ಬಾಲ ಗೋಕುಲ ಹಾಗೂ ಕೇರಳದ ಸಾಂಸ್ಕೃತಿಕ ಚಳವಳಿಗಳಿಗೆ ಮಾರ್ಗದರ್ಶನ ನೀಡಿದ್ದ ಪ್ರಚಾರಕರು
ಕೊಚ್ಚಿ: ಹಿರಿಯ ಆರ್ಎಸ್ಎಸ್ ಪ್ರಚಾರಕ ಮತ್ತು ಅನುಭವಿ ಸಾಂಸ್ಕೃತಿಕ ಕಾರ್ಯಕರ್ತರಾದ ಎಂ.ಎ. ಕೃಷ್ಣನ್, ಜನಪ್ರಿಯವಾಗಿ ‘ಎಂ.ಎ. ಸರ್’ ಎಂದೇ ಕರೆಯಲ್ಪಡುತ್ತಿದ್ದವರು, ಚಿಕಿತ್ಸೆ ಪಡೆಯುತ್ತಿದ್ದ ಎರ್ನಾಕುಲಂನ ಅಮೃತ ಆಸ್ಪತ್ರೆಯಲ್ಲಿ ತಮ್ಮ 97 ನೇ ವಯಸ್ಸಿನಲ್ಲಿ ನಿಧನರಾದರು.
ಎಂ.ಎ. ಸರ್ ಅವರು ಕೇರಳದಲ್ಲಿ ಬಾಲ ಗೋಕುಲಂ ಮತ್ತು ತಪಸ್ಯ ಕಲಾ ಸಾಹಿತ್ಯ ವೇದಿ ಸೇರಿದಂತೆ ಮಕ್ಕಳ ಕೇಂದ್ರಿತ ಹಾಗೂ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳ ಬೆಳವಣಿಗೆಯೊಂದಿಗೆ ನಿಕಟ ಒಡನಾಟ ಹೊಂದಿದ್ದರು. ಅಮೃತಭಾರತಿ, ಬಾಲ ಸಂಸ್ಕಾರ ಕೇಂದ್ರ, ಬಾಲ ಸಾಹಿತ್ಯ ಪ್ರಕಾಶನ, ಇಂಟರ್ನ್ಯಾಷನಲ್ ಶ್ರೀಕೃಷ್ಣ ಕೇಂದ್ರ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ಮೀಸಲಾದ ‘ಸಂರಕ್ಷಿಕಾ’ ಮುಂತಾದ ಉಪಕ್ರಮಗಳ ಕಲ್ಪನೆ ಮತ್ತು ಮಾರ್ಗದರ್ಶನದಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಆರಂಭಿಕ ಜೀವನ ಮತ್ತು ಆರ್ಎಸ್ಎಸ್ನೊಂದಿಗಿನ ಒಡನಾಟ:
1929 ರಲ್ಲಿ ಕೊಲ್ಲಂನ ಇವರ್ಕಲಾ ಗ್ರಾಮದಲ್ಲಿ ಜನಿಸಿದ ಎಂ.ಎ. ಕೃಷ್ಣನ್, ತಿರುವನಂತಪುರದ ಸಂಸ್ಕೃತ ಕಾಲೇಜಿನಲ್ಲಿ ತರ್ಕಶಾಸ್ತ್ರದಲ್ಲಿ (Logic) ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ತರುವಾಯ ಅವರು ಕೊಟ್ಟಾಯದ ವಾಜೂರ್ ಹೈಸ್ಕೂಲ್ನಲ್ಲಿ ಬೋಧನಾ ವೃತ್ತಿಯನ್ನು ಪ್ರಾರಂಭಿಸಿದರು.
ಈ ಅವಧಿಯಲ್ಲಿ ಅವರು ವಾಜೂರ್ ತೀರ್ಥಪಾದಾಶ್ರಮದ ಶ್ರೀ ವಿದ್ಯಾನಂದ ತೀರ್ಥಪಾದ ಸ್ವಾಮಿಗಳ ಬೋಧನೆಗಳ ಪ್ರಭಾವಕ್ಕೆ ಒಳಗಾದರು. ಅಲ್ಲದೆ, ಸ್ವಾಮಿ ಅಗಮಾನಂದರ ಸಂಪರ್ಕಕ್ಕೂ ಬಂದು ಸ್ವಾಮಿ ವಿವೇಕಾನಂದರ ಬೋಧನೆಗಳಿಂದ ಆಳವಾಗಿ ಪ್ರಭಾವಿತರಾದರು.
ಎಂ.ಎ. ಕೃಷ್ಣನ್ ಅವರು 1947 ರಲ್ಲಿ ಆರ್ಎಸ್ಎಸ್ ಶಾಖೆಯನ್ನು ಸೇರಿದರು ಮತ್ತು ತಮ್ಮ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ 1954 ರಲ್ಲಿ ಪೂರ್ಣಕಾಲಿಕ ಪ್ರಚಾರಕರಾದರು. ನಂತರ ಅವರು ಕೊಟ್ಟಾಯಂ, ಎರ್ನಾಕುಲಂ, ಆಲಪ್ಪುಳ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಸಂಘದ ಕಾರ್ಯಕ್ಕಾಗಿ ಶ್ರಮಿಸಿದರು.
‘ಕೇಸರಿ’ ಪತ್ರಿಕೆ ಮತ್ತು ಕೇರಳದ ಸಾಂಸ್ಕೃತಿಕ ವಲಯಕ್ಕೆ ಕೊಡುಗೆ:
1964 ರಲ್ಲಿ, ಎಂ.ಎ. ಕೃಷ್ಣನ್ ಅವರು ಕೋಝಿಕ್ಕೋಡ್ನಿಂದ ಪ್ರಕಟವಾಗುವ ‘ಕೇಸರಿ’ ಪತ್ರಿಕೆಯ ಸಂಪಾದಕರಾಗಿ ನೇತೃತ್ವ ವಹಿಸಿಕೊಂಡರು. 1990 ರವರೆಗೆ ಅದರ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ ಅವರು, ಮಲಯಾಳಂ ಮಾಧ್ಯಮಗಳು ಮತ್ತು ಕೇರಳದ ವಿಶಾಲ ಸಾಂಸ್ಕೃತಿಕ ರಂಗದಲ್ಲಿ ಪತ್ರಿಕೆಯ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅವರ ನೇತೃತ್ವದಲ್ಲಿ ‘ಕೇಸರಿ’ಯು ಕೇವಲ ಸ್ವಯಂಸೇವಕರಿಗೆ ಮಾತ್ರ ಸೀಮಿತವಾಗಿದ್ದ ಪ್ರಕಟಣೆಯಿಂದ, ವಿಶಾಲವಾದ ಸಾಂಸ್ಕೃತಿಕ ಓದುಗರನ್ನು ತಲುಪುವ ವಾರಪತ್ರಿಕೆಯಾಗಿ ರೂಪುಗೊಂಡಿತು. ಈ ಪತ್ರಿಕೆಯು ಕೇರಳದ ದೇವಾಲಯಗಳು, ಸಾಂಸ್ಕೃತಿಕ ಕೇಂದ್ರಗಳು, ಐತಿಹಾಸಿಕ ವ್ಯಕ್ತಿಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಕುರಿತು ಲೇಖನಗಳು ಹಾಗೂ ಕವನಗಳನ್ನು ಪ್ರಕಟಿಸಿತು.
ಈ ಅವಧಿಯಲ್ಲಿ ಎಂ.ಜಿ.ಎಸ್. ನಾರಾಯಣನ್ ಮತ್ತು ಕೆ.ಕೆ.ಎನ್. ಕುರುಪ್ ಸೇರಿದಂತೆ ಹಲವಾರು ಪ್ರಮುಖ ಇತಿಹಾಸಕಾರರು ಮತ್ತು ಲೇಖಕರು ‘ಕೇಸರಿ’ಗೆ ಲೇಖನಗಳನ್ನು ಬರೆದರು. ನಂತರದ ದಿನಗಳಲ್ಲಿ ಈ ವಾರಪತ್ರಿಕೆಯು ಕೇರಳದ ಸಾಂಸ್ಕೃತಿಕ ಹಾಗೂ ಬೌದ್ಧಿಕ ಜೀವನದ ಕುರಿತಾದ ಸಾರ್ವಜನಿಕ ಚರ್ಚೆಗಳ ಪ್ರಮುಖ ಭಾಗವಾಯಿತು.
ಎಂ.ಎ. ಸರ್ ಅವರ ಅಧಿಕಾರಾವಧಿಯಲ್ಲೇ ಬಾಲ ಗೋಕುಲಂ ಮತ್ತು ತಪಸ್ಯ ನಂತಹ ಉಪಕ್ರಮಗಳು ವೇಗ ಪಡೆದುಕೊಂಡವು. ಈ ಪ್ರಯತ್ನಗಳ ಮೂಲಕ ಅವರು ಕೇರಳದಲ್ಲಿ ವಿಶಾಲವಾದ ಸಾಂಸ್ಕೃತಿಕ ಮತ್ತು ಸಾಮಾಜಿಕ ತೊಡಗಿಸಿಕೊಳ್ಳುವಿಕೆಗೆ ಕೊಡುಗೆ ನೀಡಿದರು.
ಜನಸಂಘ ಸಮ್ಮೇಳನ ಮತ್ತು ತಳಿ ಚಳವಳಿಯ ಸಂದರ್ಭದಲ್ಲಿನ ಪಾತ್ರ
ಕೋಝಿಕ್ಕೋಡ್ನಲ್ಲಿ ನಡೆದ 1967 ರ ಜನಸಂಘ ರಾಷ್ಟ್ರೀಯ ಸಮ್ಮೇಳನದ ಸಂಘಟನಾತ್ಮಕ ವ್ಯವಸ್ಥೆಗಳಲ್ಲೂ ಎಂ.ಎ. ಕೃಷ್ಣನ್ ಅವರು ಭಾಗಿಯಾಗಿದ್ದರು. ಅವರು ‘ಶಕಲ್ಯನ್’ ಎಂಬ ಕಾವ್ಯನಾಮದಲ್ಲಿ ‘ಕೇಸರಿ’ಗಾಗಿ ಸಮ್ಮೇಳನದ ವರದಿಗಳನ್ನು ಬರೆಯುತ್ತಿದ್ದರು. ಇದೇ ಕಾವ್ಯನಾಮದಡಿಯಲ್ಲಿ ‘ಇದುಕೇಟ್ಟಲ್ಲೇ’ (ಇದನ್ನು ಕೇಳಿದ್ರಾ?) ಅಂಕಣವನ್ನೂ ಸಹ ಆರಂಭಿಸಲಾಗಿತ್ತು. ತರುವಾಯ ‘ಕೇಸರಿ’ಯು ದೀನ್ದಯಾಳ್ ಉಪಾಧ್ಯಾಯ ಅವರ ಚಿತ್ರವಿರುವ ವಿಶೇಷ ಸಂಚಿಕೆಯನ್ನು ಹೊರತಂದಿತು.
1968 ರಲ್ಲಿ, ತಳಿ ದೇವಸ್ಥಾನದ ಪೂಜಾ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಪ್ರಯತ್ನಗಳಲ್ಲಿ ಎಂ.ಎ. ಸರ್ ಕೂಡ ಸಕ್ರಿಯರಾಗಿದ್ದರು. ಈ ಅಭಿಯಾನವು ಕೋಝಿಕ್ಕೋಡ್ನ ಐತಿಹಾಸಿಕ ತಳಿ ದೇವಸ್ಥಾನದ ಆವರಣದ ಪುನರ್ಸ್ಥಾಪನೆ ಮತ್ತು ರಕ್ಷಣೆಗೆ ಕೇಂದ್ರೀಕೃತವಾಗಿತ್ತು.
ದೇವಾಲಯದ ಜೀರ್ಣೋದ್ಧಾರ ಸಮಸ್ಯೆಯ ಕುರಿತು ಅವರು ‘ಮಾತೃಭೂಮಿ’ಯ ಹಿರಿಯ ಮುಖಂಡ ವಿ.ಎಂ. ಕೊರತ್ ಅವರೊಂದಿಗೂ ಚರ್ಚೆ ನಡೆಸಿದ್ದರು ಹಾಗೂ ಕೆ. ಕೇಳಪ್ಪನ್ ಅವರ ಬೆಂಬಲವನ್ನು ಕೋರಿದ್ದರು. ಆ ಸ್ಥಳಕ್ಕೆ ಸಂಬಂಧಿಸಿದ ಸರ್ಕಾರದ ಹಸ್ತಕ್ಷೇಪ ಮತ್ತು ನಿರ್ಬಂಧಗಳ ನಂತರ, ಕೇಳಪ್ಪನ್ ಅವರು ಸತ್ಯಾಗ್ರಹವನ್ನು ಕೈಗೊಂಡಿದ್ದರು.
ಸಾಂಸ್ಕೃತಿಕ ಕಾರ್ಯಗಳಿಗೇ ಮೀಸಲಾದ ಜೀವನ:
ದಶಕಗಳ ಕಾಲ ಎಂ.ಎ. ಕೃಷ್ಣನ್ ಅವರು ಸಂಸ್ಕೃತಿ, ಸಾಹಿತ್ಯ, ಶಿಕ್ಷಣ, ಪರಂಪರೆ ಮತ್ತು ಮಕ್ಕಳ ಅಭಿವೃದ್ಧಿಯನ್ನು ಒಳಗೊಂಡ ವಿವಿಧ ಉಪಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಯುವ ಪೀಳಿಗೆಯನ್ನು ಭಾರತೀಯ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಬೆಸೆಯಲು ಶ್ರಮಿಸಿದ ಸಂಘಟನೆಗಳು ಮತ್ತು ಚಳವಳಿಗಳಿಗೆ ಅವರು ಮಾರ್ಗದರ್ಶಕರಾಗಿದ್ದರು.
ವಿಶೇಷವಾಗಿ ಮಕ್ಕಳನ್ನು ಸಾಂಸ್ಕೃತಿಕ ಆದರ್ಶಗಳು ಮತ್ತು ಸಂಪ್ರದಾಯಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಅವರು ಶ್ರಮಿಸಿದರು. ಮಲಯಾಳಂ ಮಾತನಾಡುವ ಮಕ್ಕಳಿಗೆ ‘ಉನ್ನಿಕಣ್ಣ’ನನ್ನು ಆದರ್ಶ ವ್ಯಕ್ತಿತ್ವವನ್ನಾಗಿ ಬಿಂಬಿಸುವ ಬಾಲ ಗೋಕುಲಂ ಮೂಲಕ ಅವರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಸಂಪಾದಕರಾಗಿ ಅಥವಾ ಆರ್ಎಸ್ಎಸ್ ಪ್ರಚಾರಕರಾಗಿ ಅವರು ಹೊಂದಿದ್ದ ಔಪಚಾರಿಕ ಜವಾಬ್ದಾರಿಗಳನ್ನೂ ಮೀರಿ ಎಂ.ಎ. ಸರ್ ಅವರ ಪ್ರಭಾವವಿತ್ತು. ಲೇಖಕರು, ಇತಿಹಾಸಕಾರರು, ಸಾಂಸ್ಕೃತಿಕ ಕಾರ್ಯಕರ್ತರು ಮತ್ತು ಸಾಮಾಜಿಕ ಸೇವಕರನ್ನು ಸಾಂಸ್ಕೃತಿಕ ಕಾರ್ಯಗಳಡಿ ಒಟ್ಟುಗೂಡಿಸುವ ಅವರ ಸಾಮರ್ಥ್ಯವನ್ನು ಅವರ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳು ಇಂದಿಗೂ ಸ್ಮರಿಸುತ್ತಾರೆ.
ತಮ್ಮ ಸಾಂಸ್ಕೃತಿಕ ಸಂಘಟನಾತ್ಮಕ ನಾಯಕತ್ವ, ಸಂಪಾದಕೀಯ ಕೆಲಸ ಮತ್ತು ಕೇರಳದ ಸಾಂಸ್ಕೃತಿಕ ರಂಗದೊಂದಿಗೆ ದೀರ್ಘಕಾಲದ ನಂಟಿನ ಮೂಲಕ ಎಂ.ಎ. ಕೃಷ್ಣನ್ ಅವರು ದಶಕಗಳ ಕಾಲ ರಾಜ್ಯದ ಸಾಂಸ್ಕೃತಿಕ ವಲಯದ ಮೇಲೆ ಅಳಿಸಲಾಗದ ಮುದ್ರೆಯನ್ನು ಒತ್ತಿಹೋಗಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
