“ಕರ್ನಾಟಕದ ಉದಯೋನ್ಮುಖ ಡಿಜಿಟಲ್ ಆರ್ಥಿಕತೆಯಲ್ಲಿ ವೃತ್ತಿ ಅವಕಾಶಗಳು ಮತ್ತು ನಾವೀನ್ಯತೆಯ ಕುರಿತು ಸಿಯುಕೆಯಲ್ಲಿ ತಜ್ಞರ ಅಧಿವೇಶನ ಆಯೋಜನೆ”
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ), ಕರ್ನಾಟಕ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆ.ಡಿ.ಇ.ಎಂ), ಇನ್ಕ್ಯುಬೇಷನ್ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಕಂಪ್ಯೂಟರ್ ವಿಜ್ಞಾನ ಇಂಜನಿಯರಿಂಗ್ ನಿಕಾಯದ ಸಹಯೋಗದೊಂದಿಗೆ ಇಂದು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ “ಕರ್ನಾಟಕದ ಉದಯೋನ್ಮುಖ ಡಿಜಿಟಲ್ ಆರ್ಥಿಕತೆ ಮತ್ತು ಡೇಟಾ ಸೆಂಟರ್ ಪರಿಸರ ವ್ಯವಸ್ಥೆಯಲ್ಲಿ ವೃತ್ತಿ ಅವಕಾಶಗಳು ಹಾಗೂ ನಾವೀನ್ಯತೆಯ ಸಾಧ್ಯತೆಗಳು”ಎಂಬ ವಿಷಯದ ಕುರಿತು ತಜ್ಞರ ಅಧಿವೇಶನವನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಕಾರ್ಯಕ್ರಮದ ಪೋಷಕರಾದ ಪ್ರೊ. ಆರ್. ಆರ್. ಬಿರಾದಾರ್ ಅವರು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನವೀನ ಆಲೋಚನೆಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಡಿಜಿಟಲ್ ಆರ್ಥಿಕತೆಯಲ್ಲಿ ಉದಯೋನ್ಮುಖವಾಗುತ್ತಿರುವ ಅವಕಾಶಗಳನ್ನು ಅನ್ವೇಷಿಸಿ, ಬೆಳೆಯುತ್ತಿರುವ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಾವೀನ್ಯತೆಯನ್ನು ಉತ್ತೇಜಿಸುವುದು, ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುವುದು ಹಾಗೂ ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಯುವಜನರು ಪ್ರಮುಖ ಪಾತ್ರ ವಹಿಸುತ್ತಾರೆ. ನೈಜ ಜಗತ್ತಿನ ಸವಾಲುಗಳಿಗೆ ನವೀನ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ‘ವಿಕಸಿತ ಭಾರತ 2047’ರ ಆಶಯವನ್ನು ಸಾಕಾರಗೊಳಿಸಲು ವಿದ್ಯಾರ್ಥಿಗಳು ತಮ್ಮ ಜ್ಞಾನ, ಕೌಶಲ್ಯ ಹಾಗೂ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯ ಸ್ವರೂಪವನ್ನು ವಿವರಿಸಿದ ಅವರು, ಇಂದಿನ ಸ್ಪರ್ಧಾತ್ಮಕ ಉದ್ಯೋಗ ಕ್ಷೇತ್ರದಲ್ಲಿ ಕೇವಲ ಶೈಕ್ಷಣಿಕ ಅರ್ಹತೆಗಳಷ್ಟೇ ಯಶಸ್ಸಿಗೆ ಮಾನದಂಡವಾಗಲಾರವು, ವಿದ್ಯಾರ್ಥಿಗಳು ಉದ್ಯಮ ವಲಯದ ಅಗತ್ಯಗಳಿಗೆ ತಕ್ಕಂತೆ ಸಮರ್ಥ ವೃತ್ತಿಪರರಾಗಿ ರೂಪುಗೊಳ್ಳಲು ತಮ್ಮ ಶೈಕ್ಷಣಿಕ ಜ್ಞಾನದ ಜೊತೆಗೆ ವಿಮರ್ಶಾತ್ಮಕ ಚಿಂತನೆ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ನಾಯಕತ್ವ ಗುಣ, ಸಂವಹನ ಕೌಶಲ್ಯ ಹಾಗೂ ಸೃಜನಶೀಲ ಚಿಂತನೆಯಂತಹ 21ನೇ ಶತಮಾನದ ಪ್ರಮುಖ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾರತದ ಡಿಜಿಟಲ್ ಆರ್ಥಿಕತೆಯ ಹೆಚ್ಚುತ್ತಿರುವ ಮಹತ್ವವನ್ನು ವಿವರಿಸಿದ ಅವರು ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಡಿಜಿಟಲ್ ಆರ್ಥಿಕತೆಯು ಸುಮಾರು ₹31.64 ಲಕ್ಷ ಕೋಟಿ ಅಥವಾ ಶೇ. 11.7ರಷ್ಟು ಕೊಡುಗೆ ನೀಡುತ್ತಿದ್ದು, 2030ರ ವೇಳೆಗೆ ಈ ಪ್ರಮಾಣವು ಶೇ. 20ಕ್ಕೆ ಏರುವ ನಿರೀಕ್ಷೆಯಿದೆ. ಡಿಜಿಟಲ್ ಮೂಲಸೌಕರ್ಯ, ಇಂಟರ್ನೆಟ್ ಸಂಪರ್ಕ ಮತ್ತು ತಂತ್ರಜ್ಞಾನ ಆಧಾರಿತ ಸೇವೆಗಳ ತ್ವರಿತ ವಿಸ್ತರಣೆಯಿಂದಾಗಿ ಯುವಜನರಿಗೆ ವೃತ್ತಿ ಹಾಗೂ ಉದ್ಯಮಶೀಲತೆಯ ಹಲವು ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ.
ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಲ್ಲಿನ ಗಮನಾರ್ಹ ಬೆಳವಣಿಗೆಯ ಬಗ್ಗೆಯೂ ಉಲ್ಲೇಖ ಮಾಡಿದ ಅವರು 2016ರಲ್ಲಿ ಸುಮಾರು 500 ರಷ್ಟಿದ್ದ ಸ್ಟಾರ್ಟ್ಅಪ್ಗಳ ಸಂಖ್ಯೆ ಇಂದು 2.23 ಲಕ್ಷಕ್ಕೂ ಅಧಿಕ ಮಾನ್ಯತೆ ಪಡೆದ ಸ್ಟಾರ್ಟ್ಅಪ್ಗಳ ಮಟ್ಟಕ್ಕೆ ಬೆಳೆದಿದ್ದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ. 110ಕ್ಕೂ ಹೆಚ್ಚು ಯುನಿಕಾರ್ನ್ಗಳು ಹಾಗೂ ಸ್ಟಾರ್ಟ್ಅಪ್ ವಲಯದಲ್ಲಿ 23 ಲಕ್ಷಕ್ಕೂ ಅಧಿಕ ಉದ್ಯೋಗಿಗಳೊಂದಿಗೆ, ಉದ್ಯಮಶೀಲತೆಯು ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಭಾರತದ ಜನಸಂಖ್ಯೆಯಲ್ಲಿ ಸುಮಾರು ಶೇ. 65ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಈ ಯುವ ಜನಸಂಖ್ಯೆಯು ರಾಷ್ಟ್ರದ ಬಹುದೊಡ್ಡ ಶಕ್ತಿಯಾಗಿದ್ದು, ತಾಂತ್ರಿಕ ಪ್ರಗತಿ, ಉದ್ಯಮಶೀಲತೆ ಮತ್ತು ಎಲ್ಲರನ್ನೂ ಒಳಗೊಂಡ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು. ಈ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಯುವಜನರು ಅಗತ್ಯ ಕೌಶಲ್ಯ ಮತ್ತು ನವೀನ ಸಾಮರ್ಥ್ಯಗಳನ್ನು ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣಕ್ಕೆ ಅರ್ಥಪೂರ್ಣ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.
ಕರ್ನಾಟಕ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನ ಕ್ಲಸ್ಟರ್ ಮುಖ್ಯಸ್ಥರಾದ ಶ್ರೀ ವೆಂಕಟೇಶ್ ದೇಶಪಾಂಡೆ ಅವರು, “ಕರ್ನಾಟಕದ ಉದಯೋನ್ಮುಖ ಡಿಜಿಟಲ್ ಆರ್ಥಿಕತೆ ಮತ್ತು ಡೇಟಾ ಸೆಂಟರ್ ಪರಿಸರ ವ್ಯವಸ್ಥೆಯಲ್ಲಿ ವೃತ್ತಿ ಹಾಗೂ ನಾವೀನ್ಯತೆಯ ಅವಕಾಶಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನ ಕಲಬುರಗಿ ಕ್ಲಸ್ಟರ್ ಮುಖ್ಯಸ್ಥರಾದ ಶ್ರೀ ಸುಜಯ್ ಮುದ್ಗಲ್ ಅವರು, “ಕರ್ನಾಟಕದ ಸ್ಟಾರ್ಟ್ಅಪ್ ಮತ್ತು ನಾವೀನ್ಯತಾ ಪರಿಸರ ವ್ಯವಸ್ಥೆ” ಕುರಿತು ಮಾತನಾಡಿ, ಉದ್ಯಮಶೀಲರಾಗಲು ಆಸಕ್ತಿ ಹೊಂದಿರುವವರು ಹಾಗೂ ಯುವ ಆವಿಷ್ಕಾರಕರಿಗೆ ಲಭ್ಯವಿರುವ ಅವಕಾಶಗಳು ಮತ್ತು ಭವಿಷ್ಯದ ಸಾಧ್ಯತೆಗಳನ್ನು ವಿವರಿಸಿದರು.
ಕಾರ್ಯಕ್ರಮದ ಆರಂಭಿಕ ನುಡಿಗಳನ್ನಾಡಿದ ಕಂಪ್ಯೂಟರ್ ವಿಜ್ಞಾನ ಇಂಜನೀಯರಿಂಗ್ ನಿಕಾಯದ ಡೀನ್ ಪ್ರೊ. ಆರ್. ಎಸ್. ಹೆಗಡಿ ಅವರು, ತಂತ್ರಜ್ಞಾನ ಕ್ಷೇತ್ರದಲ್ಲಿ ಉದಯೋನ್ಮುಖವಾಗುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.
ಇನ್ಕ್ಯುಬೇಷನ್ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರದ ನಿರ್ದೇಶಕರು ಹಾಗೂ ಭೌತ ವಿಜ್ಞಾನಗಳ ನಿಕಾಯದ ಡೀನ್ ಪ್ರೊ. ರಾಜೀವ್ ಶೇಷ ಜೋಶಿ ಅವರು ಮಾತನಾಡಿ, ನಾವೀನ್ಯತೆಯು ಪ್ರಕೃತಿಯೊಂದಿಗೆ ಬೆಸೆದುಕೊಂಡಿರಬೇಕು, ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸಬೇಕು ಹಾಗೂ ರಾಷ್ಟ್ರೀಯ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವಂತಿರಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.
ಇನ್ಕ್ಯುಬೇಷನ್ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರದ ಸಹಾಯಕ ನಿರ್ದೇಶಕರಾದ ಡಾ. ಶ್ರೀಧರ್ ಅಳ್ಳಗಿ ಅವರು ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ಮನೋರಂಜನ್ ಗಂಧುಡಿ ಅವರು ವಂದನಾರ್ಪಣೆ ಸಲ್ಲಿಸಿದರು.
ಕಂಪ್ಯೂಟರ್ ವಿಜ್ಞಾನ ಇಂಜನೀಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ್ ಧಾರವಾಡಕರ್, ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಮಿಥುನ್ ಬಿ. ಪಾಟೀಲ್, ಡಾ. ಕಗಲೆ ಮಾಧುರಿ ರಘುನಾಥ್, ಡಾ. ಪಿ. ಎಂ. ಕಾಂಬಳೆ, ಡಾ. ರಾಕೇಶ್ ಕುಮಾರ್ ಗೋದಿ, ಡಾ. ಕಾವ್ಯ ಕನಗರಾಜ್ ಹಾಗೂ ಡಾ. ರೋಹಿತ್, ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವು ವಂದೇ ಮಾತರಂ ಗೀತೆಯೊಂದಿಗೆ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
