ನವರಾತ್ರಿಯ ದಿನಗಳಲ್ಲಿ ದೇವಿಯ ಸನ್ನಿಧಿಯಲ್ಲಿ ಸಾಲಾಗಿ ಬೆಳಗುವ ಹಣತೆಗಳು, ಮಲ್ಲಿಗೆ–ಕನಕಾಂಬರಿಯ ಪರಿಮಳ, ಕುಂಕುಮದ ಕೆಂಪು, ಮಂಗಳವಾದ್ಯದ ನಾದ, ದೇವಿಯ ನಾಮಸ್ಮರಣೆಯೊಂದಿಗೆ ಮಿಡಿಯುವ ಭಕ್ತರ ಕಂಠ. ಇವೆಲ್ಲದರ ನಡುವೆ ಅಮ್ಮನ ಮುಖವನ್ನು ನೋಡಿದಾಗ ಮನಸ್ಸಿಗೆ ಮೂಡುವ ಭಾವ ಒಂದೇ “ಅಮ್ಮಾ… ನೀನಿಲ್ಲದೆ ಈ ಜಗತ್ತಿಗೆ ಅರ್ಥವೇನು?”.
ಶಕ್ತಿಯ ಆರಾಧನೆಯ ಈ ಪವಿತ್ರ ಪರ್ವದಲ್ಲಿ ದೇವಿಯ ಅನೇಕ ರೂಪಗಳು ನಮ್ಮ ಮುಂದೆ ಬರುತ್ತವೆ. ಉಗ್ರರೂಪದಲ್ಲಿ ದುಷ್ಟ ಸಂಹಾರಿಣಿಯಾಗಿ, ಸೌಮ್ಯರೂಪದಲ್ಲಿ ಕರುಣಾಮಯಿಯಾಗಿ, ಜ್ಞಾನಸ್ವರೂಪದಲ್ಲಿ ವಿದ್ಯಾದಾಯಿನಿಯಾಗಿ, ಐಶ್ವರ್ಯದ ರೂಪದಲ್ಲಿ ಶ್ರೀಮಹಾಲಕ್ಷ್ಮಿಯಾಗಿ ಆದರೆ ಇವೆಲ್ಲದರ ನಡುವೆ ಅತ್ಯಂತ ಮಧುರವಾದ ಒಂದು ರೂಪವಿದೆ. ಆ ರೂಪವೇ ಬಾಲಾ ತ್ರಿಪುರಸುಂದರಿ.
“ಬಾಲಾರೂಪೇಣ ಭಕ್ತಾನಾಂ, ಭುಕ್ತಿಮುಕ್ತಿಪ್ರದಾಯಿನೀ ತ್ರಿಪುರಸುಂದರೀ ದೇವೀ, ಹೃದಯೇ ಮೇ ಸದಾ ವಸೇತ್
ಶಾಕ್ತ ಪೌರಾಣಿಕ ಹಾಗೂ ತಾಂತ್ರಿಕ ಪರಂಪರೆಯಲ್ಲಿ ಬಾಲಾ ತ್ರಿಪುರಸುಂದರಿಯನ್ನು ಶ್ರೀವಿದ್ಯಾ ಪರಂಪರೆಯ ಅತ್ಯಂತ ಮಧುರವಾದ ದೇವತಾ ಸ್ವರೂಪವಾಗಿ ಕಾಣಲಾಗುತ್ತದೆ. ಪುರಾಣ ಮತ್ತು ಶ್ರೀವಿದ್ಯಾ ಪರಂಪರೆಯಲ್ಲಿ ಲಲಿತಾ ಮಹಾತ್ರಿಪುರಸುಂದರಿಯನ್ನು ಪರಬ್ರಹ್ಮಶಕ್ತಿಯ ಪರಿಪೂರ್ಣ ಸ್ವರೂಪವೆಂದು ಆರಾಧಿಸಲಾಗುತ್ತದೆ. ಆ ಮಹಾದೇವಿಯ ಬಾಲರೂಪವೇ ಬಾಲಾ ತ್ರಿಪುರಸುಂದರಿ ಎಂಬ ಭಾವನೆ ಶ್ರೀವಿದ್ಯಾ ಸಂಪ್ರದಾಯದಲ್ಲಿ ಪ್ರಸಿದ್ಧವಾಗಿದೆ.
ಬಾಲಾ — ಹೆಸರೊಂದು, ಅರ್ಥ ಅನಂತ:
‘ಬಾಲಾ’ ಎಂದರೆ ಬಾಲಿಕೆ. ಬಾಲಾ ಎಂದರೆ ಸಾಮಾನ್ಯ ಬಾಲಿಕೆಯಲ್ಲ. ಬಾಲಾ’ ಎಂಬ ಪದವೇ ಇಲ್ಲಿ ಒಂದು ಗಂಭೀರ ತತ್ತ್ವವನ್ನು ಸೂಚಿಸುತ್ತದೆ. ಮುಗ್ಧತೆಯೊಳಗೆ ಅಡಗಿರುವ ಮಹಾಶಕ್ತಿ. “ಬಾಲಾ ಎಂಬುದು ಕೇವಲ ಬಾಲಕಿ ಅಥವಾ ಚಿಕ್ಕವಳು ಎಂಬ ಅರ್ಥವನ್ನು ನೀಡುವ ಪದವಲ್ಲ. ಶ್ರೀವಿದ್ಯಾ ಪರಂಪರೆಯಲ್ಲಿ ಈ ಪದವು ನಿರ್ಮಲತೆ, ಮುಗ್ಧತೆ, ಪಾವಿತ್ರ್ಯ, ಸರಳತೆ ಮತ್ತು ನಿತ್ಯನೂತನ ಚೈತನ್ಯದ ದೈವಿಕ ಸಂಕೇತವಾಗಿದೆ. .
ತ್ರಿಪುರಸುಂದರಿ — ಸೌಂದರ್ಯದಾಚೆಯ ಸೌಂದರ್ಯ:
‘ತ್ರಿಪುರಸುಂದರಿ’ ಎಂಬ ನಾಮವೇ ಅಪೂರ್ವ. ಮೂರು ಲೋಕಗಳ ಸೌಂದರ್ಯದ ಅಧಿಷ್ಠಾತ್ರೀ. ಮೂರು ಲೋಕಗಳಲ್ಲೂ, ಮೂರು ಸ್ಥಿತಿಗಳಲ್ಲೂ, ಅಸ್ತಿತ್ವದ ವಿವಿಧ ಆಯಾಮಗಳಲ್ಲೂ ಪರಿಪೂರ್ಣವಾಗಿ ಪ್ರಕಾಶಿಸುವ ದಿವ್ಯ ಸೌಂದರ್ಯದ ಸ್ವರೂಪವೇ ತ್ರಿಪುರಸುಂದರಿ ಎಂಬ ತಾತ್ತ್ವಿಕ ಅರ್ಥವನ್ನು ಪರಂಪರೆ ಕಾಣುತ್ತದೆ.ಆದರೆ ಅಮ್ಮನ ಸೌಂದರ್ಯ ಕೇವಲ ಅವಳ ಮುಖದ ಸೌಂದರ್ಯವಲ್ಲ.
ಕರುಣೆಯೇ ಅವಳ ಸೌಂದರ್ಯ.
ಜ್ಞಾನವೇ ಅವಳ ಸೌಂದರ್ಯ.
ನಿರ್ಮಲತೆಯೇ ಅವಳ ಸೌಂದರ್ಯ.
ಧರ್ಮವೇ ಅವಳ ಸೌಂದರ್ಯ.
ಭಕ್ತನ ಮೇಲಿನ ಮಮತೆಯೇ ಅವಳ ನಿಜವಾದ ಸೌಂದರ್ಯ.
ಶ್ರೀವಿದ್ಯಾ ಪರಂಪರೆಯಲ್ಲಿ ಬಾಲ ತ್ರಿಪುರಸುಂದರಿ ಪರಾಶಕ್ತಿಯ ಅತ್ಯಂತ ಸೂಕ್ಷ್ಮ ಮತ್ತು ಮಹೋನ್ನತ ಸ್ವರೂಪಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತಾಳೆ. ‘ತ್ರಿಪುರ’ ಎಂಬುದು ಸ್ಥೂಲ, ಸೂಕ್ಷ್ಮ ಮತ್ತು ಕಾರಣ—ಎಂಬ ಮೂರು ಮಟ್ಟಗಳನ್ನೂ, ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿ—ಎಂಬ ಮೂರು ಅವಸ್ಥೆಗಳನ್ನೂ ಸೂಚಿಸುವ ತತ್ತ್ವವಾಗಿ ವಿವರಿಸಲಾಗುತ್ತದೆ. ಆ ಮೂರು ಮಟ್ಟಗಳನ್ನೂ ಆವರಿಸಿರುವ ಚೈತನ್ಯದ ಸೌಂದರ್ಯವೇ ತ್ರಿಪುರಸುಂದರಿ. ಅದೇ ಪರಾಶಕ್ತಿ ಬಾಲೆಯ ರೂಪದಲ್ಲಿ ಆರಾಧಿಸಲ್ಪಟ್ಟಾಗ, ಆಕೆಯನ್ನು ಬಾಲಾ ತ್ರಿಪುರಸುಂದರಿ ಎಂದು ಕರೆಯಲಾಗುತ್ತದೆ.
ಬಾಲರೂಪದ ಆವಿರ್ಭಾವದ ಪೌರಾಣಿಕ ತತ್ತ್ವ:
ಶ್ರೀವಿದ್ಯಾ ಪರಂಪರೆಯ ಪೌರಾಣಿಕ ಕಥಾನಕಗಳಲ್ಲಿ ಭಂಡಾಸುರನ ಸಂಹಾರದ ಪ್ರಸಂಗ ಅತ್ಯಂತ ಮಹತ್ವದ್ದು. ಭಂಡಾಸುರನಂತಹ ದುಷ್ಟಶಕ್ತಿಗಳ ಸಂಹಾರಕ್ಕಾಗಿ ದೇವತೆಗಳು ಮಹಾಶಕ್ತಿಯನ್ನು ಪ್ರಾರ್ಥಿಸಿದಾಗ, ಪರಾಶಕ್ತಿ ಲಲಿತಾಂಬಿಕೆಯ ರೂಪದಲ್ಲಿ ಅವತರಿಸಿದಳು ಎಂಬುದು ಲಲಿತೋಪಾಖ್ಯಾನದ ಪ್ರಸಿದ್ಧ ಕಥಾಭಾಗ.
ಒಂದು ಪ್ರಸಿದ್ಧ ಪೌರಾಣಿಕ ಕಥನದ ಪ್ರಕಾರ, ಭಂಡಾಸುರ ಎಂಬ ಅಸುರನು ಘೋರ ತಪಸ್ಸು ಮಾಡಿ ಅಪಾರ ಶಕ್ತಿಯನ್ನು ಪಡೆದು ದೇವತೆಗಳಿಗೂ, ಋಷಿಗಳಿಗೂ ಮತ್ತು ಲೋಕಗಳಿಗೂ ಸಂಕಟವನ್ನುಂಟುಮಾಡಿದನು. ಅವನ ಅಹಂಕಾರದಿಂದ ಧರ್ಮದ ಮಾರ್ಗ ದುರ್ಬಲವಾಗತೊಡಗಿತು. ಆಗ ದೇವತೆಗಳು ಪರಾಶಕ್ತಿಯನ್ನು ಪ್ರಾರ್ಥಿಸಿದರು.
ದೇವತೆಗಳ ಪ್ರಾರ್ಥನೆಗೆ ಸ್ಪಂದಿಸಿದ ಶ್ರೀ ಲಲಿತಾ ಮಹಾತ್ರಿಪುರಸುಂದರಿ ಮಹಾದಿವ್ಯ ರೂಪದಲ್ಲಿ ಪ್ರತ್ಯಕ್ಷಳಾಗಿ ಭಂಡಾಸುರನ ವಿರುದ್ಧದ ಮಹಾಯುದ್ಧಕ್ಕೆ ಸಜ್ಜಾದಳು. ಈ ಸಂದರ್ಭದಲ್ಲಿ ಪರಾಶಕ್ತಿಯ ಅನೇಕ ಶಕ್ತಿಸ್ವರೂಪಗಳು ಪ್ರಕಟವಾದವು. ಅವುಗಳಲ್ಲಿ ಬಾಲಾ ತ್ರಿಪುರಸುಂದರಿಯ ಬಾಲಸ್ವರೂಪ ಅತ್ಯಂತ ವಿಶಿಷ್ಟವಾದದ್ದು.
ಬಾಲೆಯ ರೂಪದಲ್ಲಿದ್ದರೂ ಅವಳು ಸಾಮಾನ್ಯ ಬಾಲಕಿಯಲ್ಲ. ಅನಂತ ಶಕ್ತಿಯನ್ನು ತನ್ನೊಳಗೆ ಧರಿಸಿದ ಪರಾಶಕ್ತಿಯೇ ಬಾಲಾರೂಪದಲ್ಲಿ ವ್ಯಕ್ತಳಾದಳು. ಭಂಡಾಸುರನ ಸೇನೆಯ ವಿರುದ್ಧ ನಡೆದ ದೈವಿಕ ಸಮರದಲ್ಲಿ ಬಾಲಾ ದೇವಿಯ ಶೌರ್ಯವನ್ನು ಶ್ರೀವಿದ್ಯಾ ಪರಂಪರೆ ವಿಶೇಷವಾಗಿ ಕೊಂಡಾಡುತ್ತದೆ. ಅವಳ ಬಾಲರೂಪವು ಅಸುರಶಕ್ತಿಯ ಅಹಂಕಾರಕ್ಕೆ ಎದುರಾದ ನಿರ್ಮಲತೆ ಮತ್ತು ದೈವಿಕ ಚೈತನ್ಯದ ವಿಜಯದ ಸಂಕೇತವಾಗಿ ಕಾಣುತ್ತದೆ.
ಇನ್ನೊಂದು ಶ್ರೀವಿದ್ಯಾ ಪರಂಪರೆಯ ಕಥನದಲ್ಲಿ, ಬಾಲಾ ದೇವಿಯು ಲಲಿತಾ ಮಹಾತ್ರಿಪುರಸುಂದರಿಯ ಸ್ವಯಂಪ್ರಕಾಶಿತ ಬಾಲಶಕ್ತಿಯಾಗಿ ಪರಿಗಣಿಸಲ್ಪಡುತ್ತಾಳೆ. ಆದ್ದರಿಂದ ಬಾಲಾ ದೇವಿಯನ್ನು ಪ್ರತ್ಯೇಕ ದೇವತೆಯಾಗಿ ಮಾತ್ರವಲ್ಲದೆ, ಲಲಿತಾಂಬಿಕೆಯ ಅತ್ಯಂತ ಕೋಮಲ ಮತ್ತು ಸುಲಭವಾಗಿ ಅನುಗ್ರಹಿಸುವ ರೂಪವೆಂದೂ ಭಕ್ತರು ಭಾವಿಸುತ್ತಾರೆ.
ಈ ಪೌರಾಣಿಕ ಕಥೆಯ ಸಾರವೇನೆಂದರೆ—
ಬಾಲಾ ಎಂದರೆ ಕೇವಲ ಬಾಲ್ಯದ ರೂಪವಲ್ಲ; ಬಾಲ್ಯದ ನಿರ್ಮಲತೆಯೊಳಗೆ ಅಡಗಿರುವ ಅಪಾರವಾದ ದೈವಿಕ ಶಕ್ತಿ. ಅವಳ ಕೈಯಲ್ಲಿರುವ ಪಾಶ, ಅಂಕುಶ, ಧನುಸ್ಸು ಮತ್ತು ಬಾಣಗಳು ಭಕ್ತನ ಮನಸ್ಸಿನ ಬಂಧನ, ಅಹಂಕಾರ ಮತ್ತು ಅಜ್ಞಾನವನ್ನು ನಿವಾರಿಸಿ ಜ್ಞಾನ ಮತ್ತು ಆತ್ಮಚೈತನ್ಯದ ಕಡೆಗೆ ಕರೆದೊಯ್ಯುವ ಸಂಕೇತಗಳೆಂದು ಶ್ರೀವಿದ್ಯಾ ಉಪಾಸನೆಯಲ್ಲಿ ಅರ್ಥೈಸಲಾಗುತ್ತದೆ.
ಬಾಲಾ ತ್ರಿಪುರಸುಂದರಿಯ ರೂಪದ ವೈಶಿಷ್ಟ್ಯ:
ಬಾಲಾ ದೇವಿಯನ್ನು ಸಾಮಾನ್ಯವಾಗಿ ಮೂರು ವರ್ಷದ ಬಾಲಿಕೆಯ ರೂಪದಲ್ಲಿ ಧ್ಯಾನಿಸಲಾಗುತ್ತದೆ. ಕೆಂಪು ಅಥವಾ ಅರುಣವರ್ಣದ ಕಾಂತಿಯೊಂದಿಗೆ, ಮುಗ್ಧ ನಗುವಿನಿಂದ, ದಿವ್ಯ ತೇಜಸ್ಸಿನಿಂದ ಕಂಗೊಳಿಸುವ ಬಾಲೆಯಾಗಿ ಆಕೆಯನ್ನು ಕಲ್ಪಿಸಲಾಗುತ್ತದೆ. ಅವಳ ಕೈಗಳಲ್ಲಿ ಪಾಶ, ಅಂಕುಶ, ಬಿಲ್ಲು ಮತ್ತು ಬಾಣಗಳಂತಹ ಆಯುಧಗಳಿರುವ ರೂಪವನ್ನು ಶ್ರೀವಿದ್ಯಾ ಪರಂಪರೆಯಲ್ಲಿ ಧ್ಯಾನಿಸಲಾಗುತ್ತದೆ. ಈ ಆಯುಧಗಳಿಗೂ ಆಂತರಿಕ ಅರ್ಥವಿದೆ.
ಪಾಶ — ಭಕ್ತನನ್ನು ತನ್ನ ಕರುಣೆಯಿಂದ ಬಂಧಿಸುವ ಶಕ್ತಿ.
ಅಂಕುಶ — ತಪ್ಪು ದಾರಿಯಿಂದ ಮನಸ್ಸನ್ನು ಹಿಂದಕ್ಕೆ ತರುವ ಜ್ಞಾನಶಕ್ತಿ.
ಬಿಲ್ಲು — ಸಂಕಲ್ಪದ ಸಂಕೇತ.
ಬಾಣ — ಗುರಿಯತ್ತ ಸಾಗುವ ಏಕಾಗ್ರತೆಯ ಸಂಕೇತ.
ಹೀಗಾಗಿ ಅಮ್ಮನ ರೂಪವನ್ನು ಕೇವಲ ಅಲಂಕಾರಿಕವಾಗಿ ನೋಡುವುದಕ್ಕಿಂತ, ಅದರೊಳಗಿನ ಆಧ್ಯಾತ್ಮಿಕ ಸಂದೇಶವನ್ನು ಅರಿಯುವುದು ಇಲ್ಲಿ ಮುಖ್ಯವಾಗುತ್ತದೆ.
ಬಾಲೆಯ ಮುಗ್ಧತೆಯಲ್ಲಿ ಮಹಾಶಕ್ತಿಯ ದಿವ್ಯಸ್ವರೂಪ:
ಬಾಲೆಯ ರೂಪ ಪುಟ್ಟ ದೇಹ ಮುಗ್ಧ ಮುಖ ಆದರೆ ಒಳಗೆ? ಅಗಾಧವಾದ ಶಕ್ತಿ. ಇದು ಕೇವಲ ಒಂದು ಪೌರಾಣಿಕ ಚಿತ್ರಣವಲ್ಲ. ಇದರೊಳಗೆ ಭಾರತೀಯ ಅಧ್ಯಾತ್ಮದ ಒಂದು ಗಂಭೀರವಾದ ಸತ್ಯ ಅಡಗಿದೆ—ದೈವೀ ಶಕ್ತಿಯ ಸಾಮರ್ಥ್ಯವನ್ನು ಅದರ ಬಾಹ್ಯ ರೂಪದಿಂದ ಅಳೆಯಲು ಸಾಧ್ಯವಿಲ್ಲ. ಬಾಲೆಯ ರೂಪದಲ್ಲಿ ಕಾಣಿಸಿಕೊಳ್ಳುವ ಈ ದೇವಿ, ವಾಸ್ತವದಲ್ಲಿ ಪರಬ್ರಹ್ಮ ಸ್ವರೂಪಿಣಿಯಾದ ಆದಿಶಕ್ತಿಯೇ. ಅವಳ ಬಾಲರೂಪ ನಮಗೆ ಒಂದು ಅದ್ಭುತ ಸಂದೇಶ ನೀಡುತ್ತದೆ. ಶಕ್ತಿ ಎಂದರೆ ವಯಸ್ಸಿನಿಂದ ಅಳೆಯುವಂಥದ್ದಲ್ಲ ನಿರ್ಮಲವಾದ ಚೈತನ್ಯವೇ ನಿಜವಾದ ಶಕ್ತಿ ಶಕ್ತಿ ಎಂದರೆ ಯಾವಾಗಲೂ ಭಯಾನಕ ರೂಪದಲ್ಲೇ ಇರಬೇಕೆಂದಿಲ್ಲ. ಕೆಲವೊಮ್ಮೆ ಅದು ಮಗುವಿನ ನಗುವಿನಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಅದು ತಾಯಿಯ ಮಮತೆಯಲ್ಲಿ ವ್ಯಕ್ತವಾಗುತ್ತದೆ.ಕೆಲವೊಮ್ಮೆ ಅದು ಮೌನದಲ್ಲಿಯೇ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಬಾಲಾ ದೇವಿಯ ರೂಪವು ಇದೇ ಸತ್ಯವನ್ನು ಭಕ್ತರ ಮನಸ್ಸಿನಲ್ಲಿ ಮೂಡಿಸುತ್ತದೆ.
ಬಾಲಾ ಅಮ್ಮ — ಭಕ್ತನಿಗೆ ದೇವಿಗಿಂತಲೂ ಹತ್ತಿರವಾದ ತಾಯಿ ದೇವಿಯ ಉಗ್ರರೂಪವನ್ನು ಕಂಡಾಗ ನಾವು ಕೈಮುಗಿಯುತ್ತೇವೆ. ಆದರೆ ಬಾಲಾ ಅಮ್ಮನನ್ನು ಕಂಡಾಗ ಮನಸ್ಸು ಕರಗುತ್ತದೆ. ಅವಳೊಂದಿಗೆ ಮಾತನಾಡಬೇಕೆನಿಸುತ್ತದೆ. ನಮ್ಮ ನೋವನ್ನು ಹೇಳಿಕೊಳ್ಳಬೇಕೆನಿಸುತ್ತದೆ.“ಅಮ್ಮಾ, ನನಗೆ ಇದು ಬೇಕು…” ಎಂದು ಮಗುವಿನಂತೆ ಬೇಡಿಕೊಳ್ಳಬೇಕೆನಿಸುತ್ತದೆ. ಅವಳ ಸನ್ನಿಧಿಯಲ್ಲಿ ನಿಂತಾಗ ನಮ್ಮೊಳಗಿನ ಕಠಿಣತೆ ಕರಗುತ್ತದೆ. ಅಹಂಕಾರ ಮೃದುವಾಗುತ್ತದೆ ಕಣ್ಣಿನಲ್ಲಿ ನೀರು ತುಂಬುತ್ತದೆ. ಏಕೆಂದರೆ ಬಾಲಾ ಅಮ್ಮ ದೇವಿಯಾಗಿರುವುದಕ್ಕಿಂತ ಮೊದಲು ನಮ್ಮ ತಾಯಿಯಂತೆ ಭಾಸವಾಗುತ್ತಾಳೆ.
ಒಂದು ಪುಟ್ಟ ಮಗುವಿನ ನಗುವಿನಲ್ಲಿ ಎಷ್ಟು ನಿರ್ಮಲತೆ ಇರುತ್ತದೆಯೋ, ಅದೇ ನಿರ್ಮಲತೆಯ ಪರಮರೂಪವೇ ಬಾಲಾ.ಮಗುವಿನ ಮನಸ್ಸಿನಲ್ಲಿ ನಿನ್ನೆಗಿನ ದ್ವೇಷವಿಲ್ಲ. ನಾಳೆಯ ಭಯವಿಲ್ಲ ಲೆಕ್ಕಾಚಾರವಿಲ್ಲ ಕುತಂತ್ರವಿಲ್ಲ. ಅಂತಹ ನಿರ್ಮಲ ಮನಸ್ಸೇ ದೇವಿಗೆ ಅತ್ಯಂತ ಪ್ರಿಯವಾದ ಮಂದಿರ. ಆದ್ದರಿಂದಲೇ ಬಾಲಾ ಅಮ್ಮನ ಆರಾಧನೆ ನಮ್ಮೊಳಗಿನ ನಿಷ್ಕಪಟತೆಯನ್ನು ಎಚ್ಚರಿಸುವ ಆರಾಧನೆಯೂ ಹೌದು.
ಬಾಲಾ ಆರಾಧನೆಯ ಮಹತ್ವ:
ಬಾಲಾ ತ್ರಿಪುರಸುಂದರಿಯ ಆರಾಧನೆಯಲ್ಲಿ ನಿರ್ಮಲತೆ, ಜ್ಞಾನ, ಧೈರ್ಯ, ಕರುಣೆ ಮತ್ತು ಆತ್ಮವಿಶ್ವಾಸಕ್ಕೆ ವಿಶೇಷ ಸ್ಥಾನವಿದೆ. ಬಾಲೆಯ ಮನಸ್ಸಿನಲ್ಲಿ ಹೇಗೆ ಕಪಟವಿಲ್ಲವೋ, ಹಾಗೆಯೇ ಅಮ್ಮನ ಆರಾಧನೆಯಲ್ಲಿಯೂ ಮನಸ್ಸು ನಿರ್ಮಲವಾಗಿರಬೇಕು ಎಂಬ ಭಾವನೆ ಇದೆ. ಅಮ್ಮನನ್ನು ಭಕ್ತಿಯಿಂದ ಸ್ಮರಿಸುವುದರಿಂದ ಮನಸ್ಸಿನ ಚಂಚಲತೆ ಕಡಿಮೆಯಾಗಿ, ಏಕಾಗ್ರತೆ ಮತ್ತು ಆತ್ಮಸ್ಥೈರ್ಯ ವೃದ್ಧಿಯಾಗಲಿ ಎಂಬುದು ಭಕ್ತರ ನಂಬಿಕೆ.
ವಿಶೇಷವಾಗಿ ಮಕ್ಕಳಿಗೆ ಬಾಲಾ ತ್ರಿಪುರಸುಂದರಿಯ ಆರಾಧನೆ ಮಾಡಿಸುವುದು ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಕಂಡುಬರುವ ಸುಂದರ ಸಂಸ್ಕಾರ. ಮಕ್ಕಳಲ್ಲಿ ಜ್ಞಾನ, ಸದ್ಬುದ್ಧಿ, ಧೈರ್ಯ ಮತ್ತು ಸತ್ಪ್ರವೃತ್ತಿಗಳು ಬೆಳೆಯಲಿ ಎಂಬ ಆಶಯದಿಂದ ಅಮ್ಮನನ್ನು ಪ್ರಾರ್ಥಿಸಲಾಗುತ್ತದೆ. ಆದರೆ ಶ್ರೀವಿದ್ಯೆಯ ಕೆಲವು ಮಂತ್ರೋಪಾಸನೆಗಳು ಪರಂಪರೆಯಂತೆ ಗುರುಮುಖವಾಗಿ, ಅರ್ಹತೆ ಮತ್ತು ವಿಧಿವಿಧಾನಗಳೊಂದಿಗೆ ಆಚರಿಸಬೇಕಾದವು. ಸಾಮಾನ್ಯ ಭಕ್ತರು ಅಮ್ಮನ ನಾಮಸ್ಮರಣೆ, ಸ್ತೋತ್ರಪಠಣ ಮತ್ತು ಸರಳ ಪೂಜೆಯನ್ನು ಶ್ರದ್ಧೆಯಿಂದ ಮಾಡಬಹುದು.
ಮಕ್ಕಳ ರೂಪದಲ್ಲಿಯೇ ಅಮ್ಮನ ದರ್ಶನ:
ಬಾಲಾ ತ್ರಿಪುರಸುಂದರಿ ಆರಾಧನೆಯ ಅತ್ಯಂತ ಮನಮುಟ್ಟುವ ಅಂಶವೆಂದರೆ ಕುಮಾರಿ ಪೂಜೆ. ನವರಾತ್ರಿಯಲ್ಲಿ ಕನ್ಯೆಯರನ್ನು ದೇವಿಯ ಸ್ವರೂಪವೆಂದು ಭಾವಿಸಿ ಪೂಜಿಸುವ ಸಂಪ್ರದಾಯ ಭಾರತೀಯ ಶಕ್ತಿ ಆರಾಧನೆಯ ಅತ್ಯಂತ ಪುರಾತನ ಮತ್ತು ಸುಂದರ ಪರಂಪರೆ.
ಒಬ್ಬ ಪುಟ್ಟ ಬಾಲಕಿಯಲ್ಲಿ ದೇವಿಯನ್ನು ಕಾಣುವುದು ಎಂದರೆ, ಸ್ತ್ರೀತತ್ವವನ್ನು ಕೇವಲ ದೇಹದ ದೃಷ್ಟಿಯಿಂದ ನೋಡದೆ, ದೈವೀಶಕ್ತಿಯ ದೃಷ್ಟಿಯಿಂದ ನೋಡುವುದು.ಮನೆಯ ಪುಟ್ಟ ಮಗಳ ನಗುವಿನಲ್ಲಿ ಅಮ್ಮನ ನಗು ಕಾಣುವುದು, ಅವಳ ಮುಗ್ಧತೆಯಲ್ಲಿ ದೇವಿಯ ನಿರ್ಮಲತೆಯನ್ನು ಕಾಣುವುದು, ಅವಳನ್ನು ಗೌರವದಿಂದ ಕಾಣುವುದು—ಇದೇ ಬಾಲಾ ತತ್ತ್ವದ ನಿಜವಾದ ಅರ್ಥ.
ದಸರೆಯಲ್ಲಿ ಬಾಲೆಯ ಆರಾಧನೆ ಏಕೆ ವಿಶೇಷ?
ದಸರಾ ದಿನಗಳಲ್ಲಿ ಮನೆಮನೆಗಳಲ್ಲಿ ಗೊಂಬೆಗಳನ್ನು ಕೂರಿಸಿ, ದೇವಿಯ ಪೂಜೆ ಮಾಡಿ, ಸುಮಂಗಲಿಯರನ್ನು ಮತ್ತು ಹೆಣ್ಣುಮಕ್ಕಳನ್ನು ಗೌರವಿಸುವ ಸಂಪ್ರದಾಯಗಳಿವೆ.
ಇದರ ಹಿಂದೆ ಇರುವ ಮೂಲಭಾವನೆ ಸ್ತ್ರೀಶಕ್ತಿಗೆ ಗೌರವ:
ಬಾಲಕಿಯಲ್ಲಿ ದೇವಿಯ ಸ್ವರೂಪವನ್ನು ಕಾಣುವ ಪರಂಪರೆಯೂ ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನವಾದದ್ದು. ಹೆಣ್ಣುಮಗುವಿನ ನಿರ್ಮಲತೆಯಲ್ಲಿ ಆದಿಶಕ್ತಿಯ ದರ್ಶನ ಮಾಡುವ ಭಾವನೆ, ಸಮಾಜದಲ್ಲಿ ಹೆಣ್ಣಿಗೆ ನೀಡಬೇಕಾದ ಗೌರವವನ್ನೂ ನೆನಪಿಸುತ್ತದೆ.
ಹೀಗಾಗಿ ದಸರೆಯಲ್ಲಿ ಬಾಲಾ ತ್ರಿಪುರಸುಂದರಿಯ ಆರಾಧನೆ ಎಂದರೆ ಕೇವಲ ದೇವಿಯ ವಿಗ್ರಹಕ್ಕೆ ಪೂಜೆ ಸಲ್ಲಿಸುವುದಲ್ಲ; ಪ್ರತಿಯೊಬ್ಬ ಬಾಲಕಿಯಲ್ಲೂ, ಪ್ರತಿಯೊಬ್ಬ ಹೆಣ್ಣಿನಲ್ಲೂ ಅಡಗಿರುವ ದೈವಿಕ ಶಕ್ತಿಯನ್ನು ಗೌರವಿಸುವ ಸಂಕಲ್ಪವೂ ಹೌದು.
ದಸರಾ ಎಂದರೆ ಕೇವಲ ಹಬ್ಬವಲ್ಲ. ಇದು ಶಕ್ತಿಯ ಆರಾಧನೆಯ ಮಹಾಪರ್ವ.ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿಯ ವಿವಿಧ ರೂಪಗಳನ್ನು ಆರಾಧಿಸುವ ಮೂಲಕ, ಮನುಷ್ಯ ತನ್ನೊಳಗಿನ ಅಜ್ಞಾನ, ಅಹಂಕಾರ, ಭಯ, ದುರ್ಬಲತೆ ಮತ್ತು ನಕಾರಾತ್ಮಕತೆಯನ್ನು ಜಯಿಸುವ ಸಂಕಲ್ಪ ಮಾಡುತ್ತಾನೆ.
ಈ ಸಂದರ್ಭದಲ್ಲಿ ಬಾಲಾ ತ್ರಿಪುರಸುಂದರಿಯ ಆರಾಧನೆಗೆ ವಿಶೇಷವಾದ ಆಧ್ಯಾತ್ಮಿಕ ಅರ್ಥವಿದೆ. ಮೊದಲು ನಮ್ಮೊಳಗಿನ ದುಷ್ಟ ಪ್ರವೃತ್ತಿಗಳನ್ನು ದೂರ ಮಾಡಬೇಕು. ನಂತರ ಮನಸ್ಸನ್ನು ಶುದ್ಧಗೊಳಿಸಬೇಕು. ಆ ಬಳಿಕ ಜ್ಞಾನವನ್ನು ಸ್ವೀಕರಿಸಬೇಕು. ಅಂತಿಮವಾಗಿ ಪರಾಶಕ್ತಿಯ ಅನುಗ್ರಹವನ್ನು ಅನುಭವಿಸಬೇಕು. ಈ ಪಯಣದಲ್ಲಿ ಬಾಲಾ ರೂಪವು ನಿರ್ಮಲತೆ ಮತ್ತು ಹೊಸ ಚೈತನ್ಯದ ಸಂಕೇತವಾಗಿ ಕಾಣಿಸುತ್ತದೆ.
ನವರಾತ್ರಿಯ ಪಾವನ ದಿನಗಳಲ್ಲಿ ಬಾಲತ್ರಿಪುರಸುಂದರಿಯ ಆರಾಧನೆ ನಮ್ಮೊಳಗಿನ ನಿರ್ಮಲತೆ, ಜ್ಞಾನ, ಧೈರ್ಯ ಮತ್ತು ಕರುಣೆಯನ್ನು ಜಾಗೃತಗೊಳಿಸುವ ಪವಿತ್ರ ಪಥ. ಅವಳನ್ನು ಪೂಜಿಸುವುದು ಕೇವಲ ವಿಧಿವಿಧಾನವಲ್ಲ ನಮ್ಮ ಅಹಂಕಾರ, ಅಶಾಂತಿ ಮತ್ತು ಅಜ್ಞಾನವನ್ನು ಅವಳ ಪಾದಗಳಿಗೆ ಸಮರ್ಪಿಸಿ, ಸಾತ್ವಿಕತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಆರಾಧನೆ.
ಅಮ್ಮನನ್ನು ಆರಾಧಿಸುವಾಗ, ನಮ್ಮ ಮನೆಯ ದೇವರ ಕೋಣೆಯಲ್ಲಿ ಮಾತ್ರವಲ್ಲ—ನಮ್ಮ ಹೃದಯದಲ್ಲಿಯೂ ಅಮ್ಮನಿಗೆ ಒಂದು ಸಿಂಹಾಸನವನ್ನು ನಿರ್ಮಿಸೋಣ ಅಹಂಕಾರವನ್ನು ಅಲ್ಲಿ ಇಡದೆ,ಪ್ರೀತಿಯನ್ನು ಇರಿಸೋಣ ದ್ವೇಷವನ್ನು ಅಲ್ಲಿ ಇಡದೆ ಕರುಣೆಯನ್ನು ಇರಿಸೋಣ ಭಯವನ್ನು ಅಲ್ಲಿ ಇಡದೆ ಧೈರ್ಯವನ್ನು ಇರಿಸೋಣ.ಅಜ್ಞಾನವನ್ನು ಅಳಿಸಿ ಜ್ಞಾನವನ್ನು ಇರಿಸೋಣ.ಆಗಲೇ ದಸರಾ ನಿಜವಾದ ಅರ್ಥದಲ್ಲಿ ನಮ್ಮೊಳಗೆ ಆಚರಣೆಯಾಗುತ್ತದೆ.
ಬಾಲ ತ್ರಿಪುರಸುಂದರಿಯ ಪುಟ್ಟ ನಗುವಿನಲ್ಲಿ ವಿಶ್ವವನ್ನೇ ಬೆಳಗಿಸುವ ಪರಾಶಕ್ತಿಯ ದರ್ಶನವಾಗಲಿ ಬಾಲೆಯ ನಿರ್ಮಲತೆ, ತಾಯಿಯ ಕರುಣೆ ಮತ್ತು ಪರಾಶಕ್ತಿಯ ಚೈತನ್ಯ ನಮ್ಮ ಹೃದಯಗಳಲ್ಲಿ ಸದಾ ಬೆಳಗಲಿ. ಶ್ರೀ ಬಾಲತ್ರಿಪುರಸುಂದರಿ ದೇವಿಯ ಕೃಪೆಯಿಂದ ಎಲ್ಲರ ಜೀವನದಲ್ಲಿ ಶಾಂತಿ, ಸಂತೋಷ, ಸೌಹಾರ್ದ ಮತ್ತು ಸಮೃದ್ಧಿ ನೆಲೆಸಲಿ. ಶ್ರೀ ಬಾಲತ್ರಿಪುರಸುಂದರಿ ದೇವಿಯ ಕೃಪಾಕಟಾಕ್ಷ ಸರ್ವರ ಮೇಲೂ ಸದಾ ಇರಲಿ.
ಶ್ರೀ ಬಾಲಾ ತ್ರಿಪುರಸುಂದರಿ ಪ್ರಸನ್ನಾಂಬಾ ಪ್ರಸನ್ನಂ ಭವತು
- ಸೌಮ್ಯ ಸನತ್
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
