ಚಂಡೀಗಢ: ಹರಿಯಾಣದಲ್ಲಿ ಐಐಎಲ್ಎಂ ವಿಶ್ವವಿದ್ಯಾಲಯ (IILM University) ಮತ್ತು ಬನ್ಯನ್ ಟ್ರೀ ಸ್ಕೂಲ್ ಜಂಟಿಯಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಭಾಗವಹಿಸಿ, 10ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ. ಭಾಗವತ್, “ಹಳೆಯ ಪೀಳಿಗೆಯವರಿಗಿಂತ ಹೊಸ ಪೀಳಿಗೆಯವರು ಹೆಚ್ಚು ಪ್ರಾಮಾಣಿಕರಾಗಿದ್ದಾರೆ ಮತ್ತು ಅವರಲ್ಲಿ ಸ್ವಾಭಾವಿಕವಾಗಿ ಹೆಚ್ಚಿನ ಧೈರ್ಯವಿದೆ ಎಂಬುದು ನನ್ನ ವೈಯಕ್ತಿಕ ಅನುಭವವಾಗಿದೆ” ಎಂದರು. ಬ್ರೈನ್ ಡ್ರೈನ್ (ಪ್ರತಿಭಾವಂತರು ವಿದೇಶಗಳಿಗೆ ವಲಸೆ ಹೋಗುವ ವಿಚಾರ) ಕುರಿತು ವಿದ್ಯಾರ್ಥಿಗಳಿಗೆ ಕರೆ ನೀಡುತ್ತಾ, “ನಿಮಗೆ ವಿದೇಶದಲ್ಲಿ ಎಲ್ಲವೂ ಸಿಗಬಹುದು, ಆದರೆ ನಿಮ್ಮ ಅಸ್ತಿತ್ವವಿರುವುದು ನಿಮ್ಮ ದೇಶದಿಂದ. ನೀವು ನಿಮ್ಮ ದೇಶದಿಂದ ಬಹಳಷ್ಟನ್ನು ಪಡೆದಿದ್ದೀರಿ. ಭಾರತದ ಅನ್ನ ಮತ್ತು ನೀಲಿನಿಂದಲೇ ನಮ್ಮ ದೇಹಕ್ಕೆ ಶಕ್ತಿ ಬಂದಿದೆ. ದೇಹಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ನಿಮ್ಮ ಬಳಿ ಇಟ್ಟುಕೊಂಡು, ಉಳಿದದ್ದನ್ನು ಸಮಾಜಕ್ಕೆ ಮತ್ತು ದೇಶಕ್ಕೆ ಸಮರ್ಪಿಸಿ” ಎಂದರು.
ಶಿಕ್ಷಣದ ಉದ್ದೇಶ ಕೇವಲ ವೃತ್ತಿಜೀವನವನ್ನು ರೂಪಿಸಿಕೊಳ್ಳುವುದಲ್ಲ, ಶಿಕ್ಷಣದ ಮೂಲ ಉದ್ದೇಶ ಮನುಷ್ಯನನ್ನು ನಿರ್ಮಿಸುವುದಾಗಿದೆ (Man-making). ಯಾವುದು ಮನುಷ್ಯನನ್ನು ಪ್ರಾಣಿಯಿಂದ ಪ್ರತ್ಯೇಕಿಸುತ್ತದೋ ಅದೇ ಶಿಕ್ಷಣ. ಮನುಷ್ಯನ ನಿರ್ಮಾಣದ ಮೂಲಕ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.
ಒಂದು ಉದಾಹರಣೆಯನ್ನು ನೀಡುತ್ತಾ, “ಇತ್ತೀಚಿನ ‘ಹನುಮಾನ್ ಅಂಶ’ ಚಲನಚಿತ್ರದಲ್ಲಿ ‘ನೀಬ್ ಕರೋರಿ ಬಾಬಾ’ ಅವರ ಪ್ರಸ್ತಾಪವಿದೆ. ‘ಸ್ಟೀವ್ ಜಾಬ್ಸ್’ ಕೂಡ ಅವರನ್ನು ಭೇಟಿ ಮಾಡಲು ಹೋಗಿದ್ದರು. ಸ್ವಾಮಿ ವಿವೇಕಾನಂದರ ಗುರುಗಳಾದ ರಾಮಕೃಷ್ಣ ಪರಮಹಂಸರಿಗೂ ಔಪಚಾರಿಕ ಶಿಕ್ಷಣವಿರಲಿಲ್ಲ. ಭಾರತದಲ್ಲಿ ಇಂತಹ ಅನೇಕ ಸಂತರಿಗೆ ಸಾಂಪ್ರದಾಯಿಕ ಶಿಕ್ಷಣವಿರಲಿಲ್ಲವಾದರೂ, ಅವರ ಮಾನವೀಯತೆಯ ಮಟ್ಟವು ಬಹಳ ಉನ್ನತವಾಗಿದ್ದರಿಂದ ಅವರು ಸಮಾಜದ ‘ನಾಯಕರಾದರು’. ಆದ್ದರಿಂದ, ಇಂದಿನ ಆಧುನಿಕ ಶಿಕ್ಷಣದ ಜೊತೆಗೆ ಮಾನವೀಯತೆಯ ಗುಣಗಳನ್ನು ಹೆಚ್ಚಿಸುವ ಶಿಕ್ಷಣದ ಅವಶ್ಯಕತೆಯೂ ಇದೆ” ಎಂದು ತಿಳಿಸಿದರು.
ಭಾರತವು ಜಗತ್ತಿನ ಕೇವಲ ಒಂದು ಮಿಲಿಟರಿ ಅಥವಾ ಆರ್ಥಿಕ ಮಹಾಶಕ್ತಿಯಾಗಬೇಕಾಗಿಲ್ಲ. ಭಾರತವು ಮರುಸ್ಥಾಪನೆಗೊಳ್ಳಬೇಕಾಗಿರುವುದು ‘ವಿಶ್ವಗುರು’ ಎಂಬ ಸಿಂಹಾಸನದ ಮೇಲೆಯಾಗಿದೆ. ‘ಮಾನವೀಯತೆಯ ಜ್ಞಾನ’ವೇ ಭಾರತದ ಅಸ್ತಿತ್ವವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಪ್ರಸ್ತಾವನೆಯನ್ನು ಐಐಎಲ್ಎಂ (IILM) ಅಧ್ಯಕ್ಷರಾದ ಅನಿಲ್ ರೈ ಅವರು ಮಂಡಿಸಿದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
