ಕೆಲವರಿಗೆ ತಮ್ಮೆದುರು ಇರುವವರು ಏನನ್ನು ಸಾಧಿಸಿದರೂ ಸಹಿಸಲಾರದಷ್ಟು ಅಸಹನೆ. “ಅದೇನು ಮಹ ಬಿಡೋ ಮಾರಾಯ! ಏನು ಸಾಧಿಸಬಾರದ್ದು ಸಾಧಿಸಿದ್ದಾನೆ” ಎಂಬ ಬೇಗುದಿ. ಅವರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಿ ಅವರ ವ್ಯಕ್ತಿತ್ವಕ್ಕೆ ಕುಂದು ತರುವ ತಂತ್ರಗಾರಿಕೆ ಮಾಡುತ್ತಲೇ ಇರುತ್ತಾರೆ. ಖಂಡಿತ ಇದು ಒಳ್ಳೆಯ ಲಕ್ಷಣವಲ್ಲ. ತಪ್ಪು ಮಾಡಿದಾಗ ತಿದ್ದಿ ಹೇಳುವ, ಸಾಧಿಸಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಗುಣ ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತದೆ. ಅದನ್ನು ಬಿಟ್ಟು ಸದಾ ಹೊಟ್ಟೆಕಿಚ್ಚು ಪಡುತ್ತಿದ್ದರೆ ನಿಮಗೆ ಹಾನಿ. ಬಸವಣ್ಣನವರು ತಮ್ಮದೊಂದು ವಚನದಲ್ಲಿ ಹೀಗೆ ಹೇಳಿದ್ದಾರೆ “ಮನೆಯೊಳಗಣ ಕಿಚ್ಚು ಮನೆಯ ಸುಡುವುದಲ್ಲದೆ, ನೆರೆಮನೆಯ ಸುಡುವುದೇ ಕೂಡಲಸಂಗಮದೇವ” ಅಂತ. ನಿಜ ಅಲ್ವಾ? “ಹೊಟ್ಟೆಕಿಚ್ಚು ಎಂಬುದು ನಾವು ವಿಷ ಕುಡಿದು, ಬೇರೆಯವರು ಸಾಯಲಿ ಎಂದು ಕಾಯುತ್ತಾ ಕೂರುವ ಕೆಟ್ಟ ಗುಣ”.
ಸಣ್ಣ ಮನಸ್ಸು, ಸಣ್ಣ ಆಲೋಚನೆಗಳು ನಿಮ್ಮನ್ನು ಸಣ್ಣವರನ್ನಾಗಿ ಮಾಡಿಬಿಡುತ್ತವೆ. ಸಾಧಿಸಿದವನು ಆತ. ಇದರಿಂದ ನೀವ್ಯಾಕೆ ನೊಂದುಕೊಳ್ಳಬೇಕು? ಆ ಸಾಧನೆಗೆ ಆತನೆಷ್ಟು ಪರಿಶ್ರಮಿಸಿದ್ದಾನೋ? ಯಾರಿಗೆ ಗೊತ್ತು. ಅದನ್ನೆಲ್ಲ ಅರಿಯದ ನೀವು ಆತನನ್ನು ಹೀಯಾಳಿಸಿದರೆ ಅಥವಾ ಮೆಚ್ಚದೇ ಹೋದರೆ ಅದು ನಿಮಗೆ ನಷ್ಟವೇ ಹೊರತು ಸಾಧಕನಿಗಲ್ಲ.
ಹಾಗಾಗಿ ಇತರರನ್ನು, ಅವರ ಸತ್ಕಾರ್ಯಗಳನ್ನು, ಒಳ್ಳೆಯತನವನ್ನು ಯಾವುದೇ ಪೂರ್ವಗ್ರಹವಿಲ್ಲದೆ ಮೆಚ್ಚುವುದನ್ನು ಕಲಿಯಿರಿ. ಇದರಿಂದ ಅವರಿಗೆ ಪ್ರೇರಣೆ ದೊರಕುತ್ತದೆ. ಮತ್ತಷ್ಟು ಸಾಧಿಸಲು ಅನುವಾಗುತ್ತದೆ. ಇಂತಹ ಮನೋಭಾವನೆಗಳಿಂದ ಆರೋಗ್ಯಪೂರ್ಣ ವಾತಾವರಣ ನಿರ್ಮಾಣವಾಗುತ್ತದೆ.
ಹೀಗೆ ಮುಕ್ತವಾಗಿ ಇತರರ ಒಳ್ಳೆಯತನವನ್ನು ಮೆಚ್ಚುವುದರಿಂದ ನಿಮ್ಮ ಮನಸ್ಸು ಸದಾ ಸಕಾರಾತ್ಮಕವಾಗಿರುತ್ತದೆ. ನಿಮ್ಮ ವ್ಯಕ್ತಿತ್ವಕ್ಕೂ ಮೆರುಗು ನೀಡುತ್ತದೆ. ನೀವೇನಾದರೂ ಉನ್ನತಾಧಿಕಾರಿ ಅಥವಾ ಉನ್ನತ ಸ್ಥಾನದಲ್ಲಿದ್ದರೆ, ನಿಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುವವರನ್ನು ಆತ್ಮೀಯವಾಗಿ ಕಾಣಿ. ತಪ್ಪು ಮಾಡಿದಾಗ, ತಪ್ಪು ಮಾಡಿದವರಿಗೆ ನೇರವಾಗಿ ತಿಳಿಸಿ ತಿದ್ದುವ ಪ್ರಯತ್ನ ಮಾಡಿ. ಅವರಲ್ಲಿನ ಚಿಕ್ಕಪುಟ್ಟ ಸುಧಾರಣೆಗಳನ್ನು ಮುಕ್ತವಾಗಿ ಅಭಿನಂದಿಸಿ, ಪ್ರಶಂಸಿಸಿ. ಯಾವುದೇ ಕಾರಣಕ್ಕೂ ಗುಣಕ್ಕೆ ಮತ್ಸರ ಬೇಡ.
“ಪರನಿಂದೆ ಪರಮಪಾಪ” ಎಂಬುದನ್ನು ತಿಳಿಯಿರಿ.ಮತ್ತೊಬ್ಬರ ಖುಷಿಯಲ್ಲಿ ನಿಮ್ಮ ಖುಷಿಯನ್ನು ಕಾಣಿ.ಯಾರಿಗೆ ಗೊತ್ತು ನಿಮ್ಮ ನಿಷ್ಕಲ್ಮಶ ನಗು, ಪ್ರೀತಿಯ ಮಾತು ನಿಮ್ಮೆದುರಿನವರ ಎಷ್ಟೋ ನೋವುಗಳಿಗೆ ಮದ್ದಾದೀತು.
ಮೆಚ್ಚಬೇಕೆಂಬ ಭರದಲ್ಲಿ ಎಲ್ಲವನ್ನು ಮೆಚ್ಚಬೇಡಿ. ನಮಗ್ಯಾಕೆ ಬೇಕಪ್ಪ ಅಂತ ಸುಖಾ ಸುಮ್ಮನೆ ಇಂದ್ರ ಚಂದ್ರ ಅಂತ ಹೊಗಳಬೇಡಿ. ಹೀಗೆ ಮಾಡಿದಲ್ಲಿ ನೀವು ಜೊಳ್ಳು ಎಂಬುದು ಸಾಬೀತಾಗಿಬಿಡುತ್ತದೆ.
ನಿಮ್ಮ ಒಳ್ಳೆಯ ಕೆಲಸಗಳನ್ನು ಯಾರೂ ಮೆಚ್ಚದೆ ಹೋದಾಗ ನಿಮಗೂ ನಿರಾಶೆಯಾಗುತ್ತದೆ ಅಲ್ವಾ?ಯಾಕಂದ್ರೆ ನೀವು ಕೂಡ ಮನುಷ್ಯರೇ ಅಲ್ವಾ? ಅಂತಯೇ ನಿಮ್ಮ ಎದುರಿಗೆ ಇರುವವರಿಗೂ ಆಗುತ್ತದೆ ಎಂಬ ಸತ್ಯ ತಿಳಿದಿರಲಿ. ಅದಕ್ಕೆಂದೆ ಸರ್ವಜ್ಞ ಕವಿ ಹೇಳಿದ ಮಾತು ಹೀಗಿದೆ. “ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ”……ನಿಜ ಅಲ್ವಾ?
“ಬೇರೆಯವರು ಒಳಿತು ಮಾಡಿದಾಗ ನಾಲ್ಕು ಒಳ್ಳೆಯ ಮಾತಾಡು. ನೀನು ಸಾಧಿಸಿದಾಗ ಸುಮ್ಮನಿದ್ದುಬಿಡು” ಅಂತ ಬುದ್ಧ ಭಗವಾನರು ಹೇಳಿದ ಮಾತು ಎಂತಹ ಅಮೂಲ್ಯವಾದದ್ದಲ್ವಾ?
- ಶೇಖರಯ್ಯ ಟಿ.ಎಚ್.ಎಂ.ಗೆದ್ದಲಗಟ್ಟೆ., ಕೂಡ್ಲಿಗಿ, ವಿಜಯನಗರ ಜಿಲ್ಲೆ- 583135
- ಮೊ. ಸಂಖ್ಯೆ. 9164241520
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
