ಜವಾಹರ್ ನವೋದಯ ವಿದ್ಯಾಲಯಗಳನ್ನು (ಜೆಎನ್ವಿ) ಸ್ಥಾಪಿಸಲು ತಮಿಳುನಾಡಿನ ಪ್ರತಿಯೊಂದು ಜಿಲ್ಲೆಯಲ್ಲೂ ಜಮೀನು ಗುರುತಿಸಲು ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಮೂರು ತಿಂಗಳಾವಕಾಶ ನೀಡಿದೆ. ಅಲ್ಲದೆ, ಭಾಷಾ ನೀತಿಯ ಕುರಿತಾದ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಕೋರಿದೆ.
ಚೆನ್ನೈ: ಡಿಎಂಕೆ (DMK) ಸರ್ಕಾರದಂತೆ, ಜೋಸೆಫ್ ಸಿ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರವೂ ಸಹ ತಮಿಳುನಾಡಿನಲ್ಲಿ ಜವಾಹರ್ ನವೋದಯ ವಿದ್ಯಾಲಯಗಳ (JNVs) ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಿಂದ ಪ್ರಶ್ನೆಗಳನ್ನು ಎದುರಿಸಬೇಕಾಗಿ ಬಂದಿದೆ.
ಸೆಪ್ಟೆಂಬರ್ 17 ರಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಅಗಸ್ಟೀನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ಪೀಠವು, ತಮಿಳುನಾಡಿನ ಪ್ರತಿಯೊಂದು ಜಿಲ್ಲೆಯಲ್ಲೂ ಜವಾಹರ್ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಲು ಜಮೀನು ಗುರುತಿಸಲು ಕಟ್ಟುನಿಟ್ಟಾದ ಮೂರು ತಿಂಗಳ ಗಡುವು ನೀಡಿದೆ. ಇದರೊಂದಿಗೆ ಹಿಂದಿ ಕುರಿತ ತನ್ನ ನಿಲುವನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ತಮಿಳುನಾಡು ನೆಲದಲ್ಲಿ ಹಿಂದಿಯನ್ನು ಹೊರಗಿಡಲು ಸಾಧ್ಯವಿಲ್ಲ ಎಂದು ತಿಳಿಸಿರುವ ಕೋರ್ಟ್, ರಾಜ್ಯದಲ್ಲಿ ಜೆಎನ್ವಿಗಳನ್ನು ತೆರೆಯುವ ವಿಚಾರದಲ್ಲಿ ತನ್ನ ನಿಲುವನ್ನು ಮರುಪರಿಶೀಲಿಸುವಂತೆ ಟಿವಿಕೆ ಸರ್ಕಾರವನ್ನು ಕೋರಿದೆ.
ಪ್ರತಿಯೊಂದು ಜಿಲ್ಲೆಯಲ್ಲೂ ನವೋದಯ ಶಾಲೆಗಳನ್ನು ಸ್ಥಾಪಿಸುವ ನಿರ್ದೇಶನಗಳನ್ನು ವಿರೋಧಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವ ವೇಳೆ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠವು, “ನೀವು (ತಮಿಳುನಾಡು) ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು, ತಮಿಳುನಾಡು ನೆಲದಲ್ಲಿ ಹಿಂದಿಯನ್ನು ಬೋಧಿಸಲಾಗುವುದಿಲ್ಲ ಎಂಬುದು ಸರಿಯಲ್ಲ” ಎಂದು ಹೇಳಿದೆ. ಪ್ರತಿ ಜಿಲ್ಲೆಯಲ್ಲಿ ಜೆಎನ್ವಿಗಳಿಗೆ ಅಗತ್ಯವಿರುವ ಜಮೀನನ್ನು ಗುರುತಿಸುವಂತೆ ಡಿಸೆಂಬರ್ 15, 2025 ರಂದು ನೀಡಿದ್ದ ಆದೇಶವನ್ನು ಪಾಲಿಸಲು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಮೂರು ತಿಂಗಳಾವಕಾಶ ನೀಡಿದೆ. ಈ ನಿರ್ದೇಶನಗಳು ನಂತರ ಹೊರಡಿಸಲಿರುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತವೆ. ಈ ಮಧ್ಯೆ, ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಒಟ್ಟಾಗಿ ಕುಳಿತು ತಮಿಳುನಾಡಿನಲ್ಲಿ ಜೆಎನ್ವಿಗಳನ್ನು ಸ್ಥಾಪಿಸುವ ವಿವರಗಳು ಮತ್ತು ನೀತಿಯನ್ನು ರೂಪಿಸಿಕೊಳ್ಳಬೇಕು ಎಂದು ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿ ನಾಗರತ್ನ ಅವರು, “ಚೆನ್ನೈನಲ್ಲಿರುವ ಜನರು ದೆಹಲಿಯನ್ನು ದೂರವಿಡಬಾರದು ಮತ್ತು ದೆಹಲಿಯೂ ಹಾಗೆಯೇ ಮಾಡಬಾರದು” ಎಂದರು. ಜೆಎನ್ವಿಗಳನ್ನು ಪ್ರಾರಂಭಿಸುವುದರಿಂದ ತಮಿಳುನಾಡಿನ ಅಸ್ತಿತ್ವದಲ್ಲಿರುವ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಕಡಿಮೆ ಮಾಡದೆ ಹೆಚ್ಚುವರಿ ಗುಣಮಟ್ಟದ ಶೈಕ್ಷಣಿಕ ಅವಕಾಶಗಳು ದೊರೆಯಲಿವೆ ಎಂದು ಪೀಠ ತಿಳಿಸಿದೆ.
“ನಾವು ನಿಮ್ಮನ್ನು ಪರಕೀಯರಂತೆ ಕಾಣುತ್ತಿಲ್ಲ ಮತ್ತು ನಾವು ಅವರನ್ನು ಪರಕೀಯರಂತೆ ಕಾಣುತ್ತಿಲ್ಲ. ನಿಮ್ಮ ರಾಜ್ಯದಲ್ಲೂ ಕೆಲವು ಹೊಸ ಮಾದರಿಯ ಶಾಲೆಗಳು ಬಂದರೆ, ಅದು ನಮಗೆ ತಿಳಿದಿರುವ ಉನ್ನತ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವುದೇ ಹೊರತು, ನಿಮ್ಮ ಗುಣಮಟ್ಟವನ್ನು ಕಡಿಮೆ ಮಾಡುವುದಿಲ್ಲ. ಒಂದು ವೇಳೆ ನವೋದಯ ಶಾಲೆಗಳು ತಮಿಳುನಾಡಿನ ಶಿಕ್ಷಣದ ಗುಣಮಟ್ಟವನ್ನು ಕುಂಠಿತಗೊಳಿಸುತ್ತವೆ ಎಂದಿದ್ದರೆ, ನೀವು ಏನೇ ಹೇಳಿರಲಿ ನಾವು ಅದನ್ನು ನೇರವಾಗಿ ಹೇಳುತ್ತಿದ್ದೆವು. ಆದರೆ ಇಲ್ಲಿ ಆ ಸ್ಥಿತಿಯಿಲ್ಲ. ಇದು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ… ಅಂತಿಮವಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು” ಎಂದು ನ್ಯಾಯಮೂರ್ತಿಗಳು ಹೇಳಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚರ್ಚೆಗಳಲ್ಲಿ ತೊಡಗುವಂತೆ ನ್ಯಾಯಾಲಯ ಒತ್ತಾಯಿಸಿತು.
ತಮಿಳುನಾಡು ಸರ್ಕಾರದ ಪರ ವಾದ ಮಂಡಿಸಿದ ವಕೀಲ ಜೈದೀಪ್ ಗುಪ್ತಾ, ದೇಶಾದ್ಯಂತ ಜೆಎನ್ವಿಗಳು ಅಸ್ತಿತ್ವದಲ್ಲಿವೆ ಎಂದು ತಿಳಿಸಿದರು. ಆದಾಗ್ಯೂ, ಈ ನೀತಿಯು ರಾಜ್ಯದ ಶೈಕ್ಷಣಿಕ ನೀತಿಗಳಿಗೆ ವಿರುದ್ಧವಾಗಿರುವುದರಿಂದ ತಮಿಳುನಾಡು ಸರ್ಕಾರವು ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ. ನವೋದಯ ಶಾಲೆಗಳಲ್ಲಿ ಹಿಂದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ, ಆದರೆ ತಮಿಳಿಗೆ ಹಿನ್ನೆಲೆಗೆ ತಳ್ಳಲಾಗುತ್ತದೆ. ಶಿಕ್ಷಣ ಕ್ಷೇತ್ರಕ್ಕಾಗಿ ತಮಿಳುನಾಡಿಗೆ ಬರಬೇಕಿದ್ದ 5,000 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದರು.
“ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನವೋದಯ ಶಾಲೆಗಳಿಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ನೀತಿಯನ್ನು ಒಪ್ಪಿಕೊಳ್ಳುವಂತೆ ರಾಜ್ಯದ ಮೇಲೆ ಒತ್ತಡ ಹೇರಬಾರದು. ಈ ನೀತಿಯೇ ಸ್ವತಃ, ಇದರ ಸ್ವೀಕಾರವು ಐಚ್ಛಿಕವಾಗಿದೆ ಮತ್ತು ರಾಜ್ಯ ಸರ್ಕಾರದ ಇಚ್ಛಾಶಕ್ತಿಯನ್ನು ಅವಲಂಬಿಸಿದೆ ಎಂದು ಹೇಳುತ್ತದೆ” ಎಂದು ಅವರು ವಾದಿಸಿದರು.
ವಕೀಲರು ಮುಂದುವರಿಸಿ, “ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿರುವ (Concurrent List) ವಿಷಯವಾಗಿದೆ. ನವೋದಯ ಎನ್ನುವುದು ಒಂದು ಐಚ್ಛಿಕ ನೀತಿಯಾಗಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಈಗ ಕೇಂದ್ರದ ಆ ಐಚ್ಛಿಕ ನೀತಿಯನ್ನು ಅಳವಡಿಸಿಕೊಳ್ಳುವಂತೆ ರಾಜ್ಯಕ್ಕೆ ಮ್ಯಾಂಡಮಸ್ (ನಿರ್ದೇಶನ) ಜಾರಿಗೊಳಿಸಿದರೆ, ನನ್ನ ಪ್ರಭುಗಳೇ, ಈ ಕೋರ್ಟ್ ಕಳೆದ 75 ವರ್ಷಗಳಿಂದ ಕೈಗೊಂಡಿರುವ ನಿರ್ಧಾರಗಳನ್ನು ತಲೆಕೆಳಗೆ ಮಾಡಿದಂತಾಗುತ್ತದೆ. ನಿಮಗೆ ತಮಿಳು ಭಾಷೆಯು ಎರಡನೇ ಭಾಷೆಯಾಗಬೇಕಿದ್ದರೆ, ಅದನ್ನು ಪರಿಗಣಿಸಬಹುದಾದ ವಿಷಯವಾಗಿದೆ” ಎಂದರು.
ಇದಕ್ಕೆ ಉತ್ತರಿಸಿದ ಪೀಠ, “ನವೋದಯ ಶಾಲೆಗಳಿಗೆ ಜಮೀನು ಗುರುತಿಸುವಲ್ಲಿ ನಿಮಗೆ ಯಾವ ತೊಂದರೆಯಿದೆ? ಕೇಂದ್ರ ಸರ್ಕಾರದಿಂದ ನಿಮಗೆ ಹೆಚ್ಚುವರಿ ಶಾಲೆಗಳು ಸಿಗುತ್ತಿವೆ. ಹೀಗಿರುವಾಗ ಅವುಗಳನ್ನು ವಿರೋಧಿಸುವ ಅಗತ್ಯವೇನಿದೆ? ಇದು ಒಕ್ಕೂಟ ವ್ಯವಸ್ಥೆಗೆ (federal structure) ವಿರುದ್ಧವಾಗಿದೆ. ಪ್ರತ್ಯೇಕ ರಾಜ್ಯಗಳೇ ತಾವಾಗಿ ಕೇಂದ್ರ ಸರ್ಕಾರ ಪರಿಚಯಿಸಿದ ನೀತಿಯನ್ನು ಒಪ್ಪುವುದಿಲ್ಲ ಎಂದೇ ಹೇಳುವುದಾದರೆ, ನಮ್ಮ ಒಕ್ಕೂಟ ವ್ಯವಸ್ಥೆಯ ಗತಿಯೇನು?” ಎಂದು ಪ್ರಶ್ನಿಸಿತು.
ನ್ಯಾಯಮೂರ್ತಿ ನಾಗರತ್ನ ಅವರು, “ಸರ್ಕಾರ ಬದಲಾದಾಕ್ಷಣ ಏನೂ ಬದಲಾಗುವುದಿಲ್ಲ. ಶಿಕ್ಷಣ ಎನ್ನುವುದು ಸ್ಥಿರವಾದದ್ದು. ಅದು ಯಾವುದೇ ಸರ್ಕಾರದ ಇಷ್ಟ-ಅನಿಷ್ಟಗಳನ್ನು ಅವಲಂಬಿಸಿಲ್ಲ. ಇಂದು ನವೋದಯದ ವಿಷಯ, ಆದರೆ ಆಡಳಿತದ ಇತರ ಕ್ಷೇತ್ರಗಳಲ್ಲೂ ಇದೇ ಮುನ್ನೆಡೆಯನ್ನು ಅನುಸರಿಸಿದರೆ ನಮ್ಮ ದೇಶದ ಗತಿಯೇನು? ‘ನಾನು ರಾಷ್ಟ್ರೀಯ ಕೈಗಾರಿಕಾ ನೀತಿಯನ್ನು ಅಥವಾ ರಾಷ್ಟ್ರೀಯ ಹಣಕಾಸು ನೀತಿಯನ್ನು ಅನುಮತಿಸುವುದಿಲ್ಲ’ ಎಂದು ನಿಮಗೆ ಹೇಳಲು ಸಾಧ್ಯವಿಲ್ಲ” ಎಂದರು.
ಸುಪ್ರೀಂ ಕೋರ್ಟ್ ಪೀಠವು, “ತಮಿಳು ನೆಲದಲ್ಲಿ ಬೇರೆ ಯಾವುದೇ ಭಾಷೆಯನ್ನು ಬೋಧಿಸಬಾರದು ಎಂಬ ಕಠಿಣ ಮನಸ್ಥಿತಿಯನ್ನು ನೀವು ತಳೆದಿದ್ದೀರಿ. ಶಿಕ್ಷಣದಿಂದ ವಂಚಿತರಾದ ಅಸಂಖ್ಯಾತ ಮಕ್ಕಳಿದ್ದಾರೆ. ಇತರ ರಾಜ್ಯಗಳಲ್ಲಿ ಅನೇಕ ಗ್ರಾಮೀಣ ವಿದ್ಯಾರ್ಥಿಗಳು ನವೋದಯ ಶಾಲೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ” ಎಂದು ತಿಳಿಸಿತು.
ಮುಂದುವರಿದು, “ಇದು ಎಲ್ಲಾ ರಾಜ್ಯಗಳನ್ನು ಒಳಗೊಂಡಿರುವ ಒಂದು ರಾಷ್ಟ್ರವಾಗಿದೆ. ಪ್ರತ್ಯೇಕ ದೇಶಗಳಂತೆ ಪ್ರತ್ಯೇಕ ರಾಜ್ಯಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಭಾಷೆಯ ಸಮಸ್ಯೆಯ ಕುರಿತು ನೀವು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ತಮಿಳುನಾಡು ಸರ್ಕಾರ ಏಕೆ ಇಷ್ಟು ಕಠಿಣ ನಿಲುವು ತಾಳಿದೆ?” ಎಂದು ಕೋರ್ಟ್ ಪ್ರಶ್ನಿಸಿತು.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಮಾತನಾಡಿ, “ಈ ಯೋಜನೆಯಡಿಯಲ್ಲಿ ರಾಜ್ಯದಿಂದ ಇರಬೇಕಾದ ಏಕೈಕ ಅಗತ್ಯತೆಯೆಂದರೆ ಜಮೀನು ಒದಗಿಸುವುದು ಮಾತ್ರ. ನಿರ್ಮಾಣ ಮತ್ತು ಇತರ ಅಗತ್ಯತೆಗಳು ಸೇರಿದಂತೆ ಉಳಿದ ಎಲ್ಲಾ ವೆಚ್ಷಗಳನ್ನು ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ” ಎಂದರು.
ಹಿಂದಿನ ಡಿಎಂಕೆ ಸರ್ಕಾರದ ನಿಲುವಿನಂತೆ, ಪ್ರಸ್ತುತ ಟಿವಿಕೆ ಸರ್ಕಾರವೂ ಸಹ ಜೆಎನ್ವಿಗಳನ್ನು ವಿರೋಧಿಸುತ್ತಿದ್ದು, ಇವು ರಾಜ್ಯದ ದ್ವಿಭಾಷಾ ಸೂತ್ರಕ್ಕೆ ಮೂಲಭೂತವಾಗಿ ವಿರುದ್ಧವಾಗಿವೆ ಎಂದು ಹೇಳುತ್ತಿದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಡಿಎಂಕೆ ಸರ್ಕಾರವು ಅಫಿಡವಿಟ್ ಸಲ್ಲಿಸಿ, ತ್ರಿಭಾಷಾ ಸೂತ್ರವನ್ನು ಆಧರಿಸಿದ ಜೆಎನ್ವಿ ಯೋಜನೆಯು ‘ತಮಿಳುನಾಡು ತಮಿಳು ಕಲಿಕೆ ಕಾಯ್ದೆ-2006’ (Tamil Nadu Tamil Learning Act, 2006) ರ ಆದೇಶದಿಂದ ವಿಮುಖವಾಗಿದೆ ಮತ್ತು ಈ ಯೋಜನೆಯು ಹಿಂದಿಯನ್ನು ಕಡ್ಡಾಯಗೊಳಿಸುವ ಹಿಂದಿನ ಬಾಗಿಲಿನ ತಂತ್ರವಾಗಿದೆ ಎಂದು ವಾದಿಸಿತ್ತು.
ಈ ವಿವಾದದ ಮೂಲವು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠದಲ್ಲಿ ‘ಕುಮಾರಿ ಮಹಾಸಭಾ’ ಸಲ್ಲಿಸಿದ್ದ ಅರ್ಜಿಯಲ್ಲಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಜೆಎನ್ವಿಗಳನ್ನು ಸ್ಥಾಪಿಸುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಆ ಅರ್ಜಿ ಕೋರಿತ್ತು. ನವೋದಯ ಶಾಲೆಗಳು ತಮಿಳುನಾಡು ತಮಿಳು ಕಲಿಕೆ ಕಾಯ್ದೆ-2006 ಅನ್ನು ಉಲ್ಲಂಘಿಸುವುದಿಲ್ಲ ಎಂದು ಗಮನಿಸಿದ ಮಧುರೈ ಪೀಠವು, ಪ್ರತಿ ಜಿಲ್ಲೆಯಲ್ಲಿ ಎರಡು ತಿಂಗಳೊಳಗೆ 240 ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವಸತಿ ಕಲ್ಪಿಸುವಂತೆ ಮತ್ತು ನವೋದಯ ಶಾಲೆಗಳನ್ನು ತೆರೆಯಲು ಅನುಮತಿ ನೀಡುವಂತೆ 2017ರ ಸೆಪ್ಟೆಂಬರ್ 11 ರಂದು ಆದೇಶಿಸಿತ್ತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
