ಜಗತ್ತಿನಾದ್ಯಂತ ಹಲವಾರು ದೇಶಗಳಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಕೆಲವು ಸಂಘಟನೆಗಳು ಆಡಳಿತ ಸರ್ಕಾರಗಳನ್ನು ಪದಚ್ಯುತಗೊಳಿಸಲು, ಕೆಲವು ಧರ್ಮದ ಹೆಸರಿನಲ್ಲಿ ಜನರನ್ನು ಹತ್ಯೆ ಮಾಡಲು, ಇನ್ನು ಕೆಲವು ದೇಶ ವಿಭಜನೆಗೆ ಅಥವಾ ಆರ್ಥಿಕ ಲಾಭಕ್ಕಾಗಿ ವಿಶ್ವಾದ್ಯಂತ ಅಶಾಂತಿ ಸೃಷ್ಟಿಸುತ್ತಿವೆ.
ಇಸ್ರೇಲ್ ವಿರುದ್ಧ ಹಿಜ್ಬುಲ್ಲಾ, ಭಾರತದ ವಿರುದ್ಧ ಜೈಷ್-ಎ-ಮೊಹಮ್ಮದ್ ಹಾಗೂ ಲಷ್ಕರ್-ಎ-ತೈಬಾ, ಮತ್ತು ಯೆಮೆನ್ ದೇಶದ ಹೌತಿಗಳು ವಿವಿಧ ರಾಷ್ಟ್ರಗಳ ವಿರುದ್ಧ ವಿದ್ವಂಸಕ ಕೃತ್ಯಗಳಲ್ಲಿ ತೊಡಗಿವೆ. ಇವುಗಳಲ್ಲಿ ಹಿಜ್ಬುಲ್ಲಾ ಮತ್ತು ಹೌತಿ ಸಂಘಟನೆಗಳು ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡುವಲ್ಲಿ ಮುಂಚೂಣಿಯಲ್ಲಿವೆ. ಜಗತ್ತಿಗೆ ಇಂಧನ ಪೂರೈಕೆ ಮಾಡುವ ಪ್ರಮುಖ ಜಲಸಂಧಿಗಳ ಮೇಲೆ ಹಿಡಿತ ಸಾಧಿಸಿ, ಇಂಧನ ಉತ್ಪಾದನಾ ಕೇಂದ್ರಗಳನ್ನು ದ್ವಂಸ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಅಮೆರಿಕ, ಇಸ್ರೇಲ್ ಮತ್ತು ಸೌದಿ ಅರೇಬಿಯಾದಂತಹ ಬಲಾಢ್ಯ ದೇಶಗಳಿಗೂ ಸಹ ಈ ಉಗ್ರರನ್ನು ಸಂಪೂರ್ಣವಾಗಿ ನಿಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ವಿಪರ್ಯಾಸ.
ಆದರೆ, ಇತಿಹಾಸವನ್ನು ಗಮನಿಸಿದರೆ ಶ್ರೀಲಂಕಾದಂತಹ ಪುಟ್ಟ ದೇಶದ ಸಾಧನೆ ಅಚ್ಚರಿ ಮೂಡಿಸುತ್ತದೆ. 20ನೇ ಶತಮಾನದ ಅತ್ಯಂತ ಕ್ರೂರ ಭಯೋತ್ಪಾದಕ ಸಂಘಟನೆಯಾದ ಎಲ್.ಟಿ.ಟಿ.ಇ. (LTTE), ಶ್ರೀಲಂಕಾವನ್ನು ಒಡೆದು ತಮಿಳರಿಗಾಗಿ ಪ್ರತ್ಯೇಕ ದೇಶದ ಬೇಡಿಕೆಯಿಟ್ಟು ಹೋರಾಡಿತ್ತು. ಜಗತ್ತಿನಾದ್ಯಂತ ನೆಲೆಸಿರುವ ತಮಿಳರಿಂದ ಧನಸಹಾಯ ಪಡೆದಿದ್ದ ಈ ಸಂಘಟನೆ, ಸ್ವಂತ ಯುದ್ಧ ಟ್ಯಾಂಕ್ಗಳು, ವಿಮಾನಗಳು ಮತ್ತು ಆತ್ಮಹತ್ಯಾ ದಳವನ್ನು ಹೊಂದಿತ್ತು. ಅಷ್ಟೇ ಅಲ್ಲದೆ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಪ್ರಧಾನಿಯನ್ನೇ ಬಲಿಪಡೆದ ಜಾಗತಿಕ ಮಟ್ಟದ ಪ್ರಭಾವಿ ಸಂಘಟನೆಯಾಗಿತ್ತು.
ಆದಾಗ್ಯೂ, ಶ್ರೀಲಂಕಾ ಸರ್ಕಾರ ಮತ್ತು ಅಲ್ಲಿನ ಜನರು ಯಾರ ಸಹಾಯವನ್ನೂ ಅಪೇಕ್ಷಿಸದೆ, ಕಠಿಣ ನಿರ್ಧಾರ ಕೈಗೊಂಡು 2009ರಲ್ಲಿ ಎಲ್.ಟಿ.ಟಿ.ಇ.ಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದರು. ಶ್ರೀಲಂಕಾದಂತಹ ಪುಟ್ಟ ಮತ್ತು ಆರ್ಥಿಕವಾಗಿ ಹಿಂದುಳಿದ ದೇಶಕ್ಕೆ ಇದು ಸಾಧ್ಯವಾಗಿದ್ದಲ್ಲಿ, ಇಂದು ಅಮೆರಿಕ ಮತ್ತು ಇಸ್ರೇಲ್ನಂತಹ ಮಹಾಶಕ್ತಿಗಳಿಗೆ ಹಿಜ್ಬುಲ್ಲಾ ಮತ್ತು ಹೌತಿಗಳಂತಹ ಸಂಗ್ರಟನೆಗಳನ್ನು ಮಟ್ಟಹಾಕಲು ಏಕೆ ಸಾಧ್ಯವಾಗುತ್ತಿಲ್ಲ?
ಮನಸ್ಸು ಮಾಡಿದರೆ ಅಮೆರಿಕ ತನ್ನಲ್ಲಿರುವ ಅತ್ಯಂತ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಕ್ಷಣಮಾತ್ರದಲ್ಲಿ ಈ ಸಂಘಟನೆಗಳನ್ನು ನಾಶಪಡಿಸಬಲ್ಲದು. ಆದರೆ, ಹೀಗಾಗದಿರಲು ಅಸಲಿ ಕಾರಣ ಬೇರೆ ಇದೆ. ಬೃಹತ್ ಇಂಧನ ಕಂಪನಿಗಳನ್ನು ನಿರ್ಮಿಸುವ ಬಿಲ್ಡರ್ಗಳು, ಕಮಾಡಿಟಿ ಮಾರುಕಟ್ಟೆಯಲ್ಲಿ ಇಂಧನ ವ್ಯವಹಾರ ನಡೆಸುವ ದಲ್ಲಾಳಿಗಳು ಮತ್ತು ಅಂತರರಾಷ್ಟ್ರೀಯ ಷೇರು ಮಾರುಕಟ್ಟೆಯನ್ನು ನಿಯಂತ್ರಿಸುವ ದೊಡ್ಡ ಹೆಡ್ಜ್ ಫಂಡ್ ಮ್ಯಾನೇಜರ್ಗಳೇ ಇದರ ಹಿಂದಿನ ಪ್ರಮುಖ ಶಕ್ತಿಗಳು.
ಪ್ರತಿ ಬಾರಿ ಯುದ್ಧ ಅಥವಾ ದಾಳಿಗಳು ನಡೆದಾಗ ಅಥವಾ ನಿಂತಾಗ, ಮಾರುಕಟ್ಟೆಯಲ್ಲಿ ಉಂಟಾಗುವ ಇಂಧನ ದರಗಳ ಏರಿಳಿತದಿಂದ ಭಾರಿ ಲಾಭ ಗಳಿಸುವುದೇ ಇವರ ಗುಪ್ತ ಅಜೆಂಡಾ. ಈ ಬಂಡವಾಳಶಾಹಿ ಹಿತಾಸಕ್ತಿಗಳಿಗೆ ಪ್ರಭಾವಿ ಸರ್ಕಾರಗಳ ಪರೋಕ್ಷ ಬೆಂಬಲವೂ ಇರುವಂತೆ ಕಾಣುತ್ತಿರುವುದು ಇಂದಿನ ಜಾಗತಿಕ ವ್ಯವಸ್ಥೆಯ ದುರಂತ.
- ಶಂಭುಲಿಂಗಪ್ಪ, ದಾವಣಗೆರೆ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
