಯಾಪಾರಿಗೆ ತಲುಪಲು ಸಾಧ್ಯವೇ ಎಂಬ ಪ್ರಶ್ನೆಯಿತ್ತು. ಇಂದು, ರಸ್ತೆಬದಿಯ ಸಾಮಾನ್ಯ ಅಂಗಡಿಯಲ್ಲೂ ಗ್ರಾಹಕನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ತಕ್ಷಣ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಬಲ್ಲನು. ಈ ದೈನಂದಿನ ಅನುಕೂಲವೇ ಯುಪಿಐ ಅನ್ನು ಕೇವಲ ತಾಂತ್ರಿಕ ಸಾಧನೆಯಾಗಿ ಉಳಿಸದೆ, ಭಾರತದ ಪಾವತಿ ಶೈಲಿ ಮತ್ತು ಜಾಗತಿಕ ಡಿಜಿಟಲ್ ಪಾವತಿ ಚಿಂತನೆಯನ್ನೇ ಬದಲಾಯಿಸಿದ ರಾಷ್ಟ್ರೀಯ ಮೂಲಸೌಕರ್ಯವನ್ನಾಗಿ ಮಾಡಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
