- ಶಿಗ್ಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯೆ
- ಇನ್ನು ನಾಲ್ಕೈದು ದಿನದಲ್ಲೇ ಜಂಟಿ ಸಮಿತಿಯಿಂದ ಅಧ್ಯಯನ ಆರಂಭ
- ರೈತರು ಹೋರಾಟ ಬಿಟ್ಟು ಸಮಿತಿ ಕಾರ್ಯಕ್ಕೆ ಕೈಜೋಡಿಸಲು ಮನವಿ
- ರಾಜ್ಯದಲ್ಲಿ ಸಿಎಂ ಇಂದೇ ಘೋಷಿಸಲಿ SAP; ಕೇಂದ್ರ ಸಚಿವರ ಒತ್ತಾಯ
ಶಿಗ್ಗಾವಿ: ರೈತರು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ಸರ್ಕಾರ ಇವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಹಾಗಾಗಿ ಎರೆಡೇ ದಿನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಜಂಟಿ ಸಮಿತಿ ರಚಿಸಿದ್ದು, ನಾಲ್ಕೈದು ದಿನದಲ್ಲೇ ಅಧ್ಯಯನ ಆರಂಭಿಸಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಶಿಗ್ಗಾವಿಯಲ್ಲಿ ಶನಿವಾರ ಮಾದ್ಯಮದವರೊಂದಿಗೆ ಮಾತನಾಡಿದ ಸಚಿವರು, ರೈತರು ಹೋರಾಟದಿಂದ ಹಿಂದೆ ಸರಿಯಬೇಕು. ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ. ರೈತ ನಾಯಕರು ಮತ್ತೆ ಚರ್ಚೆಗೆ ಬಂದರೆ ಮಾತುಕತೆಗೆ ನಾವು ಸಿದ್ಧರಿದ್ದೇವೆ ಎಂದು ಸಂದೇಶ ನೀಡಿದರು.
ರೈತ ಹೋರಾಟದ ವೇಳೆ ಕೆಲವರು ಸಿಟ್ಟಿನಲ್ಲಿ ಏನೇನೋ ಮಾತನಾಡಿರಬಹುದು. ಆದರೆ, ಸಾರ್ವಜನಿಕ ಜೀವನದಲ್ಲಿ ಇದೆಲ್ಲ ಸಹಜ ಹಾಗಾಗಿ ಇದಕ್ಕೆಲ್ಲ ಬೇಸರಿಸಿಕೊಳ್ಳುವುದಿಲ್ಲ. ರೈತ ಪ್ರಮುಖರು ಐದಾರು ಜನ ಬಂದರೆ ಚರ್ಚೆಯಲ್ಲಿ ಗೊಂದಲ ಏರ್ಪಡದೆ ಸುಲಲಿತವಾಗುತ್ತದೆ. ಹಾಗಾಗಿ ರೈತ ಪ್ರಮುಖರು ಯಾವತ್ತೂ ಬಂದರೂ ಮಾತುಕತೆಗೆ ಕೇಂದ್ರ ಮತ್ತೆ ಸಿದ್ಧವಿದೆ ಎಂದು ಪುನರುಚ್ಚರಿಸಿದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವತ್ತೂ ರೈತರ ಪರವಿದೆ. ರೈತರು, ದುರ್ಬಲ ವರ್ಗದ ಪರ ಯಾವತ್ತೂ ಇದೆ. ರೈತರು ನಮ್ಮ ಆರ್ಥಿಕತೆಯ ಮೂಲವಾಗಿದ್ದು, ಅವರನ್ನು ಕಡೆಗಣಿಸುವ ಮಾತೇ ಇಲ್ಲ. ಕೇಂದ್ರ ಸರ್ಕಾರ ನೇಮಿಸಿದ ಪ್ರೊ.ರಮೇಶಚಂದ್ ಸಾರಥ್ಯದ ಸಮಿತಿ ಶೀಘ್ರದಲ್ಲೇ SAP ಸೇರಿದಂತೆ ಕಬ್ಬು ಬೆಳೆಗಾರರ ಸಮಸ್ಯೆ, ಬೇಡಿಕೆಗಳ ಬಗ್ಗೆ ಸಮಗ್ರ ಅವಲೋಕನ, ಅಧ್ಯಯನ ನಡೆಸಲಿದೆ ಎಂದರು.
ಸ್ವಾಮಿನಾಥನ್ ವರದಿ ಅನುಷ್ಠಾನ ಮಾಡಿದ್ದೇ ನಾವು: 2014ರ ನಂತರ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಎಂಎಸ್ಪಿ, ಬೆಂಬಲ ಬೆಲೆಗೆ ಖರೀದಿ ವೃದ್ಧಿಸಿದೆ. ಭತ್ತ ಮತ್ತು ಗೋದಿಯನ್ನು ರೈತರು ಬೆಳೆದಷ್ಟೂ ಖರೀದಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ ಸಚಿವರು, ಸ್ವಾಮಿನಾಥನ್ ವರದಿ ಅನುಷ್ಠಾನ ಮಾಡಿದ್ದೇ ಮೋದಿ ಅವರು ಎಂದು ಸ್ವತಃ ಸ್ವಾಮಿನಾಥನ್ ಅವರೇ ಟ್ವೀಟ್ ಮಾಡಿದ್ದಾರೆ ಎಂದರು.
ಸಿಎಂ ಇಂದೇ ಘೋಷಿಸಲಿ SAP: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು SAPಯನ್ನು ಇಂದೇ ಘೋಷಿಸಲಿ. ರಾಜ್ಯ ಸರ್ಕಾರಕ್ಕೆ 2025ರಲ್ಲಿಯೂ ಪತ್ರ ಬರೆದಿದ್ದೆ. ಈ ಬಾರಿಯೂ ಸಿಎಂಗೆ SAP ಜಾರಿಗೆ ಪತ್ರ ಬರೆದಿದ್ದೇನೆ ಮತ್ತು ಸಿಎಂ ಮೊನ್ನೆ ದೆಹಲಿಗೆ ಬಂದ ವೇಳೆ ಸಹ ಈ ಸಂಬಂಧ ಒತ್ತಾಯಿಸಿದ್ದೇನೆ. ಸಕ್ಕರೆ ಕಾರ್ಖಾನೆಗಳಲ್ಲಿ ರಿಕವರಿ, ತೂಕದ ವಂಚನೆ ತಡೆಗೆ ಕ್ರಮ ಕೈಗೊಳ್ಳುವಂತೆ ಸೌಹಾರ್ದಯುತ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು.
ಸಮಿತಿ ಕಾರ್ಯಕ್ಕೆ ಸ್ಪಂದಿಸಿ: ಭಾರತದ 10-11 ರಾಜ್ಯಗಳಲ್ಲಿ ಸಕ್ಕರೆ ಉತ್ಪಾದನೆಯಿದೆ. ಕೇಂದ್ರ ಸರ್ಕಾರ ಆ ಎಲ್ಲಾ ರಾಜ್ಯಗಳೊಂದಿಗೂ ಚರ್ಚಿಸಬೇಕಾಗುತ್ತದೆ. ಆದಾಗ್ಯೂ ಕರ್ನಾಟಕದ ರೈತರೊಂದಿಗೆ ಸಮಾಲೋಚನೆ ನಡೆಸಿದೆ ಎರಡೇ ದಿನದಲ್ಲಿ ಜಂಟಿ ಸಮಿತಿ ರಚಿಸಿ ಶೀಘ್ರ ಅಧ್ಯಯನ ನಡೆಸಿ ವರದಿ ಸಲ್ಲಿಕೆಗೆ ಸೂಚಿಸಲಾಗಿದೆ. ಅತ್ಯಂತ ಪರಿಣಿತ ಕೃಷಿ ತಜ್ಞರು, ಉನ್ನತ ಮಟ್ಟದ ವಿಷಯಜ್ಞಾನವುಳ್ಳವರನ್ನು ನೇಮಿಸಿದ್ದೇವೆ. ಈ ಸಮಿತಿ ಅಧ್ಯಯನಕ್ಕೆ ಸಿದ್ಧವಾಗಿದೆ. ರೈತರು ಹೋರಾಟ ಬಿಟ್ಟು ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಟಾರ್ಗೇಟ್ ಸಹಜ: ರಾಜಕೀಯದಲ್ಲಿ ಟಾರ್ಗೇಟ್, ಟೀಕೆ-ಟಿಪ್ಪಣಿಗಳು ಸಹಜವೇ. ಆದರೆ, ಯಾವತ್ತೂ ನಾನೂ ಸಾರ್ವಜನಿಕ ಜೀವನದಲ್ಲಿ ದ್ವೇಷ ಇಟ್ಟುಕೊಂಡಿಲ್ಲ. ರೈತರ ಹೋರಾಟದಲ್ಲೂ ಅಷ್ಟೇ. ಕೆಲವರು ನಿಂದಿಸುತ್ತಿರಬಹುದು. ಅದ್ಯಾವುದನ್ನೂ ಲೆಕ್ಕಿಸದೆ ನೈಜವಾಗಿ ರೈತರ ಸಮಸ್ಯೆಗೆ ಸ್ಪಂದಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಆಗಲೇ 60 ಸಕ್ಕರೆ ಕಾರ್ಖಾನೆಗಳು ಶುರುವಾಗಿವೆ. ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ ಎಲ್ಲೂ ಇಲ್ಲದ ಪ್ರತಿಭಟನೆ ಕರ್ನಾಟಕದಲ್ಲಿ ಮಾತ್ರ ನಡೆಯುತ್ತಿದೆ. ಆದರೂ ನಾವು ಸಹಾನುಭೂತಿಯಿಂದ ರೈತರ ಸಮಸ್ಯೆ ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ʼರೈತರಿಗೆ ಕಬ್ಬಿನ ಬೆಲೆ ಕಡಿಮೆಯಾಗಬಾರದು, ಗ್ರಾಹಕರಿಗೂ ಸಕ್ಕರೆ ಬೆಲೆ ಹೊರೆಯಾಗಬಾರದು. ಕಾರ್ಖಾನೆಗಳೂ ನಷ್ಟಕ್ಕೀಡಾಗಬಾರದುʼ ಇದನ್ನೆಲ್ಲಾ ಆಲೋಚಿಸಿಯೇ ಕೇಂದ್ರ ಸರ್ಕಾರ ದುಬಾರಿಯಾದರೂ ಸಕ್ಕರೆ ವಲಯದ ಎಥೆನಾಲ್ ಅನ್ನು ಹೆಚ್ಚು ಖರೀದಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.
1200 ಕೋಟಿ ಎಥೆನಾಲ್ ಖರೀದಿ: ಕೇಂದ್ರ ಸರ್ಕಾರ ಎಥೆನಾಲ್ ಖರೀದಿಯನ್ನು ಹೆಚ್ಚಿಸಿದೆ. 38 ಲಕ್ಷ ಲೀಟರ್ ಇದ್ದುದನ್ನು ಈಗ 1200 ಕೋಟಿ ಲೀಟರ್ಗೆ ಹೆಚ್ಚಿಸಿದೆ. ಕರ್ನಾಟಕದಿಂದಲೂ 165 ಕೋಟಿ ಲೀಟರ್ ಖರೀದಿಸುತ್ತಿದ್ದೇವೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಎಥೆನಾಲ್ ಹೆಚ್ಚಿನ ಉತ್ಪಾದನೆಯಿದೆ. ಆದರೆ, ಈ ಮೂರೂ ರಾಜ್ಯಗಳಿಂದಲೇ ಶೇ.100ರಷ್ಟು ಎಥೆನಾಲ್ ಖರೀದಿ ಅಸಾಧ್ಯ ಆದರೂ ಕರ್ನಾಟಕದಿಂದ ಹೆಚ್ಚಿನ ಪ್ರಮಾಣದ ಎಥೆನಾಲ್ ಖರೀದಿಸುವಂತೆ ತೈಲ ಕಂಪನಿಗಳಿಗೆ ಸೂಚಿಸಿದೆ ಎಂದರು.
ಏಳೆಂಟು ವರ್ಷದಿಂದ ಇಳಿದಿಲ್ಲ ಸಕ್ಕರೆ ಬೆಲೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ MSP ಜಾರಿಗೊಳಿಸಿದ ಮೇಲೆ ಸಕ್ಕರೆ ಕಾರ್ಖಾನೆಗಳು ಯಾವತ್ತೂ ₹31ಕ್ಕಿಂತ ಕಡಿಮೆ ದರಕ್ಕೆ ಸಕ್ಕರೆ ಮಾರಿದ್ದಲ್ಲಿ. ಕಳೆದ ಏಳೆಂಟು ವರ್ಷಗಳಿಂದಲೂ ಕನಿಷ್ಠ ಬೆಲೆಗಿಂತ ಕಡಿಮೆ ಹೋಗಲು ಬಿಟ್ಟಿಲ್ಲ. ನಿನ್ನೆ ರಾತ್ರಿಯೇ ₹50ಕ್ಕೆ ಸಕ್ಕರೆ ಮಾರಾಟವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ₹60 ದಾಟಿದೆ ಎಂದು ವಿವರಿಸಿದರು ಸಚಿವ ಪ್ರಲ್ಹಾದ ಜೋಶಿ.
ಕಬ್ಬು ಬೆಳೆಗಾರರು MSP ಹೆಚ್ಚಳ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ, MSPಗೂ ರೈತರಿಗೂ ಸಂಬಂಧವೇ ಇಲ್ಲ. MSP ಏನಿದ್ದರೂ ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದ್ದು, ಅವುಗಳ ಬಲವರ್ಧನೆಗೆ ಹಾಗೂ ನಷ್ಟ ತಡೆಗಾಗಿ ಅದಿದೆ ಎಂದು ಸ್ಪಷ್ಟಪಡಿಸಿದ ಸಚಿವರು, ಕೇಂದ್ರ ಸರ್ಕಾರ ಸಕ್ಕರೆ ವಿಷಯದಲ್ಲಿ ರೈತರು, ಸಕ್ಕರೆ ಕಾರ್ಖಾನೆಗಳು ಮತ್ತು ಗ್ರಾಹಕರನ್ನು ಪರಿಗಣಿಸಿಯೇ ಬೆಲೆ ಕಟ್ಟಬೇಕಾಗುತ್ತದೆ. ಯಾರಿಗೂ ನಷ್ಟವಾಗಲು ಬಿಡುವುದಿಲ್ಲ. ಎಲ್ಲರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು.
KPSC ಹಗರಣ; ತನಿಖೆ ನಡೆದರೆ ಸರ್ಕಾರವೇ ಪತನ
- ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ
- ಸ್ಟಿಂಗ್ ಆಪರೇಷನ್; SIT ತನಿಖೆ ನಡೆಸಿ
ಶಿಗ್ಗಾವಿ: KPSC ಹಗರಣ ಬಗ್ಗೆ SIT ಅಥವಾ ಕೋರ್ಟ್ ಮಾನಿಟರ್ ಮೂಲಕ ತನಿಖೆ ನಡೆದರೆ ಅನೇಕ ಮಂತ್ರಿಗಳು ಸಿಕ್ಕಿಕೊಳ್ಳುತ್ತಾರೆ. ರಾಜ್ಯ ಸರ್ಕಾರವೇ ಪತನವಾಗಬಹುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.
ಶಿಗ್ಗಾವಿಯಲ್ಲಿ ಶನಿವಾರ ಮಾದ್ಯಮದವರೊಂದಿಗೆ ಮಾತನಾಡಿದ ಸಚಿವರು, KPSC ಬಹು ದೊಡ್ಡ ಹಗರಣವಾಗಿದೆ. SIT ರಚಿಸಿ, ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಿ ಇಲ್ಲವೇ CBI ತನಿಖೆಗೆ ಕೊಡಿ ಎಂದು ಸಿಎಂಗೆ ಒತ್ತಾಯಿಸಿದರು
KPSC ಸಮಗ್ರ ತನಿಖೆ ಇವರಿಗೆ ಇಷ್ಟವಿಲ್ಲ. ಕಾರಣ ಅನೇಕ ಸಚಿವರು ಮನೆಗೆ ಹೋಗುವ ಆತಂಕ ಇವರದ್ದು. ಹಾಗಾಗಿ ಇದಕ್ಕೆ ರೆಡಿಯಿಲ್ಲ. ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಮರೆಮಾಚಲು ಸ್ಟಿಂಗ್ ಆಪರೇಷನ್ ಮುನ್ನಲೆಗೆ ತರುತ್ತಿದ್ದಾರೆ ಎಂದು ಆರೋಪಿಸಿದರು.
SIT ತನಿಖೆ ನಡೆಸಿ: ʼಸ್ಟಿಂಗ್ ಆಪರೇಷನ್ ಯಾರು ಮಾಡಿಸಿದ್ದಾರೆʼ ಎನ್ನುವ ಚರ್ಚೆ ನೈತಿಕತೆಯಲ್ಲ. ಆ ಬಗ್ಗೆ SIT ರಚಿಸಿ ತನಿಖೆ ನಡೆಸಿ. ಯಾರೇ ವಿಡಿಯೋ ಮಾಡಿರಲಿ ಅದು ಅಸಲಿ ಅಥವಾ ನಕಲಿಯೇ, AI ಸೃಷ್ಟಿಯದ್ದೇ ಎಂಬುದು ಗೊತ್ತಾಗಲಿ ಎಂದ ಸಚಿವರು, ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ನಂತಹ ಚರ್ಚೆ ನಿಜಕ್ಕೂ ತೀವ್ರ ಬೇಸರದ ಸಂಗತಿ ಎಂದು ವಿಷಾದಿಸಿದರು.
ರಾಜ್ಯ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ SAP ಕೊಡಲಾಗುತ್ತಿಲ್ಲ. ರೈತರಿಗೆ ಸಮರ್ಪಕ ಬರ ಪರಿಹಾರ ಕೊಡುತ್ತಿಲ್ಲ. ಚರ್ಚೆಗೆ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಅದನ್ನೆಲ್ಲಾ ಮರೆಮಾಚಲು, ಸರ್ಕಾರದ ಆಡಳಿತ ವೈಫಲ್ಯದ ಚರ್ಚೆ ಆಗಬಾರದೆಂದು ಹೀಗೆ ʼಸ್ಟಿಂಗ್ ಆಪರೇಷನ್ʼ ಚರ್ಚೆ ಹುಟ್ಟು ಹಾಕುತ್ತಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
