‘ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ’ ಎಂಬ ನುಡಿಯಂತೆ ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಪರಮೋಚ್ಚ ಸ್ಥಾನವಿದೆ. ಸೆಪ್ಟೆಂಬರ್ 5 ಎಂದಾಕ್ಷಣ ನಮಗೆ ತಕ್ಷಣ ನೆನಪಾಗುವುದು ಭಾರತ ರತ್ನ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಪವಿತ್ರ ಸ್ಮರಣೆ. ಅದ್ಭುತ ತತ್ವಜ್ಞಾನಿ, ಆದರ್ಶ ಶಿಕ್ಷಕ ಹಾಗೂ ದೇಶದ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಈ ಮಹಾನ್ ದೇಶಭಕ್ತರು, ತಮ್ಮ ಜನ್ಮದಿನವನ್ನು ವೈಯಕ್ತಿಕ ಆಚರಣೆಗೆ ಬಳಸಿಕೊಳ್ಳದೆ ‘ಶಿಕ್ಷಕರ ದಿನಾಚರಣೆ’ಯಾಗಿ ಆಚರಿಸಲು ಕರೆ ನೀಡಿದರು. ಹೀಗಾಗಿ, ಈ ದಿನವು ಕೇವಲ ಸಂಭ್ರಮದ ದಿನವಲ್ಲ; ಪ್ರತಿಯೊಬ್ಬ ಶಿಕ್ಷಕನೂ ತನ್ನ ಕರ್ತವ್ಯ, ಬಲಹೀನತೆ ಹಾಗೂ ಇಚ್ಛಾಶಕ್ತಿಯನ್ನು ಆತ್ಮಾವಲೋಕನ ಮಾಡಿಕೊಳ್ಳುವ ಪವಿತ್ರ ಸಂದರ್ಭ.
ನಮ್ಮ ದೇಶದಲ್ಲಿ ಆಚಾರ್ಯ ಚಾಣಕ್ಯ, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ, ಸ್ವಾಮಿ ವಿವೇಕಾನಂದ, ರವೀಂದ್ರನಾಥ ಟ್ಯಾಗೋರ್, ಶ್ರೀನಿವಾಸ ರಾಮಾನುಜನ್ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಂತಹ ಅನೇಕ ಮಹನೀಯರು ಶಿಕ್ಷಣ ಕ್ಷೇತ್ರಕ್ಕೆ ಅಪ್ರತಿಮ ಕೊಡುಗೆ ನೀಡಿದ್ದಾರೆ. ಡಾ. ರಾಧಾಕೃಷ್ಣನ್ ಅವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಹುದ್ದೆಯನ್ನು ತೊರೆದು ರಾಯಭಾರಿಯಾಗಲು ಹಿಂಜರಿದಿದ್ದ ಹಿನ್ನೆಲೆಯಲ್ಲಿ ಅವರ ಬೋಧನಾ ಪ್ರೀತಿ ಎದ್ದು ಕಾಣುತ್ತದೆ. ಹಾಗೆಯೇ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದರೂ ತಮ್ಮ ಕೊನೆಯುಸಿರಿನವರೆಗೂ ಬೋಧನೆ ಮತ್ತು ಬರಹದಲ್ಲೇ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದರು.
ಆದರೆ, ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಕ್ಷೇತ್ರವು ಕಲುಷಿತಗೊಳ್ಳುತ್ತಿರುವುದು ದುರದೃಷ್ಟಕರ. ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ವಿಚಾರವಂತಿಕೆ ಹಾಗೂ ನೈತಿಕ ಮೌಲ್ಯಗಳು ಕ್ಷೀಣಿಸುತ್ತಿವೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯದ ಘಟನೆಗಳು ‘ವಿಶ್ವಗುರು’ ಎನಿಸಿಕೊಂಡಿದ್ದ ನಮ್ಮ ದೇಶದ ಗುರುಸ್ಥಾನಕ್ಕೆ ಕಳಂಕ ತರುತ್ತಿವೆ. ವಿದ್ಯೆ ಎಂಬುದು ಕೇವಲ ಅಂಕಗಳಿಕೆಯಾಗದೆ, ವ್ಯಕ್ತಿತ್ವ ನಿರ್ಮಾಣ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವಂತಿರಬೇಕು.
ಇಂದಿನ ಪೋಷಕರು ಸಹ ಅಂಕಗಳ ಸ್ಪರ್ಧೆಗೆ ಬಿದ್ದು ಮಕ್ಕಳನ್ನು ಯಾಂತ್ರಿಕವಾಗಿ ಮಾಡುತ್ತಿದ್ದಾರೆ. ಉತ್ತಮ ಅಂಕಗಳ ಆಸೆಯಿಂದ ಮಕ್ಕಳನ್ನು ಕುಟುಂಬದ ಮಮತೆಯಿಂದ ದೂರವಿಟ್ಟು ವಸತಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದರಿಂದ ಮಕ್ಕಳು ಕೌಟುಂಬಿಕ ಪ್ರೀತಿಯಿಂದ ವಂಚಿತರಾಗಿ ಆತ್ಮಶೂನ್ಯರಾಗುತ್ತಿದ್ದಾರೆ. ಜಾಗತೀಕರಣದ ಈ ಯುಗದಲ್ಲಿ ತಂತ್ರಜ್ಞಾನ ಬೆಳೆದಿದ್ದರೂ, ಮಕ್ಕಳ ಹೆಗಲ ಮೇಲಿನ ಪುಸ್ತಕದ ಚೀಲದ ಹೊರೆ ಕಡಿಮೆಯಾಗಿಲ್ಲ (ಇತ್ತೀಚೆಗೆ ಸರ್ಕಾರ ಈ ಹೊರೆಯನ್ನು ಕಡಿಮೆ ಮಾಡಲು ಮುಂದಾಗಿರುವುದು ಸ್ತುತ್ಯಾರ್ಹ).
ಅಲ್ಲದೆ, ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಮೊಬೈಲ್, ಟ್ಯಾಬ್ಗಳನ್ನು ನೀಡುವುದು ಅಪಾಯಕಾರಿ. ಮೊಬೈಲ್ ಬಳಕೆಯ ಅತಿಯಾದ ವ್ಯಾಪಕತೆಯು ಮಕ್ಕಳ ಏಕಾಗ್ರತೆ ಹಾಗೂ ಸುರಕ್ಷತೆಯ ಮೇಲೆಯೂ ಪರಿಣಾಮ ಬೀರುತ್ತಿದೆ. 16 ರಿಂದ 25 ವರ್ಷದ ಯುವಜನತೆಗೆ ಸರಿಯಾದ ಮಾರ್ಗದರ್ಶನ ಸಿಗದಿದ್ದರೆ ಅವರು ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಆದ್ದರಿಂದ, ಶಿಕ್ಷಕರು ಮತ್ತು ಪೋಷಕರು ಕಣ್ಣಲ್ಲಿ ಕಣ್ಣಿಟ್ಟು ಅವರ ನಡೆನುಡಿಗಳನ್ನು ತಿದ್ದಬೇಕಿದೆ.
‘ಶಿಕ್ಷಕ’ ಎಂಬ ಮೂರಕ್ಷರದ ಅರ್ಥವೇ ಉನ್ನತವಾದದ್ದು:
ಶಿ – ಶಿವಸ್ವರೂಪಿ (ಮಂಗಳಕರ ಮನೋಭಾವ)
ಕ್ಷ – ಕ್ಷ-ಕಿರಣದಂತೆ (ವಿದ್ಯಾರ್ಥಿಯ ಕುಂದುಕೊರತೆಗಳನ್ನು ಪತ್ತೆಹಚ್ಚಿ ತಿದ್ದುವುದು)
ಕ – ಕರ್ಮಯೋಗಿ (ತಮ್ಮ ಜೀವಿತಾವಧಿಯ ಅತ್ಯುತ್ತಮ ಸಮಯವನ್ನು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಮೀಸಲಿಡುವುದು)
ಇಂದು ಫಿನ್ಲ್ಯಾಂಡ್ನಂತಹ ದೇಶಗಳು ನೈತಿಕ ಮತ್ತು ಪ್ರಾಯೋಗಿಕ ಶಿಕ್ಷಣಕ್ಕೆ ಆದ್ಯತೆ ನೀಡಿ ಜಗತ್ತಿನ ಗಮನ ಸೆಳೆದಿವೆ. ನಮ್ಮ ದೇಶದಲ್ಲೂ ಕೇವಲ ಪುಸ್ತಕದ ಬದನೇಕಾಯಿಯನ್ನು ಬೋಧಿಸದೆ, ಮಕ್ಕಳಿಗೆ ನೀತಿ ಕಥೆಗಳು ಹಾಗೂ ಆದರ್ಶ ವ್ಯಕ್ತಿಗಳ ಜೀವನವನ್ನು ಉದಾಹರಿಸುತ್ತಾ ಆತ್ಮವಿಶ್ವಾಸ ತುಂಬುವ ಶಿಕ್ಷಕರ ಅಗತ್ಯವಿದೆ. ವಿದ್ಯಾರ್ಥಿಯ ತಪ್ಪನ್ನು ತಿದ್ದಿ, ಪ್ರಶ್ನೆ ಕೇಳಲು ಪ್ರೋತ್ಸಾಹಿಸಿ, “ನೀನು ಸಾಧಿಸಬಲ್ಲೆ” ಎಂಬ ಆತ್ಮವಿಶ್ವಾಸ ಬಿತ್ತುವವನೇ ನಿಜವಾದ ಆದರ್ಶ ಶಿಕ್ಷಕ.
ಡಾ. ರಾಧಾಕೃಷ್ಣನ್ ಹಾಗೂ ಡಾ. ಕಲಾಂ ಅವರಂತಹ ಮಹನೀಯರಿಗೆ ಕೇವಲ ಪುಷ್ಪನಮನ ಸಲ್ಲಿಸಿದರೆ ಸಾಲದು; ಅವರ ತತ್ವ-ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಲವಲೇಶವಾದರೂ ಅಳವಡಿಸಿಕೊಂಡಾಗ ಮಾತ್ರ ಶಿಕ್ಷಕರ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ. ಭಾವಿ ಸಮಾಜದ ಶಿಲ್ಪಿಗಳಾದ ಶಿಕ್ಷಕ ವೃಂದಕ್ಕೆ ಮತ್ತು ಗುರುಸಮಾನರಿಗೆ ಶಿರಸಾ ಸಾಷ್ಟಾಂಗ ಪ್ರಣಾಮಗಳು.
- ಪದ್ಮಾಮೂರ್ತಿ, ಅಧ್ಯಾಪಕಿ
ಲಕ್ಷ್ಮೀಪುರ, ಅರಸೀಕೆರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
