ಹಳ್ಳಿಗಳಲ್ಲಿ ಎಕರೆಗಟ್ಟಲೆ ಭೂಮಿಯಿದ್ದರೂ, ಬೆಂಗಳೂರಿನಂತಹ ಮಾಯಾಲೋಕದ ಪ್ರಪಂಚಕ್ಕೆ ಮನಸೋತು ಉದ್ಯೋಗ ಹುಡುಕುತ್ತಾ ಬರುವ ಯುವಕರು ಅನೇಕರು. ಹಳ್ಳಿಗಳಲ್ಲಿ ಮಳೆ-ಬೆಳೆಯಿಲ್ಲ, ಬೆಳೆದರೂ ಸೂಕ್ತ ಬೆಲೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಕೃಷಿಯನ್ನು ಬಿಟ್ಟು ಬರುವವರಿಗೆ ಆ ನಗರದಲ್ಲಿ ಉದ್ಯೋಗ ಭದ್ರತೆ ಎಂಬುದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ. ಸಿಕ್ಕ ಉದ್ಯೋಗ ಮಾಡುತ್ತಾ, ಬರುವ ಸಂಬಳದಲ್ಲಿ ಈ ದುಬಾರಿ ಜೀವನದಲ್ಲಿ ಅಲ್ಪಸ್ವಲ್ಪ ಉಳಿಸಿ ಬದುಕುಕಟ್ಟಿಕೊಳ್ಳುವಷ್ಟರಲ್ಲಿ ಆಯುಸ್ಸೇ ಮುಗಿದುಹೋಗುತ್ತದೆ. ಸ್ವಾವಲಂಬಿಯಾಗಿ ಬದುಕಿ, ಮತ್ತೊಬ್ಬರಿಗೆ ಅನ್ನದಾತನಾಗಿರಬೇಕಾದ ನಮ್ಮ ಯುವ ರೈತ ಪೀಳಿಗೆ ಇಂದು ಪ್ರಕೃತಿಯ ಮುನಿಸಿಗೆ ನಲುಗುತ್ತಿದೆ. ರೈತ ಬೆಳೆದ ಬೆಲೆಗೆ ತಾನೇ ಬೆಲೆ ನಿಗದಿ ಮಾಡುವ ಸ್ವಾತಂತ್ರ್ಯವಿಲ್ಲದ ಈ ವ್ಯವಸ್ಥೆಯಲ್ಲಿ, ರೈತರು ಅತಂತ್ರರಾಗುತ್ತಿರುವುದು ಸುಳ್ಳಲ್ಲ. ಇಂತಹ ಕಷ್ಟದ ನಡುವೆಯೂ, ಯುವಕರು ಮನಸ್ಸು ಮಾಡಿದರೆ ತಾವಿರುವಲ್ಲೇ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಬೆಂಗಳೂರಿನ ಇತಿಹಾಸ ಪ್ರಸಿದ್ಧ ಬೇಗೂರಿನ ನಾಗರಾಜರೆಡ್ಡಿಯವರ ಮಗ ಸಿ.ಎನ್. ಕೃಷ್ಣಮೂರ್ತಿ.
ಪಾರಂಪರಿಕ ಕಸುಬಿನ ಮೇಲಿನ ಒಲವು ಮತ್ತು ಆಧುನಿಕತೆಯ ತಿರುವು
ಇವರು ಮೂಲತಃ ಕೃಷಿಕ ಕುಟುಂಬದಿಂದ ಬಂದವರು ಹಾಗೂ ಸಂಘದ ಅಂಗಳದಲ್ಲಿ ಬೆಳೆದವರು. ಹಿಂದೆ ಈ ಪ್ರದೇಶಗಳು ನಗರಿಕರಣಗೊಳ್ಳದ ಕಾಲದಲ್ಲಿ ಕೃಷಿ ಮತ್ತು ಹೈನುಗಾರಿಕೆ ಇವರ ಕುಟುಂಬದ ಕಸುಬಾಗಿತ್ತು. ಬೆಂಗಳೂರು ಯಾವಾಗ ತನ್ನ ಕಬಂಧ ಬಾಹುವನ್ನು ಚಾಚಿ ಅಕ್ಕಪಕ್ಕದ ಹಳ್ಳಿಗಳ ಕೃಷಿ ಭೂಮಿಯನ್ನು ನುಂಗಿ ಕಾಂಕ್ರೀಟ್ ಕಾಡಾಗಿಸಿತೋ, ಆಗ ಎಷ್ಟೋ ರೈತರು ತಮ್ಮ ಜಮೀನನ್ನು ವಸತಿ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಮಾರಿ ಕೃಷಿಯಿಂದ ವಿಮುಖರಾದರು. ಆದರೆ, ಇಂತಹ ಉದಾಹರಣೆಗಳ ನಡುವೆಯೂ ಬೇಗೂರಿನ ಕೃಷ್ಣಮೂರ್ತಿ ತಮ್ಮ ಕುಟುಂಬದ ಹೈನುಗಾರಿಕೆಯನ್ನು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದರು.
ಇಂದಿನ ಜಗತ್ತು ಆಧುನಿಕತೆಗೆ ಒಗ್ಗಿಕೊಳ್ಳುತ್ತಿದೆ, ಆದರೆ ನಾವು ಸೇವಿಸುವ ಆಹಾರ ನಮ್ಮ ಆರೋಗ್ಯವನ್ನು ಅಕ್ಷರಶಃ ಕಲುಷಿತಗೊಳಿಸಿದೆ. ಬದಲಾದ ಸನ್ನಿವೇಶದಲ್ಲಿ ಅನಿವಾರ್ಯ ಕಾರಣಗಳಿಂದ ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಂಡವರು, ಇಂದು ಮತ್ತೆ ನಮ್ಮ ಪಾರಂಪರಿಕ ಅನುಕರಣೆಗಳತ್ತ ವಾಲುತ್ತಿದ್ದಾರೆ ಎಂಬುದು ಅಷ್ಟೇ ಸತ್ಯ.
ಉನ್ನತ ಸ್ಥಾನಮಾನ, ಕೈತುಂಬ ಆದಾಯ ಬರುತ್ತಿದ್ದರೂ ದೇಹಕ್ಕೆ ಸೇರುವ ಆಹಾರ ಮಾತ್ರ ವಿಷಪೂರಿತ ಎಂಬ ನೈಜತೆಯನ್ನು ಕೃಷ್ಣಮೂರ್ತಿಯವರು ಮನಗಂಡರು. ಆಹಾರದಲ್ಲಿ ಆಮೂಲಾಗ್ರ ಬದಲಾವಣೆ ತರಲು ಮತ್ತು ದೇಶಿ ಗೋತಳಿಗಳನ್ನು ಸಂರಕ್ಷಿಸಲು ನಿರ್ಧರಿಸಿದ ಇವರು, ಬೆಂಗಳೂರಿನಲ್ಲಿ ದೇಸೀ ಆಕಳಿನ ಹೈನುಗಾರಿಕೆಗೆ ಒಂದು ಹೊಸ ಆಯಾಮ ನೀಡಿದ್ದಾರೆ.
ಶ್ರೀ ಕೃಷ್ಣ ಗೋಶಾಲೆಯ ನಿರ್ಮಾಣ ಮತ್ತು ದೇಶಿ ತಳಿಗಳ ಸಂರಕ್ಷಣೆ
ಆರಂಭದಲ್ಲಿ 4 ಅಥವಾ 5 ದೇಶಿ ಗೋತಳಿಗಳ ಹಸುಗಳನ್ನು ಸಾಕಲು ಪ್ರಾರಂಭಿಸಿ, ಇದರಿಂದ ಸ್ವಲ್ಪ ಯಶಸ್ಸು ಕಂಡ ಇವರು, ಇನ್ನೂ ಹೆಚ್ಚಿನ ರೀತಿಯಲ್ಲಿ ಹೈನುಗಾರಿಕೆ ಮಾಡಬೇಕೆಂದುಕೊಂಡರು. ದೇಶದ ಬೇರೆ ಬೇರೆ ಭಾಗಗಳಿಂದ ನಶಿಸುತ್ತಿರುವ ದೇಶಿ ಗೋತಳಿಗಳ ಸಂರಕ್ಷಣೆ ಮತ್ತು ಗೋಹತ್ಯೆ ತಡೆಯುವ ಪಣತೊಟ್ಟು, ದೇಶದ ವಿವಿಧ ಭಾಗಗಳಿಂದ ಸುಮಾರು 30ಕ್ಕೂ ಹೆಚ್ಚು ದೇಶಿ ತಳಿಗಳನ್ನು ತಂದು ಸಾಕುತ್ತಿದ್ದಾರೆ.
ರೈತರಿಗೆ ನೆರವಾಗುವ ದೃಷ್ಟಿಯಿಂದ ಗೋತಳಿಗಳನ್ನು ಅಭಿವೃದ್ಧಿಪಡಿಸಿ (Breed ಮಾಡಿ), ಆಸಕ್ತಿ ಇರುವ ರೈತರಿಗೆ ಸಾಕಲು ಅನುವು ಮಾಡಿಕೊಡುತ್ತಿರುವುದಲ್ಲದೆ, ಕಟುಕರಿಂದ ಬಿಡಿಸಿಕೊಂಡು ಬಂದ ಮೂಕಪ್ರಾಣಿಗಳ ರಕ್ಷಣೆಗಾಗಿ ‘ಶ್ರೀ ಕೃಷ್ಣ ಗೋಶಾಲೆ’ಯನ್ನು ಪ್ರಾರಂಭಿಸಿದರು. ಪ್ರಸ್ತುತ ಈ ಗೋಶಾಲೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಗೋವುಗಳಿದ್ದು, ಇದರಲ್ಲಿ 250ಕ್ಕೂ ಹೆಚ್ಚು ದೇಶಿ ಗೋವುಗಳು ಕಟುಕರಿಂದ ರಕ್ಷಿಸಲ್ಪಟ್ಟವಾಗಿವೆ.
ಇಲ್ಲಿ ದೊರೆಯುವ ಉತ್ತಮ ಗುಣಮಟ್ಟದ ದೇಶಿ ಹಾಲಿಗೆ ನಗರದಲ್ಲಿ ಭಾರಿ ಬೇಡಿಕೆಯಿದ್ದು, ಲೀಟರ್ಗೆ ₹100 ರಿಂದ ₹120 ರವರೆಗೆ ಮೌಲ್ಯ ಕಂಡುಕೊಂಡಿದೆ. ಇದರ ಜೊತೆಗೆ ಶುದ್ಧ ದೇಶಿ ತುಪ್ಪ, ಮಜ್ಜಿಗೆ, ಪಂಚಗವ್ಯ, ಸಗಣಿಯಿಂದ ತಯಾರಿಸಿದ ಧೂಪದ ಕಡ್ಡಿಗಳು, ಗೋಮೂತ್ರದಿಂದ ತಯಾರಿಸಿದ ನೈಸರ್ಗಿಕ ಅರ್ಕ ಹಾಗೂ ಸಾವಯವ ಗೊಬ್ಬರಗಳನ್ನೂ ಪೂರೈಸುತ್ತಿದ್ದಾರೆ.
ಗೋವಿನ ಪ್ರತಿಯೊಂದು ಉತ್ಪನ್ನವನ್ನೂ ಮೌಲ್ಯವರ್ಧನೆ (Value Addition) ಮಾಡುವ ಮೂಲಕ ಹೈನುಗಾರಿಕೆಯನ್ನು ಬೇಸರದ ಕಸುಬನ್ನಾಗಿ ನೋಡದೆ, ಅತ್ಯಂತ ಲಾಭದಾಯಕ ಹಾಗೂ ಗೌರವಾನ್ವಿತ ಉದ್ಯಮವನ್ನಾಗಿ ಪರಿವರ್ತಿಸಿದ್ದಾರೆ.
ಕರ್ನಾಟಕದ ಅನೇಕ ಕೃಷಿ ಮೇಳಗಳಲ್ಲಿ ಇವರ ಗೋವುಗಳು ಪ್ರದರ್ಶನಗೊಂಡು ಹಲವಾರು ಪ್ರಶಸ್ತಿಗಳನ್ನು ಪಡೆದಿವೆ. ಎಷ್ಟೋ ಶಾಲಾ-ಕಾಲೇಜುಗಳು ಗೋತಳಿಗಳ ಪರಿಚಯಕ್ಕಾಗಿ ಇಲ್ಲಿಗೆ ವಿದ್ಯಾರ್ಥಿಗಳನ್ನು ಕರೆತರುತ್ತಾರೆ. ಸುತ್ತಮುತ್ತಲಿನ ಗೋಪ್ರೇಮಿಗಳಂತೂ ಈ ಜಾಗವನ್ನು ಸ್ವರ್ಗವೆಂದೇ ಭಾವಿಸುತ್ತಾರೆ. ಪ್ರತಿ ಅಮಾವಾಸ್ಯೆಯಂದು ನಗರ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಜನರು ಬಂದು ಗೋಶಾಲೆಯಲ್ಲಿ ಭಜನೆ, ಗೋಸೇವೆಯನ್ನು ಮಾಡಿ, ಇಲ್ಲಿ ದೊರೆಯುವ ಉಚಿತ ಮಜ್ಜಿಗೆ ಸೇವಿಸಿ ಇಡೀ ದಿನವನ್ನು ಕಳೆಯುತ್ತಾರೆ.
ಉದ್ಯೋಗ ಹುಡುಕಿಕೊಂಡು ನಗರಗಳಿಗೆ ಬಂದು, ಮಾಸಿಕ ಸಂಬಳಕ್ಕಾಗಿ ಬದುಕಿನ ಅಮೂಲ್ಯ ವರ್ಷಗಳನ್ನು ಕಳೆಯುವ ಲಕ್ಷಾಂತರ ಯುವಕರಿಗೆ ಕೃಷ್ಣಮೂರ್ತಿಯವರ ಜೀವನ ಬಲುದೊಡ್ಡ ಪಾಠ.
”ನಾವು ಕೇವಲ ಕೆಲಸ ಹುಡುಕುವ ನೌಕರರಾಗಬಾರದು, ಮತ್ತೊಬ್ಬರಿಗೆ ಅನ್ನ ನೀಡುವ ಮತ್ತು ಉದ್ಯೋಗ ಸೃಷ್ಟಿಸುವ ‘ಅನ್ನದಾತ’ರಾಗಬೇಕು.”
ಬೆಂಗಳೂರಿನಂತಹ ಬೃಹತ್ ನಗರದ ಮಧ್ಯೆಯೇ, ಕೋಟಿ ಬೆಲೆಬಾಳುವ ಜಮೀನನ್ನು ಕಾಂಕ್ರೀಟ್ ಕಟ್ಟಡಗಳಿಗೆ ಮಾರಿಕೊಳ್ಳದೆ, ಮಣ್ಣು ಮತ್ತು ತಾಯಂದಿರಂತಿರುವ ಗೋವುಗಳ ಸೇವೆಗೆ ಮುಡಿಪಾಗಿಟ್ಟು ಅವರು ಸಾಧಿಸಿ ತೋರಿಸಿದ್ದಾರೆ. ಪ್ರಕೃತಿ ಮುನಿದರೂ, ಬೆಲೆ ಸಿಗದಿದ್ದರೂ ಧೃತಿಗೆಡದೆ ಸರಿಯಾದ ಯೋಜನೆಯೊಂದಿಗೆ ಕೃಷಿ ಹಾಗೂ ಹೈನುಗಾರಿಕೆ ಮಾಡಿದರೆ ಸ್ವಾವಲಂಬಿ ಜೀವನ ನಡೆಸುವುದು ಸಾಧ್ಯ ಎಂಬುದಕ್ಕೆ ಇವರೇ ಜ್ವಲಂತ ಉದಾಹರಣೆ.
ಇಂದಿನ ಯುವ ಪೀಳಿಗೆಗೆ ಸಿಗಬೇಕಾದ ನೈಜ ಪ್ರೇರಣೆ ಎಂದರೆ ಕೇವಲ ಎ.ಸಿ. ರೂಮ್ಗಳಲ್ಲಿ ಮಾಡುವ ಉದ್ಯೋಗವಲ್ಲ; ನಮ್ಮ ಮೂಲ ಬೇರಾದ ಕೃಷಿ ಮತ್ತು ಪಶುಪಾಲನೆಯಲ್ಲಿ ಆಧುನಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು. ನಶಿಸುತ್ತಿರುವ ದೇಶಿ ತಳಿಗಳನ್ನು ಕಾಯುತ್ತಾ, ದೇಶದ ಸ್ವಾಸ್ಥ್ಯವನ್ನು ಕಾಪಾಡುತ್ತಿರುವ ಬೇಗೂರಿನ ಕೃಷ್ಣಮೂರ್ತಿಯವರ ಈ ಗೋಸೇವೆ ಮತ್ತು ಉದ್ಯಮಶೀಲತೆ ಪ್ರತಿಯೊಬ್ಬ ಯುವಕನಿಗೂ ದಾರಿದೀಪ. ಹಳ್ಳಿಗಳನ್ನು ತೊರೆದು ನಗರಕ್ಕೆ ಓಡಿಬರುವ ಯುವಕರು ತಮ್ಮಲ್ಲಿರುವ ಮೂಲ ಸೌಕರ್ಯಗಳನ್ನೇ ಬಳಸಿಕೊಂಡು ಸ್ವಾವಲಂಬಿಗಳಾಗಲು ಕೃಷ್ಣಮೂರ್ತಿಯವರ ಈ ಕಥೆ ಖಂಡಿತವಾಗಿಯೂ ಹೊಸ ಭರವಸೆಯ ಬೆಳಕನ್ನು ನೀಡುತ್ತದೆ.ಈ ಗೋಶಾಲೆಯಲ್ಲಿ ಹೈನುಗಾರಿಕೆ ಮಾಡಲು ಆಸಕ್ತಿಯುಳ್ಳ ರೈತರಿಗೆ ಉಚಿತ ವಸತಿ ಸಮೇತ ತರಬೇತಿಯನ್ನು ಸಹ ನೀಡಲಾಗುತ್ತದೆ ಇದರ ಹೆಚ್ಚಿನ ವಿಷಯಗಳಿಗೆ ಸಿ.ಎನ್ ಕೃಷ್ಣಮೂರ್ತಿ ಯವರನ್ನು ಸಂಪರ್ಕ ಮಾಡಬಹುದು. ಸಂಪರ್ಕ ಸಂಖ್ಯೆ. 9972508500
ಅಗ್ನಿಹೋತ್ರಿ ಲೋಕೇಶ್ ಶರ್ಮಾ
ಲೇಖಕ ಹಾಗೂ ಪತ್ರಕರ್ತ,
ಬೆಂಗಳೂರು
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
