ಶರಣ ಶಿರಸಿಗಿ (ಕಲಬುರಗಿ): ಇಲ್ಲಿನ ಗ್ರಾಮೀಣ ಕ್ರೀಡಾ ವಸತಿ ಶಾಲೆಯಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಶ್ರದ್ಧೆ ಮತ್ತು ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳೇ ಮುನ್ನೆಡೆಸಿದ ಈ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.
ಊರಿನ ಹಿರಿಯರು ಹಾಗೂ ಅತಿಥಿಗಳ ಸಮ್ಮುಖದಲ್ಲಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಹಿರಿಯರು ಹಾಗೂ ಹಲವು ವಿದ್ಯಾರ್ಥಿಗಳು ಡಾ. ರಾಧಾಕೃಷ್ಣನ್ ಅವರ ಸರಳತೆ, ಜ್ಞಾನ ತಪಸ್ಸು ಮತ್ತು ಜೀವನ ಚರಿತ್ರೆಯ ಕುರಿತು ಪ್ರಭಾವಿ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಅಂಬಾರಾಯ ಹಂಗರಗಿ ಹಾಗೂ ಶ್ರೀ ಶಾಂತಕುಮಾರ್ ಜಮದಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿ. ಎನ್. ಬಾಬಳಗಾಂವ ಅವರು ಮಾತನಾಡಿ, “ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ಕಲ್ಪಿಸುವ ಶಿಲ್ಪಿಗಳು. ತಾಯಿ, ತಂದೆ ಮತ್ತು ಗುರು ಮಕ್ಕಳಿಗೆ ನೈತಿಕ ಸಂಸ್ಕಾರ ನೀಡುವ ಪ್ರತ್ಯಕ್ಷ ದೇವರುಗಳು. ಎಷ್ಟೇ ದೊಡ್ಡ ಅಧಿಕಾರಿಯಾದರೂ ಅವರಿಗೆ ಮೂಲ ಅಡಿಪಾಯ ಹಾಕಿಕೊಟ್ಟವರು ಶಿಕ್ಷಕರೇ. ಆದ್ದರಿಂದ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು” ಎಂದು ಹೇಳಿದರು. ಮುಂದುವರಿದು, ಡಾ. ರಾಧಾಕೃಷ್ಣನ್ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಾಲ್ಯದಲ್ಲೇ ಉತ್ತಮ ಮೌಲ್ಯಗಳನ್ನು ಕಲಿತು, ಶಿಕ್ಷಕರು ತೋರಿದ ಹಾದಿಯಲ್ಲಿ ನಡೆದು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ಹಾರೈಸಿದರು.

ಸಂಪೂರ್ಣ ಕಾರ್ಯಕ್ರಮದ ಯೋಜನೆಯನ್ನು ವಿದ್ಯಾರ್ಥಿಗಳೇ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ವಿಶೇಷವಾಗಿತ್ತು. 4ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಆರೋಹಿ ಸ್ವಾಗತ ಭಾಷಣ ಮಾಡಿದರು. 8ನೇ ತರಗತಿಯ ವಿದ್ಯಾರ್ಥಿನಿ ಅಂಕಿತಾ ಕಾರ್ಯಕ್ರಮವನ್ನು ನಿರರ್ಗಳವಾಗಿ ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು. ಶಾಲೆಯ ಸಕಲ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಸಮಸ್ತ ವಿದ್ಯಾರ್ಥಿಗಳು ಈ ಆಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
