ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ; ಅದು ಕನ್ನಡಿಗರ ಬದುಕಿನ ಉಸಿರು, ಸಂಸ್ಕೃತಿಯ ಜೀವನಾಡಿ, ಜ್ಞಾನದ ಬೆಳಕು ಮತ್ತು ಸಾಮಾಜಿಕ ಪರಿವರ್ತನೆಯ ಶಕ್ತಿಯಾಗಿದೆ. ಕನ್ನಡ ಭಾಷೆಯ ಇತಿಹಾಸವನ್ನು ಅವಲೋಕಿಸಿದಾಗ, ಅದಕ್ಕೆ ಹೊಸ ಚೈತನ್ಯ, ಹೊಸ ಆಯಾಮ ಮತ್ತು ಜನಸಾಮಾನ್ಯರ ಬದುಕಿನೊಂದಿಗೆ ಬೆಸೆದ ವಿಶಿಷ್ಟ ಘನತೆಯನ್ನು ತಂದುಕೊಟ್ಟ ಮಹನೀಯರಲ್ಲಿ ಬಸವಣ್ಣನವರು ಹಾಗೂ ಬಸವಾದಿ ಶರಣರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಕನ್ನಡವನ್ನು ಅರಮನೆಗಳ, ಪಂಡಿತರ ಮತ್ತು ನಿರ್ದಿಷ್ಟ ವರ್ಗಗಳ ಭಾಷೆಯಾಗಿ ಉಳಿಸದೆ, ಸಾಮಾನ್ಯ ಜನರ ಅನುಭವ, ನೋವು, ನಲಿವು, ಬದುಕು ಮತ್ತು ಹೋರಾಟಗಳ ಅಭಿವ್ಯಕ್ತಿಯ ಭಾಷೆಯನ್ನಾಗಿ ರೂಪಿಸಿದ ಕೀರ್ತಿ ಶರಣ ಚಳವಳಿಗೆ ಸಲ್ಲುತ್ತದೆ. ಕನ್ನಡ ಭಾಷೆಗೆ ದೈವತ್ವದ ಘನತೆ ದೊರಕಿತು ಎನ್ನುವುದರ ನಿಜವಾದ ಅರ್ಥವೂ ಇದೇ ಆಗಿದೆ.
ಹನ್ನೆರಡನೆಯ ಶತಮಾನದಲ್ಲಿ ಸಮಾಜವು ಜಾತಿ, ವರ್ಗ, ಲಿಂಗಭೇದ, ಅಸ್ಪೃಶ್ಯತೆ ಮತ್ತು ಮೂಢನಂಬಿಕೆಗಳ ಸಂಕೋಲೆಗಳಲ್ಲಿ ಬಂಧಿತವಾಗಿತ್ತು. ಧಾರ್ಮಿಕ ಆಚರಣೆಗಳು ಮತ್ತು ಜ್ಞಾನಸಂಪತ್ತು ಕೆಲವೇ ವರ್ಗಗಳ ಹಿಡಿತದಲ್ಲಿದ್ದವು. ಇಂತಹ ಸಂದರ್ಭದಲ್ಲಿ ಬಸವಣ್ಣನವರು ಸಾಮಾಜಿಕ ಸಮಾನತೆ, ಕಾಯಕದ ಘನತೆ, ದಾಸೋಹದ ಮಹತ್ವ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಮಹತ್ತರ ಚಳವಳಿಗೆ ನಾಯಕತ್ವ ನೀಡಿದರು. ಈ ಚಳವಳಿಯ ಪ್ರಮುಖ ಶಕ್ತಿಯಾಗಿದ್ದುದು ಕನ್ನಡ ಭಾಷೆ. ಜನರಿಗೆ ಅರ್ಥವಾಗದ ಭಾಷೆಯಲ್ಲಿ ಧರ್ಮ ಮತ್ತು ತತ್ವಜ್ಞಾನವನ್ನು ಬೋಧಿಸುವ ಬದಲು, ಜನರ ನಿತ್ಯಜೀವನದ ಭಾಷೆಯಲ್ಲಿಯೇ ಆಳವಾದ ವಿಚಾರಗಳನ್ನು ಸರಳವಾಗಿ, ಸ್ಪಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಲಾಯಿತು.
ಬಸವಣ್ಣನವರು ಕನ್ನಡವನ್ನು ಕೇವಲ ಮಾತನಾಡುವ ಭಾಷೆಯಾಗಿ ನೋಡಲಿಲ್ಲ; ಅದನ್ನು ಮಾನವೀಯ ಚಿಂತನೆಗಳನ್ನು ಜನಮನಕ್ಕೆ ತಲುಪಿಸುವ ಶಕ್ತಿಯುತ ಮಾಧ್ಯಮವನ್ನಾಗಿ ಬಳಸಿದರು. ಅವರ ವಚನಗಳಲ್ಲಿ ಬದುಕಿನ ಸತ್ಯ, ಸಾಮಾಜಿಕ ನ್ಯಾಯ, ಸಮಾನತೆ, ಕಾಯಕನಿಷ್ಠೆ, ದಯೆ, ಪ್ರಾಮಾಣಿಕತೆ ಮತ್ತು ಆತ್ಮಶುದ್ಧಿಯ ಸಂದೇಶಗಳು ಅನುರಣಿಸುತ್ತವೆ. “ಕಾಯಕವೇ ಕೈಲಾಸ” ಎಂಬ ಮಹೋನ್ನತ ತತ್ವವು ದುಡಿಮೆಯೇ ಪೂಜೆ, ಪ್ರಾಮಾಣಿಕ ಪರಿಶ್ರಮವೇ ಶ್ರೇಷ್ಠ ಸಾಧನೆ ಎಂಬ ಮೌಲ್ಯವನ್ನು ಸಾರುತ್ತದೆ. ಈ ತತ್ವವು ಕನ್ನಡ ಭಾಷೆಯ ಮೂಲಕ ಜನಸಾಮಾನ್ಯರ ಹೃದಯವನ್ನು ತಲುಪಿ, ಬದುಕಿನ ದರ್ಶನವಾಗಿ ರೂಪುಗೊಂಡಿತು.
ಬಸವಣ್ಣನವರ ಪ್ರಸಿದ್ಧ ವಚನವಾದ “ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ” ಎಂಬ ಸಾಲುಗಳಲ್ಲಿ ಬಡವರ ಬದುಕಿನ ವಾಸ್ತವ ಮತ್ತು ಆಧ್ಯಾತ್ಮಿಕತೆಯ ಹೊಸ ವ್ಯಾಖ್ಯಾನ ಅಡಕವಾಗಿದೆ. ದೇವರನ್ನು ಕೇವಲ ದೇವಾಲಯಗಳಲ್ಲಿ ಹುಡುಕದೆ, ತನ್ನ ದೇಹವನ್ನೇ ದೇಗುಲವನ್ನಾಗಿ, ತನ್ನ ಮನಸ್ಸನ್ನೇ ಭಕ್ತಿಯ ನೆಲೆಯನ್ನಾಗಿ ಕಾಣುವ ದೃಷ್ಟಿಕೋನವನ್ನು ಅವರು ಮುಂದಿಟ್ಟರು. ಇಂತಹ ಗಹನವಾದ ತತ್ವವನ್ನು ಜನಸಾಮಾನ್ಯರ ಭಾಷೆಯಲ್ಲಿ ತಿಳಿಸುವ ಮೂಲಕ ಕನ್ನಡದ ಅಭಿವ್ಯಕ್ತಿ ಸಾಮರ್ಥ್ಯವನ್ನು ವಿಶಾಲಗೊಳಿಸಿದರು.
ಬಸವಣ್ಣನವರೊಂದಿಗೆ ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ಧರಾಮ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಲಕ್ಕಮ್ಮ, ಹಡಪದ ಅಪ್ಪಣ್ಣ ಸೇರಿದಂತೆ ಅನೇಕ ಶರಣರು ವಚನ ಸಾಹಿತ್ಯದ ಮೂಲಕ ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದರು. ಪ್ರತಿಯೊಬ್ಬ ಶರಣರೂ ತಮ್ಮದೇ ಆದ ಅನುಭವ, ಚಿಂತನೆ ಮತ್ತು ಜೀವನದರ್ಶನವನ್ನು ವಚನಗಳ ಮೂಲಕ ವ್ಯಕ್ತಪಡಿಸಿದರು. ಅವರ ವಚನಗಳಲ್ಲಿ ಆಧ್ಯಾತ್ಮಿಕ ಅನುಭವದ ಜೊತೆಗೆ ಸಾಮಾಜಿಕ ಅನ್ಯಾಯದ ವಿರುದ್ಧದ ಧ್ವನಿ, ಮಹಿಳೆಯರ ಸ್ವಾತಂತ್ರ್ಯದ ಆಶಯ, ಶ್ರಮಜೀವಿಗಳ ಗೌರವ ಮತ್ತು ಮಾನವೀಯ ಸಂಬಂಧಗಳ ಮೌಲ್ಯಗಳು ಸ್ಪಷ್ಟವಾಗಿ ಕಾಣುತ್ತವೆ.
ಅಲ್ಲಮಪ್ರಭುಗಳ ವಚನಗಳು ಆತ್ಮಜ್ಞಾನ ಮತ್ತು ಅಂತರಂಗದ ಅನುಭವಗಳ ಆಳವನ್ನು ತೆರೆದಿಟ್ಟರೆ, ಅಕ್ಕಮಹಾದೇವಿಯವರ ವಚನಗಳು ವೈಯಕ್ತಿಕ ಸ್ವಾತಂತ್ರ್ಯ, ಆತ್ಮಗೌರವ ಮತ್ತು ಆಧ್ಯಾತ್ಮಿಕ ಸ್ವತಂತ್ರ ಚಿಂತನೆಯ ಮಹತ್ವವನ್ನು ಸಾರುತ್ತವೆ. ಮಡಿವಾಳ ಮಾಚಿದೇವರು ತಮ್ಮ ಕಾಯಕನಿಷ್ಠೆಯ ಮೂಲಕ ಶರಣ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ, ಅಂಬಿಗರ ಚೌಡಯ್ಯನವರು ಸಮಾಜದ ಅಸಮಾನತೆ ಮತ್ತು ಕಪಟವನ್ನು ಪ್ರಶ್ನಿಸಿದರು. ಹೀಗೆ ವಿವಿಧ ವೃತ್ತಿ, ವರ್ಗ ಮತ್ತು ಹಿನ್ನೆಲೆಯ ಶರಣರು ಕನ್ನಡ ಭಾಷೆಯನ್ನು ತಮ್ಮ ಅನುಭವಗಳ ಅಭಿವ್ಯಕ್ತಿಯ ಸಾಧನವನ್ನಾಗಿ ಮಾಡಿಕೊಂಡರು. ಇದರಿಂದ ಕನ್ನಡವು ಜನಜೀವನದ ಎಲ್ಲ ಆಯಾಮಗಳನ್ನು ಒಳಗೊಳ್ಳುವ ವಿಶಾಲವಾದ ಭಾಷೆಯಾಗಿ ಬೆಳೆದಿತು.
ಬಸವಣ್ಣನವರ ನೇತೃತ್ವದಲ್ಲಿ ರೂಪುಗೊಂಡ ಅನುಭವ ಮಂಟಪವು ಶರಣರ ವಿಚಾರ ವಿನಿಮಯಕ್ಕೆ ಮಹತ್ವದ ವೇದಿಕೆಯಾಯಿತು. ವಿವಿಧ ಸಾಮಾಜಿಕ ಹಿನ್ನೆಲೆಯ ಪುರುಷರು ಮತ್ತು ಮಹಿಳೆಯರು ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಈ ಪರಂಪರೆಯು ಸಮಾನತೆ ಮತ್ತು ವಿಚಾರಸ್ವಾತಂತ್ರ್ಯದ ಮಹತ್ವವನ್ನು ಸಾರಿತು. ಶರಣರ ವಚನಗಳು ಜನರ ಬದುಕಿನಿಂದಲೇ ಹುಟ್ಟಿಕೊಂಡಿದ್ದರಿಂದ ಅವುಗಳಲ್ಲಿ ಕೃತಕತೆಯಿರಲಿಲ್ಲ; ಅನುಭವದ ಸತ್ಯವಿತ್ತು. ಆ ಸತ್ಯವನ್ನು ಸರಳ ಕನ್ನಡದಲ್ಲಿ ಅಭಿವ್ಯಕ್ತಿಸಿದ ಕಾರಣ ವಚನಗಳು ಶತಮಾನಗಳ ನಂತರವೂ ಜನಮಾನಸದಲ್ಲಿ ಜೀವಂತವಾಗಿವೆ.
ಕನ್ನಡಕ್ಕೆ ದೈವತ್ವದ ಘನತೆ ದೊರಕಿತು ಎನ್ನುವುದು ಕನ್ನಡವೇ ಇತರ ಭಾಷೆಗಳಿಗಿಂತ ಶ್ರೇಷ್ಠ ಎಂಬ ಅರ್ಥವಲ್ಲ. ಬದಲಾಗಿ, ಜನರ ಭಾಷೆಯಲ್ಲಿಯೇ ದೇವರು, ಧರ್ಮ, ತತ್ವಜ್ಞಾನ ಮತ್ತು ಮಾನವೀಯ ಮೌಲ್ಯಗಳನ್ನು ಅಭಿವ್ಯಕ್ತಿಸಬಹುದು ಎಂಬುದನ್ನು ಬಸವಾದಿ ಶರಣರು ತಮ್ಮ ಬದುಕು ಮತ್ತು ಸಾಹಿತ್ಯದ ಮೂಲಕ ಸಾಬೀತುಪಡಿಸಿದರು. ದೇವರನ್ನು ಅರಿಯಲು ಭಾಷೆಯ ಹೆಸರಿನಲ್ಲಿ ಯಾವುದೇ ಅಡೆತಡೆ ಇರಬಾರದು; ಜ್ಞಾನವು ಎಲ್ಲರಿಗೂ ಲಭ್ಯವಾಗಬೇಕು ಎಂಬ ಪ್ರಜಾಸತ್ತಾತ್ಮಕ ಆಶಯವನ್ನು ಅವರು ಪ್ರತಿಪಾದಿಸಿದರು. ಈ ದೃಷ್ಟಿಯಿಂದ ಶರಣರ ಕೊಡುಗೆ ಕನ್ನಡ ಭಾಷೆಯ ಇತಿಹಾಸದಲ್ಲಿ ಕ್ರಾಂತಿಕಾರಕವಾಗಿದೆ.
ವಚನ ಸಾಹಿತ್ಯವು ಕನ್ನಡದ ಸಾಹಿತ್ಯಿಕ ಬೆಳವಣಿಗೆಗೆ ಮಾತ್ರವಲ್ಲದೆ, ಸಮಾಜದ ನೈತಿಕ ಮತ್ತು ಸಾಂಸ್ಕೃತಿಕ ಪ್ರಗತಿಗೂ ಅಪಾರ ಕೊಡುಗೆ ನೀಡಿದೆ. ಶರಣರು ಭಾಷೆಯನ್ನು ಜನರ ಸಮಸ್ಯೆಗಳನ್ನು ಪ್ರಶ್ನಿಸುವ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮತ್ತು ಸಮಾನತೆಯ ಸಮಾಜವನ್ನು ನಿರ್ಮಿಸುವ ಸಾಧನವನ್ನಾಗಿ ಬಳಸಿದರು. ಅವರ ಸಾಹಿತ್ಯದಲ್ಲಿ ಜಾತಿಯ ಅಹಂಕಾರಕ್ಕೆ ಸ್ಥಾನವಿಲ್ಲ; ದುಡಿಮೆಯನ್ನು ಕೀಳಾಗಿ ಕಾಣುವ ಮನೋಭಾವಕ್ಕೆ ಅವಕಾಶವಿಲ್ಲ; ಮಹಿಳೆಯರನ್ನು ಕಡೆಗಣಿಸುವ ಸಂಕುಚಿತ ದೃಷ್ಟಿಕೋನಕ್ಕೆ ಮನ್ನಣೆಯಿಲ್ಲ. ಮಾನವೀಯತೆಯೇ ಧರ್ಮ, ದಯೆಯೇ ಅದರ ಮೂಲ ಮತ್ತು ಪ್ರಾಮಾಣಿಕ ಕಾಯಕವೇ ಬದುಕಿನ ಶ್ರೇಷ್ಠತೆ ಎಂಬ ಸಂದೇಶವೇ ಶರಣರ ಚಿಂತನೆಯ ಸಾರವಾಗಿದೆ.
ಇಂದಿನ ಕಾಲಘಟ್ಟದಲ್ಲಿಯೂ ಬಸವಾದಿ ಶರಣರ ಭಾಷಾ ಪ್ರಜ್ಞೆ ನಮಗೆ ಅತ್ಯಂತ ಪ್ರಸ್ತುತವಾಗಿದೆ. ಜಾಗತೀಕರಣ, ತಂತ್ರಜ್ಞಾನ ಮತ್ತು ಆಂಗ್ಲ ಭಾಷೆಯ ಪ್ರಭಾವದ ನಡುವೆ ಕನ್ನಡದ ಅಸ್ತಿತ್ವವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕನ್ನಡವನ್ನು ಕೇವಲ ಹಬ್ಬ, ಉತ್ಸವ ಮತ್ತು ಘೋಷಣೆಗಳಿಗೆ ಸೀಮಿತಗೊಳಿಸದೆ, ಶಿಕ್ಷಣ, ಆಡಳಿತ, ವಿಜ್ಞಾನ, ತಂತ್ರಜ್ಞಾನ, ಉದ್ಯೋಗ ಮತ್ತು ದೈನಂದಿನ ವ್ಯವಹಾರಗಳಲ್ಲಿ ಸಮರ್ಥವಾಗಿ ಬಳಸಬೇಕು. ವಚನ ಸಾಹಿತ್ಯವನ್ನು ಯುವಜನತೆಗೆ ಪರಿಚಯಿಸಬೇಕು. ಶಾಲಾ-ಕಾಲೇಜುಗಳಲ್ಲಿ ಶರಣರ ಜೀವನ, ವಿಚಾರ ಮತ್ತು ಸಾಹಿತ್ಯದ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡದಲ್ಲಿ ಹೊಸ ಜ್ಞಾನಸಂಪತ್ತನ್ನು ಸೃಷ್ಟಿಸುವ ಮೂಲಕ ಭಾಷೆಯನ್ನು ಆಧುನಿಕ ಕಾಲಕ್ಕೆ ಹೊಂದಿಕೊಳ್ಳುವಂತೆ ಬೆಳೆಸಬೇಕು.
ಬಸವಣ್ಣನವರು ಮತ್ತು ಬಸವಾದಿ ಶರಣರು ಕನ್ನಡಕ್ಕೆ ನೀಡಿದ ಕೊಡುಗೆ ಕೇವಲ ಸಾಹಿತ್ಯ ರಚನೆಗೆ ಸೀಮಿತವಾಗಿಲ್ಲ. ಅವರು ಕನ್ನಡವನ್ನು ಜನರ ಬದುಕಿನ ಭಾಷೆಯನ್ನಾಗಿ, ಸಮಾನತೆಯ ಸಂದೇಶದ ವಾಹಕವನ್ನಾಗಿ ಮತ್ತು ಮಾನವೀಯ ಮೌಲ್ಯಗಳ ಅಭಿವ್ಯಕ್ತಿಯ ಸಾಧನವನ್ನಾಗಿ ರೂಪಿಸಿದರು. ಅವರ ವಚನಗಳು ಭಾಷೆಯ ಮೂಲಕ ಸಮಾಜವನ್ನು ಬದಲಾಯಿಸಬಹುದು ಎಂಬುದಕ್ಕೆ ಶಾಶ್ವತ ಸಾಕ್ಷಿಗಳಾಗಿವೆ. ಆದ್ದರಿಂದ ಕನ್ನಡ ಭಾಷೆಗೆ ದೈವತ್ವದ ಘನತೆ ತಂದುಕೊಟ್ಟ ಮಹಾನ್ ಚೇತನಗಳೆಂದು ಬಸವಣ್ಣನವರು ಹಾಗೂ ಬಸವಾದಿ ಶರಣರನ್ನು ಗೌರವಿಸುವುದು ಅರ್ಥಪೂರ್ಣವಾಗಿದೆ.
ಕನ್ನಡವನ್ನು ಪ್ರೀತಿಸುವುದು ಎಂದರೆ ಅದರ ಅಕ್ಷರಗಳನ್ನು ಮಾತ್ರ ಪ್ರೀತಿಸುವುದಲ್ಲ; ಅದರೊಳಗಿನ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದಾಗಿದೆ. ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ ಮತ್ತು ದಯೆಯ ತತ್ವಗಳನ್ನು ಜೀವನದಲ್ಲಿ ಪಾಲಿಸುವುದೇ ಶರಣರಿಗೆ ಸಲ್ಲಿಸುವ ನಿಜವಾದ ಗೌರವ. ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು ಮತ್ತು ಜಗತ್ತಿನ ಜ್ಞಾನಭಾಷೆಗಳ ಸಾಲಿನಲ್ಲಿ ಮತ್ತಷ್ಟು ಎತ್ತರಕ್ಕೆ ಏರಬೇಕು. ಅದಕ್ಕಾಗಿ ಪ್ರತಿಯೊಬ್ಬ ಕನ್ನಡಿಗನೂ ಶರಣರ ವಿಚಾರಧಾರೆಯನ್ನು ಅರಿತು, ಕನ್ನಡದ ಅಸ್ಮಿತೆಯನ್ನು ಕಾಪಾಡುವ ಸಂಕಲ್ಪ ಮಾಡಬೇಕು. ಬಸವಣ್ಣನವರ ವಚನಗಳ ಬೆಳಕು ಕನ್ನಡದ ಮೂಲಕ ಮಾನವೀಯತೆಯನ್ನು ಬೆಳಗಿಸುತ್ತಲೇ ಇರಲಿ ಎಂಬುದೇ ನಮ್ಮೆಲ್ಲರ ಆಶಯವಾಗಬೇಕು.
- ಸಂಗಮೇಶ ಎನ್. ಜವಾದಿ.
ಬರಹಗಾರರು, ಪರಿಸರವಾದಿ, ಬಸವ ತತ್ವ ಅನುಯಾಯಿ,
ಬೀದರ ಜಿಲ್ಲೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
